ವಿಭಾಗಗಳು

ಸುದ್ದಿಪತ್ರ


 

ಜಾತಿಗೊಂದು ನೀತಿ…. ಹಿಂದುವಾಗಿರೋದೇ ತಪ್ಪಾ!?

೨೦೦೯ರ ಜುಲೈ ೧೯ಕ್ಕೆ ಎಲ್ಲ ಮಾಧ್ಯಮಗಳಿಗೂ ಜೈಲಿನಿಂದ ಬಂಧಿತ ಭಯೋತ್ಪಾದಕರ (!) ಪತ್ರವೊಂದು ಬಂತು. “ನನ್ನನ್ನು ಅತ್ಯಂತ ದಾರುಣವಾಗಿ ಹಿಂಸಿಸಲಾಗುತ್ತಿದೆ. ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಹೀಗೇ ಆದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ”. ಮಾಧ್ಯಮಗಳ ಪ್ರತಿಕ್ರಿಯೆ ನೀರಸವಾಗಿತ್ತು. ಆ ಪತ್ರದ ಮೇಲೆ ಗಂಭೀರ ಚರ್ಚೆಗಳು ನಡೆಯಲೇ ಇಲ್ಲ. ಹೀಗಾಗಿ ಜನರಿಗೂ ವಿಷಯ ಮುಟ್ಟಲಿಲ್ಲ. ಮಾರ್ಚ್ ೨೦೧೦ರ ವೇಳೆಗೆ ಸುದ್ದಿ ಹೊರಬಂತು. “ಒಂದು ವಾರ ಕಾಲ ಊಟ ನಿರಾಕರಿಸಿ ಅನಾರೋಗ್ಯಪೀಡಿತರಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಿ ಆತ್ಮಹತ್ಯೆಯ ಆರೋಪ ಹೊರಿಸಲಾಗಿದೆ’. ಆದರೆ ಈ ಸಂಗತಿಯೂ ಗುಲ್ಲಾಗಲಿಲ್ಲ. ಜುಲೈ ೨೦೧೦ಕ್ಕೆ ಅದೇ ವ್ಯಕ್ತಿ ಎದೆ ಕ್ಯಾನ್ಸರ್‌ನಿಂದ ಬಳಲುತ್ತಿರುವ ಕುರಿತು ಪತ್ರಿಕಾಗೋಷ್ಠಿ ನಡೆಸಲಾಯ್ತು. ಕ್ಯಾನ್ಸರ್ ಮೂರನೇ ಹಂತದಲ್ಲಿದೆ ಎಂಬ ವರದಿಯೂ ಯಾವುದೇ ಮಾನವ ಹಕ್ಕು ಹೋರಾಟಗಾರರ ಕಣ್ಣಲ್ಲಿ ನೀರು ತರಿಸಲಿಲ್ಲ. ಟೂಜಿ ಹಗರಣದ ಆರೋಪಿಗಳಿಗೆಲ್ಲ ಗೌರವದಿಂದ ಜಾಮೀನು ಕೊಟ್ಟು ಕಳುಹಿಸಿದ ನ್ಯಾಯಾಲಯವೂ ಈ ವ್ಯಕ್ತಿಯ ಮೇಲಿನ ಆರೋಪಗಳನ್ನು ಕಂಡು ಹೌಹಾರಿ ಮೂರು ತಿಂಗಳ ಹಿಂದೆ ಜಾಮೀನು ನಿರಾಕರಿಸಿಬಿಟ್ಟಿತು. ಮಾಧ್ಯಮಗಳು ಆಗಲೂ ಬೊಬ್ಬೆ ಹಾಕಲಿಲ್ಲ.
