ವಿಭಾಗಗಳು

ಸುದ್ದಿಪತ್ರ


 

ಊಹೂಂ, ಬಿಹಾರದಲ್ಲಿ ಎರಡೂ ಆಗಲಿಲ್ಲ…

ಇಷ್ಟೆಲ್ಲಾ ಮಾಹಿತಿ ದೊರೆತ ನಂತರವೂ, ಆಕ್ರಮಣದ ಅನುಮಾನಗಳು ದಟ್ಟವಿದ್ದಾಗ್ಯೂ ಸೋಟ ತಡೆಯಲಾಗದ ಸರ್ಕಾರಗಳು ಇನ್ನು ಭಯೋತ್ಪಾದಕರ ಆಕಸ್ಮಿಕ ದಾಳಿಯನ್ನು ತಡೆಗಟ್ಟುವವೇ? ಅಥವಾ ತಡೆಯಬಲ್ಲ ಸಾಮರ್ಥ್ಯವಿದ್ದಾಗ್ಯೂ ಕಣ್ಮುಚ್ಚಿ ಕುಳಿತಿತೇ ಸರ್ಕಾರ?

ದಿನ ಕಳೆದಂತೆ ನರೇಂದ್ರ ಮೋದಿ ವ್ಯಕ್ತಿತ್ವ ಕಳೆಗಟ್ಟುತ್ತಲೇ ಇದೆ. ವಿರೋಧಿಗಳೂ ತಲೆದೂಗುವಂತಹ ಸಮರ್ಥರಾಗಿ ಮೋದಿ ಅನಾವರಣಗೊಳ್ಳುತ್ತಿದ್ದಾರೆ. ಮೊನ್ನೆ ಬಿಹಾರದಲ್ಲಿ ಒಂದರಮೇಲೊಂದು ಬಾಂಬುಗಳು ಸ್ಫೋಟಗೊಂಡವಲ್ಲ ಅವತ್ತು ಮೋದಿಯ ಭಾಷಣ ಕೇಳಿದವರಿಗೆ ಕಣ್ತುಂಬಿ ಬಂದಿತ್ತು. ಖಡಕ್ಕು ಮಾತಿನ ಮೋದಿಯೂ ಅವತ್ತು ಭಾವುಕರಾದಂತೆ ಕಾಣುತ್ತಿತ್ತು. ವಂದೇಮಾತರಂ ಘೋಷಣೆಯ ಬಳಿಕವೂ ಮೈಕಿನ ಬಳಿ ಸಾಗಿ ಸಮಾಧಾನದ ಮಾತುಗಳನ್ನಾಡಿದ್ದು ಈ ಹಿಂದೆ ನಡೆದೇ ಇರಲಿಲ್ಲ. ಸೇರಿದ್ದ ಲಕ್ಷಾಂತರ ಮಂದಿಯನ್ನು ಉದ್ರೇಕಗೊಳ್ಳುವಂತೆ ಮಾಡಿ ಬಿಹಾರವನ್ನೇ ಉರಿಯುವ ಕುಂಡವನ್ನಾಗಿ ಪರಿವರ್ತಿಸುವುದು ಅವತ್ತಿನ ಮಟ್ಟಿಗೆ ಬಲುದೊಡ್ಡ ಸಂಗತಿಯಾಗಿರಲಿಲ್ಲ. ಅಷ್ಟನ್ನೂ ಮಾಡದಿದ್ದವ ರಾಜಕಾರಣಿ ಹೇಗಾಗುತ್ತಾನೆ ಹೇಳಿ! ಎಂದೋ ಮುಗಿದ ದಂಗೆಗಳನ್ನು ಕೆದಕಿಯೇ ಬೇಳೆ ಬೇಯಿಸಿಕೊಳ್ಳುತ್ತಿರುವ ನಾಯಕರು ಇಂತಹ ಅವಕಾಶವನ್ನು ಬಿಟ್ಟುಕೊಡುತ್ತಾರೇನು?modi1 ಆದರೆ ಮೋದಿ ಕ್ಷುದ್ರ ರಾಜಕಾರಣಿಯಂತೆ ವ್ಯವಹರಿಸಲಿಲ್ಲ; ಮುತ್ಸದ್ಧಿಯಾಗಿ ನಿಂತರು. ಶಾಂತಿಯ ಸಂದೇಶವನ್ನು ಜನರಿಗೆ ನೀಡುವ ಮೂಲಕ ತಾನೆಂಥ ಕನಸು ಕಾಣುತ್ತಿರುವೆನೆಂದು ಸಾಬೀತುಪಡಿಸಿದರು. ಹೌದು, ಅನುಮಾನವೇ ಇಲ್ಲ. ಭಾರತಕ್ಕಿಂದು ಬೇಕಿರುವುದು ಇಂಥದ್ದೇ ನಾಯಕ.
