ವಿಭಾಗಗಳು

ಸುದ್ದಿಪತ್ರ


 

ಇವರಿಗೆಲ್ಲ ಸ್ಫೂರ್ತಿ ಎಲ್ಲಿಂದ ಸ್ಫುರಿಸುತ್ತದೆಯೋ!

ಪ್ರೇರಣೆ ಎಲ್ಲಿಂದ, ಹೇಗೆ ಸಿಗುತ್ತೋ ದೇವರೇ ಬಲ್ಲ. ಕೆಲವರೊಡನೆ ಮಾತನಾಡಿದರೆ, ಕೆಲವರನ್ನು ನೋಡಿದರೆ, ಕೆಲವರ ಕುರಿತು ಓದಿದರೆ, ಕೇಳಿದರೂ ಸಾಕು- ಹೀಗೆ ಬದುಕಬೇಕು ಎನ್ನಿಸಿಬಿಡುತ್ತೆ. ಆರೇಳು ತಿಂಗಳ ಹಿಂದೆ ಅರುಣಾಚಲಕ್ಕೆ ಕಾಲಿಡುವ ಮುನ್ನ ಗೌಹಾಟಿಗೆ ಹೋಗಿದ್ದೆ. ಮಿತ್ರರ ಸಹಾಯದಿಂದ ವಿವೇಕಾನಂದ ಕೇಂದ್ರದಲ್ಲಿ ಉಳಕೊಳ್ಳಲು ಅವಕಾಶ ಸಿಕ್ಕಿತ್ತು. ಅರುಣಾಚಲದೊಳಕ್ಕೆ ಹೋಗಲು ಬೇಕಾದ ಅನುಮತಿ ಪತ್ರಕ್ಕಾಗಿ ಕಾಯುತ್ತ ಕುಳಿತಿದ್ದೆ. ಆಗ ಪರಿಚಯವಾದರವರು ಸುಜಾತಾ ದೀದಿ. ಅಸ್ಸಾಮ್‌ನ ವಿವೇಕಾನಂದ ಕೇಂದ್ರ ಸಂಬಂಧಿತ ಚಟುವಟಿಕೆಗಳೆಲ್ಲದರ ಕೇಂದ್ರ ಅವರು.
ದೀದಿ ಮೂಲತಃ ಕನ್ನಡಿಗರು. ಉಡುಪಿ ಅವರ ಊರು. ಚಿಕ್ಕಂದಿನಿಂದಲೂ ಹೈದರಾಬಾದಿನಲ್ಲಿಯೇ ಬೆಳೆದಿದ್ದರಿಂದ ಕನ್ನಡದ ನೆನಪೂ ಅವರಿಗೆ ಉಳಿದಿಲ್ಲ. ಯೌವನ ಕಾಲದಲ್ಲಿಯೇ ಹೈದರಾಬಾದಿನ ರಾಮಕೃಷ್ಣ ಆಶ್ರಮದ ಮುಖ್ಯಸ್ಥರಾದ ಸ್ವಾಮಿ ರಂಗನಾಥಾನಂದರ ಸಂಪರ್ಕ ದೊರೆಯಿತು. ಬಲು ಬೇಗ ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ಕುದುರಿತು. ಅಕ್ಕ ತಂಗಿಯರೆಲ್ಲ ಸೇರಿ ಐದು ಜನರ ಕುಟುಂಬ ಅವರದು. ಅದಾಗಲೇ ಒಬ್ಬ ಅಕ್ಕ ಶಾರದಾಶ್ರಮ ಸೇರಿಯಾಗಿತ್ತು. ಹೀಗಾಗಿ ತಂಗಿಗೆ ಮುಂದೇನೆಂಬುದರ ಬಗ್ಗೆ ಆಲೋಚನೆ ಇದ್ದೇ ಇತ್ತು. ಆಶ್ರಮ ಸೇರದೆಯೇ ಸಂನ್ಯಾಸಿನಿಯಾಗುವ ಬಯಕೆ ಟಿಸಿಲೊಡೆದದ್ದೇ ಆಗ. ತನ್ನ ಸಾಮರ್ಥ್ಯಕ್ಕೆ ಸೂಕ್ತ ವೇದಿಕೆ ಅರಸುತ್ತ ನಡೆದ ತರುಣಿ ಹೋಗಿ ನಿಂತದ್ದು ಏಕನಾಥ ರಾನಡೆಯವರು ಕಟ್ಟಿ ಬೆಳೆಸಿದ ವಿವೇಕಾನಂದ ಕೇಂದ್ರದೆದುರು. ಕೆಲವು ದಿನಗಳ ತರಬೇತಿಯ ಅನಂತರ ನೇರವಾಗಿ ಸುಜಾತಾ ದೀದಿಯನ್ನು ಅರುಣಾಚಲ ಪ್ರದೇಶಕ್ಕೆ ಕಳಿಸಲಾಯ್ತು.
