ವಿಭಾಗಗಳು

ಸುದ್ದಿಪತ್ರ


 

ಎರಡು ರಾಷ್ಟ್ರೀಯ ಪಕ್ಷಗಳ ತುಲನೆ

‘ಶಾಸಕರಾಗಿ ಆಯ್ಕೆಯಾಗೋದು ಮೊದಲನೆ ಬಾರಿ ಅನುಭವ ಪಡೆಯಲಿಕ್ಕೆ, ಎರಡನೆಯ ಬಾರಿ ಕೆಲಸ ಮಾಡಲಿಕ್ಕೆ, ಮೂರನೇ ಬಾರಿಗೆ ಸಾಕು; ತರುಣರಿಗೆ ದಾರಿ ಬಿಡಿ’ ಎನ್ನುವ ಪ್ರಭಾಕರ ಭಟ್ಟರ ಮಾತುಗಳು ಬಿಜೆಪಿಗೇನು, ಎಲ್ಲ ಪಕ್ಷಗಳಿಗೂ ಮಾರ್ಗದರ್ಶಿಯೇ. ಇದು ಗೊತ್ತಿದ್ದೂ ಧಿಕ್ಕರಿಸಿ ಚುನಾವಣೆಗೆ ನಿಂತು ಸೋತ ಯೋಗೀಶ ಭಟ್ಟರ ಸೋಲಿನ ಹೊಣೆ ಯಾರದ್ದು?

ಬ್ರಿಟಿಷರ ಕೊನೆಯ ವೈಸ್‌ರಾಯ್ ಮೌಂಟ್ ಬ್ಯಾಟನ್. ಹಾಗಾದರೆ ಭಾರತದ ಮೊದಲ ವೈಸ್‌ರಾಯ್ ಯಾರು ಗೊತ್ತ? ಮತ್ಯಾರು? ಈ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ!
ನೆಹರೂ ಅತ್ಯಂತ ಶ್ರದ್ಧೆಯಿಂದ ಆಂಗ್ಲರ ರಾಜನೀತಿಯನ್ನು ಅರಿತುಕೊಂಡರು. ಅದನ್ನು ಹಂತಹಂತವಾಗಿ ಪ್ರಯೋಗಿಸಲಾರಂಭಿಸಿದರು. ಅಧಿಕಾರ ಕೈಗೆ ದಕ್ಕುವ ಮುನ್ನಿನ ಚುನಾವಣೆಗಳಲ್ಲಿ ತಮ್ಮ ಚಾಕಚಕ್ಯತೆಯನ್ನು, ವಿಭಜಿಸಿ ಗೆಲ್ಲುವ ತಂತ್ರವನ್ನು ಚೆನ್ನಾಗಿಯೇ ಬಳಸಿದರು. ಒಂದೆಡೆ ಮುಸಲ್ಮಾನರನ್ನು ಓಲೈಸಿ ಗೆಲ್ಲುವುದು, ಮತ್ತೊಂದೆಡೆ ಪಟೇಲರನ್ನು ಕಡು ಹಿಂದೂವಾಗಿ ಬಿಂಬಿಸಿ ಹಿಂದೂಗಳ ಮತವನ್ನು ಸೆಳೆದುಕೊಳ್ಳುವ ತಂತ್ರಗಾರಿಕೆ ಯಶಸ್ವಿಯಾಯ್ತು. ನೆಹರೂ ಪಕ್ಕಾ ಇಂಗ್ಲೀಶ್ ಬಾಬುವಾಗಿಬಿಟ್ಟರು. ಆಗಲೇ ಗಾಂಧೀಜಿ ಗಾಬರಿಯಿಂದ ಹೇಳಿದ್ದು, ‘ದೇಶ ವಿಭಜನೆಗೊಂಡು ಸ್ವಾತಂತ್ರ್ಯ ಬಂತು. ಇನ್ನು ಮುಂದೆ ಕಾಂಗ್ರೆಸ್ಸನ್ನು ವಿಸರ್ಜಿಸಿಬಿಡೋಣ.’ ಸ್ವತಃ ಗಾಂಧೀಜಿಗೆ ಅಸಹ್ಯವಾಗಿತ್ತು. ತಾನೇ ಮೂಲೆ ಮೂಲೆಗೆ ಕೊಂಡೊಯ್ದ ಕಾಂಗ್ರೆಸ್ಸು ಮುಂದೊಮ್ಮೆ ದೇಶದ ದುರ್ಗತಿಗೆ ಕಾರಣವಾಗುತ್ತದೆಂಬ ಸ್ಪಷ್ಟ ಅರಿವು ಅವರಿಗಿತ್ತು.

