ವಿಭಾಗಗಳು

ಸುದ್ದಿಪತ್ರ


 

ಈ ಸಾವುಗಳಿಗೆ ಉತ್ತರಿಸುವವರು ಯಾರು!?

ನಿಗೂಢ ಸಾವುಗಳ ಕಥೆ ಇಷ್ಟಕ್ಕೇ ಮುಗಿಯಲಿಲ್ಲ. ಮಾಧವ ರಾವ್ ಸಿಂಧ್ಯಾ, ರಾಜಶೇಖರ್ ಪೈಲಟ್‌ನಂಥಹ ಸಮರ್ಥರೂ ಪ್ರಧಾನಿಯಾಗುವ ಯೋಗ್ಯತೆ ಇದ್ದವರೂ ವಿಮಾನ ಅಪಘಾತದಲ್ಲಿ ಪ್ರಾಣ ಕಳಕೊಂಡರು. ಅರೆ! ಭವಿಷ್ಯದ ನಾಯಕರು ಹೀಗೆ ಅಚಾನಕ್ಕಾಗಿ ಸಾಯೋದು ಸಹಜವಾ? ಅಥವಾ ಇದರಲ್ಲೇನಾದರೂ ’ಕೈ’ವಾಡ ಇದೆಯಾ?

ನೆಹರೂ ನಂತರ ಮುಂದ್ಯಾರು? ಈ ಪ್ರಶ್ನೆ ತೀವ್ರವಾಗಿದ್ದ ಕಾಲ ಅದು. ವಂಶ ಪರಂಪರೆಯ ಆಡಳಿತ ಮುಂದುವರೆಯುವ ನಡುವೆ ಒಂದು ಸ್ಟಾಪ್ ಗ್ಯಾಪ್ ಬೇಕಿತ್ತು. ಸರಳವಾಗಿದ್ದ, ಸಜ್ಜನರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಗಾದಿ ಏರಿದರು. ’ಈತನ ಕೈಲಿ ದೇಶ ಸಂಭಾಳಿಸುವುದು ಸಾಧ್ಯವಾಗಲಾರದು, ಆದಷ್ಟು ಬೇಗ ಇಂದಿರಾ ಕೈಗೆ ಅಧಿಕಾರ ಬಂದುಬಿಡುವುದು’ ಎಂಬ ಲೆಕ್ಕಾಚಾರ ಎಲ್ಲರದೂ ಆಗಿತ್ತು. ಆದರೆ ಶಾಸ್ತ್ರೀಜಿ ಬಳಿ ಪ್ರಾಮಾಣಿಕತೆಯ ಅಸ್ತ್ರವಿತ್ತು. ನಿಸ್ವಾರ್ಥದ ಮಂತ್ರದಂಡವಿತ್ತು. ಅವರು ಕೈಬೀಸಿದೆಡೆಯೆಲ್ಲ ಉಲ್ಕಾಪಾತವಾಯ್ತು. ಅಮೆರಿಕವೇ ಬೆಚ್ಚಿ ಬಿತ್ತು. ಪಾಕಿಸ್ತಾನ ಸೋತು ಹೈರಾಣಾಯ್ತು. ನೆಹರೂ ನಿಷ್ಠರಿಗೆ ನುಂಗಲಾರದ ಬಿಸಿತುಪ್ಪ. ಒಂದೆಡೆ ದೇಶದಲ್ಲಿ ಹೆಚ್ಚುತ್ತಿರುವ ಶಾಸ್ತ್ರೀಜಿಯವರ ಖ್ಯಾತಿ, ಮತ್ತೊಂದೆಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೃದ್ಧಿಸುತ್ತಿರುವ ಅವರ ಪ್ರಭೆ. ಒಂದಷ್ಟು ಜನ ನಿರ್ಧಾರ ಮಾಡಿದರು. ೧೯೬೫ರ ಪಾಕಿಸ್ತಾನ ಯುದ್ಧದ ಅನಂತರ ಶಾಸ್ತ್ರೀಜಿಯನ್ನು