ವಿಭಾಗಗಳು

ಸುದ್ದಿಪತ್ರ


 

ಕುಂಭಮೇಳದಿಂದ ನೇರ ಪ್ರಸಾರ

ಒಂದೆಡೆ ದೇಶಾದ್ಯಂತ ಹಿಂದೂ ಶಕ್ತಿಯನ್ನು ಬೂದಿ ಮಾಡಲು ಹವಣಿಸುವ ಭಸ್ಮಾಸುರ ಅಡ್ಡಾಡುತ್ತಿದ್ದರೆ, ಇಲ್ಲಿ ಮಾತ್ರ ವಿಷ್ಣು ತನ್ನ ಆನಂದದಲ್ಲಿ ತಾನೇ ಮಗ್ನನಾಗಿ ಮಲಗಿರುವಂತೆ ತೋರುತ್ತಿದೆ.

ನಾಗಾ ಸಾಧುಗಳೆಂದರೆ ಸಹಜವಾದ ಕುತೂಹಲವಿದ್ದೇ ಇರುತ್ತದೆ. ಜನ ಅತೀವ ಭಕ್ತಿಯಿಂದ ನಮಸ್ಕರಿಸೋದು ಅವರಿಗೇ. ಕೈಲಿ ಕಮಂಡಲ ಹಿಡಿದಿದ್ದ ಸಾಧುವೊಬ್ಬರ ಕಾಲಿಗೆ ನಮಸ್ಕರಿಸಿದೆ. ಆತನನ್ನು ಮಾತನಾಡಿಸಬಹುದು ಎನ್ನಿಸಿತು. ’ಇಷ್ಟೊಂದು ಕಠಿಣ ವ್ರತದ ಇಚ್ಛೆ ಹೇಗಾಯ್ತು?’ ಎಂದೆ. ಬದಿಯಲ್ಲೆ ಇದ್ದ ಮತ್ತೊಬ್ಬ ನಾಗಾ ಸಾಧು ’ಇಚ್ಛೆಯಿಂದ ನೀನು ಹುಟ್ಟಿರೋದು. ನಮಗೆ ಇಚ್ಛೆ ಇಲ್ಲ’ ಎಂದುಬಿಟ್ಟ. ಉತ್ತರಿಸಿದ ಧಾಟಿ ನೋಡಿದರೆ ಮುಂದಿನ ಪ್ರಶ್ನೆಗೆ ತಯಾರಿಲ್ಲ ಎನ್ನುವಂತಿತ್ತು. ಕೇಳಬೇಕಾದ್ದು ಸಾಕಷ್ಟಿದ್ದರೂ ಬೇರೆ ದಾರಿ ಇಲ್ಲದೆ ಎದ್ದು ಹೊರಟೆ.

@ Kumbh meLa, Prayag

@ Kumbh meLa, Prayag

ನನ್ನ ಪಾಲಿಗಿದು ಹರಿದ್ವಾರದ ನಂತರದ ಎರಡನೆ ಕುಂಭ. ನಾಲ್ಕಾರು ಕುಂಭ ಮೇಳಗಳಿಗೆ ಹೋಗಿ ಬಂದ ಭಕ್ತರೂ ಇದ್ದಾರೆ. ಒಮ್ಮೆ ಬಂದವರು ಮತ್ತೆ ಮತ್ತೆ ಧಾವಿಸಿ ಬರುವಂತೆ ಮಾಡುವ ಮಹಾಮೇಳ ಇದು. ಒಂಥರಾ ಇದು ಹಿಂದೂ ಧರ್ಮದ ಕಂಪ್ಲೀಟ್ ಪ್ಯಾಕೇಜ್. ಇಲ್ಲಿ ಅತಿ ಶ್ರೇಷ್ಠ ಸಾಧು ಸಂತರಿದ್ದಾರೆ. ಕಾವಿ ಧರಿಸಿದ ಕಪಟಿಗಳು ಇದ್ದಾರೆ. ಪ್ರವಚನಕಾರರೂ ಇದ್ದಾರೆ, ಸಂಗೀತ ಸಂತರೂ ಇದ್ದಾರೆ. ಒಂದೆಡೆ ಬೃಹತ್ ಪೆಂಡಾಲುಗಳಲ್ಲಿ ಹಾಡಲು ಬಂದ ಸಾಮಾನ್ಯ ಗಾಯಕರಿದ್ದರೆ, ಮತ್ತೊಂದೆಡೆ ಅನೂಪ್ ಝಲೋಟ, ಜಸ್‌ರಾಜರಂತಹ ದಿಗ್ಗಜರು ಕಾರ್ಯಕ್ರಮ ನೀಡಲೆಂದು ಬಂದು ಹೋಗುತ್ತಾರೆ. ಹತ್ತು ಅಖಾಡಾಗಳಾಗಿ ವಿಂಗಡಿಸಲ್ಪಟ್ಟಿರುವ ಉತ್ತರ ಭಾರತದ ಸಾಧುಗಳು, ಈ ಯಾವ ವಿಂಗಡಣೆಗೂ ಸೇರದ ದಕ್ಷಿಣ ಭಾರತದ ಪೀಠಾಧಿಕಾರಿಗಳು ಇಲ್ಲಿಗೆ ಬರುತ್ತಾರೆ. ಭಕ್ತರ ದೃಷ್ಟಿಯಿಂದ ನೋಡಿದರೆ ಆಬಾಲವೃದ್ಧರಾಗಿ ಎಲ್ಲರೂ ಗಂಡು ಹೆಣ್ಣಿನ ಭೇದ ಮರೆತು ನಿಲ್ಲುತ್ತಾರೆ.
ಉಹ್! ಕುಂಭಕ್ಕೆ ಕುಂಭವೇ ಸರಿಸಾಟಿ. ಅದರಲ್ಲೂ ಪ್ರಯಾಗದ ಈ ಮೇಳ ಹರಿದ್ವಾರದ ನಾಲ್ಕಾರು ಪಟ್ಟಾದರೂ ದೊಡ್ಡದು. ಗಂಗೆ ಯಮುನೆ ಸರಸ್ವತಿಯರ ತ್ರಿವೇಣಿ ಸಂಗಮವಾಗಿರುವುದರಿಂದ ಇದು ಅತ್ಯಂತ ಪವಿತ್ರ. ನಾಳೆ ಮೌನಿ ಅಮಾವಾಸ್ಯೆ ಬೇರೆ. ಸ್ನಾನಕ್ಕೆ ಪವಿತ್ರ ದಿನ. ಈಗಾಗಲೇ ಪವಿತ್ರ ಸ್ನಾನಕ್ಕೆಂದು ಬಂದ ಕೋಟ್ಯಂತರ ಜನರಿಂದ ಪ್ರಯಾಗ ತುಂಬಿ ತುಳುಕಾಡುತ್ತಿದೆ. ಕಣ್ಣು ಹಾಯಿಸಿದಷ್ಟು ದೂರಕ್ಕೂ ಬರಿ ಕೇಸರಿಯೇ ಕಾಣುತ್ತಿದೆ. ಇಂದು ಸಂಜೆಯ ವೇಳೆಗೆ ಒಳ ಬರುವವರನ್ನು ತಡೆಯಲಾಗುತ್ತದೆ. ಅಷ್ಟಾದರೂ ಸರ್ಕಾರದ ಅಂದಾಜು ಆರೇಳು ಕೋಟಿ ಜನ ಸ್ನಾನ ಮಾಡುತ್ತಾರೆ ಅಂತ!