ಅದನ್ನು ಪಕ್ಕಕ್ಕಿಡಿ. ಈ ಇಡಿಯ ಪ್ರಕರಣದ ಹಿಂದಿನ ಸೂತ್ರದ ಎಳೆಗಳ ಜಾಡನ್ನು ಒಮ್ಮೆ ಗಮನಿಸಿ. ಘಟನೆಯ ನಂತರ ಗುಜರಾತ್ ಪೊಲೀಸರು ಬಿಹಾರ ಪೊಲೀಸರ ವಿರುದ್ಧ ಗರಂ ಆಗಿಬಿಟ್ಟರಲ್ಲ; ಆಗ ಅಲ್ಲಿನ ಪೊಲೀಸರೂ ಅಷ್ಟೇ ಕೋಪದಿಂದ ತಿರುಗಿಬಿದ್ದರು. “ಸಿಡಿದ ಬಾಂಬ್‌ಗಳೆಲ್ಲ ಮೋದಿಯ ಕಾರ್ಯಕ್ರಮಕ್ಕೆ ಮುನ್ನವೇ ಸಿಡಿದಿದ್ದವು, ಮತ್ತೇಕೆ ಗಲಾಟೆ?” ಎಂದು ಪ್ರಶ್ನಿಸಿದರು. ಅಷ್ಟೇ ಅಲ್ಲ. ಮೋದಿ ವಿಮಾನದಿಂದ ಇಳಿದೊಡನೇ ಬಿಹಾರದ ಪ್ರಮುಖ ಪೊಲೀಸರು ಮೋದಿಯ ಬಳಿ ಸಾರಿ ವಿಚಾರ ತಿಳಿಸಿ ರ‍್ಯಾಲಿಗೆ ಹೋಗದೇ ಮರಳಿದರೊಳಿತು ಎಂದೂ ಎಚ್ಚರಿಸಿದ್ದರು. ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಮೋದಿ ರ‍್ಯಾಲಿಗೆ ಹೋಗಿಯೇ ಹೋದರು; ಎಚ್ಚರಿಕೆಯಿಂದ ಮಾತನಾಡಿದರು. ಈ ಘಟನೆಗಳ ನಡುವೆಯೂ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಜನರ ಪ್ರೀತಿಗೆ ಭಾವುಕರಾಗಿ “ಬಡ್ಡಿ ಸಮೇತ ನಿಮ್ಮ ಪ್ರೀತಿ ತೀರಿಸುವೆ” ಎಂದರು. ಬಹುಶಃ ಬಿಹಾರದ ಮಂತ್ರಿಗಳ, ಪೊಲೀಸರ ಯೋಜನೆಗಳೆಲ್ಲ ತಲೆಕೆಳಗಾಗಿದ್ದವು.
