ವಿಭಾಗಗಳು

ಸುದ್ದಿಪತ್ರ


 

ಅಖಂಡ ಆರ್ಯಾ‍ವರ್ತದ ಪ್ರಚಂಡ ಅಶೋಕ!

ರೋಮಿಲಾ ಥಾಪರ್ ಅಶೋಕನ ಹುಟ್ಟಿಗೂ ಪಶ್ಚಿಮದ ಇತಿಹಾಸಕಾರರಿಂದ ಪ್ರೇರಿತವಾದ ತನ್ನದೇ ಆದ ಶೃಂಗಾರ ಕಾವ್ಯವನ್ನು ಹೆಣೆದಿದ್ದಾಳೆ. ಆಕೆಯ ಪ್ರಕಾರ ಅಶೋಕ ಇಷ್ಟು ವಿಭಿನ್ನವಾದ ಚಕ್ರವರ್ತಿಯಾಗಲು ಅವನೊಳಗೆ ಹರಿಯುತ್ತಿರುವ ಬಿಳಿಯರ ರಕ್ತವೇ ಕಾರಣ! ಚಂದ್ರಗುಪ್ತ ಗ್ರೀಕ್ ದೊರೆ ಸೆಲ್ಯುಕಸ್ನ ಮಗಳ ಮದುವೆಯಾದ್ದರಿಂದ ಬಿಂದುಸಾರ ಅವರಿಗೆ ಹುಟ್ಟಿದವನಾಗಿರಬೇಕು. ಇಲ್ಲವೇ ಬಿಂದುಸಾರನೇ ಈ ಪೃಥೆ ಮುಂದುವರೆಸಿ ಗ್ರೀಕ್ ರಾಣಿಯನ್ನು ಮದುವೆಯಾಗಿದ್ದು ಅವಳಿಗೆ ಹುಟ್ಟಿದವ ಅಶೋಕನಾಗಿರಬೇಕು ಅಂತ!

ಚಂದ್ರಗುಪ್ತ-ಚಾಣಕ್ಯರು ಓದಿದ ತಕ್ಷಶಿಲಾ ವಿಶ್ವವಿದ್ಯಾಲಯದ ಕುರಿತು ಮಾಹಿತಿ ಕೆದಕುತ್ತಾ 18 ನೇ ಶತಮಾನದ ಭಾರತೀಯ ಶಿಕ್ಷಣದವರೆಗೂ ಒಂದು ಪ್ರವಾಸ ಬಂದಂತಾಯ್ತು. ಅಷ್ಟಾದರೂ ಸಾಗರದೊಳಗಿನ ಬಿಂದುವನ್ನು ಸ್ಪರ್ಶಿಸುವುದು ಸಾಧ್ಯವಾಗಿರಲಿಕ್ಕಿಲ್ಲ. ನಮ್ಮಿಂದ ಶ್ರೇಷ್ಠ ಪದ್ಧತಿಯನ್ನು ಎರವಲು ಪಡಕೊಂಡ ಬಿಳಿಯರು ನಮಗೆ ಕಾರಕೂನರನ್ನು ತಯಾರು ಮಾಡುವ ಶಿಕ್ಷಣ ಪಡೆಯುವಂತೆ ಪ್ರೇರೇಪಿಸಿ ಹೋದರಲ್ಲ, ಅದೇ ವಿಪರ್ಯಾಸ. ಈ ನೋವಿನೊಂದಿಗೇ ನಾವು ಚಂದ್ರಗುಪ್ತನಿಗೆ ಮರಳೋಣ.

ಮಹಾಚತುರ ಚಾಣಕ್ಯನಿಂದ ನಿರ್ದೇಶಿತನಾಗಿ ರಾಜ್ಯಭಾರ ನಿರತನಾಗಿದ್ದ ಚಂದ್ರಗುಪ್ತ ಇಡಿಯ ಆರ್ಯಾವರ್ತವನ್ನು ಒಟ್ಟುಗೂಡಿಸುವ ಪಣತೊಟ್ಟಿದ್ದ. ಅದು ಚಾಣಕ್ಯರ ಆಶಯವಾಗಿತ್ತು. ನಂದರ ಆಳ್ವಿಕೆಯ ಕಾಲಕ್ಕೆ ಹಬ್ಬಿದ ಅಸಹನೆಯಿಂದ ಪ್ರತ್ಯೇಕಗೊಳ್ಳಲು ತವಕಿಸುತ್ತಿದ್ದ ಪಾಳೆಗಾರರನ್ನು ಮೆಟ್ಟಿ ನಿಂತು ಅಖಂಡ ರಾಷ್ಟ್ರದ ನಿರ್ಮಾಣಕ್ಕೆ ಆತ ಹಾತೊರೆಯುತ್ತಿದ್ದ. ಅದಕ್ಕಾಗಿ ಅಂದಿನ ದಿನಗಳಲ್ಲಿಯೇ ಬೃಹತ್ ಸೇನೆ ಸಂಘಟಿಸಿದ. ರೋಮಿಲಾ ಥಾಪರ್ ತನ್ನ ‘ಅಶೋಕ’ ಕೃತಿಯಲ್ಲಿ ‘ರಾಷ್ಟ್ರೀಯ ಪ್ರಜ್ಞೆಯೇ ಇರದಿದ್ದ ಕಾಲಕ್ಕೆ ಉಪಖಂಡವನ್ನು ಏಕವಾಗಿರಿಸುವ ಏಕೈಕ ಮಾಧ್ಯಮ ಸೈನ್ಯಬಲವೇ’ ಎಂದೆನ್ನುತ್ತ ಅದಕ್ಕಾಗಿಯೇ ಆತ ಸೈನ್ಯಬಲವನ್ನು ಆ ಪರಿ ಹಿಗ್ಗಿಸಿಕೊಂಡಿದ್ದ ಎನ್ನುತ್ತಾರೆ. ಈ ಎಡಪಂಥೀಯ ಇತಿಹಾಸಕಾರರೆಲ್ಲರದ್ದೂ ಇದೇ ಸಮಸ್ಯೆ. ‘ಭಾರತ ಎಂದಿಗೂ ಒಂದು ರಾಷ್ಟ್ರವೇ ಆಗಿರಲಿಲ್ಲ’ ಎಂದು ಬ್ರಿಟೀಷ್ ಇತಿಹಾಸಕಾರರು ಹೇಳಿದ್ದನ್ನೇ ಗಿಳಿ ಪಾಠ ಒಪ್ಪಿಸುವ ಮಂದಿ. ಅಯೋಧ್ಯೆಯ ರಾಜಾ ರಾಮಚಂದ್ರನನ್ನು ಒಪ್ಪಿಕೊಂಡಿದ್ದ ಇಡಿಯ ದೇಶ, ಭೀಷ್ಮನಿಂದ ಬಲವಾಗಿ ರಕ್ಷಿಸಲ್ಪಟ್ಟಿದ್ದ ವಿಸ್ತಾರವಾದ ದೇಶ, ನಂದರ ಕಾಲಕ್ಕೆ ಹಬ್ಬಿ ನಿಂತಿದ್ದ ಭಾರತ ಇವೆಲ್ಲವೂ ರಾಷ್ಟ್ರವಲ್ಲವೇನು? ಈಗಲೂ ಆಗಾಗ ದಕ್ಷಿಣದ ರಾಜ್ಯಗಳು ಪ್ರತ್ಯೇಕ ರಾಷ್ಟ್ರವಾಗುವ ಮಾತಾಡುತ್ತವೆ, ಈಶಾನ್ಯ-ಕಾಶ್ಮೀರಗಳು ಸಿಡಿದು ಹೋಗುವ ಕೂಗು ಹಾಕುತ್ತವೆ. ಅದರರ್ಥ ‘ರಾಷ್ಟ್ರವಲ್ಲ ಭಾರತ’ ಎಂದೇನು? ರೋಮಿಲಾ ಥಾಪರ್ಗೆ ಚಂದ್ರಗುಪ್ತನ ಮೇಲೆ ಪ್ರೀತಿ ಇದೆ. ಆದರೆ ಆತ ಚಾಣಕ್ಯನ ಶಿಷ್ಯ ಎಂಬುದು ನುಂಗಲಾರದ ಬಿಸಿ ತುಪ್ಪವಾಗುತ್ತದೆ ಅಷ್ಟೇ.
ಚಂದ್ರಗುಪ್ತ ತನ್ನ ಸಾಮ್ರಾಜ್ಯಕ್ಕೆ 12 ವರ್ಷಗಳ ಬರಗಾಲ ತಟ್ಟಿದಾಗ ಮಗ ಬಿಂದುಸಾರನಿಗೆ ಪಟ್ಟಕಟ್ಟಿ ತಾನು ಸ್ವತಃ ಜೈನಮತ ಸ್ವೀಕಾರ ಮಾಡಿ ಭದ್ರ ಬಾಹುಗಳೊಂದಿಗೆ ಶ್ರವಣ ಬೆಳಗೊಳಕ್ಕೆ ಬಂದು ಜೈನ ಸಂಪ್ರದಾಯದಂತೆ ದೇಹತ್ಯಾಗ ಮಾಡಿದನಂತೆ. ಚಂದ್ರಗುಪ್ತ ಜೈನಮತ ಸ್ವೀಕರಿಸಿದ್ದು ಆಗ ಬೌದ್ಧಮತದ ಸ್ಥಿತಿಗತಿಗಳ ಕುರಿತಂತೆಯಾಗಲೀ ಯಾವ ಮಾಹಿತಿಯೂ ವಿಶೇಷವಾಗಿ ದೊರಕದು. ನಮ್ಮ ಇತಿಹಾಸಕಾರರೂ ಈ ಕುರಿತಂತೆ ಗಂಭೀರ ಚರ್ಚೆಯೇನೂ ಮಾಡುವುದಿಲ್ಲ.