ರಷ್ಯಾದ ತಾಷ್ಕೆಂಟಿಗೆ ಒಯ್ಯಲಾಯ್ತು. ಅಲ್ಲಿ ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನರೊಂದಿಗೆ ಶಾಂತಿ ಒಪ್ಪಂದವಾಗಬೇಕಿತ್ತು. ಶಾಸ್ತ್ರೀಜಿಯವರೊಂದಿಗೆ ಇಂದಿರಾ ಗಾಂಧಿಯೂ ಇದ್ದರು. ಮುಂದೇನು? ಯಾರಿಗೂ ಒಪ್ಪಿಗೆ ಇಲ್ಲದ ಒಪ್ಪಂದವಾಯ್ತು. ರಾತ್ರಿ ಹಾಲು ಕುಡಿದು ಶಾಸ್ತ್ರೀಜಿ ಮಲಗಿದರು. ಸ್ವಲ್ಪ ಹೊತ್ತಿನಲ್ಲಿಯೇ ತೀವ್ರ ಪ್ರಮಾಣದ ಹೃದಯಾಘಾತಕ್ಕೆ ಒಳಗಾಗಿ ಅವರು ಮೃತಪಟ್ಟರು. ಹೆಚ್ಚು ಕಡಿಮೆ ನಲವತ್ತೆಂಟು ವರ್ಷಗಳಿಂದ ಇದೇ ಕಥೆ ಕೇಳುತ್ತ ಬಂದಿದ್ದೇವೆ. ಆದರೆ ನೆನಪಿರಲಿ, ಶಾಸ್ತ್ರೀಜಿಯೊಂದಿಗೆ ರಷ್ಯಾಕ್ಕೆ ಹೋಗಿದ್ದ ಅವರ ವೈದ್ಯ ಆರ್.ಎನ್.ಚುಗ್ ವಿಚಾರಣಾ ಸಮಿತಿಗೆ ಸಾಕ್ಷ್ಯ ನುಡಿಯಲೆಂದು ದೆಹಲಿಗೆ ಹೋಗುವಾಗ ದಾರಿಯಲ್ಲೆ ಲಾರಿ ಬಡಿದು ಸತ್ತರು. ಅವರ ತಿಂಡಿ ತೀರ್ಥದ ಜವಾಬ್ದಾರಿ ಹೊತ್ತಿದ್ದ ಆಪ್ತ ರಾಮನಾಥ್, ಕಮಿಟಿಯ ಎದುರು ಹಾಜರಾಗಲು ಹೋಗುತ್ತಿರುವಾಗಲೇ ಗಾಡಿಯೊಂದು ಬಡಿದು ಕಾಲುಗಳನ್ನು ಕಳಕೊಂಡು ಶಾಶ್ವತ ಮರೆವಿಗೆ ಶರಣಾದರು! ಹಾಗೆ ತನ್ನ ನೆನಪನ್ನು ಕಳಕೊಳ್ಳುವ ಮುನ್ನ ಆತ ಲಲಿತಾ ಶಾಸ್ತ್ರಿಯವರ ಬಳಿ ಬಂದು ‘ಅಮ್ಮ, ಬಲು ದಿನದ ಹೊರೆ ಇತ್ತು. ಇವತ್ತು ಎಲ್ಲವನ್ನೂ ಹೇಳಿಬಿಡುತ್ತೇನೆ ಎಂದು ಹೋಗಿದ್ದ. ಶಾಸ್ತ್ರೀಜಿಯವರ ಮೃತ ದೇಹ ನೀಲಿಯಾಗಿದ್ದು, ಮೈಯಲ್ಲಿ ಗಾಯದ ಗುರುತುಗಳಿದ್ದುದು, ಇವೆಲ್ಲವನ್ನೂ ಲಲಿತಾ ಶಾಸ್ತ್ರಿ ಪ್ರಶ್ನಿಸಿದ್ದರು. ಯಾರೂ ಸಮರ್ಪಕವಾದ ಉತ್ತರ ನೀಡಿರಲಿಲ್ಲ. ಪಾಪ.. ಸಾಯಿಸುವ ಮುನ್ನ ಚಿತ್ರಹಿಂಸೆ ಕೊಟ್ಟಿದ್ದರೇನೋ?

