ವಿಭಾಗಗಳು

ಸುದ್ದಿಪತ್ರ


 

ಒಳಸಂಚಿಗೆ ಬೇಕಿದೆ ಆತ್ಮವಿಶ್ವಾಸದ ಅಗ್ನಿಸ್ಪರ್ಷ

ಅಗ್ನಿ ೫ ಬಂದನಂತರ ರಣಾಂಗಣದಲ್ಲಿ ನಮ್ಮನ್ನು ಸೋಲಿಸಲು ಚೀನಾಕ್ಕೆ ಸಾಧ್ಯವಾಗಲಾರದು ನಿಜ. ಆದರೆ ಸಂಸತ್ತಿನ ಮೇಜಿನ ಮೇಲೆಯೇ ನಮ್ಮ ಸೋಲಿಗೆ ಷರಾ ಬರೆದರೆ ಯಾರು ಏನು ಮಾಡಿಯಾರು ಹೇಳಿ!?

ನಾಲ್ಕು ವರ್ಷಗಳ ತಪಸ್ಸು ಪೂರ್ಣಗೊಂಡಿದೆ. ೭೦೦ ಕಿ.ಮೀ.ದೂರದವರೆಗೂ ಹೋಗಿ ಶತ್ರು ಠಾಣ್ಯ ನಾಶ ಮಾಡಿಬರಬಲ್ಲ. ಅಗ್ನಿ ೧ನ್ನು ನಭಕ್ಕೆ ಹಾರಿಬಿಟ್ಟಾಗಿನಿಂದಲೂ ೫,೦೦೦ ಕಿ.ಮೀ. ದೂರಕ್ಕೆ ಹೋಗಬಲ್ಲ ಅಗ್ನಿಯ ಕನಸು ಕಾಣುತ್ತಲೇ ಇದ್ದವರು ನಾವು. ಮೊನ್ನೆ ಅಗ್ನಿ ೫ ಯಶಸ್ವಿಯಾಗಿ ಉಡಾವಣೆಗೊಂಡು ಸೈನ್ಯದ ಶಕ್ತಿಯನ್ನು ನೂರ್ಮಡಿಗೊಳಿಸಿದಾಗ ಆ ಕನಸು ನನಸಾಯಿತು. ಕನಸು ನನಸುಗಳ ಕತೆ ಏನೇ ಇರಲಿ. ಸೈನ್ಯದ ಸಾಮರ್ಥ್ಯದ ಕುರಿತಂತೆ ನಡೆಯುತ್ತಿದ್ದ ವಾದ ವಿವಾದಗಳಿಂದ ಈ ಪರೀಕ್ಷೆ ಕೇಂದ್ರ ಸರ್ಕಾರವನ್ನಂತೂ ಪಾರುಮಾಡಿತು. ಅಗ್ನಿಯೂ ತಂಪೆರೆಯಬಲ್ಲದೆಂದರೆ ಹೀಗೇ ನೋಡಿ!
ಈ ನಾಲ್ಕು ವರ್ಷಗಳ ಪ್ರಯತ್ನ ಅಂತ್ಯ ಕಾಣಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕಿತ್ತು. ಆದರೆ ರಕ್ಷಣಾ ಸಚಿವ ಆಂಟನಿ ವಿಜ್ಞಾನಿಗಳಿಗೆ ದುಂಬಾಲು ಬಿದ್ದು ಈ ಪ್ರಯೋಗವನ್ನು ಸಾಧ್ಯವಾಗಿಸಿ ಯಶಸ್ಸು ಗಳಿಸಿಕೊಂಡರು. ಈ ನಿಟ್ಟಿನಲ್ಲಿ ಡಿಆರ್‌ಡಿಓಗೆ ಸಹಕಾರಿಯಾಗಿ ಹಲವು ವೈಜ್ಞಾನಿಕ ಸಂಸ್ಥೆಗಳು ದುಡಿದಿವೆ. ಯಶಸ್ಸಿನ ಈ ಹೊತ್ತಿನಲ್ಲಿ ಆ ವಿಜ್ಞಾನಿಗಳಿಗೆಲ್ಲ ಒಂದು ಪ್ರೀತಿಯ ಸಲಾಮು.