ಅವನ ನಂತರ ಅಧಿಕಾರಕ್ಕೆ ಬಂದ ಬಿಂದುಸಾರನ ಜನನದ ಕುರಿತಂತೆ ರೋಮಿಲಾ ಥಾಪರ್ ಅತ್ಯಂತ ಅವಹೇಳನಕಾರಿಯಾದ ನಂಬಲು ಸಾಧ್ಯವೇ ಇಲ್ಲದ ಕಥೆಯೊಂದನ್ನು ಬೌದ್ಧ ಇತಿಹಾಸಕಾರರಿಂದ ಎರವಲು ಪಡೆದಿದ್ದೆಂದು ಹೇಳುತ್ತಲೇ ಉಲ್ಲೇಖಿಸುತ್ತಾರೆ. ಚಾಣಕ್ಯ ಚಂದ್ರಗುಪ್ತನಿಗೆ ಆಹಾರದಲ್ಲಿ ಪ್ರತಿನಿತ್ಯ ಅತ್ಯಲ್ಪ ಪ್ರಮಾಣದ ವಿಷ ಬೆರೆಸಿ ಉಣಿಸಿ ಅವನನ್ನು ವಿಷ ನಿರೋಧಕವಾಗಿ ಬೆಳೆಸಿದ್ದನಂತೆ. ಅದೊಮ್ಮೆ ಚಂದ್ರಗುಪ್ತನ ಪಟ್ಟದರಸಿ ಇದರ ಅರಿವಿಲ್ಲದೇ ಚಂದ್ರಗುಪ್ತನ ತಟ್ಟೆಯಿಂದ ಒಂದು ತುತ್ತು ತಿಂದುಬಿಟ್ಟಳಂತೆ. ಚಾಣಕ್ಯ ತಡೆಯುವಷ್ಟರಲ್ಲಿಯೇ ನಡೆದು ಹೋದ ಅಚಾತುರ್ಯವಂತೆ ಇದು. ಗರ್ಭಸ್ಥ ಶಿಶುವನ್ನು ಉಳಿಸಲೆಂದು ಚಾಣಕ್ಯ ರಾಣಿಯ ತಲೆಕಡಿದು ಭ್ರೂಣವನ್ನು ಮೇಕೆಯ ಗರ್ಭದಲ್ಲಿಟ್ಟು ಬೆಳೆಸಿದನಂತೆ. ಮಗು ಜನನವಾದಾಗ ಮೈತುಂಬಾ ಮಚ್ಚೆಗಳಿದ್ದವಂತೆ. ಇದು ಸಾರವತ್ತಾದ ಚುಕ್ಕಿಗಳಾದ್ದರಿಂದ ಬಿಂದುಸಾರ ಎಂದು ಶಿಶುವಿಗೆ ನಾಮಕರಣ ಮಾಡಲಾಯ್ತಂತೆ. ಅಡಗೂಲಜ್ಜಿಯ ಕಥೆಯಂತಿರುವ ಈ ಘಟನೆಯನ್ನೂ ಆಕೆ ಉಲ್ಲೇಖಿಸಿರುವ ಪ್ರಮುಖ ಕಾರಣವೇ ಚಾಣಕ್ಯನನ್ನು ಕ್ರೂರಿಯಾಗಿ ತೋರಿಸುವುದು. ಬೌದ್ಧ ಧರ್ಮದತ್ತ ಸೆಳೆಯಲ್ಪಡದ ಬಿಂದುಸಾರ ಸತ್ತ್ವಹೀನನೆಂದು ಮೇಕೆಯಂತೆ ಎಂದು ಬಿಂಬಿಸುವುದು ಮಾತ್ರ. ಹಾಗೆ ನೋಡಿದರೆ ಬಿಂದುಸಾರ ಶತ್ರುಗಳ ಪಾಲಿಗೆ ಯಮನೇ ಆಗಿದ್ದವನು. ಸಾಮ್ರಾಜ್ಯದ ವಿರುದ್ಧ ತಕರಾರು ಮಾಡಿದವನನ್ನು ನಿರ್ದಾಕ್ಷಿಣ್ಯವಾಗಿ ಹೊಸಕಿ ಹಾಕುತ್ತಿದ್ದ. ತಂದೆ ಹಾಕಿಕೊಟ್ಟ ಅಡಿಪಾಯದ ಮೇಲೆ ಮೌರ್ಯಸಾಮ್ರಾಜ್ಯದ ಬೃಹತ್ ಸೌಧ ಕಟ್ಟಿದ್ದು ಬಿಂದುಸಾರನೇ. ಉತ್ತರದಲ್ಲಿ ಹಿಮಾಲಯವನ್ನು ಒಳಗೊಂಡಂತೆ ಕಾಶ್ಮೀರದಿಂದ ಶುರುಮಾಡಿ ದಕ್ಷಿಣದಲ್ಲಿ ಮೈಸೂರಿನವರೆಗೆ, ವಾಯುವ್ಯದಲ್ಲಿ ಆಪ್ಘಾನಿಸ್ತಾನದಿಂದ ಹಿಡಿದು ಪೂರ್ವದಲ್ಲಿ ಬಂಗಾಳಕೊಲ್ಲಿಯವರೆಗೆ ಅಖಂಡ ಆರ್ಯಾವರ್ತದ ನಿರ್ಮಾಣ ಮಾಡಿದ್ದು ಇವನ ಕಾಲಕ್ಕೇ.