ನದಿಯ ಇಕ್ಕೆಲೆಗಳಲ್ಲಿ ಹರಡಿರುವ ಐದಾರು ಕಿಲೋಮೀಟರ್ ವಿಸ್ತೀರ್ಣದ ಜಾಗದಲ್ಲಿವ್ಯವಸ್ಥೆ ಮಾಡಲಾಗಿದೆ. ಮೇಳ ನಡೆಯುವ ಜಾಗ ಇದೇ. ಇಲ್ಲೆಲ್ಲ ಪ್ರತ್ಯೇಕ ಮಠಗಳು, ಸಂಸ್ಥೆಗಳು, ಸ್ವಾಮೀಜಿ- ಸಾಧ್ವಿಯರು ತಮ್ಮ ತಮ್ಮ ಪಂಥಗಳ ಭಕ್ತಾದಿಗಳಿಗಾಗಿ ವಿಶಾಲ ಪೆಂಡಾಲುಗಳನ್ನು ಹಾಕಿ ಟೆಂಟ್‌ಗಳನ್ನು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸಂಸ್ಥೆಯ ಖ್ಯಾತಿ, ಸಾಮರ್ಥ್ಯಕ್ಕೆ ತಕ್ಕಷ್ಟು ವಿಸ್ತೀರ್ಣದ ಜಾಗ ನಿಗದಿ ಮಾಡಿಕೊಂಡಿದ್ದಾರೆ. ಇಲ್ಲಿ ಕೆಲವರಂತೂ ತಾತ್ಕಾಲಿಕ ಮನೆಗಳನ್ನೆ ಕಟ್ಟಿಬಿಟ್ಟಿದ್ದಾರೆ. ಇನ್ನು ಕೆಲವರದಂತೂ ಕಣ್ಣು ಕುಕ್ಕುವ ವ್ಯವಸ್ಥೆ. ಮುರಾರಿ ಬಾಪೂ, ಆಸಾ ರಾಮ್ ಬಾಪು ಇಲ್ಲಿ ತುಂಬಾ ಖ್ಯಾತರು. ಆದರೆ ನಾವು ಕಡಿಮೆ ಕೇಳಿರುವ ಅವಧೇಶಾನಂದ ಗಿರಿ ಸ್ವಾಮೀಜಿ ಮತ್ತು ಪೈಲಟ್ ಬಾಬಾ ಭಕ್ತರ ನಡುವೆ ಹೀರೋಗಳು. ಅವಧೇಶಾನಂದರ ಏಳು ದಿನಗಳ ಭಾಗವತ ಕಥೆಗೆ ಪ್ರತಿನಿತ್ಯ ಹದಿನೈದಿಪ್ಪತ್ತು ಸಾವಿರ ಜನರಾದರೂ ಸೇರುತ್ತಾರೆ. ಪೈಲಟ್ ಬಾಬಾರ ವಿದೇಶೀ ಶಿಷ್ಯರೇ ಎಲ್ಲರಿಗೂ ಆಕರ್ಷಣೆ.
ಈ ಮೇಳ ಮಲಗುವುದೇ ಇಲ್ಲ. ಅನೇಕ ಪೆಂಡಾಲುಗಳಲ್ಲಿ ಬೆಳಗಿನ ಜಾವಕ್ಕೆ ಹೋಮಗಳು ಶುರುವಾಗುತ್ತವೆ. ಇನ್ನು ಕೆಲವೆಡೆ ಹತ್ತು ಗಂಟೆಗೆ ಪ್ರವಚನ. ಪ್ರಸಾದ ಮುಗಿಸಿ ಹೊರಟರೆ ಮತ್ತೆ ಕೆಲವು ಪೆಂಡಾಲುಗಳಲ್ಲಿ ಮಧ್ಯಾಹ್ನ ಮೂರಕ್ಕೆ ಪ್ರವಚನ ಶುರು. ಅದು ಮುಗಿದರೆ, ರಾತ್ರಿ ಭಜನೆ, ಹಗಲು ಮೂಡುವ ತನಕ ಕಾರ್ಯಕ್ರಮಗಳು. ಇದೊಂದು ರಸದೌತಣವೇ ಸರಿ.
ನೀವು ನೋಡಬೇಕು.. ಹಳ್ಳಿಹಳ್ಳಿಗಳಿಂದ ಜನ ಗುಳೆ ಎದ್ದು ಬರುತ್ತಿದ್ದಾರೆ. ದೊಡ್ಡ ಲಾರಿಗಳಲ್ಲಿ ಟೆಂಟು ಹಾಕಲು ಬೇಕಾದ ಸಾಮಾನುಗಳನ್ನು ಹೊತ್ತು ಮನೆ ಮನೆಗಳೇ ಬಂದುಬಿಟ್ಟಿವೆ. ಇನ್ನು ಕೆಲವರು ಈ ಯಾವ ವ್ಯವಸ್ಥೆಯ ಬಗೆಗೂ ಕಾಳಜಿ ಇಟ್ಟುಕೊಂಡಿಲ್ಲ. ರಾತ್ರಿ ಒಂದೆಡೆ ಹೊದ್ದು ಮಲಗುತ್ತಾರೆ, ಬೆಳಗ್ಗೆ ಗಂಗಾ ಸ್ನಾನ ಮುಗಿಸಿ ಪೆಂಡಾಲಿನಿಂದ ಪೆಂಡಾಲಿಗೆ ಅಲೆಯಲು ಶುರುವಿಟ್ಟರೆಂದರೆ, ಸಂತರ ದರ್ಶನ, ಪ್ರವಚನ, ಸಂಗೀತ ಶ್ರವಣ, ಪ್ರಸಾದ ಭುಂಜನ- ಎಲ್ಲವೂ ಸುಸೂತ್ರ. ಮತ್ತೆ ರಾತ್ರಿ ಒಂದೆಡೆ ನಿದ್ದೆ ಮಾಡಿದರಾಯ್ತು.
