ವಿಭಾಗಗಳು

ಸುದ್ದಿಪತ್ರ


 

ದೆಹಲಿಯ ಗದ್ದುಗೆಯಲುಗಿ ನೂರು ವರ್ಷ!

ಬಂಗಾಳ ವಿಭಜನೆ ಪ್ರಸ್ತಾಪ ಹಿಂಪಡೆದ ಹಾರ್ಡಿಂಜ್, ಅದನ್ನು ಸರಿದೂಗಿಸಲು ರಾಜಧಾನಿಯನ್ನು ಕಲ್ಕತ್ತೆಯಿಂದ ದೆಹಲಿಗೆ ವರ್ಗಾಯಿಸುವ ಯೋಜನೆ ರೂಪಿಸಿದ. ಮೊಘಲರ ಆಡಳಿತ ಕೇಂದ್ರವಾಗಿದ್ದ ದೆಹಲಿಗೆ ರಾಜಧಾನಿ ಪಟ್ಟ ದೊರೆತ ಸಂತೋಷ ಮುಸ್ಲಿಮರ ಪಾಲಿಗೆ, ಬಂಗಾಳ ವಿಭಜನೆ ತಪ್ಪಿದ ಸಂತೋಷ ಬಂಗಾಳಿಗಳಿಗೆ. ಆದರೆ ಬಂಗಾಳಿಗಳು ವಿಭಜನೆಯನ್ನು ಹಿಂದೆಗೆದುಕೊಂಡಿದ್ದಕ್ಕೆ ವಿಜಯೋತ್ಸವ ಆಚರಿಸುವಂತಿಲ್ಲ. ಏಕೆಂದರೆ ರಾಜಧಾನಿಯೆಂಬ ಪಟ್ಟ, ಆಡಳಿತದ ಅಧಿಕಾರಗಳು ಕಳೆದವಲ್ಲ! ಇದು, ಬ್ರಿಟಿಷರ ಒಡೆದಾಳುವ ರೀತಿಯದೊಂದು ತುಣುಕಷ್ಟೆ!

ಇದು ನಿಜಕ್ಕೂ ಕಾಕತಾಳೀಯವೇ. ಕಲ್ಕತ್ತದಿಂದ ದಿಲ್ಲಿಗೆ ರಾಜಧಾನಿಯನ್ನು ಬ್ರಿಟಿಷ್ ಸರ್ಕಾರ ವರ್ಗಾಯಿಸಿ ನೂರು ವರ್ಷಗಳಾದವು. ಹಾಗೆಯೇ ಈ ಸಂಭ್ರಮವನ್ನು ಆಚರಿಸಲು ಆನೆಯೇರಿ ಮೆರವಣಿಗೆ ಹೊರಟಿದ್ದ ಲಾರ್ಡ್ ಹಾರ್ಡಿಂಜ್ ಮೇಲೆ ಬಾಂಬೆಸೆದು ಕೂಡಾ ನೂರು ವರ್ಷ! ಅವತ್ತು ದಿಲ್ಲಿಯ ಗದ್ದುಗೆ ಅಲುಗಾಡಿತ್ತು. ಈಗ ಮತ್ತೆ ಅದೇ ಹೊತ್ತಿಗೆ ದಿಲ್ಲಿಯ ಗದ್ದುಗೆ ಅದರುತ್ತಿದೆ. ಅವತ್ತು ಆ ಭೂಕಂಪದ ನೇತೃತ್ವ ಕ್ರಾಂತಿಕಾರಿ ರಾಸ್‌ಬಿಹಾರಿ ಬಸುವಿನದ್ದಾದರೆ ಇಂದು ವಿಕಾಸಪುರುಷ ನರೇಂದ್ರ ಮೋದಿಯದ್ದು.

ಅದು ಪಕ್ಕಕ್ಕಿರಲಿ, ನೂರು ವರ್ಷಗಳ ಹಿಂದಿನ ರಾಷ್ಟ್ರದ ಸ್ಥಿತಿ ಗತಿಗಳತ್ತ ಒಮ್ಮೆ ಕಣ್ಣು ಹಾಯಿಸಿ. ೧೯೦೫ರಲ್ಲಿ ಹಿಂದೂ ಮುಸಲ್ಮಾನರನ್ನು ವಿಭಜಿಸಲೆಂದೇ ಬಂಗಾಳ ವಿಭಜನೆಗೆ ಕರ್ಜನ್ ಭಾಷ್ಯ ಬರೆದ. ಸುಪ್ತವಾಗಿದ್ದ ಬಂಗಾಳಿಗಳ ರಾಷ್ಟ್ರಪ್ರಜ್ಞೆ ಪ್ರಖರ ಅಗ್ನಿಯಾಗಿ ಉರಿಯಲು ಈ ವಿಭಜನೆ ಕಾರಣವಾಗಿಬಿಟ್ಟಿತು. ಥೇಟ್ ಇಂದಿನ ಕಾಂಗ್ರೆಸ್ಸು – ಸಮಾಜವಾದಿಯಾದಿ ಪಕ್ಷಗಳಂತೆ ಕರ್ಜನ್ ಮುಸಲ್ಮಾನರನ್ನು ಒಲಿಸಿಕೊಂಡು ವಿಭಜನೆ ಶಾಶ್ವತಗೊಳಿಸುವ ಹಂತದಲ್ಲಿದ್ದ. ಆದರೆ ಹಿಂದೂಗಳು ಜಾತಿ ಮತ ಪಂಥಗಳನ್ನು ಮರೆತು ಒಗ್ಗೂಡಿದರು. ಸ್ವದೇಶೀ ಆಂದೋಲನ ಶುರುವಾಯ್ತು. ಚಳವಳಿ ದೇಶಾದ್ಯಂತ ಹಬ್ಬಿತು. ನೋಡನೋಡುತ್ತಲೆ ಆಂಗ್ಲರ ವಸ್ತುಗಳು ಬಹಿಷ್ಕೃತಗೊಂಡವು. ದೇಶಭಕ್ತಿ ಜಾಗೃತವಾಯ್ತು. ಸಮಯಕ್ಕಾಗಿ ಕಾಯುತ್ತಿದ್ದ ಕೆಲವು ತರುಣರು ಕುದಿ ಹೃದಯದ ಗೆಳೆಯರೊಡಗೂಡಿ ಆಂಗ್ಲರ ವಿರುದ್ಧ ಕ್ರಾಂತಿಕಾರ್ಯಕ್ಕೆ ಕಹಳೆಯೂದಿಯೇಬಿಟ್ಟರು. ಆಂಗ್ಲರ ಪರಿಸ್ಥಿತಿ ಅಡಕತ್ತರಿಯಲ್ಲಿ. ಒಂದೆಡೆ ವ್ಯಾಪಾರ ಕುಸಿದು ಬ್ರಿಟನ್ನಿನಲ್ಲಿ ಹಾಹಾಕಾರ, ಮತ್ತೊಂದೆಡೆ ಗಲ್ಲಿಗಲ್ಲಿಗಳಲ್ಲಿ ದೇಶಭಕ್ತ ತರುಣರ ಮುಖಾಮುಖಿ. ಅನಿವಾರ್ಯವಾಗಿ ಕರ್ಜನ್ ದೇಶ ಬಿಟ್ಟು ಹೊರಡಬೇಕಾಯ್ತು. ಬಿಳಿಯರ ಗತ್ತು ನೋಡಿ. ಬೇಕಿದ್ದರೆ ಜಾಗ ಖಾಲಿ ಮಾಡಿ ಹೊರಡುತ್ತಾರೆ. ಆದರೆ ತೆಗೆದುಕೊಂಡ ನಿರ್ಣಯದಿಂದ ಮಾತ್ರ ಹಿಂದಡಿ ಇಡಲಾರರು. ಅವನ ಜಾಗಕ್ಕೆ ಬಂದ ಮಿಂಟೋ ಕೂಡ ಸಮಸ್ಯೆಗಳಲ್ಲಿ ತೊಳಲಾಡಿದನೇ ಹೊರತು ಭಾರತೀಯ ಪ್ರತಿರೋಧಕ್ಕೆ ಬಾಗಲಿಲ್ಲ.

