ವಿಭಾಗಗಳು

ಸುದ್ದಿಪತ್ರ


 

ಈ ಬಾರಿ ಕಳಕೊಂಡದ್ದು ಬಲು ದೊಡ್ಡದ್ದು!

ಸೂಲಿಬೆಲೆಯಿಂದ ಬೆಂಗಳೂರಿಗೆ ಬಂದಿದ್ದೆ ನಾನು. ಕಾಲೇಜಿಗೆ ಸೇರಿಕೊಂಡಿದ್ದೆ. ಉಳಕೊಳ್ಳಲು ಹಾಸ್ಟೆಲ್ ವ್ಯವಸ್ಥೆ ಆಗಬೇಕಿತ್ತು. ಉಚಿತವಾದ ರಾಮಕೃಷ್ಣ ಸ್ಟುಡೆಂಟ್ಸ್ ಹೋಮ್ ಪ್ರಯತ್ನಿಸಿದೆ. ನನ್ನ ತಂದೆ ಸರ್ಕಾರಿ ನೌಕರರಾಗಿದ್ದರಿಂದ ಅವಕಾಶ ದೊರೆಯಲಿಲ್ಲ. ರಾಮಕೃಷ್ಣ ವಿದ್ಯಾರ್ಥಿ ಮಂದಿರಂಗೆ ಬಂದೆ. ಅದಾಗಲೇ ಸಂದರ್ಶನದ ಪ್ರಕ್ರಿಯೆಗಳೆಲ್ಲ ಮುಗಿದು ಹೋಗಿದ್ದವು. ಆದರೂ ನನಗೊಂದು ಅವಕಾಶ ಕೊಡಿರೆಂದು ಶ್ವೇತವಸ್ತ್ರಧಾರಿಯಾಗಿದ್ದವರನ್ನು ಕೇಳಿಕೊಂಡೆ. ಪುಸ್ತಕಗಳನ್ನು ಕೈಗಿತ್ತು ‘ಓದಿಕೊಂಡು ಬಾ, ಪರೀಕ್ಷೆಯಲ್ಲಿ ಪಾಸಾದರೆ ಅವಕಾಶ’ ಎಂದರು. ಆಲಸ್ಯದ ಮುದ್ದೆ ನಾನು. ಮನೆಗೆ ಹೋಗಿ ಕಣ್ಣಾಡಿಸಿದೆ. ಅತಿಯಾದ ಆತ್ಮವಿಶ್ವಾಸ. ಎರಡು ದಿನ ಬಿಟ್ಟು ಸಂದರ್ಶನಕ್ಕೆ ಬಂದೆ. ಕೇಳಿದ 6 ಪ್ರಶ್ನೆಗಳಲ್ಲಿ 3 ಕ್ಕೆ ಉತ್ತರಿಸಿದೆ. ಮೂರಕ್ಕೆ ಪ್ರಯತ್ನ ಪಟ್ಟೆ. ಎದುರಿಗೆ ಕುಳಿತಿದ್ದ ಶ್ವೇತವಸ್ತ್ರಧಾರಿ ಕೇಳಿದರು ‘ನೀನೇ ಹೇಳು, ನನ್ನ ಜಾಗದಲ್ಲಿ ನೀನಿದ್ದಿದ್ದರೆ ಸೀಟು ಕೊಟ್ಟಿರುತ್ತಿದ್ದೆಯಾ?’ ನಾನು ಮುಲಾಜಿಲ್ಲದೇ ‘ಹೌದು’ ಅಂದೆ. ಅದು ನನ್ನ ಜೀವನದ ಮಹತ್ವದ ತಿರುವು. ನಾನು ಮುಂದೆ ರಾಮಕೃಷ್ಣರ ಹೂದೋಟದಲ್ಲಿ ಅರಳುವುದಕ್ಕೆ ಕಾರಣವಾಯಿತು. ಹೌದು. ಅವತ್ತು ನನ್ನನ್ನು ಸಂದರ್ಶನ ಮಾಡಿ ನನ್ನ ಮಂದಿರಂಗೆ ಸೇರಿಸಿಕೊಂಡವರೇ ಮಂಜು ಮಹಾರಾಜ್ ಅಥವಾ ಸ್ವಾಮಿ ಸ್ವಾತ್ಮಾರಾಮಾನಂದಜೀ.

