ವಿಭಾಗಗಳು

ಸುದ್ದಿಪತ್ರ


 

ಜನಪ್ರಿಯತೆಯ ಮೊದಲ ರುಚಿ

ಸಚಿನ್ ಲೈಫ್ ಸ್ಕ್ಯಾನ್ ನ ಮೊದಲನೇ ಮತ್ತು ಎರಡನೇ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ….

 

ಸಚಿನ್ ಇಂದು ಈ ಮಟ್ಟಕ್ಕೆ ಬೆಳೆದಿದ್ದಾನೆಂದರೆ, ಅದು ಒಂದೆರಡು ದಿನಗಳ ಸಾಧನೆಯಲ್ಲ, ಪ್ರತಿಕ್ಷಣದ ಧ್ಯಾನದ ಫಲ. ಆತನ ಶ್ರದ್ಧೆ, ಏಕಾಗ್ರತೆ, ಪ್ರತಿಯೊಂದು ಹಂತದಲ್ಲಿಯೂ ಕಲಿಯುವ ಗುಣ ಇವೆಲ್ಲವೂ ನಿಜಕ್ಕೂ ಮಹತ್ವದ್ದು. ಎಲ್ಲಾ ಕ್ಷೇತ್ರಗಳಲ್ಲಿನ ಜನರು ತಿಳಿಯಲೇಬೇಕಾದಂಥದ್ದು.

ಹೈದರಾಬಾದಿನೊಂದಿಗೆ ರಣಜಿ ಪಂದ್ಯ ಆಡುತ್ತಿದ್ದಾಗ ಅರ್ಷದ್ ಅಯೂಬ್ ಚೆಂಡೆಸೆಯುತ್ತಿದ್ದರು. ಸಚಿನ್ ತನ್ನ ಎಂದಿನ ಮನಮೋಹಕ ಹೊಡೆತಗಳಿಂದ ಜನರ ಮನಸೂರೆಗೊಂಡಾಗಿತ್ತು. ವೆಂಕಟಪತಿ ರಾಜುವನ್ನು ಸಚಿನ್ ಸರಿಯಾಗಿ ಚಚ್ಚಿದ್ದ. ಅರ್ಶದ್ ಅಯೂಬ್ ಎಸೆದ ಫುಲ್‌ಟಾಸನ್ನು ಸಚಿನ್ ತೆಗೆದು ಬೀಸಿದ್ದ. ಕಣ್ಮುಚ್ಚಿ ತೆರೆಯುವುದರೊಳಗೆ ಚೆಂಡು ಬೌಂಡರಿ ಗೆರೆ ದಾಟಿತು. ಅಯೂಬ್ ಹುಡುಗನ ಅಸಹನೆ ಗುರುತಿಸಿ ಡೀಪ್ ಸ್ಕ್ವೇರ್ ಲೆಗ್‌ನಲ್ಲಿದ್ದ ಫೀಲ್ಡರನನ್ನು ಸ್ವಲ್ಪ ಮುಂದೆ ಕಳಿಸಿದ. ಈ ಬಾರಿ ಮತ್ತೊಂದು ಫುಲ್‌ಟಾಸ್! ಈ ಚೆಂಡು ಸ್ವಲ್ಪ ಎತ್ತರದಲ್ಲಿತ್ತು. ಹಳೆಯ ಹೊಡೆತಕ್ಕೆ ಸಿಕ್ಕ ಕರತಾಡನದಿಂದ ಉಬ್ಬಿಹೋಗಿದ್ದ ಸಚಿನ್ ತಡಮಾಡಲಿಲ್ಲ. ಚೆಂಡನ್ನು ಬೀಸಿಯೇಬೀಸಿದ. ಅದು ನೇರವಾಗಿ ಫೀಲ್ಡರನ ಕೈ ಸೇರಿತು.

ಸಚಿನ್ ನೆತ್ತಿಗೇರಿದ್ದ ಪಿತ್ಥ ಒಮ್ಮೆಗೇ ಇಳಿದುಹೋಯ್ತು. ತಲೆ ಬಿಸಿ ಮಾಡಿಕೊಂಡರೆ ಆಟ ಅದೆಷ್ಟು ಹಾಳಾಗಿಹೋಗುತ್ತದೆ ಎಂದು ಅರಿತ. ಅದೇ ಕೊನೆ. ಅಲ್ಲಿಂದಾಚೆಗೆ ‘ತೆಂಡ್ಲ್ಯಾ’   ತಪ್ಪು ಮಾಡಲಿಲ್ಲ. ಇಂದು ಸಿಕ್ಸರ್ ಹೊಡೆದಾಕ್ಷಣ ಔಟಾಗುವವರ ಸಾಲಿಗೆ ಸೇರಲಿಲ್ಲ. ಪ್ರತಿಯೊಂದು ಚೆಂಡಿಗೂ ಯೋಗ್ಯತಾನುಸಾರ ಗೌರವ ನೀಡುವುದು ರೂಢಿಸಿಕೊಂಡ. ಸಚಿನ್‌ನ ದೊಡ್ಡ ಗುಣವೇ ಅದು. ಆಟವಾಡುವಾಗ ಎಡವಿದ ಒಂದೊಂದು ಹೆಜ್ಜೆಯನ್ನೂ ನೆನಪಿನಲ್ಲಿಟ್ಟುಕೊಳ್ಳುವುದು, ಮುಂದೆಂದೂ ಹಾಗಾಗದಂತೆ ನೋಡಿಕೊಳ್ಳುವುದು.

ಒಮ್ಮೆ ಆಸ್ಟ್ರೇಲಿಯಾದೊಂದಿಗೆ ಆಟವಾಡುವಾಗಲೂ ಹಾಗೆಯೇ ಆಗಿತ್ತು. ಅವನು ಚೆನ್ನಾಗಿಯೇ ಆಡಿದ್ದ. ನೆರೆದಿದ್ದವರೆಲ್ಲ ಹೊಗಳಿದ್ದೇ ಹೊಗಳಿದ್ದು. ಆದರೆ ಅವತ್ತಿಡೀ ಸಚಿನ್ ಡ್ರೆಸಿಂಗ್ ರೂಮಿನಲ್ಲಿ ನಿದ್ದೆ ಮಾಡಿರಲಿಲ್ಲ. ರಾತ್ರಿಯಿಡೀ ಅಳುತ್ತ ಕುಳಿತಿದ್ದ. ತಾನು ಔಟಾದ ಚೆಂಡಿನ ಬಗ್ಗೆ ಚಿಂತಿಸುತ್ತ, ಅದೆಷ್ಟು ಕೆಟ್ಟ ಹೊಡೆತ ಹೊಡೆದೆ ಎಂದು ಮತ್ತೆ ಮತ್ತೆ ನೆನೆಸಿಕೊಳ್ಳುತ್ತಿದ್ದ… ಇನ್ನೆಂದೂ ಆತ ಬೇಜವಾಬ್ದಾರಿಯುತ ಹೊಡೆತ ಹೊಡೆಯಲೇಬಾರದೆಂದು ಮನಸಿಗೆ ಬುದ್ಧಿ ಹೇಳುತ್ತಿದ್ದ. ಯೆಸ್…. ದಟ್ ಇಸ್ ತೆಂಡೂಲ್ಕರ್…

~

ಆಟದಲ್ಲಿ ಯಶಸ್ಸು ಕಂಡಂತೆಲ್ಲ ಸಚಿನ್ ಭಾರತದ ಹಳ್ಳಿಹಳ್ಳಿಗಳಿಗೆ ತಲುಪಿದ. ಅಕ್ಷರಶಃ ಮನೆ ಮಾತಾದ. ಭಾರತಕ್ಕೆ ಆಗತಾನೇ ಕಾಲಿಟ್ಟಿದ್ದ ಖಾಸಗಿ ಚಾನೆಲ್‌ಗಳು ಸಚಿನ್ ಮನೆಯ ಮುಂದೆ ಸಾಲು ನಿಲ್ಲತೊಡಗಿದವು. ಜಹೀರಾತು ಕಂಪೆನಿಗಳು ಸಚಿನ್ ನ ಕಾಲ್‌ಶೀಟ್‌ಗೆ ಕಾಯುವಂತಾಯ್ತು. ಆಗಲೂ ಸಚಿನ್ ಎಳಸುಎಳಸೇ.

