ವಿಭಾಗಗಳು

ಸುದ್ದಿಪತ್ರ


 

ಶ್ವೇತಾಳಿಗೆ ಏನುತ್ತರಿಸಲಿ ಹೇಳಿ ಪ್ಲೀಸ್…

ಮೊನ್ನೆ ಮಧ್ಯಾಹ್ನ ಎರಡು ಗಂಟೆಗೆ ಬನಶಂಕರಿಯ ಡಿಪ್ಲೊಮಾ ಕಾಲೇಜೊಂದರಲ್ಲಿ ಓದುತ್ತಿರುವ ಶ್ವೇತಾ ಕರೆ ಮಾಡಿದ್ದಳು. ‘ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡೋದು ಹೇಗೆ ಸಾರ್?” ಎಂದಳು. ನಾನು ಎಂದಿನಂತೆ, “ಮೊದಲು ನಾವು ಶುದ್ಧವಾಗೋಣ. ನಮ್ಮ ಕೈಯಿಂದ ಅಚಾತುರ್ಯ ನಡೆಯದಿದ್ದರಾಯ್ತು” ಎಂದೆ. ಅದರರ್ಥ, ಲಂಚ ತೊಗೋಳೋದೂ ತಪ್ಪು, ಕೊಡೋದೂ ತಪ್ಪು.

ಇಷ್ಟಾದ ಮೇಲೆ ಆ ಹುಡುಗಿ ಹೇಳಿದ ಘಟನೆ ನನ್ನನ್ನ ವಿಷಾದಕ್ಕೆ ನೂಕಿತು. ಅವತ್ತು ಬೆಳಗ್ಗೆ ಆಕೆಗೆ ಪ್ರ್ಯಾಕ್ಟಿಕಲ್ ಎಗ್ಸಾಮ್ ಇತ್ತಂತೆ. ಅದನ್ನು ‘ಟೈಮಿಂಗ್’ ಅಂತ ಕರೀತಾರೆ. ನಿಗದಿತ ಸಮಯದಲ್ಲಿ ಮಾಡಿ ಮುಗಿಸಬೇಕು. ಅವಳಿಗೆ ೨೨ ನಿಮಿಷ ನಿಗದಿ ಮಾಡಲಾಗಿತ್ತು. ಆಕೆ ಚುರುಕಾಗಿ ಹದಿನೈದೇ ನಿಮಿಷದಲ್ಲಿ ಅದನ್ನು ಮುಗಿಸಿ ವೈವಾಗೆಂದು ಕುಳಿತಳು. ಪ್ರಶ್ನೆ ಕೇಳಲು ಬಂದಿದ್ದ ಪರ ಕಾಲೇಜಿನ ಶಿಕ್ಷಕರು ಅವಳನ್ನು ಪ್ರಶ್ನೆ ಕೇಳಲಿಲ್ಲ. ಬದಲಿಗೆ ಅವಳೊಳಗೇ ಹತ್ತಾರು ಪ್ರಶ್ನೆಗಳನ್ನ ಹುಟ್ಟುಹಾಕಿದರು! “ಇನ್ನೂರೈವತ್ತು ರುಪಾಯಿ ಕೊಡು, ಪಸು ಮಾಡ್ತೇನೆ” ಅಂದರು!!
ಈ ಹುಡುಗಿ ನನ್ನ ಬಳಿ ಹಣ ಇಲ್ಲ ಎಂದದ್ದಕ್ಕೆ ‘ಪರವಾಗಿಲ್ಲ, ನಾಡಿದ್ದು ಮತ್ತೊಂದು ಪರೀಕ್ಷೆ ಇದೆಯಲ್ಲ, ಆಗ ತೊಗೊಂಡು ಬಾ’ ಎಂದರಂತೆ. ಅವಳೇನೂ ಇನ್ನೂರೈವತ್ತು ರುಪಾಯಿ ಕೊಡಲಾಗದ ಸ್ಥಿತಿಯಲ್ಲಿಲ್ಲ. ಆದರೆ, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುವುದು ಅವಳ ಮನಸಿಗೊಪ್ಪುತ್ತಿಲ್ಲ. ಹೇಳಿಕೊಳ್ಳಲಾಗದ ಕುದಿ ಅವಳನ್ನು ಆವರಿಸಿಬಿಟ್ಟಿತ್ತು. ಎಲ್ಲವನ್ನೂ ವರದಿ ಒಪ್ಪಿಸಿದ ನಂತರ ಶ್ವೇತಾ ನನ್ನನ್ನು ಕೇಳಿದಳು. “ಹೇಳಿ ಸಾರ್, ನಾನು ಹಣ ಕೊಡ್ಲಾ? ಅಥವಾ ಕೊಡೋಲ್ಲ ಅಂತ ಹೇಳಲಾ?”