ಮಂದಿರಂಗೆ ಸೇರಿದ ಮೊದಲ ಮೂರ್ನಾಲ್ಕು ವಾರಗಳಲ್ಲೇ ಅವರೊಂದಿಗೆ ನನ್ನ ಕಿತ್ತಾಟ ಶುರುವಾಗಿತ್ತು. ಭಾನುವಾರ ಮನೆಗೆ ಬಿಡಲಿಲ್ಲಾಂತ, ಮಧ್ಯಾಹ್ನ ಮಲಗಲು ಬಿಡಲಿಲ್ಲಾಂತ. ಸಂಜೆ ಆಡಲು ಹೋಗಲೇಬೇಕೆಂದು ಹಠ ಮಾಡುತ್ತಾರೇಂತ. ಕೊನೆಗೆ ಊಟದ ಹೊತ್ತಲ್ಲಿ ಒಂದಿಡೀ ಅಧ್ಯಾಯ ಭಗವದ್ಗೀತೆ ಹೇಳಿಕೊಡುತ್ತಾರೇಂತ. ಮೊದಲಿನಿಂದಲೂ ಯಾರಿಗೂ ಬಗ್ಗದ ಜಾಯಮಾನದ ಸ್ವತಂತ್ರ ಅಭಿವ್ಯಕ್ತಿಯ ವ್ಯಕ್ತಿತ್ವ ನನ್ನದು. ಅದು ಅಹಂಕಾರವಾಗಿ ಬೆಳೆದು ನಿಂತಿತ್ತು. ಅದಕ್ಕೆ ಬಲವಾದ ಕೊಡಲಿ ಪೆಟ್ಟು ಕೊಟ್ಟವರೇ ಸ್ವಾಮೀಜಿ. ನನ್ನಿಂದ ಯಾವ ಕೆಲಸವನ್ನು ಹೇಗೆ ಮಾಡಿಸಿಕೊಳ್ಳಬೇಕೆಂದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಮಂದಿರಂನಲ್ಲಿ ನನ್ನದೇ ಬಳಗ ಕಟ್ಟಿಕೊಂಡು ಯಾವುದನ್ನು ಮಾಡಬಾರದೆಂದು ನಿಯಮ ಹೇಳುತ್ತಿತ್ತೋ ಅದನ್ನೆಲ್ಲ ಕದ್ದು ಮುಚ್ಚಿ ಮಾಡುತ್ತಿದ್ದೆವು ನಾವು. ಹೊರಗಡೆಯಿಂದ ಸಂಜೆ ತಿಂಡಿ ತಂದು ತಿನ್ನೋದು, ಓದುವ ಅವಧಿಯಲ್ಲಿ ಹರಟೆ ಹೊಡೆಯೋದು, ಮೊಲ ಸಾಕುವುದು ಕಡ್ಡಾಯವಾಗಿದ್ದಾಗ ಅದರಿಂದ ತಪ್ಪಿಸಿಕೊಳ್ಳೋದು ಒಂದೇ ಎರಡೇ. ಅದೆಷ್ಟು ಕೋಣೆಗಳನ್ನು ಬದಲಾಯಿಸಿ ನನಗೆ ಶಿಕ್ಷೆ ಕೊಟ್ಟರೋ ನೆನಪಿಲ್ಲ. ಅನೇಕರು ಇಂದೂ ಬಂದರೆ ‘ಇದು ನನ್ನ ಕೋಣೆ’ ಅಂತಾರೆ. ನಾನು ‘ಇಡಿಯ ಹಾಸ್ಟೆಲ್ಲೇ ನಂದು’ ಅಂತೀನಿ. ಅಷ್ಟು ಕೋಣೆ ಬದಲಾವಣೆ! ಆ ಕೋಪಕ್ಕೆ ನಾಲ್ಕಾರು ತಿಂಗಳ ಕಾಲ ಸ್ವಾಮೀಜಿಯೊಂದಿಗೆ ಮಾತನಾಡುವುದನ್ನೇ ಬಿಟ್ಟಿದ್ದೆ. ನನ್ನನ್ನು ಪಳಗಿಸಲೆಂದೇ ಕಠಿಣ ಹೃದಯಿಯಾಗಿದ್ದ ಹಿರಿಯ ವಿದ್ಯಾರ್ಥಿಯೊಬ್ಬನ ಕೋಣೆಗೆ ನನ್ನನ್ನು ವರ್ಗಾಯಿಸಿದರು. ನನ್ನ ದಿನನಿತ್ಯದ ಯೋಗಾಭ್ಯಾಸ, ನಾನು ಓದುವ ಕ್ರಾಂತಿಕಾರಿ ಸಾಹಿತ್ಯಗಳು, ರಾತ್ರಿ ಊಟ ಮುಗಿದ ಮೇಲೆ ಹೇಳುವ ಕಥನಗಳು ಇವೆಲ್ಲವೂ ಆ ಹಿರಿಯ ವಿದ್ಯಾರ್ಥಿಯನ್ನು ನನ್ನೆಡೆಗೆ ಸೆಳೆದು ಬಿಟ್ಟಿತ್ತು. ಅಲ್ಲಿಗೆ ಸ್ವಾಮೀಜಿಯ ಕೊನೆಯ ಅಸ್ತ್ರ ಮುಗಿದಿತ್ತು. ಹಾಗಂತ ಅವರಿಗೆ ನನ್ನ ಮೇಲಿನ ವಿಶ್ವಾಸ ಇಂಗಿರಲಿಲ್ಲ. ಆ ವರ್ಷದ ವಾರ್ಷಿಕೋತ್ಸವದಲ್ಲಿ ರಾಮಕೃಷ್ಣರ ನಾಟಕ ಮಾಡಬೇಕಿತ್ತು. ರಾಮಕೃಷ್ಣರ ಗುರು ತೋತಾಪುರಿಯ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದರು. ಧಿಮಾಕಿನ ಮನುಷ್ಯ ನಾನು. ಈ ಅವಕಾಶ ಬಿಡುವುದುಂಟೇ? ಪಾತ್ರಧಾರಿಯಾಗಲು ಒಪ್ಪಲಾರೆ ಎಂದೆ. ಸ್ವಾಮೀಜಿ ಪರಿಪರಿಯಾಗಿ ಹೇಳಿದ್ದರು. ನನ್ನದು ಒಂದೇ ಹಠ ‘ಆಗುವುದಿಲ್ಲ, ಆಗುವುದಿಲ್ಲ ಅಷ್ಟೇ!’ ಗೆದ್ದೆನೆಂದು ಬೀಗಿದ್ದೆ ನಾನು. ಅದೇ ಸಂಜೆ ಕಾಲೇಜಿನಿಂದ ರಾಜ್ಯಮಟ್ಟದ ಚರ್ಚಾ ಸ್ಪರ್ಧೆಗೆ ಆಯ್ಕೆಯಾಗಿದ್ದೆ. ಕನಕಪುರಕ್ಕೆ ಹೋಗಬೇಕಿತ್ತು. ಅನುಮತಿ ಕೇಳಲೆಂದು ಬಂದರೆ ಸ್ವಾಮೀಜಿಯೂ ನನ್ನಷ್ಟೇ ಗಟ್ಟಿ ದನಿಯಲ್ಲಿ ‘ಆಗುವುದಿಲ್ಲ, ಆಗುವುದಿಲ್ಲ ಅಷ್ಟೇ’ ಎಂದು ಬಿಟ್ಟರು. ನನಗೆ ತಲೆ ಗಿರ್ರ್ ಅಂತು. ಕಾಲೇಜಿನಲ್ಲಿ ಅಷ್ಟೆಲ್ಲಾ ಸಾಹಸ ಮಾಡಿ ಪಡೆದಿದ್ದನ್ನು ಬಿಡುವುದು ಹೇಗೆ? ತಲೆತಗ್ಗಿಸಿ ನಿಂತಿದ್ದೆ. ‘ನಾಟಕದಲ್ಲಿ ಪಾತ್ರ ಮಾಡಿದರೆ ಹೋಗಬಹುದು’ ಎಂದರು. ನಾನು ಬೇಸರದಿಂದಲೇ ಒಪ್ಪಿದ್ದೆ. ಸ್ವಾಮೀಜಿ ಪಳಗಿಸಿದ್ದರು ನನ್ನ.

