ವಿಭಾಗಗಳು

ಸುದ್ದಿಪತ್ರ


 

ಓಡುವ ನದಿ ಮುನಿದರೆ…. ಹರಿವ ದಾರಿ ಮರೆತರೆ…

ಗಾಳಿ, ನೀರು ನಮ್ಮ ಬದುಕಿನ ಮೂಲ ಘಟಕಗಳು. ಅವುಗಳಿಂದಲೇ ಆಹಾರ, ಅವುಗಳಿಂದಲೆ ಕಾಡು- ನಾಡು ಎಲ್ಲವೂ. ಚಂದ್ರನ ಮೇಲೆ ನಾವು ಕಳಿಸುತ್ತಿರುವ ಯಂತ್ರಗಳೆಲ್ಲ ಹುಡುಕುತ್ತಿರೋದು ಗಾಳಿ- ನೀರನ್ನೆ. ನಾವು ಮಾತ್ರ ಇದ್ದ ನೀರನ್ನೂ ಖಾಲಿ ಮಾಡಿ ಭೂಮಿಯನ್ನು ಬಂಜರು ಮಾಡುತ್ತಿದ್ದೇವೆ, ವಾತವರಣವನ್ನು ಕಲುಷಿತಗೊಳಿಸಿ, ಬದುಕನ್ನೆ ದುಸ್ತರಗೊಳಿಸಿಕೊಳ್ಳುತ್ತಿದ್ದೇವೆ.

ಮೂರು ವರ್ಷಗಳ ಹಿಂದೆ ಕೊರೆದ ಬೋರ್‌ವೆಲ್‌ನಲ್ಲಿ ನೀರು ಕಡಿಮೆಯಾಗಿದೆ ಅಂತ, ಮೂರು ತಿಂಗಳ ಹಿಂದೆ ನಮ್ಮ ಮನೆಯಲ್ಲಿ ಮತ್ತೊಂದು ಬಾವಿ ಕೊರೆದಿದ್ದಾರೆ. ದುರಂತವೆಂದರೆ ೧೧೦೦ ಅಡಿ ಕೆಳಗೆ ದಕ್ಕಿರುವ ನೀರಿನ ಸೆಲೆ ಇನ್ನೊಂದು ವರ್ಷದಲ್ಲಿ ಬತ್ತಿಹೋಗುವಷ್ಟು ಮಾತ್ರ! ಕೋಲಾರದಲ್ಲಿ ಕೊಳವೆ ಬಾವಿ ಕೊರೆಯದಿರಲು ಆಜ್ಞೆ ಜಾರಿಯಾಗಿದೆ. ಮನೆಗೆ ಅಡಿಪಾಯ ಹಾಕಹೋದರೆ ದೊರೆಯುತ್ತಿದ್ದ ನೀರು ಉತ್ತರಕನ್ನಡದಲ್ಲೀಗ ೫೦೦ ಅಡಿ ಆಳಕ್ಕಿಳಿದುಬಿಟ್ಟಿದೆ. ಉತ್ತರ ಕರ್ನಾಟಕದ ಭಣಗುಡುವ ಬಿಸಿಲನಲ್ಲಿ ಶುದ್ಧ ನೀರೆಂದರೆ ಬಾಟಲಿಯ ನೀರು ಅಂತಾಗಿಬಿಟ್ಟಿದೆ. ಈ ಬಾರಿಯ ಬರ ಭೀಕರ, ಹಾದಿ ಹೀಗೇ ಸವೆದರೆ ಬರಲಿರುವ ದಿನಗಳು ಇನ್ನೂ ಭಯಂಕರ!