ಜಿಜ್ಞಾಸುಗಳಿಗೆ ಸ್ವಲ್ಪ ಕಷ್ಟ. ನಿಜವಾದ ಸಾಧುಗಳನ್ನು ಹುಡುಕಿ ಅವರ ಹಿಂದೆ ಅಲೆಯಲು ಅವರಿಗೆ ಸಿಗುವ ಅವಕಾಶಗಳು ಬಲು ಕಡಿಮೆ. ಆದರೆ ಅಂತಹವರು ಜನರ ನಡುವೆ ಇದ್ದೇ ಇರುತ್ತಾರೆಂದು ಎಲ್ಲರಿಗೂ ಗೊತ್ತು. ಸ್ವಂತದ ಸಾಧನೆಗೆ ಮಾತ್ರ ಇದು ಅತ್ಯಂತ ಸೂಕ್ತ ಸ್ಥಳ. ಇಲ್ಲಿ ಸರಿಯಾಗಿ ಕುಳಿತು ಜಪತಪ ಮಾಡಲು ಸಾಧ್ಯವಾಗುವವರು ಮಾತ್ರ ಭಾಗ್ಯವಂತರೇ. ಸಾಧು ದರ್ಶನ, ಧ್ಯಾನ, ಸತ್ಸಂಗ, ಗಂಗಾಸಾನ್ನಿಧ್ಯ – ಸಾಧನೆಗೆ ಇನ್ನೇನು ಬೇಕು ಹೇಳಿ?
ಅಹಂಕಾರವನ್ನು ಕಳೆಯಬಲ್ಲ ಅಪರೂಪದ ತಾಣವೂ ಆಗಿದೆ ಈ ಮೇಳ. ನೀವು ಪ್ರಸಾದ ಪಡೆಯಲು ಕುಳಿತುಕೊಳ್ಳುವ ಸಾಲಿನಲ್ಲಿಯೇ ಹರಕು ಬಟ್ಟೆಯ ತಿರುಕರೂ ಕುಳಿತುಕೊಳ್ಳುತ್ತಾರೆ. ಮರುಕ್ಷಣದಲ್ಲಿಯೇ ಚೆನ್ನಾಗಿ ಸಿಂಗರಿಸಿಕೊಂಡ ದಂಪತಿಗಳೂ. ಬಡಿಸುವವರಿಗೆ ಮಾತ್ರ ಭೇದವೇ ಇಲ್ಲ.