200px-Charles_Hardingeಅಂಕಿಅಂಶದ ಪ್ರಕಾರ ೧೯೦೫ರ ನಂತರದ ಒಂದೂವರೆ ದಶಕದಲ್ಲಿ ಬಂಗಾಳದಲ್ಲಿಯೇ ಉನ್ನತ ಮಟ್ಟದ ಅಧಿಕಾರಿಗಳು, ಪೊಲೀಸರು, ವಕೀಲರೂ ಸೇರಿದಂತೆ ಅರವತ್ನಾಲ್ಕು ಮಂದಿಯನ್ನು ಕ್ರಾಂತಿಕಾರಿಗಳು ಸ್ಮಶಾನಕ್ಕೆ ಅಟ್ಟಿದರು. ಹುಡುಹುಡುಕಿ ಕೊಲ್ಲುವ ಯತ್ನಗಳಂತೂ ಅದೆಷ್ಟಾದವೋ? ಒಬ್ಬನೇ ವ್ಯಕ್ತಿಯನ್ನು ಕೊಲ್ಲುವ ಅನೇಕ ಪ್ರಯತ್ನಗಳೂ ಆದವು. ಈ ಅವಧಿಯಲ್ಲಿಯೇ ಸುಮಾರು ೧೧೨ ಡಕಾಯಿತಿಗಳು ನಡೆದು ಏಳು ಲಕ್ಷಕ್ಕೂ ಹೆಚ್ಚು ಹಣ ಕ್ರಾಂತಿಕಾರಿಗಳ ಕೈಸೇರಿತ್ತು. ಪೊಲೀಸರಿಗೆ ಸಹಜವಾಗಿ ನಿದ್ದೆ ಇರಲಿಲ್ಲ. ಬಿಳಿಯ ಅಧಿಕಾರಿಗಳಿಗೆ ಸಾವಿನ ಹೆದರಿಕೆಯಿಂದಲೇ ನಿದ್ದೆ ಹಾರಿತ್ತು.
ಸಾಕುಸಾಕಾಗಿಯೇ ಮಿಂಟೋ ದೇಶ ಬಿಟ್ಟ. ಆಗ ಬಂದವನು ಹಾರ್ಡಿಂಜ್. ಮರುವರ್ಷವೇ ಆತ ಇಂಗ್ಲೆಂಡಿನ ಚಕ್ರವರ್ತಿಗಳನ್ನು ಭಾರತಕ್ಕೆ ಕರೆತರುವ ಯೋಜನೆ ಹಾಕಿಕೊಂಡಿದ್ದ. ಐದನೇ ಜಾರ್ಜ್ ಪಟ್ಟಾಭಿಷೇಕಕ್ಕೆ ಬರಲಾಗದವರು ಭಾರತದಲ್ಲಿಯೇ ಅದರ ವೈಭವ ಕಾಣಲೆಂಬ ಹೆಬ್ಬಯಕೆ ಅವನದ್ದು.
ಯೋಜನೆ ಚೆನ್ನಾಗಿತ್ತು. ಹಾದಿ ಸುಗಮಗೊಳ್ಳಬೇಕಿತ್ತು ಅಷ್ಟೆ! ಬಂಗಾಳದಲ್ಲಿ ಅಶಾಂತಿ ತಾಂಡವವಾಡುತ್ತಿತ್ತು. ನೂರಾರು ಜನರ ಮೊಕದ್ದಮೆಗಳು ದಾಖಲಾಗದಂತೆ ನೋಡಿಕೊಳ್ಳಬೇಕಿತ್ತು. ಎಲ್ಲಕ್ಕೂ ಮಿಗಿಲಾಗಿ ಇರುವಷ್ಟು ದಿನ ನೆಮ್ಮದಿಯಾಗಿರಬೇಕೆಂದರೆ ಬಂಗಾಳ ವಿಭಜನೆಯನ್ನು ಹಿಂದೆಗೆದುಕೊಳ್ಳಲೇಬೇಕಿತ್ತು. ಹಾರ್ಡಿಂಜ್ ಪ್ರಸ್ತಾವನೆಯನ್ನು ಮುಂದಿಟ್ಟೊಡನೆ ಆಂಗ್ಲ ಅಧಿಕಾರಿಗಳು ಪ್ರತಿಭಟಿಸಿದರು. ಹಾರ್ಡಿಂಜ್ ಸುಮ್ಮನಾದ. ಬಂಗಾಳಿಗಳಿಂದ ಆಗುವ ಹಿನ್ನಡಿಗೆ ಸರಿದೂಗಿಸಬಲ್ಲ ಕೆಲಸವೊಂದನ್ನು ಮಾಡಬೇಕೆಂದು ನಿರ್ಣಯಿಸಿ ರಾಜಧಾನಿಯನ್ನು ಕಲ್ಕತ್ತೆಯಿಂದ ದೆಹಲಿಗೆ ವರ್ಗಾಯಿಸುವ ಯೋಜನೆ ರೂಪಿಸಿದ. ಮೊಘಲರ ಆಡಳಿತ ಕೇಂದ್ರವಾಗಿದ್ದ ದೆಹಲಿಗೆ ರಾಜಧಾನಿ ಪಟ್ಟ ದೊರೆತ ಸಂತೋಷ ಮುಸ್ಲಿಮರ ಪಾಲಿಗೆ, ಬಂಗಾಳ ವಿಭಜನೆ ತಪ್ಪಿದ ಸಂತೋಷ ಬಂಗಾಳಿಗಳಿಗೆ. ಆದರೆ ಬಂಗಾಳಿಗಳು ವಿಭಜನೆಯನ್ನು ಹಿಂದೆಗೆದುಕೊಂಡಿದ್ದಕ್ಕೆ ವಿಜಯೋತ್ಸವ ಆಚರಿಸುವಂತಿಲ್ಲ. ಏಕೆಂದರೆ ರಾಜಧಾನಿಯೆಂಬ ಪಟ್ಟ, ಆಡಳಿತದ ಅಧಿಕಾರಗಳು ಕಳೆದವಲ್ಲ!
ಚಕ್ರವರ್ತಿ ಪಂಚಮ ಜಾರ್ಜ್‌ನ ಆಗಮನದ ಸಿದ್ಧತೆ ಭರದಿಂದ ನಡೆಯಿತು. ದೇಶದ ರಾಜರುಗಳೆಲ್ಲ ಕಪ್ಪ ಒಪ್ಪಿಸಲು ಸನ್ನದ್ಧರಾಗಿ ನಿಂತಿದ್ದರು. ಆ ಮೂಲಕ ಎಲ್ಲರಿಗಿಂತಲೂ ಶ್ರೇಷ್ಠ ರಾಜ ನಮ್ಮವನು ಎಂದು ತೋರಿಸಬೇಕೆಂಬ ಛಲ ಹಾರ್ಡಿಂಜ್‌ನದ್ದು. ಅದೊಂದು ಅದ್ದೂರಿ ಸಮಾರಂಭ. ಇಡಿಯ ದೆಹಲಿ ವಧುವಿನಂತೆ ಸಿಂಗಾರಗೊಂಡಿತ್ತು. ಕಟ್ಟುನಿಟ್ಟು ರಕ್ಷಣಾ ವ್ಯವಸ್ಥೆ ಕೂಡ ಮಾಡಲಾಗಿತ್ತು. ಈ ವೇಳೆಯಲ್ಲಿಯೇ ಬಂಗಾಳದ ವಿಭಜನೆ ಹಿಂತೆಗೆದುಕೊಂಡ ಹಾಗೂ ರಾಜಧಾನಿಯನ್ನು ಕಲ್ಕತ್ತೆಯಿಂದ ದೆಹಲಿಗೆ ವರ್ಗಾಯಿಸಿದ ಘೋಷಣೆಯೂ ಹೊರಬಿತ್ತು. ಬ್ರಿಟನ್ನಿನ ಸಾರ್ವಭೌಮತೆಯನ್ನು ಹಾರ್ಡಿಂಜ್ ಚೆನ್ನಾಗಿಯೇ ಸಾಬೀತುಪಡಿಸಿದ.
