ವಿಭಾಗಗಳು

ಸುದ್ದಿಪತ್ರ


 

ಕಮ್ಯುನಿಸ್ಟರ Track record

ನಕ್ಸಲರು ‘ಬಡವರ ಬಂಧು’ಗಳೆಂಬ ಕಾಲ ಹೋಯ್ತು. ಅವರೀಗ ಹಣ ಮಾಡುವ, ಬಡವರ ಜೀವ ತೆಗೆಯುವ ಧಂಧೆಕೋರರು. ಒಬ್ಬನನ್ನು ಕೊಲ್ಲುವವರನ್ನು ಸುಪಾರಿ ಕಿಲ್ಲರ್ ಎನ್ನಬಹುದಾದರೆ, ಬಹಳ ಜನರನ್ನು ಕೊಲ್ಲುವವರನ್ನು ನಕ್ಸಲರು ಎನ್ನಬಹುದಷ್ಟೆ.

ಮಂಗಳೂರಿನ ಪಬ್‌ಗಳ ಮೇಲೆ, ಹೋಂ ಸ್ಟೇ ಮೇಲೆ ದಾಳಿಯಾಯ್ತು. ಕೆಲವರಿಗೆ ಕೆನ್ನೆಯ ಮೇಲೆ ಹೊಡೆತ ಬಿತ್ತು. ಇಡಿಯ ದೇಶ ಕೆಂಡಕೆಂಡವಾಯ್ತು. ಕೆಂಪು ಮುಸುಕಿನವರಂತೂ ಟೀವಿ, ಪತ್ರಿಕೆಗಳಲ್ಲೆಲ್ಲಾ ಮಿಂಚಲಾರಂಭಿಸಿದರು. ಒರೆಯಲ್ಲಿದ್ದ ಕತ್ತಿಯನ್ನೆಳೆದು ‘ಹಿಂದುತ್ವ’ದ ನೆರಳು ಕಂಡ ಕಡೆಯೆಲ್ಲ ಬೀಸತೊಡಗಿದರು. ಕಾಲೇಜುಗಳಿಂದ ಹುಡುಗಿಯರು, ಅವರ ಹಿಂದೆ ಹುಡುಗರು ಹೊರ ಬಿದ್ದರು. ಉತ್ಪಾತವೇ ಆಗಿಹೋದ ಅನುಭವ.

commu2ಮೊನ್ನೆ ಛತ್ತೀಸ್‌ಗಡದಲ್ಲಿ ಮುಸುಕುಧಾರಿ ನಕ್ಸಲ್ ಉಗ್ರವಾದಿಗಳು ೨೮ ಜನರನ್ನು ಗುಂಡಿಟ್ಟು ಕೊಂದು ಹಾಕಿದರು. ಜಿಹಾದಿ ಉಗ್ರರ ಕ್ರೌರ್ಯಕ್ಕೆ ಸಮಸಮವಾದ ಬರ್ಬರತೆ ಅದು. ಕೆನ್ನೆ ಮೇಲೆ ಏಟು ಬಿದ್ದಾಗಲೇ ಬೆಂಕಿ ಬಿತ್ತೆಂದು ಧಾವಿಸಿ ಬಂದ ಕೆಂಪು ಮುಸುಕಿನವರಾರೂ ಹೆಣ ಬಿದ್ದಾಗಲೂ ಬೀದಿಗೆ ಬರಲಿಲ್ಲ. ಟೀವಿ, ಪತ್ರಿಕೆಗಳಲ್ಲಿ ಐಪಿಎಲ್‌ನ ಮೋಸದಾಟದ ಚರ್ಚೆಯೇ ಹೊರತು ನಕ್ಸಲರ ಕ್ರೌರ್ಯದ್ದಲ್ಲ. ಒಬ್ಬ ಹುಡುಗಿಗೆ ಏಟು ಬಿದ್ದಾಗ ಹೃದಯ ಹಿಂಡಿದಂತೆ ಚಡಪಡಿಸಿ ಬೀದಿಗೆ ಇಳಿದಿದ್ದ ಕಾಲೇಜಿನ ತರುಣ ತರುಣಿಯರಾರೂ ಈಗ ಹೊರ ಬರಲಿಲ್ಲ. ಎಡಚರ‍್ಯಾರೂ ಫೇಸ್‌ಬುಕ್‌ನಲ್ಲಿ ನಿರಂತರ ಸ್ಟೇಟಸ್ ದಾಳಿಯಲ್ಲಿ ತೊಡಗಿಕೊಳ್ಳಲೇ ಇಲ್ಲ!
