ವಿಭಾಗಗಳು

ಸುದ್ದಿಪತ್ರ


 

ಐಪಿಎಲ್ – ಅಡ್ವಾಣಿ ಬಿಡಿ, ರೂಪಾಯಿ ಉಳಿಸಿಕೊಡಿ

ವರ್ಲ್ಡ್ ಬ್ಯಾಂಕಿನ ಉದ್ಯೋಗಿಯಾಗಿದ್ದ ಮನಮೋಹನ ಸಿಂಗರನ್ನು ಇಲ್ಲಿನ ಇಂಗ್ಲಿಶ್ ಮಾಧ್ಯಮಗಳು ಆರ್ಥಿಕ ತಜ್ಞರೆಂದು ಬಿಂಬಿಸಿ ಹಿಮಾಲಯದೆತ್ತರಕ್ಕೊಯ್ದು ಕೂರಿಸಿಯೇ ಬಿಟ್ಟರು. ಆದರೆ ವಾಸ್ತವವಾಗಿ ಅವರು ವಲ್ಡ್ ಬ್ಯಾಂಕಿನ ಆಶಯಗಳನ್ನು ಈಡೇರಿಸಲೆಂದೇ ಬಂದ ಕೈಗೊಂಬೆಯಾಗಿದ್ದರು. ಹೀಗಾಗಿಯೇ ಚುನಾವಣೆಯನ್ನೇ ಗೆಲ್ಲದೆ ವಿತ್ತ ಮಂತ್ರಿಯಾಗಿದ್ದು, ಪ್ರಧಾನ ಮಂತ್ರಿಯೂ ಆಗಿದ್ದು!

ಅಡ್ವಾಣಿಯ ರಾಜೀನಾಮೆಯ ಬಿರುಗಾಳಿ ಮೋದಿ ಪ್ರಧಾನಿ ಗಾದಿಗೆ ಹತ್ತಿರವಾದ ಸುದ್ದಿಗೆ ಬೀಳಲಿದ್ದ ಕೆಟ್ಟ ದೃಷ್ಟಿಗೆ ದೃಷ್ಟಿಬೊಟ್ಟಾಯ್ತು ಅಷ್ಟೇ. ಅದಕ್ಕಿಂತ ಹೆಚ್ಚಿನದನ್ನು ಸಾಧಿಸಲು ಅವರಿಂದಾಗಲಿಲ್ಲ. ಇರಲಿ. ಗಾಯವನ್ನು ಕೆರೆದಷ್ಟೂ ದೊಡ್ಡದಾಗುತ್ತದೆ ಹೊರತು ಗುಣವಾಗೋದಿಲ್ಲ.

ಬಿಡಿ. ಭಾರತೀಯರು ಅಡ್ವಾಣಿಗಿಂತ ಭಯಂಕರವಾದ ಸಮಸ್ಯೆಯನ್ನು ಕಳೆದ ಒಂದು ವಾರದಿಂದ ತೀವ್ರವಾಗಿ ಎದುರಿಸುತ್ತಿದ್ದಾರೆ. ಅಡ್ವಾಣಿ ಮೌಲ್ಯ ಕಳಕೊಂಡಷ್ಟೇ ವೇಗವಾಗಿ ಭಾರತದ ರೂಪಾಯಿ ತನ್ನ ಮೌಲ್ಯವನ್ನು ಕಳಕೊಳ್ಳುತ್ತಿದೆ. ನಡುವಲ್ಲಿ ಒಂದು ದಿನವಂತೂ ರಿಸರ್ವ್ ಬ್ಯಾಂಕ್ ಮಧ್ಯೆ ಪ್ರವೇಶಿಸದೆ ಹೋಗಿದ್ದರೆ ಒಂದು ಡಾಲರ್ ಅರವತ್ತು ರೂಪಾಯಿಯಾಗಿಬಿಡುವ ಎಲ್ಲ ಭೀತಿಯನ್ನೂ ಎದುರಿಸಿತ್ತು. ಒಂಥರಾ ಸಂಘ ಮಧ್ಯೆ ಪ್ರವೇಶಿಸಿ ಅಡ್ವಾಣಿಯವರ ಮೌಲ್ಯ ಉಳಿಸಿದಂತೆಯೇ ಅದೂ!