congress-and-bjpಬಿಜೆಪಿಗೂ ಕಾಂಗ್ರೆಸ್ಸಿಗೂ ಒಂದು ಎದ್ದುಕಾಣುವಂತಹ ಭಿನ್ನತೆ ಇದೆ. ಒಂದು, ಕಾರ್ಯಕರ್ತರಿಂದಲೇ ನಿರ್ಮಾಣಗೊಂಡ, ಕೆಡರ್ ಆಧಾರಿತ ಪಕ್ಷ. ಮತ್ತೊಂದು, ಅಗತ್ಯ ಬಿದ್ದಾಗ ಕಾರ್ಯಕರ್ತರನ್ನು ಕೊಂಡುಕೊಳ್ಳುವ ಪಕ್ಷ. ಇವತ್ತಿಗೂ ನಾನು ಕಾಂಗ್ರೆಸ್ಸಿಗ ಎಂದು ಎದೆ ತಟ್ಟಿ ಹೇಳುವ ಸಾಮಾನ್ಯ ಕಾರ್ಯಕರ್ತರನ್ನು ತೋರಿಸಿ ನೋಡೋಣ. ಅಲ್ಲಿ ಕರುಳ ಸಂಬಂಧಗಳಿಲ್ಲ. ಅದೊಂಥರಾ ನಕಲು ಮಾಡಿಸಿ ನೂರು ಪ್ರತಿಶತ ಅಂಕ ಗಳಿಸುವ ಶಾಲೆಯಿದ್ದಂತೆ. ಆ ಶಾಲೆಯಲ್ಲಿ ಕೆಲಸ ನಡೆಯುವುದೇ ಕೊನೆಯ ಆರು ದಿನಗಳಲ್ಲಿ. ಹೀಗಾಗಿ ಬಂದ ಫಲಿತಾಂಶಕ್ಕೆ ಬೆನ್ನು ತಟ್ಟಿಕೊಳ್ಳುವವರು ಇರುತ್ತಾರೆಯೇ ಹೊರತು, ಆನಂದ ಪಡುವವರಲ್ಲ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಬಿಟ್ಟು ಹೊರಬಂದಾಗ ತಾನು ತಾಯಿಯ ಮಡಿಲಿನಿಂದ ಹೊರಗೆ ಬಂದುಬಿಟ್ಟಿದ್ದೇನೆಂದು ಯಾರಿಗೂ ಅನ್ನಿಸೋದೇ ಇಲ್ಲ. ಅಲ್ಲಿ ತಪ್ಪಾದಾಗ ಪ್ರಶ್ನೆ ಯಾರನ್ನು ಕೇಳಬೇಕೆಂದು ಯಾರಿಗೂ ಗೊತ್ತೇಇರುವುದಿಲ್ಲ. ಗೋಹತ್ಯೆ ನಿಷೇಧ ಹಿಂತೆಗೆದುಕೊಂಡಿದ್ದನ್ನು ಕೇಳಿ ಅನೇಕ ಕಾಂಗ್ರೆಸ್ಸಿಗರೇ ಗರಮ್ ಆಗಿದ್ದಾರೆ. ದುರ್ದೈವ, ಈ ದರ್ದನ್ನು ಯಾರೆದುರು ತೋಡಿಕೊಳ್ಳಬೇಕೆಂದು ಗೊತ್ತಿಲ್ಲವಷ್ಟೆ. ಮುಖ್ಯಮಂತ್ರಿ ಸ್ಥಾನ ಸಿಗದಿದ್ದುದಕ್ಕೆ ಖರ್ಗೆಯ ಬಳಗ ಜಿಲ್ಲೆ ಜಿಲ್ಲೆಗಳಲ್ಲಿ ರಾಡಿ ಎಬ್ಬಿಸಿತಲ್ಲ, ಅದಕ್ಕೆಲ್ಲ ಪ್ರಚಾರವೇ ಸಿಗಲಿಲ್ಲ ಏಕೆ? ಬಹಳ ಸಿಂಪಲ್ಲು. ಈ ರೀತಿ ಜೀವ ಕೊಡುವ ಕಾರ್ಯಕರ್ತರು ಅಲ್ಲಿಲ್ಲ; ಖರೀದಿಸಿದವರಿಗಾಗಿ ತಲೆಕೆಡಿಸಿಕೊಳ್ಳಬೇಕಿಲ್ಲ ಅಂತರ್ಥ! ಇಷ್ಟು ಮಾತ್ರ ಬಿಜೆಪಿಯೊಳಗೆ ಕಿರಿಕಿರಿಯಾಗಿಬಿಟ್ಟಿದ್ದರೆ ಮಾಧ್ಯಮಗಳಿಗೆ ಹಬ್ಬವಾಗಿಬಿಟ್ಟಿರುತ್ತಿತ್ತು. ಏಕೆ ಗೊತ್ತೇನು? ರಾಯಚೂರಿನಲ್ಲಾಗುವ ಒಂದು ಸಣ್ಣ ಬೆಳವಣಿಗೆಗೂ ಮಡಿಕೇರಿಯ ಕಾರ್ಯಕರ್ತ ನೊಂದುಕೊಳ್ಳುತ್ತಾನೆ. ಅವನ ಹೃದಯ ಕಂಪಿಸುತ್ತದೆ.
ನೀವೆ ನೋಡಿ. ಬಿಜೆಪಿಯಿಂದ ದೂರವಾದ ಶಿವಪ್ಪನವರಿಂದ ಹಿಡಿದು ಯಡಿಯೂರಪ್ಪನವರೆಗೆ ಸದಾ ಕಾಲ ಬಿಜೆಪಿಯ ಜಪ ಮಾಡುವವರೇ. ಎಲ್ಲರ ಮುಂದೆ ಮುನಿಸು ತೋರಿದರೂ ಆಂತರ್ಯದಲ್ಲಿ ಕರುಳ ಬಳ್ಳಿಯನ್ನು ಕಡಿಯಲಾಗದೆ ವಿಲವಿಲ ಒದ್ದಾಡುವವರೇ. ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ತಿಳಿಯಾಗಿದೆ ಎನ್ನಿಸಿದರೂ ಮರಳಿ ಧಾವಿಸಿ ಬರುವಂತೆ ತುದಿಗಾಲಲ್ಲಿ ನಿಂತವರೇ. ಬಿಜೆಪಿಯಿಂದ ದೂರಾದವ ವ್ಯಕ್ತಿಯಿಂದ ಬೆಸಗೊಂಡು ದೂರಾದವನೇ ಹೊರತು ಒಕ್ಷದಿಂದ ನೊಂದವನಲ್ಲ. ಕಾಂಗ್ರೆಸ್ಸಿನಿಂದ ದೂರಾದವನಿಗೆ ತನಗೆ ಯಾರಿಂದ ನೋವಾಗಿದೆ ಎಂದೇ ಗೊತ್ತಿರುವುದಿಲ್ಲ. ಅದು ಪಕ್ಷವೋ? ವ್ಯಕ್ತಿಯೋ ತಿಳಿಯುವುದೂ ಇಲ್ಲ. ಅಲ್ಲಿ ಅಕ್ಷರಶಃ ರಾಜ ಮನೆತನದ್ದೇ ದರ್ಬಾರು. ಉಳಿದವರು ಕುರ್ನೀಸಾತು ಮಾಡುವ ಸಾಮಂತ ರಾಜರುಗಳಷ್ಟೆ. ಕಪ್ಪ ಒಪ್ಪಿಸಿ ಸುಮ್ಮನಾಗಬೇಕು. ಎದುರು ಮಾತನಾಡಿದರೆ ನಾಶವೇ ಸರಿ. ಬಿಜೆಪಿಯಲ್ಲಿ ಪಕ್ಷ ದೊಡ್ಡದು, ಉಳಿದವರೆಲ್ಲ ಅದಕ್ಕಿಂತಲೂ ಚಿಕ್ಕವರು ಅಷ್ಟೆ.