ಅಷ್ಟು ಹೊತ್ತಿನ ತನಕ ಅವರ ಮಾತನ್ನು ಕೇಳುತ್ತ ಕುಳಿತಿದ್ದ ನಾನು ಅಚ್ಚರಿಗೊಂಡು ಒಮ್ಮೆಗೇ ಇಷ್ಟು ದೂರ ಬಂದುಬಿಟ್ಟಿರಾ? ಎಂದು ಉದ್ಗರಿಸಿದೆ. ದೀದಿ ಏನೆಂದರು ಗೊತ್ತೆ? ಎಪಿಯಿಂದ ಎಪಿಗೆ ಬಂದೆ. ಅಂತಹ ವ್ಯತ್ಯಾಸವೇನಿಲ್ಲ! ಎಂದು.. ನಾನು, ಅವರು ಅಂತ ತುಂಬಾ ಯೋಚನೆ ಮಾಡುತ್ತಿದ್ದರೆ ಮನಸ್ಸು ಅಸ್ವಸ್ಥಗೊಳ್ಳುತ್ತೆ. ಹೊಸಬರೊಡನೆ ಒಂದಾಗಿಬಿಟ್ಟರೆ ಸಮಸ್ಯೆಯೇ ಇರೋದಿಲ್ಲ. ಮೊದಲ ದಿನದಿಂದ ನಾನು ಅದನ್ನು ಅಭ್ಯಾಸ ಮಾಡಿದೆ ಎನ್ನುವಾಗ ಅವರ ಕಂಗಳು ಮಿಂಚುತ್ತಿದ್ದವು. ಒಟ್ಟು ಒಂಭತ್ತು ವರ್ಷ. ತಮ್ಮವರಲ್ಲದ ಜನರ ನಡುವೆ ಕಾಲ ಕಳೆದ ಸುಜಾತಾ ದೀದಿ, ಮನೆ ಮನೆಗೆ ಹಿಂದೂ ಚಿಂತನೆಗಳನ್ನೊಯ್ಯುವ ಕೆಲಸ ಮಾಡಿದರು. ಅರುಣಾಚಲದಲ್ಲಿ ಹಟಕ್ಕೆ ಬಿದ್ದು ಕೆಲಸ ಮಾಡುತ್ತಿರುವ ಕ್ರಿಶ್ಚಿಯನ್ ಮಿಶನರಿಗಳ ವಿರುದ್ಧ ಸೆಟೆದು ನಿಂತರು. ಕೇಂದ್ರದ ಶಾಲೆಗಳಿಗೆ ಜೀವ ತುಂಬಿದರು. ಹೊಸ ಹೊಸ ತರುಣ ತರುಣಿಯರನ್ನು ಧರ್ಮಕಾರ್ಯಕ್ಕೆ ಜೋಡಿಸಿದರು. ಇದೇ ಸಮಯದಲ್ಲಿ ಅರುಣಾಚಲದಲ್ಲಿ ಕೆಲಸ ಮಾಡುವ ಇತರೆ ರಾಷ್ಟ್ರೀಯ ಸಂಘಟನೆಗಳೊಂದಿಗೆ ಸಂಪರ್ಕ ಹಾಳುಗೆಡದಂತೆ ನೋಡಿಕೊಂಡರು.