ರ‍್ಯಾಲಿಗೆ ಬರದೆ ಮೋದಿ ಮರಳಿದ್ದರೆ “ಹೆದರುಪುಕ್ಕಲ” ಎಂದು ಜರಿಯಬಹುದಿತ್ತು; ಬಂದ ಮೇಲೆ ಮೋದಿ ವ್ಯಗ್ರ ಮಾತುಗಳನ್ನಾಡಿ ಜನ ದಂಗೆಯೆದ್ದಿದ್ದರೆ ಹೊಸದೊಂದಷ್ಟು ಆರೋಪ ಮಾಡಿ ಅಧಿಕಾರದಿಂದ ದೂರ ಸರಿಸಬಹುದಿತ್ತು. ಊಹೂಂ ಎರಡೂ ಆಗಲಿಲ್ಲ. ನಿತೀಶ್ ಕುಮಾರ್ ಕುಪಿತರಾಗಿ ಕೈ ಚೆಲ್ಲಿದರು. ನಮಗೆ ಗುಪ್ತಚರ ವಿಭಾಗದ ಲಿಖಿತ ಮಾಹಿತಿ ಇರಲಿಲ್ಲವೆಂದರು; ಅತ್ತ ಕೇಂದ್ರ ತಾನು ನೀಡಿದ್ದ ಎಚ್ಚರಿಕೆಯನ್ನು ರಾಜ್ಯ ಗಂಭೀರವಾಗಿ ಸ್ವೀಕರಿಸಿಯೇ ಇಲ್ಲವೆಂದು ಆರೋಪ ಮಾಡಿತು. ಒಟ್ಟಾರೆ ಇಂಡಿಯನ್ ಮುಜಾಹಿದಿನ್ ೧೮ ಬಾಂಬ್‌ಗಳನ್ನು ಪಟನಾದಾದ್ಯಂತ ಸಿಡಿಸಿ ದಾಂಧಲೆ ಮಾಡುವ ಯೋಜನೆಯನ್ನಂತೂ ರೂಪಿಸಿದ ಸುದ್ದಿ ಬಯಲಿಗೆ ಬಂತು. ನಿತೀಶ್ ದೇಶದ ಮುಂದೆ ಬೆತ್ತಲಾಗಿ ನಿಂತರು.
ನರೇಂದ್ರ ಮೋದಿಯವರನ್ನು ಕೊಲ್ಲಬೇಕೆಂಬ ಪ್ರಯತ್ನ ಇಂದು ನಿನ್ನೆಯದಲ್ಲ. ೨೦೦೨ರ ದಂಗೆಗಳ ನಂತರ ಇಡಿಯ ಜಗತ್ತಿನ ಕಣ್ಣು ಕುಕ್ಕುವ ವ್ಯಕ್ತಿಯಾಗಿ ಮೋದಿ ರೂಪುಗೊಂಡಿದ್ದಾರೆ. ಇಶ್ರತ್ ಜಹಾನ್‌ರಂಥವರು ಗುಜರಾತಿಗೇ ಬಂದು ಮೋದಿಯವರನ್ನು ಕೊಲ್ಲುವ ಯೋಜನೆ ರೂಪಿಸಿದರೆ, ಇಂಡಿಯನ್ ಮುಜಾಹಿದಿನ್ ಬಿಹಾರಕ್ಕೆ ಬಂದ ಮೋದಿಯವರನ್ನು ಬಿಡುತ್ತೇನು? ಈ ಹಿನ್ನೆಲೆಯಲ್ಲಿಯೇ ಅವರಿಗೆ ವಿಶೇಷ ರಕ್ಷಣೆ ನೀಡಬೇಕೆಂದು ಬಿಜೆಪಿಯ ಪ್ರಮುಖ ನಾಯಕರು ಪ್ರಧಾನಿಯನ್ನು ಒತ್ತಾಯಿಸಿದ್ದರು. ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಆಗೆಲ್ಲ ಉಡಾ-ಯ ಮಾತನ್ನಾಡಿದ್ದರು.