ಇನ್ನು ಈ ಕಾಂಗ್ರೆಸ್‌ನವರನ್ನು ನೋಡಿ. ಅವರೊಂಥರಾ ಟು ಪಿನ್ ಚಾರ್ಜರ್‌ಗಳು. ಯಾವ ಸಾಕೆಟ್‌ಗೂ ಹೊಂದಿಕೊಳ್ಳಬಲ್ಲವರು! ಬಿಜೆಪಿಗೆ ಸಂಘಟನೆಯ ಹಿನ್ನೆಲೆಯಿದೆ. ಬಲಢ್ಯವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬುನಾದಿ ಇದೆ. ಇದೇ ರೀತಿ ಎಡ ಪಕ್ಷಗಳೂ ಬುಡ ಹೊಂದಿವೆ. ಪಕ್ಷಗಳಿರಲಿ, ಅದರೊಳಗಿನ ವ್ಯಕ್ತಿಯ ದೌರ್ಬಲ್ಯವನ್ನೂ ಮೂಲ ಸಂಘಟನೆಯಲ್ಲಿನ ದೋಷ ಎಂಬಂತೆ ಬಿಂಬಿಸಲ್ಪಡುತ್ತದೆ. ಸದನದಲ್ಲಿ ಅಶ್ಲೀಲ ಚಿತ್ರ ನೋಡಿದಾಗ, ಮಹಿಳೆಯೊಬ್ಬರಿಂದ ಗುರುತರ ಆರೋಪಕ್ಕೆ ಗುರಿಯಾದಾಗ ಎಲ್ಲರ ದೃಷ್ಟಿ ನೆಟ್ಟಿದ್ದು ವ್ಯಕ್ತಿಯತ್ತ ಅಲ್ಲ; ಸಂಘದತ್ತ. ಕಾಂಗ್ರೆಸ್ಸಿನ ಪರಿಸ್ಥಿತಿ ನೋಡಿ. ರಾಜ್ಯಪಾಲರಾಗಿದ್ದ ಎನ್‌ಡಿ.ತಿವಾರಿ ಹೆಣ್ಣುಮಕ್ಕಳೊಂದಿಗೆ ವಿವಿಧ ಭಂಗಿಗಳಲ್ಲಿ ಸಿಕ್ಕಿಬಿದ್ದಿದ್ದರು. ರೈಲ್ವೇ ಮಂತ್ರಿಯ ಸ್ವಂತ ಮನೆಯಲ್ಲಿ ಸೋದರಳಿಯ ಡೀಲ್ ಕುದುರಿಸಿದ. ರಾಬರ್ಟ್ ವಾಧ್ರಾ ಭೂಮಿ ಮಾರುವ ಪ್ರಕ್ರಿಯೆಯಲ್ಲಿ ಇಡಿ ದೇಶದ ಕೆಂಗಣ್ಣಿಗೆ ಗುರಿಯಾದ. ಅರೆ! ಹೊಣೆ ಹೊರುವವರು ಯಾರು? ವ್ಯಕ್ತಿಗತವಾದ ಈ ಆರೋಪಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಕಾಂಗ್ರೆಸ್ ಚಿರಾಯುವಾಗಿ ಉಳಿಯುತ್ತದೆ.