ತಮಾಷೆ ಅಂದ್ಕೋಬೇಡಿ. ಸಮಾಜದ ಕೆಲಸದಲ್ಲಿ ಮಗ್ನರಾಗಿರುವವರಿಗೆ ತಮ್ಮ ಲಕ್ಷ್ಯದತ್ತ ಗಮನ ಇರಿಸಿ ಹೆಜ್ಜೆ ಹಾಕೋದು ಸುಲಭವಲ್ಲ. ಕೆಲಸ ಶುರು ಮಾಡುವಾಗ ಇರುವಷ್ಟು ಉತ್ಸಾಹವನ್ನೇ ನಾಲ್ಕಾರು ವರ್ಷಗಳ ನಂತರವೂ ಉಳಿಸಿಕೊಳ್ಳೋದು ಸಲೀಸೇನೂ ಅಲ್ಲ. ಅಧ್ಯಯನ ಇರಬೇಕು, ಪ್ರಾಯೋಗಿಕವಾಗಿ ದುಡಿಯಬೇಕು, ಈ ಹಾದಿಯಲ್ಲೇ ಜೀವ ಸವೆಸಿದವರ ಸಂಪರ್ಕ- ಮಾರ್ಗದರ್ಶನ ಪಡೆಯುತ್ತಿರಬೇಕು. ಕೊನೆಗೆ ಸೋತಾಗ ಮನಸ್ಸನ್ನು ಸಂತೈಸಿಕೊಳ್ಳುವಷ್ಟು ಅಧ್ಯಾತ್ಮದ ಗೆಳೆತನವೂ ಇರಬೇಕು. ಇಷ್ಟನ್ನೂ ರೂಢಿಸಿಕೊಂಡವ ದೀರ್ಘಕಾಲ ಈ ಹಾದಿಯಲ್ಲಿ ನಡೆಯಬಲ್ಲ.
ಅರುಣಾಚಲದಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡ ಸುಜಾತಾ ದೀದಿ ಈಗ ಪೂರ್ಣ ಈಶಾನ್ಯ ರಾಜ್ಯಗಳ ಜವಾಬ್ದಾರಿ ಪಡೆದು ಅಸೋಮ್‌ನ ಗೌಹಾಟಿಗೆ ವರ್ಗಾಯಿಸಲ್ಪಟ್ಟಿದ್ದರು. ಈಗ ಅವರಿಗೆ ಮಣಿಪುರ, ನಾಗಾಲ್ಯಾಂಡ್, ತ್ರಿಪುರಾಗಳ ಜವಾಬ್ದಾರಿಯೂ ಹೆಗಲೇರಿತ್ತು. ಈಗವರು ಸುಮ್ಮನೆ ಕೆಲಸ ಮಾಡುವವರಲ್ಲ, ಮುಂದೇನು ಮಾಡಬೇಕೆಂದು ನಿರ್ಧರಿಸಬಲ್ಲ ಮಹತ್ವದ ಹುದ್ದೆಗೆ ಏರಿದ್ದರು. ಹಗಲಿರುಳಿನ ಅವಿರತ ದುಡಿಮೆಯ ನಡುವೆಯೂ ನಗುನಗುತ್ತಿರುವ ಸುಜಾತಾ ದೀದಿ ನಿಜಕ್ಕೂ ಆದರ್ಶವಾಗಿ ನಿಲ್ಲುತ್ತಾರೆ. ಮೊನ್ನೆ ತಾನೆ ಅವರು ಹೈದರಾಬಾದಿಗೆ ವರ್ಗಾವಣೆಗೊಂಡಿರುವ ಸುದ್ದಿ ಬಂದಿದೆ. ಓಹ್! ಮತ್ತೆ ಎಪಿಗೆ ಮರಳಿದ್ದಾರೆ!
