ವಿಭಾಗಗಳು

ಸುದ್ದಿಪತ್ರ


 

ಗಡಿಪಡೆಯಲ್ಲಿ ಮಂಜಿನಬೆಟ್ಟದ ಮುದ್ದಿನ ಹುಡುಗ

ಕರ್ನಲ್ ಚೆವಾಂಗ್ ರಿಂಚೆನ್. ಇದು ಆತನ ಹೆಸರು. ಜಗತ್ತಿನ ಅತ್ಯಂತ ಎತ್ತರದ ವಾಹನ ಸಂಚರಿಸುವ ಖರ್ದುಂಗ್ಲಾ ಪಾಸ್ ಅನ್ನೋ ಜಾಗದಲ್ಲಿ ಆತನ ಚಿತ್ರ ತೂಗುಬಿಟ್ಟಿದ್ದರು. ಎರಡು ಮಹಾವೀರ ಚಕ್ರ, ಒಂದು ಸೇನಾ ಮೆಡಲ್ ಪಡೆದ ಅಪರೂಪದ ಸೈನಿಕ ಅಂತ ಬರೆದಿದ್ದರು. ಅಲ್ಲಿಗೆ ನನ್ನನ್ನೊಯ್ದ ಗೆಳೆಯ ಜಿಮ್ಮಿಯನ್ನು ‘ಇವರ್ಯಾರು’ ಎಂದು ಕೇಳಿದ್ದಕ್ಕೆ ‘ನಮ್ಮ ದೇವರು’ ಅಂದ. ಅವನ ಕಣ್ಣು ಒದ್ದೆಯಾಗಿತ್ತು. ನೀವೆಲ್ಲ ಇಲ್ಲಿ ಅಡ್ಡಾಡುತ್ತಿದ್ದೀರಿ ಎಂದರೆ ಆತನೇ ಕಾರಣ ಎಂದ. ಕೊನೆಗೆ ಇಂದು ಲಡಾಖ್ ಪಾಕಿಸ್ತಾನವಾಗದೆ ಭಾರತವಾಗಿಯೇ ಉಳಿದಿದೆಯೆಂದರೆ ಅದಕ್ಕೂ ಆತನೇ ಕಾರಣ ಎಂದುಬಿಟ್ಟ. ಲೆಹ್ ನ ಹಾಲ್ ಆಫ್ ಫೇಮ್ ನಲ್ಲಿ ಸ್ವಯಂಚಾಲಿತ ಬಂದೂಕು ತೋರಿಸಿದ ಸೈನಿಕನೊಬ್ಬ, ಚೆವಾಂಗ್ ಗೆ ಹೆದರಿ ಪಾಕಿಸ್ತಾನದ ಉನ್ನತ ಸೇನಾಧಿಕಾರಿ ಬಿಟ್ಟು ಹೋದ ಶಸ್ತ್ರ ಇದು ಎಂದರಲ್ಲದೇ ಆಗ ಚೆವಾಂಗ್ ಗೆ ಬರೀ ೧೭ ವರ್ಷವಾಗಿತ್ತು ಎಂಬುದನ್ನೂ ಸೇರಿಸಿದ!