ಇದು ದೇಶಭಕ್ತರನೇಕರ ಪಾಲಿಗೆ ನುಂಗಲಾರದ ತುತ್ತು. ಬಿಳಿಯ ಚಕ್ರವರ್ತಿಯೊಬ್ಬನೆದುರಿಗೆ ಭಾರತೀಯರು ಸ್ವಭಿಮಾನಶೂನ್ಯರಾಗಿ, ಹೇಡಿಗಳಂತೆ ಕುರ್ನೀಸಾತು ಮಾಡುವುದನ್ನು ನೋಡಿ ರಕ್ತ ಕೊತಕೊತನೆ ಕುದಿಯಿತು. ಅದಕ್ಕೆ ಕಾರಣನಾದ ಹಾರ್ಡಿಂಜ್ ವಿರುದ್ಧ ಸಹಜವಾಗಿಯೇ ಅವರ ಆಕ್ರೋಶ ತಿರುಗಿತು. ಅವರು ಸಮಯಕ್ಕಾಗಿ ಕಾಯುತ್ತಿದ್ದರಷ್ಟೆ. ಅತ್ತ ಚಕ್ರವರ್ತಿಯ ಕಾರ್ಯಕ್ರಮ ರಾಜಗಾಂಭೀರ್ಯದಿಂದ ಜರುಗಿ ಗಲಾಟೆಯ ಸುಳಿವೂ ಇಲ್ಲದೆ ಆತ ಮರಳಿ ಲಂಡನ್ನಿಗೆ ತಲುಪಿದ್ದು ಹಾರ್ಡಿಂಜ್‌ಗೆ ಕೋಡು ಮೂಡಿಸಿತ್ತು. ಭಾರತ ಶಾಂತವಾಗಿದೆ. ತನ್ನ ಕಾರ್ಯಶೈಲಿಗೆ ಹೆದರಿ ತಲೆಬಾಗಿದೆ ಎಂದು ಭ್ರಮಾಲೋಕದಲ್ಲಿ ತೇಲಾಡತೊಡಗಿದ.
ಈ ಹಿನ್ನೆಲೆಯಲ್ಲಿ ೧೯೧೨ರ ಡಿಸೆಂಬರ್ ೨೩ಕ್ಕೆ ವೈಭವದಿಂದ ದೆಹಲಿ ಪ್ರವೇಶಿಸುವ ನಿರ್ಧಾರ ಕೈಗೊಂಡ. ರೈಲು ನಿಲ್ದಾಣದಿಂದಲೇ ಆನೆಯ ಮೇಲೆ ಕುಳಿತು ಮೆರವಣಿಗೆ ಹೋಗಬೇಕು. ಜೊತೆಗೆ ಹೆಂಡತಿಯನ್ನೂ ಕೂರಿಸಿಕೊಳ್ಳಬೇಕು. ಏನೆಲ್ಲ ಕನಸು ಕಂಡ. ಯೋಜನೆ ಸಿದ್ಧವಾಯ್ತು. ದೆಹಲಿ ಮತ್ತೆ ಸನ್ನದ್ಧವಾಯ್ತು.