೨೦೦೬ರಲ್ಲಿ ನಾವು ಬಳಸಿದ ನೀರಿನ ಪ್ರಮಾಣ ೮೨೯ ಬಿ.ಕ್ಯು.ಮೀ. ೨೦೫೦ರ ವೇಳೆಗೆ ಅದರ ಎರಡರಷ್ಟು ನೀರು ನಮಗೆ ಬೇಕು. ದುರಂತ, ಆ ವೇಳೆಗೆ ನಮ್ಮ ಬಳಿ ಈಗಿನ ಅರ್ಧದಷ್ಟು ನೀರೂ ಉಳಿದಿರಲಾರದು! ಅಪಾರ ಕೃಷಿಯೋಗ್ಯ ಭೂಮಿಯನ್ನು ಹೊಂದಿದ್ದರೂ ಧಾನ್ಯೋತ್ಪಾದನೆಯಲ್ಲಿ ನಾವು ಸೋಲುತ್ತಿರುವ ಮುಖ್ಯ ಕಾರಣ ನೀರೇ! ಕಳೆದ ದಶಕದಿಂದೀಚೆಗೆ ನೀರಿಲ್ಲದೇ ಬಂಜರಾಗುತ್ತಿರುವ ಭೂಮಿಯ ಪ್ರಮಾಣವೂ ಹೆಚ್ಚುತ್ತಿದೆ. ಅದಕ್ಕೇ ಕಳೆದ ಫೆಬ್ರುವರಿಯಲ್ಲಿ ನದಿ ಜೋಡಣೆಯ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಸುಪ್ರೀಂ ಕೋರ್ಟು ಸರ್ಕಾರಗಳಿಗೆ ಆದೇಶಿಸಿರೋದು. ಮೇಲ್ನೋಟಕ್ಕೆ ಗಂಗೆ-ಕಾವೇರಿಯರು ಬೆಸೆದುಕೊಂಡರೆ ಚಂದ ಅನಿಸುತ್ತೆ. ನಡುಭಾಗದ ಭೂಮಿಯನ್ನು ಹತ್ತಿ-ಇಳಿಯುವ ಹಾದಿಯಲ್ಲಿ ಗಂಗೆ ಮುನಿದು ಮರಳಿಬಿಟ್ಟರೆ..? ಒಂದಿಡೀ ನಾಗರಿಕತೆ ನಾಶವಾಗಿಬಿಡುವ ಹೆದರಿಕೆ ಪರಿಸರವಾದಿಗಳನ್ನು ಕಾಡುತ್ತಿದೆ.
ನದಿಗಳನ್ನು ಬೆಸೆಯುವ ಯೋಜನೆ ಇಂದು ನೆನ್ನೆಯದಲ್ಲ. ೧೮೫೮ರಲ್ಲಿಯೇ ಕರ್ನಲ್ ಆರ್ಥರ್ ಕಾಟನ್ ಭಾರತವನ್ನು ಕಾಲುವೆಗಳಿಂದ ಬೆಸೆಯುವ ಯೋಜನೆ ಮುಂದಿಟ್ಟಿದ್ದ. ಅದಕ್ಕೆ ತಗಲುವ ವೆಚ್ಚ ಕಂಡು ಗಾಬರಿಗೊಂಡ ಸರ್ಕಾರ ಸುಮ್ಮನಾಗಿತ್ತು. ಎಡವಟ್ಟಾದರೆ ನಷ್ಟವಾದೀತೆಂದು ಹೆದರಿತ್ತು. ಮುಂದೆ ೭೦ರ ದಶಕದಲ್ಲಿ ಗಂಗೆ ಕಾವೇರಿ ಬೆಸೆಯುವ ಯೋಜನೆ ಸರ್ಕಾರದೆದುರು ಬಂತು. ೨೬೪೦ ಕಿ.ಮೀ.