ನಾನು ದ್ವಂದ್ವಕ್ಕೆ ಬಿದ್ದೆ. ಹಣ ಕೊಡಬೇಡ ಅಂದರೆ ಶ್ವೇತಾಳ ಪರಿಶ್ರಮಕ್ಕೆ ಬೆಲೆ ಸಿಗುವುದಿಲ್ಲ, ಮಾರ್ಕ್ಸು ದೊರೆಯುವುದಿಲ್ಲ. ಹಣ ಕೊಡು ಅಂದರೆ, ಇನ್ನು ಮುಂದೆ ಭ್ರಷ್ಟಾಚಾರದ ಬಗ್ಗೆ ಮಾತಾಡುವಂತೆಯೇ ಇಲ್ಲ. ಕೊನೆಗೆ, ಒಂದು ದಿನ ಯೋಚಿಸಲು ಸಮಯ ತೆಗೆದುಕೊಂಡೆ. ಅಂದು ಸಂಜೆಯೇ ಟೆಕ್ನಿಕಲ್ ಬೋರ್ಡಿನ ಮಿತ್ರರ ಬಳಿ ಈ ಬಗ್ಗೆ ಮಾತನಾಡಿದೆ. ಆರಂಭದಲ್ಲಿ, ಇದಕ್ಕೊಂದು ಪರಿಹಾರ ಸಿಕ್ಕೇಬಿಡುತ್ತದೆ ಎಂಬ ಉತ್ಸಾಹವಿತ್ತು. ನನ್ನ ಮಿತ್ರ ಅಷ್ಟೂ ವಿವರ ಕೇಳಿ, ಒಂದೇ ಮಾತು ಹೇಳಿದ. “ಬರೀ ಇನ್ನೂರೈವತ್ತು ರುಪಾಯಿ ಕೇಳಿದ ಆ ಮೇಷ್ಟ್ರು ಪಾಪದವನು!”
ಆಮೇಲೆ ವಿಷಯ ಬಿಚ್ಚಿಟ್ಟ. ಇನ್ನೂ ಕೆಲವು ಕಡೆಗಳಲ್ಲಿ ಕಡಿಮೆಯೆಂದರೂ ಎರಡು ಸಾವಿರದವರೆಗೆ ಹಣ ಪೀಕುತ್ತಾರೆ ಎಂದ. ಯಾವ ಕಾಲೇಜಲ್ಲಿ ಹೆಚ್ಚು ಹಣ ಕೊಡಬಲ್ಲ ವಿದ್ಯಾರ್ಥಿಗಳಿರುವರೋ ಅದೇ ಕಾಲೇಜಿಗೆ ತಮ್ಮನ್ನು ಪರೀಕ್ಷಕರನ್ನಾಗಿ ಹಾಕುವಂತೆ ಲಾಬಿಯನ್ನೂ ನಡೆಸುತ್ತರೆನ್ನುವ ಸತ್ಯ ಬಾಯ್ಬಿಟ್ಟ. ಹಾಗಿದ್ದರೆ ಪರಿಹಾರವೇನು? ಕೇಳಿದ್ದಕ್ಕೆ, ಸುಮ್ಮನೆ ದುಡ್ಡು ಕೊಟ್ಟು ಬದುಕು ಕಟ್ಟಿಕೊಳ್ಳುವುದು- ಎಂದುಬಿಟ್ಟ.

