ವಿಭಾಗಗಳು

ಸುದ್ದಿಪತ್ರ


 

ತಬಸ್ಸುಮ್ ಮೊದಲು ಹೆಣ್ಣು, ಆಮೇಲೆ ಮುಸ್ಲಿಮ್…

ಈಗ ಸಜ್ಜನ ಮುಸಲ್ಮಾನರು ಜಾಗೃತಗೊಳ್ಳಬೇಕಿದೆ. ಬೀದಿಗೆ ಬರಬೇಕಿರೋದು ವಿಶ್ವರೂಪಮ್‌ನ ವಿಚಾರಕ್ಕೋ ದೂರದರ್ಶನದಲ್ಲಿ ಪ್ರಸಾರಗೊಂಡ ಹಂದಿಮಾಂಸದ ಅಡುಗೆಯ ವಿಚಾರಕ್ಕೋ ಅಲ್ಲ. ಹೊರಾಟ ನಡೀಬೇಕಿರೋದು ಇಂತಹ ವಿಚಾರಕ್ಕೆ.

ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಭಾರತ ಮತ್ತೆ ಸುದ್ದಿಯಾಗಿದೆ. ಖಂಡಿತವಾಗಿಯೂ ಒಳ್ಳೆಯ ವಿಚಾರಕ್ಕಾಗಿಯಲ್ಲ; ತೀರಾ ಕೆಟ್ಟ ವಿಚಾರಕ್ಕೆ. ಹದರಾಬಾದಿಗೆ ಆಫ್ರಿಕಾದ, ಈಜಿಪ್ಟಿನ ಮುಸ್ಲಿಮ್ ಪ್ರವಾಸಿಗರು ವಿಪರೀತ ಸಂಖ್ಯೆಯಲ್ಲಿ ಬರಲಾರಂಭಿಸಿದ್ದಾರೆ. ದೇಶ ಸುತ್ತಾಡುವ ನೆಪದಲ್ಲಿ ಬಂದು ಬಡ ಮುಸ್ಲಿಮ್ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ ಇದು ದೀರ್ಘಕಾಲದ ಗಟ್ಟಿ ಮದುವೆಯಲ್ಲ; ಒಂದು ತಿಂಗಳ ಅವಧಿಯ ಲೈಂಗಿಕ ತೆವಲು ತೀರಿಸುವ ಕಾಂಟ್ರಾಕ್ಟ್ ಮದುವೆ!

