ವಿಭಾಗಗಳು

ಸುದ್ದಿಪತ್ರ


 

ಕ್ರಿಕೆಟ್ ದೇವತೆಯ ಮೊದಲ ಹೆಜ್ಜೆಗಳು

ಸಚಿನ್ ಸುಮ್ಮನೆ ಆದವನಲ್ಲ. ಬಾಲ್ಯ ಕಾಲದಿಂದಲೂ ಬೆಳೆಸಿಕೊಂಡಿದ್ದ ಶ್ರದ್ಧೆ, ಆತ್ಮವಿಶ್ವಾಸ ಮತ್ತು ಸಾಧನೆಯ ಛಲಗಳು ಅವನನ್ನು ರೂಪಿಸಿದವು. ಜೊತೆಗೆ ಅಚ್ರೇಕರ್‌ರಂತಹ ಮಾರ್ಗದರ್ಶಕ ದೊರಕಿದ್ದು ಸಚಿನ್ ಪಾಲಿಗೆ ವರದಾನವಾಯ್ತು. ಇದು ಸಚಿನ್ ಲೈಫ್ ಸ್ಕ್ಯಾನ್ ನ ಎರಡನೆ ಭಾಗ. …

ಚಿಕ್ಕಂದಿನಿಂದ್ಲೂ ಅಷ್ಟೇ. ಸಚಿನ್‌ಗೆ ಟೆನಿಸ್ ಮೇಲೆ ಕ್ರಿಕೆಟ್‌‌ನಷ್ಟೇ ಪ್ರಾಣ. ಟೆನಿಸ್ ಮ್ಯಾಚ್‌ಗಳು ಶುರುವಾದರೆ ಸಚಿನ್ ಟೀವಿ ಮುಂದೆ ಬಿಡುವಿಲ್ಲದಂತೆ ಕುಳಿತಿರುತ್ತಿದ್ದ. 1981ರ ಆಸುಪಾಸಿನಲ್ಲಿ ಸಚಿನ್ ಆರಾಧ್ಯ ತಾರೆ ಜಾನ್ ಮೆಕೆನ್ರೋಗೂ ಜಾನ್ ಬೋರ್ಗ್‌ಗೂ ಟೆನಿಸ್ ಯುದ್ಧ ಶುರುವಾಗಿಬಿಟ್ಟಿತು. ಮನೆಯವರೆಲ್ಲ ಶಾಂತ – ಮಂದಸ್ಮಿತ ಸ್ವಭಾವದ ಬೋರ್ಗ್‌ನ ಬೆಂಬಲಿಗರಾದರೆ, ಮೆಕೆನ್ರೋ ಪರ ವಕಾಲತ್ತು ವಹಿಸುತ್ತಿದ್ದುದು ಸಚಿನ್ ಮಾತ್ರ. ಮನೆಯಲ್ಲಿಯೇ ಯುದ್ಧ ಶುರುವಾಯ್ತು. ಮೆಕೆನ್ರೋ ಚೆನ್ನಾಗಿ ಆಡಿದಾಗೆಲ್ಲ ಸಚಿನ್ ಕುಣಿದು ಕುಪ್ಪಳಿಸುತ್ತಿದ್ದ. ಬೋರ್ಗ್‌ನ ಆಟದ ಶೈಲಿಗೆ ಮನೆಯವರು ಕೇಕೆ ಹಾಕುತ್ತಿದ್ದರು. ಕೊನೆಗೂ ಅಪಾರ ಹಣಾಹಣಿಯ ನಂತರ ಮೆಕೆನ್ರೋ ಜಯಗಳಿಸಿದಾಗ ಸಚಿನ್ ಗೆ ಜಗತ್ತನ್ನೇ ಗೆದ್ದಷ್ಟು ಖುಷಿಯಾಗಿತ್ತು!