ಆಗ ಕಾಣಿಸಿಕೊಂಡಿದ್ದ ರಾಸ್‌ಬಿಹಾರಿ ಬಸು. ಇವರು ಬಂಗಾಳದ ಕ್ರಾಂತಿಕಾರಿ. ವೈದ್ಯರಾಗಿದ್ದ ಬಸು, ಕ್ರಾಂತಿ ಚಟುವಟಿಕೆಗಳಲ್ಲಿ ತೀವ್ರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದವರು. ಹಾರ್ಡಿಂಜ್‌ನ ಪುರ ಪ್ರವೇಶದ ಸುದ್ದಿ ಕಿವಿಗೆ ಬೀಳುತ್ತಲೆ ಚುರುಕಾದ ಕ್ರಾಂತಿಕಾರಿ ಗೆಳೆಯರು ರಾಸ್‌ಬಿಹರಿ ಬಸುವಿನೆದುರು ನಿಂತರು. ಅವರದ್ದು ಎರಡೇ ನಿಬಂಧನೆ. ಮೊದಲನೆಯದು, ಸಮರ್ಥ ತರುಣನೊಬ್ಬ ಬೇಕು. ಎರಡನೆಯದು, ಶಕ್ತಿಶಾಲಿ ಬಾಂಬ್ ಒದಗಿಸಿಕೊಳ್ಳಬೇಕು! ಬಸಂತ ಬಿಸ್ವಾಸ್ ಎಂಬ ೧೬ರ ತರುಣ ಸಿದ್ಧನಾದ. ಹುಡುಗಿಯಂತೆ ಬಟ್ಟೆ ಧರಿಸಿದರೆ ಸುಂದರಿಯಂತೆ ತೋರುವಷ್ಟು ಚೆಂದವಾಗಿದ್ದ. ಆತ ಗಂಡುಗಲಿಯಂತೆ ಮುಂದೆ ಬಂದ. ದೀಪಾವಳಿ ಅವಧಿಯಲ್ಲಿ ಬಾಂಬ್ ತಯರಿಸಿ, ಪಟಾಕಿಗಳ ಸದ್ದಿನೊಡನೆ ಪರೀಕ್ಷಾರ್ಥ ಉಡಾವಣೆಗಳೂ ನಡೆದವು. ಇನ್ನು, ಬಾಂಬ್ ಎಸೆಯುವ ಯತ್ನ ಸಾಗಬೇಕಲ್ಲ? ಕಬ್ಬಿಣದ ಡಬ್ಬಿಯೊಳಕ್ಕೆ ಜಲ್ಲಿ ಕಲ್ಲು ತುಂಬಿ ಬಾಂಬಿನಷ್ಟೆ ಭಾರವಾಗಿಸಿಕೊಂಡು ಬೀಸಿ ಒಗೆಯುವ ಅಭ್ಯಾಸ ಶುರುವಾಯ್ತು. ಬಿಸ್ವಾಸ್ ಪ್ರತಿನಿತ್ಯ ಇದರಲ್ಲಿ ತೊಡಗಿಕೊಂಡ.
ಖಸೆಂಬರ್ ೨೩ ಬಂದೇಬಿಟ್ಟಿತು. ಬಸಂತ್ ಹುಡುಗಿಯ ವೇಷ ಧರಿಸಿ ಚಾಂದ್‌ನಿ ಚೌಕ್‌ದ ಗಡಿಯಾರ ಕಂಬದ ಬಳಿ ಹೆಂಗಸರ ಮಧ್ಯೆ ನಿಂತ. ಹತ್ತಿರದಲ್ಲಿ ರಾಸ್‌ಬಿಹಾರಿ ಬಸು. ಆಚೆ ಪರುಷರ ಮಧ್ಯೆ ಅವಧ್ ಬಿಹಾರಿ. ಅವನ ಬ್ಯಾಗಿನಲ್ಲೂ ಒಂದು ಬಾಂಬು. ಒಬ್ಬರು ಗುರಿ ತಪ್ಪಿದರೆ ಮತ್ತೊಬ್ಬರು ಅ ಕೆಲಸ ಸಾಧಿಸಬೇಕು. ಖಾಲಿ ಕೈಲಿ ಮರಳುವ ಪ್ರಶ್ನೆಯೇ ಇಲ್ಲ!