~
ಅದೇ ಅಸೋಮ್‌ನ ನಟ್ಟನಡುವೆ ಜೋಹ್ರಟ್ ಎಂಬ ಜಿಲ್ಲೆ ಇದೆ. ಈ ಜಿಲ್ಲೆ ಒಂಥರಾ ನಮ್ಮ ಉತ್ತರ ಕರ್ನಾಟಕದ ಜಿಲ್ಲೆಗಳಂತೆ. ಹೃದಯವಂತ ಜನ ತುಂಬಾ ಇದ್ದಾರೆ. ಇಲ್ಲಿನ ವಿದ್ಯಾರ್ಥಿಗಳ ನಡುವೆ ಕೆಲಸ ಮಾಡಲಿಕ್ಕೆಂದೇ ಎಬಿವಿಪಿಯ ಹುಡುಗನೊಬ್ಬ ಇದ್ದಾನೆ, ಮಹೇಶ ಅಂತ. ಇವನೂ ಮೂಲತಃ ಉಡುಪಿಯವನೇ. ಉಡುಪಿಯ ಹಳ್ಳಿಯೊಂದರಿಂದ ಬಂದವನು. ಕಳೆದೆರಡು ವರ್ಷಗಳ ಹಿಂದೆ ಪೂರ್ಣಾವಧಿಯಾಗಿ ಅಸೋಮ್ ಸೇರಿಕೊಂಡ. ಅಲ್ಲಿನ ಹೆಚ್ಚೂಕಡಿಮೆ ೯೫ ಭಾಗ ಜನರಿಗೆ ಹಿಂದಿ ಬರೋದಿಲ್ಲ. ಇಂಗ್ಲಿಶಂತೂ ದೂರದ ಮಾತು. ಹೀಗಾಗಿ ಜೋಹ್ರಟ್ ಸೇರಿಕೊಂಡ ಮೊದಲಾರು ತಿಂಗಳು ತನ್ನ ಕೋಣೆಯಲ್ಲಿ ಕುಳಿತು ಅಳುವುದೊಂದೇ ಕೆಲಸ. ಮರಳಿ ಊರಿಗೆ ಹೋಗಲಾರೆನೆಂಬ ಹಟವಿದ್ದುದರಿಂದ ಮಹೇಶ ಅಸೋಮೀ ಭಾಷೆ ಕಲಿಯಲು ಶುರು ಮಾಡಿದ. ಒಂದೇ ತಿಂಗಳೊಳಗೆ ತನಗೆ ಅಗತ್ಯವಿದ್ದುದನ್ನು ಕಲಿತುಕೊಂಡ. ಈಗವನಿಗೆ ಗೆಳೆಯರು ದಕ್ಕಿದರು. ಅವರ ಮನೆಗಳಿಗೆ ಹೋಗಲಾರಂಭಿಸಿದ. ನಿಧಾನವಾಗಿ ಚಟುವಟಿಕೆ ವಿಸ್ತರಿಸಿಕೊಂಡ.
ಅಸೋಮ್‌ನಲ್ಲಿ ಕೆಲಸ ಮಾಡೋದು ಸುಲಭವಲ್ಲ. ಅಲ್ಲಿ ಬಾಂಗ್ಲಾದ ಮುಸಲ್ಮಾನರ ವಿರುದ್ಧ ಆಕ್ರೋಶ ಇದೆಯಾದರೂ ಹಿಂದೂ ಸಂಘಟನೆಗಳ ಕೆಲಸಕ್ಕೆ ಸೂಕ್ತ ವಾತಾವರಣವೇನೂ ಇಲ್ಲ. ವಿದ್ಯಾರ್ಥಿಗಳ ದೃಷ್ಟಿಯಿಂದ ನೋಡಿದರೆ ಅಲ್ಲಿ ಅಸೋಮ್ ಸ್ಟೂಡೆಂಟ್ಸ್ ಯೂನಿಯನ್ ಸಾರ್ವಭೌಮ. ಬೇರೆಯವರು ಬೆಳೆಯುವುದನ್ನದು ಸಹಿಸದು. ಅಣ್ಣಾ ಹಜಾರೆ ಆಂದೋಲನಕ್ಕೆ ದೇಶದ ಇತರೆಡೆ ಸಾವಿರ ಸಾವಿರ ಸಂಖ್ಯೆಯ ವಿದ್ಯಾರ್ಥಿಗಳು ಬೀದಿಗಿಳಿದಿದ್ದರೆ, ಜೋಹ್ರಟ್‌ನಲ್ಲಿ ಒಟ್ಟಾಗಿದ್ದು ೩೫ ಮಂದಿ ಮಾತ್ರ. ಅಲ್ಲಿ ಅದುವರೆಗಿನ ದೊಡ್ಡ ಸಂಖ್ಯೆ ಅದು! ಮಹೇಶ ಕೊನೆಗೂ ಇಷ್ಟು ಜನರ ಮನಗೆಲ್ಲುವಲ್ಲಿ ಸಫಲನಾಗಿದ್ದ.
ಅಸೋಮ್‌ನಲ್ಲಿ ಬದುಕಬೇಕೆಂದರೆ ಕೊನೆಪಕ್ಷ ಮೀನನ್ನಾದರೂ ತಿನ್ನಬೇಕು. ಆಗಮಾತ್ರ ಅಲ್ಲಿನ ನಿವಾಸಿಗಳಿಗೆ ಈತ ನಮ್ಮವನೇ ಎನ್ನುವ ಭಾವನೆ ಮೂಡಲು ಸಾಧ್ಯ. ಮಹೇಶ ಅವರ ಮನೆಗಳಿಗೆ ಹೋದಾಗ ಬೇರೇನೂ ಕೇಳಲಿಲ್ಲ. ಅವರು ಕೊಟ್ಟಿದ್ದನ್ನು ತಿಂದ. ಅವರಲ್ಲಿ ಒಬ್ಬನಂತಾಗಿ ಹೋದ. ಅವರ ಮನೆಮಗನಂತೆಯೇ ಆಗಿಹೋದ. ನಾನೇ ಖುದ್ದು ನೋಡಿದ್ದೇನೆ. ಕೆಲವೆಡೆ ಈತ ಬಂದೊಡನೆ ಮನೆಯ ಹಿರಿಯರ ಮುಖದಲ್ಲಿ ಮಂದಹಾಸ ಮಿನುಗುತ್ತದೆ. ಅವನ ಆಡುವ ಅಸ್ಸಾಮೀ ಮಾತುಗಳು ಅವರ ಪಾಲಿಗೆ ಸಂಜೀವಿನಿಯಂತೆ!
ನಾನು ಮಾಜೋಳಿಗೆ ಹೋಗಿದ್ದು ಮಹೇಶನೊಂದಿಗೇ. ಅದು ಜಗತ್ತಿನ ಅತ್ಯಂತ ದೊಡ್ಡ ಜನವಸತಿಯಿರುವ ದ್ವೀಪ. ಅಲ್ಲಿನ ಹತ್ತಾರು ಮನೆಗಳಿಗೆ ಮಹೇಶ ಸುಪರಿಚಿತ. ಮುಲಾಜಿಲ್ಲದ ಅವರ ಮನೆ ಹೊಕ್ಕು, ಅಡುಗೆಯೊಲೆಯ ಮುಂದೆ ಚಳಿ ಕಾಯಿಸಿಕೊಳ್ಳುವಷ್ಟು ವಿಶ್ವಾಸವನ್ನು ಆತ ಗಳಿಸಿದ್ದಾನೆ. ಅಡುಗೆ ಮಾಡುತ್ತಿರುವ ಅಮ್ಮನೊಂದಿಗೆ ಹರಟೆ ಹೊಡೆಯುತ್ತಲೇ ತನ್ನ ಭಾಷೆ ತಿದ್ದಿಕೊಳ್ಳುವಷ್ಟು ಬುದ್ಧಿವಂತನೂ ಅವನಾಗಿದ್ದಾನೆ!