ಭಯೋತ್ಪಾದಕರ ಕುರಿತಂತೆ ಭಾರತ ಇಷ್ಟೊಂದು ಕಠೋರ ನಿಲುವು ತಳೆದಿದೆಯಲ್ಲ ಎಂದು ಖುಷಿ ಪಡಬೇಡಿ. ಇದು ಹಿಂದೂ ಭಯೋತ್ಪಾದನೆ ಎಂಬ ಹೆಸರಲ್ಲಿ ನಡೆಯುತ್ತಿರುವ ಅತ್ಯಾಚಾರ. ಮೇಲೆ ಹೇಳಿದ್ದೆಲ್ಲ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಬದುಕಿನ ಓರೆ ಕೋರೆಗಳು. ಮಾಲೆಗಾಂವ್ ಸ್ಫೋಟ ನಡೆದು ನಾಲ್ಕು ವರ್ಷಗಳು ಕಳೆದವು. ಸರಿಯಾದ ಸಾಕ್ಷಿ ದೊರಕದೆ ಬಂಧಿತ ಸಾಧ್ವಿಯ ಮೇಲೆ ಚಾರ್ಜ್‌ಶೀಟ್ ಹಾಕದೇ ಇಷ್ಟು ವರ್ಷಗಳ ಕಾಲ ಕೂಡಿಟ್ಟುಕೊಂಡಿರುವುದೇ ನ್ಯಾಯ ವ್ಯವಸ್ಥೆಗೆ ಒಂದು ಘೋರ ಅಪಮಾನ.
ಗುಜರಾತ್‌ನ ಮೊದಲ ಸುತ್ತಿನ ಚುನಾವಣೆಗಳು ಮುಗಿದಿವೆ. ಆದರೆ ಸೂರತ್‌ನಲ್ಲಿ ಕಳೆದ ಚುನಾವಣೆಯಲ್ಲಿ ಪ್ರಜ್ಞಾ ಸಿಂಗ್ ಮಡಿದ ಭಾಷಣವನ್ನು ಇಂದಿಗೂ ಜನ ಮರೆತಿಲ್ಲ. ಆಕೆ ಅಕ್ಷರಶಃ ಬೆಂಕಿಯ ಚೆಂಡು. ಆಕೆಯ ಪ್ರತಿ ಮಾತೂ ಕೋವಿಯಿಂದ ಹಾರಿದ ಗುಂಡು. ಆಕೆಯ ಭಾಷಣದಿಂದ ಅದೆಷ್ಟು ಮತಗಳು ಪರಿವರ್ತನೆಗೊಂಡವೋ ದೇವರೇ ಬಲ್ಲ. ಅದನ್ನು ಕಂಡ ಕಾಂಗ್ರೆಸ್ಸಂತೂ ಇಂತಹ ’ಯುವ ಹಿಂದೂವಾದಿಗಳನ್ನು ಮಟ್ಟಹಾಕಲೇಬೇಕು’ ಎಂದು ನಿರ್ಧಾರ ಮಾಡಿಬಿಟ್ಟಿತ್ತು.

prajnaಪ್ರಜ್ಞಾ ಬಾಲ್ಯದಿಂದಲೂ ಹಾಗೆಯೇ ಇದ್ದವಳು. ಮಾತಿಗೆ ಮಾತು; ಏಟಿಗೆ ಏಟು. ಊರಿನಲ್ಲಿ ಬೈಕ್ ಓಡಿಸುವ ಹೆಣ್ಣುಮಗಳೆಂದೇ ಖ್ಯಾತಳಾದವಳು. ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿ ಸಾಧನೆಯತ್ತ ಒಲವು ತೋರಿದವಳು. ಅತ್ಯಂತ ಪ್ರತಿಭಾವಂತೆ. ದೇಶದಲ್ಲಿ ನಡೆಯುವ ಭಯೋತ್ಪಾದನಾ ಕೃತ್ಯಗಳಿಗೆ ಸೂಕ್ತ ಉತ್ತರ ನೀಡಬೇಕೆಂಬ ಹವಣಿಕೆ ಅವಳಿಗೆ ಖಂಡಿತಾ ಇತ್ತು. ಪ್ರತಿಯೊಬ್ಬ ರಾಷ್ಟ್ರಭಕ್ತನಿಗೂ ಅದು ಸಹಜವೇ ಬಿಡಿ. ಅದು ಮತ ಪಂಥಗಳದ್ದಲ್ಲ, ರಾಷ್ಟ್ರದ ಪ್ರಶ್ನೆ! ಮಾಲೆಗಾಂವ್‌ನಲ್ಲಿ ೨೦೦೮ರಲ್ಲಿ ಮಸೀದಿಯ ಹೊರಗೆ ಬಾಂಬ್‌ಸ್ಫೋಟವಾದ ನಂತರ ಜಾಡು ಹಿಡಿದು ಹೊರಟ ಪೊಲೀಸರಿಗೆ ಮಸೀದಿಯ ಹೊರಗೆ ಪ್ರಜ್ಞಾಳ ಮೋಟಾರ್ ಬೈಕ್ ಸಿಕ್ಕಿತು. ಅದನ್ನು ಮುಂದಿಟ್ಟುಕೊಂಡು ಸಾಧ್ವಿಯ ಮನೆ ಬಾಗಿಲಿಗೆ ಭಯೋತ್ಪಾದನಾ ನಿಗ್ರಹ ದಳ ನಿಂತಿತು. ಸಾಕ್ಷಿ ಸಿಗಲಿಲ್ಲವೆಂಬ ಕಾರಣಕ್ಕೆ ಸುಮ್ಮನಾಯ್ತು. ಆಮೇಲೆ ಸ್ವಾಮಿ ಅಸೀಮಾನಂದರನ್ನು ಹಿಡಿದು, ಚಿತ್ರಹಿಂಸೆ ಕೊಟ್ಟು ತಪ್ಪೊಪ್ಪಿಗೆ ಬರೆಸಿಕೊಂಡಿತು. ಅದರಲ್ಲಿ ಸಾಧ್ವಿಯ ಹೆಸರೂ ಸೇರಿಕೊಂಡು ಆಕೆ ಹೊರಬರಲಾಗದಂತೆ ಕೂಡಿಹಾಕಿತು.
ಮಹಾರಾಷ್ಟ್ರ ಪೊಲೀಸ್ ಬಿಡಿ, ಅಲ್ಲಿನ ಸರ್ಕಾರವೂ ಕೂಡ ಸಾಧ್ವಿಯನ್ನು ಯಾವ ಕಾರಣಕ್ಕೂ ಬಿಡಲಾರೆವೆಂದು ರಚ್ಚೆ ಹಿಡಿಯಿತು. ಸರ್ಕಾರದ ದೃಷ್ಟಿಯಲ್ಲಿ ಆಕೆ ಮಾಡಿದ ತಪ್ಪು ಬಾಂಬ್ ಸಿಡಿಸಿದ್ದಾಗಿರಲಿಲ್ಲ, ಹಿಂದುವಾಗಿ ಹುಟ್ಟಿದ್ದೇ ಆಗಿತ್ತು. ಚಿದಂಬರಂ ತಮ್ಮ ಹೇಳಿಕೆಯೊಂದರಲ್ಲಿ ಭಯೋತ್ಪಾದನೆ ಇಸ್ಲಾಮ್‌ಗಷ್ಟೆ ಸೀಮಿತವಲ್ಲ, ಹಿಂದೂ ಭಯೋತ್ಪಾದನೆಯೂ ಇದೆ ಎಂದು ಹೇಳುವ ಮೂಲಕ ತಮ್ಮ ಮನಸಿನ ಮಾತುಗಳನ್ನು ಹೊರಹಾಕಿಬಿಟ್ಟರು. ನಮ್ಮ ಉತ್ತರಪ್ರದೇಶದ ತರುಣ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡ ಇಂಥದ್ದೇ ಚಿಂತನೆಯವರು. ಅವರಂತೂ ಭಯೋತ್ಪಾದಕರೆಂದು ಬಂಧಿತರಾಗಿ ಜೈಲಿನೊಳಗಿರುವವರನ್ನು ನಿರಪರಾಧಿಗಳು, ಮುಗ್ಧರು ಎಂದು ಕರೆದು ಸಾರಾಸಗಟು ಬಿಡಹೊರಟಿರಲಿಲ್ಲವೆ? ಅವರ ಜಾಗದಲ್ಲಿ ಹಿಂದೂಗಳಿದ್ದಿದ್ದರೆ ಇಂತಹುದೊಂದು ನಿರ್ಧಾರ ಕೈಗೊಳ್ಳುತ್ತಿದ್ದರೇನು?