ಮೊನ್ನೆ ಹದಿನೇಳು ವರ್ಷದ ನೌಶಿನ್ ತಬಸ್ಸುಮ್ ಇಂತಹಾ ಒಂದು ಗ್ಯಾಂಗಿನಿಂದ ತಪ್ಪಿಸಿಕೊಂಡು ಬಂದು ಪೊಲೀಸರೆದುರು ಕುಂತಾಗಲೇ ಸುದ್ದಿ ಬಯಲಿಗೆ ಬಂದಿದ್ದು. ಸೂಡಾನಿನ ನಲವತ್ತೊಂದು ವರ್ಷದ ವ್ಯಾಪಾರಿ ಒಂದು ಲಕ್ಷ ರೂಪಾಯಿಗೆ ಆಕೆಯನ್ನು ಮದುವೆಯಾಗಿದ್ದಾನೆ. ಒಪ್ಪಂದವೇ ಹಾಗಿದೆ. ಮದುವೆಯ ದಿನವೇ ತಲಾಖ್ ಪತ್ರಕ್ಕೂ ಸಹಿ ಹಾಕಬೇಕು. ಒಂದು ತಿಂಗಳ ಕಾಲ ಆತನ ಹೆಂಡತಿಯಾಗಿ ಸಹಕರಿಸಬೇಕು. ತನ್ನೂರಿಗೆ ಮರಳುವ ಮುನ್ನ ಆತ ಮೂರು ಬಾರಿ ’ತಲಾಖ್’ ಎಂದು ಹಾಸಿಗೆಯಿಂದಲೇ ನೇರವಾಗಿ ಏರ್‌ಪೋರ್ಟಿಗೆ ದೌಡಾಯಿಸುತ್ತಾನೆ. ಈನ ಹುಡುಗಿ ಮತ್ತೊಬ್ಬನಿಗಾಗಿ ಅಣಿಯಾಗಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಬಸ್ಸುಮ್‌ನ ಕಥೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಗಾಬರಿ ಹುಟ್ಟಿಸುವಂತಹ ಸತ್ಯಗಳು ಕಂಡಿವೆ. ಹೈದರಾಬಾದ್‌ನಲ್ಲಿ ತಿಂಗಳಿಗೆ ಏನಿಲ್ಲವೆಂದರೂ ಕನಿಷ್ಠ ಇಂತಹ ಹದಿನೈದು ಮದುವೆಗಳು ನಡೆಯುತ್ತವಂತೆ. ಈ ಕುಟುಂಬಗಳು ಅತ್ಯಂತ ದಾರಿದ್ರ್ಯದಲ್ಲಿವೆ ಮತ್ತು ಇಲ್ಲಿನ ಹೆಣ್ಣುಮಕ್ಕಳು ಬಲು ಸುಂದರಿಯರೆಂಬ ಕಾರಣಕ್ಕೆ ಸಿರಿವಂತ ಮುಸಲ್ಮಾನರು ಇಲ್ಲಿಗೆ ಬರುತ್ತಾರಂತೆ. ಸೂಡಾನಿನಲ್ಲಿ ಒಂದು ಹುಡುಗಿಯೊಂದಿಗೆ ತಿಂಗಳು ಕಳಿಯುವುದಕ್ಕೆ ಇದಕ್ಕಿಂತಲೂ ಮೂರು ಪಟ್ಟು ಹೆಚ್ಚು ಹಣ ಬೇಕಂತೆ. ಅದಕ್ಕೇ, ಸುತ್ಥಾಟವೂ ಆಯಿತು, ಭೋಗವೂ ಆಯಿತು ಎಂದು ಇಲ್ಲಿಗೆ ಬರುತ್ತಾರಂತೆ. ಹೊರಬರುವ ಒಂದೊಂದು ಸತ್ಯವೂ ಮನುಕುಲದ ಅಂತರಂಗವನ್ನೆ ಕಲಕುವಂತಿದೆ. ಮತ್ತೊಂದು ಅಚ್ಚರಿಯ ಸಂಗತಿಯೇನು ಗೊತ್ತೆ? ಈ ಇಡೀ ಪ್ರಕರಣದ ಹಿಂದೆ ಮುಸಲ್ಮಾನರಿಗೆ ದಿಕ್ಕು ತೋರಬೇಕಾದ ಮುಲ್ಲಾಗಳೇ ನಿಂತಿರೋದು!ಇಸ್ಲಾಮ್‌ನಲ್ಲಿ ವೇಶ್ಯಾವಾಟಿಕೆ ನಿಷಿದ್ಧವಾಗಿದೆ. ಆದರೆ ಬಹುಪತ್ನಿತ್ವ ಅಲ್ಲವಲ್ಲ!ಇದನ್ನೇ ಮುಂದಿಟ್ಟುಕೊಂಡು ಈ ಮುಲ್ಲಾಗಳು ಒಂದು ತಿಂಗಳ ಮದುವೆ ಮಾಡಿಸಿ ’ಅಲ್ಲಾಹ್’ನಿಗೆ ಅಪಚಾರವೆಸಗಲಿಲ್ಲ, ಕುರಾನ್‌ನ ಮಾತುಗಳನ್ನು ಮೀರಲಿಲ್ಲ ಎಂದು ಸಮಜಾಯಿಷಿ ಕೊಡುತ್ತಿದ್ದಾರೆ. ಸಿಕ್ಕಿ ಬಿದ್ದ ಮುಲ್ಲಾಗಳು ಈ ದಿಕ್ಕಿನಲ್ಲಿ ವಾದ ಮಂಡಿಸಿರುವುದರಿಂದ ಎಲ್ಲರೂ ಹೌಹಾರಿ ಬಿಟ್ಟಿದ್ದಾರೆ. ಕಾನೂನಿನ ಪ್ರಕಾರ ಆ ಹುಡುಗಿ ಬಚಾವಾಗಲು ಒಂದೇ ಒಂದು ಮಾರ್ಗವೆಂದರೆ ಆಕೆಗೆ ವಯಸ್ಸಿನ್ನೂ ಹದಿನೇಳು ವರ್ಷ ಎನ್ನುವುದಷ್ಟೇ! ಆಕೆಯ ವಯಸ್ಸನ್ನು ತಿದ್ದಿ ಪ್ರಮಾಣ ಪತ್ರ ಪಡೆದಿರುವುದರಿಂದ ಅವರನ್ನು ಜೈಲಿಗೆ ತಳ್ಳಬಹುದು ಎನ್ನುವುದನ್ನು ಬಿಟ್ಟರೆ ಧರ್ಮದ ಆಧಾರದ ಮೇಲೆ ನೋಡಿದರೆ ತಬಸ್ಸುಮ್‌ನ ಕತೆ ಮುಗಿದಂತೆಯೇ.

