ವಿಭಾಗಗಳು

ಸುದ್ದಿಪತ್ರ


 

ಅಮೆರಿಕಾದಿಂದ ಕಲಿಯಬೇಕಾದ್ದು…

ಅಂತಾರಾಷ್ಟ್ರೀಯ ಒತ್ತಡ, ಅಂತಾರಾಷ್ಟ್ರೀಯ ಯುದ್ಧ ಒಪ್ಪಂದ- ಈ ದೊಡ್ಡ ದೊಡ್ಡ ಪದಗಳೆಲ್ಲ ಬಡ ಮತ್ತು ಹೇಡಿ ರಾಷ್ಟ್ರಗಳಿಗಾಗಿ. ಗಟ್ಟಿ ಮನಸ್ಸಿನ ರಾಷ್ಟ್ರಗಳು ನುಗ್ಗಿದ್ದೇ ಹಾದಿ ಎನ್ನುತ್ತವೆ.

ಎಷ್ಟೊಂದು ವ್ಯತ್ಯಾಸ ಅಲ್ವೆ? ತನ್ನ ನಾಡಿಗೆ ಕಂಟಕನಾಗಿದ್ದವನನ್ನು ಅಮೆರಿಕಾ ದೂರದ ದೇಶವನ್ನು ಹೊಕ್ಕು ಸುಟ್ಟು ಬಿಸಾಡುತ್ತದೆ. ನಾವು ಸಂಸತ್ತಿನ ಮೇಲೆ ದಾಳಿಗೈದವನನ್ನು ದಶಕಗಳ ಕಾಲ ಸಾಕಿಕೊಂಡು ನಮ್ಮದೇ ನೆಲದಲ್ಲಿ ಹೆದರುತ್ತ ನೇಣಿಗೇರಿಸಿಬಿಡುತ್ತೇವೆ. ಅಮೆರಿಕನ್ನರು ಲಾಡೆನ್ನನನ ಶವವನ್ನು ಸಮುದ್ರಕ್ಕೆಸೆದು ಸಶರೀರಿಯಾಗಿ ಸ್ವರ್ಗಕ್ಕೇರುವ ಅವನ ಕನಸನ್ನು ಪುಡಿಗೈಯುತ್ತಾರೆ. ನಾವಾದರೋ ಧೂರ್ತನಿಗೆ ಗೋರಿ ಕಟ್ಟಿಸಿಕೊಡುತ್ತೇವೆ. ಅವನ ಕುರಿತಂತೆ ಈ ದೇಶದ ಒಂದಷ್ಟು ಭಾಗದಲ್ಲಿ ವೀರಗಲ್ಲುಗಳು ಪ್ರತಿಷ್ಠಾಪನೆಗೊಳ್ಳುತ್ತವೆ. (ಬಾಪ್‌ರೆ ಬಾಪ್.. ದೇಶದೊಳಗೇ ಮತ್ತೊಂದು ದೇಶವನ್ನು ಸಲಹಿಕೊಂಡೇ ಬರುತ್ತಿದ್ದೇವಲ್ಲ!) ಅಮೆರಿಕಾದಿಂದ ಅದೆಷ್ಟು ಪಾಠ ಕಲಿಯಬೇಕಿದೆಯಲ್ಲ ನಾವು?
ಲಾಡೆನ್ ಸಾವು ಮತ್ತೆ ಹಸಿರಾಗಿದೆ. ಈ ದಾಳಿಯಲ್ಲಿ ಪಾಲ್ಗೊಂಡ ಸೀಲ್ ಟೀಮ್ ೬ನ ಸೈನಿಕನೊಬ್ಬ ತನ್ನ ನೆನಪುಗಳನ್ನು ಅಮೆರಿಕಾದ ಪತ್ರಿಕೆಯೊಂದಕ್ಕೆ ತೆರೆದಿಟ್ಟಿದ್ದಾನೆ. ಬರಾಕ್ ಒಬಾಮಾನ ಚಿತ್ರವನ್ನು ತಾನೇಕೆ ಮಲಗುವ ಕೋಣೆಯಲ್ಲಿ ತೂಗಿಬಿಟ್ಟಿದ್ದೇನೆಂಬುದಕ್ಕೆ ಕಾರಣ ಕೊಟ್ಟಿದ್ದಾನೆ.
ಸೀಲ್ ಟೀಮ್ ೬ ಅಮೆರಿಕಾದ ಕದನ ಕಲಿಗಳ ತಂಡ. ೧೯೮೦ರಲ್ಲಿ ಅಧಿಕೃತವಾಗಿ, ಅದಕ್ಕೂ ಮುಂಚೆ ರಷ್ಯನ್ನರ ವಿರುದ್ಧ ತೊಡೆ ತಟ್ಟಲು ಅನಧಿಕೃತವಾಗಿ ಕೆಲಸ ಮಾಡುತ್ತಿದ್ದ ತಂಡ ಇದು. ಅಮೆರಿಕಾದ ನೌಕಾಪಡೆಯ ಆಯ್ದ ಕಠಿಣ ಹೃದಯಿಗಳ ಗುಂಪು ಕೂಡಾ ಹೌದು. ಜಗತ್ತಿನಲ್ಲೆಲ್ಲಾದರೂ ಅಮೆರಿಕನ್ನರಿಗೆ ತೊಂದರೆಯಾಗುತ್ತಿದೆ ಎಂದೆನಿಸಿದಾಗಲೆಲ್ಲ ಜೀವದ ಹಂಗು ತೊರೆದು ಧಾವಿಸುವ ಕಟ್ಟರ್ ರಾಷ್ಟ್ರೀಯವಾದಿಗಳು. ಸೋಮಾಲಿಯಾದಲ್ಲಿ, ಅಫ್ಘಾನಿಸ್ತಾನದಲ್ಲಿ, ಗ್ರೆನೇಡಾದಲ್ಲೆಲ್ಲ ದಾಳಿ ಮಾಡಿ ಜಯಿಸಿ ಬಂದು ಬೆಚ್ಚಗೆ ಕುಳಿತಿದ್ದ ಈ ತಂಡಕ್ಕೆ ೨೦೧೧ರಲ್ಲಿ ಎದುರಾದ ಸವಾಲು ಒಸಾಮಾ ಬಿನ್ ಲಾಡೆನ್‌ನದು. ಅವಳಿ ಕಟ್ಟಡದ ಮೇಲೆ ದಾಳಿ ಮಾಡಿ ಸಾವಿರಾರು ಅಮೆರಿಕನ್ನರನ್ನು ಕೊಂದಿದ್ದ ಒಲಾಡೆನ್ ಬದುಕಿರುವವರೆಗೂ ಅಮೆರಿಕಾದ ಸಾರ್ವಭೌಮತೆಗೆ ಅವಮಾನವೇ ಆಗಿದ್ದ. ಹೀಗಾಗಿ ನಿರಂತರ ಆತನ ಬೆನ್ನಹಿಂದೆ ಬಿದ್ದ ಅಮೆರಿಕಾ ಗೂಢಚಾರರು ಪಾಕ್‌ನ ಅಬೋಟಾಬಾದ್‌ನಲ್ಲಿ ಅವನನ್ನು ಗುರುತಿಸಿದರು.
ಸೀಲ್ ಟೀಮ್ ೬ಗೆ ಸುದ್ದಿ ಹೋಯ್ತು. ಲಾಡೆನ್ ಅವಿತಿರುವ ಕಟ್ಟಡದ ನಕ್ಷೆಯ ಧ್ಯಾನ ಶುರುವಾಯ್ತು. ಅಫ್ಘಾನಿಸ್ತಾನದಲ್ಲಿರುವ ಅಮೆರಿಕಾದ ವಾಯುನೆಲೆಯಲ್ಲಿ ಒಂದು ತಿಂಗಳ ಮುಂಚಿನಿಂದ ಅಭ್ಯಾಸ ಆರಂಭವಾಯ್ತು. ಒಬಾಮಾನ ಹೃದಯ ಬಡಿತವೂ ತಿವ್ರವಾಗಿಯೇ ಇತ್ತು. ಪ್ರತಿಯೊಬ್ಬ ಅಮೆರಿಕನ್ನನ ಪಾಲಿಗೂ ಅದೊಂದು ಮಹತ್ವದ ಕ್ಷಣವೇ ಆಗಲಿತ್ತು. ಅದು ಕಾರ್ಯಾಚರಣೆಗೂ ಮುಂಚಿನ ಕೊನೆಯ ಮೀಟಿಂಗು. ಸೈನಿಕರು, ಯೋಜನೆಯ ನಿರೂಪಕರು ಒಬಾಮಾನೊಂದಿಗೆ ಮಾತಿಗೆ ಕುಂತರು. ಪಾಕಿಸ್ತಾನದ ಅಬೋಟಾಬಾದಿಗೆ ಹೋಗೋದು, ಲಾಡೆನ್‌ನ ಮನೆಯನ್ನು ಹೊಕ್ಕೋದು. ರಾತ್ರಿಯ ವೇಳೆ ಮಲಗುವ ಕೋಣೆಯಲ್ಲಿರುವ ಲಾಡೆನ್ ಅನ್ನು ಜೀವಂತ ಹಿಡಿದು ತರೋದು, ಮಿಸುಕಾಡಿದರೆ ಸುಟ್ಟುಬಿಡೋದು. ಹಾಗಂತ ಯೋಜನೆ ವಿವರಿಸಲಾಯ್ತು. ಅಕಸ್ಮಾತ್ ಅಮೆರಿಕಾದ ಸೈನ್ಯವನ್ನು ಗುರುತಿಸಿ ಪಕ್ಕದಲ್ಲಿಯೇ ಇರುವ ಪಾಕ್ ಮಿಲಿಟರಿ ನೆಲೆಯಿಂದ ಪಾಕಿ ಸೈನಿಕರು ಧಾವಿಸಿ ಬಂದು ಸುತ್ತುವರೆದುಬಿಟ್ಟರೆ? ಸಹಜವಾದ ಪ್ರಶ್ನೆ ತೂರಿ ಬಂತು. ಯೋಜನೆಯ ಅನ್ವಯ ಆಗ ಅಮೆರಿಕದ ಸೈನಿಕರು ಶರಣಾಗೋದು. ಅಮೆರಿಕಾ ಉಪಾಧ್ಯಕ್ಷರು ಬಂದು ಸಂಧಾನ ನಡೆಸಿ ಸೈನಿಕರನ್ನು ಬಿಡಿಸಿಕೊಂಡುಹೋಗೋದು ಎಂದಿತ್ತು. ಅದನ್ನು ಕೇಳಿ ಒಬಾಮಾ ಕೆಂಪುಕೆಂಪಾದರು. ಶರಣಾಗತಿಯ ಪ್ರಶ್ನೆಯೇ ಇಲ್ಲ. ಅಂತಹ ಪರಿಸ್ಥಿತಿ ಬಂದರೆ ಅಫ್ಘಾನಿಸ್ತಾನದಲ್ಲಿರುವ ಅಮೆರಿಕಾದ ಸೈನ್ಯ ವಾಯು ದಾಳಿ ನಡೆಸಿ ಪಾಕಿಸ್ತಾನವನ್ನೇ ನರಕ ಮಾಡಿಬಿಡುತ್ತದೆ ಎಂದು ಗರ್ಜಿಸಿದರು.
ವಾವ್! ಆ ಮೀಟಿಂಗನ್ನು ಊಹಿಸಿಕೊಂಡರೇನೇ ಮೈ ಜಮ್ಮೆನ್ನುತ್ತೆ. ಒಬಾಮಾರಿಗೆ ಇರಬಹುದಾದ ರಷ್ಟ್ರೀಯತೆಯ ಸ್ವಾಭಿಮಾನವನ್ನು ಕಲ್ಪಿಸಿಕೊಂಡಾಗ ಮೈಯಲ್ಲಿ ಮುಳ್ಳುಗಳೇಳುತ್ತವೆ. ಕಾರ್ಯಾಚರಣೆಗಾಗಿ ಹೋಗಲು ಸಿದ್ಧವಾಗಿ ನಿಂತಿದ್ದ ಆ ಸೈನಿಕನಿಗೆ ಅದೆಂತಹ ರೋಮಾಂಚನವಾಗಿರಬೇಡ. ಯುದ್ಧ ಶುರುವಾಗುವ ಮುನ್ನವೇ ಯುದ್ಧ ಗೆದ್ದುಬಿಡಬೇಕಂತೆ. ಒಬಾಮಾ ಅದನ್ನು ಮಾಡಿದ್ದರು.