_DSC5571_1438918162094

ಮುಂದೊಮ್ಮೆ ಮತ್ತೊಬ್ಬ ಸ್ವಾಮೀಜಿಯೊಂದಿಗೆ ರಂಪಾಟ ಮಾಡಿಕೊಂಡು ಹಾಸ್ಟೆಲ್ ಬಿಡಬೇಕಾದ ಪ್ರಸಂಗ ಬಂದಿದ್ದಾಗ ನನ್ನನ್ನು ಉಳಿಸಿ ನನ್ನ ಅಪ್ಪ-ಅಮ್ಮನನ್ನು ಸಮಾಧಾನ ಮಾಡಿದ್ದು ಇದೇ ಸ್ವಾಮೀಜಿ. ಈ ಘಟನೆಯ ನಂತರ ನಾನು ಪೂರ್ಣ ಶರಣಾಗತನಾಗಿದ್ದೆ. ಅವರು ಹೇಳುವ ಮೊದಲೇ ಎಲ್ಲವನ್ನೂ ಪಾಲಿಸಿ, ಮುಗಿಸಿಬಿಟ್ಟಿರುತ್ತಿದ್ದೆ. ಮುಂದೆ ನನ್ನ ಪಾಲಿಗೆ ಅವರು ಮಾರ್ಗದರ್ಶಕರಾದರು. ನಾನು ಇಂಜಿನಿಯರಿಂಗ್ ಮಾಡುವಾಗ ಓದಲೆಂದು ಪುಸ್ತಕ ಕಳಿಸುತ್ತಿದ್ದರು, ಇತರರಿಗೆ ಹಂಚಲು ಪುಸ್ತಕ ನೀಡುತ್ತಿದ್ದರು. ಅಧ್ಯಯನ ಮುಗಿಸಿ ಅಚಾನಕ್ಕು ವೈರಾಗ್ಯದ ತೀವ್ರತೆಯಲ್ಲಿದ್ದವನನ್ನು ದುಡ್ಡುಕೊಟ್ಟು ಟಿಕೇಟು ಮಾಡಿಸಿ ಕೊಲ್ಕತ್ತಾಕ್ಕೆ ಕಳಿಸಿ ಸ್ವಾಮಿ ರಂಗನಾಥಾನಂದರ ಶಿಷ್ಯನಾಗುವಂತೆ ಮಾಡಿದ್ದು ಸ್ವಾಮೀಜಿಯೇ. ನನ್ನ ಬದುಕಿನ ಮಹತ್ವದ ತಿರುವು ಅದು. ನನ್ನ ಗುರುಗಳು ಬೆಂಗಳೂರಿಗೆ ಬಂದಾಗ ನನ್ನ ಕರೆದು ಅವರ ಸೇವೆ ಮಾಡುವಂತೆ ನನಗೆ ಅವಕಾಶ ಮಾಡಿಕೊಟ್ಟು, ಈ ಸೇವೆಯ ಮಹತ್ವವನ್ನು ತಿಳಿಹೇಳುತ್ತಿದ್ದ ಸ್ವಾಮೀಜಿಯನ್ನು ಹೇಗೆ ಮರೆಯಲಿ?