ಹೀಗೇಕೆ? ದೇಶದ ಸಂಸ್ಕೃತಿ, ಸಭ್ಯತೆಗಳ ಹೆಸರಿನಲ್ಲಿ ನಡೆಯುವ ಸಣ್ಣ ಹೋರಾಟವೂ ಇವರನ್ನು ಬಡಿದೆಬ್ಬಿಸಿಬಿಡುತ್ತೆ. ಆದರೆ ರಾಷ್ಟ್ರದ ಆಂತರಿಕ ಸುರಕ್ಷತೆಗೆ ಭಯಾನಕ ಗಂಡಾಂತರವಾಗಿರುವ ನಕ್ಸಲರು ಹತ್ಯೆ ಮಾಡಿದಾಕ್ಷಣ ಬಡವರ ನೆನಪಾಗಿಬಿಡುತ್ತೆ. ವಿಚಿತ್ರವಲ್ಲವೆ? ಈ ಹತ್ಯೆಯ ನಂತರ ಬುದ್ಧಿ ಜೀವಿಗಳೆಲ್ಲ ಗ್ರಾಮ ವಿಕಾಸ, ಬಡ ಜನರಿಗೆ ಉದ್ಯೋಗ, ದಲಿತರ ಹಿತ ರಕ್ಷಣೆ, ಬುಡಕಟ್ಟು ಜನಾಂಗಗಳ ಅಭಿವೃದ್ಧಿ ಎಂಬೆಲ್ಲ ಪದಗಳನ್ನು ಹರಿಬಿಡಲು ಶುರುವಿಟ್ಟಿದ್ದಾರೆ. ಈ ಪದಗಳ ಛತ್ರಛಾಯೆಯಲ್ಲಿ ಸರ್ಕಾರವನ್ನೆ ಕ್ರೂರವೆಂದು ತೋರಿಸಿ ನಕ್ಸಲರನ್ನು ಹೀರೋಗಳನ್ನಾಗಿಸುವ ಯೋಜಿತ ಹುನ್ನಾರ! ನಕ್ಸಲರನ್ನು ಮಟ್ಟ ಹಾಕಲೆಂದು ಪೊಲೀಸರು ಕಾರ್ಯಾಚರಣೆ ಶುರು ಮಾಡಿದರೆ ಅಂಡಿಗೆ ಬೆಂಕಿ ಹಚ್ಚಿಕೊಂಡು ‘ಗಾಂಧಿಯ ನಾಡಲ್ಲಿ ಪಿಸ್ತೂಲಿನ ಮೊರೆತ’ ಎಂಬ ಶೀರ್ಷಿಕೆಯ ಕರಪತ್ರ ಹಿಡಿದು ಪತ್ರಿಕಾ ಕಚೇರಿಗಳಿಗೆ ಧಾವಿಸುವ ಅರುಂಧತಿ ರಾಯ್ ಥರದವರು ಈಗೇಕೋ ಅತ್ತ ಸುಳಿಯುತ್ತಲೇ ಇಲ್ಲ. ಕರ್ನಾಟಕದಲ್ಲೂ ಕೆಲವರಿದ್ದಾರಲ್ಲ, ರಾಷ್ಟ್ರೀಯತೆಯ ಪಥದಲ್ಲಿರುವವರನ್ನು ಕಠೋರವಾಗಿ ಟೀಕಿಸುತ್ತ ಮುಸಲ್ಮಾನರ ಕೈಹಿಡಿದು ವಿಷ ವರ್ತುಲ ರಚಿಸುತ್ತ ಸಾಗುವವರು.. ಇವರೂ ಚಕಾರವೆತ್ತಿಲ್ಲವಲ್ಲ!? ಮತ್ತದೇ ಪ್ರಶ್ನೆ.. ಹೀಗೇಕೆ?