ಮತಪಂಥಗಳ ಕಟ್ಟುಕಟ್ಟಳೆಗಳೊಳಗೆ ಅದೆಷ್ಟು ಹೆಣ್ಣುಮಕ್ಕಳು ನರಳಾಡಿಬಿಡುತ್ತಾರಲ್ಲ? ದೌರ್ಭಾಗ್ಯದ ಸಂಗತಿ ಎಂದರೆ ಮಹಿಳೆಯರ ಪರವಾಗಿ ಸದಾ ಕ್ರಿಯಾಶೀಲವಾಗಿರುವ ಯಾವ ದನಿಗಳೂ ಈಗ ಕೇಳಿ ಬರುವುದೇ ಇಲ್ಲ. ಮನು ಸ್ಮೃತಿಯನ್ನು ಆಧಾರವಾಗಿಟ್ಟುಕೊಂಡು ಈ ಮದುವೆ ನಡೆದಿದ್ದರೆ, ಈ ಹೊತ್ತಿಗೆ ಅದೆಷ್ಟು ಪುಸ್ತಕಗಳು ಸುಟ್ಟು ಬೂದಿಯಾಗಿರುತ್ತಿದ್ದವೋ! ಬೆಂಗಳುರಿನಲ್ಲಿ ಬಾಂಬ್ ಸ್ಫೋಟಗೊಂಡಾಗ ಬಿಜೆಪಿಗೆ ಇದರಿಂದ ಲಾಭವಾಗುತ್ತದೆ ಎಂದಿದ್ದ ಶಕೀಲ್ ಅಹ್ಮದ್‌ಗೂ ಹಿಂದೂ ಧರ್ಮದ ವಿರುದ್ಧ ಬೆಂಕಿ ಕಾರುವ ಈ ಮಹಿಳಾ ಹೋರಾಟಗಾರರಿಗೂ ಯಾವ ವ್ಯತ್ಯಾಸವೂ ಇಲ್ಲ. ಇಬ್ಬರದೂ ರಾಜಕೀಯವಷ್ಟೆ.

