ವಿಭಾಗಗಳು

ಸುದ್ದಿಪತ್ರ


 

ಇದ್ದಕ್ಕಿದ್ದಂತೆ ಪ್ರೀತಿ ಉಕ್ಕಿದಾಗಲೇ ಅನುಮಾನ ಹುಟ್ಟೋದು!

ಸ್ವತಃ ಎಡಚ ಲೇಖಕ, ಭಾರತದ ಇತಿಹಾಸವನ್ನು ತನಗೆ ಬೇಕಾದಂತೆ ತಿರುಚಿದ ಬಿಪಿನ್ ಚಂದ್ರರೇ ಹೇಳುತ್ತಾರೆ, ‘ಭಗತ್ ಮತ್ತು ಅವನ ಗೆಳೆಯರು ಮಾರ್ಕ್ಸ್ ವಾದದಲ್ಲಿ ಪಂಡಿತರೇನೂ ಆಗಿರಲಿಲ್ಲ. ಹಾಗಂತ ಏನೂ ತಿಳಿದವರಲ್ಲ ಎನ್ನುವಂತೆಯೂ ಇರಲಿಲ್ಲ. ಅವರು ತಾವೇ ಎಲ್ಲೆಡೆ ಅಡ್ಡಾಡಿ ಭಾರತದ ಕ್ರಾಂತಿಯ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುತ್ತಿದ್ದರು’ ಅಂತ. ಅರ್ಥವಾಯಿತಲ್ಲ! ಭಗತ್ರಿಗೆ ಭಾರತೀಯ ಕ್ರಾಂತಿಕಾರ್ಯದ ಸಮಸ್ಯೆಗಳನ್ನು ಅರಿಯಲ್ಲು ಕಮ್ಯುನಿಸಂನ ಪಾಂಡಿತ್ಯ ಬೇಕಿರಲಿಲ್ಲ. ಬಿಪಿನ್ ಚಂದ್ರರು ಮುಂದುವರಿಸಿ ಹೇಳುತ್ತಾರೆ, ‘ಅವರ ಸಮಾಜವಾದದ ಅರ್ಥೈಸಿಕೊಳ್ಳುವಿಕೆಯಲ್ಲಿ ಮತ್ತು ಆಚರಣೆಯಲ್ಲಿ ವಿರೋಧಾಭಾಸಗಳಿತ್ತು. ಅವರು ರಾಷ್ಟ್ರ ಪ್ರಜ್ಞೆಯನ್ನು ಜಾಗೃತಗೊಳಿಸಿದರು ಅಷ್ಟೇ’ ಅಂತ.

b4

ಭಾರತೀಯತೆಯಿಂದ ಸದಾ ಗಾವುದ ದೂರವಿರುವ ಕಮ್ಯುನಿಸ್ಟರಿಗೆ ಭಗತ್ಸಿಂಗ್ ಮೇಲೆ ಪ್ರೀತಿ ಶುರುವಾಗಿದ್ದು ಯಾವಾಗಲಿಂದ? ಸ್ವಲ್ಪ ಇತಿಹಾಸವನ್ನು ಕೆದಕೋಣ. ರಷ್ಯಾದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಕಮ್ಯುನಿಸ್ಟರಿಗೆ ಭಾರತ ಸ್ವಾತಂತ್ರ್ಯ ಪಡೆದು ಗಾಂಧಿಯ ತೆಕ್ಕೆಗೆ ದೇಶ ಹೋಗಿದ್ದು ಸಹಿಸಲು ಸಾಧ್ಯವಾಗಿರಲಿಲ್ಲ. ಅವರು ಇಡಿಯ ಭಾರತವನ್ನು ಬ್ರಿಟೀಷರ ದಾಸ್ಯದಿಂದ ಮುಕ್ತಗೊಳಿಸಿ ರಷ್ಯನ್ನರ ಪದತಲಕ್ಕೆ ಸಮರ್ಪಿಸುವ ತವಕದಲ್ಲಿದ್ದರು. ಹೀಗಾಗಿ 1947 ರ ಆಗಸ್ಟ್ 15 ರ ಸಂಭ್ರಮವನ್ನು ಅವರು ‘ಈ ಸ್ವಾತಂತ್ರ್ಯ ಸುಳ್ಳು’ (ಎ ಆಜಾದಿ ಝೂಠೀ) ಎನ್ನುವ ಮೂಲಕ ಕಪ್ಪುದಿನವಾಗಿ ಆಚರಿಸಿದರು. ಸಾರ್ವತ್ರಿಕ ಸಶಸ್ತ್ರ ಕ್ರಾಂತಿಯ ಮೂಲಕ ಅಧಿಕಾರವನ್ನು ಸ್ಥಾಪಿಸಬೇಕೆಂಬ ಬಯಕೆಯಿಂದ ತೆಲಂಗಾಣದಲ್ಲಿ ಪ್ರಯತ್ನ ಶುರುಮಾಡಿದರು. ಅಷ್ಟರಲ್ಲಿಯೇ ಜಾಗತಿಕ ಬದಲಾವಣೆಗಳು ವೇಗವಾಗಿ ಕಂಡುಬರಲಾರಂಭಿಸಿದವು. ರಷ್ಯಾ ಶೀತಲ ಸಮರದಲ್ಲಿ ಸಾಕಷ್ಟು ಕಳಕೊಂಡಿತ್ತು. ಅತ್ತ ಚೀನಾ ಪ್ರಬಲ ಶಕ್ತಿಯಾಗಿ ಉದಯಿಸುತ್ತಿತ್ತು. ಇಲ್ಲಿ ಕಮ್ಯುನಿಸ್ಟ್ ಸಂತಾನಗಳಿಗೆ ನಯಾಪೈಸೆ ಕಿಮ್ಮತ್ತಿಲ್ಲದ ವಾತಾವರಣವಿತ್ತು. 1948ರಲ್ಲಿ ಪಾರ್ಟಿಯ ಸದಸ್ಯರ ಸಂಖ್ಯೆ 90 ಸಾವಿರದಿಂದ 9 ಸಾವಿರಕ್ಕೆ ಇಳಿದುಬಿಟ್ಟಿತ್ತು! ಇಂತಹ ಹೊತ್ತಲ್ಲಿ ಭಾರತದೊಂದಿಗೆ ಗೆಳೆತನವಿರಿಸಿಕೊಳ್ಳಬೇಕೆಂಬ ಅನಿವಾರ್ಯತೆಗೆ ಬಿದ್ದ ರಷ್ಯಾ ಕಮ್ಯುನಿಸ್ಟ್ ಪಾರ್ಟಗೆ ತಾಕೀತು ಮಾಡಿ ಸ್ವಾತಂತ್ರ್ಯೋತ್ಸವ ಆಚರಿಸಬೇಕೆಂದು ಸೂಚನೆ ಕೊಟ್ಟಿತು. ಹೌದು. ರಷ್ಯಾ ಆದೇಶಿಸಿತು.
ಅದರ ಪರಿಣಾಮಸ್ವರೂಪವಾಗಿಯೇ 1951 ರಲ್ಲಿ ಮೊದಲ ಬಾರಿಗೆ ‘ಈ ಸ್ವಾತಂತ್ರ್ಯಸುಳ್ಳು’ ಎಂದಿದ್ದ ಕಮ್ಯುನಿಸ್ಟರು ಅದೇ ಸ್ವಾತಂತ್ರ್ಯವನ್ನು ಸಂಭ್ರಮಿಸ ಹೊರಟಿದ್ದರು. ಮೊದಲ ಬಾರಿಗೆ ದಂಗೆಯೆದ್ದು ಅಧಿಕಾರ ಪಡೆಯುವುದು ಸಾಧ್ಯವಿಲ್ಲದ ಮಾತೆಂದು ಅರಿತು ಚುನಾವಣೆಗಳಲ್ಲಿ ಭಾಗವಹಿಸಿತು ಕಮ್ಯುನಿಷ್ಟ್ ಪಕ್ಷ. ಆಗ ಅವರಿಗೆ ತಮ್ಮೆಡೆ ಕಾರ್ಯಕರ್ತರನ್ನು ಸೆಳೆಯಲು ಭಗತ್ಸಿಂಗ್ ಬೇಕಾಯ್ತು. ಅಲ್ಲಿಯವರೆಗೆ ಭಗತ್ಸಿಂಗ್ನ ಹೋರಾಟಗಳ ಕುರಿತಂತೆ ಅಪಸ್ವರವನ್ನೆತ್ತುತ್ತಿದ್ದ ಕಮ್ಯುನಿಸ್ಟ್ ನಾಯಕರು