ಹೋಗಲಿ ಬಿಡಿ. ಚೀನಾ ಭಾರತದ ಐದು ಕಿಲೋ ಮೀಟರ್ ಒಳಗೆ ಹೆದ್ದಾರಿ ನಿರ್ಮಿಸಿಕೊಂಡಿರುವ ಸುದ್ದಿ ಬಂದುದಕ್ಕೂ ಅಂದೇ ಈ ದಾಳಿಯಾದುದಕ್ಕೂ ಸಂಬಂದವಿದೆಯಾ? ಆ ಸುದ್ದಿ ಬೇರೆ ಪುಟಕ್ಕೆ ಹೋಯ್ತು. ನಮ್ಮ ಚಿತ್ತಗಳಿಂದಲಂತೂ ಮಾಸಿಯೇಹೋಯ್ತು. ಚೀನಾ ೧೯ ಕಿ.ಮೀ ಒಳ ನುಸುಳಿದಾಗ ಉಂಟಾದ ಚಡಪಡಿಕೆಯಷ್ಟೂ ನಮಗಾಗಲಿಲ್ಲ. ಹಾಗೆ ನೋಡಿದರೆ ಒಳ ನುಸುಳಿದ್ದು ಐವತ್ತು ಚೀನೀ ಸೈನಿಕರು ಮಾತ್ರ. ಈಗ ನಮ್ಮ ವ್ಯಾಪ್ತಿಯಲ್ಲಿ ಹೆದ್ದಾರಿಯೇ ನಿರ್ಮಾಣವಾಗಿಬಿಟ್ಟಿದೆ. ಯಾವ ಮಾಧ್ಯಮದಲ್ಲೂ ಈ ಬಗ್ಗೆ ಚರ್ಚೆಯಿಲ್ಲ. ಚೀನಾ ಭಾರತೀಯರನ್ನು ಸುಮ್ಮನಿರಿಸಲು ದಾಳ ಎಸೆದಿದೆಯಾ? ಈ ಪ್ರಶ್ನೆ ನನ್ನನ್ನಂತೂ ಕಾಡುತ್ತಿದೆ.

commu3ಅದಕ್ಕೆ ಕಾರಣವೂ ಇದೆ. ಕಮ್ಯುನಿಸ್ಟರನ್ನು ಸುಮ್ಮಸುಮ್ಮನೆ ಕಮ್ಮಿನಿಷ್ಠರು ಅಂತ ಕರೆಯೋದಲ್ಲ. ಅವರಿಗೆ ರಾಷ್ಟ್ರದೊಂದಿಗಿನ ನಿಷ್ಠೆ ಕಡಿಮೆ. ಹಾಗೆ ನೋಡಿದರೆ ಮುಸಲ್ಮಾನರಲ್ಲಾದರೂ ಅಂದುಕೊಂಡದ್ದಕ್ಕಿಂತ ಹೆಚ್ಚು ರಾಷ್ಟ್ರಭಕ್ತರು ಸಿಕ್ಕಿಬಿಡಬಹುದು. ಎಡಪಂಥೀಯರಲ್ಲಿ ಬಲು ಕಷ್ಟ. ತಮ್ಮ ಬೌದ್ಧಿಕ ಸಾಮರ್ಥ್ಯದಿಂದಲೇ ರಾಷ್ಟ್ರೀಯತೆಯೊಂದಿಗೆ ವ್ಯಭಿಚಾರ ನಡೆಸಿಬಿಡುತ್ತಾರೆ ಇವರು! ಹೀಗಾಗಿಯೇ ಯಾವುದೇ ರಾಷ್ಟ್ರಕ್ಕೂ ಇವರು ಕಂಟಕವೇ.