ನಾನು ದಂಗಾದೆ. ಕೆಲವರನ್ನು ಮಾತನಾಡಿಸಿದೆ, ಪುಸ್ತಕ ತಡಕಾಡಿದೆ, ಅಂತರ್ಜಾಲಾಡಿದೆ. ಮೈನವಿರೇಳಿಸುವ ಚೆವಾಂಗ್ ನ ಬದುಕು ಕಣ್ಮುಂದೆ ಹಾದುಹೋಯ್ತು. ಲಡಾಖ್ ನ ಹಳ್ಳಿಯ ಹುಡುಗ. ಬಾಲ್ಯವನ್ನೆಲ್ಲ ಪಿಸ್ತೂಲುಗಳೊಂದಿಗೆ ಆಟವಾಡುತ್ತಲೇ ಕಳೆದ. ಪ್ರೌಢ ಶಿಕ್ಷಣಕ್ಕೆ ಲೆಹ್ ಗೆ ಬಂದ. ಸೈನ್ಯದ ಚಟುವಟಿಕೆಗಳನ್ನು ಹತ್ತಿರದಿಂದ ನೋಡಿದ. ಸ್ವಾತಂತ್ರ್ಯದ ಹಿಂದುಹಿಂದೆಯೇ ಪಾಕಿಸ್ತಾನ ಆಕ್ರಮಣ ಮಾಡುವುದು ಖಾತ್ರಿಯಾದಾಗ ಭಾರತೀಯ ಸೇನೆ ಪೇಚಾಡಿಬಿಟ್ಟಿತು. ಲೆಹ್ ರಕ್ಷಣೆಗೆ ದೂರದ ಸೇನೆ ಬರುವುದರೊಳಗೆ ಪಾಕಿಸ್ತಾನ ಒಳನುಗ್ಗುವುದು ಖಂಡಿತವಾಗಿತ್ತು. ಪರಿಸ್ಥಿತಿ ಅರಿತ ಎಂಟನೇ ತರಗತಿಯ ೧೭ರ ತರುಣ ಚೆವಾಂಗ್ ರಿಂಚೆನ್ ತನ್ನ ಇಪ್ಪತ್ತೆಂಟು ಗೆಳೆಯರನ್ನು ಹುರಿದುಂಬಿಸಿ ಸೇನೆಯ ಹೊಸ್ತಿಲಲ್ಲಿ ನಿಂತ. ಲೆಹ್ ರಕ್ಷಣೆಗೆ ನಾವೇ ಸ್ವಯಂ ಸೇವಕರು ಎಂದ. ನಿಂತ ನೆಲೆಯಲ್ಲಿಯೇ ‘ನ್ಯಾಶನಲ್ ಗಾರ್ಡ್ಸ್’ ಪಡೆ ಸಿದ್ಧವಾಯ್ತು. ಮೂದಲಿಸಿದವರಿಗೆ ‘ನನ್ನ ಶಿಕ್ಷಣಕ್ಕಿಂತ ನನಗೆ ರಾಷ್ಟ್ರ ರಕ್ಷಣೆಯೇ ಮಹತ್ವದ್ದು’ ಎಂದು ಮಾರುತ್ತರಿಸಿದ. ಹತ್ತು ದಿನಗಳ (ಹೌದು. ಹತ್ತೇ ದಿನಗಳ) ತರಬೇತಿಯ ನಂತರ ಸುಬೇದಾರ್ ಭೀಮ್ ಚಂದ್ ರೊಡಗೂಡಿ ಖರ್ದುಂಗ್ಲಾ ಬಳಿಯ ನುಬ್ರಾ ಕಣಿವೆಗೆ ಹೊರಟ. ಚಾಂಗ್ಮಾಕ್ ಮತ್ತು ಶ್ಯೋಕ್ ನದಿಯ ಉತ್ತರ ದಡದ ರಕ್ಷಣೆ ಅವನ ಸುಪರ್ದಿಗೆ. ನದಿಯ ಆ ದಡದಲ್ಲಿದ್ದ ಪಾಕೀ ಸೈನಿಕರಿಗೆ ಭಾರತೀಯ ಸೈನಿಕರ್ಯಾರೂ ಸನಿಹದಲ್ಲಿಲ್ಲ ಎಂಬ ಮಾಹಿತಿ ಸಿಕ್ಕಿತ್ತು. ಹೀಗಾಗಿ ನಿರಾಳವಾಗಿಯೇ ಇದ್ದರು. ರಿಂಚೆಂಗ್ ಯೋಚಿಸಿದ. ಯೋಜನೆ ರೂಪಿಸಿದ. ಇರುವ ೨೮ರಲ್ಲಿ ಕೆಲವರು ನದಿ ದಾಟಿದರು. ಕೆಲವರು ಗುಡ್ಡ ದಾಟಿ ಬಂದು ಏಕಾಏಕಿ ದಾಳಿ ಮಾಡಿ ಪಾಕಿಸ್ತಾನದ ಸೈನಿಕರನ್ನು ನದಿಯ ಘಟ್ಟದಲ್ಲಿಯೇ ಸಮಾಧಿ ಮಾಡಿ ಮರಳಿ ಬಂದರು. ಪಾಕಿಸ್ತಾನದ ಗಿಲ್ಗಿಟ್ ಸ್ಕೌಟ್ ನ ಕಮಾಂಡರ್ ಕರ್ನಲ್ ಮೊಹಮ್ಮದ್ ಯೂಸುಫ್ ಅಬಾದಿ ‘ನಮ್ಮ ದಾಳಿಯನ್ನೆಲ್ಲ ಹಿಮ್ಮೆಟ್ಟಿಸುತ್ತಿದ್ದವನು ಚೆವಾಂಗ್ ರಿಂಚೆನ್ ಎಂಬ ೧೭ರ ತರುಣ ಎಂದು ಗುಪ್ತಚರ ವರದಿ ಬರುತ್ತಿತ್ತು. ಅವನೊಬ್ಬ ಇಲ್ಲದಿದ್ದರೆ ಲೆಹ್ ನಮ್ಮದೇ ಆಗಿಬಿಡುತ್ತಿತ್ತು’ ಎಂದು ತನ್ನ ಪುಸ್ತಕವೊಂದರಲ್ಲಿ ಗೋಳು ಕರಕೊಂಡಿದ್ದಾನೆ. ೨೦ ರೈಫಲ್ಲುಗಳು, ಪ್ರತಿ ರೈಫಲ್ಲಿಗೆ ಐವತ್ತು ಸುತ್ತಿನಷ್ಟು ಗುಂಡುಗಳು- ಇವಿಷ್ಟರೊಂದಿಗೆ ೨೩ ದಿನಗಳ ಕಾಲ ನುಬ್ರಾ ಕಣಿವೆ ಕಾಪಾಡಿಕೊಂಡ ಕೀರ್ತಿ ರಿಂಚಿಂಗ್ ನದು. ಅವನ ಹೋರಾಟದ ಖದರು ಅದೆಂಥದ್ದಿತ್ತೆಂದರೆ ಇಡಿಯ ಭಾರತ ಸೇನೆಯೇ ಕಣಿವೆಯಲ್ಲಿದೆಯೆಂದು ಪಾಕಿಸ್ತಾನಿಗಳು ಭಾವಿಸಿಬಿಟ್ಟಿದ್ದರು!
ಅಲ್ಲಿಂದ ರಿಂಚೆನ್ ಸ್ಕುರು ನದಿಯ ದಡಕ್ಕೆ ಬಂದು ಗೆಳೆಯರೊಂದಿಗೆ ಗಸ್ತು ತಿರುಗಿದ. ಅತ್ತ ಪಾಕಿಗಳು ಶ್ಯೋಕ್ ನದಿ ದಾಟುವ ತಯಾರಿ ಮಾಡಿಕೊಂಡರು. ಸುದ್ದಿ ತಿಳಿದ ರಿಂಚೆನ್ ಶ್ಯೋಕ್ ದಡಕ್ಕೆ ಧಾವಿಸಿ ಅರ್ಧ ದಾಟಿದ ಪಾಕ್ ಸೈನಿಕರ ಮೇಲೆ ಗೆರಿಲ್ಲಾ ದಾಳಿ ನಡೆಸಿದ. ೧೨ ಜನ ಬಲಿಯಾದರು, ಅಥವಾ ನೀರಿನಲ್ಲಿ ಕೊಚ್ಚಿ ಹೋದರು! ತಮಗೆ ಸಿಗುವ ಮಾಹಿತಿಗಳೇ ಸರಿ ಇಲ್ಲವೆಂದು ಗೊಣಗುತ್ತ ಪಾಕಿಗಳು ಆ ದಡವನ್ನೇ ಬಿಟ್ಟು ಹಿಂದೆ ಸರಿದರು.
ರಿಂಚೆನ್ ಸ್ಕುರುಗೆ ಬಂದ. ಮೊದಲು ಸೇತುವೆಯನ್ನು ಕೆಡವಿದ. ಹಳ್ಳಿಗಳಿಗೆ ಹೋಗಿ ಯುವಕರನ್ನು ಹುರಿದುಂಬಿಸಿ ತನ್ನ ನುಬ್ರಾ ಗಾರ್ಡ್ಸ್ ಬಳಗವನ್ನು ೩೦೦ಕ್ಕೇರಿಸಿಕೊಂಡ. ಪಾಕಿಗಳ ದಾಳಿಯನ್ನು ತಡೆದುದಷ್ಟೇ ಅಲ್ಲ, ಪ್ರತಿದಾಳಿಯನ್ನೂ ಮಾಡಿದ. ಅಷ್ಟರೊಳಗೆ ಭಾರತೀಯ ಸೇನೆಯ ತುಕಡಿಯೊಂದು ರಕ್ಷಣೆಗೆ ಬಂದು ನಿಂತಿತು. ರಿಂಚೆನ್ ತಾನು ಕಾಪಾಡಿಕೊಂಡ ಭೂಮಿಯನ್ನು ಸೇನೆಯ ಕೈಗಿಟ್ಟು ನಡೆದುಬಂದ. ಅವನು ಹಾಗೆ ಹೊರಟು ಬರಲೇಬೇಕಿತ್ತು. ಏಕೆಂದರೆ ಅವನು ರಾಷ್ಟ್ರರಕ್ಷಣೆಗೆ ಸ್ವಯಂಸೇವಕನಾಗಿದ್ದನೇ ಹೊರತು, ಅಧಿಕೃತ ಸೈನಿಕನಾಗಿರಲಿಲ್ಲವಲ್ಲ!