ಆದರೆ ವಾಸ್ತವವಾಗಿ ಈಗ ಸಜ್ಜನ ಮುಸಲ್ಮಾನರು ಜಾಗೃತಗೊಳ್ಳಬೇಕಿದೆ. ಬೀದಿಗೆ ಬರಬೇಕಿರೋದು ವಿಶ್ವರೂಪಮ್‌ನ ವಿಚಾರಕ್ಕೋ ದೂರದರ್ಶನದಲ್ಲಿ ಪ್ರಸಾರಗೊಂಡ ಹಂದಿಮಾಂಸದ ಅಡುಗೆಯ ವಿಚಾರಕ್ಕೋ ಅಲ್ಲ. ಹೊರಾಟ ನಡೀಬೇಕಿರೋದು ಇಂತಹ ವಿಚಾರಕ್ಕೆ. ಪುರದ ಹಿತ ಬಯಸಬೇಕಿದ್ದ ಪುರೋಹಿತರು ಇಂತಹ ದಬ್ಬಾಳಿಕೆ ಶುರುವಿಟ್ಟಾಗ ಹಿಂದೂ ಧರ್ಮ ಪ್ರತಿಭಟಿಸಿದೆ. ಬುದ್ಧನಿಂದ ಶುರುಮಾಡಿ ಅಂಬೇಡ್ಕರ್ ವರೆಗೆ ಇದೇ ಕಳಕಳಿ ಕಂಡಿದೆ. ಇದನ್ನು ಶುದ್ಧೀಕರಣ ಎಂದು ಕರೀತಾರೆ. ಕ್ಯಾಥೋಲಿಕ್ ಪುರೋಹಿತರೆದುರು ತೊಡೆ ತಟ್ಟಿ ನಿಂತಿದ್ದರಿಂದಲೇ ಪ್ರೊಟೆಸ್ಟೆಂಟರು ನಿರ್ಮಾಣಗೊಂಡಿದ್ದು. ಅಲ್ಲಿಯವರೆಗೆ ಕ್ರಿಶ್ಚಿಯನ್ ಮತದಲ್ಲಿ ದನಿಯೆತ್ತಲು ಅವಕಾಶವೇ ಇರಲಿಲ್ಲ. ಯಾವ ಪಂಥ ಶುದ್ಧಗೊಳ್ಳುವ ಪ್ರಕ್ರಿಯೆಯನ್ನು ವಿರೋಧಿಸ್ತದೆಯೋ ಸಹಜವಾಗಿಯೇ ಅದು ಕೊಳೆತು ನಾರುತ್ತದೆ, ಜನ ಒಳಗೊಳಗೆ ಕುದಿಯುತ್ತಾರೆ.

ಗದಗಿನಿಂದ ಮುಸಲ್ಮಾನ ವಿದ್ಯಾರ್ಥಿಯೊಬ್ಬ ಮೇಲ್ ಮಾಡಿ, ’ಕಾಲೇಜಿನಲ್ಲಿ ಎಲ್ಲರೂ ನನ್ನನ್ನು ದೇಶದ್ರೋಹಿಯಂತೆ ಕಾಣುತ್ತಾರೆ. ನನ್ನಲ್ಲೂ ದೇಶಭಕ್ತಿ ಇದೆ’ ಎಂದು ಅಲವತ್ತುಕೊಂಡಿದ್ದಾನೆ. ’ಮುಸಲ್ಮಾನರೆಲ್ಲರೂ ಭಯೋತ್ಪಾದಕರಲ್ಲ; ಸತ್ತವರನ್ನೆ ಸುಡದ ನಾವು ಜೀವಂತ ಇರುವವರನ್ನು ಅದು ಹೇಗೆ ಸುಟ್ಟೇವು?’ ಎಂಬ ಹೃದಯ ಕಲಕುವ ಪ್ರಶ್ನೆ ಕೇಳಿದ್ದಾನೆ. ಇಂಜಿನಿಯರಿಂಗ್ ಓದುತ್ತಿರುವ ಈ ವಿದ್ಯಾರ್ಥಿಯ ತುಮುಲ ಖಂಡಿತಾ ನನಗೆ ಅರ್ಥವಾಗುತ್ತೆ. ಸಮಾಜವನ್ನೂ ಆತ ಅರ್ಥೈಸಿಕೊಳ್ಳಬೇಕು. ಸಮಾಜವಾದರೂ ಅದೆಷ್ಟು ದಿನ ಒಬ್ಬನನ್ನು ನಂಬಲು ಸಾಧ್ಯ ಹೇಳಿ? ಪದೇಪದೇ ನಂಬಿಕೆಗೆ ಆಘಾತವಾಗುತ್ತಿದ್ದರೆ ಹಗ್ಗವೂ ಹವಿನಂತೆಯೇ ಕಂಡೀತು. ಇಡಿಯ ಜಗತ್ತು ಇದೇ ಸ್ಥಿತಿಯಲ್ಲಿದೆ. ಪ್ರತಿಯೊಂದು ರಾಷ್ಟ್ರವೂ ಮುಸಲ್ಮಾನರನ್ನು ತನಗೆ ಬೇಕಾದಂತೆ ಬಳಸಿಕೊಳ್ತಿದೆ. ಅಮೆರಿಕಾ ರಷ್ಯಾವನ್ನು ಮಟ್ಟಹಾಕಲು ಮುಸಲ್ಮಾನರ ಭಯೋತ್ಪಾದಕ ಭಾವನೆಗಳಿಗೆ ಇಂಬು ಕೊಟ್ಟಿತು. ಹೆಂಡ ಕುಡಿದು, ಚೇಳು ಕಡಿಸಿಕೊಂಡ ಮಂಗಗಳಂತಾಡಿದರು ಅಫ್ಘಾನಿಗಳು. ಆಮೇಲೆ ಅವರನ್ನು ಮಟ್ಟ ಹಾಕಲು ತಾನೇ ಸೇನೆಯೊಂದಿಗೆ ಬಂತು ಅಮೆರಿಕಾ. ಲಾಡೆನ್‌ಗೆ ಬಂದೂಕು ಕೊಟ್ಟಿದ್ದು ಅಮೆರಿಕಾ, ಅವನನ್ನು ಹುಚ್ಚು ನಾಯಿಯಂತೆ ಬಡಿದು ಕೊಂದಿದ್ದೂ ಅಮೆರಿಕಾವೇ. ಈಗ ಚೀನಾ ಹಾಗೆಯೇ ಮಾಡುತ್ತಿದೆ. ಪಾಕಿಸ್ತಾದ ಮುಸಲ್ಮಾನರಿಗೆ ಹಣ ಕೊಟ್ಟು ಭಾರತದ ವಿರುದ್ಧ ಛೂ ಬಿಡುತ್ತದೆ. ಆದರೆ ತನ್ನದೇ ದೇಶದಲ್ಲಿ ವಹಾಬಿ ಮುಸಲ್ಮಾನರನ್ನು ಹೊಸಕಿ ಹಾಕಿಬಿಟ್ಟಿದೆ. ಪ್ರತಿ ನಿತ್ಯ ಅಲ್ಲಿ ಅದೆಷ್ಟು ಮುಸಲ್ಮಾನರ ಮಾರಣ ಹೋಮವಗುತ್ತದೆ ಎಂಬುದಕ್ಕೆ ಅಲ್ಲಿ ಲೆಕ್ಕವೇ ಇಲ್ಲ. ಯಾರು ಮಿತ್ರರಂತೆ ಕಾಣುತ್ತಾರೋ ಅವರು ಮಿತ್ರರಲ್ಲ; ಶತ್ರುಗಳಂತೆ ಕಂಡವರು ನಿಜವಾದ ಶತ್ರುಗಳಲ್ಲ!