big_cover_delhi_20120709 (1)ಕಳೆದ ವರ್ಷ ಈ ಕುರಿತಂತೆ ಮಾಹಿತಿ ಕೇಳಿದ್ದಕ್ಕೆ ಕೇಂದ್ರ ಸರ್ಕಾರ ಈ ಮಾಹಿತಿ ಕೊಟ್ಟರೆ ಅಂತಾರಾಷ್ಟ್ರೀಯ ಸಂಬಂಧಗಳಿಗೆ ಹೊಡೆತ ಬಿದ್ದೀತು ಎಂದುಬಿಟ್ಟಿತು. ಅಷ್ಟೇ ಅಲ್ಲ, ರಷ್ಯಾ ಈ ಸಾವಿನ ನಂತರ ಶಾಸ್ತ್ರೀಜಿಯವರ ದೇಹ ಪೋಸ್ಟ್‌ಪಾರ್ಟಮ್ ಮಾಡಿರಲಿಲ್ಲ ಎಂದು ಒಪ್ಪಿಕೊಂಡಿತು. ಆದರೆ ಒಟ್ಟಾರೆ ಈ ಸಾವಿನ ಹಿಂದೆ ಅಡಗಿದ್ದ ರಹಸ್ಯವನ್ನು ರಹಸ್ಯವಾಗೇ ಉಳಿಸಿತು. ಶಾಸ್ತ್ರೀಜಿಯ ನಂತರ ಇಂದಿರಾ ಗಾಂಧಿ ಪಟ್ಟಕ್ಕೆ ಬಂದು ಕುಳಿತರು. ಬಂಗಾಳದ ನವಾಬ ಸಿರಾಜುದ್ದೌಲನನ್ನು ಈಸ್ಟ್ ಇಂಡಿಯಾ ಕಂಪನಿ ಮೋಸದಿಂದ ಕೊಲೆ ಮಾಡಿತು. ಈ ಕೊಲೆಗೆ ಸಹಕಾರ ಮಾಡಿದ ಮೀರ್‌ಜಾಫರ್‌ನನ್ನು ಆನಂತರ ಪಟ್ಟಕ್ಕೆ ಕೂರಿಸಿತ್ತು. ಛೇ.. ಇದು ಸುಮ್ಮನೆ ಇತಿಹಾಸವನ್ನು ನೆನಪಿಸಲಿಕ್ಕೆ ಅಷ್ಟೇ.
ಅಂದ ಹಾಗೆ, ಈ ದೇಶದಲ್ಲಿ ಈ ರೀತಿಯ ಅನೇಕ ಸಾವುಗಳು ದಾಖಲೆಯೇ ಇಲ್ಲದೆ ಅನುಮಾನಗಳ ಹುತ್ತವಾಗಿ ಹೋಗಿವೆ. ಸಂಜಯ್ ಗಾಂಧಿಯ ಸಾವು ಸಹಜವೇ ಅನ್ನೋದನ್ನು ಭಾರತದಲ್ಲಿ ಯಾರೂ ನಂಬಲು ತಯಾರಿಲ್ಲ. ಆ ಅವಧಿಯಲ್ಲಿ ಅಡ್ಡ ಬಂದವರ ಅದೆಷ್ಟು ಹೆಣಗಳು ಉರುಳಿಬಿದ್ದಿವೆಯೋ ದೇವರೇ ಬಲ್ಲ. ಸ್ವತಃ ಇಂದಿರಾ ಗಾಂಧಿಯೇ ರಕ್ಷಕರ ಗುಂಡಿಗೆ ಬಲಿಯಾದಳು. ಆಕೆಯ ನಂತರ ಅಧಿಕಾರಕ್ಕೆ ಬರಲು ಬಹಳ ಸಮರ್ಥರಿದ್ದರು. ರಾಜೀವ್ ಗಾಂಧಿಯನ್ನು ಮುಂದೆ ತರಲಾಯ್ತು. ತಾಯಿಯ ಸಾವಿನ ನೋವಿನ ಅಲೆಯಲ್ಲಿ ರಾಜೀವ್ ಪ್ರಧಾನಿಯಾಗಿಬಿಟ್ಟರು. ರಾಜೀವ್ ಆಡಳಿತದ ಪಟ್ಟುಗಳನ್ನು ಅರಿತು ಸುಧಾರಿಸುವ ವೇಳೆಗೆಅವರನ್ನು ಕೊಲ್ಲಿಸಲಾಯ್ತು. ತಮಗೆ ಬೇಕಾದವರನ್ನು ಕೂರಿಸಲಾಯ್ತು. ಮೀರ್ ಜಾಫರ್ ಈಸ್ಟ್ ಇಂಡಿಯಾ ಕಂಪನಿಗೆ ತಲೆನೋವಾದಾಗ ಅವನನ್ನು ಪಕ್ಕಕ್ಕೆ ತಳ್ಳಿ ಅವನ ಮಗನನ್ನು ಗಾದಿಯ ಮೇಲೆ ಕುರಿಸಲಿಲ್ಲವೆ? ಹಾಗೇ! ರಾಜೇಂದ್ರ ಧಾರಾ ತಮ್ಮ ’ದ ರಿಯಲ್ ಪೆಪ್ಸಿ, ದ ರಿಯಲ್ ಸ್ಟೋರಿ’ ಎಂಬ ಪುಸ್ತಕದಲ್ಲಿ ರಾಜೀವ್ ಗಾಂಧಿ ಹತ್ಯೆಯ ಹಿಂದಿನ ’ಕೈ’ವಾಡವನ್ನು ಎಳೆಎಳೆಯಾಗಿ ವಿವರಿಸಿದ್ದರು. ದುರ್ದೈವ, ಆ ಕೃತಿ ಅನಂತರ ಪ್ರಕಟಗೊಳ್ಳಲೇ ಇಲ್ಲ. ಅದರ ಹಿಂದಿನ ಸಂಚು ಯಾರದಿತ್ತು?
ನಿಗೂಢ ಸಾವುಗಳ ಕಥೆ ಇಷ್ಟಕ್ಕೇ ಮುಗಿಯಲಿಲ್ಲ. ಮಾಧವ ರಾವ್ ಸಿಂಧ್ಯಾ, ರಾಜಶೇಖರ್ ಪೈಲಟ್‌ನಂಥಹ ಸಮರ್ಥರೂ ಪ್ರಧಾನಿಯಾಗುವ ಯೋಗ್ಯತೆ ಇದ್ದವರೂ ವಿಮಾನ ಅಪಘಾತದಲ್ಲಿ ಪ್ರಾಣ ಕಳಕೊಂಡರು. ಅರೆ! ಭವಿಷ್ಯದ ನಾಯಕರು ಹೀಗೆ ಅಚಾನಕ್ಕಾಗಿ ಸಾಯೋದು ಸಹಜವಾ? ಅಥವಾ ಇದರಲ್ಲೇನಾದರೂ ’ಕೈ’ವಾಡ ಇದೆಯಾ?