ಲಾಡೆನ್ ಮನೆಯೆದುರು ಅಮೆರಿಕಾದ ಹೆಲಿಕಾಪ್ಟರು ನಿಂತಿತು. ಕಮಾಂಡೋಗಳು ಕೆಳಗಿಳಿದರು. ಕಡುಗತ್ತಲಿನಲ್ಲೂ ನಿಚ್ಚಳವಾಗಿ ಕಾಣುವ ಕನ್ನಡಕದ ಸಹಾಯದಿಂದ ಲಾಡೆನ್ನನ ಮಲಗುವ ಕೋಣೆ ಹೊಕ್ಕರು. ಗೌಜು ಗದ್ದಲದಿಂದ ಅಪಾಯ ಗ್ರಹಿಸಿದ ಲಾಡೆನ್ ತನ್ನ ಕೊನೆಯ ಪತ್ನಿಯನ್ನು ರಕ್ಷಣೆಗೆಂದು ಬಳಸಿಕೊಂಡ. ಪಕ್ಕದಲ್ಲಿಯೇ ಇಟ್ಟುಕೊಂಡಿದ್ದ ತನ್ನ ಎಕೆ ೪೭ ಗಾಗಿ ತಡಕಾಡಿದ. ಅಷ್ಟರಲ್ಲಿಯೇ ಹೊರಟ ಗುಂಡು ಆತನ ತಲೆ ಚಿಂದಿ ಉಡಾಯಿಸಿತ್ತು. ಮತ್ತೊಂದು ಗುಂಡು ಮೆದುಳನ್ನು ಹೊರಗೆಳೆದು ಬಿಸಾಡಿತು. ಲಾಡೆನ್ ತನ್ನ ಇದೇ ಮೆದುಳಿಂದ ಅನೇಕರ ತಲೆ ಕೆಡಿಸಿದ್ದ. ಈಗ ಛಿದ್ರಗೊಂಡು ಬಿದ್ದಿದ್ದ. ಅವನನ್ನು ಹೊತ್ತುಕೊಂಡು ಮರಳಿ ತಮ್ಮ ವಾಯುನೆಲೆಗೆ ಕೊಂಡೊಯ್ಯಲಾಯ್ತು. ಒಟ್ಟಾರೆ ೩೮ ನಿಮಿಷದ ಕಾರ್ಯಾಚರಣೆ, ಪಾಕಿಸ್ತಾನಕ್ಕೆ ತಿಳಿಯುವ ಮುನ್ನ ಜಗತ್ತಿಗೇ ತಿಳಿದುಹೋಗಿತ್ತು.
ಅದಾದ ನಂತರ ಅಮೆರಿಕಾ ನಡೆದುಕೊಂಡ ರೀತಿ ಇದೆಯಲ್ಲ, ಅದು ನಿಜಕ್ಕೂ ಮಾದರಿಯಾದುದು. ಬದುಕಲಿಕ್ಕೆ ಯೋಗ್ಯನಲ್ಲದವನನ್ನು ಯಾವ ರೀತಿ ಕೊಲ್ಲಬೇಕೆಂದು ತೋರಿಸಿದ್ದಲ್ಲದೆ, ಮುಂದಿನ ದಿನಗಳಲ್ಲಿ ಆತ ಜನಸಾಮಾನ್ಯರಿಗೆ ’ಹೀರೋ’ ಆಗಿಬಿಡಬಾರದೆಂಬ ಎಚ್ಚರಿಕೆಯನ್ನೂ ವಹಿಸಿತು. ಹೀಗಾಗಿ ಆತನ ಶವಕ್ಕೆ ಅಂತ್ಯಸಂಸ್ಕಾರ ಮಾಡುವ, ಗೋರಿ ಕಟ್ಟಿ ಅದನ್ನು ತೀರ್ಥಕ್ಷೇತ್ರ ಮಾಡುವ ಯಾವ ಇರಾದೆಯನ್ನೂ ತೋರದೆ ಶವವನ್ನು ಅನಾಥವಾಗಿಸಿ ಸಮುದ್ರಕ್ಕೆಸೆದುಬಿಟ್ಟರು. ಅವರಿಗೆ ಅಲ್ಲಿ ಅದ್ಯಾವ ಮಾನವ ಹಕ್ಕುಗಳ ಅಡ್ಡಿಯೂ ಆಗಲಿಲ್ಲ; ಧಾರ್ಮಿಕ ಕಟ್ಟಳೆಗಳೂ ಎಡತಾಕಲಿಲ್ಲ. ರಾಷ್ಟ್ರದ ಹಿತಾಸಕ್ತಿಯೇ ಮುಖ್ಯವಾಗಿತ್ತಷ್ಟೆ.