ನಾನು ಸೋಲೊಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ವಿದ್ಯಾರ್ಥಿ ಸಂಘಟನೆಯೊಂದರ ಬಳಿ ಚರ್ಚೆ ಮಾಡಿದೆ. ಅವರೂ ನನ್ನ ಮಿತ್ರನ ಮಾತನ್ನು ಅನುಮೋದಿಸಿ, ಇಲ್ಲಿಂದ ಪ್ರತಿಭಟನೆ ಅಂತ ಹೊರಟರೆ, ಒಂದೋ ಆ ಹೆಣ್ಣು ಮಗಳ ಭವಿಷ್ಯ ಮಸುಕಾಗುತ್ತೆ, ಇಲ್ಲವೇ ಆ ಶಿಕ್ಷಕರನ್ನು ಸಸ್ಪೆಂಡ್ ಮಾಡುವ ನೆಪದಲ್ಲಿ ಹಿರಿಯ ಅಧಿಕಾರಿಗಳು ಅವನಿಂದ ಸಿಕ್ಕಾಪಟ್ಟೆ ಲಂಚ ಹೊಡೆಯುತ್ತಾರೆ ಎಂದರು. ಈ ಸಂಘಟನೆ ಇಂತಹ ಸಂಗತಿಗಳನ್ನು ಪ್ರತಿಭಟಿಸುವ ಮೂಲಕ ಯಾರೆಲ್ಲರನ್ನು ಮನೆಗೆ ಕಳಿಸಿತ್ತೋ, ಅವರು ಒಂದೆರಡು ತಿಂಗಳ ನಂತರ ಲಕ್ಷಾಂತರ ರುಪಾಯಿ ಕೊಟ್ಟು ಮತ್ತೆ ಅದೇ ಸ್ಥಾನದಲ್ಲಿ ರಾರಾಜಿಸುತ್ತ ಕುಳಿತಿದ್ದರು. ಅದನ್ನವರು ಗಾಢ ವಿಷಾದದಿಂದ ಹೇಳಿಕೊಂಡರು.

ಈಗ…. ನನ್ನ ಪೀಕಲಾಟ ಕೇಳಿ. ಆ ಹುಡುಗಿ ಮತ್ತೆ ಕರೆ ಮಾಡ್ತಾಳೆ. ಏನು ಉತ್ತರ ಕೊಡಲಿ ಅಂತ ಚಡಪಡಿಸ್ತಿದೇನೆ. ವಾಸ್ತವ ತೀರ ಕಹಿಯಾಗಿದೆ. ಮೊದಲ ಬಾರಿಗೆ ಅಸಹಾಯಕನಂತೆನಿಸಿ ನಿರಾಶೆ ಕಾಡ್ತಿದೆ.
ನೀವಾದ್ರೂ ಒಂದು ಪರಿಹಾರ ಹುಡುಕಿ ಕೊಡಿ…. ಸಹಾಯ ಮಾಡಿ ಪ್ಲೀಸ್…

15 Responses to ಶ್ವೇತಾಳಿಗೆ ಏನುತ್ತರಿಸಲಿ ಹೇಳಿ ಪ್ಲೀಸ್…

 1. ಶ್ವೇತಾಳ ಸಂಕಟಕ್ಕೆ ಪರಿಹಾರವಿದೆಯೇ? « ಓ ನನ್ನ ಚೇತನಾ…

  […] ಸಲಹೆ ಸೂಚನೆಗಳಿದ್ದರೆ ಕೇಳಬೇಕೆನಿಸಿತು. ಇಲ್ಲಿದೆ- ಶ್ವೇತಾ ಎನ್ನುವ ಹುಡುಗಿಯ ಸಂಕಟ, ಅಣ್ಣ ಚಕ್ರವರ್ತಿಯ ಬಳಿ ಹೇಳಿಕೊಂಡಂತೆ… […]

 2. Sandeepa Nadahalli

  ದುಡ್ಡು ಕೇಳಿದ ಶಿಕ್ಷಕನ ಹೆಸರು ಮತ್ತು ಕಾಲೇಜನ್ನು ತಿಳಿಸುತ್ತೀರ?

  ಅಂದಹಾಗೆ, ಪರಿಹಾರವಿಲ್ಲವೆಂದು ಸುಮ್ಮನೆ ಕೂರುವುದು ಬೇಡ. ಏನಾದರು(ವಿದ್ಯಾರ್ಥಿಯ ಭವಿಷ್ಯಕ್ಕೆ ತೊಂದರೆಯಾಗದಂತೆಯೇ) ಮಾಡಬಹುದು.