ಪೊಲೀಸು – ಸರ್ಕಾರಗಳ ಕಥೆಯಂತೂ ಹೀಗಾಯ್ತು. ನಮ್ಮ ನ್ಯಾಯಾಂಗವೂ ಹೀಗೇಕಿದೆ? ಟು ಜಿ ಹಗರಣದಲ್ಲಿ ಭಾಗಿಯಾದವರಿಗೆ ಜಾಮೀನು ಕೊಡುವಾಗ ವಿಶೇಷ ಪೀಠದ ನ್ಯಾಯಾಧೀಶರು ’ಜಾಮೀನು ನಿರಾಕರಿಸುವುದೆಂದರೆ ಸಂವಿಧಾನದತ್ತ ವ್ಯಕ್ತಿ ಸ್ವಾತಂತ್ರ್ಯದ ಅಧಿಕಾರ ಕಸಿಯುವುದು ಎಂದರ್ಥ.’ ಎಂದಿದ್ದರು. ಅಷ್ಟೇ ಅಲ್ಲ, ’ಆರೋಪಿಯ ವಿರುದ್ಧ ಸಮುದಾಯದ ಆಕ್ರೋಶವಿದೆಯೆಂದ ಮಾತ್ರಕ್ಕೆ ಜಾಮೀನು ನಿರಾಕರಿಸುವುದು ಸರಿಯಲ್ಲ’ ಎಂದು ಸಮಜಾಯಿಷಿಯನ್ನೂ ನೀಡಿದ್ದರು. ಅಂದರೆ, ದೇಶದ ಕೋಟ್ಯಂತರ ಜನ ಭ್ರಷ್ಟಾಚಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೂ ಸರಿಯೆ, ಆರೋಪಿಗಳನ್ನು ಬಿಡಲೇಬೇಕು. ಅದೇ ವೇಳೆಗೆ ದೇಶದ ಲಕ್ಷಾಂತರ ಜನ ಸಾಧ್ವಿಯ ಬಗ್ಗೆ ಅನುಕಂಪ ತೋರಿದರೂ ಸರಿಯೆ, ಆಕೆಗೆ ಜಾಮೀನು ನೀಡಬಾರದು! ಇದೆಲ್ಲಿಯ ನ್ಯಾಯ!? ೨೦೦೬ರಲ್ಲಿ ಮಾಲೆಗಾಂವ್‌ನ ಮಸೀದಿಯ ಹೊರಗೆ ಬಾಂಬ್ ಸ್ಫೋಟಗೊಂಡು ೩೫ಕ್ಕೂ ಹೆಚ್ಚು ಜನ ಮೃತರಾಗಿದ್ದರು. ಈ ಕೃತ್ಯದಲ್ಲಿ ಪಾಲ್ಗೊಂಡ ಇಬ್ಬರು ಪಾಕಿಸ್ತಾನದ ನಾಗರಿಕರು, ಅವರಿಗೆ ಸಹಕಾರ ನೀಡಿದ ಸ್ಥಳೀಯ ಏಳೆಂಟು ಜನರು ಸಿಕ್ಕಿಬಿದ್ದರು. ಹಿಂದೂ-ಮುಸ್ಲಿಮರ ನಡುವೆ ಗಲಭೆಯೆಬ್ಬಿಸುವ ಪಾಕಿಸ್ತಾನದ ಹುನ್ನಾರದ ಮಹತ್ವದ ಭಾಗವಾಗಿತ್ತು ಆ ಸ್ಫೋಟ. ಈ ಘಟನೆಯಲ್ಲಿ ಸಿಕ್ಕಿಬಿದ್ದ ಏಳು ಜನರಿಗೆ ಮೊನ್ನೆ ೨೦೧೧ರಲ್ಲಿ ಜಾಮೀನು ನೀಡಿ ಸುಪ್ರೀಮ್ ಕೋರ್ಟ್ ಹೊರಕಳಿಸಿದೆ. ಸಾಕ್ಷ್ಯಾಧಾರ ಸಮರ್ಪಕವಾಗಿ ಸಿಗುತ್ತಿಲ್ಲವಾದ್ದರಿಂದ ಅವರನ್ನು ನಿರಪರಾಧಿಗಳೆಂದು ಕರೆಯುವ ಸಾಧ್ಯತೆಯೂ ನಿಚ್ಚಳವಾಗಿದೆ. ಆದರೆ ಸಾಧ್ವಿ ಪ್ರಜ್ಞಾ ಸಿಂಗ್‌ರನ್ನು ಮಾತ್ರ ಇನ್ನೂ ಜೈಲಿನೊಳಗೆ ಕೊಳೆಹಾಕಿದ್ದಾರೆ.