ವಾಸ್ತವವಾಗಿ ಮೆಕೆನ್ರೋ – ಬೋರ್ಗ್ ಇಬ್ಬರ ವ್ಯಕ್ತಿತ್ವದಲ್ಲೂ ಆನೆ-ಆಡುಗಳಷ್ಟು ಅಂತರ. ಮೆಕೆನ್ರೋ ಆಡಿದ ಮೇಲೆ ಗೆದ್ದೇಬಿಡಬೇಕು, ಸೋಲು ಅವಮಾನ ಎಂದು ಭಾವಿಸುವ ಜಾತಿಯವನು. ಬೋರ್ಗ್ ಹಾಗಲ್ಲ, ಆಡಬೇಕು- ಗೆಲ್ಲಬೇಕು ಅಷ್ಟೇ! ಮೆಕೆನ್ರೋ ಆಟದುದ್ದಕ್ಕೂ ಬೈಗುಳಗಳ ರಾಶಿ ಸುರಿಸುತ್ತಿರುತ್ತಾನೆ. ಬೋರ್ಗ್ ಶಾಂತವಾಗಿ ಎಲ್ಲವನ್ನೂ ಆನಂದಿಸುತ್ತಾನೆ. ಟೆನಿಸ್‌ನಲ್ಲಿ ಸಚಿನ್ ಮೆಕೆನ್ರೋವನ್ನು ಹೆಚ್ಚಾಗಿ ಪ್ರೀತಿಸಿದರೂ ಪಾಠಗಳನ್ನು ಕಲಿತಿದ್ದು ಮಾತ್ರ ಬೋರ್ಗ್‌ನಿಂದಲೇ. ಇಂದಿಗೂ ಸಚಿನ್ ಮೈದಾನದಲ್ಲಿ ರನ್ ಬೆನ್ನಟ್ಟುವಾಗ ಉರಿಯುತ್ತಿದ್ದರೂ ಇತರೆ ವಿಚಾರಗಳಲ್ಲಿ ಶಾಂತಚಿತ್ತ. ಮೊದಲ ಬಾರಿಗೆ ನೆಟ್ ಪ್ರಾಕ್ಟೀಸ್‌ನಲ್ಲಿ ಕೋಚ್ ಗಮನ ಸೆಳೆದ ಸಚಿನ್ ಅವರ ಪಾಲಿಗೆ ಬೆಸ್ಟ್ ವಿದ್ಯಾರ್ಥಿ ಅನಿಸಲಿಕ್ಕೆ ಇದೂ ಒಂದು ಅಂಶ ಕಾರಣವಾಗಿತ್ತು. ಸಮಯ ಸಿಕ್ಕಾಗೆಲ್ಲ ನಾನು ಔಟ್ ಆಗಿದ್ದೇಕೆ? ಕೆಲವೊಮ್ಮೆ ಚೆಮ್ಡು ಗಾಳಿಯಲ್ಲೇ ತಿರುಗುತ್ತದಲ್ಲ ಅದು ಹೇಗೆ? ಆ ಚೆಂಡನ್ನು ನಾನು ಆಡಬೇಕೋ ಬಿಡಬೇಕೋ? ಇಂತಹ ಹಲವು ಪ್ರಶ್ನೆಗಳನ್ನು ಅವನು ಯಾವಾಗಲೂ ಅಚ್ರೇಕರ್ ಮುಂದೆ ಇರಿಸುತ್ತ್ತಿದ್ದ. ಅವರೂ ಕೂಡ ಪ್ರೀತಿಯಿಂದ ಎಲ್ಲಕ್ಕೂ ಉತ್ತರಿಸುತ್ತಿದ್ದರು.