ಅದಿರಲಿ. ಈ ಅಗ್ನಿಯ ವಿಶೇಷವೇನು ಗೊತ್ತೇ? ಈ ಕ್ಷಿಪಣಿ ಚೀನಾದ ಈಶಾನ್ಯವೂ ಸೇರಿದಂತೆ ಇಡಿಯ ಏಷ್ಯಾ, ಯುರೋಪಿನ ಶೇ.೭೦ ಭಾಗ ಹಾಗೂ ಆಸ್ಟ್ರೇಲಿಯಾದ ತೀರಗಳನ್ನು ನಾಶ ಮಾಡಬಲ್ಲದು. ಚೀನಾದ ಎದೆಯಲ್ಲಿ ಅವಲಕ್ಕಿ ಕುಟ್ಟಲು ಪ್ರಾರಂಭವಾಗಿರೋದು ಅದ್ಕಕೇ. ಪಾಕಿಸ್ತಾನವಂತೂ ಇಂತಹದೊಂದು ಪ್ರಯೋಗದ ಯೋಚನೆಯನ್ನೂ ಮಾಡಲಾರದು ಬಿಡಿ. ಆದರೆ ಚೀನಾ ಮಾತ್ರ ತಕ್ಕ ಸಿದ್ಧತೆ ಶುರು ಮಾಡಿದೆ. ಇಂತಹ ಕ್ಷಿಪಣಿಗಳು ಅದರ ಬಳಿ ಇಲ್ಲವೆಂದಲ್ಲ, ಆದರೆ ತಾನು ಬಳಸುವ ಒಂದೊಂದು ಕ್ಷಿಪಣಿಗೂ ಭಾರತ ಪ್ರತ್ಯುತ್ತರ ನೀಡಬಲ್ಲದೆಂಬುದು ಅದಕ್ಕೀಗ ಖಾತ್ರಿಯಾಗಿದೆ. ಅದಕ್ಕೇ ತನ್ನ ಅಧಿಕೃತ ಪತ್ರಿಕೆ ಗ್ಲೋಬಲ್ ಟೈಮ್ಸ್‌ನಲ್ಲಿ ಚೀನಾ ಅಲವತ್ತುಕೊಂಡಿದೆ. ಕಾಲು ಕೆರೆದುಕೊಂಡು ಜಗಳಕ್ಕೆ ಬರಬೇಡಿ ಎಂದೆಲ್ಲ ತಾಕೀತು ಮಾಡಿದೆ.
ಒಟ್ಟಾರೆ ಇಂದು ಅಗ್ನಿಯ ಸೇರ್ಪಡೆಯೊಂದಿಗೆ ಭಾರತ ಜಗತ್ತಿನ ನಾಲ್ಕನೇ ಮಿಲಿಟರಿ ಶಕ್ತಿಯಾಗಿ ಹೊರಹೊಮ್ಮಿರುವುದು ಅಚ್ಚರಿಯ ಸಂಗತಿಯೇನಲ್ಲ. ಇಂತಹ ಕ್ಷಿಪಣಿ ಹೊಂದಿರುವ ಆರು ರಾಷ್ಟ್ರಗಳ ಸಾಲಿನಲ್ಲಿ ಈಗ ಭಾರತವೂ ಎದೆಯೆತ್ತಿ ನಿಲ್ಲುವಂತಾಗಿದೆ.