ಕಮ್ಯುನಿಸ್ಟರೇ ಕಟ್ಟಿರುವ ಪಾರ್ಟಿ ಸದಾ ತಾನು ಬಡವರ ಪರ ಎಂದು ಹೇಳಿಕೊಳ್ಳುತ್ತೆ. ತಾನು ಂಆಡುವುದೆಲ್ಲ ಬಡವರ ರಕ್ಷಣೆಗಾಗಿಯೇ ಅನ್ನೋದು ಅದರ ವಾದ. ಈ ಹಿನ್ನೆಲೆಯಲ್ಲಿಯೇಸಿರಿವಂತ ರಷ್ಯಾದ ಬೆನ್ನಿಗೆ ಆತುಕೊಂಡಿದ್ದ ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಆಮೇಲಿನ ದಿನಗಳಲ್ಲಿ ಚೀನಾದತ್ತ ವಾಲಿಕೊಂಡಿತು. ೧೯೬೨ರಲ್ಲಿ ಚೀನಾ ಭಾರತದ ಮೇಲೆ ದಾಳಿ ಮಾಡಿತಲ್ಲ, ಅದಕ್ಕೂ ಬಹಳ ಮುನ್ನವೇ ಇಲ್ಲಿನ ಎಡ ಪಂಥೀಯರು ವ್ಯವಸ್ಥಿತವಾಗಿ ಚೀನಾ ಬೆನ್ನಿಗೆ ನಿಂತಿದ್ದರು. ಅಮೆರಿಕಾದ ಬೇಹುಗಾರಿಕೆ ಸಂಸ್ಥೆ ಸಿಐಎ ಈ ಕುರಿತಂತೆ ವಿಸ್ತೃತ ವರದಿಯನ್ನು ಪ್ರಕಟಿಸಿತಲ್ಲದೆ, ಇಲ್ಲಿನ ಕಮ್ಯುನಿಸ್ಟರ ರಾಷ್ಟ್ರನಿಷ್ಠೆಯನ್ನು ಎಳೆಎಳೆಯಾಗಿ ಪ್ರಶ್ನಿಸಿತು.
ಚೀನಾ ಟಿಬೆಟನ್ನು ಆಕ್ರಮಿಸಿಕೊಂಡು ಆಪೋಶನ ತೆಗೆದುಕೊಂಡಾಗ ಪ್ರತಿಯೊಬ್ಬ ದೇಶಭಕ್ತ ಭಾರತೀಯನಿಗೂ ಗಾಬರಿಯಾಗಿತ್ತು. ಚೀನಾದ ಸೇನೆ ಈಗ ತೀರ ಭುಜವೇರಿಯೇ ಕುಂತಿತ್ತು. ಆದರೆ ಕಮ್ಯುನಿಸ್ಟರು ಮಾತನಾಡಲಿಲ್ಲ. ಇರಾಕ್, ಪ್ಯಾಲಸ್ತೇನ್, ಅಫ್ಘಾನಿಸ್ತಾನಗಳ ಬಗ್ಗೆ ದಿನ ಬೆಳಗಾದರೆ ಬಾಯಿ ಬಡಿದುಕೊಳ್ಳುವ ಈ ಚೀನಾ ಬಾಲ ಬಡುಕರು ಟಿಬೇಟನ್ನು ಚೀನಾ ನುಂಗಿದ್ದರ ಬಗ್ಗೆ ಮಾತನಾಡುವುದೇ ಇಲ್ಲ. ಕಾಶ್ಮೀರದಲ್ಲಿ ಪಂಡಿತರ ನಿರ್ನಾಮವಾದುದರ ಬಗ್ಗೆ ಒಮ್ಮೆಯೂ ಸೊಲ್ಲೆತ್ತುವುದಿಲ್ಲ.
