ವಿಭಾಗಗಳು

ಸುದ್ದಿಪತ್ರ


 

ಅಂಜಲಿ ಮೋಡಿಗೆ ಕ್ಲೀನ್ ಬೋಲ್ಡ್!

ಸಚಿನ್ ಲೈಫ್ ಸ್ಕ್ಯಾನ್ ಮುಂದುವರೆದ ಭಾಗ. ಹಿಂದಿನ ಬರಹಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ. ಉಳಿದ ಕೊಂಡಿಗಳೂ ದೊರಕುತ್ತವೆ.

ಆ ಆಟ ಮರೆಯಲಿಕ್ಕೆ ಸಾಧ್ಯವೇ ಇಲ್ಲ. ೧೯೯೮ರಲ್ಲಿ ಭಾರತಕ್ಕೆ ಆಸ್ಟ್ರೇಲಿಯನ್ನರು ಬಂದಾಗ ಆಟ ನೋಡಲಿಕ್ಕೆ ಜಗತ್ತು ಕಾತುರದಿಂದ ಕಾದಿತ್ತು. ಒಂದೆದೆ ಸಚಿನ್ ನ ಭಯಾನಕ ಹೊಡೆತಗಳು ಮತ್ತೊಂದೆಡೆ ಅದನ್ನು ತಡೆಯಬಲ್ಲ ತಾಕತ್ತುಳ್ಳ ಜಗತ್ತಿನ ಏಕೈಕ ಬೌಲರ್ ಶೇನ್‌ವಾರ್ನ್! ಅದಾಗಲೇ ಆಫ್ರಿಕನ್ನರ ಮೇಲೆ ಮಾಂತ್ರಿಕ ಚೆಂಡುಗಳನ್ನೆಸೆದು ಶೇನ್‌ವಾರ್ನ್ ಜಗತ್ತಿನ ಕಣ್ಣುಕುಕ್ಕಿದ್ದ. ಹೀಗಾಗಿ ಈ ಸೀರೀಸನ್ನು ತೆಂಡೂಲ್ಕರ್ ಮತ್ತು ವಾರ್ನ್‌ರ ನಡುವಿನ ಕಾಳಗ ಎಂದೇ ಬಣ್ಣಿಸಲಾಗಿತ್ತು.

ಇದನ್ನು  ಪ್ರಶ್ನಿಸಿದಾಗ ಸಚಿನ್ ನಿರಾಕರಿಸಿದ್ದ. ಇದು ಇಂಡಿಯಾ- ಆಸ್ಟ್ರೇಲಿಯಾಗಳ ನಡುವಿನ ಕಾಳಗ ಎಂದಿದ್ದ. ಇದಕ್ಕೆ ವಿರುದ್ಧವಾಗಿ ವಾರ್ನ್, ತೆಂಡೂಲ್ಕರ್ ಯಾವ ಮಹಾ? ಎಂಬಂತೆ ಮಾತಾಡಿದ್ದ. ಸಚಿನ್ನ ಪಾಲಿಗೆ ಇದು ಅಸಲು ಸವಾಲು. ಆತ ಪಂದ್ಯಗಳು ಆರಂಭವಾಗುವ ಬಹುಮುನ್ನವೇ ಅಭ್ಯಾಸ ಆರಂಭಿಸಿಬಿಟ್ಟಿದ್ದ. ಮೂರು ಲೆಗ್‌ಸ್ಪಿನ್ನರ್‌ಗಳ ಕರೆದು ದಿನಗಟ್ಟಲೆ ಅವರಿಂದ ಬೌಲ್ ಮಾಡಿಸಿಕೊಂಡು ಚೆಂದನ್ನು ಹೊಡೆಯುವ ತಯಾರಿ ನಡೆಸುತ್ತಿದ್ದ. ವಾರ್ನ್ ಬೌಲಿಂಗ್‌ನ ರೀತಿನೀತಿಗಳನ್ನು ಟೀವಿಯಲ್ಲಿ ಪದೇಪದೇ ನೊಡಿ ಗುರುತು ಮಾಡಿಕೊಂಡಿದ್ದ.

