ವಿಭಾಗಗಳು

ಸುದ್ದಿಪತ್ರ


 

ಔಷಧ ಮಾಫಿಯಾಕ್ಕೆ ಸೆಡ್ಡು ಹೊಡೆಯಿತು ಭಾರತ

’ಭಾರತದ ಪೇಟೆಂಟ್ ಕಾನೂನನ್ನೆ ಜಗತ್ತಿನ ಇತರ ರಾಷ್ಟ್ರಗಳೂ ಒಪ್ಪಿಕೊಳ್ಳುತ್ತಿರುವುದು ಗಾಬರಿಯ ಸಂಗತಿ. ಇದು ಮುಂಬರುವ ದಿನಗಳಲ್ಲಿ ಅಮೆರಿಕಾದ ಔಷಧ ತಯಾರಿಕಾ ಮಾರುಕಟ್ಟೆಗಷ್ಟೇ ಅಲ್ಲ, ಅಮೆರಿಕಾದ ಆರ್ಥಿಕತೆಗೂ ಸಾಕಷ್ಟು ಸಂಕಷ್ಟ ತಂದೊಡ್ಡಲಿದೆ’ ಎಂದು ಅಮೆರಿಕನ್ ವಕೀಲ ವಾಲ್ಡ್ರನ್ ಅಲವತ್ತುಕೊಂಡಿದ್ದ.

ಭಾರತದ ಶಕ್ತಿ ಮತ್ತೆ ಸಾಬೀತಾಗಿದೆ.
ನೊವಾರ್ಟಿಸ್ ಎನ್ನುವ ಕ್ಯಾನ್ಸರ್ ಔಷಧ ತಯಾರಿಕಾ ಕಂಪನಿಗೆ ಸುಪ್ರೀಮ್ ಕೋರ್ಟ್ ಪೇಟೆಂಟ್ ಮುಂದುವರಿಸಲು ನಿರಾಕರಿಸಿದ ನಂತರ ಜಗತ್ತಿನಲ್ಲಿ ಸಂಚಲನವೇ ಶುರುವಾಗಿಬಿಟ್ಟಿದೆ. ಅರ್ಜೆಂಟೈನಾ, ಬ್ರೆಜಿಲ್ ಥರದ ಥರದ ರಾಷ್ಟ್ರಗಳನ್ನು ಬಿಡಿ, ಆಸ್ಟ್ರೇಲಿಯಾ, ಯುರೋಪಿಯನ್ ಯೂನಿಯನ್‌ಗಳು ಮೈಚಳಿ ಬಿಟ್ಟು ಕುಳಿತಿವೆ. ಪೇಟೆಂಟ್ ಮುಂದುವರಿಕೆಗೆ ತಮ್ಮ ರಾಷ್ಟ್ರಗಳಲ್ಲೂ ಅಡ್ಡಗಾಲು ಹಾಕಲು ಭಾರತವನ್ನೆ ಉದಾಹರಿಸುತ್ತಿವೆ. ಜಗತ್ತಿಗೆ ಮಾದರಿಯಾಗೋದು ಅಂದರೆ ಹೀಗೇನೇ.
ಹಾಗಂತ ಈ ಅಮೆರಿಕನ್ ಔಷಧ ಕಂಪೆನಿ ಕಣ್ಮುಚ್ಚಿಕೊಂಡೇನೂ ಕುಳಿತಿಲ್ಲ. ಅದಾಗಲೇ ತನ್ನ ಮಟ್ಟದ ಬೆದರಿಕೆ ಹಾಕಿದೆ. ಈಗ ಜಾಗತಿಕ ಮಟ್ಟದ ಒತ್ತಡ ತರಲು ಶುರುವಿಟ್ಟಿದೆ. ಆನರಿಗೆ ಔಷಧಿ ನೀಡಿ ದುಡ್ಡು ಲೂಟಿ ಮಾಡುವ ಹುನ್ನಾರವಿಟ್ಟುಕೊಂಡಿದ್ದ ಕಂಪನಿಗಳಿಗೆಲ್ಲ ಈಗ ಮಹಾ ಸಮರಕ್ಕೆ ಸಜ್ಜಾಗುತ್ತಿವೆ. ಇದನ್ನೆ ಔಷಧ ಮಾಫಿಯಾ ಅನ್ನೋದು.