೧೯೬೨ರಲ್ಲಿ ಚೀನಾ ಭಾರತದ ಮೇಲೆ ದಾಳಿ ಮಾಡುವ ಮುನ್ನ ಆಂತರಿಕವಾಗಿ ಒಂದು ಸೇನೆಯನ್ನು ದಂಗೆ ನಡೆಸಲಿಕ್ಕೆಂದೇ ರೂಪಿಸುವ ಹೊಣೆಗಾರಿಕೆ ಕಮ್ಯುನಿಸ್ಟ್ ಪಕ್ಷಗಳಿಗೆ ನೀಡಲಾಗಿತ್ತೆಂದು ಸಿಐಎ ವರದಿ ಹೇಳುತ್ತದೆ. ಈ ಹಿನ್ನೆಲೆಯಲ್ಲಿಯೇ ನಕ್ಸಲ್‌ವಾದಕ್ಕೆ ಬೆಂಬಲ ದೊರಕಿದ್ದು. ಎಡಪಂಥೀಯರ ಮಡಿಲಲ್ಲಿಯೇ ಆಡಿ ಬೆಳೆದ ನೆಹರೂ ಆಡಳಿತದ ಆಯಕಟ್ಟಿನ ಜಾಗಗಳನ್ನು ಅವರಿಗೇ ಬಿಟ್ಟುಕೊಟ್ಟರು. ದೊಡ್ಡ ದೊಡ್ಡ ಯೂನಿವರ್ಸಿಟಿಗಳು ಅವರಿಂದ ತುಂಬಿಹೋದವು. ಭಾರತೀಯರಾಗಿ ಭಾರತೀಯರ ವಿರುದ್ಧ ಮಾತನಾಡುವುದು ಬುದ್ಧಿವಂತರ ಲಕ್ಷಣವೆಂಬಂತೆ ಆಗಿಹೋಯ್ತು. ಇವರೆಲ್ಲ ಬಡತನ, ಶೋಷಣೆಗಳೆಂಬ ರಂಗುರಂಗಿನ ಪದಗಳನ್ನು ಹಿಡಿದು ಬುದ್ಧಿ ಜೀವಿಗಳಾದರು. ಮಾಧ್ಯಮಗಳ ತುಂಬೆಲ್ಲ ಹರಿದಾಡಿದರು. ಪರಿಣಾಮ, ಚೀನಾದ ಬಂದೂಕು ಹಿಡಿದ ದಾರಿ ತಪ್ಪಿದ ಯುವಕರಿಗೆ ಸಮಾಜದಲ್ಲಿ ಬೆಲೆ ದೊರೆಯಲಾರಂಭಿಸಿತು. ‘ನಕ್ಸಲರು ಬಡವರ ಪರ’ ಎಂಬ ವಾದ ವ್ಯಾಪಕವಾಗಿಬಿಟ್ಟಿತು. ಅದರ ಬೆನ್ನ ಹಿಂದೆಯೇ ಚೀನಾ ದಾಳಿ ಮಾಡಿದಾಗ ಇಡಿಯ ದೇಶ ಮೈಕೊಡವಿಕೊಂಡು ನಿಂತಿತು. ನಮ್ಮ ಸೈನಿಕರಿಗೆ ಆತುಕೊಂಡಿತು. ಯಾಕೋ ಕಮ್ಯುನಿಸ್ಟ್ ಪಾರ್ಟಿ ಮಾತನಾಡಲೇ ಇಲ್ಲ. ಅವರಲ್ಲೆ ಮೂರು ಭಾಗಗಳಾದವು. ಒಂದು ನೇರವಾಗಿ ಚೀನಾ ಪರ. ಮತ್ತೊಂದು ಹೊರಗೇನೂ ಮಾತಾಡದಿದ್ದರೂ ಒಳಗೆ ಭಾರತದ ಪರ, ಮೂರನೆಯದು, ಯಾವ ದಿಕ್ಕಿಗೂ ಒಲವು ತೋರದ ತಟಸ್ಥ ಪಂಥ. ಹಾಗೆ ನೋಡಿದರೆ ಮೂರು ಗುಂಪೂ ದೇಶದ್ರೋಹಿಗಳದ್ದೇ! ಚೀನಾದ ಪರ ಮಾತನಾಡುತ್ತಿದ್ದ ಬಂಗಾಳಿ ಕಮ್ಯುನಿಸ್ಟರಂತೂ ‘ನಮ್ಮ ಬಡವರ ಪರ ವಾದಕ್ಕೆ ಚೀನಾದ ಸೈನ್ಯದ ಬೆಂಬಲ ದೊರಕಿದರೆ ಬಲ ಬರುತ್ತದೆ. ನಿಜವಾದ ಸ್ವಾತಂತ್ರ್ಯ ಭಾರತಕ್ಕೆ ದಕ್ಕುತ್ತದೆ’ ಎನ್ನಲಾರಂಭಿಸಿದ್ದರು. ಯುದ್ಧದ ಹೊತ್ತಲ್ಲಿ ಎಡ ಪಂಥೀಯ ನಾಯಕರನ್ನು ದೇಶದ್ರೋಹಿಗಳೆಂದು ಕರೆದು ಜೈಲಿಗೆ ಅಟ್ಟಬೇಕಾಗಿ ಬಂತು. ಇದು ಅವರ ಟ್ರ್ಯಾಕ್ ರೆಕಾರ್ಡ್.
