ವಿಭಾಗಗಳು

ಸುದ್ದಿಪತ್ರ


 

ತೊಗಲ ತೆವಲು ಎಲ್ಲಕ್ಕೂ ಮಿಗಿಲು. . .

‘ಒಬ್ಬನೇ ಮಗ ನೀನು. ರಸ್ತೆಯಲ್ಲಿ ಅಪಘಾತವಾಗಿ ಸತ್ತು ಹೋದರೆ?’ ಆಳೆತ್ತರ ಬೆಳೆದು ನಿಂತ ಮಗನಿಗೆ ಅಪ್ಪ ಹೇಳುತ್ತಿದ್ದ. ಮಗ ಕಕ್ಕಾಬಿಕ್ಕಿ. ‘ನಾನು ಗಾಡಿ ಓಡಿಸುವುದನ್ನೂ ಬಿಡಬೇಕೇ? ಮನೆಯಿಂದ ಹೊರಗೆ ಹೋಗಲೇಬಾರದೇ?’ ರಾತ್ರಿಯಿಡೀ ನಿದ್ದೆಯಿಲ್ಲದೇ ಹೊರಳಾಡಿದ ಹುಡುಗ. ಭಾರವಾದ ಮನಸ್ಸಿನಿಂದಲೇ ಮನೆಯಿಂದ ಆಚೆಬಂದ. ತನ್ನ ಕಾರು ಮುಟ್ಟುವ ಧೈರ್ಯವಾಗಲಿಲ್ಲ. ತಂದೆಯ ಕಾರು ಹತ್ತಿ ಡ್ರೈವರಿಗೆ ‘ನಡಿ’ ಎಂದ. ‘ಎಲ್ಲಿ, ಹೇಗೆ’ ಹೇಳುವುದನ್ನೇ ಮರೆತಿದ್ದ. ಲೊಕೇಶನ್ ಕೂಡ ಶೇರ್ ಮಾಡಿರಲಿಲ್ಲ. ಕಚೇರಿಗೇ ಇರಬೇಕೆಂದು ಡ್ರೈವರ್ ಒಂದೇ ವೇಗದಲ್ಲಿ ಗಾಡಿ ಓಡಿಸುತ್ತಿದ್ದ. ‘ಇಷ್ಟು ದಿನ ಇಲ್ಲದ ತನ್ನ ಜೀವದ ಕಾಳಜಿ ಅಪ್ಪನಿಗೆ ಬಂದಿತಾದರೂ ಏಕೆ?’ ತಲೆ ಕೊರೆಯುತ್ತಿತ್ತು. ‘ಒಬ್ಬನೇ ಮಗ ನೀನು’ ಅಪ್ಪ ಹೇಳಿದ ಮಾತು ಮತ್ತೆ ನೆನಪಾಯ್ತು. ಅಮ್ಮ ತೀರಿಕೊಂಡು ಹತ್ತಾರು ವರ್ಷಗಳಾದವು. ಅಪ್ಪನಿಗೆ ಬಯಕೆ ಹುಟ್ಟಿದೆಯಾ? ಮೈ ಝುಮ್ ಎಂದಿತು. ಡ್ರೈವರ್ನನ್ನು ಪುಸಲಾಯಿಸಿದ. ಅಪ್ಪನ ಕುರಿತಂತೆ ಮಾತಿಗೆಳೆದ. ಒಂದೊಂದೇ ಸತ್ಯ ಹೊರಬಂತು. ಲಿಫ್ಟ್ ಆಪರೇಟರ್ನ ಮಗಳು ತನ್ನ ತಂದೆಗೆ ಊಟ ಕೊಡಲು ಬಂದಿದ್ದಾಗ ಅಪ್ಪನ ಕಂಗಳಿಗೆ ಕಾಣಿಸಿಕೊಂಡಿದ್ದಳು. ಅವಳನ್ನು ಪಡೆದು ಮದುವೆಯಾಗುವ ತವಕ ಹೆಚ್ಚಿತ್ತು. ತನ್ನೆದುರು ಹೇಳುವ ಧೈರ್ಯ ಸಾಲದೇ ಹೀಗೆ ಬಳಸಿ ಆಡಿದ ಮಾತಿದು. ಹುಡುಗ ನಿರಾಳವಾದ.
ಲಿಫ್ಟ್ ಆಪರೇಟರ್ ಮನೆಗೆ ಧಾವಿಸಿದ. ಅವನ ಮಗಳ ಕೈ ತನ್ನ ತಂದೆಗಾಗಿ ಕೇಳಿದ. ಅವನದ್ದೋ ಒಂದೇ ಹಠ ‘ತನ್ನ ಮಗಳ ಮಕ್ಕಳೇ ನಿನ್ನಪ್ಪನ ಕಂಪೆನಿಯ ಮಾಲೀಕರಾಗಬೇಕು!’ ಈತನೋ ಒಂದು ಕ್ಷಣವೂ ಅಧೀರನಾಗಲಿಲ್ಲ. ತನ್ನ ಆಸ್ತಿ ಪತ್ರವನ್ನು ಆಕೆಯ ಹೆಸರಿಗೆ ಬರೆದುಕೊಟ್ಟ. ತಾನು ಮದುವೆಯಾಗಬಹುದಾದ ವಯಸ್ಸಿನವಳನ್ನು ‘ಅಮ್ಮ’ ಎನ್ನುತ್ತ ಅಪ್ಪನಿಗೆ ಮದುವೆ ಮಾಡಿಕೊಟ್ಟ. ತೊಗಲ ತೆವಲಿಗೆ ಬಲಿಬಿದ್ದು ತನ್ನ ಮಗನ ಭವಿಷ್ಯವನ್ನೇ ಅಂಧಕಾರಕ್ಕೆ ದೂಡಿಬಿಟ್ಟ ಅಪ್ಪ!!
ಹೊಸತೇನಲ್ಲ ಇದು! ಹಳೆಯ ಕತೆ. ಶಂತನು-ಭೀಷ್ಮರ ಕತೆ. ಸತ್ಯವತಿಯನ್ನು ಶಂತನು ವರಿಸಿದ ಕತೆ. ಒಮ್ಮೆ ಹಿಂದಿರುಗಿ ನೋಡಿ ಅಷ್ಟೇ!

Leave a Reply