no1ಏಳು ವರ್ಷಗಳ ಹಿಂದೆ ಫಿಲಿಪ್ಪೈನ್ಸ್‌ನಲ್ಲಿ ನಡೆದ ಘಟನೆ ಇದು. ಅಲ್ಲಿ ಪ್ರತಿ ವರ್ಷ ೮೨ ಸಾವಿರ ಮಕ್ಕಳು ಐದನೇ ವರ್ಷದ ಹುಟ್ಟು ಹಬ್ಬಕ್ಕಿಂತ ಮುನ್ನ ಸಾವಿಗೀಡಾಗುತ್ತಿದ್ದರು. ಕಾಳಜಿ ಇರುವ ಪ್ರತಿಯೊಬ್ಬರಿಗೂ ಚಿಂತೆಗಿಟ್ಟುಕೊಂಡಿತು. ಮಕ್ಕಳ ಕಲ್ಯಾಣಕ್ಕೆಂದೇ ಇರುವ ಅಂತಾರಾಷ್ಟ್ರೀಯ ಸಂಸ್ಥೆ ಯುನಿಸೆಫ್ ತನ್ನ ತಂಡವನ್ನು ಕಳುಹಿಸಿ ಅಧ್ಯಯನ ಮಾಡಿಸಿತು. ಗಾಬರಿಗೊಳ್ಳುವ ಅಂಶವೊಂದು ಹೊರಬಿತ್ತು. ಅಲ್ಲಿನ ತಾಯಂದಿರು ಒಂದು ತಿಂಗಳಿಗಿಂತಲೂ ಹೆಚ್ಚು ಎದೆ ಹಾಲನ್ನು ಮಕ್ಕಳಿಗೆ ಕೊಡುತ್ತಲೇ ಇರಲಿಲ್ಲ. ಹದಿನಾರು ಪ್ರತಿಶತ ಮಕ್ಕಳು ಮಾತ್ರ ಐದು ತಿಂಗಳ ವರೆಗೆ ತಾಯಿ ಹಾಲು ಕುಡಿವರೆಂಬ ಅಂಕಿಅಂಶ ಹೊರಬಂತು. ಸರ್ಕಾರ ತಡಮಾಡದೇ ಎರಡು ವರ್ಷದ ಕೆಳಗಿನ ಮಕ್ಕಳಿಗಾಗಿ ಯಾವುದೇ ’ಬೇಬಿ ಪೌಡರ್’ ಮಾರುವುದಿರಲಿ, ತಯಾರಿಸುವಂತೆಯೂ ಇಲ್ಲವೆಂದು ಆದೇಶ ಹೊರಡಿಸಿತು. ಔಷಧ ಕಂಪನಿಗಳು ಸರ್ಕಾರದ ವಿರುದ್ಧ ಕೋರ್ಟಿಗೆ ಹೋದವು. ಅಲ್ಲಿ ಅವುಗಳ ಬೇಳೆ ಕಾಳು ಬೇಯಲಿಲ್ಲ. ಕೋರ್ಟ್ ಸಹಜವಾಗಿಯೇ ತನ್ನ ದೇಶದ ಮಕ್ಕಳ ಪರವಾಗಿ ನಿಂತುಕೊಂಡಿತು. ಅಮೆರಿಕಾದ ಚೇಂಬರ್ ಆಫ್ ಕಾಮರ್ಸ್‌ನ ಮುಖ್ಯಸ್ಥ ಫಿಲಿಪ್ಪೀನ್ಸ್ ಅಧ್ಯಕ್ಷರಿಗೆ ಪತ್ರ ಬರೆದು, ಫಿಲಿಪ್ಪೀನ್ಸ್‌ನಲ್ಲಿ ಜಾಗತಿಕ ಕಂಪನಿಗಳು ಹಣ ಹೂಡದಂತೆ ತಡೆಹಿಡಿಯುವ ಬೆದರಿಕೆ ಹಾಕಿದ. ಆಮೇಲಿನದು ಇತಿಹಾಸ. ಅಲ್ಲಿನ ಸುಪ್ರೀಮ್ ಕೋರ್ಟ್ ತನ್ನದೇ ತೀರ್ಪನ್ನು ಮರಳಿ ಪಡೆಯಿತು. ತನ್ನ ದೇಶದ ಭಾವಿ ಪೀಳಿಗೆಯ ಸಮಾಧಿಯ ಮೇಲೆ ಹೊಸ ರಾಷ್ಟ್ರ ಕಟ್ಟುವ ದರ್ದಿಗೆ ಅಲ್ಲಿನ ಅಧ್ಯಕ್ಷರು ಬಿದ್ದರು.