ನೀನು ಹೀಗೇಕೆ ಮನೆಮನೆಗೆ ಎಡತಾಕುತ್ತೀಯ ಎಂದು ಕುತೂಹಲದಿಂದ ಕೇಳಿದೆ. ಕಾಲೇಜಿನಲ್ಲಿ ಸಿಗುವ ಹುಡುಗನ ಮನೆಗೆ ಬಂದು ಹೋದರೆ ಒಂದು ಬಾಂಧವ್ಯ ಬೆಳೆಯುತ್ತದೆ. ಆತ ನಮ್ಮೊಡನೆ ಗಟ್ಟಿಯಾಗಿ ನಿಲ್ಲತೊಡಗುತ್ತಾನೆ. ಒಮ್ಮೆ ಅವನ ಮನೆಯವರಲ್ಲಿ ವಿಶ್ವಾಸ ತುಂಬಿ ಬಿಟ್ಟರೆ ಸಾಕು, ಸಂಘಟನೆಯ ಕೆಲಸ ಅರ್ಧ ಮುಗಿದಂತೆ ಎಂದ. ಹೌದೆನ್ನಿಸಿತು. ಇದ್ದ ಒಂದೂವರೆ ದಿನದಲ್ಲಿ ಒಂದಷ್ಟು ಮನೆಗಳಿಗೆ ಭೇಟಿ ಕೊಟ್ಟು, ಗೆಳೆಯರನ್ನು ಮಾತಾಡಿಸಿದ. ಹೊಸಬರನ್ನು ಪರಿಚಯ ಮಾಡಿಕೊಂಡು ಗೆಳೆತನ ಬೆಳೆಸಿದ. ಅವನ ಕಾರ್ಯಶೈಲಿ ಅಚ್ಚರಿ ತರಿಸಿತು. ಇಲ್ಲಿಂದ ವಾಪಸ್ಸು ಯಾವಾಗ? ಸಹಜವಾಗಿ ಕೇಳಿದೆ. ಸಂಘಟನೆ ಹೇಳಿದಾಗ ಮರಳಬೇಕು. ಆದರೆ ಇನ್ನೊಂದಷ್ಟು ವರ್ಷ ಇಲ್ಲೇ ಇರಬೇಕೆನಿಸಿದೆ. ಎಂದ. ನಾನು ಪಡಕೊಂಡ ವ್ಯಕ್ತಿಗಳು ಸಂಘಟನೆ ಮುಂದುವರೆಸಿಕೊಂಡು ಹೋಗುವಂತಾದರೆ ನಾನು ಜಾಗ ಖಾಲಿ ಮಾಡಬಹುದೆಂದು ದೃಢವಾಗಿ ನುಡಿದ. ಕೆಲವೇ ತಿಂಗಳಲ್ಲಿ ಮಾಜೋಳಿಗೆ ದೇಶದ ಇತರ ಭಾಗದಿಂದ ಕಾರ್ಯಕರ್ತರನ್ನು ಕರೆಸಿ, ಕೆಲವು ದಿನ ಉಳಿಸಿ, ಅಧ್ಯಯನ ಪ್ರವಾಸ ಯೋಜನೆಯನ್ನೂ ಮಹೇಶ ರೂಪಿಸಿಕೊಂಡಿದ್ದಾನೆ.