grid-452-300_naxal10ಈ ಪ್ರಶ್ನೆ ಈಗ ಏಳೋದಕ್ಕೆ ಕಾರಣವೂ ಇದೆ. ಛತ್ತೀಸ್‌ಗಡದಲ್ಲಿ ಇತ್ತೀಚೆಗೆ ನಕ್ಸಲ್ ಹತ್ಯಾಕಾಂಡವಾಯ್ತಲ್ಲ, ಇದು ಕೂಡ ಮೇಲ್ನೋಟಕ್ಕೆ ಕಂಡಷ್ಟು ಸರಳವಾಗಿಲ್ಲ. ಇದರ ಆಳದಲ್ಲಿ ಭಾರೀ ದೊಡ್ಡ ಹುನ್ನಾರವೇ ಇದೆ. ಮೊದಲಿಗೆ ಅಜಿತ್ ಜೋಗಿ. ಈ ಹಿಂದೆ ಮಧ್ಯಪ್ರದೇಶದಿಂದ ಬೇರ್ಪಟ್ಟು ಛತ್ತೀಸ್‌ಗಡ ರಾಜ್ಯವಾದಾಗ ಅದರ ಮೊತ್ತಮೊದಲ ಮುಖ್ಯಮಂತ್ರಿಯಾದವರು. ಆತ ಮೂಲತಃ ಆದಿವಾಸಿ ಜನಾಂಗದವರು. ಆದರೆ ಮತಾಂತರಗೊಂಡು ಕ್ರಿಸ್ತನನ್ನು ತಬ್ಬಿಕೊಂಡವರು. ಮಗ ಕೊಲೆಯ ಆಪಾದನೆಯೊಂದರಲ್ಲಿ ಜೈಲಿಗೆ ಹೋಗಿ ಬಂದಿದ್ದಾನೆ. ಇನ್ನು ಮಗಳು ಪ್ರೀತಿಸಿದ ಹಿಂದೂ ಹುಡುಗನನ್ನು ಮದುವೆಯಾಗಲು ಬಿಡಲಿಲ್ಲವೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಳು. ಜೋಗಿಗೂ ಅಧಿಕಾರದಲ್ಲಿರುವಾಗಲೇ ಭಯಾನಕವಾದ ಅಪಘಾತವಾಗಿ ಕಾಲು ಕಳಕೊಂಡು ತಿರುಗಾಡಬೇಕಾಗಿ ಬಂತು. ಅಧಿಕಾರ ಹೋಯ್ತು. ವಿಶೇಷ ತಂತ್ರಜ್ಞಾನ ಬಳಸಿ ನಿಲ್ಲುವಂತಾದಾಗ ಛತ್ತೀಸ್‌ಗಡದ ಚುನಾವಣೆ ಬಂತು.
ಇಲ್ಲಿ ಕಾಂಗ್ರೆಸ್ ಗೆಲ್ಲೋದು ಖಾತ್ರಿ ಎಂಬುದು ಅವರ ಲೆಕ್ಕಾಚಾರವಾಗಿತ್ತು. ಆದರೆ ಮುಖ್ಯಮಂತ್ರಿಯ ಆಕಾಂಕ್ಷೆಗಳು ಅನೇಕ. ಥೇಟು ಕರ್ನಾಟಕದ್ದೆ ಕಥೆ. ಒಂದೆಡೆ ನಂದ ಕುಮಾರ್ ಪಟೇಲ್, ಮತ್ತೊಂದೆಡೆ ಬುಡಕಟ್ಟು ಜನಾಂಗದವರ ಪ್ರಭಾವೀ ನಾಯಕ ಕರ್ಮಾ. ಅತ್ತ ದೆಹಲಿಯಲ್ಲಿ ಕುಳಿತು ಜೋಗಿಯ ವಿರುದ್ಧ ಪಿತೂರಿ ನಡೆಸುತ್ತಿದ್ದ ವಿ.ಸಿ.ಶುಕ್ಲಾ, ಇಷ್ಟು ಜನ ದಾರಿ ಬಿಡಬೇಕಲ್ಲ? ಹಾಗೆ ದಾರಿ ಬಿಡಲೆಂದೇ ಪರಿವರ್ತನಾ ರ‍್ಯಾಲಿಯ ದಾರಿಯನ್ನು ಬದಲಾಯಿಸಿದ್ದು.
