ವಿಭಾಗಗಳು

ಸುದ್ದಿಪತ್ರ


 

ಕೂಡಿಡುವ ಆಟಕ್ಕೆ ಕೊನೆ

ಇದೊಂದು ಬಹಳ ಹಳೆಯ ಕತೆ. ಶ್ರೀಮಂತರೊಬ್ಬರು ರೈಲಿನಲ್ಲಿ ಕಳ್ಳನ ಪಕ್ಕದಲ್ಲಿ ಮಲಗುವ ಪ್ರಮೇಯ ಬಂತು. ಜೊತೆಯಲ್ಲಿ ಬಂಗಾರದ ಥೈಲಿ ಇದ್ದರೂ ಆಸಾಮಿ ನೆಮ್ಮದಿಯಿಂದ ಪವಡಿಸಿದ್ದ. ಕಳ್ಳನಿಗೆ ರಾತ್ರಿಯಿಡೀ ನಿದ್ದೆಯಿಲ್ಲ. ಎಷ್ಟು ಹುಡುಕಿದರೂ ಥೈಲಿ ಮಾತ್ರ ದಕ್ಕಲಿಲ್ಲ. ಬೆಳಗೆದ್ದು ಆತ ಲಜ್ಜೆ ಬಿಟ್ಟು ಸಿರಿವಂತನನ್ನು ಕೇಳಿದ, ‘ಸತ್ಯ ಹೇಳು ಬಂಗಾರದ ಥೈಲಿ ಎಲ್ಲಿಟ್ಟಿರುವೆ?’ ಸಿರಿವಂತನೇ ನಿರಾಳವಾಗಿ ‘ನಿನ್ನ ದಿಂಬಿನಡಿಯಲ್ಲಿ ನನ್ನ ಥೈಲಿ ನೋಡು’ ಎಂದವನೇ ಅದನ್ನು ತೆಗೆದುಕೊಂಡು ನಡೆದು ಬಿಟ್ಟ. ಪೆಚ್ಚಾಗುವ ಸರದಿ ಕಳ್ಳನದು.
ನಾವೀಗ ಆ ಕಳ್ಳನ ಸ್ಥಾನದಲ್ಲಿದ್ದೇವೆ. ಭಗವಂತನೆಂಬ ಆ ಸಿರಿವಂತ ಆನಂದವೆಂಬ ಹೊನ್ನು ತುಂಬಿದ ಥೈಲಿಯನ್ನು ನಮ್ಮೊಳಗೆ ಇಟ್ಟು ನಗುತ್ತಿದ್ದಾನೆ. ನಾವಾದರೋ ಹೊರಗೆ ಹುಡು-ಹುಡುಕಿ ಹೈರಾಣಾಗುತ್ತಿದ್ದೇವೆ. ಸಿಗದ ಆನಂದಕ್ಕಾಗಿ ಮತ್ತೆ ಮತ್ತೆ ರೋದಿಸುತ್ತಿದ್ದೇವೆ. ಯಾರು ‘ಸಾಕು’ ಎನ್ನುವ ಪದವನ್ನು ಅರಿತಿದ್ದಾರೋ, ಅವರು ನಿಜಕ್ಕೂ ಆನಂದವನ್ನು ಗುರುತಿಸಿಕೊಂಡಿದ್ದಾರೆ ಎಂದೇ ಅರ್ಥ.

ಒಂದು ಒಳ್ಳೆಯ ಊಟವನ್ನು ಹೊಟ್ಟೆ ತುಂಬುವಷ್ಟು ಮಾಡಿದಾಗ ‘ಆಹಾ’ ಎಂಬ ಆನಂದದ ನಗೆ ಹೊರಡುತ್ತಲ್ಲ ಏಕೆ ಗೊತ್ತೆ? ಬಡಿಸಲು ಬಂದವನಿಗೆ ‘ಸಾಕು’ ಎಂದೆವೆಲ್ಲ ಅದಕ್ಕೆ. ಇದನ್ನೇ ತೃಪ್ತಿ ಎಂತಲೂ ಹೇಳೋದು. ಶಾಲೆಗೆ ಹೋಗುವ ಅಥವಾ ಮರಳಿ ಬರುತ್ತಿರುವ ಮಕ್ಕಳನ್ನು ನೋಡಿ. ಅಂಥದ್ದೊಂದು ನಗೆ ನಮ್ಮ ಮುಖದಲ್ಲಿ ಚಿಮ್ಮುವುದು ಸಾಧ್ಯವೇ ಇಲ್ಲವೇನೋ ಎನಿಸಿಬಿಡುತ್ತೆ. ಅದಕ್ಕೂ ಕಾರಣ ಇದೇ. ಆ ಮಕ್ಕಳ ಆಸೆಯ ಪರಿಧಿ ತೀರಾ ಚಿಕ್ಕದ್ದು. ಶಾಲೆ ಬಿಟ್ಟದ್ದೂ ಅವರಿಗೆ ತೃಪ್ತಿಯೇ. ಆ ಮಕ್ಕಳ ತಲೆಗೆ ಅಂಕಗಳ ಆಸೆಯನ್ನೂ, ಕೆಲಸದ ಹುಚ್ಚನ್ನೂ, ಶೀಘ್ರ ಶ್ರೀಮಂತಿಕೆಯ ದುರಾಸೆಯನ್ನು ಹಚ್ಚಿದವರು ನಾವೇ! ಹೀಗಾಗಿಯೇ ಆನಂತರದ ದಿನಗಳಲ್ಲಿ ಅಂತಹುದೊಂದು ನಗು ಅವರ ಮುಖದಲ್ಲಿಯೇ ಮಿಂಚಲಿಲ್ಲ.

ಈ ರೀತಿ ತೃಪ್ತಿಯಿಲ್ಲದ ಆತ್ಮಗಳು ಈಗ ಮಾತ್ರ ಇವೆ ಎಂದು ಭಾವಿಸಬೇಡಿ. ಇದು ಎಲ್ಲ ಕಾಲದಲ್ಲೂ ಇದ್ದಂಥವೇ. ಹೀಗಾಗಿಯೇ ಬುದ್ಧ ಆಸೆಯೇ ದುಃಖಕ್ಕೆ ಮೂಲ ಎಂದು ಸಾರಿ-ಸಾರಿ ಹೇಳಿದ್ದು. ಅವನ ಮಾತನ್ನು ಆಲಿಸಿದ ಕೆಲವರು ನಿಜವಾದ ಆನಂದವನ್ನು ಸವಿಯಲೆಂದು ಅಂತರ್ಮುಖಿಯಾದರು. ಒಳಗಿರುವ ಆನಂದ ಗುರುತಿಸಿಕೊಂಡು ಸುಖಿಸಿದರು. ಕೂಡಿಟ್ಟಿದ್ದನ್ನು ಭೋಗಿಸಲಾಗದವನಿಗೆ ಇಲ್ಲೂ ಆನಂದವಿಲ್ಲ, ಹೋದಲ್ಲೂ ಸುಖವಿಲ್ಲ. ಮತ್ತೇಕೆ ಈ ಕೂಡಿಡುವ ಆಟ. ಒಮ್ಮೆ ಸಾಕಪ್ಪ, ಸಾಕು ಎಂದು ಬಿಡಿ.

Leave a Reply