ಇಷ್ಟಕ್ಕೂ ನಮಗೆಲ್ಲ ಗೊತ್ತಿರುವಂತೆ ಮೋದಿಗಿರುವ ಅತ್ಯಂತ ಉನ್ನತ ಮಟ್ಟದ ರಕ್ಷಣೆ ಝಡ್ ಪ್ಲಸ್. ಅದಕ್ಕಿಂತಲೂ ವಿಶೇಷವಾದ ರಕ್ಷಣಾ ವ್ಯವಸ್ಥೆ ಯಾವುದಾದರೂ ಇದೆಯೇನು? ಖಂಡಿತ ಇದೆ. ಅದನ್ನು ವಿಶೇಷ ಸುರಕ್ಷಾ ದಳ ಅಂತಾರೆ. ೧೯೮೫ರಲ್ಲಿ ಇಂದಿರಾ ಗಾಂಧಿಯ ಹತ್ಯೆಯ ನಂತರ ರೂಪುಗೊಂಡ ಮೂರು ಸಾವಿರ ಸೈನಿಕರ ಬಲಾಢ್ಯ ತಂಡವಿದು. ದೇಶದ ಪ್ರಮುಖ ವ್ಯಕ್ತಿಗಳ ರಕ್ಷಣೆಯೇ ಅವರ ಉದ್ದೇಶ. ಈ ವಿವಿಐಪಿ ರಸ್ತೆಯಲ್ಲಿರಲಿ, ಗಾಳಿಯಲ್ಲಿ ತೇಲುತ್ತಿರಲಿ, ನೀರಿನ ಮೇಲೆಯೇ ಇರಲಿ; ಸಾರ್ವಜನಿಕ ಸಮಾರಂಭದಲ್ಲಿರಲಿ, ಮನೆಯಲ್ಲಿರಲಿ ರಕ್ಷಣೆ ನೀಡುವುದು ಇವರ ಕರ್ತವ್ಯ. ಇದಕ್ಕಾಗಿಯೇ ಇವರಿಗೆ ವಿಶೇಷ ತರಬೇತಿ ನೀಡಲಾಗಿದೆ. ಅನೇಕ ಬಾರಿ ಇವರು ತಮ್ಮದೇ ಆದ ಗೂಢಚಾರ ಪಡೆಯನ್ನು ಬಳಸಿಕೊಂಡು ನಾಯಕನ ರಕ್ಷಣೆ ಮಾಡುತ್ತಾರೆ. ಈ ಪರಿಯ ಉನ್ನತ ಮಟ್ಟದ ರಕ್ಷಣೆ ಪ್ರಕಾರ ರಾಷ್ಟ್ರಪತಿ, ಪ್ರಧಾನಮಂತ್ರಿಗೆ ಇರುತ್ತದೆ. ಕಾಲಕ್ರಮದಲ್ಲಿ ನಿಯಮಕ್ಕೆ ತಿದ್ದುಪಡಿ ತಂದು ಈ ರಕ್ಷಣೆಯನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕೊನೆಗೆ ಪ್ರಿಯಾಂಕಾ ವಾದ್ರಾರಿಗೂ ವಿಸ್ತರಿಸಲಾಯಿತು. ಎಂದಿನಂತೆ ಈ ವಿಸ್ತರಣೆಗೂ ಕಾರಣ ಒಂದೇ. ನೆಹರೂ ಪರಿವಾರ! ಸೋನಿಯಾರಿಗೆ ಈ ರಕ್ಷಣೆಯನ್ನು ವಿಸ್ತರಿಸುವ ಚರ್ಚೆ ಬಂದಾಗ ಅವರು ಜಗತ್ತಿನ ಅತ್ಯಂತ ಪ್ರಭಾವಿ ವ್ಯಕ್ತಿ, ಅವರಿಗೆ ಬೆದರಿಕೆ ಇದೆ ಎನ್ನುವುದನ್ನು ಮುಂದಿಡಲಾಯ್ತು. ಇವರ ಮಕ್ಕಳೆಂಬ ಕಾರಣಕ್ಕೆ ರಾಹುಲ್, ಪ್ರಿಯಾಂಕಗೂ ವಿಸ್ತಾರಗೊಂಡಿತು. ಇದರ ಲಾಭ ರಾಬರ್ಟ್ ವಾದ್ರಾಗೆ ದಕ್ಕುತ್ತಿದೆ. ವಾದ್ರಾ ಈ ದೇಶದ ಅತ್ಯಂತ ಪ್ರಮುಖ ವ್ಯಕ್ತಿಯೆಂದು ಗುರುತಿಸಲ್ಪಟ್ಟಿದ್ದಾರಲ್ಲದೇ ರೈಲು ಮತ್ತು ವಿಮಾನ ನಿಲ್ದಾಣಗಳಲ್ಲಿ ಯಾರೂ ತಪಾಸಣೆ ಮಾಡುವಂತಿಲ್ಲ ಎಂಬ ಗೌರವವನ್ನೂ ಅನುಭವಿಸುತ್ತಿದ್ದಾರೆ. ಹೀಗೇಕೆಂದು ಮಾಹಿತಿ ಹಕ್ಕಿನಡಿ ಕೇಳಿದ್ದಕ್ಕೆ ಗೃಹ ಸಚಿವಾಲಯ ವಿಶೇಷ ರಕ್ಷಣೆ ಪಡೆಯುತ್ತಿರುವ ಪ್ರಿಯಾಂಕಾ ವಾದ್ರಾರ ಗಂಡನೆಂಬ ಕಾರಣಕ್ಕೆಂದು ನಿರ್ಲಜ್ಜತನದ ಉತ್ತರ ಕೊಟ್ಟಿದೆ.