ಇದ್ದಕ್ಕಿದ್ದಂತೆ ಆರಾಧಿಸಲಾರಂಭಿಸಿದರು. ಕಮ್ಯುನಿಸ್ಟ್ ಪಾರ್ಟಿಯ ವಾರಪತ್ರಿಕೆ 1930 ರ ನವೆಂಬರ್ ಎರಡನೇ ವಾರದ ಸಂಚಿಕೆಯಲ್ಲಿ ‘ವೈಯಕ್ತಿಕ ಉಗ್ರವಾದ ಸೇಡು ತೀರಿಸಿಕೊಳ್ಳುವ ಮನೋಭಾವದ ಪ್ರತೀಕವೇ ಹೊರತು ಕ್ರಾಂತಿಕಾರ್ಯವಲ್ಲ’ ಎಂದು ಬರೆದಿತ್ತು. ಇದು ಭಗತ್ಸಿಂಗ್ನ ಹೋರಾಟದ ಹಾದಿಯ ಕುರಿತಂತೆ ಹೇಳಿದ ಕೊಂಕುನುಡಿಯಲ್ಲದೇ ಮತ್ತೇನೂ ಅಲ್ಲ. 1951ರಲ್ಲೂ ಕಮ್ಯುನಿಸ್ಟ್ ಪಾರ್ಟಿಯ ಸ್ಪೆಶಲ್ ಪಾರ್ಟಿ ಕಾನ್ಫರೆನ್ಸ್ನಲ್ಲಿ ‘ವೈಯಕ್ತಿಕ ಉಗ್ರವಾದ ಎಂಬುದು ಒಂದು ವರ್ಗದ ವಿರುದ್ಧವೋ, ವ್ಯವಸ್ಥೆಯ ಭಾಗವಾದ ವ್ಯಕ್ತಿಯ ವಿರುದ್ಧವೋ ಒಬ್ಬ ವ್ಯಕ್ತಿ ಅಥವಾ ಒಂದು ಗುಂಪು ನಡೆಸುವ ಚಟುವಟಿಕೆ. ಈ ಕಾರ್ಯ ಅದೆಷ್ಟೇ ವೀರಾವೇಶದ್ದಾಗಿರಲಿ, ಜನರಿಂದ ಗೌರವಕ್ಕೆ ಪಾತ್ರವಾದ್ದೇ ಆಗಿರಲಿ ಆದರೂ ಅದನ್ನು ಮಾರ್ಕ್ಸ್ ವಾದ ಎನ್ನಲಾಗದು. ಏಕೆ? ಅಲ್ಲಿ ಬಹುಜನರು ಹೋರಾಟದ ಭಾಗವಾಗಿಲ್ಲ, ಇಂತಹ ಹೋರಾಟಗಳು ಬಹುಸಂಖ್ಯಾತರನ್ನು ಆಲಸ್ಯಕ್ಕೆ ತಳ್ಳುತ್ತದೆ. ಪರಿಣಾಮ ಸ್ವರೂಪ ಕ್ರಿಯಾಶೀಲತೆ ಸತ್ತು ಹೋಗಿ ಕ್ರಾಂತಿಕಾರ್ಯ ಸೋಲಲ್ಲಿ ಪರ್ಯವಸಾನವಾಗುತ್ತದೆ’ ಎಂದು ಹೇಳಲಾಗಿತ್ತು. ಇಷ್ಟು ಭಗತ್ಸಿಂಗ್ನ ಹೋರಾಟದ ಹಾದಿಯ ಕುರಿತಂತೆ ಇದ್ದ ಅಪಸ್ವರವೆಂಬುದರಲ್ಲಿ ಅನುಮಾನವೇ ಇಲ್ಲ. (PMS Grewal, Bhagath Singh; Liberation’s blazing star)ರಷ್ಯಾದ ಆಜ್ಞೆಯಾದ ನಂತರ ಕಮ್ಯುನಿಸ್ಟ್ರ ಹಾದಿ ಬದಲಾಯಿತಲ್ಲ ಆಮೇಲೆ ನಿಧಾನವಾಗಿ ಕಮ್ಯುನಿಸ್ಟ್ ಪಾರ್ಟಿ Bhagath Singh; The Man and his Ideas ಎಂಬ ಪುಸ್ತಕವನ್ನು ಪ್ರಕಟಿಸಿ ಮೊದಲ ಯೂಟರ್ನ್ನ ಮಾಡಿತು. ಈ ಕೃತಿಗೆ ಮುನ್ನುಡಿ ಬರೆದ ಶಿವವರ್ಮ ಭಗತ್ಸಿಂಗ್ನನ್ನು ರಾಜಕೀಯವಾಗಿ ಅಧ್ಯಯನ ಮಾಡಬೇಕು ಎಂದು ಹೇಳಿ ಕಮ್ಯುನಿಸ್ಟರ ಮುಂದಿನ ನಡೆಯನ್ನು ಸ್ಪಷ್ಟಪಡಿಸಿದರು. ಅವನ ಸಿದ್ಧಾಂತವೇ ಅವನ ಹೌತಾತ್ಮ್ಯ ಮತ್ತು ಕ್ರಾಂತಿಕಾರ್ಯಕ್ಕಿಂತ ದೊಡ್ಡದಾಗಬೇಕೆಂಬುದು ಅದರ ಅಂತರಾರ್ಥ. ಭಗತ್ಸಿಂಗ್ ಇಂದಿನ ಕಮ್ಯುನಿಸ್ಟರಿಗೂ ಹಳೆಯ ಕ್ರಾಂತಿಕಾರಿಗಳಿಗೂ ಕೊಂಡಿ ಎಂದಿದ್ದರು ಶಿವವರ್ಮ. ಆ ಮೂಲಕ ತರುಣ ಪೀಳಿಗೆಯನ್ನು ಸೆಳೆಯುವ ತೆರೆದ ಬಾಗಿಲಾಗಿ ಭಗತ್ಸಿಂಗ್ನನ್ನು ಉಪಯೋಗಿಸಲು ಅವರು ನಿರ್ಧರಿಸಿಬಿಟ್ಟಿದ್ದರು.

1970 ರಲ್ಲಿ ಅವರ ಪ್ರಯತ್ನ ತೀವ್ರಗೊಂಡು 1980 ರ ವೇಳೆಗೆ ತುದಿ ಮುಟ್ಟಿತು. ರಷ್ಯಾದ ಮಿಟ್ರೋಕಿನ್ ಭಾರತದ ಕ್ರಾಂತಿಯಲ್ಲಿ ರಷ್ಯಾದ ಪಾತ್ರ ಅನ್ವೇಷಣೆ ಮಾಡುತ್ತಾ ಲೆನಿನ್ ಮತ್ತು ಭಾರತದ ಸಂಬಂಧದ ಕುರಿತಂತೆ ಪುಸ್ತಕ ಬರೆದು ಅದರಲ್ಲೊಂದು ಅಧ್ಯಾಯ ಭಗತ್ನ ಕೊನೆಯ ದಿನಗಳಿಗೆ ಮೀಸಲಿಟ್ಟ. ಕೊನೆಯ ದಿನಗಳಲ್ಲಿ ಆತ ಲೆನಿನ್ನ ಜೀವನ ಚರಿತ್ರೆ ಓದಿದ್ದನ್ನು ಹೆಮ್ಮೆಯಿಂದ ದಾಖಲಿಸಿದ. ಅದೇ ದಾಖಲೆಯನ್ನು ಮತ್ತೆ ಮತ್ತೆ ಉಲ್ಲೇಖಿಸುವ ಎಡಚರು, ಕ್ರಾಂತಿಕಾರ್ಯವೆಲ್ಲ ಮಾಡಿ ಮುಗಿಸಿ ಜೈಲಿನಲ್ಲಿ ಕೊನೆಯ ದಿನಗಳನ್ನೆಣಿಸುವಾಗ ಆತ ಲೆನಿನ್ನ್ನು ಓದಿದ್ದು ಎಂಬುದನ್ನು ಮರೆತೇ ಬಿಡುತ್ತಾರೆ. ಅಂದರೆ ಅವನ ಕ್ರಾಂತಿಕಾರ್ಯಕ್ಕೆಲ್ಲ ಪ್ರೇರಣೆ ಲೆನಿನ್ ಅಲ್ಲವೆಂದಾಯ್ತಲ್ಲ! ಮತ್ತೇಕೆ ಇವರು ಗಂಟಲು ಹರಕೊಳ್ಳೋದು. ಸ್ವತಃ ಎಡಚ ಲೇಖಕ, ಭಾರತದ ಇತಿಹಾಸವನ್ನು ತನಗೆ ಬೇಕಾದಂತೆ ತಿರುಚಿದ ಬಿಪಿನ್ ಚಂದ್ರರೇ ಹೇಳುತ್ತಾರೆ, ‘ಭಗತ್ ಮತ್ತು ಅವನ ಗೆಳೆಯರು ಮಾರ್ಕ್ಸ್ ವಾದದಲ್ಲಿ ಪಂಡಿತರೇನೂ ಆಗಿರಲಿಲ್ಲ. ಹಾಗಂತ ಏನೂ ತಿಳಿದವರಲ್ಲ ಎನ್ನುವಂತೆಯೂ ಇರಲಿಲ್ಲ. ಅವರು ತಾವೇ ಎಲ್ಲೆಡೆ ಅಡ್ಡಾಡಿ ಭಾರತದ ಕ್ರಾಂತಿಯ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುತ್ತಿದ್ದರು’ ಅಂತ. ಅರ್ಥವಾಯಿತಲ್ಲ! ಭಗತ್ರಿಗೆ ಭಾರತೀಯ ಕ್ರಾಂತಿಕಾರ್ಯದ ಸಮಸ್ಯೆಗಳನ್ನು ಅರಿಯಲ್ಲು ಕಮ್ಯುನಿಸಂನ ಪಾಂಡಿತ್ಯ ಬೇಕಿರಲಿಲ್ಲ. ಬಿಪಿನ್ ಚಂದ್ರರು ಮುಂದುವರಿಸಿ ಹೇಳುತ್ತಾರೆ, ‘ಅವರ ಸಮಾಜವಾದದ ಅರ್ಥೈಸಿಕೊಳ್ಳುವಿಕೆಯಲ್ಲಿ ಮತ್ತು ಆಚರಣೆಯಲ್ಲಿ ವಿರೋಧಾಭಾಸಗಳಿತ್ತು. ಅವರು ರಾಷ್ಟ್ರ ಪ್ರಜ್ಞೆಯನ್ನು ಜಾಗೃತಗೊಳಿಸಿದರು ಅಷ್ಟೇ’ ಅಂತ.

b1
ನಿಧಾನವಾಗಿ ಕಮ್ಯುನಿಷ್ಟರ ವರಸೆ ಬದಲಾಯಿತು. ಅವರಿಗೀಗ ಭಾರತದಲ್ಲಿ ಹೊಸ ಪೀಳಿಗೆಯ ತರುಣರನ್ನು ಸೆಳೆಯಲು ಭಗತ್ನ ಹೆಸರು ಜಪಿಸಲೇಬೇಕಿತ್ತು. ಹೀಗಾಗಿ 1984 ರಲ್ಲಿ ಸಿಪಿಐ ನಾಯಕ ಬರ್ಧನ್ ಪುಟ್ಟದೊಂದು ಕೃತಿ ಬರೆದು ‘ಭಗತ್ ಕ್ರಾಂತಿಕಾರಿಯಿಂದ ಮಾರ್ಕ್ಸ್ ವಾದಿಯಾಗುವ ಹಂತದಲ್ಲಿದ್ದ. ಆದರೆ ಅವನಿಗೆ ಅದನ್ನು ಸಾಬೀತು ಪಡಿಸುವ ಅದೃಷ್ಟವಿರಲಿಲ್ಲ ಅಷ್ಟೇ’ ಎಂದು ಕಣ್ಣೀರಿಟ್ಟರು. ಅಂದರೆ ಒಂದು ಮಾತನ್ನು ಅವರೇ ಒಪ್ಪಿಕೊಳ್ಳುತ್ತಾರೆ. ಭಗತ್ ಕ್ರಾಂತಿಕಾರ್ಯ ಮಾಡಿದ್ದರ ಹಿಂದೆ ಕಮ್ಯುನಿಸಂನ ಯಾವ ಪ್ರಭಾವವೂ ಇರಲಿಲ್ಲ. ಆದರೆ ಜೈಲಿನಲ್ಲಿ ಅವನು ಕಳೆದ ದಿನಗಳಲ್ಲಿ ಲೆನಿನ್-ಮಾರ್ಕ್ಸ್ ರ ಪ್ರಭಾವ ಜೋರಾಗಿಯೇ ಆಯ್ತು ಅಂತ. ಅಲ್ಲಿಗೆ ಕ್ರಾಂತಿಕಾರಿ ಭಗತ್ಸಿಂಗ್ ಕಮ್ಯುನಿಸ್ಟ್ ಅಲ್ಲ ಅಂತ ಸಾಬೀತಾಯ್ತು.