ಬರಿ ಇಷ್ಟೇ ಆಗಿದ್ದರೆ ವಿಶೇಷ ಎನ್ನಿಸುತ್ತಿರಲಿಲ್ಲ. ಕಳೆದ ಫೆಬ್ರವರಿ ೧೦ಕ್ಕೆ ನಮ್ಮ ವಿಜ್ಞಾನಿಗಳು ಶತ್ರು ರಾಷ್ಟ್ರಗಳ ಕ್ಷಿಪಣಿಗಳನ್ನು ಹೊಡೆದುರುಳಿಸಬಲ್ಲಂತಹ ಪ್ರತಿಕ್ಷಿಪಣಿಗಳನ್ನೂ ಯಶಸ್ವಿಯಾಗಿ ಉಡಾಯಿಸಿದ್ದಾರೆ. ಒರಿಸ್ಸಾದ ಕಡಲ ತೀರದಲ್ಲಿ ನಡೆದ ಈ ಪ್ರಯೋಗ ರಾಮ ರಾವಣರ ಯುದ್ಧದ ಆಧುನಿಕ ಚಿತ್ರದಂತೆ ತೋರುತ್ತಿತ್ತು. ಶತ್ರು ದೇಶದಿಂದ ಹೊರಟಂತೆ ಒಂದು ಪೃಥ್ವಿ ಕ್ಷಿಪಣಿ ಹೊರಟರೆ, ಒರಿಸ್ಸಾದ ಕಡಲ ತೀರದ ಮತ್ತೊಂದು ತುದಿಯಿಂದ ಹೊರಟ ಪ್ರತಿ ಕ್ಷಿಪಣಿ ಅದನ್ನು ಆಕಾಶದಲ್ಲಿಯೇ ಧ್ವಂಸಗೊಳಿಸಿ ವಿಜ್ಞಾನಿಗಳ ಮುಖದಲ್ಲಿ ಮಂದಹಾಸ ತಂದಿತು. ೨,೦೦೦ ಕಿ.ಮೀ. ದೂರದಿಂದ ಹೊರಟ ಕ್ಷಿಪಣಿಯೊಂದನ್ನು ರೇಡಾರ್‌ಗಳು ಗುರುತಿಸಿ, ಅದರ ಹಾದಿಯನ್ನು ಗಮನಿಸುತ್ತಾ ನಮ್ಮ ಪ್ರತಿಕ್ಷಿಪಣಿಗೆ ಮಾರ್ಗದರ್ಶನ ಮಾಡುತ್ತಾ ಆಕಾಶದಲ್ಲಿಯೇ ಶತ್ರು ಕ್ಷಿಪಣಿಗೆ ಢಿಕ್ಕಿ ಹೊಡೆಸಿ ನಾಶಗೈಯುವ ಪ್ರಕ್ರಿಯೆ ಇದೆಯಲ್ಲ, ಅದು ಸಾಮಾನ್ಯ ತಂತ್ರಜ್ಞಾನವೇನಲ್ಲ. ಜೊತೆಗೆ ಈ ಕಾಳಗ ನಮ್ಮ ಹವಾಗೋಳದ ಒಳಗೆ ನಡೆಯದಂತೆ ಎಚ್ಚರಿಕೆ ಬೇರೆ ವಹಿಸಬೇಕಲ್ಲ. ನಮ್ಮ ವಾತಾವರಣದ ಒಳ ಹೊಕ್ಕ ಶತ್ರು ಕ್ಷಿಪಣಿಯನ್ನು ಹೊಡೆದುರುಳಿಸಿದರೆ ನಷ್ಟ ನಮಗೇ. ಅದಕ್ಕೇ ಅದನ್ನು ಆದಷ್ಟು ದೂಎದಲ್ಲಿಯೇ ಧ್ವಂಸಗೈಯುವ ಪ್ರಯಾಸವೂ ಆಗಬೇಕು. ಇದು ಕ್ಷಿಪಣಿಯನ್ನು ಗುರಿಯತ್ತ ನಿಖರವಾಗಿ ಹಾರಿಸಿದಷ್ಟೇ, ಸ್ವಲ್ಪ ಅದಕ್ಕಿಂತಲೂ ಹೆಚ್ಚು ಕಷ್ಟದ ಸಂಗತಿ. ಅಮೆರಿಕಾ, ರಷ್ಯಾ, ಫ್ರಾನ್ಸ್, ಇಸ್ರೇಲನ್ನು ಬಿಟ್ಟರೆ ಇಂತಹ ತಂತ್ರಜ್ಞಾನ ಹೊಂದಿರುವ ೫ನೇ ದೇಶ ನಾವು ಮಾತ್ರ!