ಮೋದಿ ವಿಚಾರಕ್ಕೆ ಬಂದಾಗ ಶಿಂಧೆಯವರು ಕಾನೂನಿನ ತೊಡಕುಗಳ ಮಾತನಾಡುತ್ತಾರೆ. ಆದರೆ, ಸೋನಿಯಾ, ರಾಹುಲ್, ಪ್ರಿಯಾಂಕಾ ಕೊನೆಗೆ ರಾಬರ್ಟ್ ವಾದ್ರಾಗೂ ದೇಶದ ಉನ್ನತ ರಕ್ಷಣೆ ಕೊಡಿಸುವುದರಲ್ಲಿ ಮುಂದೆ ನಿಲ್ಲುತ್ತಾರೆ.
ಇಂದು ದೇಶದಲ್ಲಿ ಸುಮಾರು ೩೮೦ ಜನರಿಗೆ ಕೇಂದ್ರ ಸರ್ಕಾರದ ಕಡೆಯಿಂದ ರಕ್ಷಣೆ ಒದಗಿಸಲಾಗುತ್ತಿದೆ. ಹೆಚ್ಚು ಕಡಿಮೆ ೨೫೦೦ ಜನ ವಿವಿಧ ವರ್ಗದ ರಕ್ಷಣಾ ಸಿಬ್ಬಂದಿ ಈ ಕೆಲಸಕ್ಕೆಂದೇ ನಿಯೋಜಿತರಾಗಿದ್ದಾರೆ. ವರ್ಷಕ್ಕೆ ಅಂದಾಜು ೩೧೪ ಕೋಟಿ ರೂಪಾಯಿಗಳನ್ನು ಪ್ರಮುಖ ವ್ಯಕ್ತಿಗಳ ರಕ್ಷಣೆಗೆಂದು ವಿನಿಯೋಗಿಸುತ್ತಿದ್ದೇವೆ. ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಒಬ್ಬರಿಗೇ ೪ ಬುಲೆಟ್ ಪ್ರೂಫ್‌ ಕಾರುಗಳನ್ನೊಳಗೊಂಡ ೪೦ ಕಾರುಗಳ ರಕ್ಷಣೆಯಿತ್ತು! ಸುಮಾರು ೪೦೦ ಜನ ರಕ್ಷಣಾ ಪೇದೆಗಳು ಅವರನ್ನು ಸದಾ ಸುತ್ತುವರೆದಿರುತ್ತಿದ್ದರು. ಇತ್ತೀಚೆಗೆ ೧೦ ಕಾರು ಮತ್ತು ೪೦ ಪೇದೆಗಳ ಹಂತಕ್ಕೆ ಇಳಿಸಲಾಗಿದೆಯಾದರೂ ಇದೇನೂ ಕಡಿಮೆ ಸಂಖ್ಯೆಯಲ್ಲ. ಇದಕ್ಕೆ ವಿಪರೀತ ದಿಕ್ಕಿನಲ್ಲಿ ಒಮ್ಮೆ ನೋಡಿ. ಈ ದೇಶದ ಒಂದು ಲಕ್ಷದಷ್ಟು ಜನರನ್ನು ರಕ್ಷಿಸಲು ೧೩೭ಪೊಲೀಸರು ಮಾತ್ರ! ಕಳೆದ ಅನೇಕ ವರ್ಷಗಳಿಂದ ಕೊರತೆ ಇರುವ ಶೇ.೨೨ರಷ್ಟು ಪೊಲೀಸರನ್ನು ತುಂಬಿಸಿಕೊಳ್ಳಲು ಹಣಕಾಸಿನ ಕೊರತೆ ಎದುರಿಸುತ್ತಿರುವ ಸರ್ಕಾರ ವಿಶೇಷ ವ್ಯಕ್ತಿಗಳ ಭದ್ರತೆಗೆಂದು ಅಪಾರ ಹಣ ವೆಚ್ಚ ಮಾಡುತ್ತಿರುವುದು ಸೋಜಿಗ. ಇದಕ್ಕೆ ಪೂರಕವಾಗಿ ಅಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್‌ಗಳನ್ನು ವಿವಿಐಪಿಗಳ ರಕ್ಷಣೆಗೆಂದೇ ಕೊಂಡುಕೊಳ್ಳಲು ಸರ್ಕಾರ ಮುಂದಾಗಿತ್ತಲ್ಲ ಎಂತಹ ವಿಪರ್ಯಾಸ ನೋಡಿ!
