ವಿಭಾಗಗಳು

ಸುದ್ದಿಪತ್ರ


 

ಅಧರ್ಮವೆಂದು ಗೊತ್ತಿದೆ, ಅನುಸರಿಸೋಕೆ ಮನಸಿಲ್ಲ…

ರಾಮಾಯಣದ ಅತ್ಯಂತ ಮಹತ್ವದ ತಿರುವ ಕಂಡ ಪ್ರಸಂಗ ಅದು. ದಶರಥ ತಾನು ಕೈಕೇಯಿಗೆ ಯಾವಗಲೋ ಕೊಟ್ಟ ಮಾತನ್ನು ಈಡೇರಿಸಲಿಕ್ಕಾಗಿ ಪಟ್ಟಾಭಿಷಕ್ತನಾಗಬೇಕಿದ್ದ ರಾಮನನ್ನು ಹದಿನಾಲ್ಕು ವರ್ಷ ವನವಾಸಕ್ಕೆ ತೆರಳುವಂತೆ ಕೇಳಿಕೊಳ್ಳುತ್ತಾನೆ. ರಾಮನೇನೋ ತಂದೆಯ ಆಜ್ಞಾಪಾಲನೆಗೆ ಸಿದ್ಧನಾಗಿಬಿಟ್ಟ. ಆದರೆ ಲಕ್ಷ್ಮಣನ ಮುಖ ಕೆಂಪುಕೆಂಪಾಯಿತು. “ಅಣ್ಣ, ಅಪ್ಪನನ್ನು ಕೊಂದು ರಾಜ್ಯ ವಶಪಡಿಸಿಕೊಳ್ಳೋಣ” ಎಂದ. ರಾಮ ತಮ್ಮನನ್ನು ಸಂತೈಸುತ್ತ, ” ತಂದೆಯ ಮಾತನ್ನು ನಡೆಸಿಕೊದುವುದೆ ಪುತ್ರಧರ್ಮ. ಅದರಲ್ಲಿಯೆ ನಮಗೆ ಶ್ರೇಯಸ್ಸು” ಎಂದುಬಿಟ್ಟ. ತಂದೆಯ ಮಾತಿಗಾಗಿ ರಾಜ್ಯಬಿಟ್ಟು ತೆರಳಿದ ರಾಮ, ಮರಳಿ ಬರುವ ವೇಳೆಗೆ ಜಗ ಬೆಳಗುವ ರಾಮನಾಗಿ ಬಂದ. ಆದರೆ ಪತ್ನಿಯ ದಾಕ್ಷಿಣ್ಯಕ್ಕೆ ಒಳಗಾಗಿ ಮಗನನ್ನೇ ಕಾಡಿಗೆ ಅಟ್ಟಿದ ದಶರಥ, ಪುತ್ರವ್ಯಾಮೋಹದಲ್ಲಿಯೇ ಕೊನೆಯುಸಿರೆಳೆದ.
~
ಯಾರದೋ ಮರ್ಜಿಗೆ, ಮುಲಾಜಿಗೆ ಒಳಗಾಗಿ ಕೈಗೊಂಡ ನಿರ್ಣಯಗಳು ಮತ್ತೆಲ್ಲೋ ಒಳ್ಳೆಯ ಕೆಲಸ ಮಾಡಿದರೆ ಪುಣ್ಯ. ಅನೇಕ ವೇಳೆ ಅವು ಭವಿಷ್ಯವನ್ನೇ ಮೊಟಕುಗೊಳಿಸುವಂಥಹ ನಿರ್ಣಯಗಳಾಗಿಬಿಡುತ್ತವೆ.
ಧೃತರಾಷ್ಟ್ರ ತನ್ನ ಮಕ್ಕಳಿಗೇ ರಾಜ್ಯ ಸಿಗಬೆಕೆಂದು ಹಟ ಹಿದಿದು ಪಾಂದವರಿಗೆ ಅನ್ಯಾಯ ಮಾಡಿದನಲ್ಲ, ಪರಿಣಾಮ ಏನಾಯ್ತು ಗೊತ್ತ? ಯುದ್ಧ ಮತ್ತು ಸರ್ವನಾಶ! ಧರ್ಮರಾಜ್ಯ ಸ್ಥಾಪನೆಯಾಗಲಿಕ್ಕೆ ಕೃಷ್ಣ ಕಾರಣನಾದ ಎನ್ನುವುದನ್ನು ಬಿಟ್ಟರೆ ಇಡಿಯ ಮಹಾಭಾರತ ಅನೇಕ ತುಮುಲಗಳ ಆಗರವಾಗಿ ಕಾಣುವುದಿಲ್ಲವೇ? ಅತ್ತ ಧೃತರಾಷ್ಟ್ರ ತನ್ನ ಪುತ್ರ ವ್ಯಾಮೋಹದ ಮುಲಾಜಿಗೆ ಒಳಗಾದರೆ, ಅವನ ಮಗ ದುರ್ಯೋಧನ ತನ್ನದೇ ಅಹಂಕಾರದ ದಾಕ್ಷಿಣ್ಯಕ್ಕೆ ಒಳಗಾಗಿದ್ದ. ಕೃಷ್ಣ ಬಂದು ಧರ್ಮೋಪದೇಶ ಮಡಿದರೆ,
ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ
ಜಾನಾಮ್ಯಧರ್ಮಂ ನ ಚ ಮೇ ನಿವೃತ್ತಿಃ
ಎಂದುಬಿಟ್ಟ.  “ಧರ್ಮ ಗೊತ್ತಿದ್ದರೂ ಆಚರಿಸುವ  ಮನಸಿಲ್ಲ, ಅಧರ್ಮವೆಂದು ತಿಳಿದರೂ ಬಿಡಲು ಮನಸಿಲ್ಲ” ಎಂಡು ತನ್ನ ಅಹಂಕಾರಕ್ಕೆ ಶರಣಾಗಿಬಿಟ್ಟ! ಅಬ್ಬಬ್ಬ… ಈ ಪರಿಯ ದಾಸ್ಯ ಅದೆಷ್ಟು ಕಷ್ಟ, ನಿಕೃಷ್ಟ!?
~
ಹಲವು ಬಾರಿ ನಂಬಿಕೊಂಡ ಆದರ್ಶಗಳೂ ದಾಕ್ಷಿಣ್ಯವಾಗಿಯೇ ಕಾಡುತ್ತವೆ. ಬಹುಶಃ ಆದರ್ಶಗಳ ಮರ್ಜಿಗೆ ಒಳಗಾಗುವುದು ಅಂದರೆ ಅದೇ ಇರಬೇಕು.
ಪೃಥ್ವಿರಾಜ್ ಚೌಹಾನನ ಮೇಲೆ ಮಹಮದ್ ಘೋರಿ ದಾಳಿ ಮಾಡಿದ್ದು ನೆನಪಿಸಿಕೊಳ್ಳಿ. ನಮ್ಮ ಇತಿಹಾಸದ ಅತ್ಯಂತ ಪ್ರಮುಖ ಘಟ್ಟ ಅದು. ತರೈನ್ ಎನ್ನುವ ಪ್ರದೇಶದಲ್ಲಿ ಅವರಿಬ್ಬರಿಗೂ ಮುಖಾಮುಖಿಯಾಯ್ತು. ಪೃಥ್ವಿರಾಜನ ಸೇನೆಯೆದುರು ಘೋರಿಯ ಸೇನೆ ಪತರಗುಟ್ಟಿ ಹೋಯಿತು. ಆಮೆಲೇನು?  ಘೋರಿ ಪೃಥ್ವಿರಾಜನ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ. ಕ್ಷಮೆ ಯಾರಿಗೆ? ಅದನ್ನು ಪಾತ್ರರಿಗೆ ನೀಡಬೇಕು. ಘೋರಿಯಂತಹ ಅಪಾತ್ರರಿಗಲ್ಲ. ಆದರ್ಶಗಳ ಮುಲಾಜಿಗೆ ಬಿದ್ದ ಪೃಥ್ವಿರಾಜ್ ಚೌಹಾಣ್ ಘೋರಿಯನ್ನು ಕ್ಷಮಿಸಿದ್ದಷ್ಟೇ ಅಲ್ಲ, ಗೌರವಯುತವಾಗಿ ಮರಳಲು ಅನುವು ಮಾಡಿಕೊಟ್ಟ ಕೂಡ!