ಓಟಿಗಾಗಿ ಮುಸಲ್ಮಾನರನ್ನು ಗುಂಪು ಮಾಡುವ ರಾಜಕಾರಣಿಗಳು ಉದ್ಧಾರದ ಕಾರ್ಯ ಮಾಡುತ್ತಿದ್ದಾರೇನು? ಹಾಗೆ ನೋಡಿದರೆ ಮುಸ್ಲಿಮ್ ಸಮುದಾಯದ ಮೇಲೆ ದುರಭಿಪ್ರಾಯ ಮೂಡಲು ಕಾರಣವಾಗುತ್ತಿರುವುದೇ ಅವರು. ಈ ರಾಜಕಾರಣಿಗಳ ಬೆಂಬಲ ಪಡೆದ ಮುಸಲ್ಮಾನರು ರಸ್ತೆ ಬದಿಯ ಗೋರಿಯನ್ನೇನೋ ಉಳಿಸಿಕೊಂಡು ಬಿಡುತ್ತಾರೆ, ಆ ರಸ್ತೆ ಬದಿಯಲ್ಲಿ ಹಾದುಹೋಗುವ ಪ್ರತಿಯೊಬ್ಬನ ಕೆಂಗಣ್ಣಿಗೂ ಗುರಿಯಾಗುತ್ತಾರೆ, ಅಷ್ಟೆ. ಹೊರನೋಟಕ್ಕೆ ಗಲಾಟೆ ಮಾಡಲಿಲ್ಲವೆಂದರೆ ಸುಮ್ಮನಿದ್ದುಬಿಟ್ಟಿದ್ದಾರೆ ಎಂದರ್ಥವಲ್ಲ. ಒಳಗೊಳಗೆ ಕುದಿಯುತ್ತಿರುತ್ತಾರೆ. ಅದು ಶಾಲಾ ಕಾಲೇಜುಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ವ್ಯಕ್ತವಾಗುತ್ತಿರುತ್ತದೆ ಅಷ್ಟೇ.