ಈಗ ಜೈಲಿನಲ್ಲಿದ್ದ ಭಗತ್ಸಿಂಗ್ನ್ನು ಅವಲೋಕಿಸಿ. ಉಪವಾಸ ಸತ್ಯಾಗ್ರಹದ ಸವಾಲು ಸ್ವೀಕರಿಸಿ 60 ದಿನಕ್ಕೂ ಹೆಚ್ಚು ಕಾಲ ಬ್ರಿಟೀಷರ ಬುಡ ಅಲುಗಾಡಿಸಿ ಬಿಟ್ಟನಲ್ಲ ಇದನ್ನು ಯಾವ ಮಾರ್ಕ್ಸ್ ರ, ಲೆನಿನ್, ಮಾವೊ ಹೇಳಿಕೊಟ್ಟಿದ್ದಾರೆ ಹೇಳಿ! ಭಗತ್ ಸಿಂಗ್ನ ಅಂತರಾತ್ಮ ಭಾರತದೊಂದಿಗೆ ಏಕರಸವಾಗಿತ್ತು. ಹೀಗಾಗಿಯೇ ಆತ ಆರಂಭದಿಂದಲೂ ಭಾರತದ ಅಖಂಡತೆಗೆ ತಡೆಯಾಗುವ ಯಾವ ಅಂಶಗಳನ್ನೂ ಅನುಮೋದಿಸಲಿಲ್ಲ. ಭಾರತ್ ತೆರೆ ತುಕಡೆ ಹೋಂಗೆ ಎಂದ ಜೆ.ಎನ್.ಯು ಗ್ಯಾಂಗ್ನ್ನು ಸಮರ್ಥಿಸಿದ ಮತ್ತು ದೇಶ ವಿಭಜನೆಯಾದರೂ ಸರಿಯೆ ಮುಸಲ್ಮಾನರ ಓಲೈಕೆಗೆ ನಿಲ್ಲಲೇಬೇಕೆನ್ನುವ ಈ ಕಮ್ಯುನಿಷ್ಟ್ ಪಡೆಗೆ ಭಗತ್ನ ರಾಷ್ಟ್ರೀಯವಾದವನ್ನು ಅನುಸರಿಸುವ ಸಾಮಥ್ರ್ಯ ಇದೆಯೇನು? ಬಹುಶಃ ಹೊಸ ಪೀಳಿಗೆಯ, ಈಗ ತಾನೆ ಸಿದ್ಧಾಂತಾಂತರಗೊಂಡ ಕಮ್ಯುನಿಷ್ಟ್ರಿಗೆ ಗೊತ್ತಿರಲಿಕ್ಕಿಲ್ಲ, ಭಗತ್ ಭಾರತದ ರಾಷ್ಟ್ರೀಯತೆಯ ಬೇರುಗಳಿಂದ ದೂರವಾಗಿದ್ದ ಉರ್ದು ಭಾಷೆಯನ್ನು ಕುರಿತು ತೀಕ್ಷ್ಣ ಪ್ರಹಾರಗಳನ್ನು ಮಾಡಿದ್ದ. ಅವನೇ ಲೇವಡಿ ಮಾಡಿ ಬರೆದ ಸಾಲುಗಳು ಹೇಳುವಂತೆ ‘ಲಾಲಾ ಹರದಯಾಳರ ಎಂ.ಎ ತರಗತಿಯ ಒಂದು ಉರ್ದು ಪುಸ್ತಕ ಕೌಮೇಂ ಕಿಸ್ತರಹ್ ಜಿಂದಾ ರಹ್ಸಕತೀ ಹೈ ಎಂಬುದರ ಅನುವಾದ ಮಾಡುತ್ತಿದ್ದ ಸರ್ಕಾರಿ ಅನುವಾದಕ, ಋಷಿ ನಚಿಕೇತ ಎಂದು ಉರ್ದುವಿನಲ್ಲಿ ಬರೆದಿದ್ದನ್ನು ನೀಚಿ ಕುತಿಯಾ ಎಂದು ಓದಿಕೊಂಡು A Bitch Of Low Origin ಎಂದು ಅನುವಾದ ಮಾಡಿದ್ದ’ ಎಂದಿದ್ದಾನೆ. ಅದನ್ನು ಪ್ರತಿಯೊಬ್ಬ ಭಾಷಾ ಶಾಸ್ತ್ರಜ್ಞನೂ ಧೈರ್ಯದಿಂದ ಸಮರ್ಥೀಸಬಲ್ಲ. ಕಮ್ಯುನಿಷ್ಟ್ ಓಲೈಕೆವೀರರು ಒಪ್ಪುವರೆ?