ಮರು ವರ್ಷವೇ ತರೈನ್ ನಲ್ಲಿ ಮತ್ತೆ ದಾಳಿಯಾಯ್ತು. ಈ ಬಾರಿ ತನ್ನವರೇ ಮೋಸ ಮಾಡಿದುದರ ಫಲವಾಗಿ ಚೌಹಾನನ ಸೇನೆ ಸೋತಿತು. ಘೋರಿಯ ಕೈ ಮೇಲಾಯ್ತು. ಆತ ಚೌಹಾನನನ್ನು ಬಂಧಿಸಿ, ತನ್ನೂರಿಗೆ ಕರೆದೊಯ್ದ. ಅಲ್ಲಿ ಅವನ ಎರಡೂ ಕಣ್ಣೂಗಳನ್ನು ಕೀಳಿಸಿ ಬರ್ಬರ ಕೊಲೆ ಮಾಡಿಸಿದ.
ಅದಕ್ಕೇ ಹೇಳೋದು. ಅಯೋಗ್ಯರಿಗೆ ಒಳ್ಳೆಯದನ್ನು ಮಾಡಬಾರದೆಂಬುದೂ ಒಂದು ಆದರ್ಶ. ಏನಂತೀರಿ?
~
೧೭೫೭ರಲ್ಲೂ ಹಾಗೇ ಆಯಿತು. ಸಿರಾಜುದ್ದೌಲ ಬಂಗಾಳಾದ ನವಾಬನಾಗಿದ್ದಾಗ ಆಂಗ್ಲರ ವಿರುದ್ಧ ತಿರುಗಿ ಬಿದ್ದ. ಪೋರ್ಟ್ ವಿಲಿಯಂ ಮೇಲೆ ಏರಿ ಹೋದ. ಪತರಗುಟ್ಟಿದ ರಾಬರ್ಟ್ ಕ್ಲೈವ್, ಸಿರಾಜುದ್ದೌಲನ ವಿರುದ್ಧ ಕತ್ತಿ ಮಸೆಯುತ್ತಿದ್ದ ಮೀರ್  ಜಾಫರನನ್ನು ಒಲಿಸಿಕೊಂಡ. ರಾಜ್ಯದ ಆಮಿಷ ತೋರಿದ. ಈ ಬಾರಿ ಮೀರ್ ಜಾಫರ್ ಯುದ್ಧಕ್ಕೆ ಮುನ್ನ ನವಾಬನ ಬಳಿ ಹೋಗಿ, “ನನ್ನಂತಹ ಸೇನಾಪತಿ ಇರುವಾಗ ನವಾಬರೇ ಯುದ್ಧಕ್ಕೆ ಬರುವುದು ಸರಿಯಲ್ಲ, ಹಾಗೆ ಮಾಡಿದರೆ ಅದು ನನ್ನ ಸಾಮರ್ಥ್ಯಕ್ಕೆ ಅವಮಾನ ಮಾಡಿದಂತೆ. ಬೆರಳೆಣಿಕೆಯಷ್ಟಿರುವ ಆಂಗ್ಲರನ್ನು ಸೋಲಿಸಿ ಬರುತ್ತೇನೆ” ಎಂದ. ನವಾಬನಿಗೂ ಹೌದೆನ್ನಿಸಿತು. ತನ್ನ ಸೇನಾಪತಿಗೆ ಅವಮಾನ ಮಾಡುವುದು ಸರಿಯೇ ಅನ್ನುವ ದ್ವಂದ್ವ ಅವನನ್ನು ಕಾಡಿತು. ಮೀರ್ ಜಾಫರನ ಮುಲಾಜಿಗೆ ಒಳಗಾದ. ಭಾರತದ ಇತಿಹಾಸವೇ ಬದಲಾಯ್ತು. ರಾಬರ್ಟ್ ಕ್ಲೈವ್ ಕದನದಲ್ಲಿ ಸಲೀಸಾಗಿ ಗೆದ್ದ. ನವಾಬನನ್ನು ಪದಚ್ಯುತಗೊಳಿಸಿ ಮೀರ್ ಜಾಫರನನ್ನು ಪಟ್ಟಕ್ಕೇರಿಸಲಾಯ್ತು. ಬ್ರಿಟನ್ನಿನ ಪ್ರಭುತ್ವ ಭಾರತದಲ್ಲಿ ಸ್ಥಿರವಾಗಲು ಅದೊಂದು ಹೆದ್ದಾರಿಯಾಯ್ತು. ಒಂದು ನಿರ್ಧಾರ ಇತಿಹಾಸ ಬದಲಿಸುವ ಎಂತಹ ಕೆಲಸ ಮಾಡಿತು ನೋಡಿ!