Rupee-vs-Dollar

ಒಂದು ಡಾಲರ್ ಐವತ್ತೈದು ರೂಪಾಯಿಯಿಂದ ಐವತ್ತೆಂಟು ರೂಪಾಯಿಗೆ ಏರಿದೆ ಅಂತ ಮೇಲ್ನೋಟಕ್ಕೆ ಕಂಡರೂ ವಾಸ್ತವವಾಗಿ ಅದು ಅಪಮೌಲ್ಯ. ಒಂದು ಡಾಲರನ್ನು ಕೊಂಡುಕೊಳ್ಳಲು ನಾವು ಪಾವತಿಸಬೇಕಾಗಿರುವ ಹಣ ಹೆಚ್ಚಾಗುತ್ತಿರುವ ಸಂಕೇತ. ಅದರರ್ಥ ಡಾಲರು ಗಟ್ಟಿಯಾಗುತ್ತಿದೆ, ನಮ್ಮ ಹಣ ಮೌಲ್ಯ ಕಳಕೊಳ್ಳುತ್ತಿದೆ ಅಂತ.

ಇಷ್ಟಕ್ಕೂ ನಾವೇಕೆ ಡಾಲರ್ ಕೊಂಡುಕೊಳ್ಳಬೇಕು? ಜಗತ್ತು ನಡೆಯುತ್ತಿರೋದೇ ಡಾಲರುಗಳ ಲೆಕ್ಕಾಚಾರದಲ್ಲಿ. ಜಾಗತಿಕ ಮಾರುಕಟ್ಟೆಯಲ್ಲಿ ನೀವೇನೇ ಕೊಂಡುಕೊಳ್ಳಬೇಕೆಂದರೂ ಡಾಲರನ್ನೆ ಕೊಡಬೇಕು. ಫ್ರಾನ್ಸು ಜರ್ಮನಿ ಬಿಡಿ, ಪಕ್ಕದ ಚೀನಾದಲ್ಲಿಯೇ ರೂಪಾಯಿ ನಡೆಯೋದಿಲ್ಲ. ಹೀಗಾಗಿ ಪೆಟ್ರೋಲಿನಿಂದ ಶುರು ಮಾಡಿ ರಸಗೊಬ್ಬರಗಳ ಆಮದಿನವರೆಗೆ ಪ್ರತಿಯೊಂದಕ್ಕೂ ಜಗತ್ತಿನ ಏಕಮೇವ ಕರೆನ್ಸಿ ಡಾಲರ್! ಈ ಏಕ ಸ್ವಾಮ್ಯವನ್ನು ಮುರಿಯಲೆಂದೇ ಸದ್ದಾಂ ಹುಸೇನ್ ತೈಲವನ್ನು ಬೇರೆಯ ಹಣ ವಿನಿಮಯದ ಮೂಲಕವೂ ಕೊಡುವ ಸಿದ್ಧತೆ ನಡೆಸಿದ್ದು. ಕುಪಿತ ಅಮೆರಿಕಾ ಅವನ ಸರ್ವನಾಶ ಮಾಡಿ ತನ್ನ ಸಾರ್ವಭೌಮತೆಯನ್ನು ಪುನರ್ಸ್ಥಾಪಿಸಿದ್ದು.

ಇರಲಿ. ಹೀಗೆ ರಾಷ್ಟ್ರವೊಂದು ಡಾಲರಿನ ದಾಸ್ತಾನನ್ನು ಹೆಚ್ಚು ಹೆಚ್ಚು ಮಾಡಿಕೊಂಡಷ್ಟು ಅವರ ಸ್ವಂತ ಕರೆನ್ಸಿಯ ಮೌಲ್ಯ ವೃದ್ಧಿಸುತ್ತದೆ. ಡಾಲರಿನ ಕೊರತೆಯಾಗುತ್ತಿದೆಯೆಂದರೆ ಕರೆನ್ಸಿಯ ಮೌಲ್ಯವೂ ಕುಸಿಯುತ್ತದೆ. ಡಾಲರನ್ನು ಗಳಿಸಲು ಎರಡು ಪ್ರಮುಖ ವಿಧಾನಗಳಿವೆ. ಮೊದಲನೆಯದು ರಫ್ತು ಹೆಚ್ಚಿಸಿ ಆ ಮೂಲಕ ಡಾಲರನ್ನು ಕೂಡಿ ಹಾಕೋದು, ಮತ್ತೊಂದು ವಿದೇಶೀಯರಿಗೆ ದೇಶದಲ್ಲಿ ಹಣ ಹೂಡಲು ಹೇಳೋದು. ಅಥವಾ ವಿದೇಶೀ ಸಾಲ ಕೇಳೋದು. ಜಪಾನ್ ಚೀನಾದಂತಹ ರಾಷ್ಟ್ರಗಳು ಮೊದಲನೆ ವಿಧಾನವನ್ನು ಹೆಚ್ಚು ಹೆಚ್ಚು ತಬ್ಬಿಕೊಂಡರೆ, ಭಾರತಕ್ಕೆ ಎರಡನೇ ವಿಧಾನವೇ ಹೆಚ್ಚು ಅಪ್ಯಾಯಮಾನ! ಕುಳಿತಲ್ಲಿಯೇ ಯಾರಾದರೂ ಊಟ ತಂದು ಬಡಿಸಿದರೆ ಅದ್ಯಾರು ಬೇಡವೆಂದಾರು ಹೇಳಿ. ಆದರೆ ಹೀಗೆ ಕುಂತಲ್ಲೆ ಉಂಡು ಆಲಸಿಯಾಗಿರುವ ನಾನು ನಾಳೆ ಉಣಿಸಿದವನ ಮುಲಾಜಿಗೆ ಒಳಗಾಗಿ ಅವನ ಜೀತದವನಾಗಿಬಿಡುವುದಿಲ್ಲವೆ? ಹಾಗೆಯೇ ಸಾಲ ಕೊಟ್ಟ ಮತ್ತು ಹಣ ಹೂಡಿದ ವಿದೇಶೀಯರು ನಮಗೆ ನಿಯಮ ನಿಬಂಧನೆಗಳನ್ನು ಹೇರುತ್ತಾರೆ. ಕೇಳದಿದ್ದರೆ ಹಣ ಕೊಡುವುದಿಲ್ಲವೆಂದು ಹೆದರಿಸುತ್ತಾರೆ. ಆಗ ಆರ್ಥಿಕ ವ್ಯವಸ್ಥೆ ಕುಸಿದು ಬೀಳುತ್ತದೆ. ಗಟ್ಟಿ ರಾಷ್ಟ್ರವೊಂದಕ್ಕೆ ಸಂಪನ್ಮೂಲಗಳನ್ನು ಒದಗಿಸುವ ಗುಲಾಮಿ ರಾಷ್ಟ್ರವಾಗಿ ನಾವಿದ್ದುಬಿಡುತ್ತೇವೆ ಅಷ್ಟೇ!

ಈ ಹಿಂದೆ ಎರಡು ಬಾರಿ ಹೀಗಾಗಿದೆ. ೧೯೪೭ರಲ್ಲಿ ಸ್ವಾತಂತ್ರ್ಯ ಪಡೆದಾಗಿನಿಂದ ನಾವು ಆರ್ಥಿಕ ನಿಯಮಗಳನ್ನು ಹೇರಿಕೊಂಡೇ ಇಲ್ಲ. ಪಕ್ಕದ ರಾಷ್ಟ್ರಗಳೊಂದಿಗೆ ಜೂಜಾಡುತ್ತ, ದೇಶದೊಳಗಿನ ಜನರಿಗೆ ಕನಸು ಕಾಣಿಸುತ್ತ ಮೈಮರೆತೆವು. ವರ್ಷಂಪ್ರತಿ ರಫ್ತಿಗಿಂತ ಆಮದೇ ಹೆಚ್ಚಾಯ್ತು. ಫಲಸ್ವರೂಪವಾಗಿ ಕೊರತೆ ಹೆಚ್ಚುತ್ತ ಹೋಯ್ತು. ವಿದೇಶೀ ವಿನಿಮಯಕ್ಕೆ ಕೊರತೆ ಉಂಟಾಯ್ತು. ತಕ್ಷಣಕ್ಕೆ ಕಂಡ ಪರಿಹಾರ ಅಂತಾರಾಷ್ಟ್ರಿಯ ವಿತ್ತೀಯ ಸಹಾಯ. ಹೆಸರು ಮಾತ್ರ ಸಹಾಯವಷ್ಟೆ. ಆದರೆ ಅದೂ ಸಾಲವೇ ಆಗಿತ್ತು. ಈ ಸಾಲಕ್ಕೆ ಬಡ್ಡಿ ಸೇರಿಸಿ ತೀರಿಸುವ ಅನಿವಾರ್ಯತೆ. ಮರುವರ್ಷ ರಫ್ತು ಹೆಚ್ಚಿ ವಿದೇಶೀ ವಿನಿಮಯ ಧನಾತ್ಮಕವಾದರೆ ಸರಿ. ಇಲ್ಲವಾದರೆ ಅಸಲು – ಬಡ್ಡಿ ಎಲ್ಲವೂ ಮತ್ತೊಂದು ಉರುಳೇ. ಈ ವಿತ್ತೀಯ ಕೊರತೆ ನೀಗಿಸಲು ಮತ್ತಷ್ಟು ಅಂತಾರಾಷ್ಟ್ರೀಯ ಸಹಾಯ ಪಡೆಯಬೇಕು. ಹೀಗೆ ಸಾಲ ಚಕ್ರದಲ್ಲಿ ಸಿಕ್ಕು ದೇಶ ವಿಲವಿಲನೆ ಒದ್ದಾಡಿತು. ಅದಕ್ಕೆ ಪ್ರತಿಯಾಗಿ ೧೯೬೫ರಲ್ಲಿ ಪಾಕಿಸ್ತಾನ ಭಾರತದ ಮೇಲೆ ಯುದ್ಧ ಘೋಷಿಸಿಬಿಟ್ಟಿತು.

ತಗೊಳ್ಳಿ.. ಮೊದಲೇ ತಿನ್ನಲಿಕ್ಕೆ ತತ್ವಾರ. ಈಗ ಯುದ್ಧ ಬೇರೆ. ನಮ್ಮ ಒಟ್ಟಾರೆ ಉತ್ಪನ್ನದ ಕಾಲು ಭಾಗದಷ್ಟು ಹಣ ಯುದ್ಧಕ್ಕೆ ಸೋರಿಹೋಯ್ತು. ಅತ್ತ ಪಾಕಿಸ್ತಾನದೆಡೆಗೆ ಒಲವಿರಿಸಿದ್ದ ಅಮೆರಿಕ ನಮಗೆ ಗೋಧಿ ಕಳಿಸುವುದನ್ನು ನಿಲ್ಲಿಸಿದ್ದಷ್ಟೇ ಅಲ್ಲ, ಇನ್ನು ಸಾಲ ಕೊಡುವುದಿಲ್ಲವೆಂದು ಬಿಟ್ಟಿತು. ಭಯಾನಕವಾದ ಆರ್ಥಿಕ ದುಸ್ಥಿತಿಯತ್ತ ಹೊರಳಿದ ಭಾರತಕ್ಕೆ ೬೫ರ ಕ್ಷಾಮವೂ ಹೊಡೆತವಾಯ್ತು. ಪರಿಣಾಮವಾಗಿ ಮೊದಲ ಬಾರಿಗೆ ವಿರೋಧದ ನಡುವೆ ರೂಪಾಯಿಯನ್ನು ಅಪಮೌಲ್ಯಗೊಳಿಸಲಾಯ್ತು. ಹೀಗೆ ರೂಪಾಯಿ ಮೌಲ್ಯ ಕಳಕೊಂಡರೆ ಇಲ್ಲಿ ಹೂಡಿಕೆ ಮಾಡುವ, ವ್ಯಾಪಾರ ಮಾಡುವ ವಿದೇಶೀ ವರ್ತಕರಿಗೆ ಲಾಭವೋ ಲಾಭ. ತನ್ಮೂಲಕ ಆ ದೇಶಗಳು ಸಮೃದ್ಧಿಯಾಗುತ್ತವೆ. ಜನರ ವಿರೋಧದ ನಡುವೆ ಭಾರತ ಇಟ್ಟ ಈ ಹೆಜ್ಜೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ದೊರಕಿತು, ಮತ್ತೆ ಸಾಲ ಹರಿದು ಬಂತು.