ಅಬ್ಬಾ! ಇವರೆಲ್ಲ ರಣಭೂಮಿಯಲ್ಲಿ ಕಾದಾಡುವ ಕದನಕಲಿಗಳೇ ಸರಿ. ಸ್ವಂತದ ಮೋಹ ತ್ಯಾಗ ಮಾಡಿ ಪರರಿಗೋಸ್ಕರ ದುಡಿಯುವ ಇಂತಹ ಸಾವಿರಾರು ಜನರಿಂದಲೇ ರಾಷ್ಟ್ರದ ಅಸ್ಮಿತೆ ಉಳಿದಿರೋದು. ಸದಾ ಕಾಲ ರಾಷ್ಟ್ರವನ್ನು ಒಂದಾಗಿ ಜೋಡಿಸಿಡುವ, ಐಕ್ಯಭಾವವನ್ನು ತುಂಬುವ ಪ್ರಯತ್ನದಲ್ಲಿ ನಿರತರಾಗಿರುತ್ತಾರಲ್ಲ, ಅದು ಕಡಿಮೆ ಮಹತ್ವದ ಸಂಗತಿಯೇನು?
ಇತ್ತೀಚೆಗೆ ಅಸೋಮ್‌ನಲ್ಲಿ ಗಲಭೆಗಳಾದಾಗ ನನಗೆ ಮಹೇಶ ವಿಪರೀತ ನೆನಪಾಗಿಬಿಟ್ಟ. ಅವನೊಡನೆ ಮಾತನಾಡಿದ ಮೇಲೇ ಸಮಾಧಾನವಾಗಿದ್ದು. ನಾವು ಇಷ್ಟೂ ವರ್ಷ ಹೇಳುತ್ತಿದ್ದುದನ್ನು ಧಿಕ್ಕರಿಸುತ್ತಿದ್ದರಲ್ಲ, ಈಗ ಬುದ್ಧಿ ಬಂದಿದೆ ಇವರಿಗೆ. ಪರಿಸ್ಥಿತಿ ಅರ್ಥವಾಗುತ್ತಿದೆ ಎಂದ. ಕೆಲವು ದಿನಗಳಲ್ಲಿ ಮತ್ತೆ ಕರೆ ಮಾಡಿ, ೯೦ಸಾವಿರವಿದ್ದ ನಿರಾಶ್ರಿತ ಮುಸಲ್ಮಾನರು ಏಕಾಏಕಿ ನಾಲ್ಕು ಲಕ್ಷಕ್ಕೇರಿದ್ದಾರೆ. ಕಡಿಮೆ ಅಂದರೂ ಎರಡೂವರೆ ಲಕ್ಷ ಜನ ಅತ್ತಲಿಂದ ನುಸುಳಿ ಬಂದಿದ್ದಾರೆ. ಸರ್ಕಾರ ಅವರಿಗೆ ಸವಲತ್ತು ಕೊಡಲು ಸಿದ್ಧವಿದೆ ಎಂದ. ಯಾಕೋ ಪಿಚ್ಚೆನಿಸಿತು. ಇನ್ನೊಂದು ದಿನ ಬಿಟ್ಟು ಮಾತಾಡುವಾಗ ಅವನ ಕಂಠ ಗದ್ಗದಿತವಾಗಿತ್ತು. ಹೈದರಾಬಾದಿನಿಂದ ಮರಳಿ ಬರುತ್ತಿದ್ದ ಮಾಜೋಳಿಯ ತರುಣನೊಬ್ಬನ ತಲೆಯನ್ನು ಕತ್ತರಿಸಿ ಕೊಂದು ಹಾಕಿದ್ದರು. ಆ ಮನೆಯೆದುರಿಗೇ ನಿಂತು ಮಾತನಾಡಿದ್ದ. ಅವನ ಭಾವ ನಿಸ್ತಂತುವಾಗಿಯೂ ನನ್ನೆದೆಯ ತಂತುಗಳನ್ನು ಮೀಟುತ್ತಿತ್ತು. ಉಡುಪಿ ಎಲ್ಲಿ, ಅದೆಲ್ಲಿಯ ಅಸೋಮ್? ಈ ಹುಡುಗ ಕಣ್ಣೀರು ಸುರಿಸುತ್ತಿದ್ದಾನಲ್ಲ, ಎನ್ನಿಸಿ ನನ್ನೆದೆಯೂ ಭಾರವಾಯ್ತು….

Leave a Reply