ರಾಸ್ ಬಿಹಾರಿ ಬಸು

ರಾಸ್ ಬಿಹಾರಿ ಬಸು

ಬಂದೋಬಸ್ತು ಬಿಗಿಯಾಗಿತ್ತು. ರಯಲು ನಿಲ್ದಾಣದಿಂದ ಆನೆಯೇರಿ ಹಾರ್ಡಿಂಜ್ ಮೆರವಣಿಗೆ ಹೊರಟ. ಅದನ್ನು ಕಂಡು ಅವಧ್‌ಬಿಹಾರಿ ಮತ್ತು ಬಸಂತ್ ಗಾಬರಿಯಾಗಿ ರಾಸ್‌ಬಿಹಾರಿಯತ್ತ ನೋಡಿದರು. ಗುರಿಯೆಡೆಗೆ ಬಾಂಬ್ ಎಸೆಯುವುದನ್ನು ಅವರು ಕಲಿತಿದ್ದರು ನಿಜ, ಆದರೆ ಆನೆ ಮೇಲೆ ಕುಳಿತಾಗ, ಆ ಎತ್ತರಕ್ಕೆ ಎಸೆಯುವುದನ್ನಲ್ಲ.. ಅವರಿಗೆ ಅಂತಹದೊಂದು ಕಲ್ಪನೆಯೂ ಇರಲಿಲ್ಲ. ಆನೆ ಮುಂದಡಿಯಿಡುತ್ತಲೇ ಇತ್ತು. ಈ ಮೂವರಿಗೆ ಚಡಪಡಿಕೆ.. ಅಷ್ಟು ಹೊತ್ತಿಗೆ ಎಲ್ಲಿಂದಲೋ ಒಂದು ಬಾಂಬ್ ಬೀಸಿ ಬಂತು. ಹಾರ್ಡಿಂಜನಿಗೆ ತಗುಲಿತು. ಆತ ಮೈತುಂಬ ಗಾಯ ಹೊತ್ತು ಧರೆಗುರುಳಿದ. ರಕ್ತ ನದಿಯಂತೆ ಹರಿಯಿತು. ಆತ ಪ್ರಜ್ಞಾಶೂನ್ಯನಾದ. ಅವನೆದುರು ಕುಳಿತಿದ್ದ ಸೇವಕ ಹತನಾದ. ಹಾರ್ಡಿಂಜನ ಕಿವಿ ತಮ್ಮಟೆ ಹರಿದುಹೋಯ್ತು. ಆದರೇನು? ಚಿಕಿತ್ಸೆಯ ನಂತರ ಹಾರ್ಡಿಂಜ್ ಬದುಕಿಬಿಟ್ಟ.
ಅಚ್ಚರಿಯೆಂದರೆ, ಆ ಬಾಂಬ್ ಎಸೆದದ್ದು ಯಾರೆಂಬ ಪ್ರಶ್ನೆ ನಿಗೂಢವಾಗೇ ಉಳಿದಿದ್ದು. ಅವಧ್‌ಬಿಹಾರಿ ಇರಬಹುದು ಎನ್ನುವುದೊಂದು ಊಹೆಯಷ್ಟೆ. ಬಹುಶಃ ಹಾರ್ಡಿಂಜನ ಹತ್ಯೆಗೆ ಮತ್ತೂ ಒಂದು ಕ್ರಂತಿಕಾರಿ ಸಂಘಟನೆ ಯೋಜನೆ ರೂಪಿಸಿತ್ತೇನೋ. ಬಸಂತ್ ಬಿಸ್ವಾಸ್ ಅಲ್ಲಿಯೇ ಇದ್ದ ಸ್ನಾನದ ಕೋಣೆಯೊಂದಕ್ಕೆ ನುಗ್ಗಿದ. ಹೊರಬರುವಾದ ಹೆಣ್ಣುಡುಗೆಗಳನ್ನೆಲ್ಲ ಕಳಚಿ ಹುಡುಗನಾಗಿದ್ದ. ಯಾರಿಗೂ ಅನುಮಾನ ಸುಳಿಯಲಿಲ್ಲ.