ನನಗೆ ಬಹಳ ಹೊಟ್ಟೆಯುರಿಯುವ ಸಂಗತಿ ಒಂದಿದೆ. ಅದು ಈ ನಾಯಕರ ರಕ್ಷಣೆಗೆಂದು ನಿಲ್ಲುವ ಗಡಿ ಕಾಯುವ ಯೋಧರ ಕುರಿತಾದಂಥದ್ದು. ಝಡ್ ಪ್ಲಸ್ ರಕ್ಷಣೆಯ ಜವಾಬ್ದಾರಿ ಬ್ಲ್ಯಾಕ್ ಕಮಾಂಡೋಗಳದ್ದು. ಈ ೩೬ ಬ್ಲ್ಯಾಕ್ ಕ್ಯಾಟ್ ಕಮಾಂಡೋಗಳು ಒಬ್ಬ ವ್ಯಕ್ತಿಯ ಸುತ್ತ ಸುತ್ತುತ್ತಿರುವುದನ್ನು ಕಂಡಾಗ ಸಂಕಟವಾಗುತ್ತದೆ. ಹ್ಞಾಂ. ಆ ವ್ಯಕ್ತಿ ದೇಶದ ಹಿತಚಿಂತನೆಯಲ್ಲಿ ಮೈ ಮರೆತಿದ್ದಾನೆಂದರೆ ಅಂಥವನನ್ನು ರಕ್ಷಿಸುವುದೂ ಹೆಮ್ಮೆಯ ಸಂಗತಿ. ಆದರೆ, ಹಾಗಿಲ್ಲದ ನಾಯಕರನ್ನೂ ರಕ್ಷಿಸಬೇಕೆಂದರೆ ಅದೆಂಥ ದುರ್ದೈವ ಹೇಳಿ. ಒಬ್ಬ ಕಮಾಂಡೋನ ಸಂಬಳ, ತರಬೇತಿ, ಊಟ ತಿಂಡಿ ಸೇರಿ ತಿಂಗಳಿಗೆ ಒಂದು ಲಕ್ಷ ಖರ್ಚೆಂದು ಅಂದಾಜಿಸಿದರೂ ಝಡ್ ಪ್ಲಸ್‌ನ ತಿಂಗಳ ತಿಂಗಳ ಖರ್ಚು ಕನಿಷ್ಠ ೩೬ ಲಕ್ಷ ರೂ.! ನಾವು ಕಟ್ಟುವ ತೆರಿಗೆ ಈ ರೀತಿಯಲ್ಲಿ ಪೋಲಾಗುವುದನ್ನು ಕೇಳಿದಾಗಲೇ ತೆರಿಗೆ ವಂಚಿಸಬೇಕೆನ್ನಿಸೋದು.
ಬಿಡಿ…. ದುರ್ದೈವದ ಸಂಗತಿಯೆಂದರೆ ಇಷ್ಟೆಲ್ಲಾ ಖರ್ಚು ಮಾಡಿದ ನಂತರವೂ, ಇಷ್ಟೆಲ್ಲಾ ಮಾಹಿತಿ ದೊರೆತ ನಂತರವೂ, ಆಕ್ರಮಣದ ಅನುಮಾನಗಳು ದಟ್ಟವಿದ್ದಾಗ್ಯೂ ಸೋಟ ತಡೆಯಲಾಗದ ಸರ್ಕಾರಗಳು ಇನ್ನು ಭಯೋತ್ಪಾದಕರ ಆಕಸ್ಮಿಕ ದಾಳಿಯನ್ನು ತಡೆಗಟ್ಟುವರೇ? ಅಥವಾ ತಡೆಯಬಲ್ಲ ಸಾಮರ್ಥ್ಯವಿದ್ದಾಗ್ಯೂ ಕಣ್ಮುಚ್ಚಿ ಕುಳಿತಿತೇ ಸರ್ಕಾರ? ಮೋದಿ ಎದುರಾಳಿಗಳಲ್ಲಿ ಅಷ್ಟೊಂದು ಭೀತಿ ಹುಟ್ಟಿಸಿಬಿಟ್ಟಿದ್ದಾರಾ? ನಿತೀಶ್ ಕುಮಾರ್ ಹೆದರಿಕೆಯಿಂದ ಬಡಬಡಿಸುತ್ತಿದ್ದಾರಾ? ಎನ್‌ಡಿಎ ಬಿಟ್ಟು ಬಂದ ಪಾಪಪ್ರಜ್ಞೆ ಅವರನ್ನು ಕಾಡುತ್ತಿದೆಯಾ? ಪ್ರಶ್ನೆಗಳೇ ಪ್ರಶ್ನೆಗಳು!