ಔಷಧ ಕಂಪನಿಗಳಿಗೆ ಜನದ ಆರೋಗ್ಯದ ಕಾಳಜಿ ನಯಾ ಪೈಸೆಯಷ್ಟೂ ಇಲ್ಲವೆಂದರೆ ಅತಿಶಯೋಕ್ತಿಯಲ್ಲ. ಇವರೆಲ್ಲ ಆರೋಗ್ಯ ಕೊಡುವ ನೆಪದಲ್ಲಿ ಹಣ ಮಾಡುವ ಧಂಧೆ ನಡೆಸುತ್ತಿದ್ದಾರೆ ಅಷ್ಟೆ. ಕಂಪನಿಯೊಂದು ಏಡ್ಸ್‌ಗೆ ’ಕಲೆತ್ರಾ’ ಎಂಬ ಔಷಧ ತಯಾರಿಸಿತಲ್ಲ, ಉತ್ಪಾದನಾ ವೆಚ್ಚಕ್ಕಿಂತ ಸಾವಿರಾರು ಪಟ್ಟು ಹೆಚ್ಚು ಬೆಲೆಗೆ ಅದನ್ನು ಮಾರಿತು. ದಟ್ಟದರಿದ್ರ ರಾಷ್ಟ್ರಗಳಿಗೆ ವರ್ಷಕ್ಕೆ ರೋಗಿಯೊಬ್ಬನಿಗೆ ೫೦೦ ಡಾಲರ್, ಹಾಗೆಯೇ ಅಭಿವೃದ್ಧಿಯತ್ತ ಸಾಗುತ್ತಿರುವ ರಾಷ್ಟ್ರಗಳಲ್ಲಿನ ರೋಗಿಗೆ ೨,೨೦೦ ಡಾಲರ್ ಎಂದು ನಿಗದಿಪಡಿಸಿ ತನ್ನ ಕಾಳಜಿ ವ್ಯಕ್ತ ಪಡಿಸಿತು. ಆದರೆ ಈ ಬೆಲೆ ಕೂಡ ಅದೆಷ್ಟು ಹೆಚ್ಚಾಗಿತ್ತೆಂದರೆ, ಜಗತ್ತಿನ ಅನೇಕ ಬಡ ರಾಷ್ಟ್ರಗಳ ರೋಗಿಗಳಿಗೆ ಈ ಔಷಧ ತಲುಪಲೇ ಇಲ್ಲ. ಅದರ ತಯಾರಿಕೆಯ ಉದ್ದೇಶ ಈಡೇರಲೇ ಇಲ್ಲ.
ಈಗ ನೊವಾರ್ಟಿಸ್ ಕೂಡ ಅದನ್ನೇ ಮಾಡಲು ಹೊರಟಿದೆ. ಕ್ಯಾನ್ಸರ್‌ಗೆಂದು ಅದು ಕಂಡುಹಿಡಿದಿರುವ ಔಷಧಿಯು ರೋಗಿಯೊಬ್ಬನಿಗೆ ಭಾರತದಲ್ಲಿ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಯಷ್ಟು ಖರ್ಚು ತಂದರೆ, ಅದನ್ನೇ ತಯಾರಿಸುವ ಭಾರತದ ಕಂಪನಿ ಅದನ್ನು ಎಂಟು ಸಾವಿರ ರೂಪಾಯಿಗೆ ಮಾರುತ್ತೆ. ಈ ಅಗಾಧ ವ್ಯತ್ಯಾಸ ಏಕೆ ಎಂದರೆ, ಕಂಪನಿ ಸಂಶೋಧನೆಯ ಖರ್ಚು ಎಂದುಬಿಡುತ್ತೆ!