ಈ ಹಂತದಲ್ಲಿಯೇ ಒಂದು ವಿಚಾರವನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಭಾರತದಲ್ಲಿ ಕರೆನ್ಸಿಯ ಮೌಲ್ಯ ನಿರ್ಧರಿಸುವ ಪೂರ್ಣ ಹೊಣೆಗಾರಿಕೆ ರಿಸರ್ವ್ ಬ್ಯಾಂಕ್‌ನ ಮೇಲಿದೆ. ಅದು ಎರಡು ಬಗೆಯಲ್ಲಿ ಅದನ್ನು ಮಾಡುತ್ತದೆ. ಮೊದಲನೆಯದು, ರೂಪಾಯಿಯ ಮೌಲ್ಯವನ್ನು ನಿರ್ಧರಿಸಿ, ಅದನ್ನು ಕಾಪಾಡಿಕೊಳ್ಳಲೆಂದೇ ಅದಕ್ಕೆ ತಕ್ಕಂತೆ ಡಾಲರ್ ಬಿಡುಗಡೆ ಮಾಡೋದು, ಎರಡನೆಯದು, ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಕ್ಕಂತೆ ರೂಪಾಯಿಯ ಮೌಲ್ಯ ಏರುಪೇರಾಗಲು ಬಿಟ್ಟುಬಿಡೋದು. ಹೆಚ್ಚೂಕಡಿಮೆ ೧೯೯೧ರ ವರೆಗೆ ನಾವು ಅನುಸರಿಸುತ್ತಿದ್ದುದು ಮೊದಲ ಮಾದರಿಯೇ. ಮೌಲ್ಯ ಉಳಿಸಿಕೊಳ್ಳಲೆಂದು ನಾವು ಹರ ಸಾಹಸ ಮಾಡುತ್ತಿದ್ದೆವು. ಅದಕ್ಕೆ ತಕ್ಕ ಆರ್ಥಿಕ ನೀತಿ ರೂಪಿಸುತ್ತಿದ್ದೆವು.

ಅಗೋ ನೋಡಿ. ತೊಂಭತ್ತರ ದಶಕದಲ್ಲಿ ಮನಮೋಹನ್ ಸಿಂಗರು ಹಣಕಾಸು ಸಚಿವರಾಗಿ ಬಂದೇಬಿಟ್ಟರು. ವಲ್ಡ್ ಬ್ಯಾಂಕಿನ ಉದ್ಯೋಗಿಯಾಗಿದ್ದ ಮನಮೋಹನ ಸಿಂಗರನ್ನು ಇಲ್ಲಿನ ಇಂಗ್ಲಿಶ್ ಮಾಧ್ಯಮಗಳು ಆರ್ಥಿಕ ತಜ್ಞರೆಂದು ಬಿಂಬಿಸಿ ಹಿಮಾಲಯದೆತ್ತರಕ್ಕೊಯ್ದು ಕೂರಿಸಿಯೇ ಬಿಟ್ಟರು. ಆದರೆ ವಾಸ್ತವವಾಗಿ ಅವರು ವಲ್ಡ್ ಬ್ಯಾಂಕಿನ ಆಶಯಗಳನ್ನು ಈಡೇರಿಸಲೆಂದೇ ಬಂದ ಕೈಗೊಂಬೆಯಾಗಿದ್ದರು. ಹೀಗಾಗಿಯೇ ಚುನಾವಣೆಯನ್ನೇ ಗೆಲ್ಲದೆ ವಿತ್ತ ಮಂತ್ರಿಯಾಗಿದ್ದು, ಪ್ರಧಾನ ಮಂತ್ರಿಯೂ ಆಗಿದ್ದು!

ಅವರ ಕಾಲದಲ್ಲಿ ಮುಕ್ತ ಆರ್ಥಿಕ ನೀತಿಗೆ ಭಾರತ ತೆರೆದುಕೊಂಡಿತು. ರಫ್ತಿಗೆ ಉತ್ತೇಜನ ಕೊಡುವ ನೆಪದಲ್ಲಿ ವಿದೇಶಿ ಕಂಪನಿಗಳನ್ನು ಆಹ್ವಾನಿಸಲಾಯ್ತು. ಅವರ ಆಗಮನಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಲೆಂದು ಡಾಲರಿಗೆ ಹದಿನೆಂಟು ರೂಪಾಯಿಯಷ್ಟಿದ್ದ ಮೌಲ್ಯವನ್ನು ಮೂವತ್ತೈದು ರೂಪಾಯಿಗಳಿಗೆ ಇಳಿಸಿಬಿಟ್ಟರು. ಇಷ್ಟಾದ ಮೇಲೆಯೂ ಮಾಧ್ಯಮಗಳ ಪಾಲಿಗೆ ಅವರು ಶ್ರೇಷ್ಠ ಆರ್ಥಿಕ ತಜ್ಞರಾಗಿಯೇ ಕಾಣಿಸಿಕೊಂಡರು.