ಅಫ್ಜಲ್ ಖಾನನನ್ನು ಚಮತ್ಕಾರಿಕವಾಗಿ ಕೊಂದು ಬಿಸಾಡಿದ ಶಿವಾಜಿಕ, ತಾಯಿಯ ಆಜ್ಞೆಯಂತೆ ಗೌರವದಿಂದ ಆತನಿಗೊಂದು ಗೋರಿ ನಿರ್ಮಿಸಿದ. ಇಂದು ನೋಡಿ, ಅದು ಒಂದು ತೀರ್ಥಕ್ಷೇತ್ರವಾಗಿಬಿಟ್ಟಿದೆ. ಆ ಗೋರಿಗೆ ನಿತ್ಯ ಗೌರವ ಸಲ್ಲಿಸಲಾಗುತ್ತೆ. ಶಿವಾಜಿ ಮೋಸ ಮಾಡಿದ ಅಂತ ಅಲ್ಲಿ ಕುಳಿತು ಹಬ್ಬಿಸಲಾಗುತ್ತೆ. ಮುಂದೊಮ್ಮೆ ಕಸಬ್ ಮತ್ತು ಅಫ್ಜಲ್‌ರ ಗೋರಿಗಳೂ ಹೀಗೆ ಮಾತಾಡಿದರೆ ಅಚ್ಚರಿ ಇಲ್ಲ.
ಅಂತಾರಾಷ್ಟ್ರೀಯ ಒತ್ತಡ, ಅಂತಾರಾಷ್ಟ್ರೀಯ ಯುದ್ಧ ಒಪ್ಪಂದ- ಈ ದೊಡ್ಡ ದೊಡ್ಡ ಪದಗಳೆಲ್ಲ ಬಡ ಮತ್ತು ಹೇಡಿ ರಾಷ್ಟ್ರಗಳಿಗಾಗಿ. ಗಟ್ಟಿ ಮನಸ್ಸಿನ ರಾಷ್ಟ್ರಗಳು ನುಗ್ಗಿದ್ದೇ ಹಾದಿ ಎನ್ನುತ್ತವೆ. ಅಮೆರಿಕಾ ಆಫ್ಘಾನಿಸ್ತಾನದ ಮೇಲೆ ನಡೆಸಿದ ದಾಳಿ ಇಂತಹದ್ದೇ. ಇದನ್ನು ಎಡ ಪಂಥೀಯರು ಮತ್ತೆ ಮತ್ತೆ ಪ್ರತಿಭಟಿಸುತ್ತಾರೆ. ಆದರೆ ಡ್ರ್ಯಾಗನ್ ಚೀನಾ ಶುದ್ಧ ಮನಸ್ಕರ ಟಿಬೇಟನ್ನು ನುಂಗಿ ಮಾನವ ಹಕ್ಕುಗಳನ್ನೆ ನುಂಗಿದ್ದನ್ನು ಮೂಕರಾಗಿ ನೋಡುತ್ತಾರೆ. ಇರಲಿ. ಎರಡೂ ದಾರ್ಷ್ಟ್ಯದ ಪರಮಾವಧಿಯ ಸಂಕೇತಗಳೇ. ಜಗತ್ತು ಎರಡನ್ನೂ ಪ್ರತಿಭಟಿಸಿ ಕಡಕ್ಕು ಉತ್ತರ ಕೊಡಲಾಗಲಿಲ್ಲ. ಏಕೆಂದರೆ ದಾಳಿ ಮಾಡಿದ ಎರಡೂ ರಾಷ್ಟ್ರಗಳು ಬಲು ಗಟ್ಟಿಯಾಗಿದ್ದವು ಅಂತ!