ಹೌದು. ಅದೂ ಸತ್ಯವೇ. ಔಷಧಿಯೊಂದನ್ನು ತಯಾರಿಸಬೇಕೆಂದರೆ ಅದರ ಹಿಂದೆ ರೋಗಿಗಳ ಅಧ್ಯಯನ, ರಾಸಾಯನಿಕಗಳ ಪ್ರಯೋಗ, ಆ ರಾಸಾಯನಿಕಗಳನ್ನು ಸ್ವೀಕರಿಸಬಲ್ಲ ಪ್ರಮಾಣಕ್ಕೆ ಹೊಂದಿಸುವ ಪ್ರಯಾಸ- ಇವೆಲ್ಲವೂ ಮಹಾ ಸಾಧನೆಯೇ. ಕೋಟ್ಯಂತರ ರೂಪಾಯಿ ವೆಚ್ಚ ಇದಕ್ಕೇ ಆಗಿ ಬಿಡುತ್ತೆ. ಅನಿಲ ರೂಪದ ರಾಸಾಯನಿಕವೊಂದನ್ನು ದ್ರವ ರೂಪಕ್ಕೋ ಘನ ರೂಪಕ್ಕೋ ತರೋದು ಕಡಿಮೆ ಸಾಹಸವಲ್ಲ. ಇವೆಲ್ಲವನ್ನು ಅತ್ಯಂತ ವೇಗವಾಗಿ ಬೇರೆ ಮಾಡಬೇಕು. ಏಕೆಂದರೆ ಇದೇ ಔಷಧವನ್ನು ತಯಾರಿಸಲು ಮತ್ತೊಂದು ಕಂಪನಿ ತುದಿಗಾಲಲ್ಲಿ ನಿಂತಿರುತ್ತದಲ್ಲ! ಯಾರು ಮಾರುಕಟ್ಟೆಗೆ ಮೊದಲು ಬರುತ್ತಾರೋ ಅವರು ಗೆದ್ದಂತೆ. ಮೊದಲೆಲ್ಲ ಒಂದು ಕಂಪನಿ ಔಷಧ ತಯಾರಿಸಿದೊಡನೆ ಮತ್ತೊಂದು ಕಂಪನಿ ಅದನ್ನು ನಕಲು ಮಾಡಿ ತಾನೂ ಔಷಧ ತಯಾರಿಸಿಬಿಡಬಹುದಿತ್ತು. ಮೂಲ ಕಂಪನಿಯನ್ನೇ ದರ ಸಮರಕ್ಕೆ ಎಳೆಯಬಹುದಿತ್ತು. ಹೀಗೆಂದೇ ಪೇಟೆಂಟುಗಳು ಜಾರಿಗೆ ಬಂದಿದ್ದು. ಒಂದು ಔಷಧಿಯನ್ನು ತಯಾರಿಸಿದ ಕಂಪನಿ ಪೇಟೆಂಟ್ ಪಡೆದುಕೊಂಡಿತೆಂದರೆ, ಇಪ್ಪತ್ತು ವರ್ಷಗಳ ಕಾಲ ಮತ್ಯಾರೂ ಆ ಔಷಧವನ್ನು ತಯಾರಿಸುವಂತಿಲ್ಲ. ಇಪ್ಪತ್ತು ವರ್ಷಗಳ ಅನಂತರ ಆ ಔಷಧಿಯಲ್ಲಿ ಮಾರ್ಪಾಟುಗಳನ್ನು ಮಾಡಿಕೊಂಡು ಮತ್ತೆ ಪೇಟೆಂಟ್ ಮುಂದುವರೆಸಿಕೊಳ್ಳಬಹುದು. ಹಾಗೆಂಬುದು ಜಾಗತಿಕ ನಿಯಮ.

