ವಿಭಾಗಗಳು

ಸುದ್ದಿಪತ್ರ


 

ದೇವಾಲಯದ ಚಿನ್ನಕ್ಕೆ ಕೈಹಾಕುವ ಮುನ್ನ…

ದೇಶ ಸಂಕಟದಲ್ಲಿರುವಾಗ ದೇವಸ್ಥಾನದ್ದೇನು, ಸ್ವಂತದ ಹಣವೂ ಸಮರ್ಪಣೆಯಾಗಲೇಬೇಕು. ಆದರೆ ಮೊದಲು ನಾವು ಕೂಡಿಟ್ಟ ಹಣ ಹೊರಗೆ ಬರಬೇಕು. ಕಳೆದ ನಾಲ್ಕೈದು ವರ್ಷಗಳಲ್ಲಿ ಸ್ವಿಸ್ ಬ್ಯಾಂಕಿನಲ್ಲಿ ಕೂಡಿಟ್ಟ ಹಣದ ಕುರಿತಂತೆ ಗಂಭೀರ ಚರ್ಚೆಗಳಾಗುತ್ತಿವೆ. ಹಠ ಹಿಡಿದು ಅದನ್ನು ತರೋಣ.

ಕೊನೆಗೂ ಅಂದುಕೊಂಡಂತೆ ಆಯ್ತು. ರೂಪಾಯಿಯನ್ನು ಹಂತ ಹಂತವಾಗಿ ಅಪಮೌಲ್ಯಗೊಳಿಸಿದ್ದರ ಹುನ್ನಾರ ಬಯಲಿಗೆ ಬಂದೇ ಬಿಟ್ಟಿತು. ಕೇಂದ್ರ ಸರ್ಕಾರ ಅದಾಗಲೇ ಕೇರಳದ ಅನಂತಪದ್ಮನಾಭ ದೇವಾಲಯದ ಚಿನ್ನದ ದಾಸ್ತಾನಿನ ಮಾಹಿತಿ ಪಡೆದುಕೊಂಡಿದೆ. ಮಹಾರಾಷ್ಟ್ರದ ದೇವಾಲಯವೊಂದು ‘ದೇಶದ ರಕ್ಷಣೆ!’ಗೆ ಚಿನ್ನ ನೀಡಲು ಧಾವಿಸಿದೆ. ಅಂದರೆ ಯಾವುದನ್ನು ಘಜ್ನಿ-ಘೋರಿಯರು ಪದೇ ಪದೇ ದಾಳಿಗೈದು ಸಾಧಿಸಿದ್ದರೋ ಅದನ್ನು ಕಾಂಗ್ರೆಸ್ಸು ಒಳಗೆ ಕುಳಿತೇ ಮಾಡುತ್ತಿದೆ. ಬಹುಶಃ ಭಾರತದ ಇತಿಹಾಸದ ಅತ್ಯಂತ ಘೋರ ಪುಟಗಳನ್ನು ನಾವೇ ಕೈಯ್ಯಾರೆ ಬರೆಯುತ್ತಿದ್ದೇವೆ.
ದೇವಸ್ಥಾನಗಳು ಭಾರತದ ಶಕ್ತಿ ಕೇಂದ್ರಗಳು. ಅಲ್ಲಿಗೆ ಹಣ ನೀಡುವುದೇ ಇರಲಿ, ಅಲ್ಲಿನ ಹಣ ಖರ್ಚು ಮಾಡುವುದೇ ಇರಲಿ ಎರಡರಲ್ಲೂ ಗಂಭೀರ ಎಚ್ಚರಿಕೆ ವಹಿಸಲಾಗುತ್ತದೆ. ಅನೇಕರು ತಮ್ಮ ವ್ಯಾಪಾರ ವಹಿವಾಟುಗಳಿಗೆ ಭಗವಂತನನ್ನೇ ಪಾಲುದಾರನನ್ನಾಗಿ ಮಾಡಿ ಲಾಭವನ್ನು ಹುಂಡಿಗೆ ಹಾಕಿ ಮರೆತು ಬಿಡುತ್ತಾರೆ. ನಮ್ಮವರು ಸರ್ಕಾರಕ್ಕೆ ತೆರಿಗೆ ಕಟ್ಟುವುದಕ್ಕಿಂತ ಹೆಚ್ಚು ದೇವಸ್ಥಾನದ ಹುಂಡಿಗೆ ಹಣ ಸುರಿಯುತ್ತಾರೆ. ಕಾರಣ ವಿಶ್ವಾಸ. ಸರ್ಕಾರ-ಮಂತ್ರಿಗಳು ಇವರ ಮೇಲೆ ಜನರಿಗೆ ನಂಬಿಕೆ ಇಲ್ಲ; ದೇವಸ್ಥಾನ-ದೇವರು ಇವುಗಳ ಮೇಲೆ ಶ್ರದ್ಧೆ. ಆ ದೇವಸ್ಥಾನದ ಆಡಳಿತದ ಹಿರಿಯರೂ ಅದಕ್ಕೆ ತಕ್ಕಂತೆ ನಡಕೊಂಡು ಬಂದವರೇ. gold-temple-570x380
ಸಂಗ್ರಹಣೆಯಷ್ಟೇ ಅಲ್ಲ, ಅದನ್ನು ಸಮಾಜಮುಖಿಯಾಗಿ ಖರ್ಚು ಮಾಡುವ ಹೊಣೆಯೂ ಮಂದಿರದ್ದೇ ಆಗಿತ್ತು. ಹೀಗಾಗಿ ನಿರಂತರ ಅನ್ನದಾನ, eನದಾನ, ನ್ಯಾಯದಾನಗಳನ್ನು ಮಂದಿರ ಸಮರ್ಥವಾಗಿ ನಿಭಾಯಿಸುತ್ತಿತ್ತು. ಅದಕ್ಕೇ ಈ ದೇಶದಲ್ಲಿ ಶಿಕ್ಷಣವನ್ನು ಮಾರುತ್ತಿರಲಿಲ್ಲ ಎನ್ನುತ್ತಿದ್ದುದು. ಎಲ್ಲ ವ್ಯಾಜ್ಯಗಳು ಭಗವಂತನನ್ನು ಸಾಕ್ಷಿಯಾಗಿರಿಸಿಕೊಂಡು ನಿವಾರಿಸಲ್ಪಡುತ್ತಿದ್ದವು. ಹಸಿದವ ಮಂದಿರಕ್ಕೆ ಹೋದರೆ ಪ್ರಸಾದವಿಲ್ಲದೇ ಬರುವುದು ಸಾಧ್ಯವೇ ಇರಲಿಲ್ಲ. ನಿಜಾರ್ಥದಲ್ಲಿ ಆಹಾರ ಖಾತ್ರಿ ಅಂದರೆ ಇದೇನೇ. ಊರಿನಲ್ಲಿ ಊಟ ಮಾಡದೇ ಇರುವ ವ್ಯಕ್ತಿಯೇ ಇರುವುದಿಲ್ಲ; ಹಾಗಂತ ಊಟ ಗಳಿಸುವ ಸಾಮರ್ಥ್ಯವಿರುವವ ಪ್ರತಿದಿನ ಅಲ್ಲಿಗೆ ಬರುವುದೂ ಇಲ್ಲ. ಅಂದರೆ ಗಳಿಸಲಾಗದವನಿಗೆ ಅನ್ನದ ಖಾತ್ರಿಯಾಯ್ತು. ಇವತ್ತಿನಂತೆ ಇದ್ದವರಿಗೂ ಧಾನ್ಯ ಹಂಚುವ ಎಡಬಿಡಂಗಿ ಯೋಜನೆಯಲ್ಲ ಅದು. ಒಟ್ಟಾರೆ ನಾವು ಹುಂಡಿಗೆ ಹಾಕಿದ ಹಣ ಸಮರ್ಥವಾಗಿ ಬಳಕೆಯಾಗುವ ಮಾಧ್ಯಮ ದೇವಸ್ಥಾನವಾಗಿತ್ತು. ಸಮಾಜದ ಸ್ವಾಸ್ಥ್ಯ ಕಾಪಾಡುತ್ತಿರುವ ಈ ದೇವಸ್ಥಾನಗಳನ್ನು ಚಿನ್ನ-ಬೆಳ್ಳಿಯಿಂದ ಸಿಂಗರಿಸುವುದು ಸಹಜವಾಗಿಯೇ ಜನರ ಅಭೀಷ್ಟೆ. ಅವರು ಕೊಡುತ್ತ ನಡೆದರು, ದೇವಸ್ಥಾನಗಳು ವೈಭವಪೂರ್ಣಗೊಳ್ಳುತ್ತಲೇ ಇದ್ದವು.