ಆಟ ಶುರುವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 305ಕ್ಕೆ 8 ಆಗಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಮುಂಬೈನ ಆಟಗಾರ ಸುಲಕ್ಷಣ್ ಕುಲಕರ್ಣಿ ಭಾರತದ ಇನ್ನಿಂಗ್ಸ್ ಓಪನ್ ಮಾಡಿದ್ದೇ ಸಾಹಸ. ಸೊನ್ನೆಗೆ ಔಟಾಗಿ ಮರಳಿದ. ಆಗ ಬಂದ ತೆಂಡೂಲ್ಕರ್ ಆರಾಮಾಗಿ ಆಡಲಾರಂಭಿಸಿದ. ಮಾರ್ಕ್ ಟೇಲರ್ ತಡಮಾಡಲಿಲ್ಲ. ವಾರ್ನ್ ಅನ್ನು ಚೆಂಡೆಸೆಯಲು ಕಳುಹಿಸಿದ. ಜಗತ್ತಿನ ಎಲ್ಲೆಡೆ ಟೀವಿಯೆದುರು ಕುಳಿತವರು ಸ್ಕ್ರೀನ್ ಬಳಿ ಬಂದರು. ಮೈದಾನ ಸ್ತಬ್ದವಾಯಿತು. ವಾರ್ನ್ ನ ಮೊದಲ ಎಸೆತ, ತೆಂಡೂಲ್ಕರ್ ನನ್ನು ದಾಟಿ ಹೋಯಿತು. ಅದು ತೆಂಡೂಲ್ಕರನ  ತಯಾರಿ. ಎರಡನೆ ಎಸೆತ, ವಾರ್ನ್ ನ ಕೈಯಿಂದ ಜಾರಿದ್ದಷ್ಟೇ ಗೊತ್ತು. ತೆಂಡೂಲ್ಕರ್ ಕ್ರೀಸ್ ನಿಂದ ಹೊರಬಂದು ಆ ಚೆಂಡನ್ನು ಲಾಂಗ್ ಆನ್ ಮೇಲೆ ಬೀಸಿದ. ಅದು ಕಾಣದಂತೆ ಮಾಯವಾಯಿತು! ವಾರ್ನ್ ನ ಚೆಂಡುಗಳು ಕಸಾಯಿಖಾನೆಯಲ್ಲಿ ಪ್ರಾಣಿಗಳ ವಧೆಯಾಗುವಂತೆ ಬಾರಿಸಲ್ಪಟ್ಟವು. ಹದಿನಾರೇ ಓವರ್ ಗಳಲ್ಲಿ ಆತ ನೂರಾ ಹನ್ನೊಂದು ರನ್ ಕೊಟ್ಟು ಕೈತೊಳೆದುಕೊಂಡ. ತೆಂಡೂಲ್ಕರ್ ನ ಅಬ್ಬರವನ್ನೇ ಇತರ ಆಟಗಾರರು ತೋರಿಸಿ ಆಸ್ಟ್ರೇಲಿಯನ್ನರ ಮುಖಕ್ಕೆ ಮಂಗಳಾರತಿ ಎತ್ತಿದರು. ಆಮೇಲಾಮೇಲೆ ಇದು ರೂಢಿಯಾಗಿಹೋಗಿತ್ತು. ಅಹಂಕಾರದಿಂದ ಮೆರೆಯುವ ಯಾವುದೇ ಬೌಲರ್ ಇರಲಿ ಆತನ ಮೊದಲ ಎಸೆತವನ್ನು ಸಿಕ್ಸರ್ ಗೆ ಅಟ್ಟಿ ಸಚಿನ್ ಇನ್ನಿಂಗ್ಸ್ ಆರಂಭಿಸುತ್ತಿದ್ದ. ಶೇನ್ ವಾರ್ನ್, ಸಕ್ಲೇನ್ ಮುಷ್ತಾಕ್, ಮುರಳೀಧರನ್ ಎಲ್ಲರಿಗೂ ಸಚಿನ್ ನ ಈ ಪರಿ ರೌದ್ರಾವತಾರ ಅನುಭವಕ್ಕೆ ಬಂದಿದೆ. ಆದರೆ ಈ ರೀತಿಯ ಭರ್ಜರಿ ಪ್ರದರ್ಶನಕ್ಕೆ ಮುನ್ನ ಸಚಿನ್ ನೆಟ್‌ಗಳಲ್ಲಿ ದಿನಗಟ್ಟಲೆ ಅಭ್ಯಾಸ ಮಾಡಿರುತ್ತಾನಲ್ಲ, ಅದು ಮಾತ್ರ ಯಾರ ಗಮನಕ್ಕೂ ಸಲೀಸಾಗಿ ಬಂದಿರಲಾರದು.