ಸಚಿನ್ ಆಟದ ಶೈಲಿ, ಆಕರ್ಷಕ ಹೊದೆತಗಳು- ಇವೆಲ್ಲವೂ ಅವನನ್ನು 19ವರ್ಷ ಒಳಗಿನ ತಂಡಕ್ಕೆ ಸೇರಿಸುವ ಯೋಚ್ನೆ ಮಾಡಲು ಪ್ರೇರೇಪಿಸಿದವು. ಆದರೆ ಅವನಿಗಿನ್ನೂ ಹನ್ನೆರಡು ವರ್ಷವೂ ದಾಟಿರಲಿಲ್ಲ! ಅದಕ್ಕಾಗಿಯೇ ಅದನ್ನು ತಿರಸ್ಕರಿಸಲಾಯ್ತು. ಮತ್ತೊಮ್ಮೆ ಹದಿನಾರಾದರೂ ಆಗಲಿ, ಆಮೇಲೆ ಆಡುವಿಯಂತೆ ಎಂಬ ಸೂಚನೆ ಬಂತು. ಅಚ್ರೇಕರ್ ಬಿದಲಿಲ್ಲ. ಕ್ಲಬ್ಬಿಗೊಯ್ದುಬಿಟ್ತರು. ಪಾಪ! ಸಚಿನ್‌ನ ಪುಟ್ಟ ದೇಹ ನೋಡಿ ಅವನನ್ನು ಹನ್ನೊಂದನೇ ಆಟಗಾರನಗಿರುವಂತೆ ನೊಡಿಕೊಳ್ಳಲಾಯ್ತು. ಮರುಕ್ಷಣದಲ್ಲಿಯೇ ಅಚ್ರೇಕರ್ ರಂಪ ಮಾಡಿ ನಾಲ್ಕನೇ ನಂಬರಿನಲ್ಲಿ ಬ್ಯಾಟಿಂಗ್‌ಗೆ ಇಳಿಸಿದರು. ಸಚಿನ್ ನ ಅದ್ಭುತ ಆಟ ಎಲ್ಲರ ಮನ ಸೂರೆಗೊಂಡಿತು. ಆ ಟೂರ್ನಿ ಮುಗಿಯುವ ಹೊತ್ತಿಗೆ ಸಚಿನ್ ಅತ್ಯುತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿ ಪಡೆದಿದ್ದ. ಅವನ ಬದುಕಿನ ವೈಶಿಷ್ಟ್ಯವೇ ಅದು. ಎಲ್ಲರೂ ಕಿರಿಯ ಎಂದು ಪಕ್ಕಕ್ಕೆ ತಳ್ಳುವ ವೇಳೆಗೆ ಅವನು ಚೆಂದದ ಆಟವಾಡಿ ಮನಸೂರೆಗೊಂಡಿರುತ್ತಿದ್ದ. ಅದು ಅಚಾನಕ್ಕಾಗಿ ಆಗುತ್ತಿದ್ದುದಲ್ಲ. ಅದರ ಹಿಂದೆ ಅವನ ಅಸೀಮ ಶ್ರಮವಿರುತ್ತಿತ್ತು. ಪ್ರತಿದಿನ ನಾಲ್ಕು ನಾಲ್ಕು ಮ್ಯಾಚ್‌ಗಳನ್ನು ಆಡುತ್ತಿದ್ದ. ಬೆಳಗ್ಗೆ ಒಂದೆರಡು ಆಟಗಳಲ್ಲಿ ಔಟಾದರೆ, ಅಚ್ರೇಕರ್ ಅವನನ್ನು ಸ್ಕೂಟರಿನಲ್ಲಿ ಕುಳ್ಳಿರಿಸಿಕೊಂಡು ಮತ್ತೊಂದು  ಮೈದಾನಕ್ಕೆ ಕರೆದೊಯ್ಯುತ್ತಿದ್ದರು. ಅಲ್ಲಿ ಆಡಿ ಔಟಾದರೆ ಮತ್ತೊಂದು ಮೈದಾನ. ಹೀಗೆ ಪ್ರತಿನಿತ್ಯ ಹತ್ತು ಹದಿನೈದು ಕಿ.ಮೀಗಳ ಪ್ರವಾಸ ನಡೆಯುತ್ತಿತ್ತು. ಒಮ್ಮೆಯಂತೂ ಬೆಳಗ್ಗೆ ಏಳು ಗಂಟೆಗೆ ಬಂದ ಸಚಿನ್ ಎರಡು ಗಂಟೆಗಳ ಕಾಲ ನೆಟ್ ಪ್ರಾಕ್ಟೀಸ್ ಮಾಡಿದ್ದ. ನಂತರ ಎರಡು ತಾಸುಗಳ ಮ್ಯಾಚ್. ಮಧ್ಯಾಹ್ನ ಉತಕ್ಕೂ ಬಿಡುವಿಲ್ಲದೆ ಇನ್ನೊಂದು ಪಂದ್ಯದತ್ತ ಧಾವಿಸಿದ. ಸಂಜೆ ನೆಟ್‌ನಲ್ಲಿ ಅಭ್ಯಾಸ ಮುಗಿಸಿದ ನಂತರ ಹತ್ತು ವಡಾ-ಪಾವ್ ತಿಂದು ತೇಗಿದ್ದ. ಅದು ಅವನ ಶ್ರದ್ಧೆ. ಅವನ ಆ ಶ್ರದ್ಧೆಯ ಮೇಲೆ ಅಚ್ರೇಕರ್‌ಗೆ ಅಪಾರ ವಿಶ್ವಾಸವಿತ್ತು.