  ಒಂದು ನಾಲ್ಕು ಜನ ಒಗ್ಗೂಡಬೇಕಷ್ಟೆ.

 3. ಶ್ರೀ

  ತಕ್ಷಣಕ್ಕೆ ಯಾರೂ ಏನೂ ಮಾಡಲಾಗದ ಸಂದರ್ಭ… ಬಹಳ ಇಕ್ಕಟ್ಟಿನ ಪರಿಸ್ಥಿತಿ. ಬಹುಶ: ತಕ್ಷಣಕ್ಕೆ ದುಡ್ಡುಕೊಟ್ಟು ಪಾರಾಗುವ ಜಾಣತನವೇ ಉತ್ತಮ ಪರಿಹಾರ.

  ಇಲ್ಲವೇ ಹೋರಾಟ ಮಾಡಲೇಬೇಕೆಂದಾದರೆ ಲೋಕಾಯುಕ್ತಕ್ಕೆ ದೂರು ಕೊಟ್ಟು ಲಂಚ ತೆಗೆದುಕೊಳ್ಳುವಾಗ ಹಿಡಿಸಿ. (ಇದರಿಂದ ಆತ ಬಹುಶ: ಸಸ್ಪೆಂಡ್ ಆಗಲಾರ) ಅಥವಾ ಯಾರಾದರೂ ಸಂಬಂಧಪಟ್ಟ ಸಚಿವರಿಗೆ ಅಥವಾ ಅಧಿಕಾರಿಗಳಿಗೆ ತಕ್ಷಣ ದೂರು ನೀಡಿ, ಹಿಡಿಸಿ ಹಾಕಿ.

 4. neelanjala

  ದುಡ್ಡು ಕೊಡಿ ಸ್ವಾಮಿ. ಆಕೆಯ ರೀಸಲ್ಟ್ ಬಂದ ಮೇಲೆ ಆ ಶಿಕ್ಷಕರ ಮನೆಗೆ ಹೋಗಿ ಶಾಲು ಹೋದಿಸಿ ಸನ್ಮಾನ ಮಾಡಿ. ಏಕೆ ಅಂದು ಕೇಳಿದರೆ ದೊಡ್ಡ ಸರ್ಟಿಫಿಕೇಟ್ ತಗೊನ್ಡು ಹೋಗಿ. ಅದರಲ್ಲಿ ಕಲಿಯುಗದ ಗುರುಗಳಿಗೆ ಕಿಂಚಿತ್ತು ದುಡ್ಡಿಗಾಗಿ ಪಾಸ್ ಮಾಡಿಸಿದ್ದಕ್ಕೆ ಧನ್ಯವಾದ ಬರೆಸಿ. ಆದ್ರೆ ಪತ್ರಿಕೆ, ಮಾದ್ಯಮಗಳನ್ನು ದೂರ ಇಡಿ. ನಾಳೆ ಅವರು ತಪ್ಪು ತಿದ್ದು ಕೊಳ್ಳೊ ಬದಲು ಆತ್ಮಹತ್ಯೆ ಮಾಡಿಕೊನ್ಡರೆ ಕಷ್ಟ.

 5. navada

  ಸಮಸ್ಯೆ ಕಷ್ಟದ್ದೇ. ಆದಷ್ಟು ಬೇಗ ಕಾಲೇಜು ಮತ್ತು ಮೇಸ್ಟ್ರ ಹೆಸರು ಕೊಡಿ. ಮುಂದಿನದ್ದನ್ನು ಸರಿ ಮಾಡೋಕೆ ಪ್ರಯತ್ನಿಸ್ತೇನೆ. ಯಾರಿಗೂ ಏನೂ ಆಗೋಲ್ಲ. ಸಮಸ್ಯೆ ನಿವಾರಿಸೋಣ. ನಂತರ ದೊಡ್ಡ ಮಟ್ಟದ್ದು ಆಲೋಚಿಸೋಣ. ಇಲ್ಲವೇ ಶ್ವೇತಾಗೆ ನನ್ನ ಮೊಬೈಲ್ ಸಂಖ್ಯೆ 93433 81802 ಕೊಡಿ.
  ನಾವಡ