ಗುಡ್ಡಗಾಡಿನಲ್ಲಿ ರಿಂಚೆನ್ ನ ಪುಟ್ಟ ಸೈನ್ಯ ಹೊಡೆದಾಡುವಂತೆ, ಭಾರತೀಯ ಸೇನೆಗೂ ಸಾಧ್ಯವಾಗಲಿಲ್ಲ. ಕೆಲವೇ ದಿನಗಳಲ್ಲಿ ಪಾಕಿಸ್ತಾನ ಬೃಹತ್ ದಾಳಿ ಸಂಘಟಿಸಿ ಸ್ಕುರು ಭಾಗವನ್ನು ವಶಪಡಿಸಿಕೊಂಡಿತು. ನಮ್ಮ ಸೇನೆ ಅನಿವಾರ್ಯವಾಗಿ ಹಿಮ್ಮೆಟ್ಟಿತು. ರಿಂಚೆನ್ ಈಗ ಮತ್ತೆ ನೆನಪಾದ. ನಾಯ್ಕ್ ಸುಬೇದಾರ್ ಹುದ್ದೆ ನೀಡಿ ಅವನನ್ನು ಸೇನೆಗೆ ಸೇರಿಸಿಕೊಳ್ಳಲಾಯ್ತು. ಈ ದೇಶದ ಅತ್ಯಂತ ಕಿರಿಯ ಜೆ.ಸಿ (ಜ್ಯೂನಿಯರ್ ಕಮಿಶನ್ಡ್ ಆಫಿಸರ್) ಎಂಬ ಹೆಗ್ಗಳಿಕೆ ಅವನದಾಯ್ತು. ಮೊದಲ ಬಾರಿ ಸೈನ್ಯದ ಪೋಷಾಕು ಧರಿಸಿ ಪುಟ್ಟ ಮಗುವಿನಂತೆ ಕುಣಿದಾಡಿದ. ಸಮಯ ಬಹಳ ಇರಲಿಲ್ಲ. ಲಾಮಾ ಹೌಸ್ ವಶಪಡಿಸಿಕೊಳ್ಳುವಹೊಣೆಗಾರಿಕೆ ಬಿತ್ತು. ಆಯ್ದ ೫೦ ಮಿತ್ರರೊಂದಿಗೆ ಕಠಿಣ ಹಾದಿ ಕ್ರಮಿಸಿದ ರಿಂಚೆನ್ ದಾರಿಯುದ್ದಕ್ಕೂ ಪಾಕ್ ಸೈನಿಕರ ಶವ ಉರುಳಿಸುತ್ತಲೆ ಹೊರಟ. ಕೆಲವರಂತೂ ಬಟ್ಟೆ ಧರಿಸದೇ ಓಡಿಬಿಟ್ಟಿದ್ದರಂತೆ! ಸಾರ್ಜೆಂಟ್ ಮೇಜರ್ ಮೋಟಾ ಹಸನ್ ನನ್ನು ಕೈಕೈ ಮಿಲಾಯಿಸಿಯೇ ಕೊಂದು ಹಾಕಿದ ರಿಂಚೆನ್ ಒಂದು ಗುಂಡು ಉಳಿಯಿತೆಂದು ಸಂಭ್ರಮಿಸಿದ್ದ. ಅವನ ಸ್ವಯಂಚಾಲಿತ ಗನ್ನನ್ನು ನೆನಪಿಗೆಂದು ಹೊತ್ತು ತಂದು ಲೆಹ್ ನ ಹಾಲ್ ಆಫ್ ಫೇಮ್ ಗೆ ಕೊಡುಗೆ ನೀಡಿದ್ದ. ಲಾಮಾ ಹೌಸ್ ರಿಂಚೆನ್ ಪಾಲಾಗಿತ್ತು.