ತುರ್ತಾಗಿ ಸಾವರ್ಕರ್ ಪುಸ್ತಕ ಬರೆಯಲು ಕುಳಿತಾಗ ಏಳು ದಿನ ಹಾಸ್ಟೆಲ್ಲಿನಲ್ಲಿ ನಾನಿದ್ದ ಕೋಣೆಗೆ ಊಟ-ತಿಂಡಿ ಕೊಟ್ಟು ತಾಯಿಗಿಂತಲೂ ಜತನದಿಂದ ನೋಡಿಕೊಂಡದ್ದು ಇದೇ ಸ್ವಾಮೀಜಿ. ಯಾರಾದರೂ ಹಿರಿಯರು ಬಂದರೆ ಸಾಕು ಹೆಮ್ಮೆಯಿಂದ ಪರಿಚಯ ಮಾಡಿಸಿ ನನ್ನ ಗುಣಗಳನ್ನು ಹಾಡಿ ಹೊಗಳುತ್ತಿದ್ದುದು ಸ್ವಾಮೀಜಿಯೇ. ತೊಂದರೆಗೆ ಸಿಲುಕಿದಾಗ ಶಾಸ್ತ್ರ ಗ್ರಂಥಗಳಿಂದ ಆಧಾರ-ಪ್ರಮಾಣಗಳನ್ನು ತೋರಿಸಿ, ರಾಮಕೃಷ್ಣ-ಶಾರದೆ-ವಿವೇಕಾನಂದರ ಮಾತುಗಳಿಂದ ಸಂತೈಸಿ ಸಮಾಧಾನ ಮಾಡುತ್ತಿದ್ದುದು ಅವರೇ. ನನ್ನ ತಂದೆಯ ಆರೋಗ್ಯ ಹದಗೆಟ್ಟಾಗ ನನಗಿಂತ ಹೆಚ್ಚು ಕಾಳಜಿ ತೋರಿ ವೈದ್ಯರ ಪರಿಚಯ ಮಾಡಿಸಿ ಆರೋಗ್ಯ ವೃದ್ಧಿಸುವಲ್ಲಿ ಪ್ರಯತ್ನ ಶೀಲರಾದುದು, ನಾನು ಹುಷಾರಿಲ್ಲದಾಗ ವೈದ್ಯರ ಬಳಿ ನನ್ನನ್ನೊಯ್ದು ಔಷಧಿ ಕೊಡಿಸಿ ಪ್ರೀತಿಯಿಂದ ಗದರಿದ್ದು ಅವರೇ. ಅವರು ನನಗೆ ಗುರುವೋ ತಾಯಿಯೋ ಹೇಗೆ ಹೇಳಲಿ?

ನಾನು ತಲೆತಗ್ಗಿಸಿ ನಿಂತದ್ದು ಅವರೆದುರಿಗೆ ಮಾತ್ರ. ಮನಸಿಗೆ ತುಂಬಾ ಗಾಯವಾದಾಗ ಕಣ್ಣೀರಿಟ್ಟಿದ್ದೂ ಅವರೆದುರಿಗೆ ಮಾತ್ರ. ದ್ವಂದ್ವದಲ್ಲಿದ್ದಾಗ ಧರ್ಮ ಸೂಕ್ಷ್ಮ ತಿಳಿಸಿ ಕೈ ಹಿಡಿಯಿರೆಂದು ಕೇಳಿದ್ದೂ ಅವರ ಬಳಿ ಮಾತ್ರ. ನನ್ನನ್ನು ಸರಿಯಾಗಿ ಅರ್ಥೈಸಿಕೊಂಡವರು ಇಬ್ಬರೇ. ಅದರಲ್ಲಿ ಒಬ್ಬರು ಸ್ವಾಮೀಜಿ! ಹೀಗಾಗಿಯೇ ನನ್ನ ಅಂಕಣಗಳ ಸಂಕಲನ ಜಾಗೋಭಾರತ್ ಪುಸ್ತಕವಾಗಿ ಬಂದಾಗ ಬಿಡುಗಡೆಗೆ ನಾನು ಬಯಸಿದ್ದು ಇಬ್ಬರನ್ನೇ. ಉತ್ಥಾನದ ರಾಮಸ್ವಾಮಿಗಳು ಮತ್ತು ಸ್ವಾಮಿ ಸ್ವಾತ್ಮಾರಾಮಾನಂದ ಜಿ. ಅವತ್ತಿನ ಕಾರ್ಯಕ್ರಮ ನನ್ನ ಪಾಲಿಗೆ ಎಂದೆಂದಿಗೂ ಮರೆಯಲಾಗದ್ದು.