ಭಾರತದ ಎಲ್ಲಾ ಸಾಮ್ರಾಜ್ಯಗಳಲ್ಲಿದ್ದಂತೆ ಮೌರ್ಯ ಸಾಮ್ರಾಜ್ಯವೂ ಧಾರ್ಮಿಕ ಸಹಿಷ್ಣುತೆಯನ್ನು ಹೊಂದಿತ್ತು. ರಾಜನ ಮತ-ಪಂಥಗಳು ಯಾವುದೇ ಇರಲಿ ಜನರಿಗೆ ತಮ್ಮ ಮಾರ್ಗ ಅನುಸರಿಸುವುದಕ್ಕೆ ಅದು ತಡೆಯಾಗುತ್ತಿರಲಿಲ್ಲ. ಚಂದ್ರಗುಪ್ತ ಚಾಣಕ್ಯರ ಪ್ರಭಾವಕ್ಕೊಳಗಾಗಿ ವೈದಿಕ ಮಾರ್ಗ ಅವಲಂಬಿಸುತ್ತಿದ್ದಾನೆಂದು ಭಾವಿಸಿದರೆ ಆತ ಕೊನೆಯಲ್ಲಿ ಜೈನ ಮತಾನುಯಾಯಿಯಾದ. ಹಾಗಂತ ಆ ಚಿಂತನೆಗಳನ್ನು ತನ್ನ ಮಗನ ಮೇಲೂ ಹೇರಲಿಲ್ಲ. ಬಿಂದುಸಾರನ ಕಾಲಕ್ಕೆ ಬೌದ್ಧ, ಜೈನ ಪಂಡಿತರನೇಕರು ಆಸ್ಥಾನಕ್ಕೆ ಬಂದು ಪ್ರಭಾವಿಸುವ ಪ್ರಯತ್ನ ಮಾಡಿದರೂ ತನ್ನ ವೈದಿಕ ಪರಂಪರೆಯಿಂದ ಆತ ಹಿಂದೆ ಸರಿಯಲಿಲ್ಲ. ಆದರೆ ಅವನ ನಂತರ ಬಂದ ಅಶೋಕ ಈ ಪರಂಪರೆಯನ್ನು ಮುಂದುವರಿಸುವಲ್ಲಿ ಸೋತುಹೋದ!

ashoka-the-great

‘ಇತಿಹಾಸದಲ್ಲಿ ಗತಿಸಿದ ಸಾವಿರಾರು ಚಕ್ರಾಧಿಪತ್ಯಗಳಲ್ಲಿ ಗಾಂಭೀರ್ಯ, ಪ್ರಶಾಂತ, ಆನಂದದಾಯಕ ಮತ್ತು ಘನತೆವೆತ್ತ ಸಾಮ್ರಾಜ್ಯವಾಗಿ ನೆನಪಲ್ಲುಳಿಯುವ ಏಕಮಾತ್ರ ನಕ್ಷತ್ರ ಅಶೋಕ ಮಾತ್ರ. ವೋಲ್ಗಾದಿಂದ ಜಪಾನಿನವರೆಗೆ ಅವನ ಹೆಸರು ಇಂದಿಗೂ ಗೌರವಿಸಲ್ಪಡುತ್ತದೆ. ಚೀನಾ, ಟಿಬೆಟ್ ಮತ್ತು ಭಾರತಗಳು ಅವನ ತತ್ತ್ವಗಳನ್ನು ಗಾಳಿಗೆ ತೂರಿದರೂ ಗುಣಗಾನ ಮಾಡುವುದನ್ನು ಮಾತ್ರ ಇಂದಿಗೂ ಬಿಟ್ಟಿಲ್ಲ’ ಎಂದಿದ್ದಾನೆ ಇತಿಹಾಸಕಾರ ಹೆಚ್.ಜಿ. ವೆಲ್ಸ್. ಅನುಮಾನವೇ ಇಲ್ಲ. ಅಶೋಕನನ್ನು ಹೊಗಳಿರುವ ಪಶ್ಚಿಮದ ಇತಿಹಾಸಕಾರರ ಉದ್ದೇಶ ಸ್ವಾರ್ಥದ್ದೇ ಆದರೂ ಭಾರತೀಯ ಇತಿಹಾಸದಲ್ಲಿ ಅಶೋಕ ವಿಶೇಷ ತಿರುವಾಗಿ ಗುರುತಿಸಲ್ಪಡುತ್ತಾನೆ! ಅಶೋಕನ ಕುರಿತಂತೆ ಹರಡಿ ಹೋಗಿರುವ ಕಥೆಗಳು ಅನೇಕ. ದಿವ್ಯಾವಧಾನದ ಪ್ರಕಾರ ಚಂಪಾ ರಾಜ್ಯದ ಬ್ರಾಹ್ಮಣ ಹೆಣ್ಣುಮಗಳು ಕ್ಷೌರಿಕ ವೃತ್ತಿಯನ್ನು ಕೈಗೊಳ್ಳುವಾಗ ಬಿಂದುಸಾರನನ್ನು ಮೋಹಿಸಿ ಮದುವೆಯಾದಳು. ಆಕೆಯ ಹೆಸರು ಸುಭದ್ರಾಂಗಿಯಂತೆ. ಇವರಿಗೆ ಹುಟ್ಟಿದವನೇ ಅಶೋಕ. ಇವರೀರ್ವರಿಗೆ ಹುಟ್ಟಿದ ಎರಡನೇ ಮಗನ ಹೆಸರು ವೀತಶೋಕ ಎಂದೂ ಕೆಲವು ಸಾಹಿತ್ಯಗಳು ಉಲ್ಲೇಖ ಮಾಡುತ್ತವೆ.