ಹೌದು. ತಂತ್ರಜ್ಞಾನದ ದೃಷ್ಟಿಯಿಂದ, ಸೈನಿಕರ ಆತ್ಮಸ್ಥೈರ್‍ಯದ ದೃಷ್ಟಿಯಿಂದ ನಮ್ಮನ್ನು ಸರಿಗಟ್ಟಬಲ್ಲ ರಾಷ್ಟ್ರ ಸಿಕ್ಕೋದು ಕಷ್ಟ. ಆದರೆ ನಮ್ಮನ್ನಾಳುವ ನಾಯಕರ ದೂರದೃಷ್ಟಿಯ ಕೊರತೆ ಮಾತ್ರ ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮನ್ನು ಕಾಡುತ್ತಲೇ ಇದೆ. ಚೀನಾ ನೇರ ಯುದ್ಧಕ್ಕಿಳಿಯದೇ ನಮ್ಮ ಸುತ್ತಲೂ ಶತ್ರುಗಳ ನಿರ್ಮಾಣ ಮಾಡಿ ನಮ್ಮನ್ನು ಹೈರಾಣು ಮಾಡಲು ಅನೇಕ ವರ್ಷಗಳಿಂದ ಪ್ರಯತ್ನಿಸುತ್ತಲೇ ಇದೆ. ಪಾಕಿಸ್ತಾನಕ್ಕೆ ಅದು ನೀಡುತ್ತಿರುವ ಸಹಕಾರವಂತೂ ಎಲ್ಲರಿಗೂ ಗೊತ್ತಿದ್ದದ್ದೇ. ಅದರೊಟ್ಟಿಗೇ ಚೀನಾ ಶ್ರೀಲಂಕಾಕ್ಕೂ ಬಗೆ ಬಗೆಯಲ್ಲಿ ಸಹಾಯ ಮಾಡುತ್ತಿದೆ. ಹಣವಿರಲಿ, ಶಕ್ತಿಯಿರಲಿ ಎಲ್ಲ ದಿಕ್ಕಿನಿಂದಲೂ ಬಗ್ಗಿಸಿಕೊಂಡಿದೆ. ನಾವಾದರೋ ಮಿತ್ರ ಶ್ರೀಲಂಕಾವನ್ನು ಮಾನವ ಹಕ್ಕುಗಳ ಹೆಸರಲ್ಲಿ ವಿರೋಧಿಸಿಕೊಂಡು ಚೀನಾದ ಕೈ ಅದರಲ್ಲಿ ಬಲವಾಗುವಂತೆ ಮಾಡಿಬಿಟ್ಟಿದ್ದೇವೆ. ಇಂತಹದೊಂದು ಮೂರ್ಖ ನಿರ್ಧಾರವನ್ನು ಕೈಗೊಂಡಿದ್ದರ ಪರಿಣಾಮವನ್ನು ನಾವು ಭವಿಷ್ಯದಲ್ಲಿ ಎದುರಿಸಲೇಬೇಕು, ಅನುಮಾನವಿಲ್ಲ. ನಾಳೆ ಭಾರತದ ಮುಸಲ್ಮಾನರು, ಕ್ರಿಶ್ಚಿಯನ್ನರು ನಮ್ಮ ಮೇಲೆ ದಬ್ಬಾಳಿಕೆ ಆಗುತ್ತಿದೆಯೆಂದು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋದರೆ ನಮ್ಮ ಸಹಾಯಕ್ಕೆ ನೆರೆಯ ರಾಷ್ಟ್ರಗಳು ಯಾವುದು ಬಂದಾವು