ಹೌದು. ರ‍್ಯಾಲಿ ಸುಕ್ಮಾದಿಂದ ದಾಂತೆವಾಡದ ಮೂಲಕ ಜಬಲ್‌ಪುರಕ್ಕೆ ತೆರಳಬೇಕಿತ್ತು. ಕೊನೆಯ ಕ್ಷಣದಲ್ಲಿ ಅದನ್ನು ಸುಕ್ಮಾದಿಂದ ದರ್ಭಾಘಾಟಿಯ ಮೂಲಕ ಜಬಲ್‌ಪುರಕ್ಕೆ ಹೋಗುವಂತೆ ಮಾಡಲಾಯಿತು. ಈ ರಸ್ತೆ ಓರೆಕೋರೆಯಷ್ಟೆ ಅಲ್ಲ, ಸುತ್ತಲೂ ಹರಡಿನಿಂತ ಬೆಟ್ಟಗಳು ಬೇರೆ. ಒಂದು ರೀತಿ ಆಕ್ರಮಣಕ್ಕೆ ಹೇಳಿ ಮಾಡಿಸಿದ ಜಾಗ. ಮೊದಲೇ ನಿಶ್ಚಿತವಲ್ಲದ ರಸ್ತೆ. ಹೀಗಾಗಿ ದಾರಿಯಲ್ಲಿ ಸ್ವಾಗತ ಕಮಾನುಗಳಾಗಲೀ, ಕಾರ‍್ಯಕರ್ತರಾಗಲೀ ಇರಲಿಲ್ಲ. ಅಷ್ಟೂ ಜನ ನಕ್ಸಲರಿಗೆ ಸುಲಭದ ತುತ್ತಾಗಿಬಿಟ್ಟರು. ಕರ್ಮಾ ನಕ್ಸಲ್ ವಿರೋಧಿಯಾಗಿದ್ದ ಎಂಬ ಕಾರಣಕ್ಕೆ ಕೊಂದರು, ಸರಿ.. ಆದರೆ ನಂದಕುಮಾರ್ ಪಟೇಲರು ಹಾಗಿರಲಿಲ್ಲ. ಅವರು ನಕ್ಸಲರ ಪರವೇ ಮಾತನಾಡಿದ್ದರು. ಅವರಿಗೆ ಪೂರಕವಾಗುವ ಯೋಜನೆಗಳನ್ನು ತರಬೇಕೆಂದು ಆಗ್ರಹಪಡಿಸುತ್ತಿದ್ದರು. ಅಂಥವರನ್ನು ಕಾಡಿನೊಳಕ್ಕೆ ಒಯ್ದು, ಮೀನ ಮೇಷ ಎಣಿಸಿ ಮಗನನ್ನೂ ಸೇರಿಸಿ ಕೊಂದಿದ್ದಾರೆ ಎಂದರೆ ಹೊರಗಿನ ಒತ್ತಡ ಅದೆಷ್ಟು ಕೆಲಸ ಮಾಡಿರಬೇಕು! ೨೦೧೧ರಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಅವರು ಮಾಡಿದ ಕೆಲಸ ಸದ್ಯದ ಮುಖ್ಯಮಂತ್ರಿ ರಮಣ ಸಿಂಗರಿಗೆ ಸಾಕಷ್ಟು ತೊಂದರೆ ತಂದೊಡ್ಡಿತ್ತು. ಹೀಗಾಗಿ ಕಾಂಗ್ರೆಸ್ಸು ಗೆದ್ದರೆ ಅವರು ಮುಖ್ಯಮಂತ್ರಿಯಾಗುವುದು ಶತಃಸಿದ್ಧವಾಗಿತ್ತು. ಇನ್ನು, ಮಾಜಿ ಕೇಂದ್ರ ಮಂತ್ರಿ ವಿ.ಸಿ.ಶುಕ್ಲಾರ ಚಾಲಕ ತೆಲುಗು ಮಾತಾಡಿ ಆಂಧ್ರದವರು ತಾವೆಂದು ನಂಬಿಸಿ ಅವರನ್ನು ಉಳಿಸಿದ್ದಕ್ಕೆ ಬಚಾವು.