no2೭೦ರ ದಶಕದಲ್ಲಿ ನಮ್ಮ ಪೇಟೆಂಟುಗಳ ನಿಯಮ ಬೇರೆಯೇ ಇತ್ತು. ಆದರೆ ೯೦ರ ದಶಕದಲ್ಲಿ ಜಾಗತೀಕರಣಕ್ಕೆ ಕತ್ತು ಬಗ್ಗಿಸಿದ ನಂತರ ನಾವು ಅಂತಾರಾಷ್ಟ್ರೀಯ ನಿಯಮಗಳಿಗೆ ಒಗ್ಗಿಕೊಳ್ಳಬೇಕಾಗಿ ಬಂತು. ಆಗ ಔಷಧ ಮಾಫಿಯಾಗಳು ತಮ್ಮ ಕರಾಮತ್ತು ತೋರುವ ಪ್ರಯತ್ನ ಶುರುವಿಟ್ಟವು. ಪೇಟೆಂಟ್‌ಗಳಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕಾನೂನುಗಳನ್ನು ಹಾಗೆಹಾಗೆಯೇ ಒಪ್ಪಿಕೊಂಡ ನಾವು ಹೆಚ್ಚಿನದೊಂದು ನಿಯಮವನ್ನು ಸೇರಿಸಿ ಸಹಿ ಹಾಕಿಬಿಟ್ಟೆವು. ಅಚ್ಚರಿಯೆಂದರೆ, ಅದೇ ನಿಯಮವೇ ಇಂದು ನೊವಾರ್ಟಿಸ್‌ಗೆ ನೇಣುಕುಣಿಕೆಯಾಗಿರೋದು!
೨೦ ವರ್ಷಗಳ ಪೇಟೆಂಟ್ ಅವಧಿಯ ಅನಂತರ ಔಷಧಿಯಲ್ಲಿ ಮಾರ್ಪಾಟು ತಂದು ಮತ್ತೆ ಪೇಟೆಂಟು ಪಡೆಯುವ ಪ್ರಕ್ರಿಯೆ ಇದೆಯಲ್ಲ, ಇದನ್ನು ’ಎವರ್ ಗ್ರೀನಿಂಗ್’ ಅಂತ ಕರೀತಾರೆ. ಇದನ್ನು ’ಸದಾ ಸಮೃದ್ಧಿ’ ಅಂತ ಅನುವಾದಿಸಬಹುದೇನೋ? ಇಪ್ಪತ್ತು ವರ್ಷಗಳ ಕಾಲ ಚೆನ್ನಾಗಿ ಉಂಡು, ಆಮೇಲೆ ಔಷಧದಲ್ಲಿ ಸಣ್ಣದೊಂದು ಬದಲಾವಣೆ ಮಾಡಿಕೊಂಡು ಮತ್ತೆ ಇಪ್ಪತ್ತು ವರ್ಷಗಳ ಕಾಲ ಮೇಯುವ ಪ್ರಕ್ರಿಯೆ ಇದು. ಇದನ್ನು ದೃಷ್ಟಿಯಲ್ಲಿಟ್ಟುಕೊಂಡೇ ಪೇಟೆಂಟುಗಳ ಕಾನೂನಿನಲ್ಲಿ ಅವಧಿಯ ನಂತರ ಮಹತ್ವದ ಬದಲಾವಣೆ ತಂದರೆ ಮಾತ್ರ ಪೇಟೆಂಟ್ ಮುಂದುವರಿಕೆಯೆಂದು ನಾವು ಸೇರಿಸಿದ್ದೆವಲ್ಲ, ಅದೇ ನೊವಾರ್ಟಿಸ್‌ಗೆ ಮುಳುವಾಯ್ತು. ತನ್ನ ಔಷಧಿಯಲ್ಲಿ ಅದು ತಂದಿರುವ ಬದಲಾವಣೆ ನಗಣ್ಯವಾದುದರಿಂದ ಈ ಔಷಧಿಯನ್ನು ಬೇರೆಯವರು ತಯಾರಿಸಬಹುದೆಂಬ ಸುಪ್ರೀಮ್ ಕೋರ್ಟಿನ ತೀರ್ಪು ಈಗ ಔಷಧ ಮಾಫಿಯಾವನ್ನು ಕೆರಳಿಸಿದೆ. ಜಗತ್ತಿನ ಆರೋಗ್ಯದ ಕಾಳಜಿಯಿರುವ ಕಾರ್ಯಕರ್ತರನ್ನು ಅರಳಿಸಿದೆ.