ವಿಶೇಷವೆಂದರೆ, ಸಂತರ ರೀತಿ ನೀತಿಗಳಲ್ಲಿನ ಭಿನ್ನತೆ. ಉತ್ತರ ಭಾರತದ ಸಂತರಿಗೂ ಮತ್ತು ದಕ್ಷಿಣ ಭಾರತದ ಸಂತರಿಗೂ ಅಜಗಜಾಂತರ. ಅವರದ್ದು ಭಕ್ತಿ ಭಾವ, ನಮ್ಮವರದ್ದು ಜ್ಞಾನ ಭಾವ. ಅವರಲ್ಲಿ ಆಚರಣೆಗೆ ಮಹತ್ವ ಕಡಿಮೆ, ನಮ್ಮವರದು ಬಲು ಕಟ್ಟುನಿಟ್ಟು. ಅವರದ್ದು ಪ್ರವಚನ, ನಮ್ಮವರದ್ದು ಆಶೀರ್ವಚನ. ಭಕ್ತರ ಭಾವವೂ ಭಿನ್ನವೇ. ಇಲ್ಲಿನವರು ಭಾಗವತ ಕೇಳುವ ಪರಿ ನೋಡಿದರೆ ನೀವು ದಂಗಾಗಿಬಿಡುತ್ತೀರಿ. ಅಷ್ಟೊಂದು ಶ್ರದ್ಧೆ ಅವರಿಗೆ. ರಾಸಲೀಲೆ ನೋಡುವಾಗಲಂತೂ ತಮ್ಮನ್ನೇ ಕೃಷ್ಣನ ಗೋಪಿಕೆಯೆಂಬಂತೆ ಮಗ್ನರಾಗಿಬಿಡುತ್ತಾರೆ. ನಮ್ಮಲ್ಲಿ ಹೇಳುತ್ತಿರುವವರು ಯಾರು ಎಂಬುದರ ಮೇಲೆ ಕೇಳುಗರು ನಿರ್ಧಾರಗೊಳ್ಳುತ್ತಾರೆ. ಇಲ್ಲಿ ಹೇಳುತ್ತಿರುವುದು ಏನು ಎಂಬುದರ ಮೇಲೆ ಕೇಳುಗರ ನಿರ್ಧಾರವಾಗುತ್ತದೆ. ನಮ್ಮಲ್ಲಿ ಅನೇಕ ಸ್ವಾಮಿಗಳು ತಮ್ಮೊಡನೆಯೇ ಎದ್ದು ಹೊರಡುವ ಹಿಂಬಾಲಕ ಭಕ್ತರನ್ನೇ ಕರೆತರುತ್ತಾರಲ್ಲ, ಅಂತಹ ಸಮಸ್ಯೆ ಇಲ್ಲಿಲ್ಲ. ಅಂದಹಾಗೆ, ನಮ್ಮಲ್ಲಿ ಜಗದ್ಗುರುಗಳಿರುವಂತೆ ಇಲ್ಲಿ ಮಹಾಮಂಡಲೇಶ್ವರರು ಇದ್ದಾರೆ. ಅವರಿಗೆ ಅಪಾರವಾದ ಗೌರವ ಸಾಧು ವಲಯದಲ್ಲೂ ಇದೆ.
ದಿನದ ಇಪ್ಪತ್ನಾಲ್ಕು ಗಂಟೆ ನಿಲ್ಲದೆ ನಡೆಯುವುದು, ಕಳೆದು ಹೋದವರ ಕುರಿತಂತೆ ಉದ್ಘೋಷಣೆಗಳು! ಅನೇಕ ಬಾರಿ ಸ್ನಾನಕ್ಕೆ ಹೋದವರಿಗೆ ಚೀಲ ಇಟ್ಟಿದ್ದೆಲ್ಲಿ ಎಂಬುದೇ ಮರೆತುಹೋಗುವಷ್ಟು ಜನಜಂಗುಳಿ. ಅದೆಷ್ಟು ಪುಟ್ಟ ಮಕ್ಕಳು ತಂದೆ ತಾಯಿಯರ ಕೈಬಿಟ್ಟು ತಪ್ಪಿಸಿಕೊಂಡು ಬಿಡುತ್ತಾರೋ ದೇವರೇ ಬಲ್ಲ. ಮೈಕು ಮಾತ್ರ ಇಂಥವರ ವಿವರಗಳನ್‌ಉ ಕೂಗಿ ಕೂಗಿ ಹೇಳುತ್ತಿರುತ್ತದೆ.