ಒಂದಂತೂ ಒಪ್ಪಬೇಕು. ಜೀವಿತಾವಧಿಯ ಕೊನೆಯ ದಿನಗಳಲ್ಲಿ ಭಗತ್ ಸಿಂಗ್ನಿಗೆ ಕೊಲ್ಲುವುದು, ಲೂಟಿ ಮಾಡುವುದರ ಮೇಲೆ ನಂಬಿಕೆ ಕಳೆದು ಹೋಗಿತ್ತು. ಹೀಗಾಗಿಯೇ ಆತ ‘ನಾನು ಕ್ರಾಂತಿಕಾರ್ಯದ ಆರಂಭದಲ್ಲಿ ಉಗ್ರಮಾರ್ಗವನ್ನು ಅನುಸರಿಸುತ್ತಿದ್ದೆ. ಆದರೆ ಈಗ ನನಗೆ ಆ ಮಾರ್ಗದಿಂದ ಏನೂ ಸಿದ್ಧಿಸಲಾರದೆಂದು ಅರಿವಾಗಿದೆ’ ಎಂದು ನೊಂದುಕೊಂಡಿದ್ದ. ಅದಕ್ಕೇ ಗಾಂಧೀಜಿ ಹೇಳಿದ್ದು, ‘ಭಗತ್ ಅಹಿಂಸೆಯ ಆರಾಧಕನಾಗಿರಲಿಲ್ಲ ನಿಜ ಆದರೆ ಆತ ಹಿಂಸೆಯ ಪ್ರತಿಪಾದಕನೂ ಆಗಿರಲಿಲ್ಲ. ಆತ ಹತಾಶನಾಗಿ ಅಹಿಂಸೆಯ ಮಾರ್ಗದಲ್ಲಿದ್ದ’ ಅಂತ. ಭಗತ್ನನ್ನು ಕಮ್ಯುನಿಷ್ಟ್ ಚಿಂತನೆಯ ಪ್ರತಿಪಾದಕ ಎನ್ನುವವರು ಕೇರಳ-ಬಂಗಾಳಗಳಲ್ಲಿ ಹಿಂಸೆಯ ತಾಂಡವ ನೃತ್ಯವನ್ನು ಮಾಡುತ್ತಲಿದ್ದಾರಲ್ಲ ಮನಸನ್ನು ಬದಲಾಯಿಸಿಕೊಂಡು ಶಾಂತಿಯ ಪಥದಲ್ಲಿ ಹೆಜ್ಜೆ ಹಾಕಬಲ್ಲರೇನು? ಬಂಗಾಳದಲ್ಲಿ ಮಾಡುವಂತೆ, ಕೊಂದು–ಉಪ್ಪಿನ ಚೀಲಗಳನ್ನು ಸುತ್ತಲೂ ಹಾಕಿ-ಶವವನ್ನು ಹೂತರೆ ಕೊಲೆಯ ಕುರುಹೂ ಸಿಗಲಾರದೆಂದು ಹೇಳಿ ಹಾಗೆ ಮಾಡುವಂತೆ ತನ್ನ ಕಾರ್ಯಕರ್ತರಿಗೆ ಮುಕ್ತವಾಗಿ ಪ್ರೇರಣೆ ಕೊಟ್ಟವ ಕೇರಳದಲ್ಲಿ ಮುಖ್ಯ ಮಂತ್ರಿಯೇ ಆಗಿಬಿಡುತ್ತಾನಲ್ಲ ಭಗತ್ನಿಂದ ಕಲಿತ ಪಾಠವಾದರೂ ಏನು? ಈ ಮಾರ್ಚ್ 23 ಕ್ಕೆ ಒಂದಷ್ಟು ಎಡಚರು ಅವನ ನೆನಪಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರಂತೆ. ತಮ್ಮ ಭಾಷಣಗಳಲ್ಲಿ ಇಷ್ಟು ಮಾತ್ರ ತಪ್ಪನ್ನು ಒಪ್ಪಿಕೊಂಡು ಪ್ರಾಯಶ್ಚಿತ್ತ ಮಾಡಿಕೊಂಡರೆ ಭಗತ್ನ ಬಲಿದಾನ ಸಾರ್ಥಕವಾದೀತು, ಇಷ್ಟು ದಿನ ಹೇಳಿದ ಸುಳ್ಳುಗಳಿಗೆ ಕ್ಷಮೆ ದಕ್ಕೀತು.