ಅಂದಹಾಗೆ, ಮತ್ತೊಂದು ಪ್ರಶ್ನೆ ಇದೆ. ಅಕಸ್ಮಾತ್ ಅವತ್ತು ರ‍್ಯಾಲಿ ನರೇಂದ್ರ ಮೋದಿಯದ್ದಲ್ಲದೇ, ರಾಹುಲ್ ಗಾಂಧಿಯದ್ದಾಗಿಬಿಟ್ಟಿದ್ದರೆ?
ಇಡಿಯ ಕಾಂಗ್ರೆಸ್ ನಡುರಾತ್ರಿಯಲ್ಲಿ ದೆವ್ವವನ್ನು ಕಂಡ ಪುಟ್ಟ ಮಗುವಿನಂತೆ ಕಿಟಾರನೆ ಕಿರುಚಿಕೊಂಡು ಬಿಡುತ್ತಿತ್ತು. ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ, ರಸ್ತೆ ತಡೆ ಮಾಡಿ ರಾಡಿ ಎಬ್ಬಿಸಿರುತ್ತಿತ್ತು. ಮಾಧ್ಯಮಗಳು ಬಾಯಿ ಬಡಿದುಕೊಂಡು ಕಣ್ಣೀರಿಡುತ್ತಿದ್ದವು. ಅಜ್ಜಿ, ಅಪ್ಪನ ನಂತರ ಈಗ ಮಗ ಎಂಬಂತಹ ಭಾವನಾತ್ಮಕ ಅಂಶಗಳಿಂದ ಜನರ ಹೃದಯತಂತುವನ್ನು ಮೀಟಿ ಬಿಡುತ್ತಿದ್ದರು. ಬಿಹಾರದಲ್ಲಿ ಪ್ರತಿಕ್ರಿಯಾತ್ಮಕ ದಂಗೆಗಳನ್ನು ನಿಯಂತ್ರಿಸಲಾಗಿದೇ ನಿತೀಶ್ ಕುಮಾರ್ ಕೈ ಚೆಲ್ಲಿ ಬಿಡುತ್ತಿದ್ದರು!
ನರೇಂದ್ರ ಮೋದಿಯದ್ದು ಸಿಂಹದ ರಾಜಕಾರಣ. ಸಿಂಹ ತನ್ನ ಸಾಮರ್ಥ್ಯದಿಂದಲೇ ಬೇಟೆಯಾಡುತ್ತದೆ. ಹೊಟ್ಟೆ ತುಂಬಿದ ಮೇಲೆ ಅದಕ್ಕೆ ಶತ್ರುಗಳೇ ಇಲ್ಲ. ನರಿ ಹಾಗಲ್ಲ. ಹೊಂಚು ಹಾಕುತ್ತದೆ. ಸಿಂಹ ತಿಂದು ಬಿಟ್ಟದ್ದನ್ನೂ ನೆಕ್ಕಿ ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಆನಂತರವೂ ಮತ್ತೆ ತನ್ನ ಬುದ್ಧಿಯನ್ನು ಪ್ರಯೋಗಿಸುತ್ತಲೇ ಇರುತ್ತದೆ. ಅದಕ್ಕೇ ಸಿಂಹವನ್ನೇ ಮೃಗರಾಜ ಎಂದಿದ್ದು; ನರಿಯನ್ನಲ್ಲ!

Leave a Reply