ಎಲ್ಲರ ಅನುಮಾನ ಗಾಢವಾಗಲು ಕಾರಣ ಒಬ್ಬ ಕಾಂಗ್ರೆಸ್ ಶಾಸಕ ಹಿಂದಿನ ಕಾರ್ಯಕ್ರಮ ಮುಗಿಸಿಕೊಂಡು ತರಾತುರಿಯಲ್ಲಿ ಬೈಕನ್ನೇರಿ ಹೊರಟಿದ್ದು; ಜೋಗಿ ಹೆಲಿಕಾಪ್ಟರನ್ನೇರಿ ಕಣ್ಮರೆಯಾಗಿದ್ದು! ನಕ್ಸಲ್ ದಾಳಿಯ ಅನಂತರ ಟೆಲಿಗ್ರಾಫ್‌ಗೆ ನೀಡಿದ ಸಂದರ್ಶನದಲ್ಲಿ ಜೋಗಿ, ‘ಭಗವಂತ ಒಂಬತ್ತು ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ತನ್ನನ್ನು ಹತ್ತಿರ ತಂದಿದ್ದಾನೆ’ ಎಂದು ಹೇಳಿದ್ದೂ ಚರ್ಚೆಗೆ ಗ್ರಾಸವಾಗಿತ್ತು. ಎಲ್ಲ ಬಿಡಿ. ಈ ದಾಳಿಯ ಹಿಂದೆ ಬಿದ್ದ ಎನ್‌ಐಎ ಮೊದಲ ದಿನವೇ ಇದು ಸರಳ ದಾಳಿಯಲ್ಲ ಎಂದುಬಿಟ್ಟಿತು. ನಾಲ್ಕು ದಿನಗಳ ಹಿಂದೆ ನಕ್ಸಲರಿಗೆ ಮಾಹಿತಿ ನೀಡುತ್ತಿದ್ದವರು ನಾಲ್ವರು ಕಾಂಗ್ರೆಸ್ಸಿಗರೆಂದು ಸುದ್ದಿ ಸ್ಫೋಟಿಸಿ ಗಾಬರಿ ಹುಟ್ಟಿಸಿತ್ತು. ಅಲ್ಲಿಗೆ ಊಹೆಗಳು ಅಧಿಕೃತ ರೂಪ ಪಡಕೊಂಡಿವೆ ಅಂತಾಯ್ತು. ಎಲ್ಲಕ್ಕಿಂತಲೂ ಅಚ್ಚರಿಯ ಸಂಗತಿಯೆಂದರೆ ಘಟನೆ ನಡೆದ ಸ್ಥಳದಿಂದ ಹತ್ತು ನಿಮಿಷಗಳಷ್ಟು ಅಂತರದಲ್ಲಿ ಪೊಲೀಸರು, ಸಶಸ್ತ್ರ ಮೀಸಲು ಪಡೆಯೂ ಇತ್ತು. ಅವರ‍್ಯಾರೂ ತೊಂಬತ್ತು ನಿಮಿಷಗಳ ಕಾಲ ನಕ್ಸಲರ ಅಟ್ಟಹಾಸ ಜರಗುವಾಗ ಅಲ್ಲಿಗೆ ಬರಲೇ ಇಲ್ಲ. ಹಾಗೇಕಾಯ್ತು? ನಕ್ಸಲರ ತಾಣ ಅಂದರೆ ಆ ಸ್ಥಳವನ್ನು ಹೈ ಅಲರ್ಟ್‌ನಲ್ಲಿ ಇಡಲಾಗುತ್ತೆ. ಹೀಗಿದ್ದಾಗಿಯೂ ಇಷ್ಟೊಂದು ಬೇಜವಾಬ್ದಾರಿ ಏಕಿತ್ತು?
ಅನೇಕ ನಿಗೂಢ ಸಾವುಗಳಂತೆ ಈ ಸಾವುಗಳೂ ಕಡತ ಸೇರಿಬಿಡುತ್ತವೆಯಾ? ನಕ್ಸಲರ ಹತ್ಯೆಯ ಪಟ್ಟಿಗೆ ಕ್ರೂರ ಅಧ್ಯಾಯವೊಂದು ಸೇರಿ ಸುಮ್ಮನಾಗಿಬಿಡುತ್ತಾ? ಅಥವಾ ಇದರ ಹಿಂದಿರುವ ಹುನ್ನಾರ ಬಯಲಿಗೆ ಬಂದು ಇನ್ನಾದರೂ ಇಂತಹ ‘ಅಧಿಕಾರಕ್ಕಾಗಿ ಕೊಲೆಗಳು’ ನಿಲ್ಲುವವಾ? ಕಾಲವೇ ಉತ್ತರಿಸಬೇಕು.

Leave a Reply