ಗಾಂಧೀಜಿ ಇರುವವರೆಗೆ ಕಾಂಗ್ರೆಸ್ ಮಾಡಿದ ತಪ್ಪುಗಳನ್ನು ಅವರು ತಮ್ಮ ಮೈಮೇಲೆ ಎಳೆದುಕೊಂಡು ಪ್ರತಿಕ್ರಿಯಿಸುತ್ತಿದ್ದರು; ನೆಹರೂಗೆ ಇರುಸುಮುರುಸುಂಟು ಮಾಡುತ್ತಿದ್ದರು. ಹಾಗೆ ನೋಡಿದರೆ ಗಾಂಧೀಜಿ ತೀರಿಕೊಂಡಾಗ ಖುಷಿಯಾಗಿದ್ದು ಕಾಂಗ್ರೆಸ್ಸಿಗೇ. (ವೋಟಿಗಾಗಿ ತನ್ನ ಕಛೇರಿ ಎದುರು ಬಿಜೆಪಿ- ಆರೆಸ್ಸೆಸ್‌ಗಳೇ ಬಾಂಬ್ ಸ್ಫೋಟಿಸಿಕೊಂಡವು ಎಂಬ ಸಿದ್ಧರಾಮಯ್ಯನವರ ಆರೋಪ ಒಪ್ಪುವುದೆ ಆದರೆ ಅವತ್ತು ಗಾಂಧೀಜಿ ಹತ್ಯೆಯ್ಲಲೂ ಕಾಂಗ್ರೆಸ್ಸಿನದೆ ಕೈವಾಡ ಇತ್ತೆಂದು ಹೇಳಬಹುದು!) ಅದಾದ ಮೇಲೆ ಕಾಂಗ್ರೆಸ್ಸಿನ ಹಾದಿ ನಿಚ್ಚಳವಾಯ್ತು. ಅದು ಚುನಾವಣೆಯ ಹೊತ್ತಲ್ಲಿ ರಂಗೇರಿಸಿಕೊಳ್ಳುವ ಪಕ್ಷವಾಯ್ತು. ನಾಲ್ಕೂವರೆ ವರ್ಷ ಕಿತ್ತಾಡಿ ಐದನೇ ವರ್ಷ ಒಟ್ಟಾಗಿ ಚುನಾವಣೆ ಎದುರಿಸುವ ಕಲೆ ಕರಗತವಾಯ್ತು. ಇವೆಲ್ಲ ಬ್ರಿಟಿಷರಿಂದಲೇ ಬಳುವಳಿಯಾಗಿ ಬಂದಂಥವು. ಅಲ್ಲವೇ ಮತ್ತೆ? ತಮಗೆ ದಕ್ಕದ ರಾಜ್ಯಗಳನ್ನು ಬಗೆಬಗೆಯ ಕಾನೂನು ಜಾರಿಗೆ ತಂದು ಆಪೋಷನ ತೆಗೆದುಕೊಳ್ತಿದ್ದವರು ಬ್ರಿಟಿಷರು. ಅಕ್ಷರಶಃ ಹಾಗೆಯೇ ಸಿಬಿಐ, ಇಡಿಗಳನ್ನು ಬಳಸಿ ಎದುರಾಳಿಗಳನ್ನು ಮಟ್ಟ ಹಾಕುತ್ತಿದೆ ಕಾಂಗ್ರೆಸ್! ಅವನೆದುರಿಗೆ ಇವನನ್ನು, ಇವನೆದುರಿಗೆ ಮತ್ತೊಬ್ಬನನ್ನು ಎತ್ತಿಕಟ್ಟಿ ವೈಭೋಗದ ಬದುಕು ನಡೆಸಿದರು ಬಿಳಿಯರು. ಮೀರ್‌ಜಾಫರ್‌ಗಳನ್ನು ಹುಡುಕಿ ರಾಜರುಗಳನ್ನು ಮಟ್ಟ ಹಾಕಿದವರೂ ಅವರೇ. ಅಕ್ಷರಶಃ ಇಂಥದೇ ರಾಜಕಾರಣ ಕಾಂಗ್ರೆಸ್ಸಿಗರು ನಡೆಸುತ್ತಿದ್ದಾರೆ. ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕಗಳಲ್ಲಿ ಬಿಜೆಪಿಯ ಆಂತರಿಕ ಭಿನ್ನಮತಕ್ಕೆ ನೀರೆರೆದು ಪ್ರತ್ಯೇಕ ಪಕ್ಷಗಳು ಹುಟ್ಟಲು ಕಾರಣವಾಗಿದ್ದು ಕಾಂಗ್ರೆಸ್ಸೇ! ಅವರು ಸೋತಿದ್ದು ಗುಜರಾತಿನಲ್ಲಿ ಮಾತ್ರ. ಅಂದಹಾಗೆ ನೆನಪಿರಲಿ, ಕರ್ನಾಟಕದಲ್ಲಿ ಮೀರ್‌ಜಾಫರ್‌ಗಳು ಇನ್ನೂ ಪಕ್ಷದೊಳಗೇ ಇದ್ದಾರೆ, ಎಚ್ಚರಿಕೆ ಬೇಕಷ್ಟೆ!