ನನಗೆ ಹಾಸ್ಟೆಲ್ಲಿನ ಕೊಠಡಿ ಯಾವಾಗಲೂ ತೆರೆದೇ ಇರುತ್ತಿತ್ತು. ಅಧ್ಯಯನಕ್ಕೆ, ಬರವಣಿಗೆಗೆ, ಜಪ-ಧ್ಯಾನಗಳಿಗೆ ನನ್ನ ಪಾಲಿನ ಸರ್ವಸ್ವ ಅದು. ಹಾಸ್ಟೆಲ್ಲಿನಿಂದ ದೀರ್ಘಕಾಲ ದೂರವಿದ್ದದ್ದು ನಮೋಬ್ರಿಗೇಡ್ ಸಂದರ್ಭದಲ್ಲಿಯೇ. ರಾಜಕೀಯದ ಒಡನಾಟದ ಸೋಂಕು ಹಾಸ್ಟೆಲ್ಲಿಗೆ ತಾಕಬಾರದೂಂತ! ತೀರಾ ಇತ್ತೀಚೆಗೆ ಡಿಮಾನಿಟೈಜೇಶನ್ ಆದಾಗ ಬೆಂಗಳೂರಿನ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಕುಳಿತು ನಾನು ಮಾತನಾಡಿದ್ದನ್ನು ಕೇಳುತ್ತ ಕುಳಿತ ಸ್ವಾಮೀಜಿಯನ್ನು ನೆನಪಿಸಿಕೊಂಡರೆ ಈಗಲೂ ಕಣ್ಣೀರು ಜಿನಗುತ್ತದೆ. ನಾನು ಮಾತನಾಡಲು ಕಲಿತದ್ದೇ ಅವರ ಗರಡಿಯಲ್ಲಿ. ಶಿಷ್ಯನ ಮಾತುಗಳನ್ನು ಕೇಳಿ ಆನಂದಿಸುವ ಇಂತಹ ಗುರುಗಳು ಎಷ್ಟು ಜನಕ್ಕೆ ಸಿಕ್ಕಾರು ಹೇಳಿ. ಒಂದಂತೂ ಸತ್ಯ. ನನ್ನೊಳಗಿನ ನಾಯಕತ್ವದ ಗುಣ ಅನಾವರಣಗೊಂಡಿದ್ದರೆ ಅದಕ್ಕೆ ಮೂಲ ಪ್ರೇರಣೆ ಸ್ವಾಮೀಜಿಯೇ. ನಮಗೆ ಸಮಾಜದ ಕೆಲಸ ನಿರಂತರ ಮಾಡುವಂತೆ ಶಕ್ತಿ ತುಂಬಿದವರು ಅವರೇ.

ಇಷ್ಟೆಲ್ಲಾ ಏಕೀಗ ಅಂದರೆ ಸ್ವಾಮೀಜಿ ನಾಳೆ ಆಫ್ರಿಕಾದ ಡರ್ಬನ್ಗೆ ವರ್ಗವಾಗಿ ಹೊರಟಿದ್ದಾರೆ. ಅವರನ್ನು ನೋಡಲೆಂದು ಹೋಗಿದ್ದೆ. ದುಃಖ ತಡೆಯಲಾಗಲಿಲ್ಲ. ಕಣ್ಣಾಲಿಗಳಿಂದ ನೀರು ಕೆಳಗೆ ಹರಿಯದಂತೆ ತುಂಬಾ ಹೊತ್ತು ತಡಕೊಂಡಿದ್ದೆ. ಇನ್ನು ಸಾಧ್ಯವಾಗದೆಂದಾಗ ಎದ್ದು ಹೊರಟು ಬಂದೆ. ಹೃದಯದ ಭಾರ ಇನ್ನೂ ಇಳಿಯಲಿಲ್ಲ. ಸ್ವಾಮೀಜಿ ಆದಷ್ಟು ಬೇಗ ಮರಳಿ ಬರಲೆಂಬ ಪ್ರಾರ್ಥನೆಯಷ್ಟೇ ನನ್ನದ್ದು!

ಕಾಯುತ್ತಿರುತ್ತೇನೆ ಅಷ್ಟೇ.

Leave a Reply