1986-87ರಲ್ಲಿ ಸಚಿನ್ ಓದುತ್ತಿದ್ದ ಶಾಲೆ ಕ್ರಿಕೆಟಿನ ಎಲ್ಲ ಪ್ರಶಸ್ತಿಗಳನ್ನು ಬಾಚಿ ಬಗಲಿಗೆ ಹಾಕಿಕೊಂಡಿತು. ಆ ವರ್ಷದ ಪಂದ್ಯಗಳಲ್ಲಿ ಸಚಿನ್ ಸ್ಕೋರು 276, 159,156, 123, 197 ಮತ್ತು 150 ಆಗಿತ್ತು. ಎಲ್ಲರೂ ಸಚಿನ್ನನ ಗುಣಗಾನ ಮಾಡುತ್ತಿದ್ದರು. ಇಷ್ಟಾದರೂ ಅವನಿಗೆ ಬೆಸ್ಟ್ ಜೂನಿಯರ್ ಕ್ರಿಕೆಟರ್ ಪ್ರಶಸ್ತಿ ಸಿಗಲೇ ಇಲ್ಲ. ಸಚಿನ್ ನೊಂದುಕೊಂಡ. ಎಂತಹ ಆಟವಾಡಿದರೂ ಪ್ರಶಸ್ತಿ ದಕ್ಕದಾಯಿತಲ್ಲ ಎಂಬ ನೋವು ಅವನನ್ನು ಕಾಡಿತು. ಒಂದಿಡೀ ದಿನ ಅಭ್ಯಾಸಕ್ಕೆ ಬರಲೇ ಇಲ್ಲ. ಅದೆಲ್ಲಿಂದ ಸುಳಿವು ಸಿಕ್ಕಿತೋ? ಗವಾಸ್ಕರ್ ಪತ್ರ ಬರೆದರು. “ಜೊತೆಗಾರರೆಲ್ಲ ಬಂದ ಹಾದಿ ಹಿಡಿದು ಮರಳುತ್ತಿದ್ದರೆ, ಏಕಾಂಗಿ ಹೋರಾಟ ನಡೆಸಿ ತಂಡವನ್ನು ಗೆಲ್ಲಿಸಿದೆ, ಮರೆಯಲಾಗದ ಆಟವಾಡಿದೆ. ಪ್ರಶಸ್ತಿ ಬರಲಿಲ್ಲವೆಂದು ನೊಂದುಕೊಳ್ಳಬೇಡ. ಅತ್ಯುತ್ತಮವಾದ ಆಟ ಆಡಿದಾಗಲೂ ನಿನ್ನ ವಯಸ್ಸಿನಲ್ಲಿ ಪ್ರಶಸ್ತಿ ದೊರೆಯದಿದ್ದವರಲ್ಲಿ ನಾನೂ ಇದ್ದೇನೆ ಎಂಬುದನ್ನು ಮರೆಯದಿರು”- ಆ ಪತ್ರ ಓದಿ ಸಚಿನ್ ನ ಉತ್ಸಾಹ ನೂರ್ಮಡಿಯಾಯ್ತು. ಸಚಿನ್ ಮತ್ತೆ ಮೈದಾನದತ್ತ ಧಾವಿಸಿದ. ಈ ಬಾರಿ ಅವನು ಮತ್ತಷ್ಟು ಕಸುವು ತುಂಬಿಕೊಂಡು ಬಂದಿದ್ದ. ಯಾವುದೇ ಶಾಲೆಯ ತಂಡಗಳಿರಲಿ, ಸಚಿನ್ ಬ್ಯಾಟ್ ಹಿಡಿದು ನಿಂತುಬಿಟ್ಟರೆ ಅದುರಿಹೋಗುತ್ತಿದ್ದವು. ಏಕಾಂಗಿಯಾಗಿ 400ರನ್ ಬೆನ್ನಟ್ಟಿ ಗೆಲುವು ತಂದಿತ್ತ ಉದಾಹರಣೆಗಳೂ ಇದ್ದವು. ಇವುಗಳ ನಡುವೆಯೇ ಎದುರಾಳಿಯ ಶಾಲೆಯ ಒಬ್ಬ ಬೌಲರ್ ಸಚಿನ್ ಅನ್ನು ಸೊನ್ನೆಗೆ ಔಟಾಗಿಸಿಬಿಟ್ಟ. ಈ ವಿಚಾರ ಆ ಶಾಲೆಯ ಪ್ರಾಂಶುಪಾಲರಿಗೆ ತಿಳಿಯುತ್ತಲೇ ಅವರು ಅದೆಷ್ಟು ಖುಷಿಯಾಗಿಹೋದರೆಂದರೆ, “ಸಚಿನ್ ಅನ್ನು ಸೊನ್ನೆಗೆ ಔಟ್ ಮಾಡಿದ್ದಕ್ಕಾಗಿ ಶಾಲೆಗೆ ಅರ್ಧ ದಿನ ರಜೆ ಘೋಷಿಸುತ್ತೇನೆ, ಎಲ್ಲ ಮಕ್ಕಳೂ ಮೈದಾನಕ್ಕೆ ಹೋಗಿ” ಎಂದಿದ್ದರು! ನೂರಾರು ಸಂಖ್ಯೆಯಲ್ಲಿ ಮಕ್ಕಳು ಮೈದಾನಕ್ಕೆ ಬಂದು ಸಚಿನ್ ಅನ್ನು ಔಟ್ ಮಾಡಿದ್ದ ವೀರಬೌಲರನನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದ್ದರು.