ಈ ಸುದ್ದಿ ಇಡಿಯ ದೇಶ ವ್ಯಾಪಿಸಿ ಕಾಳ್ಗಿಚ್ಚಿನಂತಾಯ್ತು. ವೈಸ್‌ರಾಯ್‌ನ ಹತ್ಯೆ ಮಾಡಲು ಸಾಧ್ಯವಾಗಲಿಲ್ಲವಾದರೂ ಇಂತಹದೊಂದು ಭಯಾನಕ ಪ್ರಯತ್ನ ಮಾಡಿದರಲ್ಲ ಕ್ರಾಂತಿಕಾರಿಗಳು, ಅದು ಬಿಳಿಯರ ಪಾಲಿಗೆ ತಪರಾಕಿಯೇ! ಇದು ಬರಲಿರುವ ದಿನಗಳ ಬೃಹತ್ ರಾಷ್ಟ್ರೀಯ ಆಂದೋಲನಕ್ಕೆ ಮುನ್ನುಡಿಯಾಯ್ತು. ಬ್ರಿಟಿಷರನ್ನು ಎದುರಿಸುವುದು ಕಷ್ಟ ಎಂದುಕೊಳ್ಳುತ್ತಿದ್ದವರಲ್ಲಿ ವಿಶ್ವಾಸ ಚಿಗುರಿ ಗಟ್ಟಿಯಾಗತೊಡಗಿತು. ಬ್ರಿಟಿಷರ ಕಂಪನಿಗಳಲ್ಲಿದ್ದುಕೊಂಡೇ ಕ್ರಾಂತಿಕಾರಿಗಳಿಗೆ ಸಹಾಯ ಒದಗಿಸುತ್ತಿದ್ದ ಕಾರಕೂನರಿದ್ದರು. ಶಸ್ತ್ರಾಸ್ತ್ರ ಮಾರಾಟ ಮಾಡುವ ಕಂಪನಿಗಳ ಕೆಲಸಗಾರರಂತೂ ಶಸ್ತ್ರಾಸ್ತ್ರಗಳ ಪೆಟ್ಟಿಗೆಗಳನ್ನು ಮಂಗಮಾಯ ಮಾಡಿ ಕ್ರಾಂತಿಕಾರಿಗಳಿಗೆ ರವಾನಿಸಿಬಿಡುತ್ತಿದ್ದರು. ದೇಶ ಪರ್ವಕಾಲದಲ್ಲಿತ್ತು.
ರಾಸ್‌ಬಿಹಾರಿ ಬಸು ಕೆಲವು ಕಾಲ ಭಾರತದಲ್ಲಿದ್ದು ಗದ್ದರ‍್ನ ಚಟುವಟಿಕೆಗಳಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಕೊಂಡರು. ಕೊನೆಗೊಂದು ದಿನ ಜೊತೆಗಾರ ಕೃಪಾಲ್ ಸಿಂಗ್ ಮಾಡಿದ ಮೋಸದಿಂದಾಗಿ ಆಂಗ್ಲರ ಕೈಸೆರೆಯಾಗುವ ಹಂತ ಬಂದಾಗ ಜಪಾನಿಗೆ ಹಾರಿಹೋದರು. ಪುಣ್ಯಾತ್ಮ ಅಲ್ಲಿಯಾದರೇನು ಸುಮ್ಮನಿರಲಿಲ್ಲ. ಅಲ್ಲಿರುವ ಭಾರತೀಯರಲ್ಲಿ ದೇಶಪ್ರೇಮದ ಬುಗ್ಗೆ ಚಿಮ್ಮಿಸಿದರು. ಅಲ್ಲಿನ ಸೆರೆ ಸಿಕ್ಕ ಭಾರತೀಯ ಸೈನಿಕರನ್ನು ಸಂಘಟಿಸಿ ಹೊಸತೊಂದು ಸೇನೆಯನ್ನೆ ಕಟ್ಟಿದರು. ಮುಂದೆ ನೇತಾಜಿ ಜಪಾನಿಗೆ ಬಂದಾಗ ಆ ಸೇನೆಯನ್ನು ಅವರ ಕೈಗಿಟ್ಟು ಹೋರಾಟದ ಜ್ವಾಲೆಯನ್ನು ಹಸ್ತಾಂತರಿಸಿದರು.
ಅಬ್ಬ! ಇವೆಲ್ಲ ಸಿನೆಮಾದ ಘಟನೆಗಳಂತೆ ರೋಚಕವಾಗಿವೆಯಲ್ಲವೆ!? ನಾವು ನೆನಪಿಸಿಕೊಳ್ಳಲಿಕ್ಕೆ ಮರೆತುಬಿಟ್ಟಿದ್ದೇವೆ. ಆಂಗ್ಲರು ನೆನಪಾದರೆ ನಿದ್ದೆ ಕಳಕೋತಾರೆ.
ಹಲವರು ಇತಿಹಾಸ ಓದ್ತಾರೆ, ಕೆಲವರು ಮಾತ್ರ ಸೃಷ್ಟಿಸ್ತಾರೆ ಅಂತಾರಲ್ಲ, ಅಂತಹ ಸೃಷ್ಟಿಕರ್ತರು ಇವರೆಲ್ಲ!

Leave a Reply