ಈ ಜೈಲುಗಳ ಸ್ಥಿತಿಯಾದರೂ ಎಂಥದ್ದೆಂದು ಊಹಿಸಿದ್ದೀರೇನು? ಆಕೆ ಬೆನ್ನುಮೂಳೆ ಸಮಸ್ಯೆಯಿಂದ ಬಳಲುತ್ತಿದ್ದಾಗ ಗೌರವಯುತವಾಗಿ ಆಂಬುಲೆನ್ಸ್‌ನಲ್ಲಿ ಒಯ್ಯುವುದಿರಲಿ, ಸರ್ಕಾರಿ ಜೀಪಿನಲ್ಲೇ ಕುಳ್ಳಿರಿಸಿಕೊಮಡು ಆಸ್ಪತ್ರೆಗೆ ಒಯ್ಯಲಾಗಿತ್ತು. ಗುಣವಾಗುವ ಮುನ್ನವೇ ಮರಳಿ ಒಯ್ದು ಚಿತ್ರಹಿಂಸೆ ನೀಡಲಾಗಿತ್ತು. ಅಜ್ಮಲ್ ಕಸಬ್‌ನನ್ನು ಅಳಿಯನಂತೆ ಗೌರವದಿಂದ ನೋಡಿಕೊಂಡ ದೇಶದ ಪೊಲೀಸರು ಸಾಧ್ವಿಗೇಕೆ ಹೀಗೆ ಮಾಡಿದರು? ಕಾಂಗ್ರೆಸ್ಸಿನ ಎಂಜಲು ಅಷ್ಟೊಂದು ರುಚಿಕರವೇ!?
ಮಾಧ್ಯಮಗಳೇಕೆ ಮೌನ ವಹಿಸಿವೆ? ಕೊಳವೆ ಬಾವಿಯಲ್ಲಿ ಹುಡುಗ ಕಾಲುಜಾರಿ ಬಿದ್ದರೆ ಇಪ್ಪತ್ತನಾಲ್ಕು ತಾಸು ಸುದ್ದಿ-ಚರ್ಚೆ ಮಾಡುವವರು ಸಾಧ್ವಿಯ ಬದುಕು ಮೂರಾಬಟ್ಟೆಯಾಗಿರುವುದರ ಬಗ್ಗೆ ನಾಲ್ಕು ವರ್ಷಗಳಿಂದ ಚಕಾರವೆತ್ತದೆ ಇರೋದು ಏಕೆ? ಮಾಧ್ಯಮಗಳಲ್ಲಿ, ಕೋರ್ಟುಗಳಲ್ಲಿ ಮಾನವ ಹಕ್ಕು ರಕ್ಷಣೆಯ ಹೋರಾಟದ ಮುಂಚೂಣಿಯಲ್ಲಿರುವ ತೀಸ್ತಾ ಸೆಟಲ್ವಾಡ್ ಮತ್ತವಳ ಗಂಡ ಜಾವೇದ್ ಆನಂದ್ ಈ ವಿಷಯದಲ್ಲಿ ಅಡಗಿ ಕುಳಿತಿದ್ದಾರೇಕೆ?