M_Id_354874_Afzal_Guru_protest
ಈಗ ಒಮ್ಮೆ ನಮ್ಮ ಮನಮೋಹನ ಸಿಂಗರನ್ನು ಒಬಾಮಾರೊಂದಿಗೆ ತುಲನೆ ಮಾಡಿ ನೋಡಿ. ಇನ್ನು ಸಹಿಸೋದಿಲ್ಲ ಎಂಬುದೊಂದೇ ಪದವನ್ನು ತಮ್ಮ ಅಧಿಕಾರಾವಧಿಯಲ್ಲಿ ಅದೆಷ್ಟೋ ಬಾರಿ ಅವರು ಉಚ್ಚರಿಸಿಬಿಟ್ಟಿದ್ದಾರೆ. ನಮ್ಮ ಸೈನಿಕರ ಆತ್ಮಸ್ಥೈರ‍್ಯವನ್ನು ಕೊಂದೇಬಿಟ್ಟಿದ್ದಾರೆ. ಪಾಕಿಸ್ತಾನದ ಸೈನಿಕರು ಗಡಿಯೊಳಕ್ಕೆ ಬಂದು ನಮ್ಮ ಸೈನಿಕರ ರುಂಡ ಕತ್ತರಿಸಿಕೊಂಡು ಹೋದಾಗಲೂ ಸುಮ್ಮನಿರುವ ಪ್ರಧಾನಮಂತ್ರಿಯನ್ನು ಅದೇನೆಂದು ಕರೆಯಬೇಕು ಹೇಳಿ! ಸೈನಿಕರ ಶೂಗಳಿಗೆ, ಜರ್ಕಿನ್ನುಗಳಿಗೆ, ಅತ್ಯಾಧುನಿಕ ಶಸ್ತ್ರಗಳಿಗೆ ಹಣವಿಲ್ಲವೆನ್ನುವ ಕೇಂದ್ರ ಮಂತ್ರಿ ಮಹೋದಯರಿಗೆಂದೇ ಮುನ್ನೂರು ಕೋಟಿಯ ಒಂದೊಂದು ಹೆಲಿಕಾಪ್ಟರ್ ಖರೀದಿಸುತ್ತಲ್ಲ, ಆಗೆಲ್ಲ ಗಡಿಯಲ್ಲಿ ನಿಂತ ಆ ಸೈನಿಕನಿಗೆ ಅದೆಂತಹ ಸಂಕಟವಾಗಬೇಕು ಹೇಳಿ.
ನಾಯಕ ಅಂದರೆ ಧಾಡಸಿತನ ಇರಲೇಬೇಕು. ಮುನ್ನುಗ್ಗುವ, ಸಮಸ್ಯೆಗಳಿಗೆ ಎದೆ ಕೊಡುವ ಗಟ್ಟಿತನವೂ ಇರಬೇಕು. ಅದನ್ನೇ ಆರ್ಟ್ ಆಫ್ ವಾರ್‌ನ ಸನ್ ಜು಼ ಹೇಳ್ತಾನೆ. ನಾಯಕನಾದವನಿಗೆ ಬುದ್ಧಿವಂತಿಕೆ, ವಿಶ್ವಾಸ, ಮಾನವೀಯತೆ, ಧೈರ್ಯ ಮತ್ತು ದೃಢ ನಿರ್ಧಾರ ಕೈಗೊಳ್ಳುವ ತಾಕತ್ತು ಇರಬೇಕಂತೆ. ಆತ ಹೇಳಿರುವ ಅನುಕ್ರಮಣಿಕೆ ನೋಡಿ. ಬುದ್ಧಿವಂತಿಕೆ ಮೊದಲು. ಆಮೇಲೆ ವಿಶ್ವಾಸ, ಮಾನವೀಯತೆಗಳು. ಎಲ್ಲಕ್ಕಿಂತಲೂ ಕೊನೆಗೆ ಧೈರ್ಯ ಮತ್ತು ನಿರ್ಧಾರದ ಗುಣಗಳು. ಒಬಾಮಾರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಅವರನ್ನು ಅಮೇರಿಕಾದ ನಾಯಕರನ್ನಾಗಿಸಿತು. ಮನಮೋಹನರಿಗೆ ಇರುವುದು ಮೊದಲ ಮೂರು ಮಾತ್ರ. ಕೊನೆಯ ಎರಡರಲ್ಲಿ ಅವರು ಯಾವಾಗಲೂ ಸೋತಿದ್ದಾರೆ.