ಮುಂದೆ ೨೧ ಸಾವಿರ ಅಡಿ ಎತ್ತರದ ಗುಡ್ಡದ ಮೇಲೆ ಹೋರಾಟದ ಆದೇಶ ಬಂದಾಗ ತನ್ನ ತುಕಡಿಯೊಂದಿಗೆ ಹೊರಟ ರಿಂಚೆನ್ ೬ ದಿನಗಳ ಕಾದಾಟದ ನಂತರ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ. ತೇಬೆ ನದಿಯ ದಡದ ಪಾಕಿಸ್ತಾನ ಸೇನೆಯ ಮುಖ್ಯಾಲಯಕ್ಕೆ ಇವರು ಕಾಲಿಟ್ಟಾಗ ಅದು ಖಾಲಿಖಾಲಿಯಾಗಿತ್ತು. ಮರುದಿನ ಪಾಕಿಸ್ತಾನ ಸರ್ಕಾರ ‘ಶರಣಾಗಿದ್ದೇವೆ’ ಎಂದು ಗೋಗರೆಯಿತು. ಮೊದಲ ಮಹಾವೀರ ಚಕ್ರ ರಿಂಚೆನ್ ನ ಕೊರಳಿಗೆ ಬಿತ್ತು. ಮಹಾವೀರ ಚಕ್ರ ಪುರಸ್ಕೃತ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆ ಅವನದಾಯ್ತು.
ನುಬ್ರಾ ಕಣಿವೆಯ ಸೈನಿಕರನ್ನು ‘ನುನ್ನು’ ಅಂತಾನೇ ಕರೆಯೋದು. ಸೈನಿಕ ಪೋಷಾಕಿನ ಹೀರೋ ನುನ್ನು ಈಗ ಪಂಜಾಬಿಗೆ ವರ್ಗಗೊಂಡ. ಮಂಜಿನ ಬೆಟ್ಟದ ಮುದ್ದಿನ ಹುಡುಗನಿಗೆ ಬಿಸಿಯಾದ ಹವೆ ಒಗ್ಗಲಿಲ್ಲ. ಆತ ಕಾಡಿ ಬೇಡಿ ತನ್ನ ಬೆಟ್ಟಗಳ ಬುಡಕ್ಕೇ ಬಂದ. ಮತ್ತೆ ತರುಣರ ಸಂಘಟನೆ, ಸೇನೆಗೆ ಸೇರಲು ಪ್ರೇರಣೆ ನೀಡಲಾರಂಭಿಸಿದ. ಅವನ ಚಟುವಟಿಕೆ ತೀವ್ರಗೊಂಡಿತು. ರಿಂಚೆನ್ ಒಂಥರಾ ೧೮೫೭ರ ಸಂಗ್ರಾಮದ ತಾತ್ಯಾಟೋಪಿಯಿದ್ದಂತೆ. ಒಂದು ನಿಮಿಷ ಸುಮ್ಮನೆ ಕೂಡುವವನಲ್ಲ. ಯಾರದಾದರೂ ಮನೆ ಹೊಕ್ಕನೆಂದರೆ ಹೊರ ಬರುವ ವೇಳೆಗೆ ಅವರಿಗೆ ಆತ್ಮೀಯನಾಗಿಬಿಡುತ್ತಿದ್ದ. ಹತ್ತು ಜನ ತರುಣರೆದುರಿಗೆ ಇವನೊಮ್ಮೆ ‘ಕಿ ಕಿ ಸೋ ಸೋ ಲಾಗ್ಯಾಲೋ’ (ಭಗವಂತನಿಗೆ ಜಯವಾಗಲಿ) ಎಂದು ಘೋಷಣೆ ಕೊಟ್ಟರೆ ಸಾಕು, ಅವರಷ್ಟೂ ಜನ ಅವನ ಹಿಂದೆ ನಡೆದುಬರುತ್ತಿದ್ದರು. ಬಿಡುವಿನ ಸಮಯದಲ್ಲಿ ಹಿಮಾವೃತ ಬೆಟ್ಟಗಳನ್ನು ಗೆಳೆಯರೊಂದಿಗೆ ಏರಿ ಬೆಟ್ಟವನ್ನೇ ಮಟ್ಟ ಹಾಕಿದ ನಗೆ ಬೀರುತ್ತಿದ್ದ. ಅಷ್ಟರಲ್ಲಿಯೇ…