 6. ಪ್ರದೀಪ್

  ಸಧ್ಯಕ್ಕೆ ನೀಲಾಂಜಲ ಅವರು ಹೇಳಿದಂತೆ ಮಾಡುವುದೇ ಉಚಿತವೆನಿಸುತ್ತದೆ. ಏಕೆಂದರೆ, ಒಬ್ಬರೋ, ಇಬ್ಬರೋ ಎದುರು ನಿಂತರೆ ಏನೂ ಮಾಡಲಾಗದು. ಕೋರ್ಟು, ಕಛೇರಿ ಅಂತಾ ವರ್ಷ ಕಳೆದವರೆಷ್ಟೋ ಮಂದಿಯಿದ್ದಾರೆ. ಆ ಕಾಲೇಜಿನ ಎಲ್ಲಾ ಮಂದಿ ಒಗ್ಗೂಡಿ ಇದಕ್ಕೆ ಬಹಿಷ್ಕಾರ ಹಾಕಿದರೆ ಮಾತ್ರ ತುರ್ತು ಪ್ರಯೋಜನವಿದೆ. ಅಂದ ಹಾಗೆ, ಅದು ಖಾಸಗಿ ಕಾಲೇಜೋ, ಇಲ್ಲಾ ಸರಕಾರಿಯೋ?

 7. ಎಲ್ರಿಗೂ ಥ್ಯಾಂಕ್ಸ್… « ಓ ನನ್ನ ಚೇತನಾ…

  […] ಕೇಳಬೇಕೆನಿಸಿತು. ಇಲ್ಲಿದೆ- ಶ್ವೇತಾ ಎನ್ನುವ ಹುಡುಗಿಯ ಸಂಕಟ, ಅಣ್ಣ ಚಕ್ರವರ್ತಿಯ ಬಳಿ ಹೇಳಿಕೊಂಡಂತೆ… […]

 8. ರಾಕೇಶ್ ಶೆಟ್ಟಿ

  ೨೫೦ ತಾನೆ ಈಗ ಕೊಡಲಿ ಬಿಡಿ, ಆಮೇಲೆ ಅವನನ್ನು ವಿಚರಿಸಿಕ್ಕೊಂದರೆ ಆಯಿತು. ಮೊದಲು ಆ ಹುಡುಗೀ ಪಾಸಾಗಲಿ.

 9. M G Harish

  ಈಗ ೨೫೦ ಕೊಟ್ಟು ಬಿಡಲಿ. ಪಾಸ್ ಆದ ಮೇಲೆ ನಾಲ್ಕಾರು ಜನ ಆತನ ಮನೆಗೆ ಹೋಗಿ ದಬಾಯಿಸಿ ೫೦೦ ರೂ. ವಾಪಸ್ ತಂದರಾಯಿತು..

 10. Raghavendra Kesavinamane

  @ ಚಕ್ರವರ್ತಿ & ನಾವಡ
  ಸರ್, ಇದು ಶ್ವೇತಳಂತಹ ಒಬ್ಬ ವಿದ್ಯಾರ್ತಿಯ ಸಮಸ್ಯೆ ಮಾತ್ರವಲ್ಲ. ನಾನು ಗಮನಿಸಿದಂತೆ ಮೆಡಿಕಲ್, ಎಂಬಿಎ ಕೊನೆಗೆ ಬಿ.ಇಡಿ ಯ ವೈವಾ ಮತ್ತು ಅಸೈನ್ಮೆಂಟ್ ನೀಡುವಾಗಲೂ ಹಲವೆಡೆ ಇದೇ ಸ್ಥಿತಿ ಇದೆ. ವಿದ್ಯೆಗಿಂತ ಇಲ್ಲಿ ಮೇಲುಗೈ ಸಾಧಿಸುವುದು ಒಂದೋ ಹಣ ಅಥವಾ ಚಮಚಾಗಿರಿ. ಮೈಸೂರು ಮೆಡಿಕಲ್ ಕಾಲೇಜುಗಳಲ್ಲಿ ಕೂಡ ಇದು ನಡೆಯುತ್ತಿದೆಯೆಂದು ನನ್ನ ವೈದ್ಯ ವಿದ್ಯಾಥಿ೵ ಮಿತ್ರನೊಬ್ಬ ಹೇಳುತ್ತಿದ್ದ. ಅಲ್ಲಿ ಅವರ ಡಿಮ್ಯಾಂಡ್ ನಾಲ್ಕಂಕಿಗಳ ಮೇಲೆಯೇ ಇರುತ್ತದಂತೆ. ಆದ್ದರಿಂದ ದೊಡ್ಡ ಮಟ್ಟದಲ್ಲೆ ಮಾದ್ಯಮಗಳು, ಸಂಘಟನೆಗಳು, ವಿದ್ಯಾಥಿ೵ಗಳು ಎಲ್ಲ ಒಟ್ಟಾಗಿ ಇದನ್ನು ಎದುರಿಸುವ ದಾರಿ ಹುಡುಕಬೇಕೆಂದು ನನಗನ್ನಿಸುತ್ತದೆ.
  – ರಾಘವೇಂದ್ರ ಕೆಸವಿನಮನೆ.