~
ಗಾಂಧೀಜಿಯೂ ಇಂತಹ, ಇತರರಿಂದ ಪ್ರಭಾವಿತರಾದ ನಿರ್ಣಯ ಕೈಗೊಳ್ಳುತ್ತಲೇ ಇದ್ದರು. ಅವರು ನೆಹರೂರನ್ನು ತಮ್ಮ ಉತ್ತರಾಧಿಕಾರಿ ಎಂದು ಕರೆದಿದ್ದು ಏಕೆ ಎಂಬ ಪ್ರಶ್ನೆ ಒಂದು ಹಂತದ ನಂತರ ಅವರನ್ನೇ ಕಾಡಿರಲಿಕ್ಕೆ ಸಾಕು. ಮೋತೀಲಾಲ ನೆಹರೂ ಕಾಂಗ್ರೆಸ್ ಪಾರ್ಟಿಗೆ ತುಂಬಾ ದುಡಿದಿದ್ದರು ಎಂಬ ದಾಕ್ಷಿಣ್ಯವ? ಅಥವಾ ಶೋಕೀಲಾಲನಾಗಿದ್ದ ಯುವಕ ತನ್ನ ಚಿಂತನೆಗಳಿಗೆ ಮನಸೋತು ಬಂದಿದ್ದಾನೆಂಬ ಮುಲಾಜಿಗೋ? ದೇವರೇ ಬಲ್ಲ. ಹಾಗೆ ನೋದಿದರೆ ಯಾವ ಕಾರಣಕ್ಕೂ ನೆಹರೂ ಗಾಂಧೀಜಿಯ ಉತ್ತರಾಧಿಕಾರಿಯಾಗುವ ಯೋಗ್ಯತೆ ಹೊಂದಿರಲಿಲ್ಲ. ಗಾಂಧೀಜಿಯ ಸ್ವದೇಶೀ ಚಿಂತನೆಗಳು ಯೋಚಿಸಲಿಕ್ಕೂ ಅನರ್ಹ ಎಂದವರು ನೆಹರೂ. ಗಾಂಧೀಜಿಯಷ್ಟು ಸತ್ಯಪರಾಯಣತೆ, ಆದರ್ಶಗಳಿಗೆ ಬದ್ಧತೆ, ಇವ್ಯಾವುವೂ ಅವರಿಗಿರಲಿಲ್ಲ. ಅಷ್ಟಾದರೂ ಗಾಂಧೀಜಿ ಮೈಮರೆತು ನೆಹರೂಗೆ ಅಷ್ಟು ಮಹತ್ವದ ಸ್ಥಾನ ಕೊಟ್ಟರು. “ನನ್ನ ನಂತರ ನೆಹರೂ ನನ್ನ ಮಾತಾಡುತ್ತಾರೆ” ಎಂದುಬಿಟ್ಟರು. ಕಾಂಗ್ರೆಸ್ಸಿನ ಸೆಂಟ್ರಲ್ ಕಮಿಟಿ ಪಟೇಲರೇ ದೇಶದ ಪ್ರಧಾನಿಯಾಗಲಿ ಎಂದು ಘಂಟಾಘೋಷವಾಗಿ ಹೇಳಿದರೂ ಗಾಂಧೀಜಿ ಮನಸ್ಸು ಮಾಡಲಿಲ್ಲ.