ಇಷ್ಟಕ್ಕೂ ಹೀಗೆ ರೂಪಾಯಿ ಮೌಲ್ಯ ಕುಸಿಯೋದರಿಂದ ನಷ್ಟವೇನು? ನಾವು ಕೊಳ್ಳುವ ಒಂದೊಂದು ಬ್ಯಾರಲ್ ಪೆಟ್ರೋಲಿಗೂ ಮೊದಲಿಗಿಂತ ಹೆಚ್ಚು ದುಡ್ಡು ಕೊಡಬೇಕಾಗುತ್ತೆ. ಹೀಗಾಗಿ ಎಲ್ಲ ವಸ್ತುಗಳ ಬೆಲೆ ಏರುತ್ತೆ. ಬಡ ಭಾರತೀಯನ ರಕ್ತ ಇಂಗಿ ಹೋಗುತ್ತದೆ. ನಾವು ತೊಗೊಂಡ ಒಂದು ಡಾಲರ್ ಸಾಲಕ್ಕೆ ಮೊದಲು ಹದಿನೆಂಟು ರೂಪಾಯಿಗಳಷ್ಟು ಹಣ ಮರಳಿಸಿದರೆ ಸಾಕಿತ್ತು. ೯೧ರ ನಂತರ ನಾವು ಮೂವತ್ತಾರು ರೂಪಾಯಿ ತೀರಿಸಬೇಕಾಗಿ ಬಂತು. ಈ ದೇಶದಲ್ಲಿ ಒಂದು ಡಾಲರನ್ನು ಹೂಡಿದರೆ ಅದರ ಮೌಲ್ಯ ಹದಿನೆಂಟು ರೂಪಾಯಿ ಇದ್ದದ್ದು ಈಗ ದುಪ್ಪಟ್ಟಾಯ್ತು. ಅಂದರೆ ವಿದೇಶೀಯನ ಹೂಡಿಕೆ ಬದಲಾಗಲಿಲ್ಲ. ಆದರೆ ಅವನ ಆಸ್ತಿಯ ಮೌಲ್ಯ ಒಟ್ಟಾಯ್ತು. ನಮ್ಮಲ್ಲಿ ರಫ್ತು ಮಾಡುವವನಿಗೆ ಲಾಭವಾಯ್ತು ನಿಜ. ಆದರೆ ಯಾವ ದೇಶದಲ್ಲಿರಫ್ತಿಗಿಂತ ಆಮದೇ ಹೆಚ್ಚೋ ಆ ದೇಶಕ್ಕೆ ಇದು ಬಲು ದೊಡ್ಡ ಲಾಭವೇನಲ್ಲ, ನೆನಪಿರಲಿ.

ಅಟಲ್ ಜಿ ಅಧಿಕಾರವನ್ನು ತೆಕ್ಕೆಗೆ ತೆಗೆದುಕೊಳ್ಳುವಾಗ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿತ್ತು. ಇಷ್ಟಾದರೂ ಅಟಲ್‌ಜೀ ಪೋಖ್ರಾನ್ ಅಣು ಸ್ಫೋಟ ನಡೆಸಿ ಅಮೆರಿಕಾದ ಕೆಂಗಣ್ಣಿಗೆ ಗುರಿಯಾದರು. ಅಮೆರಿಕ ಸಾಲ ಕೊಡುವುದಿಲ್ಲ ಎಂದಾಗ ವಿದೇಶದಲ್ಲಿರುವ ಭಾರತೀಯರು ಉಳಿಸಿಟ್ಟಿರುವ ಡಾಲರ್‌ಗಳನ್ನು ಭಾರತಕ್ಕೆ ಹರಿಸುವಂತೆ ಪ್ರೇರಣೆ ನೀಡಿದರು. ಮೊದಲ ಬಾರಿಗೆ ಸಾಲವೇ ಇಲ್ಲದ ರಾಷ್ಟ್ರ ಕಟ್ಟುವ ಛಾತಿ ತೋರಿದರು.