ಸತ್ಯ ಕಳೆದುಹೋಗೋದಿಲ್ಲ. ತೀಸ್ತಾ ಮತ್ತವಳ ಸಂಸ್ಥೆ ಸಿಟಿಜನ್ ಫಾರ್ ಜಸ್ಟಿಸ್ ಅಂಡ್ ಪೀಸ್ ಮತ್ತು ಸಬ್‌ರಂಗ್ ಟ್ರಸ್ಟ್‌ಗಳು ಬಯಲಿಗೆ ಬಂದು ನಿಂತಿವೆ. ಆಕೆಯ ಎರಡೂ ಸಂಸ್ಥೆಗಳಿಗೆ ಮೂರು ವರ್ಷಗಳಲ್ಲಿ ಇತರ ರಾಷ್ಟ್ರಗಳಿಂದ ಸುಮಾರು ಎರಡೂಮುಕ್ಕಾಲು ಕೋಟಿಯಷ್ಟು ಹಣ ಹರಿದುಬಂದಿದೆ. ಅಷ್ಟೇ ಅಲ್ಲ, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಶಾಂತಿಸ್ಥಾಪನೆಗೆ ಹೆಣಗಾಡಿದ್ದಾರೆಂಬ ಕಾರಣಕ್ಕಾಗಿ ಅಮೆರಿಕಾದ ಫೋರ್ಡ್ ಫೌಂಡೇಷನ್ ಹೆಚ್ಚೂಕಡಿಮೆ ಒಂದೂಕಾಲು ಕೋಟಿ ರುಪಾಯಿ ಬಹುಮಾನ ನೀಡಿದೆ. ನದರ್‌ಲೆಂಡಿನ ಹಿವೋಸ್ ಎಂಬ ಸಂಸ್ಥೆ ಭಾರೀ ಮೊತ್ತವನ್ನು ಈಕೆಯ ಸಂಸ್ಥೆಗಳಿಗೆ ವರ್ಗಾಯಿಸಿದೆ. ಅಮೆರಿಕಾದ ಇಯಾನ್ ಆಂಡರ್ಸನ್ ಎಂಬ ಸಂಗೀತ ಸಂಸ್ಥೆಯೊಂದು ಅನುಮಾನಾಸ್ಪದವಾಗಿ ಸಿಜೆಪಿಗೆ ಹಣ ಕಳಿಸಿದೆ. ಎಲ್ಲರ ಬೆನ್ನು ಬಿದ್ದಿರುವ ಕೇಜ್ರಿವಾಲರು ತೀಸ್ತಾಳ ಹಿಂದೆಯೂ ಬಿದ್ದಿದ್ದರೆ ಚೆನ್ನಾಗಿತ್ಥೇನೋ? ಪಾಪ, ’ಕಾಮ್ರೇಡ್’ಗಳು ಗುರ್ರೆಂದುಬಿಟ್ಟರೆ ಎಂಬ ಹೆದರಿಕೆ ಇರಬಹುದು.
ಅದಾಗಲೇ ಆಕೆಯ ವಿರುದ್ಧ ವಿದೇಶೀ ವಿನಿಮಯ ಕಾನೂನು ಉಲ್ಲಂಘನೆ ಪ್ರಕರಣವೂ ದಾಖಲಾಗಿದೆ. ಆಕೆಯೊಂದಿಗೆ ಕೆಲಸ ಮಾಡುತ್ತಿದ್ದ ರಯೀಸ್ ಖಾನ್ ಹೊರಹಾಕಿರುವ ಮಾಹಿತಿಗಳಂತೂ ಭಯಾನಕವಾಗಿವೆ. ನೊಂದಿರುವ ಮುಸಲ್ಮಾನರನ್ನು ತನ್ನ ಸಂಸ್ಥೆಯ ಬಳಿಯೇ ಕರೆತರಬೇಕು. ತನ್ನ ಸಂಸ್ಥೆಯ ಮೂಲಕವೇ ಅವರ ಪರವಾಗಿ ಹೋರಾಟ ನಡೆಯಬೇಕು ಎಂದು ಆಕೆ ಹಟ ಹಿಡಿಯುತ್ತಿದ್ದುದೂ ಹೊರಬಿದ್ದಿದೆ. ಹೆಚ್ಚು ಹೆಚ್ಚು ಮುಸಲ್ಮಾನರನ್ನು ನೋಂದಾಯಿಸಿಕೊಂಡರೆ ವಿದೇಶದಿಂದ ಹೆಚ್ಚು ಹೆಚ್ಚು ಹಣ ದೇಣಿಗೆ ರೂಪದಲ್ಲಿ ಹರಿದು ಬರುತ್ತದೆಯಲ್ಲ, ಅದಕ್ಕೆ!