ಈ ಬಾರಿಯ ಕುಂಭ ಮೇಳದ ವಿಷಯವೆಂದರೆ ರಾಷ್ಟ್ರೀಯತೆಯ ಅಂಶ. ಮುರಾರಿ ಬಾಪು ಅವರ ನೇತೃತ್ವದ ’ಗಂಗಾ ಸಭಾ’ದ ವತಿಯಿಂದ ಗಂಗೆಯನ್ನು ಉಳಿಸುವ ಆಂದೋಲನ ಬಲು ಜೋರಾಗಿ ನಡೆದಿದೆ. ಹೆಣ್ಣು ಮಗಳೊಬ್ಬಳು ಪ್ರತಿದಿನ ಗಂಗೆಯ ಕಥೆಯನ್ನು ’ಭಾಗವತ ಭಾಗೀರಥಿ’ ಎಂಬ ಹೆಸರಲ್ಲಿ ನಡೆಸಿಕೊಡುತ್ತಿದ್ದಾಳೆ. ಕಲುಷಿತಗೊಂಡಿರುವ ಗಂಗೆ, ಬತ್ತುತ್ತಿರುವ ಸೆಲೆ, ಇವುಗಳ ಚರ್ಚೆಯ ಕಾರಣದಿಂದ ಗಂಗಾ ಮಹಾಸಭಾದತ್ತ ಜನ ಆಕರ್ಷಿತರಾಗುತ್ತಿದ್ದಾರೆ. ಮದನ ಮೋಹನ ಮಾಲವೀಯರ ಪ್ರಯಾಸದಿಂದಾಗಿ ಸ್ವಾತಂತ್ರ್ಯಪೂರ್ವದಲ್ಲಿಯೇ ಬ್ರಿಟಿಷರು ಹಿಂದೂಗಳೊಂದಿಗೆ ಮಾತುಕತೆ ನಡೆಸದೆ ಗಂಗೆಯನ್ನು ಮುಟ್ಟುವುದಿಲ್ಲ ಎಂಬ ಒಪ್ಪಂದ ಮಾಡಿಕೊಂಡಿದ್ದರು. ಆದರೆ ನಮ್ಮ ಸರ್ಕಾರಗಳು ಅದನ್ನು ಗಾಳಿಗೆ ತೂರಿ ಗಂಗೆಯನ್ನು ಹಿಂಗಿಸುವ ಕೆಲಸಕ್ಕೆ ಕೈಹಾಕಿಬಿಟ್ಟವು. ಈ ಕುರಿತಂತೆ ಅಲ್ಲಿ ಸ್ವಯಂ ಸೇವಕರು ಸಾರ್ವಜನಿಕರನ್ನು ಎಚ್ಚರಿಸುತ್ತಿದ್ದಾರೆ. ಮತ್ತೊಂದೆಡೆ ರಾಮದೇವ ಬಾಬಾ ’ಪವಿತ್ರ ಗಂಗೆಯಲ್ಲಿ ಮಿಂದು ಸ್ವದೇಶೀ ವಸ್ತುಗಳನ್ನು ಬಳಸುವ ಸಂಕಲ್ಪ ಮಾಡಿ’ ಎಂದು ತಾಕೀತು ಮಾಡುತ್ತಿದ್ದಾರೆ.
ಇವೆಲ್ಲಕ್ಕಿಂತಲೂ ಭಿನ್ನವಾಗಿ, ಬಹುಶಃ ನೇರವಾಗಿ ಮಹಾರಾಷ್ಟ್ರದ ನಾನಿಜ್‌ನ ಸ್ವಾಮೀಜಿಯೊಬ್ಬರು ಹಿಂದುತ್ವಕ್ಕೆ ಎದುರಾಗಿರುವ ಆತಂಕಗಳ ಕುರಿತಂತೆ ಕಣ್ಣು ಕುಕ್ಕುವ ಬರಹಗಳನ್ನು ದೊಡ್ಡ ದೊಡ್ಡ ಫ್ಲೆಕ್ಸ್ ಮಾಡಿಸಿ ಇಡಿಯ ಮೇಳದುದ್ದಗಲಕ್ಕೂ ತೂಗಿ ಬಿಟ್ಟಿದ್ದಾರೆ. ಸಂತ ಮಹಾಸಭಾ ಒಂದು ’ಸಂತರಿಗೆ ಯಾರಾದರೂ ತೊಂದರೆ ಕೊಟ್ಟರೆ ನಮಗೆ ತಿಳಿಸಿ’ ಎನ್ನುವ ಸಂತ ಸಹಾಯವಾಣಿಯೊಂದನ್ನು ಏರ್ಪಾಟು ಮಾಡಿರುವುದು ಆಸಕ್ತಿದಾಯಕವಾಗಿದೆ.