ಪ್ರಧಾನ ಮಂತ್ರಿಗಿರಿ ಪಡೆದು ಆಳುವ ಖುರ್ಚಿಯೇರಿದ ನೆಹರೂ, ಖುರ್ಚಿ ತಪ್ಪಿಸಿಕೊಂಡ ನೆಹರೂನಷ್ಟು ಅಪಾಯಕಾರಿಯಲ್ಲ ಅಂತ ಗಾಂಧೀಜಿಗೆ ಅನಿಸಿತ್ತಾ? ಅಥವಾ ಅವರಪ್ಪನಿಗೆ ಮಾತು ಕೊಟ್ಟಿದ್ದೇನೆಂಬ ಒಂದೇ ಕಾರಣಕ್ಕೆ, ಆ ದರ್ದಿಗೆ ಅವರನ್ನು ಪ್ರಧಾನಿಯಾಗಲು ಬಿಟ್ಟರಾ?
ಏನೇ ಆಗಲಿ, ಆ ನಿರ್ಣಯ ರಾಷ್ಟ್ರದ ಪಾಲಿಗೆ ಭಯಾನಕವಾಗಿದ್ದನ್ನು ಮಾತ್ರ ಯಾರೂ ಅಲ್ಲಗಳೆಯಲಾರರು.
ಈ ನಡುವೆ ಪಟೇಲರಿಗೆ ಯಾವ ಮುಲಾಜಿತ್ತು ಎಂಬುದೂ ಪ್ರಶ್ನೆಯೇ. ಉಗ್ರ ಪ್ರತಾಪಿಯಾಗಿದ್ದ ಪಟೇಲರು ಗಾಂಧೀಜಿಯನ್ನು ಧಿಕ್ಕರಿಸದೆ ಉಳಿದ ಕಾಅರ್ಣವೆನು? ಗಾಂಧೀಜಿಯ ಸಮಸ್ಯೆಗಳ ಅರಿವು ಪಟೇಲರಿಗಿತ್ತಾ? ಪಟೇಲರೂ ಗಾಂಧೀಜಿಯ ದಾಕ್ಷಿಣ್ಯಕ್ಕೆ ಒಳಗಾಗಿದ್ದರಾ? ಪ್ರಶ್ನೆ ಆಳಕ್ಕಿಳಿಯುತ್ತಲೇ ಹೋಗುತ್ತದೆ. ಅಲ್ಲವೇ?
ಈ ಕಾರಣಗಳಿಂದಾಗಿ ದೇಶ ದಾರಿ ತಪ್ಪಿತೆಂದಷ್ಟೇ ಹೇಳಬಹುದು. ದೇಶ ವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಜನರ ಆಹುತಿಯಾಯ್ತು. ಆನಂತರದ ಪಂಚವಾರ್ಷಿಕ ಯೋಜನೆಗಳ ಭಾರದಲ್ಲಿ ದೇಶ ನಲುಗಿತು. ಹಳಿ ತಪ್ಪಿದ್ದ ಶಿಕ್ಷಣ ವ್ಯವಸ್ಥೆ, ನ್ಯಾಯ ವ್ಯವಸ್ಥೆ, ಕೃಷಿ ವ್ಯವಸ್ಥೆ, ಯಾವುವೂ ಮತ್ತೆ ಸರಿದಾರಿಗೆ ಬರಲೇ ಇಲ್ಲ. ಒಂದು ತಪ್ಪು ನಿರ್ಣಯ ಭಾರತವನ್ನು ಎರಡನೇ ಬಾರಿಗೆ  ಗುಲಾಮಗಿರಿಗೆ ನೂಕಿತೆಂದರೆ ತಪ್ಪಿಲ್ಲ.

~
ದಾಕ್ಷಿಣ್ಯಕ್ಕೆ ಬಸಿರಾಗುವ ಈ ಪ್ರಕ್ರಿಯೆ ಸ್ವಾತಂತ್ರ್ಯಾನಂತರವೂ ನಿಲ್ಲಲಿಲ್ಲ. ನಮ್ಮ ಮೇಲೆ ದಾಳಿ ಮಾಡಿ ನಮ್ಮ ಭೂಮಿಯನ್ನೇ ವಶಪಡಿಸಿಕೊಂಡ ಚೀನಾದ ವಿರುದ್ಧ ನಾವು ಮಾತಾಡಲೂ ಇಲ್ಲ. ದೇಸದೊಳಗಿನ ಚೀನಾ ನಿಷ್ಠ ಕಮ್ಯುನಿಸ್ಟರು ಬೇಸರಗೊಂಡರೆ!? ಎಂಬ ನೋವು ನಮಗೆ.
ಕಳೆದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ಸೇನೆಯನ್ನು ಬಡಿದೆವಲ್ಲ, ಆಗಲೂ ನಮ್ಮದು ದಾಕ್ಷಿಣ್ಯವೇ. ಆರಂಭದಲ್ಲಿ ನಾವು ಕೆಳಗಿದ್ದೆವು, ಉಗ್ರರು ಮೇಲಿದ್ದರು. ಆಗ ಸಂಧಾನದ ಮಾತಿರಲಿಲ್ಲ. ನಮ್ಮ ಸೈನಿಕರು ಸಾಹಸಗೈದು ಮೇಲೇರುತ್ತಿದ್ದಂತೆ ಪಾಕ್ ಸೈನ್ಯ ತತ್ತರಿಸಿಬಿಟ್ಟಿತು. ಎಂದಿನಂತೆ ನಮ್ಮ ಸರ್ಕಾರ ಅಮೆರಿಕದ ಮುಲಾಜಿಗೆ ಒಳಗಾಗಿ ಪಾಕ್ ಸೈನಿಕರಿಗೆ ಮುಕ್ತಮಾರ್ಗ ತೋರಿಸಿತು. ನಮಮ್ ಸೈನಿಕರೇ ಅವರ ರಕ್ಷಣೆಗೆ ನಿಂತು ಅವರನ್ನು ಅವರ ದೇಶಕ್ಕೆ ಕಲೀಸಬೇಕಾಯ್ತು! ಇದಕ್ಕಿಂತ ಹೀನ ಸ್ಥಿತಿ ಯಾವುದೂ ಇಲ್ಲ ಅಂದ್ಕೊಂಡ್ರಾ
ಖಂಡಿತ ಇದೆ. ಮೌಲಾನಾ ಮಸೂದ್ ಅಜರ್ ಬಿಡುಗಡೆಗೆಂದು ಉಗ್ರರು ವಿಮಾನಾಪಹರಣ ಮಾಡಿದ್ದು ನೆನಪಿಸಿಕೊಳ್ಳಿ. ಅವತ್ತು ವಿಮಾನದಲ್ಲಿದ್ದ ಆ ಪ್ರಯಾಣಿಕರ ಮನೆಯವರು ಗಲಾಟೆ ಮಾಡಿದರೆಂಬ ಕಾರಣಕ್ಕೆ ಈ ದೇಶದ ವಿದೇಶಾಂಗ ಸಚಿವರು ವಿಮಾನದಲ್ಲಿ ಆ ಉಗ್ರಗಾಮಿಯನ್ನು ತಮ್ಮೊಂದಿಗೆ ಕುಳ್ಳರಿಸಿಕೊಂಡು ಬಿಟ್ಟು ಬಂದರಲ್ಲ, ಅದು ಯಾವ ಮಟ್ಟದ ಕೃತ್ಯ, ನೀವೇ ಹೇಳಿ!?
~
ಹುಡುಕುತ್ತ ಹೋದರೆ ಅಸಂಖ್ಯ ಘಟನೆಗಳಿವೆ. ಯಾವುದೇ ನಿರ್ಧಾರದ ಹಿಂದೆ ದೂರಾಲೋಚನೆ ಇರಬೇಕು. ಈ ಮಾತು ಇಂದಿನ ರಾಜಕಾರಣಕ್ಕೆ ಹೆಚ್ಚು ಸೂಕ್ತ. ಅಲ್ಲವೆ?

1 Response to ಅಧರ್ಮವೆಂದು ಗೊತ್ತಿದೆ, ಅನುಸರಿಸೋಕೆ ಮನಸಿಲ್ಲ…

  1. Keerthan S Bhat

    Preetiya annaige naanna krutajnatapoorva namaskaaragalu. Yavudo dakshinyakke biddu paristitiyanne badalayisida ghatanegalu Bharatavannu budamelu madiddannu nodidare rakta kudiyuttade. Swanta karyakkagi deshavanne panaviduvudakkinta ghora papa mattondilla. nimma ee lekhana bhahala chennagide Intaha lekhnavannu kottiddakkagi dhanyavadagalu.

Leave a Reply