ಗಳ ಈ ಯೋಜನೆಗೆ ೧೨ಸಾವಿರ ಕೋಟಿ ರೂಪಾಯಿಗಳ ವೆಚ್ಚ ತಗಲುವ ಕಲ್ಪನೆಯೇ ಭಯಾನಕವಾಗಿತ್ತು. ಯೋಜನೆ ಕಸದ ಬುಟ್ಟಿ ಸೇರಿತು. ಮುಂದೆ ಆ ದಶಕದ ಕೊನೆಯಲ್ಲಿ ಹಿಮಾಲಯದ ನದಿಗಳನ್ನು ಹಾರದಂತೆ ಬೆಸೆಯುವ ೯,೩೦೦ ಕಿ.ಮೀ ಉದ್ದದ ಯೋಜನೆ ಬಂತು, ಹೋಯ್ತು. ಎನ್‌ಡಿಎ ಸರ್ಕಾರ ಸುರೇಶ್ ಪ್ರಭು ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ಕೇಳಿತು. ಸಮಿತಿ ವರದಿಯನ್ನು ಕೊಟ್ಟಿತು ನಿಜ, ಆದರೆ ಎಲ್ಲ ಬಗೆಯ ಸಮಸ್ಯೆಗಳಿಗೆ ನದೀ ಜೋಡಣೆಯಿಂದ ಪರಿಹಾರ ದೊರಕಲಾರದೆಂದೂ ಒಪ್ಪಿಕೊಂಡಿತ್ತು. ಈಗ ಮತ್ತೊಮ್ಮೆ ನದೀ ಜೋಡಣೆಯ ವಿಚಾರಕ್ಕೆ ಜೀವ ಬಂದಿದೆ. ಈ ಬಾರಿ ಒಟ್ಟಾರೆ ಖರ್ಚು ಸುಮಾರು ೨೦ ಲಕ್ಷ ಕೋಟಿಯಾದರೂ ಆದೀತು. ನೆನಪಿಡಿ, ಕರ್ನಾಟಕದ ವರ್ಷಿಕ ಬಜೆಟ್ ಒಂದು ಲಕ್ಷ ಕೋಟಿ ಮಾತ್ರ.
ನದಿ ಜೋಡಣೆ ಯೋಜನೆ ಎಷ್ಟು ಮನಮೋಹಕವೋ ಅಷ್ಟೇ ಸಮಸ್ಯೆಗಳ ಆಗರ ಕೂಡಾ. ಮಧ್ಯ ಪ್ರದೇಶದ ಕೆನ್ ಮತ್ತು ಬೇಟ್ವಾ ನದೀ ಜೋಡಣೆಯೊಂದೇ ಅಲ್ಲಿನ ಪನ್ನಾ ರಕ್ಷಿತಾರಣ್ಯದ ಎರಡರಷ್ಟು ಅರಣ್ಯವನ್ನು ನುಂಗಿ ನೀರು ಕುಡಿದುಬಿಡುತ್ತದೆ. ಇನ್ನು ದೇಶದ ಮೂವತ್ತು ನದಿಗಳನ್ನು ಜೋಡಿಸಿದರೆ ಕಥೆ ಏನಾದೀತು? ೨೦೦೭ರ ಒಂದು ವರದಿಯ ಪ್ರಕಾರ ಭಾರತದ ನದೀಜೋಡಣೆ ಯೋಜನೆ ಏಳೂ ಮುಕ್ಕಾಲು ಲಕ್ಷ ಹೆಕ್ಟೇರ್ ಭೂಮಿಯನ್ನು ಅಪೋಶನ ತೆಗೆದುಕೊಳ್ಳದೆ. ಸುಮಾರು ೧೫ ಲಕ್ಷ ಜನರು ನಿರ್ವಸಿತರಾಗುತ್ತಾರೆ. ಸುಮಾರು ೨೦ ಹೆಕ್ಟೇರ್ ಭೂಮಿ ಕಾಲುವೆ ಕೊರೆಯಲಿಕ್ಕೇ ಬೇಕು. ಇದರಲ್ಲಿ ಒಂದು ಲಕ್ಷ ಹೆಕ್ಟೇರ್ ನಷ್ಟು ಭೂಮಿ ಅರಣ್ಯದ್ದಾಗಿದೆ ಎನ್ನುವುದೇ ಭಯಾನಕ. ಹೇಳಿ, ಇಷ್ಟು ಸವಾಲು ಸ್ವೀಕರಿಸಲು ಸಿದ್ಧವಿದ್ದೇವೆಯೇ? ಇಷ್ಟಕ್ಕೂ ಈ ಯೋಜನೆಗೆ ಹಸಿರು ನಿಶಾನೆ ದೊರೆತೊಡನೆ ಜಗತ್ತಿನ ಆಕ್ರಾಮಕ ಕಂಪೆನಿಗಳು ಅರಣ್ಯವನ್ನು ಸಪಾಟು ಮಾಡಲು ಧಾವಿಸುತ್ತವೆ. ಮೊದಲು ಆ ಕೆಲಸ. ಆಮೇಲೆ ಭೂಮಿಯನ್ನು ವಶಪಡಿಸಿಕೊಳ್ಳುವಲ್ಲಿ ಹೋರಾಟ. ಇಷ್ಟೆಲ್ಲ ಆದನಂತರ ಕಾಮಗಾರಿ ಶುರುವಾಗಬೇಕು. ಅಷ್ಟರೊಳಗೆ ಭೂ ಮಂಡಲದ ತಾಪಮಾನದಲ್ಲಿ ಏರುಪೇರಾಗಿ ನದಿಯ ನೀರಿನ ಸೆಲೆ ಕಡಿಮೆಯಾಗುತ್ತ ಈ ಯೋಜನೆಯನ್ನೇ ಕೈಬಿಟ್ಟರೆ ಅಚ್ಚರಿಯಿಲ್ಲ.
ಹಾಗೆ ನೋಡಿದರೆ ನಮ್ಮ ಕೃಷಿಯ ಅರ್ಧಕ್ಕೂ ಹೆಚ್ಚು ಭಾಗ ಭೂಗರ್ಭದ ನೀರಿನ ಆಧಾರದ ಮೇಲೆಯೇ ನಿಂತಿರೋದು. ಹಳ್ಳಿಯ ಶೇಕಡಾ ೯೦ರಷ್ಟು, ಪಟ್ಟಣದ ಶೇ.೫೦ರಷ್ಟು ಕುಡಿಯುವ ನೀರಿಗೆ ಭೂಗರ್ಭದ ನೀರೇ ಆಧಾರ. ಅದರೆ, ನಮ್ಮ ನೀರಾವರಿ ಬಜೆಟ್ಟಿನ ಮುಕ್ಕಾಲು ಭಾಗ ಡ್ಯಾಮ್ಗಳ ನಿರ್ಮಾಣಕ್ಕೆ ಮೀಸಲಾಗಿಟ್ಟಿರುವುದು ಮಹಾ ದುರಂತ.
ನೆನಪು ಮಾಡಿಕೊಳ್ಳಿ, ೧೯೮೦ರ ಅರಂಭದಲ್ಲಿ ರಾಜಸ್ಥಾನದ ಆಳ್ವಾರಿನ ಅನೇಕ ಭಾಗಗಳನ್ನು ಕಪ್ಪು ಪ್ರದೇಶವೆಂದು ಘೋಷಿಸಲಾಗಿತ್ತು. ಅದರರ್ಥ, ಅಲ್ಲಿ ಇನ್ನು ಭೂಗರ್ಭದ ಜಲವೇ ಇಲ್ಲ ಅಂತ. ರಾಜೇಂದ್ರ ಸಿಂಗರ ನೇತೃತ್ವದ ತರುಣ ಭಾರತದ ೧೫ ಜನ ಅಲ್ಲಿಗೆ ಹೋಗಿ ಮಳೆಯ ನೀರನ್ನು ಇಂಗಿಸುವ ಯತ್ನ ಶುರು ಮಾಡಿದರು. ಆರಂಭದ ದಿನಗಳಲ್ಲಿ ಮಕ್ಕಳ ಕಳ್ಳರೆಂದು ಜನರ ಬಳಿ ಅವರು ಹೊಡೆತ ತಿಂದದ್ದೂ ಇದೆ. ಕ್ರಮೇಣ ರಾಜೇಂದ್ರ ಸಿಂಗರ ಪ್ರಯತ್ನ ಜನರಿಗೆ ಮನದಟ್ಟಾಯಿತು. ಭೂಮಿಯೊಳಗೆ ನಿರ್ಮಿಸಲಾದ ನೀರಿಂಗುವ ತೊಟ್ಟಿಗಳು ನೀರನ್ನು ಹಿಡಿದವು, ಭೂಮಿಯೊಳಗೆ ಇಂಗಿಸಿದವು. ನೋಡನೋಡುತ್ತ ಅಂತರ್ಜಲದ ಮಟ್ಟ ಏರಿತು, ಕಪ್ಪು ಪ್ರದೇಶದ ಹಣೆಪಟ್ಟಿ ಹೋಗಿ, ಆಳ್ವಾರ್, ಸಮೃದ್ಧ ನೀರಿನ ಪ್ರದೇಶವಾಯಿತು. ಅಂದು ೫೦ ಸಾವಿರದಲ್ಲಿ ಎರಡು ತೊಟ್ಟಿ ಕಟ್ಟಿಕೊಂಡವ, ಇಂದು ವರ್ಷಕ್ಕೆ ಮೂರು ಕೋಟಿಯಷ್ಟು ಕೃಷಿ ಪದಾರ್ಥ ಬೆಳೆಯುತ್ತಾನೆ. ಅದು ಬಿಡಿ, ೧೯೮೬ರಲ್ಲಿ ಬತ್ತಿ ಹೋಗಿದ್ದ ಅರವಾರಿ ನದಿಯಗುಂಟ ನೀರಿಂಗಿಸಿದ್ದರ ಪರಿಣಾಮವಾಗಿ ಆ ನದಿಯೇ ಪುನರುಜ್ಜೀವಿತಗೊಂಡು ಲಕಲಕಿಸಿ ಹರಿಯಲಾರಂಭಿಸಿತು. ಡಿಸೆಂಬರ್‌ಗೇ ಬತ್ತುತ್ತಿದ್ದ ನೀರು ಈಗ ಮಾರ್ಚ್- ಏಪ್ರಿಲ್ ವರೆಗೂ ಕಾಣಸಿಗುತ್ತದೆಂದರೆ, ನೀವೇ ಲೆಕ್ಕ ಹಾಕಿ.
ಗಾಳಿ, ನೀರು ನಮ್ಮ ಬದುಕಿನ ಮೂಲ ಘಟಕಗಳು. ಅವುಗಳಿಂದಲೇ ಆಹಾರ, ಅವುಗಳಿಂದಲೆ ಕಾಡು- ನಾಡು ಎಲ್ಲವೂ. ಚಂದ್ರನ ಮೇಲೆ ನಾವು ಕಳಿಸುತ್ತಿರುವ ಯಂತ್ರಗಳೆಲ್ಲ ಹುಡುಕುತ್ತಿರೋದು ಗಾಳಿ- ನೀರನ್ನೆ. ನಾವು ಮಾತ್ರ ಇದ್ದ ನೀರನ್ನೂ ಖಾಲಿ ಮಾಡಿ ಭೂಮಿಯನ್ನು ಬಂಜರು ಮಾಡುತ್ತಿದ್ದೇವೆ, ವಾತವರಣವನ್ನು ಕಲುಷಿತಗೊಳಿಸಿ, ಬದುಕನ್ನೆ ದುಸ್ತರಗೊಳಿಸಿಕೊಳ್ಳುತ್ತಿದ್ದೇವೆ. ಅದಕ್ಕೇ ಸುರೇಶ್ ಪ್ರಭು, ರಾಜಕೀಯ ನೇತರರಾಗಿದ್ದೂ ಈ ವಿಚಾರದಲ್ಲಿ ಮಾತ್ರ ರಾಜಕೀಯ ತರಬೇಡಿರೆಂದು ಸಂದರ್ಶನದಲ್ಲಿ ಗೋಗರೆದಿರೋದು.
ಮಹಾರಾಷ್ಟ್ರದ ಕಾಂಗ್ರೆಸ್ ನೇತಾರ ಅಮರೀಷ್ ಪಟೇಲ್ ಮತ್ತು ನಿವೃತ್ತ ಭೂಗರ್ಭ ಶಾಸ್ತ್ರಜ್ಞ, ಆರೆಸ್ಸೆಸ್‌ನ ಸುರೇಶ್ ಖಾನಾಪುರ್‌ಕರ್, ದಶಕಗಳಷ್ಟು ಹಿಂದೆಯೇ ತಮ್ಮ ನಡುವಿನ ಸೈದ್ಧಾಂತಿಕ ಭೇದ ಮರೆತು, ನೀರಿಗಾಗಿ ಒಂದಾಗಿದ್ದರು. ಅಲ್ಲಿನ ಧುಲೆ ಜಿಲ್ಲೆಯ ಶಿರಪುರ ತಾಲ್ಲೂಕಿನಲ್ಲಿ ಬತ್ತಿಹೋಗಿದ್ದ ನಿರು ಇಂದು ಮತ್ತೆ ಭೋರ್ಗರೆಯುತ್ತಿದೆ. ವರ್ಷಕ್ಕೆ ಒಂದು ಬೆಳೆ ತೆಗೆಯಲು ಹೈರಾಣಾಗುತ್ತಿದ್ದ ರೈತ ಈಗ ಎರಡನೇ ಬೆಳೆಯನ್ನು ತೆಗೆದು ಸುಖದಿಂದಿದ್ದಾನೆ. ಅಮರೀಷ್ ಪಟೇಲರು ತಮ್ಮ ಸಹಕಾರಿ ಸಂಸ್ತೆಯ ಲಾಭವನ್ನು ಈ ಯೋಜನೆಗೆ ಸುರಿದಿದ್ದಾರೆ. ಅಚ್ಚರಿ ಏನು ಗೊತ್ತೆ? ನೂರೈತ್ತು ಚದರ ಕಿ.ಮೀ.ಗಳಷ್ಟು ಭುಮಿಯಲ್ಲಿ ಕಳೆದ ಎಂಟು ವರ್ಷಗಳಲ್ಲಿ ಅವರು ಮಾಡಿರುವ ಖರ್ಚು ಅರೂವರೆ ಕೋಟಿಯಷ್ಟು ಮಾತ್ರ.
ಬೆಳೆ ಹಾಳಾದೊಡನೆ ನಮ್ಮ ಸರ್ಕಾರಗಳು ರೈತನಿಗೆ ಹಣದ ಪರಿಹಾರ ಘೋಷಿಸಿಬಿಡುತ್ತವೆ. ಅದು ಅವನಲ್ಲೇನೂ ಬಲ ತುಂಬಿಕೊಳ್ಳುವುದಿಲ್ಲ, ಬದಲಿಗೆ ಅವನನ್ನು ಶಾಶ್ವತವಾಗಿ ಬೇಡುವವನನ್ನಾಗಿಸಿಬಿಡುತ್ತದೆ. ಮಧ್ಯಪ್ರದೇಶದ ಜಾಬುವಾ ಜಿಲ್ಲೆಯಲ್ಲಿ ಸ್ವಾವಲಂಬಿ ಆಂದೋಲನದ ನೇತೃತ್ವ ವಹಿಸಿದ ಹಿರಿಯರೊಬ್ಬರು ಹೇಳಿದ ಮಾತು ಮನನೀಯ. ಊಟ ಹಾಕೋದು ನಿಜವದ ಸೇವೆಯಲ್ಲ, ಊಟ ಗಳಿಸುವ ಮಾರ್ಗ ತೋರೋದು ನಿಜವಾದ ಸೇವೆ. ನೀರಿನ ವಿಚಾರದಲ್ಲಿ ನಾವು ಸ್ವಾವಲಂಬಿಯಾಗಬೇಕೆಂದರೆ ಇರುವುದನ್ನು ಹಾಗೆಯೇ ಉಳಿಸಿಕೊಂಡು, ನೀರಿನ ಸೆಲೆ ಹೆಚ್ಚಿಸಬೇಕೇ ಹೊರತು, ಇರುವುದನ್ನುನ ನಾಶಮಾಡಿ, ನೀರಿನ ಸ್ರೋತವನ್ನೆ ಮುಗಿಸುವುದಲ್ಲ.