ರೋಮಿಲಾ ಥಾಪರ್ ಅಶೋಕನ ಹುಟ್ಟಿಗೂ ಪಶ್ಚಿಮದ ಇತಿಹಾಸಕಾರರಿಂದ ಪ್ರೇರಿತವಾದ ತನ್ನದೇ ಆದ ಶೃಂಗಾರ ಕಾವ್ಯವನ್ನು ಹೆಣೆದಿದ್ದಾಳೆ. ಆಕೆಯ ಪ್ರಕಾರ ಅಶೋಕ ಇಷ್ಟು ವಿಭಿನ್ನವಾದ ಚಕ್ರವರ್ತಿಯಾಗಲು ಅವನೊಳಗೆ ಹರಿಯುತ್ತಿರುವ ಬಿಳಿಯರ ರಕ್ತವೇ ಕಾರಣ! ಚಂದ್ರಗುಪ್ತ ಗ್ರೀಕ್ ದೊರೆ ಸೆಲ್ಯುಕಸ್ನ ಮಗಳ ಮದುವೆಯಾದ್ದರಿಂದ ಬಿಂದುಸಾರ ಅವರಿಗೆ ಹುಟ್ಟಿದವನಾಗಿರಬೇಕು. ಇಲ್ಲವೇ ಬಿಂದುಸಾರನೇ ಈ ಪೃಥೆ ಮುಂದುವರೆಸಿ ಗ್ರೀಕ್ ರಾಣಿಯನ್ನು ಮದುವೆಯಾಗಿದ್ದು ಅವಳಿಗೆ ಹುಟ್ಟಿದವ ಅಶೋಕನಾಗಿರಬೇಕು ಅಂತ! ಆದರೆ ಅಲೆಗ್ಸಾಂಡರನ ಆಕ್ರಮಣ ನಡೆದದ್ದು ಮೌರ್ಯ ಯುಗದ ಚಂದ್ರಗುಪ್ತನ ಕಾಲಕ್ಕಲ್ಲ, ಗುಪ್ತರ ಕಾಲದ ಚಂದ್ರಗುಪ್ತನ ವೇಳೆಯಲ್ಲಿ ಎಂಬ ಸಂಶೋಧನೆಗಳನ್ನು ಹೊಕ್ಕಿ ನೋಡಿದರೆ ಎಡಪಂಥೀಯರ ದ್ವೇಷದ ಕಥನಗಳು ಗಾಳಿಯಲ್ಲಿ ತೂರಿಹೋಗಿಬಿಡುತ್ತವೆ.
ಬಿಂದುಸಾರನಿಗೆ ಅನೇಕ ಪತ್ನಿಯರಿದ್ದುದರಿಂದ ಅಶೋಕನಿಗೆ ನೂರೊಂದು ಜನ ಸಹೋದರರಿದ್ದರೆಂಬುದನ್ನು ಒಪ್ಪಬೇಕಾಗಬಹುದೇನೋ. ಬೌದ್ಧ ಸಾಹಿತ್ಯಗಳು ಅಶೋಕ ತನ್ನ ನೂರು ಜನ ಸೋದರರನ್ನು ಕೊಂದು ಪಟ್ಟಕ್ಕೇರಿದನೆಂದು ಬರೆಯುತ್ತವೆ. ಹಾಗಂತ ಎಲ್ಲಾ ಕೃತಿಗಳೂ ಈ ಕೃತ್ಯವನ್ನು ಸಮಥರ್ಿಸಲಾರವು. ಬಹುಶಃ ಬೌದ್ಧ ಧರ್ಮ ಸ್ವೀಕಾರಕ್ಕೆ ಮುನ್ನ ಅಶೋಕನಲ್ಲಿ ಬಂದ ಮಹತ್ವದ ಬದಲಾವಣೆಗಳ ದ್ಯೋತಕವಾಗಿ ಹೀಗೆ ಅತಿಶಯೋಕ್ತಿ ಜೋಡಿಸಿರಬಹುದು. ಜಾಹಿರಾತುಗಳಲ್ಲಿ ಸೌಂದರ್ಯವರ್ಧಕ ಹಚ್ಚಿದರೆ ಬೆಳ್ಳಗಾಗುವರೆಂದು ತೋರಿಸುವ ಪ್ರಯತ್ನದಲ್ಲಿ ಅದೇ ಮುಖವನ್ನು ಕಪ್ಪಗೆ ಮೊದಲು ತೋರಿಸುವುದಿಲ್ಲವೇ ಹಾಗೇ ಇದು! ಅಶೋಕನನ್ನು ಕಂಡರೆ ತಂದೆಗೆ ಅಷ್ಟಕ್ಕಷ್ಟೇ. ಆದರೂ ಅವನ ಸಾಮರ್ಥ್ಯಕ್ಕೆ ಮನ ಸೋತಿದ್ದ ಬಿಂದುಸಾರ ತಕ್ಷಶಿಲೆಯ ಜವಾಬ್ದಾರಿ ಕೊಟ್ಟು ಕಳಿಸಿದ. ಅಲ್ಲಿನ ಜನ ಅದಾಗಲೇ ಸಿಡಿದೇಳುವ ಸಂಚು ನಡೆಸಿದ್ದರು. ಅವರಿಗೆ ಒತ್ತಡದಿಂದ ತಮ್ಮನ್ನು ಹಿಡಿದಿಟ್ಟ ಪ್ರಕ್ರಿಯೆ ಇಷ್ಟವಾಗಿರಲಿಲ್ಲ. ಅಶೋಕ ತಂದೆಯ ಮಾತಿನಂತೆ ಅಲ್ಲಿಗೆ ಹೋಗಿ ದಂಗೆಯಡಗಿಸಿ ಜನಾನುರಾಗಿಯಾದ. ಅವನಿಗೀಗ ಉಜ್ಜಯಿನಿಯ ಹೊಣೆಗಾರಿಕೆ ದಕ್ಕಿತು. ಅಲ್ಲಿ ಆತ ವ್ಯಾಪಾರಿಯೊಬ್ಬನ ಮಗಳಾದ ದೇವಿಯೊಂದಿಗೆ ಪ್ರಣಯ ಪಾಶಕ್ಕೆ ಸಿಲುಕಿದ. ಮದುವೆಯೂ ಆಯಿತು ಜೊತೆಗೆ ಇಬ್ಬರು ಮಕ್ಕಳು, ಮಹಿಂದ ಮತ್ತು ಸಂಘಮಿತ್ತಾ. ಈ ದೇವೀ ಬುದ್ಧನ ಬಲುಗಾಢ ಪ್ರಭಾವಕ್ಕೆ ಒಳಗಾದವಳು. ಹೀಗಾಗಿ ಆಕೆ ಎಂದಿಗೂ ಅಶೋಕನೊಂದಿಗೆ ಪಟ್ಟದರಸಿಯಾಗಿ ರಾಜ್ಯಭಾರ ಮಾಡಹೋಗದೇ ತಾನು ಉಜ್ಜಯಿನಿಯಲ್ಲಿಯೇ ಉಳಿದು ಮಕ್ಕಳನ್ನು ಬೌದ್ಧ ಚಿಂತನೆಗಳಿಗೆ ಪೂರಕವಾಗಿ ಬೆಳೆಸಿದಳು. ಮುಂದೆ ಇವರೀರ್ವರನ್ನೇ ಅಶೋಕ ಶ್ರೀಲಂಕಾಗೆ ಬೌದ್ಧ ಚಿಂತನೆಗಳನ್ನು ಪಸರಿಸಲು ರಾಯಭಾರಿಯಾಗಿ ಕಳಿಸಿದ.

sanghamitra-daughter-of-king-ashoka-a-buddhist-monk-285-bc

ಅಶೋಕನ ಪರಿವಾರವೂ ದೊಡ್ಡದಾಗಿಯೇ ಇತ್ತು. ದೇವಿಯನ್ನು ಬಿಟ್ಟರೆ ಅಸಂಧಿಮಿತ್ತ ಮತ್ತು ತಿಸ್ಸರಖ್ಖಿತ ಇವರಿಬ್ಬರೂ ಅರಸಿಯರಾಗಿದ್ದರು. ಕೆಲವೆಡೆ ಪದ್ಮಾವತಿಯ ಹೆಸರೂ ಉಲ್ಲೇಖವಾಗಿದೆ. ಅಸಂಧಿಮಿತ್ತ ಪಟ್ಟದ ರಾಣಿಯಾಗಿದ್ದರೂ ಅವಳಿಗೆ ಮಕ್ಕಳಿರಲಿಲ್ಲ. ಪದ್ಮಾವತಿಯ ಮಗ ಕುಣಾಲನೇ ರಾಜ್ಯದ ಉತ್ತರಾಧಿಕಾರಿಯಾಗಿದ್ದ. ಫಾಹಿಯಾನನು ಧರ್ಮವಿವರ್ಧನನೆಂಬ ಅಶೋಕ ಪುತ್ರನ ಬಗ್ಗೆ ಉಲ್ಲೇಖ ಮಾಡುತ್ತಾನೆ. ಸಂಘಮಿತ್ತಾಳಂತೆ ಚಾರುಮತಿಯೆಂಬ ಮತ್ತೊಬ್ಬ ಹೆಣ್ಣುಮಗಳಿದ್ದುದೂ ಕಂಡುಬರುತ್ತದೆ.