ಆದರೇನು? ಮತ್ತೆ ಮನಮೋಹನರ, ಚಿದಂಬರಂರ ತಪ್ಪು ಆರ್ಥಿಕ ನಡೆಗಳು ದೇಶದ ಸ್ವಾಸ್ಥ್ಯ ಕೆಡಿಸಿದವು. ಜನಪ್ರಿಯ ಯೋಜನೆಗಳ ನೆಪದಲ್ಲಿ ತರುಣರನ್ನು ಆಲಸಿಗಳನ್ನಾಗಿಸಿದರು. ವಾಜಪೇಯಿಯವರು ಕೈಗೆತ್ತಿಕೊಂಡ ರಸ್ತೆ ನಿರ್ಮಾಣದ ಯೋಜನೆಗಳನ್ನು ಮೂಲೆಗೊತ್ತಿದರು. ಹೀಗಾಗಿ ಕೆಲಸಕ್ಕೆ ಜನ ಸಿಗುವುದು ನಿಂತಿತು. ನಿರ್ಮಿತ ವಸ್ತುಗಳನ್ನು ಮಾರುಕಟ್ಟೆಗೆ ತಲುಪಿಸಲು ರಸ್ತೆ ಇಲ್ಲವಾಯ್ತು. ಭಾರತದ ಒಟ್ಟಾರೆ ಉತ್ಪನ್ನ ಕುಸಿಯುತ್ತ ಸಾಗಿತು. ಅಲ್ಲಿಗೆ ಆರ್ಥಿಕ ಸಾಮರ್ಥ್ಯ ಕುಸಿಯಿತು. ಅತ್ತ ಷೇರು ಮಾರುಕಟ್ಟೆಯನ್ನು ಮುಕ್ತಗೊಳಿಸಿದ ಮೇಲೆ ಅಂತಾರಾಷ್ಟ್ರೀಯ ಏರುಪೇರುಗಳಿಗೆ ನಾವು ಬಲಿಯಾದೆವು. ಫಲಸ್ವರೂಪವಾಗಿ, ರಿಸರ್ವ್ ಬ್ಯಾಂಕ್ ಬಯಸಿಯೂ ಅಡ್ಡ ಹಾಕಲಾಗದ ಸ್ಥಿತಿಗೆ ರೂಪಾಯಿ ತಲುಪಿತು.

ಇಷ್ಟಾಗಿಯೂ ಮೊನ್ನೆ ರಿಸರ್ವ್ ಬ್ಯಾಂಕ್ ಮಧ್ಯೆ ಪ್ರವೇಶಿಸದಿದ್ದರೆ ಈ ವೇಳೆಗೆ ಒಂದು ಡಾಲರ್ ಅರವತ್ತು ರೂಪಾಯಿ ಆಗಿರುತ್ತಿತ್ತು. ಪೆಟ್ರೋಲು ಡೀಸೆಲ್ಲು, ಆ ಮೂಲಕ ಎಲ್ಲ ಅವಶ್ಯಕ ವಸ್ತುಗಳೂ ಕೊಳ್ಳಲಾಗದಷ್ಟು ಬೆಲೆ ಏರಿಕೆ ಕಂಡಿರುತ್ತಿದ್ದವು. ಕೇಂದ್ರ ಸರ್ಕಾರದಲ್ಲಿ ತಲೆಕೆಡಿಸಿಕೊಳ್ಳಲೂ ಯಾರೂ ಉಳಿದಿಲ್ಲ. ಅವರೆಲ್ಲರಿಗೂ ಉಳಿದಿರುವ ಕೆಲವು ತಿಂಗಳಲ್ಲಿ ಸಾಧ್ಯವಾದಷ್ಟನ್ನೂ ಬಾಚಿಬಿಡುವ ತಹತಹವಿದೆ. ಇತ್ತ, ಇದರ ಬಗ್ಗೆ ಮಾತಾಡಬೇಕಾದ ವಿರೋಧ ಪಕ್ಷದ ನಾಯಕರು ಮುಂದಿನ ಪ್ರಧಾನಿಯಾಗಬೇಕೆಂಬ ತುಡಿತಕ್ಕೆ ಬಲಿ ಬಿದ್ದಿದ್ದಾರೆ.

ಇನ್ನಾದರೂ ಐಪಿಎಲ್, ಅಡ್ವಾಣಿ ಬಿಡಿ. ರೂಪಾಯಿಯನ್ನು ಉಳಿಸಿಕೊಡಿ.

Leave a Reply