b3
ಅನುಮಾನವೇ ಇಲ್ಲ. ಭಾರತ ಭಕ್ತ ಭಗತ್ನನ್ನು ಮಾರ್ಕ್ಸ್ ಲೆನಿನ್ನರ ಆರಾಧಕನಾಗಿ ಇವರು ಪ್ರತಿಪಾದಿಸುತ್ತಿರುವುದೇ ಮಹಾಪಾಪ. ಇಷ್ಟಕ್ಕೂ ಕಳೆದೊಂದು ದಶಕದಲ್ಲಿ ಭಗತ್ನ ಕುರಿತಂತೆ ಯಾವ ಕಾರ್ಯಕ್ರಮ ಮಾಡದ ಎಡಚರಿಗೆ ಈಗ ಇದ್ದಕ್ಕಿದ್ದಂತೆ ಆತ ನೆನಪಾಗಿದ್ದು ಏಕೆ? ಕೇಂದ್ರದಲ್ಲಿ ಮೋದಿ ಸರಕಾರ ಬಂದ ಮೇಲೆ ಸಂಘದ ಶಾಖೆಗಳ ಸಂಖ್ಯೆ ವಿಸ್ತಾರವಾಗುತ್ತಿದೆ. ರಾಷ್ಟ್ರೀಯತೆಯ ಸುನಾಮಿ ಎಲ್ಲರ ನ್ನೂ ಕೊಚ್ಚಿಕೊಂಡು ಹೋಗುತ್ತಿದೆ. ಕಮ್ಯುನಿಸ್ಟ್ರ ಪರಿಸ್ಥಿತಿ 1948ಕ್ಕಿಂತಲೂ ಹಾಳಾಗಿದೆ. ಪಶ್ಚಿಮ ಬಂಗಾಳದಲ್ಲಿ ಅಧಿಕಾರವಿಲ್ಲ, ಕೇರಳದಲ್ಲಿ ಮುಂದಿನ ಬಾರಿಗೆ ಖಾತ್ರಿಯಿಲ್ಲ. ರಷ್ಯಾ ಚೂರಾಗಿದೆ, ಚೀನಾ ಭಾರತದೆದುರು ಮಂಕಾಗುತ್ತಿದೆ. 1951 ರಲ್ಲಿ ರಷ್ಯಾದ ಆಜ್ಞೆ ಪಡೆದು ಭಗತ್ಸಿಂಗ್ರನ್ನು ಮುಂಚೂಣಿಗೆ ತಂದಂತೆ ಈಗ ಮತ್ತೆ ಚೀನಾದ ಆಜ್ಞೆ ಪಡೆದು ಭಗತ್ ಜಪ ಮಾಡ ಹೊರಟಿದ್ದಾರೆ. ತರುಣ ಪೀಳಿಗೆ ಎಚ್ಚೆತ್ತುಕೊಂಡಿದೆ. ಅದು ಈ ಬಾರಿ ಮೋಸ ಹೋಗಲಾರದು! ಅದು ದೇಶದ್ರೋಹಿಗಳನ್ನು ಹುಡು-ಹುಡುಕಿ ಪಾಠ ಕಲಿಸಲಿದೆ. ಒಂದು ಉತ್ಕ್ರಾಂತಿಯಾಗಲಿದೆ ಭಾರತ ವಿಶ್ವಗುರುವಾಗಲಿದೆ. ಸಾಧ್ಯವಿದ್ದರೆ ತಡೆದುಬಿಡಿ, ನೋಡೋಣ.
ಕ್ರಾಂತಿ ಚಿರಾಯುವಾಗಲಿ.
ಭಾರತಮಾತೆಗೆ ಜಯವಾಗಲಿ..
ವಂದೇ ಮಾತರಂ ಗಗನ ಬಿರಿಯುವಂತೆ ಮೊಳಗಲಿ

 

(ಸದ್ಯಕ್ಕೆ ಮುಗಿಯಿತು, ಹೊಸ ಪ್ರಶ್ನೆಗಳೆದ್ದರೆ ಮತ್ತೆ ಮುಂದುವರೆಸೋಣ)

Leave a Reply