ಬಡ ರಾಷ್ಟ್ರಗಳು, ಮುಂದುವರೆಯುತ್ತಿರುವ ರಾಷ್ಟ್ರಗಳು ಕೂಡ ಈಗ ತಮ್ಮ ದೇಶದಲ್ಲಿ ಇಂತಹುದೇ ಪ್ರಯತ್ನಕ್ಕೆ ಕೈಹಾಕಿದರೆ ಅಚ್ಚರಿಯಿಲ್ಲ. ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮ ಆರೋಗ್ಯ ಪಡೆಯುವ ಕನಸು ಯಾವ ರಾಷ್ಟ್ರಕ್ಕಿರುವುದಿಲ್ಲ ಹೇಳಿ? ಆದರೆ ಹೆಣದಿಂದಲೂ ಹಣ ಕಕ್ಕಿಸಬೇಕೆಂದು ಪಣ ತೊಟ್ಟ ಔಷಧ ಕಂಪನಿಗಳಿಗೆ ಇದೆಲ್ಲ ಪಥ್ಯವೇ ಅಲ್ಲ. ಅದಕ್ಕೇ ನೊವಾರ್ಟಿಸ್ ಮುಖ್ಯಸ್ಥರು ಗುರ್ರ್ ಎನ್ನತೊಡಗಿರುವುದು. ಹೀಗೆ ಮಾಡುವುದಾದರೆ ನಾವು ಭಾರತದಲ್ಲಿ ಇನ್ನು ಮುಂದೆ ಸಂಶೋಧನೆಗೆ ಹಣವನ್ನೇ ಹೂಡುವುದಿಲ್ಲವೆಂದು ಬೆದರಿಸುತ್ತಿರುವುದು. ಹಹ್! ಇದು ಬೆದರಿಕೆಯಷ್ಟೇ. ವಾಸ್ತವವಾಗಿ ಅಮೆರಿಕನ್ ಕಂಪನಿಗಳೇ ಸ್ವತಃ ಬೆದರಿಹೋಗಿವೆ. ಫೈಜರ್ ಕಂಪನಿಯ ಪೇಟೆಂಟಿಗೆ ಸಂಬಂಧಿಸಿದ ವಕೀಲ ವಾಲ್ಡ್ರನ್ ಇತ್ತೀಚೆಗೆ ಭಾರ – ಅಮೆರಿಕಾ ವ್ಯಾಪಾರ ಸಂಬಂಧದ ಸಭೆಯಲ್ಲಿ ಮಾತನಾಡುತ್ತಾ ’ಭಾರತದ ಪೇಟೆಂಟ್ ಕಾನೂನನ್ನೆ ಜಗತ್ತಿನ ಇತರ ರಾಷ್ಟ್ರಗಳೂ ಒಪ್ಪಿಕೊಳ್ಳುತ್ತಿರುವುದು ಗಾಬರಿಯ ಸಂಗತಿ. ಇದು ಮುಂಬರುವ ದಿನಗಳಲ್ಲಿ ಅಮೆರಿಕಾದ ಔಷಧ ತಯಾರಿಕಾ ಮಾರುಕಟ್ಟೆಗಷ್ಟೇ ಅಲ್ಲ, ಅಮೆರಿಕಾದ ಆರ್ಥಿಕತೆಗೂ ಸಾಕಷ್ಟು ಸಂಕಷ್ಟ ತಂದೊಡ್ಡಲಿದೆ’ ಎಂದು ಅಲವತ್ತುಕೊಂಡಿದ್ದ. ಬರೀ ಇಷ್ಟೇ ಅಲ್ಲ, ಭಾರತದಲ್ಲಿ ಸಂಶೋಧನೆ ನಡೆಸಲಿಲ್ಲವೆಂದರೆ ಅದು ಔಷಧ ಕಂಪನಿಗಳಿಗೇ ತಿರುಗು ಬಾಣವಾಗಲಿದೆ ಎಂಬ ಸತ್ಯವೂ ಜಗತ್ತಿಗೆ ಗೊತ್ತಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಸಂಶೋಧನೆ ಮಾಡಿ ಮುಗಿಸಬಹುದಾದಷ್ಟು ಮಾನವ ಸಂಪನ್ಮೂಲವಲ್ಲದೇ ಬುದ್ಧಿವಂತರೂ ಇಲ್ಲಿದ್ದಾರೆ ಎಂಬುದು ಜಗತ್ತಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಚಿಂತಕರೊಬ್ಬರು ’ಮುಖವುಳಿಸಿಕೊಳ್ಳಲು ಮೂಗನ್ನು ಕತ್ತರಿಸಿಕೊಂಡಷ್ಟೇ ಮೂರ್ಖತನವಿದು’ ಎಂದು ಕಟಕಿಯಾಡಿರೋದು ಅದಕ್ಕೇ.