ಈ ನಡುವೆಯೇ ಸಚಿನ್ ತನಗಿಂತ ತುಸು ಹಿರಿಯಳಾದ ಅಂಜಲಿ ಮೆಹ್ತಾಳ ತೆಕ್ಕೆಗೆ ಬಿದ್ದಿದ್ದು. ವೃತ್ತಿಯಿಂದ ವೈದ್ಯೆಯಾಗಿರುವ ಅಂಜಲಿಗೂ ಸಚಿನ್ ಗೂ ಪ್ರೇಮಾಂಕುರವಾಗಿತ್ತು. ಆಗ ಅಂಜಲಿಗೆ ಕ್ರಿಕೆಟ್ ನ ತಲೆಬುದ ಗೊತ್ತಿರಲಿಲ್ಲ. ಈಗಲೂ ಈಕೆಗೆ ಕ್ರಿಕೆಟ್ ಬಗ್ಗೆ ಗೊತ್ತಿರುವುದು ಎಂದರೆ ಸಚಿನ್ ಮಾತ್ರ. ಆರಂಭದಲ್ಲಿ ಅಂಜಲಿಯನ್ನು ಎಲ್ಲಿಗಾದರೂ ಸುತ್ತಾಡಿಸಬೇಕೆಂದು ಹೊರಟರೆ, ಸಚಿನ್ ಕದ್ದು ಮುಚ್ಚಿ ತಿರುಗಾಡಬೇಕಾಗುತ್ತಿತ್ತು. ಒಮ್ಮೆಯಂತೂ ಕೃತಕ ಗಡ್ಡವನ್ನು ಹಚ್ಚಿಕೊಂಡು ಸಚಿನ್ ಅಂಜಲಿಯನ್ನು ಸಿನೆಮಾಕ್ಕೆ ಕರೆದೊಯ್ದಿದ್ದ. ನೂಕು ನುಗ್ಗಲಿನಲ್ಲಿ ಗಡ್ಡ ಕಳಚಿಬಿತ್ತು. ನೆರೆದ ಜನರು ಅವನನ್ನು ಗುರುತಿಸಿದರು. ಎಲ್ಲರೂ ಸೇರಿ ಅವನನ್ನು ಮುತ್ತಿ ಮುದ್ದೆ ಮಾಡಿಬಿಟ್ಟರು. ಎಲ್ಲವೂ ಒಂದು ಹಂತಕ್ಕೆ ಬಂದ ನಂತರ ಇಬ್ಬರೂ ಮದುವೆಯಾಗುವ ನಿರ್ಧಾರ ತೆಗೆದುಕೊಂಡರು. ಆಗ ಸಚಿನ್ ಅಂಜಲಿಗೆ ಧೈರ್ಯದಿಂದ ಹೇಳಿದ್ದನಂತೆ, ‘ನೀನು ನಮ್ಮ ಮನೆಗೆ ಬಂದು ನನ್ನ ತಂದೆಯ ಬಳಿ ಮಾತಾಡಬೇಕು’ ಎಂದು!ವಾಸ್ತವವಾಗಿ ಹುಡುಗಿಯ ತಂದೆಯ ಬಳಿ ಸಚಿನ್ ಹೋಗಬೇಕಿತ್ತು. ಆತ ಅದೆಷ್ಟು ನಾಚಿಕೊಳ್ಳುತ್ತಿದ್ದನೆಂದರೆ, ಹುಡುಗಿಯೇ ತನ್ನ ಮನೆಗೆ ಬಂದು ಮಾತಾಡಿಬಿಟ್ಟರೆ ತಾನು ಬಚಾವು ಎಂದು ಎಣಿಸುತ್ತಿದ್ದ!

ಅಂತೂ ಇಂತೂ ಮದುವೆಯ ದಿನ ನಿಶ್ಚಯವಾಯ್ತು. ಇಡೀ ಮುಂಬೈ ಸಂಭ್ರಮಪಟ್ಟಿತು. ಊರ ತುಂಬಾ ವಧು ವರರಿಗೆ ಶುಭ ಕೋರುವ ಬ್ಯಾನರ್ ಗಳು. ಘಟಾನುಘಟಿಗಳೆಲ್ಲ ಮದುವೆಗೆ ಬಂದಿದ್ದರು. ಒಂದು ಟೀವಿ ಚಾನೆಲ್ ಅಂತೂ ಮದುವೆಯ ನೇರ ಪ್ರಸಾರದ ಹಕ್ಕಿಗಾಗಿ ಅಪಾರ ಹಣದ ಆಮಿಷವನ್ನೊಡ್ಡಿತ್ತು. ಸಚಿನ್ ಅದನ್ನು ನಿರಾಕರಿಸಿದ್ದ. ಸಚ್ವಿನ್, ಅಂಜಲಿ ಪುಟ್ಟದೊಂದು ಅಪಾರ್ಟ್‌ಮೆಂಟಿನಲ್ಲಿ ಸಂಸಾರ ಶುರುವಿಟ್ಟರು. ಮುಂದೆ ಭಾರೀ ದೊಡ್ಡ ಬಂಗಲೆಗೆ ವರ್ಗವಾದರು. ಸ್ವಲ್ಪ ಹೆಸರು ಮಾಡಿದೊಡನೆ ಹೆಂಡತಿಯನ್ನು ಬಿಟ್ಟು ಬೇರೆಯವರೊಡನೆ ಸಂಬಂಧ ಬೆಳೆಸತೊಡಗುವ ನಮ್ಮ ಹೀರೋಗಳ ಮಧ್ಯೆ ಸಚಿನ್ ಭಿನ್ನವಾಗಿ ನಿಲ್ಲುತ್ತಾನೆ. ಅವನು ಮದುವೆಯ ನಂತರವೂ ಸರಳವಾಗಿ ಉಳಿದ. ಮಧ್ಯಮ ವರ್ಗದ ಬದುಕು ತನ್ನಲ್ಲಿ ಹುಟ್ಟು ಹಾಕಿದ್ದ ಸಂಸ್ಕಾರವನ್ನು ಉಳಿಸಿಕೊಂಡ. ಒಳ ಹೊರಗಿನ ಬದುಕುಗಳಲ್ಲಿ ಒಂದೇ ರೀತಿಯಾಗಿ, ಎತ್ತರದ ಸ್ಥಾನ ಪಡೆದ.

Leave a Reply