ಭಾರತೀಯ ಕಮ್ಯುನಿಸ್ಟರು ಎಂದಿಗೂ ಭಾರತದ ಪರವಾಗಿ ನಿಂತೇ ಇಲ್ಲ. ಅಟಲ್ ಜೀಯವರ ಪ್ರಯಾಸದಿಂದಾಗಿ ಭಾರತ ಅಣ್ವಸ್ತ್ರ ರಾಷ್ಟ್ರವಾಗಿ ನಿಂತಾಗ ಇದೇ ನಾಯಕರು ಆ ಹಣವನ್ನು ಬಡವರಿಗೆ ಹಂಚಬೇಕಿತ್ತು ಎಂದೆಲ್ಲ ಬಡಬಡಾಯಿಸಿದ್ದರು. ತಮ್ಮ ಪಾರ್ಟಿಯ ಕೋಟ್ಯಂತರ ರೂಪಾಯಿ ಹಣವನ್ನು ದಾನ ಮಾಡಬೇಕೆಂಬ ಸದ್ಬುದ್ಧಿ ಮಾತ್ರ ಅವರಿಗೆ ಬರಲೇ ಇಲ್ಲ. ಹೋಗಲಿ, ಭಾರತ ಅಣ್ವಸ್ತ್ರ ರಾಷ್ಟ್ರವಾಗಬಾರದೆನ್ನುವ ಈ ಪಾಪಿಗಳು ಸೋವಿಯತ್ ಮತ್ತು ಚೀನಾಗಳು ಅಣ್ವಸ್ತ್ರ ಹೊಂದಿವೆಯೆಂಬುದನ್ನು ಮರೆಯುತ್ತಾರಲ್ಲ! ಈ ಪ್ರಶ್ನೆಗೆ ಉತ್ತರ ಹೇಳಬಲ್ಲರೇನು?

commu1ಈಗ ಮತ್ತದೇ ಪರಿಸ್ಥಿತಿಗಳು ಮರುಕಳಿಸುತ್ತಿವೆ. ಆಂತರಿಕವಾಗಿ ನಕ್ಸಲರು ದಂಗೆ ಎಬ್ಬಿಸುತ್ತಿದ್ದಾರೆ. ಅತ್ತ ಚೀನಾ ಭಾರತದೊಳಕ್ಕೆ ನುಸುಳಿ ರಸ್ತೆ ಮಾಡಿಕೊಂಡು ಗೂಳಿಯಂತೆ ನುಗ್ಗುತ್ತಿದೆ. ನಾವು ಮತ್ತದೇ ಧಾಟಿಯಲ್ಲಿ ರಸ್ತೆಗಳು, ಲೈಟುಕಂಬ, ಶಿಕ್ಷಣ ಎನ್ನುತ್ತಿದ್ದೇವೆ.
ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಹೇಗೆ ಮುಸಲ್ಮಾನರನ್ನು ಒಲಿಸಿಕೊಂಡರೆ ಅಸ್ಸಾಮ್, ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳು ತೆಕ್ಕೆಗೆ ಬೀಳುತ್ತವೆಯೋ ಹಾಗೇ ನಕ್ಸಲರ ಕೈ ಹಿಡಿದುಕೊಂಡರೆ ಆಂಧ್ರ, ಬಂಗಾಳಗಳಂತಹ ರಾಜ್ಯಗಳನ್ನು ಗೆಲ್ಲಬಹುದು. ಇತ್ತೀಚೆಗೆ ಕೇಂದ್ರ ಮಂತ್ರಿ ಜಯರಾಮ್ ರಮೇಶ್ ಛತ್ತೀಸ್‌ಗಡದ ಹಳ್ಳಿಹಳ್ಳಿಗಳಲ್ಲಿ ಸುತ್ತಾಡುತ್ತಾ ‘ದಕ್ಷಿಣ ಛತ್ತೀಸ್‌ಗಡದ ಸುಮಾರು ೯,೦೦೦ ಕಿಲೋ ಮೀಟರ್‌ಗಳಷ್ಟು ಭಾಗ ಭಾರತದ ಧ್ವಜ ಹಾರಲಾಗದ ಮುಕ್ತ ಪ್ರದೇಶವಾಗಿಬಿಟ್ಟಿದೆ’ ಎಂದು ಆತಂಕ ವ್ಯಕ್ತ ಪಡಿಸಿದ್ದರು. ಇಲ್ಲೆಲ್ಲ ಬಂದೂಕು ಹೇಳಿದಂತೆಯೇ ಮತಗಳು ಬೀಳೋದು. ಆಂಧ್ರದಲ್ಲಿ ನಕ್ಸಲರನ್ನು ‘ದೇಶ ಭಕ್ತುಲು’ ಎಂದು ಕರೆದು ಗದ್ದುಗೆಗೇರಿದ ಎನ್.ಟಿ.ರಾಮ್‌ರಾವ್, ಬಂಗಾಳದಲ್ಲಿ ಮೂರು ದಶಕಗಳ ಕಾಲ ನಕ್ಸಲರನ್ನು ಪೋಷಿಸಿ ಕೊಂಡೇ ಗೆದ್ದ ಕಮ್ಯುನಿಸ್ಟ್ ಪಾರ್ಟಿ- ಇವೆಲ್ಲ ಉದಾಹರಣೆಗಳಷ್ಟೆ. ಕಳೆದ ಚುನಾವಣೆಯ ವೇಲೆಗೆ ಬಂಗಾಳದಲ್ಲಿ ಹಿರಿಯ ನಕ್ಸಲ್ ನಾಯಕರನ್ನು ಮಮತಾ ಬ್ಯಾನರ್ಜಿ ಭೆಟಿಯಾಗಿದ್ದರ ಬಗ್ಗೆಯೂ ಗುಸುಗುಸು ಕೇಳಿಬಂದಿತ್ತಲ್ಲ, ಮರೆತಿಲ್ಲ ತಾನೆ? ಇದೇ ನಕ್ಸಲರ ನಾಯಕ ಹಿಂದಿನ ಚುನಾವಣೆಯಲ್ಲಿ ತೃಣ ಮೂಲ ಕಾಂಗ್ರೆಸ್ಸನ್ನು ಸೋಲಿಸಲು ಕಮ್ಯುನಿಸ್ಟ್ ಪಾರ್ಟಿಯ ಕಚೇರಿಯಿಂದ ಐದು ಸಾವಿರ ಕಾಡತೂಸುಗಳನ್ನು ಒಯ್ದಿದ್ದನ್ನು ತಾನೇ ಒಪ್ಪಿಕೊಂಡಿದ್ದ.