೧೯೬೧ ಬಂತು. ಚೀನಾ ಭಾರತದ ಮೇಲೆ ದಾಳಿ ಮಾಡುವ ಸುದ್ದಿಗಳು ದಟ್ಟವಾದವು. ನೆಹರೂ ಮಾಡಿದ ಮೂರ್ಖತನದಿಂದಾಗಿ ಚೀನಾ ಗಡಿಯಗುಂಟ ರಸ್ತೆ ಮಾಡಿತು. ನಮ್ಮದೇ ಗಡಿಯೊಳಕ್ಕೆ ನುಸುಳಿ ಭದ್ರ ಕೋಟೆ ಕಟ್ಟಲಾರಂಭಿಸಿತು. ಸುದ್ದಿಯ ಸತ್ಯಾಸತ್ಯತೆ ತಿಳಿಯುವ ಸಾಮರ್ಥ್ಯವೂ ನಮಗಿರಲಿಲ್ಲ. ರಿಂಚೆನ್ ಸಿದ್ಧನಾಗಿದ್ದ. ಕಾರಕೋರಮ್ ಪಾಸ್ ನ ದೌಲತ್ ಬೇಗಮ್ ಜಲ್ಡಿ (ಡಿಬಿಒ)ಯಲ್ಲಿ ಠಿಕಾಣಿ ಹೂಡಿ ಕಾಯುವ ಹೊಣೆ ಅವನ ಗೆಳೆಯರ ಹೆಗಲೇರಿತು. ಯಾತ್ರೆ ಸುಲಭವಾಗಿರಲಿಲ್ಲ. ೧೨೦ ಕಿ.ಮೀ.ನ ಕಠಿಣ ರಸ್ತೆ ಅದು. ಶ್ಯೋಕ್ ನದಿಯನ್ನು ದಾಟಿ ಮುರ್ಗೋ ತಲುಪಿಕೊಳ್ಳುವುದು ಒಂದು ಮಾರ್ಗವಾದರೆ, ೧೭,೫೦೦ ಅಡಿ ಎತ್ತರದ ಸಾಸೆರ್ ಪಾಸ್ ನಿಂದ ಮುರ್ಗೋ ತಲುಪುವುದು ಮತ್ತೊಂದು ರೀತಿ. ಛಳಿಗಾಲದಲ್ಲಿ ಶ್ಯೋಕ್ ಮಂಜಿನ ಗಡ್ಡೆಯಾಗಿಬಿಡುವುದರಿಂದ ಅದರ ಮೇಲೆ ನಡೆಯುವುದು ಭಯಾನಕವೇ ಆಗಿತ್ತು. ಎರಡನೇ ಹಾದಿಯನ್ನು ರಿಂಚೆನ್ ಆಯ್ದುಕೊಂಡ. ಮುರ್ಗೋವನ್ನು ನರಕದ ಹೆಬ್ಬಾಗಿಲು ಅಂತಾನೇ ಕರೀತಿದ್ರು. ಅಲ್ಲಿಗೆ ಹೋದವರು ಮರಳಿ ಬಂದುದು ಕಡಿಮೆ. ಆಮ್ಲಜನಕವೇ ಅಪರೂಪವಾಗಿರುವ ಪರ್ವತ ಪ್ರದೇಶದಲ್ಲಿ ಕಿಲೋಮೀಟರುಗಟ್ಟಲೆ ನಡೆಯುತ್ತ ರಿಂಚೆನ್ ಗೆಳೆಯರು ಸಾಸೆರ್ ಪಾಸ್ ಬುಡ ತಲುಪಿದರು. ಎರಡು ದಿನ ಅಲ್ಲಿಂದ ಕದಲಲೂ ಆಗಲಿಲ್ಲ. ಉಳಿದವರನ್ನು ಅಲ್ಲಿಯೇ ಬಿಟ್ಟು ಇಬ್ಬರೊಂದಿಗೆ ರಿಂಚೆನ್ ಪಕ್ಕದ ‘ವರ್ಜಿನ್ ಪೀಕ್’ ಹತ್ತಲಾರಂಭಿಸಿದ. ೨೦ ಸಾವಿರ ಅಡಿ ಎತ್ತರದ ಗುಡ್ಡವನ್ನು ಹತ್ತಿ ಬುದ್ಧನ ಧ್ವಜ ನೆಟ್ಟು ಸಂಭ್ರಮಿಸಿದ. ಆಗಲೇ ಅವನಿಗೆ ಭಾರೀ ವಾಹನಗಳ ಚಕ್ರದ ಗುರುತು ಕಂಡುಬಂದಿದ್ದು. ದೂರದಲ್ಲಿ ಚೀನಾದ ಸೈನಿಕರು ಕೋಟೆ ಕಟ್ಟುತ್ತಿದ್ದ ದೃಶ್ಯ ಕಣ್ಣಿಗೆ ಬಿತ್ತು. ಗಾಬರಿಗೊಂಡು ಮುಖ್ಯ ಕಛೇರಿಗೆ ಸುದ್ದಿ ಮುಟ್ಟಿಸಿದ.