ಮತಗಳು ಜೇನುಗೂಡಿನಂತೆ. ಅದರೊಳಗಿನ ಜೇನಿನ ಸಂಗ ಬಯಸಬೇಕೋ ಮಧುವನ್ನು ಹೀರಬೇಕೋ ಎಂದು ನಾವೇ ನಿರ್ಧರಿಸಬೇಕು. ಜಾಗತಿಕ ಮಟ್ಟದಲ್ಲಿ ಇಸ್ಲಾಮನ್ನು ಜೀವಸ್ನೇಹಿ ಮಾಡಬೇಕು. ಅದಕ್ಕೆ ಸಮರ್ಥ ನಾಯಕತ್ವ ಬೇಕು. ಹಿಂದೂವಿಗೆ ಇವತ್ತು ಜಾಗತಿಕ ಮನ್ನಣೆ ಇದೆ. ಯೋಗದ ಮೂಲಕ, ಆಯುರ್ವೇದದ ಮೂಲಕ ಜಗತ್ತನ್ನು ಆಳುವ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಇಸ್ಲಾಮಿನೊಂದಿಗೆ ಜಿಹಾದ್ ತಳಕು ಹಾಕಿಕೊಂಡಿದೆ. ಅರಬ್ ಮೂಲದ ಜನಂಗವೊಂದು ಜಗತ್ತನ್ನು ಆಳಲು ಅನುಕೂಲ ಮಾಡಿಕೊಡಲೆಂದು ಜಗತ್ತಿನ ಇತರೆಲ್ಲ ಮುಸಲ್ಮಾನರು ತಮ್ಮ ಜೀವ ಪಣಕ್ಕಿಡುತ್ತಿದ್ದಾರೆ. ಜಗತ್ತಿನ ಜನರ ನಿದ್ದೆ ಕೆಡಿಸುತ್ತಿದ್ದಾರೆ. ಆದರೆ ಆ ಅರಬ್ಬರಿಗಾದರೋ ಇತರ ಮುಸಲ್ಮಾನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಅವರು ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ಯಾವುದನ್ನು ಬೇಕಾದರೂ ತಿರುಚ ಬಲ್ಲರು. ಮೆಕ್ಕಾದ ಮಸೀದಿಯೊಂದನ್ನು ವಿಸ್ತಾರಗೊಳಿಸುವ ಹಿನ್ನೆಲೆಯಲ್ಲಿ ಹಳೆಯ ಕಟ್ಟಡದ ಭಾಗಗಳನ್ನು ಉರುಳಿಸಲು ಉದ್ಯುಕ್ತರಾದಾಗ ಉತ್ಪಾತವೇ ಆಗಿ ಹೋಗಿತ್ತು. ಪ್ರವಾದಿ ಮಹಮ್ಮದರು ಪವಿತ್ರೀಕರಿಸಿದ ಜಾಗಗಳನ್ನು ಮುಲಾಜಿಲ್ಲದೆ ಬೀಳಿಸಲಾಗಿತ್ತು. ಮಸೀದಿ ಪಕ್ಕದ ಸ್ಮಶಾನದಲ್ಲಿ ಜೇಸೀಬಿಗಳು ಉರುಳಾಡಿದ್ದವು, ಅಗೆದಾಡಿದ್ದವು. ಈ ಯಾವ ಗಲಾಟೆಗಳಿಗೂ ಸೌದಿಯ ದೊರೆಗಳು ಕ್ಯಾರೆ ಅನ್ನಲಿಲ್ಲ. ಬೆಳವಣಿಗೆಯ ಪ್ರಶ್ನೆಯ ಮುಂದೆ ಅವೆಲ್ಲವೂ ಅವರಿಗೆ ಗೌಣವಾಗಿ ಕಂಡಿತ್ತು. ಅವರ ಹೆಣ್ಣು ಮಕ್ಕಳು ಅಂದವಾಗಿ ಸಿಂಗಾರ ಮಾಡಿಕೊಂಡು ಮೈ ತೋರಿಸಿಕೊಂಡು ಓಡಾಡಬಹುದು, ಇತರ ರಾಷ್ಟ್ರದ ಹೆಣ್ಣು ಮಕ್ಕಳು ಮಾತ್ರ ಸಂಪ್ರದಾಯ ಬದ್ಧವಾಗಿ, ಕಟ್ಟುನಿಟ್ಟಾಗಿ ಬದುಕಬೇಕು. ಹಾಗೆಯೇ ಅವರ ಹೆಂಗೆಳಯರು ಮಾತ್ರ ಹೆಂಡತಿಯರಾಗಿರ ಬೇಕು, ಭಾರತದ ಹೆಣ್ಣು ಮಕ್ಕಳು ವೇಶ್ಯೆಯರಾಗಿ ಅವರಿಗೆ ಸಮರ್ಪಿತವಾಗಬೇಕು. ಇದು ಯಾವ ನ್ಯಾಯ?