ನಕ್ಸಲರು ‘ಬಡವರ ಬಂಧು’ಗಳೆಂಬ ಕಾಲ ಹೋಯ್ತು. ಅವರೀಗ ಹಣ ಮಾಡುವ, ಬಡವರ ಜೀವ ತೆಗೆಯುವ ಧಂಧೆಕೋರರು. ಒಬ್ಬನನ್ನು ಕೊಲ್ಲುವವರನ್ನು ಸುಪಾರಿ ಕಿಲ್ಲರ್ ಎನ್ನಬಹುದಾದರೆ, ಬಹಳ ಜನರನ್ನು ಕೊಲ್ಲುವವರನ್ನು ನಕ್ಸಲರು ಎನ್ನಬಹುದಷ್ಟೆ. ಈಗ ಇವರನ್ನು ನಿಗ್ರಹಿಸುವುದಕ್ಕೆ ಕಠಿಣ ಹೃದಯಿಯೊಬ್ಬ ಬೇಕಾಗಿದ್ದಾನೆ. ಕಾಂಗ್ರೆಸ್ಸಿನ ಏಕೈಕ ಗಂಡು ಪ್ರಧಾನಿ ಇಂದಿರಾ ಗಾಂಧಿ ಬಿಂಧ್ರನ್‌ವಾಲೆಯನ್ನು ಮಟ್ಟಹಾಕಿದರಲ್ಲ, ಹಾಗೆ ನಕ್ಸಲರನ್ನು ಹೊಸಕಿ ಹಾಕಬೇಕಿದೆ. ನಕ್ಸಲರನ್ನು ಬಡಿದು ಕೊಲ್ಲಲು ಹುಟ್ಟಿಕೊಂಡ ಸ್ಥಳಿಯ ತರುಣರ ಪಡೆ ‘ಸಲ್ವಾ ಜುಡುಮ್’ ಅನ್ನು ಕಟ್ಟಿದ ಕರ್ಮಾ ಬಲಿಯಾದ ಮೇಲೆ ಮಾಧ್ಯಮಗಳು ಇಂತಹದೊಂದು ತರುಣರ ಪಡೆಯೇಕೆಂದು ಚರ್ಚೆ ನಡೆಸುತ್ತಿರುವುದು ವಿಪರ್ಯಾಸವಷ್ಟೆ.
ಸಮಸ್ಯೆ ಚಿಕ್ಕದಿರುವಾಗಲೇ ಹೊಸಕಿ ಹಾಕಿಬಿಟ್ಟರೆ ಮುಗಿದೇಹೋಗತ್ತೆ. ಆದರೆ ನಮ್ಮ ನಿಲುವೇ ವಿಭಿನ್ನ. ಸಮಸ್ಯೆಯನ್ನು ನೋಡುತ್ತಲೇ ಇರುತ್ತೇವೆ. ಇನ್ನು ಕೈಮೀರಿತೆನ್ನುವಾಗ ಮುಂದೆ ಬಂದು ನಿಲ್ಲುತ್ತೇವೆ. ಚೀನಾ ಗಡಿಯೊಳಕ್ಕೆ ಬಂದು – ಹೋಗಿ ಮಾಡುವಾಗಲೇ ಗುರ್ರೆನ್ನಬೇಕಿತ್ತು. ಈಗ ಎಚ್ಚೆತ್ತಿದ್ದೇವೆ. ಕಾಶ್ಮೀರದ ಸಮಸ್ಯೆಯನ್ನು ಯಾವಾಗಲೋ ಪರಿಹರಿಸಿಬಿಡಬೇಕಿತ್ತು. ಈಗ ಕಣ್ ಬಿಡುತ್ತಿದ್ದೇವೆ. ನಕ್ಸಲರನ್ನು, ಅವರ ಹುಟ್ಟು – ಬೆಳವಣಿಗೆಗೆ ಕಾರಣರಾದ ಚೀನಾದ ಬಾಲ ಬಡುಕರನ್ನು ಎಂದೋ ಇಲ್ಲವಾಗಿಸಿಬಿಡಬೇಕಿತ್ತು. ಈಗ ಕಣ್ಣಿರಿಡುತ್ತಿದ್ದೇವೆ.

Leave a Reply