 11. ಸಂಜು

  ನಮಸ್ತೆ ,

  ಈಗ ರೊಕ್ಕ ಕೊಟ್ಟ ಬಿಡ್ರಿ ಅಂತ ಹೇಳ್ರಿ ಸರ . .ಆಮ್ಯಾಲೆ ಅ ಮಾಸ್ತರನ ನೋಡುನು . . ಯಾಕಂದ್ರ ಸುಮ್ನ ಈಗ Shweta ಅವರ ಮನಸಿಗೂ ಕಿರಿ ಕಿರಿ . . Exam ಅದು ಆದ ಮ್ಯಾಲೆ ನೋಡುನು . . ಇದು ಒಂದ ಎರಡ ದಿನದಾಗ ಮುಗಿಯುವಂಥ ಕೆಲಸ ಅಲ್ಲ . . .We can’t erdicate in single hand it needs both apends . . . .

 12. neelanjana

  ಹ್ಮ್ಮ್ … ಈ ರೀತಿಯ ಕಾಟವೂ ಇದೆಯೇ? ನಾನು ಎಂಜಿನಿಯರಿಂಗ್ ಓದುವಾಗ ಯಾವಾಗಲೂ ಇಂತಹ ಸ್ಥಿತಿಯನ್ನು ಎದುರಿಸಿರಲಿಲ್ಲ.. :(

 13. Tina

  ಚಕ್ರವರ್ತಿ,
  ಮೊದಲು ಹುಡುಗಿ ಪಾಸಾಗಲಿ, ಆಮೇಲೆ ನೀವು ಈಗಾಗಲೆ ಹೇಗೂ ಇದರ ಬಗ್ಗೆ ಬರ್ದಿದೀರಲ್ಲ. ಆಕೆಯ ಭವಿಷ್ಯಕ್ಕೆ ಕುಂದಾಗದ ಹಾಗೆ ಏನು ಮಾಡಬಹುದೋ ಅದನ್ನ ಮಾಡಿದರೇನೆ ಒಳಿತು ಅನ್ಸತ್ತೆ. ನಿಮ್ಮ ಸ್ನೇಹಿತರು ಹೇಳಿದ ಹಾಗೆ ಈರೀತಿ ಇಂಟರ್ನಲ್ಸ್ ಎಂಬ ವಿಚಿತ್ರ ನೀತಿಯನ್ನ ಬಳಸಿಕೊಂಡು ದುಡ್ಡು ಇಸಿದುಕೊಂಡು ಪಾಸು ಮಾಡುವ ಧಂಧೆ ಬಹಳ ಹಳೆಯದು. ಎಷ್ಟೋ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರಣದಿಂದ ಮಾನಸಿಕ, ದೈಹಿಕ ಕಿರುಕುಳಗಳನ್ನೆದುರಿಸುವುದು ಸುಮಾರು ಕಾಲೇಜುಗಳಲ್ಲಿ ಮಾಮೂಲು ವಿಷಯ. ನಾನೂ ’ಬರೆ ಇನ್ನೂರೈವತ್ತಾ?’ ಅಂತಲೇ ಅಂದುಕೊಂಡೆ!!

 14. sujith prathapnagara

  avana kuraithu lokauktha rege duuru nidi,

 15. Prashanth Keshav

  I feel better for her to pay the amount. Let her pass the exams. Then contact the concern person to take action against that lecture. This won’t harm Shwetha’s career also.

Leave a Reply