ಈ ವರೆಗೂ ಈ ಚಾಳಿ ಬದಲಾಗಿಲ್ಲ. ಅದು ಯಾವ ದೇಶದವರೇ ಇರಲಿ, ತೆಂಡೂಲ್ಕರ್ ಔಟಾದನೆಂದರೆ, ಆಟವನ್ನು ಅರ್ಧ ಗೆದ್ದೆವೆಂದೇ ಭಾವಿಸುತ್ತಾರೆ. ಒಬ್ಬ ಮಹೋನ್ನತ ಆಟಗಾರನಿಗೆ ಇದಕ್ಕಿಂತ ಇನ್ನೇನು ಹೆಚ್ಚಿನದು ಬೇಕು?

ಇಂಥಾ ಸಚಿನ್ ಬಾಲಕನಿರುವಾಗ ಒಂದು ಅವಘಡ ಮಾಡಿಕೊಂಡಿದ್ದ. ಗೆಳೆಯರೊಂದಿಗೆ ಮಾವಿನ ಮರ ಹತ್ತುತ್ತಿದ್ದ ಹತ್ತರ ಪೋರ ಎಲ್ಲರೂ ಬೇಡವೆಂದರೂ ಕೆಳದೆ ತುದಿಯತ್ತ ಧಾವಿಸಿದ್ದ. ಕಾಲು ಜಾರಿ ಧೊಪ್ಪನೆ ಬಿದ್ದ. ಆತ ಅದೆಷ್ಟು ಎತ್ತರದಿಂದ ಬಿದ್ದಿದ್ದನೆಂದರೆ, ಕೈಕಾಲು ಮುರಿದು ಮೂಳೆ ಪುಡಿಯಾಗಬೇಕಿತ್ತು. ಆದರೆ ಸಚಿನ್ ಹುಟ್ಟಿದ್ದು ಕಾಲು ಮುರಿದುಕೊಳ್ಳಲಿಕ್ಕೆ ಅಲ್ಲವಲ್ಲ? ಹೆಚ್ಚಿನ ಗಾಯಗಳಾಗದೆ ಪಾರಾದ. ಸಚಿನ್‌ದಲ್ಲ,  ಭಾರತದ ಅದೃಷ್ಟ ದೊಡ್ಡದಿತ್ತು!

(ಮುಂದುವರೆಯುತ್ತದೆ…..)

(ವಿವಿಧ ಆಕರಗಳಿಂದಾಯ್ದ ನಿಖರ- ಅಧಿಕೃತ ಮಾಹಿತಿಗಳನ್ನು ಒಳಗೊಂಡಿದೆ)
ಇದು ಚಕ್ರವರ್ತಿ ಸೂಲಿಬೆಲೆ  ಆರು ವರ್ಷಗಳ ಹಿಂದೆ, ಅಂದರೆ 2005ರಲ್ಲಿ ಕರ್ಮವೀರ ಪತ್ರಿಕೆಗಾಗಿ ಬರೆಯುತ್ತಿದ್ದ ಲೈಫ್ ಸ್ಕ್ಯಾನ್ ಸರಣಿಯ ಲೇಖನ. ಒಟ್ಟು 8 ಎಪಿಸೋಡುಗಳಲ್ಲಿ  ಸಚಿನ್ ಜೀವನ ಸಾಧನೆಯ ಕೆಲವು ಸ್ವಾರಸ್ಯಕರ ಪುಟಗಳನ್ನು ಕಟ್ಟಿಕೊಡಲಾಗಿತ್ತು. ಮೊದಲನೆಯ ಮತ್ತು 8ನೆಯ ಎಪಿಸೊಡುಗಳ ನಮ್ಮ ಕೈಗೂ ಸಿಕ್ಕಿಲ್ಲ. ಉಳಿದ ಆರು ಲೇಖನಗಳು, ವಿಶ್ವಕಪ್ ಸಂದರ್ಭದಲ್ಲಿ, ನಮ್ಮ ಮರು ಓದಿಗಾಗಿ…. – ಬ್ಲಾಗ್ ಮಾಡರೇಟರ್

Leave a Reply