ಮತ ಪಂಥಗಳೆಲ್ಲ ಆಮೇಲೆ. ಮೊದಲ ಆದ್ಯತೆ ಬದುಕಿಗೆ. ಓಡಿ ಬಂದು ಪೊಲೀಸರೆದುರು ತನ್ನ ಕಥೆ ಹೇಳಿಕೊಂಡ ತಬಸ್ಸುಮ್, ಮೊದಲು ಹೆಣ್ಣು ಮಗಳು, ಅನಂತರ ಮುಸ್ಲಿಮ್. ಜಗತ್ತು ವೇಗವಾಗಿ ಓಡುತ್ತಿದೆ. ಅದಕ್ಕೆ ತಕ್ಕಂತ ಬದುಕನ್ನು ರೂಪಿಸಿಕೊಳ್ಳಲು ಅವರಿಗೆಲ್ಲ ಅವಕಾಶ ನೀಡಲೇಬೇಕು. ಕಟ್ಟರ್ ಮುಸಲ್ಮಾನ್ ರಾಷ್ಟ್ರಗಳಲ್ಲಿ ಹೆಣ್ಣುಮಕ್ಕಳು ಇಂಗ್ಲಿಷ್ ಕಲಿಯುವುದಕ್ಕೆ ನಿಷೇಧವಿದೆ. ಹಾಡುವುದಕ್ಕೆ ನಿಷೇಧವಿದೆ. ಕಾಶ್ಮೀರದಲ್ಲಿಯೇ ಮತಾಂಧರು ಹೆಣ್ಣುಮಕ್ಕಳ ರಾಕ್ ಬ್ಯಾಂಡಿಗೆ ಬೆದರಿಕೆ ಒಡ್ಡಲಿಲ್ಲವೆ? ಸೈಕಲ್ ತುಳಿಯುತ್ತಾಳೆಂಬ ಕಾರಣಕ್ಕೆ ಹೆಣ್ಣು ಮಗುವೊಂದನ್ನು ಗುಂಡಿಟ್ಟು ಕೊಂದ ಉದಾಹರಣೆ ಭಾರತದಲ್ಲಿಯೇ ಇದೆ. ಅದಾಗಲೇ ಕರ್ನಾಟಕದ ಕರಾವಳಿಯಲ್ಲಿ ಮುಸ್ಲಿಮ್ ಹೆಣ್ಣುಮಕ್ಕಳು ಹುಡುಗರೊಂದಿಗೆ ಮಾತನಾಡಿದರೆ ಏಟು ಬೀಳುವ ವರದಿಗಳು ಕೇಳಿ ಬರುತ್ತಿವೆ. ತಾಲಿಬಾನೀಕರಣದಿಂದ ಯಾರಿಗೂ ನೆಮ್ಮದಿ ಇಲ್ಲ. ನೊಂದ ಹೆಣ್ಣು ಮಕ್ಕಳ ರಕ್ಷಣೆಗೆ ಧಾವಿಸೋಣ. ಇಲ್ಲಿ ಅತ್ಯಂತ ಕೊಳಕಾದ ’ಮತ ರಾಜಕಾರಣ’ ಮಾಡುವುದು ಬೇಡ. ಏನಂತೀರಿ? ರಾಜಕಾರಣ ಮಾಡುವುದು ಬೇಡ. ಏನಂತೀರಿ?

 

Leave a Reply