ಈ ಎಲ್ಲದರ ನಡುವೆ ಸಾಧ್ವಿಯರ ಸಂಖ್ಯೆಯೂ ಸಾಕಷ್ಟಿದೆ. ಒಂದು ಪೆಂಡಾಲಿಗಂತೂ ’ವಿಮೆನ್ ಪವರ್’ ಎಂದೇ ಹೆಸರು! ಪೈಲಟ್ ಬಾಬಾರ ಪೆಂಡಾಲಿನಲ್ಲಿ ಜಪಾನಿನ ಯೋಗಿನಿ ಅಕಾಯಿವಾ ಇದ್ದಾರೆ. ಭಕ್ತರನ್ನು ಗಮನಿಸಿದಾಗಲೂ ಅಷ್ಟೇ. ಬಹು ಸಂಸ್ಕೃತಿಯ ಸ್ತ್ರೀಯರು ಕಂಡುಬರುತ್ತಾರೆ.
ಸರ್ಕಾರದ ವ್ಯವಸ್ಥೆಯೂ ಕಡಿಮೆಯೇನಿಲ್ಲ. ಅದು ಜೋರಾಗಿರಲೇಬೇಕಲ್ಲ!? ೨೦೧೪ರ ಚುನಾವಣೆ ಹತ್ತಿರದಲ್ಲಿದೆ. ಸ್ವಲ್ಪ ಎಡವಟ್ಟಾಗಿ ಕೆಟ್ಟ ಸಂದೇಶ ಹೋದರಂತೂ ಕಥೆ ಮುಗಿದಂತೆಯೇ. ಈ ದೇಶ ಆಳಿದ ಪ್ರಧಾನಮಂತ್ರಿಗಳಲ್ಲಿ ಬಹುತೇಕರು ಉತ್ತರ ಪ್ರದೇಶ ಮೂಲದವರೇ. ಇಲ್ಲಿ ಸಂದವರು ಅಲ್ಲಿಯೂ ಸಲ್ಲುತ್ತಾರೆ ಎನ್ನುವ ಭಾವ ಬಲು ಭದ್ರವಾಗಿರುವುದರಿಂದ ಇಲ್ಲಿಗೆ ಬರುವ ಭಕ್ತಾದಿಗಳನ್ನು ಸೆಳೆಯುವ, ಮೆಚ್ಚಿಸುವ ಪ್ರಯತ್ನ ಇದ್ದೇ ಇದೆ.
ಕರ್ನಾಟಕದಿಂದಲೂ ಬಲು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬಂದಿದ್ದಾರೆ. ಸ್ವರ್ಣವಲ್ಲಿ ಶ್ರೀಗಳು, ಬಾಳೇಕುಂದ್ರಿ ಮಠಾಧೀಶರು ಇದ್ದಾರೆ. ಅಚ್ಚರಿಯೆಂದರೆ, ಬಿಡದಿಯ ನಿತ್ಯಾನಂದರ ಪ್ರಚಾರವೂ ನಡೆಯುತ್ತಿದೆ.
ಒಂದೆಡೆ ದೇಶಾದ್ಯಂತ ಹಿಂದೂ ಶಕ್ತಿಯನ್ನು ಬೂದಿ ಮಾಡಲು ಹವಣಿಸುವ ಭಸ್ಮಾಸುರ ಅಡ್ಡಾಡುತ್ತಿದ್ದರೆ, ಇಲ್ಲಿ ಮಾತ್ರ ವಿಷ್ಣು ತನ್ನ ಆನಂದದಲ್ಲಿ ತಾನೇ ಮಗ್ನನಾಗಿ ಮಲಗಿರುವಂತೆ ತೋರುತ್ತಿದೆ. ನಿಜಕ್ಕೂ ಹೌದು. ನೀವು ಇಲ್ಲಿ ಬಂದು ಕುಳಿತಿರೆಂದರೆ ಜಗವನ್ನೇ ಮರೆತುಬಿಡುತ್ತೀರಿ.
ಇನ್ನೂ ಸಮಯವಿದೆ. ರಜೆ ಹಾಕಿಯಾದರೂ ಪ್ರಯಾಗಕ್ಕೆ ಬನ್ನಿ. ವಿರಾಟ್ ಹಿಂದೂ ಶಕ್ತಿಯ ದರ್ಶನದಿಂದ ಕಣ್ಣು ತಂಪು ಮಾಡಿಕೊಳ್ಳಿ.

Leave a Reply