ದಿವ್ಯಾವಧಾನದ ಪ್ರಕಾರ ಬಿಂದುಸಾರನಿಗೆ ತನ್ನ ಪುತ್ರ ಸುಶೀಮನನ್ನು ಪಟ್ಟದಲ್ಲಿ ಕೂರಿಸುವ ತುಡಿತವಿತ್ತಂತೆ. ಆದರೆ ಅವನ ಮಂತ್ರಿಗಳಿಗೆ ಅಶೋಕ ಬೇಕಿತ್ತು. ಹೀಗಾಗಿ ಶಕ್ತಿಯಿಂದ ಸಮರ್ಥನೆನಿಸಿದ ಅವನನ್ನೇ ಮಂತ್ರಿಗಳು ಸೇರಿ ಪಟ್ಟದ ಮೇಲೆ ಕೂರಿಸುವ ಉಪಾಯ ಮಾಡಿದರು. ಬಿಂದುಸಾರನ ದೇಹತ್ಯಾಗದ ನಂತರ ನಾಲ್ಕು ವರ್ಷಗಳ ಕಾಲ ನಡೆದ ಕದನದಲ್ಲಿ ಅಶೋಕ ಅಣ್ಣನನ್ನು ಸೋಲಿಸಿ ಪಟ್ಟಕ್ಕೆ ಬಂದ. ರಾಜನಾಗಿಯೂ ಅಶೋಕ ಬೇಟೆಯಾಡುತ್ತಾ ಶೃಂಗಾರದಲ್ಲಿ ಮೈಮರೆಯುತ್ತ ಕಾಲ ಕಳೆಯುತ್ತಿದ್ದನಂತೆ. ಆದರೆ ಬಿ.ಜಿ ಗೋಖಲೆಯವರು ತಮ್ಮ ಬುದ್ಧಿಸಂ ಅಂಡ್ ಅಶೋಕ ಕೃತಿಯಲ್ಲಿ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉಲ್ಲೇಖಿಸಿದ ರಾಜನ ಕರ್ತವ್ಯಕ್ಕೆ ತಕ್ಕಂತೆ ಅಶೋಕ ಸಮಯ ಪರಿಪಾಲನೆ ಮಾಡುತ್ತಿದ್ದನೆಂಬುದನ್ನು ದಾಖಲಿಸಿದ್ದಾರೆ. ‘ದಿನವನ್ನು ಎಂಟು ವಿಭಾಗಗಳಾಗಿ ಮಾಡಲಾಗುತ್ತದೆ. ಮೊದಲ ಭಾಗದಲ್ಲಿ ಲೆಕ್ಕ ಪತ್ರಗಳನ್ನು ನೋಡುವುದು. ಎರಡನೇ ಭಾಗದಲ್ಲಿ ಜನಸಾಮಾನ್ಯರ ಅಹವಾಲುಗಳನ್ನು ಆಲಿಸುವುದು. ಮೂರರಲ್ಲಿ ಸ್ನಾನ, ಊಟ ಮತ್ತು ಅಧ್ಯಯನ. ನಾಲ್ಕನೇ ಭಾಗ ತೆರಿಗೆ ಸಂಗ್ರಹಣೆಯಷ್ಟೇ ಅಲ್ಲ ಅಧಿಕಾರಿಗಳೊಂದಿಗೆ ಮಾತುಕತೆ ಕೂಡ. ಐದನೇ ವಿಭಾಗ ಬರವಣಿಗೆ, ಪತ್ರೋತ್ತರ ಜೊತೆಗೆ ಗುಪ್ತಮಾಹಿತಿ ಸಂಗ್ರಹಣೆಗೆ ಮೀಸಲು. ಆರರಲ್ಲಿ ಸಾಹಸ, ಕ್ರೀಡೆ ಮತ್ತಿತರ ಆಸಕ್ತ ಚಟುವಟಿಕೆಗಳನ್ನು ಮಾಡಬಹುದು. ಏಳನೇ ವಿಭಾಗದಲ್ಲಿ ಆನೆ, ಕುದುರೆ, ರಥ, ಸೈನ್ಯದ ಪರಿವೀಕ್ಷಣೆ ಮತ್ತು ಕೊನೆಯದಾಗಿ ಆತ ಸೈನಿಕ ಚಟುವಟಿಕೆಗಳ ಕುರಿತಂತೆ ಅವಲೋಕನ ಮಾಡಬೇಕು’ ಹೀಗೆ ಅಶೋಕ ಪ್ರತಿಯೊಂದರಲ್ಲೂ ಕ್ರಿಯಾಶೀಲವಾಗಿ ಭಾಗವಹಿಸುತ್ತಿದ್ದನಂತೆ. ಒಟ್ಟಾರೆಯಾಗಿ ಆತ ಚೈತನ್ಯದ ಚಿಲುಮೆಯಾಗಿ ಪಾದರಸದಂತೆ ಇರುತ್ತಿದ್ದ. ದೊರೆಯಾದವನೊಬ್ಬ ಅತಿಯಾಗಿ ನಿದ್ದೆಯಲ್ಲಿ ಕಾಲ ಕಳೆಯದೇ ಸದಾ ಜೊತೆಯಲ್ಲಿರುವವರನ್ನು ಹುರಿದುಂಬಿಸುತ್ತಾ ದಿನದ ಬಹುತೇಕ ಸಮಯ ಕೆಲಸ ಮಾಡಬೇಕೆಂಬುದು ಚಾಣಕ್ಯನ ಆದೇಶ!