ನಾಯಕನೇ ಸ್ವಾಭಿಮಾನಿಯಗಿರದಿದ್ದರೆ ಇನ್ನು ಆತನ ತಂಡ ಮತ್ತು ಪ್ರಜೆಗಳು ಅದೇನಾಗಬಹುದು ಹೇಳಿ. ಸಂಸತ್ತಿನ ಮೇಲೆ ದಾಳಿ ಮಾಡಿದ ಚೋರನನ್ನು ಗಲ್ಲಿಗೇರಿಸಿದರೆ ಕಾಶ್ಮೀರದಲ್ಲಿ ಉಗ್ರ ಪ್ರತಿಭಟನೆ ಆಗತ್ತೆ, ಸರಿ. ಬುದ್ಧಿವಂತರು ತಯಾರಾಗಬೇಕಾದ ಅಲಿಘರ್ ಮುಸ್ಲಿಮ್ ಯೂನಿವರ್ಸಿಟಿಯಲ್ಲಿ ಅಫ್ಜಲನಿಗೆ ಜಯಕಾರದ ಘೋಷಣೆಗಳು ಮೊಳಗುತ್ತವೆ. ಅದು ಪತ್ರಿಕೆಗಳ ಮೂಲಕ ಜಗಜ್ಜಾಹೀರಾದರೂ ಗೃಹಸಚಿವರು ಮಾತ್ರ ತುಟಿ ಹೊಲೆದುಕೊಂಡು ಕೂತುಬಿಡುತ್ತಾರೆ. ಈ ಪುರುಷಾರ್ಥಕ್ಕೆ ಟಿಪ್ಪುವಿನ ಹೆಸರಲ್ಲಿ ಮತ್ತೊಂದು ಮುಸ್ಲಿಮ್ ಯೂನಿವರ್ಸಿಟಿ ಬೇರೆ!
ಸತ್ಯ ಹೇಳಿ. ಎಲ್ಲವನ್ನೂ ವೋಟಿನ ಆಧಾರದ ಮೇಲೆ ನೋಡೋದು ಸರಿಯಾ? ಮತ್ತೆ ಕುರ್ಚಿಯಲ್ಲಿ ಕೂತರೆ ಸಾಕು ಅನ್ನುವ ಕಾರಣಕ್ಕೆ ನಿಂತ ನೆಲವನ್ನೆ ಮಾರುವ ಈ ಜನರನ್ನು ಅದೇನೆಂದು ಕರೆಯಬೇಕು ಹೇಳಿ. ರಾಷ್ಟ್ರೀಯ ಕಾಂಗ್ರೆಸ್ಸು ಅಂತ ಪದೇಪದೇ ಹೇಳಿಕೊಳ್ತಾರಲ್ಲ, ಅದರಲ್ಲಿರುವ ರಾಷ್ಟ್ರೀಯ ಪದಕ್ಕೆ ಎಂದಾದರೂ ನ್ಯಾಯ ಒದಗಿಸಿದ್ದರಾ?
ಅಮೆರಿಕಾದಿಂದ ಈ ವಿಚಾರವಾಗಿ ನಾವು ಕಲಿಯಬೇಕಾದ್ದು ಬೆಟ್ಟದಷ್ಟಿದೆ. ರಾಷ್ಟ್ರದ ಹಿತಾಸಕ್ತಿಯೊಂದಿಗೆ ಒಂದಿನಿತೂ ರಾಜಿ ಮಾಡಿಕೊಳ್ಳದ ಚೀನೀಯರ ಬುಡದಲ್ಲಿ ಕುಳ್ಳಿರಿಸಿ ಈ ನಾಯಕರಿಗೆ ಪಾಠ ಹೇಳಿಸಬೇಕಿದೆ. ಅಥವಾ ಇವೆಲ್ಲದರ ಅರಿವಿರುವ ಸ್ವಾಭಿಮಾನದ ಪ್ರತೀಕವಾಗಿರುವ ಸಮರ್ಥ ನಾಯಕನ್ನು ಆರಿಸಿ ತಂದು ಗದ್ದುಗೆಗೆ ಏರಿಸಬೇಕಿದೆ. ಎನಂತೀರಿ?

1 Response to ಅಮೆರಿಕಾದಿಂದ ಕಲಿಯಬೇಕಾದ್ದು…

  1. Rathikantnh

    nimma elle anisikegalige namma sahamatha ide sir. very good article, kumbhkarna nidreylliruva sarkarkke echhara mado matugalu thanks u sir

Leave a Reply