1990ರಲ್ಲಿ ಮುಂಬೈನ ಪ್ರಸಿದ್ಧ ಪತ್ರಿಕೆ MIDDAYಯ ಛಾಯಾಗ್ರಾಹಕಿಯೊಬ್ಬಳು ‘ಫೋಟೋ ಸೆಶನ್’ ಮಾಡುವುದಾಗಿ ಕರೆದೊಯ್ದಳು. ಆಗತಾನೇ ಗ್ಲಾಮರ್ ಜಗತ್ತಿಗೆ ಕಾಲಿರಿಸಿದ್ದ ಸಚಿನ್ ಹೆದರಿಕೆ- ನಾಚಿಕೆಗಳಿಂದ ನೀರಾಗಿಹೋಗಿದ್ದ. ಆದರೆ ಫೋಟೋಗ್ರಾಫರ್‌ಗೆ ತೊಂದರೆಯಾಗಬಾರದೆಂದು ಸಂಪೂರ್ಣವಾಗಿ ಸಹಕರಿಸುತ್ತಿದ್ದ. ಸವಿತಾ ಕಿರ್ಲೋಸ್ಕರ್ ಎಂಬ ಆ ಫೋಟೋಗ್ರಾಫರ್ ಮೊದಲ ಬಾರಿಗೆ ಕ್ಯಾಮೆರಾ ಹಿಡಿದಿದ್ದಳು. ಸಚಿನ್ ಗೆ ಕಿರಿಕಿರಿಯಾಗುವಷ್ಟು ಸೂಚನೆ ನೀಡುತ್ತಿದ್ದಳು. ಕೊನೆಗೆ ಹಾಕಿದ್ದ ಬಟ್ಟೆ ಬದಲಾಯಿಸಿ ಬೇರೆ ಬಟ್ಟೆ ಹಾಕಿಕೊಳ್ಳುವಂತೆ ಆದೇಶವನ್ನೂ ಕೊಟ್ಟಳು. ಇಷ್ಟಾದರೂ ಸಚಿನ್ ಗೆ ಬೇಸರವಾಗಲಿಲ್ಲ. ಹುಲ್ಲುಹಾಸಿನ ಮೇಲೆ ಫೋಟೋ ತೆಗೆಯುವುದು ನಿಶ್ಚಯವಾದಾಗ ‘ಮೇಡಂ, ಸಾಕ್ಸ್ ಹಾಕಬೇಕಾ?’ ಅಂತ ಅಮಾಯಕವಾಗಿ ಪ್ರಶ್ನಿಸಿದ್ದ!

~

ಆರೇ ತಿಂಗಳಲ್ಲಿ ಸಚಿನ್ ಬದಲಾಗಿಹೋದ. ಇಂಗ್ಲೆಂಡ್ ಪ್ರವಾಸದಿಂದ ಮರಳಿಬಂದವನಲ್ಲಿ ಆತ್ಮವಿಶ್ವಾಸ ತುಂಬಿತ್ತು. ಕೇಳಿದ ಪ್ರಶ್ನೆಗಳಿಗೆ ಚುರುಕಾಗಿ ಉತ್ತರಿಸುವ ಚಾಣಾಕ್ಷತೆ ಬಂದಿತ್ತು. ಈಗ ಜನ ಅವನನ್ನು ಗುರುತಿಸಲಾರಂಭಿಸಿದ್ದರು. ಅವನ ಆಟೋಗ್ರಾಫ್‌ಗಾಗಿ ಮುಗಿಬೀಳಲಾರಂಭಿಸಿದ್ದರು. ‘ಇವನು ಓದೋದೇ ಇಲ್ಲ’ ಅಂತ ಬೇಜಾರು ಮಾಡಿಕೊಳ್ತಿದ್ದ ಅಪ್ಪ, ಈಗ ಮಗನದೇ ಮಾರುತಿ ಕಾರಿನಲ್ಲಿ ಓಡಾಡತೊಡಗಿದ್ದರು. ಅದು ಸಚಿನ್ ನ ಚಿಕ್ಕಂದಿನ ಕನಸು. ಸ್ವಂತದ ಕಾರಿನಲ್ಲಿ ಅಪ್ಪ ಅಮ್ಮನ್ನ ಕೂರಿಸಿಕೊಂಡು ಓಡಾಡಬೇಕು ಅನ್ನೋದು. ಅವನ ಅದೃಷ್ಟ ನೋಡಿ. ಬೈಕು ಕಲಿತುಕೊಂಡು ಓಡಿಸುವ ಮೊದಲೇ ಕಾರು ಕೊಳ್ಳುವ ಪರಿಸ್ಥಿತಿ ಬಂತು. ಆತ ನೇರವಾಗಿ ಡ್ರೈವಿಂಗ್ ಕಲಿತದ್ದೇ ಕಾರಿನಲ್ಲಿ. ಇವತ್ತಿಗೂ ಅವನ ಬಳಿ ದ್ವಿಚಕ್ರ ವಾಹನ ಚಲಾವಣೆ ಲೈಸೆನ್ಸ್ ಇಲ್ಲ! ಅವನು ಓಡಿಸೋದು ನಾಲ್ಕು ಚಕ್ರದ ವಾಹನಗಳನ್ನು ಮಾತ್ರ. ಟಿವಿಎಸ್ ಕಂಪನಿಯವರು ಬೈಕಿನೊಂದಿಗೆ ಸಚಿನ್ ನಿಂತಿರುವ ಚಿತ್ರ ತೋರಿಸ್ತಾರೆಯೇ ಹೊರತು ಸವಾರಿ ಮಾಡೋದನ್ನಲ್ಲ, ಗಮನಿಸಿ.

ಹಾ! ಒಮ್ಮೆ ಹೀಗಾಗಿತ್ತು… ಸಚಿನ್ ತನ್ನ ಹೆಮ್ಮೆಯ ಕಾರಿನೊಂದಿಗೆ ಹೋಗುತ್ತಿರಬೇಕಾದರೆ ಅದೊಮ್ಮೆ ಮುಂಬೈನ ಇಂಡಿಯಾ ಗೇಟ್ ತಲುಪಿದ. ಪಾರ್ಕಿಂಗ್ ವಿಭಾಗ ಗಿಜಿಗುಡುತ್ತಿತ್ತು. ಕಾವಲಿನವ ಯಾರಿಗೂ ಗಾಡಿ ನಿಲ್ಲಿಸಲು ಬಿಡುತ್ತಿರಲಿಲ್ಲ. ಅದೆಲ್ಲಿಂದ ಆತ ಸಚಿನ್‌ನನ್ನು ನೋಡಿದನೋ, ಅಷ್ಟೂ ಜನರನ್ನು ಪಕ್ಕಕ್ಕೆ ಸರಿಸಿ ಜಾಗ ಮಾಡಿಕೊಟ್ಟ. ಜನಕ್ಕೆ ಅಚ್ಚರಿ. ಕಾರಿಂದ ಸಚಿನ್ ಇಳಿದುಬಂದಾಗ ಗಾಬರಿ. ಯಾರಿಗೂ ನಂಬಿಕೆಯೇ ಬರುತ್ತಿಲ್ಲ. ಒಮ್ಮೆಗೆ ಮುತ್ತಿಗೆ ಹಾಕಿ ಅವನ ಆಟೋಗ್ರಾಫ್ ಪಡೆದಮೇಲೆಯೇ ಸಂದಣಿ ಕರಗಿದ್ದ. ಆ ಹೊತ್ತಿಗೆ ಸಚಿನ್ ಸುಸ್ತಿನಲ್ಲೂ ನಗುತ್ತಿದ್ದ. ಪಕ್ಕದಲ್ಲೇ  ನಿಂತು ತಮ್ಮ ಮಗನನ್ನು ನೋಡುತ್ತಿದ್ದ ತಂದೆಯ ಕಣ್ಣಲ್ಲಿ ನಾಲ್ಕು ಹನಿ. ಆ ಖುಷಿಯ ಬಿಂದುಗಳು ಯಾರ ಗಮನಕ್ಕೂ ಬರಲಿಲ್ಲ.

Leave a Reply