ಚಂದ್ರಗುಪ್ತ ಮತ್ತು ಬಿಂದುಸಾರರು ಇಡಿಯ ಆರ್ಯಾವರ್ತದ ಮೇಲೆಯೇ ತಮ್ಮ ಪ್ರಭುತ್ವವನ್ನು ಸ್ಥಾಪಿಸಿ ಹೋಗಿದ್ದರು. ಅಶೋಕ ಅದನ್ನು ಉಳಿಸಿ ಮುಂದುವರಿಸಿದ್ದರೆ ಸಾಕಿತ್ತು. ಅಧಿಕಾರಕ್ಕೆ ಬಂದ ಕೆಲವು ವರ್ಷಗಳಲ್ಲಿಯೇ ಆತ ಗಡಿಯನ್ನು ಭದ್ರಪಡಿಸಿದ. ತನ್ನ ಪರಂಪರೆಗೆ ತಕ್ಕಂತೆ ಆಳ್ವಿಕೆಯನ್ನೂ ಮುಂದುವರೆಸಿದ. ಅವನ ಹಿಡಿತದಿಂದ ಹೊರಗಿದ್ದುದು ಕಳಿಂಗವೊಂದೇ. ವಾಸ್ತವವಾಗಿ ಕಳಿಂಗ ಮೌರ್ಯ ಸಾಮ್ರಾಜ್ಯದ ಒಂದು ಅಂಗವೇ ಆಗಿತ್ತು. ಬಿಂದುಸಾರ ತೀರಿಕೊಂಡ ನಂತರ ಪಟ್ಟ ಪಡೆಯಲು ನಡೆದ ಕದನದ ಲಾಭ ಪಡಕೊಂಡ ಶೂರ ಕಳಿಂಗದ ದೊರೆ ಒಕ್ಕೂಟದಿಂದ ಆಚೆ ಜಿಗಿದ. ಸ್ವಾತಂತ್ರ್ಯ ಪಡಕೊಂಡ. ಅಶೋಕನಿಗೆ ಕಳಿಂಗಕ್ಕೆ ನುಗ್ಗಿ ಅದನ್ನು ತನ್ನ ಸಾಮ್ರಾಜ್ಯದೊಳಕ್ಕೆ ಮತ್ತೆ ಸೇರಿಸುವ ಉತ್ಕಟ ಬಯಕೆಯಿತ್ತು. ಅದಾಗಲೇ ತಕ್ಷಶಿಲಾದಲ್ಲಿನ ದಂಗೆಯನ್ನು ಅಡಗಿಸಿ ವಿಕ್ರಮ ಮೆರೆದ ಅನುಭವವೂ ಇತ್ತು. ಹಾಗಂತ ಕಳಿಂಗ ಸುಲಭದ ತುತ್ತಾಗಿರಲಿಲ್ಲ. ಅಲ್ಲಿನ ಸೈನಿಕ ಶಕ್ತಿ ಜೋರಾಗಿತ್ತು. ಆಥರ್ಿಕ ದೃಷ್ಟಿಯಿಂದ ಅನೇಕ ರಾಜ್ಯಗಳಿಗೆ ಸಂಪರ್ಕ ಸೇತುವಾಗಿದ್ದರಿಂದ ಅದು ಸ್ವಾವಲಂಬಿಯೂ ಆಗಿತ್ತು. ಯುದ್ಧ ನಡೆದರೆ ಗೆಲುವು ಸೋಲುಗಳ ಲೆಕ್ಕಾಚಾರ ಆಮೇಲೆ, ಎರಡೂ ಪಂಗಡಗಳಿಗೆ ಸಾವು-ನೋವುಗಳಂತೂ ಖಾತ್ರಿಯಿತ್ತು.
ಅಧಿಕಾರದ ಅಮಲೇರಿದವರಿಗೆ ವಿಸ್ತಾರದ ಹಂಬಲವೂ ಸೇರಿದರೆ ಜಗತ್ತೆಲ್ಲ ತನಗೆ ಬೇಕೆನಿಸಲಾರಂಭಿಸುತ್ತದೆ. ಯುದ್ಧಗಳ ಹಿಂದಿನ ಸೂತ್ರ ಇದೊಂದೇ. ಹಿಟ್ಲರ್ನ ಜಗದೊಡೆಯನಾಗುವ ಬಯಕೆ ಜಗತ್ತನ್ನು ಕದನಕ್ಕೆ ದೂಡಿತು. ಅಮೇರಿಕಾದ ಕದನ ಕುತೂಹಲ ಮತಿ ಅನೇಕರ ಬದುಕು ಕೆಡಿಸಿತು. ಪಾಕೀಸ್ತಾನ-ಚೀನಾಗಳು ಅಕ್ಕಪಕ್ಕದವರ ನೆಮ್ಮದಿಯನ್ನು ಹಾಳುಗೆಡವಿ ಕುಂತಿವೆ. ಅಶೋಕನಿಗೀಗ ಕಳಿಂಗ ಬೇಕೆನಿಸಿತು. ಅವನೀಗ ಯುದ್ಧಾಕಾಂಕ್ಷಿಯಾಗಿ ಹೊರಟ.

Leave a Reply