ನಮ್ಮೂರಿನ ಕೆರೆ ನೋಡಿದಾಗೆಲ್ಲ ಹೊಟ್ಟೆ ಉರಿಯುತ್ತದೆ. ಸೂಲಿಬೆಲೆಯ ಕೆರೆ ತುಂಬಿದರೆ ಸುತ್ತಲ ಹಳ್ಳಿಗಳಿಗೆ ನೀರು. ಹೊಸಕೋಟೆ ಕೆರೆ ತುಂಬಿದರೆ, ಸುತ್ತಲ ತಾಲ್ಲೂಕಿಗೆ ನೀರು ಅಂತ ರೈತರು ಹೇಳೋದನ್ನ ಚಿಕ್ಕಂದಿನಲ್ಲಿ ಕೇಳುತ್ತಿದ್ದೆ. ಆ ಕೆರೆ ತುಂಬಿ ಎರಡು ದಶಕಗಳಾದರೂ ಕಳೆದಿವೆ. ಆಳು ಮುಳುಗುವಷ್ಟು ಹೂಳು ಆ ಕೆರೆಗಳಲ್ಲಿ. ಅರಣ್ಯ ಇಲಾಖೆಯಂತೂ ನಮ್ಮೂರಿನ ಕೆರೆಯೊಳಗೆ ನಿರುಪಯುಕ್ತ ಯೂಕಲಿಪ್ಟಸ್ ಗಿಡಗಳನ್ನು ನೆಟ್ಟು ಎರಡೇ ವರ್ಷಗಳಲ್ಲಿ ಹೆಲಿಕಾಪ್ಟರಿಗೆ ಹಸಿರುಹಸಿರು ಕಾಣುವ ಅರಣ್ಯದ ನಿರ್ಮಾಣ ಮಾಡಿದೆ. ಈ ಗಿಡಗಳಾದರೋ, ಭೂಗರ್ಭದ ನೀರನ್ನೆ ಬತ್ತಿಸಿ, ಕೆರೆಯನ್ನೂ ನಾಶಮಾಡಿಬಿಟ್ಟಿವೆ. ಹೇಳಿ, ನಮ್ಮೂರಿನ ಕೆರೆಗಳನ್ನೆ ಉಳಿಸಿಕೊಳ್ಳಲಾಗದ, ಪಕ್ಕದ ಕೆರೆಗಳೊಂದಿಗೆ ಜೋಡಿಸಿಕೊಳ್ಳಲಾಗದ ನಾವು, ನದಿ ಜೋಡಿಸುವಲ್ಲಿ ಗೆಲ್ಲುತ್ತೀವಾ? ಕೆರೆಗಳಿಂದ ಉಪಕೃತಗೊಂಡ ರೈತ, ತಾನೇ ನಾಲ್ಕು ವರ್ಷಕ್ಕೊಮ್ಮೆ ಕೆರೆಗಳಿಂದ ಹೂಳೆತ್ತುವ ಪ್ರಕ್ರಿಯೆ ನಡೆಸುತ್ತಿದ್ದನಂತೆ. ಅದಕ್ಕೆ ಕೈಹಾಕಿ ನಿಭಾಯಿಸುವೆನೆಂದು ಹೊರಟ ಸರ್ಕಾರ ತಾನೂ ಮಾಡಲಿಲ್ಲ, ರೈತನಿಗೂ ಬಿಡಲಿಲ್ಲ.
ಒಟ್ಟಾರೆ ಇಂದಿನ ಪರಿಸ್ಥಿತಿ ನೀರಿಗಾಗಿ ಹಾಹಾಕಾರ, ಮತ್ತೊಂದಷ್ಟು ಲಕ್ಷಕೋಟಿಯ ಯೋಜನೆಗೆ ಶ್ರೀಕಾರ ಅನ್ನುವಂತಾಗಿದೆಯಷ್ಟೆ.

Leave a Reply