no3ಈ ಗಲಾಟೆಯ ಬೆನ್ನಲ್ಲೆ ನೊವಾರ್ಟಿಸ್‌ನ ಭಾರತ ವಿಭಾಗದ ಉಪಾಧ್ಯಕ್ಷ ರಂಜಿತ್ ಸಹಾನಿ ಒಂದು ಸತ್ಯ ಹೊರಹಾಕಿಬಿಟ್ಟಿದ್ದಾರೆ. ಅವರ ಪ್ರಕಾರ ರೋಗಿಯೊಬ್ಬನ ಒಟ್ಟಾರೆ ಖರ್ಚಿನಲ್ಲಿ ಔಷಧಿಯ ಪಾಲು ಶೇಕಡಾ ಆರರಷ್ಟು ಮಾತ್ರವಂತೆ. ಉಳಿದಷ್ಟೂ ಆಸ್ಪತ್ರೆಯ ಖರ್ಚು ಅಂತಾಯ್ತಲ್ಲ! ದೊಡ್ಡದೊಡ್ಡ ಆಸ್ಪತ್ರೆಗಳಿಗೆ ಓಡುತ್ತೇವಲ್ಲ, ಆ ವೈಭವಕ್ಕೆ ಬಳಕೆಯಾಗಿರೋದು ರೋಗಿಗಳನ್ನು ಬಸಿದ ಹಣವೆಂದು ಈಗ ಬಾಯ್ಬಿಡುತ್ತಾರಲ್ಲ, ಹೇಗಿದೆ ವರಸೆ!? ಆರು ತಿಂಗಳ ಮಗುವೊಂದನ್ನು ಜ್ವರವೆಂದು ಆಸ್ಪತ್ರೆಗೆ ಒಯ್ದರೆ ಹದಿನೆಂಟಿಪ್ಪತ್ತು ಸಾವಿರ ಬಿಲ್ ಆಗೋದು ಯಾಕೆ ಅಂತ ಈಗ ಅರ್ಥವಾಗಿರಬೇಕು.
ಜಗತ್ತಿಗೀಗ ಭಾರತದತ್ತಲೇ ಕಣ್ಣು. ಆರೋಗ್ಯಕ್ಕೆಂದು ಭಾರತ ಅನುಸರಿಸುತ್ತಿರುವ ರೀತಿ ವಿಶ್ವಕ್ಕೇ ಮಾದರಿ. ನಾವು ರೋಗ ಬರುವುದಕ್ಕೆ ಮುನ್ನ ತಡೆಯಬಲ್ಲ ಜೀವನಪದ್ಧತಿಯನ್ನು ರೂಢಿಸಿಕೊಂಡವರು. ನಮ್ಮ ಊಟದಲ್ಲಿಯೇ ಔಷಧೀಯ ಗುಣಗಳನ್ನು ಬೆರೆಸಿ ಆರೋಗ್ಯ ಹದವಾಗಿರಿಸಿಕೊಂಡವರು. ಪ್ರಾಣಕ್ಕೆ ಶಕ್ತಿ ತುಂಬಿಸಿ ಕಾಯಿಲೆಗಳನ್ನು ಓಡಿಸಿದವರು. ಅದಕ್ಕೇ ಜಗತ್ತು ಮತ್ತೆ ನಮ್ಮತ್ತ ಹೊರಳಿದೆ. ಇದನ್ನು ಅರಿಯುವ ಪ್ರಯತ್ನ ಶುರುವಿಟ್ಟಿದೆ. ಜಗದ್ಗುರುವಾಗೋದು ಎಂದರೆ ಹೀಗೇ ಅಲ್ವೆ?

Leave a Reply