ಹೇಳಿ. ನೌಕಾ ಸೇನೆಯ ದೃಷ್ಟಿಯಿಂದ ನೋಡಿದರೆ ನಮಗಿಂತ ಸಾಕಷ್ಟು ಹಿಂದಿರುವ ಚೀನಾ ತನಗೆ ಬೇಕಾದ ನೌಕಾ ನೆಲೆಯನ್ನು ಶ್ರೀಲಂಕಾದಲ್ಲಿ ಕಂಡುಕೊಳ್ಳುತ್ತಿದೆ ಗೊತ್ತೇನು? ಮಾವೋತ್ಸೆ ತುಂಗನ ಕಾಲದಿಂದಲೂ ಇದ್ದ ಭಾರತವನ್ನು ಆಪೋಶನ ತೆಗೆದುಕೊಳ್ಳಬೇಕೆಂಬ ಕನಸನ್ನು ಚೀನಾ ಈಗ ಮೊದಲಿಗಿಂತಲೂ ಹೆಚ್ಚು ಆಕ್ರಮಣಕಾರಿಯಾಗಿ ನನಸು ಮಾಡಿಕೊಳ್ಳುತ್ತಿದೆ. ಅದಕ್ಕೆ ಪ್ರತಿತಂತ್ರ ಹೆಣೆಯಬೇಕೆಂಬ ಕಿಂಚಿತ್ ಯೋಚನೆಯಾದರೂ ಇದೆಯೆ?
ಹೋಗಲಿ ಬಿಡಿ, ಚೀನಾದ ಸಂಪರ್ಕ ಸಾಧನ ಕಂಪೆನಿ ಹುವೆ (huಚಿತಿei) ತಾನು ಹುಟ್ಟಿಕೊಂಡ ೨೫ ವರ್ಷಗಳಲ್ಲಿ, ಜಾಗತಿಕ ಸಂಪರ್ಕ ಪಡಕೊಂಡ ೧೫ ವರ್ಷಗಳಲ್ಲಿ ಮಾಡಿದ ಸಾಧನೆ ಕಣ್ಣು ಕುಕ್ಕುವಂಥದ್ದು.   ಇಂದು ಭಾರತೀಯರು ಬಳಸುವ ಅಂತರ್ಜಾಲ ಸಂಬಂಧಿತ ೯೦% ಸಾಧನಗಳು ಈ ಕಂಪೆನಿಯಿಂದಲೇ ತಯಾರಾಗುವಂಥವು. ನಮ್ಮ ಸೈನ್ಯದಲ್ಲೂ ಈ ಕಂಪೆನಿಯ ಹಸ್ತ ಆಳಕ್ಕೆ ಇಳಿದಿದೆ. ನಮ್ಮ ಹಿರಿಯ ಅಧಿಕಾರಿಗಳು ಬಳಸುವ ಮೊಬೈಲಿನಿಂದ ಹಿಡಿದು, ವಿಜ್ಞಾನಿಗಳು ಬಳಸುವ ಅಂತರ್ಜಾಲ ಸಂಪರ್ಕ ಸಾಧನದವರೆಗೆ ಎಲ್ಲವೂ ಚೀನಾದ್ದೇ. ಮುಂದೆ ಮಹತ್ವದ ದಿನ ಬಂದಾಗ ಈ ಸಾಧನಗಳನ್ನು ಹುವೆ ನಿಷ್ಕ್ರಿಯಗೊಳಿಸಿಬಿಟ್ಟರೆ, ಎಲ್ಲಾ ಇದ್ದೂ ಇಲ್ಲದಂತಿರುವ ಸ್ಥಿತಿಗೆ ನಾವು ತಲುಪಿಬಿಟ್ಟೇವು.  (ಕರ್ಣ ಸಮಯಕ್ಕೆ ಸರಿಯಾಗಿ ಯುದ್ಧ ವಿದ್ಯೆಯನ್ನು ಮರೆತಂತೆಯೇ ಇದು, ಎಚ್ಚರಿಕೆ!)