ಇವರೆಲ್ಲರ ಹಣದಾಹಕ್ಕೆ ದೇಶ ಬಲಿಯಾಗುತ್ತಿದೆ. ೩೬ರ ಹರೆಯದ ಸಾಧ್ವಿಯಂತಹ ಅನೇಕರು ಭವಿಷ್ಯವನ್ನೆ ಮರೆತು ಕತ್ತಲಕೋಣೆಯಲ್ಲಿ ಕಾಲ ತಳ್ಳಬೇಕಾಗಿ ಬಂದಿದೆ. ಇಷ್ಟು ಮಾತ್ರ ಮುಸ್ಲಿಮ್ ಹುಡುಗಿಯೊಬ್ಬಳು ಸಿಕ್ಕಿಬಿದ್ದು, ಸೆರೆಯೊಳಗೆ ಅನಾರೋಗ್ಯದಿಂದ ನರಳುತ್ತಿದ್ದರೆ ಇಂಗ್ಲಿಶ್ ಮಾಧ್ಯಮಗಳು ಒಂದೇ ಕಣ್ಣಿನಲ್ಲಿ ಅತ್ತುಬಿಡುತ್ತಿದ್ದವು. ಕಣ್ಣೊರೆಸಲು ಎಲ್ಲ ಸೆಕ್ಯುಲರ್ ರಾಜಕಾರಣಿಗಳು ಧಾವಿಸಿ ಬರುತ್ತಿದ್ದರು.
ಸಾಧ್ವಿ ಪ್ರಜ್ಞಾರನ್ನು ನೆನೆದಾಗ ಕಿವುಚಿದಂತಾಗೋದು ಅದಕ್ಕೇ. ಜೈಲಿನಲ್ಲೂ ನಿತ್ಯ ಧ್ಯಾನ-ಸಾಧನೆಯಲ್ಲಿ ತೊಡಗಿರುವುದರಿಂದ ಈಗಲೂ ಕಳೆ ಮಾಸದೇ ಚೇತನಾಪೂರ್ಣರಾಗಿದ್ದಾರೆ. ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದಾಗಲೂ ಗುಟ್ಟು ಬಿಟ್ಟುಕೊಡದ ಧೀರೆ ಎಂಬ ಮಾತುಗಳು ಕೇಳಿಬಂದಿವೆ.
ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್‌ಗೆ ಬಿಡುಗಡೆಯಾಗಬೇಕಿತ್ತು. ಆಕೆಯ ಹೆಸರಲ್ಲಿ ದೇಶ ಒಂದಾಗಿ ಪ್ರತಿಭಟಿಸಬೇಕಿತ್ತು. ಮಾನವ ಹಕ್ಕುಗಳ ರಕ್ಷಣೆಗಾಗಿ ಬೀದಿಗಿಳಿಯಬೇಕಿತ್ತು. ಉಹುಂ.. ಯಾವುದೂ ಆಗಲಿಲ್ಲ.
ಮೊದಲ ಕೂದಲು ಬೆಳ್ಳಗಾದಾಗ ತಲೆ ಕೆಡಿಸಿಕೊಳ್ತೇವಂತೆ. ಇನ್ನೊಂದು ಬಿಳಿ ಕೂದಲು ಕಂಡಾಗ ಸ್ವಲ್ಪ ಮೆತ್ತಗಾಗ್ತೇವಂತೆ. ಆಮೇಲಾಮೇಲೆ ಹೊಂದಿಕೊಳ್ಳುತ್ತ ನಡೆಯುತ್ತೇವೆ. ಇದು ಸಹಜವೆಂಬ ಸ್ಥಿತಿಗೆ ಬಂದು ನಿಂತುಬಿಡುತ್ತೇವೆ. ಹಿಂದೂ ಸಮಾಜವೂ ಹಾಗೆಯೇ. ಆಕ್ರಮಣಗಳನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಹಂತಕ್ಕೆ ಬಂದುಬಿಟ್ಟಿದೆ. ಇದೊಂಥರಾ ದೌರ್ಬಲ್ಯವನ್ನೇ ಸಾಧನೆ ಎನ್ನುವ ಸತ್ವದ ಮುಖವಾಡದ ತಮಸ್ಸು. ಹಾಗಂತ ಹಿರಿಯೊಬ್ಬರು ಹೇಳಿದ್ದು ತಲೆ ಕೊರೆಯುತ್ತಿದೆ..

 

 

Leave a Reply