ಇತ್ತ ಬಿಜೆಪಿ ಸಂಘಟನೆಯ ಕಾರಣದಿಂದಲೇ ಬಲಾಢ್ಯವಾಯ್ತು, ಆ ಕಾರಣದಿಂದಲೇ ಬಡವಾಯಿತು. ಇನ್ನೂ ಸ್ವಲ್ಪ ಗಂಭೀರವಾಗಿ ಹೇಳಬೇಕೆಂದರೆ, ಬಿಜೆಪಿ ಅಧಿಕಾರಕ್ಕೆ ಬಂದುದರಿಂದ ಸಂಘವೂ ಸೊರಗಿತು. ದಕ್ಷಿಣ ಕನ್ನಡವನ್ನೆ ನೋಡಿ. ಗಣ ವೇಷದಲ್ಲಿ ಒಂದು ಲಕ್ಷ ಜನರನ್ನು ಒಂದೆಡೆ ಸೇರಿಸಬಲ್ಲ ಸಂಘ ಅಲ್ಲಿ ಬಿಜೆಪಿಯ ಸೋಲಿಗೆ ಕಾರಣವಾಗುವುದು ಹೇಗೆ? ಇದಕ್ಕೆ ಕಾರಣವೆಂದು ಒಬ್ಬ ವ್ಯಕ್ತಿಯನ್ನು ದೂರುವ ಕೆಲಸ ಮಾಡಲಾಗುತ್ತಿದೆಯಲ್ಲ, ಸರಿಯಾ? ಪ್ರಭಾಕರ ಭಟ್ಟರ ಹೆಸರನ್ನು ಪದೇಪದೇ ಹೇಳಿ ಮಾಧ್ಯಮಗಳು ತೇಜೋವದೆ ಮಾಡಿದವಲ್ಲ, ಇಡಿಯ ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಬೇರೆ ಯಾರೂ ಹೊಣೆಯಲ್ಲವ? ರಾಜ್ಯದ ಎಲ್ಲ ಪ್ರಚಾರದ ಫ್ಲೆಕ್ಸ್‌ಗಳಲ್ಲಿ ಮಿಂಚಿದ ಅನಂತಕುಮಾರ್, ದೆಹಲಿಯಿಂದ ಚುನಾವಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ದರ್ಮೇಂದರ್ ಪ್ರಧಾನ್ – ಇವರ‍್ಯಾರೂ ಜವಾಬ್ದಾರರಲ್ಲವೇನು? ಕರ್ನಾಟಕದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದ್ದರೆ ನನಗೆ ಅಚ್ಚರಿಯಾಗುತ್ತಿತ್ತೆಂದು ಗಾಯದ ಮೇಲೆ ಉಪ್ಪು ಸುರಿದಂತಹ ಲೇಖನ ಬರೆದರಲ್ಲ ಅಡ್ವಾಣಿ; ಕರ್ನಾಟದಲ್ಲಿ ಬಿಜೆಪಿ ಸೋಲಲಿಕ್ಕೆ ನಾನೇ ಕಾರಣ ಅಂತ ಒಮ್ಮೆಯಾದರೂ ಹೇಳಿಕೊಳ್ಳಲಿಲ್ಲವೇಕೆ? ಸೋನಿಯಾ ಗಾಂಧಿಯ ವಿದೇಶೀ ಮೂಲದ ಉಲ್ಲೇಖ ಮಾಡಿ, ಅನಂತರ ಕ್ಷಮೆ ಕೇಳಿ ಪಕ್ಷಕ್ಕೆ ಮುಜುಗರ ತಂದವರು ಅವರು. ರೆಡ್ಡಿಗಳನ್ನು ಬೆಂಬಲಿಸುವಾಗ ಸುಮ್ಮನಿದ್ದ ಅಡ್ವಾಣಿ ಯಡ್ಯೂರಪ್ಪ ವಿರುದ್ಧ ಮಾತ್ರ ಕೆಂಪುಕೆಂಪಾಗುತ್ತಿದ್ದುದು ಏಕೆ? ಯಾರ ಪ್ರಭಾವಕ್ಕೆ ಅವರು ಅಷ್ಟೊಂದು ಒಳಗಾಗಿದ್ದಾರೆ? ಈ ಪ್ರಭಾವಿ ವ್ಯಕ್ತಿ ಸ್ವತಃ ತಾನು ಭ್ರಷ್ಟ ಎಂಬುದನ್ನು ಪ್ರಧಾನಿ ಅರಿಯರೇ? ಯಾಕೆ ಯಾವ ಮಾಧ್ಯಮವೂ ಪ್ರಶ್ನೆ ಎತ್ತುತ್ತಿಲ್ಲ?
‘ಶಾಸಕರಾಗಿ ಆಯ್ಕೆಯಾಗೋದು ಮೊದಲನೆ ಬಾರಿ ಅನುಭವ ಪಡೆಯಲಿಕ್ಕೆ, ಎರಡನೆಯ ಬಾರಿ ಕೆಲಸ ಮಾಡಲಿಕ್ಕೆ, ಮೂರನೇ ಬಾರಿಗೆ ಸಾಕು; ತರುಣರಿಗೆ ದಾರಿ ಬಿಡಿ’ ಎನ್ನುವ ಪ್ರಭಾಕರ ಭಟ್ಟರ ಮಾತುಗಳು ಬಿಜೆಪಿಗೇನು, ಎಲ್ಲ ಪಕ್ಷಗಳಿಗೂ ಮಾರ್ಗದರ್ಶಿಯೇ. ಇದು ಗೊತ್ತಿದ್ದೂ ಧಿಕ್ಕರಿಸಿ ಚುನಾವಣೆಗೆ ನಿಂತು ಸೋತ ಯೋಗೀಶ ಭಟ್ಟರ ಸೋಲಿನ ಹೊಣೆ ಯಾರದ್ದು? ಸದನದಲ್ಲಿ ಎಮ್‌ಎಮ್‌ಎಸ್ ಕಳಿಸಿದ ಕೃಷ್ಣ ಫಾಲೇಮಾರರು, ಸೀಡಿಯ ರಾಡಿಯಲ್ಲಿ ಮಿಂದೆದ್ದ ರಘುಪತಿ ಭಟ್ಟರು ಇವರುಗಳಿಂದಾಗಿಯೂ ಪ್ರಜ್ಞಾವಂತ ಮತದಾರರು ಬಿಜೆಪಿಗೆ ವೋಟು ಮಾಡುವರೆಂದು ನಂಬುವುದಾದರೂ ಹೇಗೆ? ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಮಂತ್ರಿಗಿರಿ ತಪ್ಪಿಸಿದ್ದು ಸಂಘವೆಂಬ ಅಪಪ್ರಚಾರದಲ್ಲಿ ಸದಾನಂದ ಗೌಡರು ಮಾಡಿದ ಕುತಂತ್ರ ಮುಚ್ಚಿಯೇಹೋಯ್ತಲ್ಲಾ?