‘ಚೀನಾ ಸೇನೆ ಗಡಿಯೊಳಕ್ಕೆ ನುಸುಳಿದೆ. ಕೋಟೆಯನ್ನೂ ಕಟ್ಟಿಕೊಳ್ಳುತ್ತಿದೆ’ ಸೇನೆಯ ಅಧಿಕಾರಿಗಳು ಪ್ರಧಾನಿ ನೆಹರೂಗೆ ಸುದ್ದಿ ಮುಟ್ಟಿಸಿದರು. ಎಂದಿನಂತೆ ನೆಹರೂ ನಂಬಲಿಲ್ಲ. ‘ನಮ್ಮದೇ ಸೈನಿಕರು ಬೇಕಿದ್ದರೆ ಸುಳ್ಳು ಹೇಳಿಯಾರು, ಚೀನಾ ಮೋಸ ಮಾಡಲಾರದು’ ಎಂಬುದು ಅವರ ನಂಬಿಕೆಯಾಗಿತ್ತು. ಕೊಟ್ಟ ಮಾತಿಗೆ ತಪ್ಪದಂತೆ ನಡಕೊಳ್ಳುವ, ಮತ್ತೊಬ್ಬರಿಗೆ ಆನಂದ ಕೊಟ್ಟು ಬದುಕುವ ಗುಣ ಕಮ್ಯುನಿಸ್ಟರಿಗೆ ಜೀವಮಾನದಲ್ಲಿ ಸಿದ್ಧಿಸಲಾರದೆಂಬ ಸತ್ಯ ನೆಹರೂಗೆ ಗೊತ್ತಾಗುವಲ್ಲಿ ಬಹಳ ತಡವಾಗಿತ್ತು. ಬಿಡಿ. ಸೈನ್ಯ ಒಂದೆರಡು ಗೂಢಚಾರ ವಿಮಾನಗಳನ್ನು ಬಿಟ್ಟು ಗಡಿಭಾಗದ ಚಟುವಟಿಕೆಗಳನ್ನು ಚಿತ್ರ ತೆಗೆದು ಸಾಬೀತುಪಡಿಸಿತು. ಆಗ ನೆಹರೂ ಇದ್ದಕ್ಕಿದ್ದಂತೆ ಯುದ್ಧಕ್ಕೆ ತಯಾರಿ ಎಂದುಬಿಟ್ಟರು. ರಿಂಚೆನ್ ನಂತಹ ಸಾವಿರಾರು ಸೈನಿಕರನ್ನು ಡ್ರ್ಯಾಗನ್ ಬಾಯಿಯೊಳಕ್ಕೆ ಬಿಟ್ಟರು.
ಲೇಖನದ ಮಿತಿ ಮುಗಿಯಿತು. ಆದರೆ ರಿಂಚೆನ್ ಕತೆ ಮುಗಿಯಲಿಲ್ಲ. ಆತ ಚೀನಾದೊಂದಿಗೆ ಕಾದಾಡಿ ಭಾರತದ ಗೌರವವುಳಿಸಿ ಬಂದ. ಸೇನಾ ಮೆಡಲ್ ನಿಂದ ಸನ್ಮಾನಿತನಾದ. ಮುಂದಿನ ಯುದ್ಧಕ್ಕೆ ಸಿದ್ಧನಾದ!

1 Response to ಗಡಿಪಡೆಯಲ್ಲಿ ಮಂಜಿನಬೆಟ್ಟದ ಮುದ್ದಿನ ಹುಡುಗ

  1. Laxminarayan

    Awesome article Chakrverty avare… ee lekhna vodidare badukiddaga namma deshakke enadru madalebeku ansutte. But maduva ase ide , adre adakke takkudada vedike sikta illa nange, please nang help madokagutta…? ni

Leave a Reply