ಈ ಕಂಪೆನಿಯ ವಸ್ತುಗಳಿಗೆ ಬಿಎಸ್ಸೆನ್ನೆಲ್. ಅವಕಾಶ ನೀಡಬಾರದೆಂದು ಬಹಳ ಹಿಂದೆಯೇ ನಮ್ಮ ಗುಪ್ತಚರರು ವರದಿ ನೀಡಿದ್ದರು. ಅರುಣ್ ಶೌರಿ ಕಾಲಕ್ಕೆ ಈ ಕುರಿತಂತೆ ಸಾಕಷ್ಟು ಚರ್ಚೆಗಳೂ ನಡೆದು ಈ ಕಂಪೆನಿಯನ್ನು ದೂಎರವಿಡುವ ನಿರ್ಧಾರವೂ ಆಗಿತ್ತು. ಅದು ಹೇಗೋ ಗವಾಕ್ಷಿಯಿಂದ ಭೂತ ಮತ್ತೆ ನುಸುಳಿದೆ. ನಮ್ಮ ಸೈನ್ಯದೊಳಗೆ ಆಗುವ ಪ್ರತಿ ಚಲನವಲನವನ್ನು ಚೀನಾ ಕುಳಿತಲ್ಲಿಂದಲೇ ಗಮನಿಸುವಷ್ಟು ಸಾಮರ್ಥ್ಯ ಪಡೆದುಕೊಂಡಿದೆ. ಈಗ ಹೇಳಿ, ನಮ್ಮನ್ನು ಆಳುವ ನಾಯಕರು ಇವುಗಳ ಬಗ್ಗೆ ಯೋಚಿಸದೆ ಇರುವಷ್ಟು ಮೂರ್ಖರಾಗಿಬಿಟ್ಟಿದ್ದಾರಾ?
೧೭೫೭ರಲ್ಲಿ ಸಿರಾಜುದ್ದೌಲನ ಬಳಿಯೂ ಸಾಕಷ್ಟು ಸೈನ್ಯವಿತ್ತು, ಶಸ್ತ್ರಗಳಿದ್ದವು. ಎದುರಾಳಿ ರಾಬರ್ಟ್ ಕ್ಲೈವನ ಬಳಿ ಹೇಳಿಕೊಳ್ಳುವಷ್ಟು ಸೈನ್ಯವಾಗಲೀ ಶಸ್ತ್ರಗಳಾಗಲೀ ಇರಲಿಲ್ಲ. ಆದರೆ ಅವನ ಬಳಿ ಕುಟಿಲ ನೀತಿಗಳಿದ್ದವು. ಆತ ಮೀರ್ ಜಾಫರ್‌ನನ್ನು ಬುಟ್ಟಿಗೆ ಹಾಕಿಕೊಂಡ. ನಮ್ಮ ಸೈನ್ಯ ಕಾದಾಡಲಿಲ್ಲ. ಸಿರಾಜುದ್ದೌಲನ ಹತ್ಯೆಯಾಯಿತು. ದೇಶ ಗುಲಾಮವಾಯಿತು. ಮನಮೋಹನರೂ ಸಿರಾಜುದ್ದೌಲನಂತೆಯೇ. ಅವರೊಡನೆ ಹಣಕ್ಕಾಗಿ ತಮ್ಮನ್ನೇ ಮಾರಿಕೊಳ್ಳುವ ಅನೇಕ ಮೀರ್‌ಜಾಫರ್‌ಗಳೂ ಇದ್ದಾರೆ. ಅದಕ್ಕೇ ಹೆದರಿಕೆಯಾಗೋದು. ಅಗ್ನಿ ೫ ಬಂದನಂತರ ರಣಾಂಗಣದಲ್ಲಿ ನಮ್ಮನ್ನು ಸೋಲಿಸಲು ಚೀನಾಕ್ಕೆ ಸಾಧ್ಯವಾಗಲಾರದು ನಿಜ. ಆದರೆ ಸಂಸತ್ತಿನ ಮೇಜಿನ ಮೇಲೆಯೇ ನಮ್ಮ ಸೋಲಿಗೆ ಷರಾ ಬರೆದರೆ ಯಾರು ಏನು ಮಾಡಿಯಾರು ಹೇಳಿ. ನೆಹರೂ ಪಾಕಿಸ್ತಾನಕ್ಕೆ ಭೂಮಿ ಬಿಟ್ಟರು. ಆಗಲೂ ನಮ್ಮ ಶಕ್ತಿಯೇ ಹೆಚ್ಚಿತ್ತು. ಲಾಲ್ ಬಹದ್ದೂರರು ಅನಗತ್ಯವಾಗಿ ತಾಷ್ಕೆಂಟಿನಲ್ಲಿ ಒಪ್ಪಂದಕ್ಕೆ ಬಲಿಯಾದರು. ೯೦ ಸಾವಿರ ಶತ್ರು ಸೈನಿಕರನ್ನು ಬಂಧಿಸಿಯೂ ಒಪ್ಪಂದದ ಮೇಜಿನಲ್ಲಿ ಇಂದಿರಾ ಗಾಂಧಿ ಸೋತರು. ಕಾರ್ಗಿಲ್‌ನಲ್ಲಿ ಕಷ್ಟಪಟ್ಟು ಗೆದ್ದ ಭೂಮಿಯಲ್ಲಿ ನಮ್ಮ ಸೈನಿಕರೇ ನಿಂತು ಶತ್ರು ಸೈನಿಕರಿಗೆ ’ಸೇಫ್ ಪ್ಯಾಸೇಜ್’ ನೀಡಬೇಕಾಯ್ತು. ಅದು ವಾಜಪೇಯಿಯವರು ಮಾಡಿಕೊಂಡ ಒಪ್ಪಂದ. ಹೇಳಿ, ಸೋತಿದ್ದು ಸೈನಿಕರಾ, ಆಳುವ ಧಣಿಗಳಾ?
ಅಗ್ನಿ ಬಂತು ಅಂದೊಡನೆ ಒಮ್ಮೆ ಇವೆಲ್ಲವನ್ನೂ ಕೇಳಬೇಕನ್ನಿಸಿತು ಅಷ್ಟೇ. ದೇಶದೊಡನೆ ಘನಿಷ್ಟ ಬಾಂಧವ್ಯ ಇರುವ ಸೈನಿಕರು – ವಿಜ್ಞಾನಿಗಳು ತಮ್ಮನ್ನೇ ಪನವಾಗಿಟ್ಟುಕೊಂಡು ನಮ್ಮ ಆತ್ಮಸ್ಥೈರ್‍ಯ ಹೆಚ್ಚಿಸುತ್ತಾರೆ. ಆಳುವವರು ತಮ್ಮನ್ನೇ ಮಾರಿಕೊಂಡು ನಮ್ಮಲ್ಲಿ ಹೆದರಿಕೆಯ ಬೀಜ ಬಿತ್ತುತ್ತಾರೆ. ಈ ಹೆದರಿಕೆಗೂ ಅಗ್ನಿಸ್ಪರ್ಷ ಮಾಡಬಲ್ಲ ನಾಯಕನೊಬ್ಬನಿಗಾಗಿ ದೇಶ ಕಾಯುತ್ತಿದೆ. ಆತ ಆಳುತ್ತಾನಾ? ಅದೇ ಕೋಟಿ ರೂಪಾಯಿ ಪ್ರಶ್ನೆ.

Leave a Reply