ಸಂಗಟನೆಯೊಂದರ ಕೊರತೆಯೇ ಅದು. ಎಲ್ಲರ ಬಳಿ ಎಲ್ಲ ವಿಚಾರವನ್ನು ಮಾತನಾಡಲು ಆಗದು. ಅಂತಹ ಸಂದಿಗ್ಧದಲ್ಲಿ ಸಂಘವೂ ಇದೆ, ಬಿಜೆಪಿಯೂ ಇದೆ. ಅವು ಕಳೆಗುಂದಿರಬಹುದು, ಧೃತಿಗೆಟ್ಟಿಲ್ಲ. ಶೂನ್ಯದಿಂದ ಶುರುವಾದುದು ಸಂಘ. ಹೆಡ್ಗೇವಾರರು ಅದನ್ನು ಕಟ್ಟಿ ನಿಲ್ಲಿಸಿದಾಗ ಹೊರಗಿನ ವಿರೋಧವಿರಲಿ, ಒಳಗೂ ಭಾರೀಭಾರೀ ಆತಂಕಗಳೇ ಇದ್ದವು. ಆ ಹೊತ್ತಿನಲ್ಲಿ ಕಬಡ್ಡಿ ಆಡುತ್ತ ತರುಣರನ್ನು ಒಗ್ಗೂಡಿಸಿ ನಿರ್ಮಾಣ ಮಾಡಿದ್ದು ಸಂಘ. ಗಾಂಧಿಯ ಹತ್ಯೆಯ ಹೊತ್ತಲ್ಲಿ ಸಂಘದವನೆಂದು ಹೇಳಿಕೊಳ್ಳುವುದೆ ಸಾವಿಗೆ ಆಹ್ವಾನದಂತಿತ್ತು. ಆ ಹೊತ್ತಿನಲ್ಲೂ ನೆಹರೂಗೆ ಸೆಡ್ಡು ಹೊಡೆದು ಉಳಿದಿದ್ದು ಸಂಘ. ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿದಾಗ ವಿಪರೀತ ಸನ್ನಿವೇಶಗಳಲ್ಲೂ ರಾಷ್ಟ್ರೀಯತೆಗಾಗಿ ಬಡಿದಾಡಿದ ಶಕ್ತಿ ಅದರದು. ಸಂಘದ ಪರಿವಾರ ಸಂಘಟನೆಗಳಿಗೂ ಈ ಶಕ್ತಿ ಇದ್ದೇ ಇದೆ. ತಪ್ಪುಗಳನ್ನು ತಿದ್ದಿಕೊಂಡು ಬಿಜೆಪಿ ಮತ್ತೆ ಏಳಲಿದೆ. ಹಾಗೆ ಏಳುವುದು ಸಮಾಜಕ್ಕೂ ಬೇಕಿದೆ. ಇಲ್ಲವಾದರೆ ಚೀನೀಯರಿಗೆ, ಪಾಕಿಸ್ಥಾನೀಯರಿಗೆ ದೇಶವನ್ನು ಒತ್ತೆಯಿಟ್ಟುಬಿಡುವ ಕಾಂಗ್ರೆಸ್ಸಿಗೆ ಕಡಿವಾಣ ಯಾರು?
ಇಷ್ಟಕ್ಕೂ ಆರೆಸ್ಸೆಸ್ ಬಿಜೆಪಿಯನ್ನು ವಿಸರ್ಜಿಸಿಬಿಡಬೇಕೆಂದು ನಿರ್ಧರಿಸಿದರೆ ಬಿಜೆಪಿಯ ಕಥೆ ಅಂದೇ ಮುಗಿದುಬಿಡುತ್ತದೆ. ಗಾಂಧೀಜಿಯ ಹೇಳಿಕೆಯ ನಂತರವೂ ಅಸ್ತಿತ್ವ ಉಳಿಸಿಕೊಂಡೇ ಬರುತ್ತಿದೆಯಲ್ಲ ಕಾಂಗ್ರೆಸ್ಸು… ಹಾಗೆ ಬದುಕಲಂತೂ ಸಾಧ್ಯವಿಲ್ಲ.
ಹೌದಲ್ಲವೆ?

Leave a Reply