ಈ ರೀತಿಯ ಸಾಮಾಜಿಕ ವ್ಯವಸ್ಥೆಯ ಪರಿಕಲ್ಪನೆಯೂ ಇರದಿದ್ದ ಘೋರಿ-ಘಜ್ನಿಯರ ದಂಡು ಮಂದಿರಗಳ ಮೇಲೆ ದಾಳಿಗೈದು ಲೂಟಿ ಮಾಡಿತು. ಅವುಗಳನ್ನು ಧ್ವಂಸಗೊಳಿಸಿತು. ಬ್ರಿಟಿಷರಂತೂ ಮಂದಿರಗಳಿಗೆ ಕೊಟ್ಟ ಸವಲತ್ತುಗಳನ್ನು ಕಿತ್ತುಕೊಂಡದ್ದಲ್ಲದೇ, ಶಿಕ್ಷಣದ, ನ್ಯಾಯದ ಜವಾಬ್ದಾರಿಯನ್ನು ತಾವೇ ಹೊತ್ತರು. ಆನಂತರವೇ ಈ ದೇಶದಲ್ಲಿ ಇವೆಲ್ಲವೂ ಮಾರಾಟದ ಸರಕಾಗಿದ್ದು. ಮಾಡುತ್ತಿದ್ದ ಕೆಲಸಗಳು ನಿಂತರೂ ಹರಿದು ಬರುತ್ತಿದ್ದ ಹಣ ನಿಲ್ಲಲಿಲ್ಲ. ಅನೇಕ ಮಂದಿರಗಳು ಸರ್ಕಾರದ ಅಧೀನವಾದವು. ಹಾಗಾಗದೇ ಉಳಿದ ಮಂದಿರಗಳು ತಮ್ಮ ಮಟ್ಟದ ಸೇವಾಕಾರ್ಯ ಮುಂದುವರಿಸಿಕೊಂಡು ಬಂದವು. ಕಾಲಕ್ರಮದಲ್ಲಿ ನಮ್ಮದೇ ಬುದ್ಧಿವಂತರು ಮಂದಿರಗಳಿಗೆ ಹೋಗೋದು, ಹುಂಡಿಗೆ ಹಣ ಹಾಕೋದು ಮೂರ್ಖತನ ಎಂದೆಲ್ಲ ಜರಿದರು. ನಾವು ಕೇಳುತ್ತ ಉಳಿದೆವು.
ಹೀಗೆ ಪ್ರಶ್ನೆ ಮಾಡುವವರು ಕೇಳದಿರುವ ಅಂಶವೊಂದಿದೆ. ಈ ದೇಶದ ಎರಡೂವರೆ ಪ್ರತಿಶತದಷ್ಟಿರುವ ಕ್ರಿಶ್ಚಿಯನ್ನರ ಒಟ್ಟಾರೆ ವಹಿವಾಟು ನಮ್ಮ ಸರ್ಕಾರ ನೌಕಾಸೇನೆಗೆಂದು ಖರ್ಚು ಮಾಡುವ ಹಣಕ್ಕೆ ಸಮಾನವಾಗಿದೆ ಅನ್ನೋದು! ಅಷ್ಟೇ ಅಲ್ಲ ಸರ್ಕಾರದ ನಂತರ ಅತಿ ಹೆಚ್ಚು ನೌಕರರನ್ನು ದುಡಿಸಿಕೊಳ್ಳುತ್ತಿರುವ ಚರ್ಚುಗಳು ಸರ್ಕಾರದ ನಿಯಮಾವಳಿಗಳ ಕೆಳಗೆ ಬರುವ ಮನಸ್ಸು ಮಾಡುತ್ತಿಲ್ಲ ಅನ್ನೋದು! ದೇಶದ ಎಲ್ಲ ನಗರಗಳಲ್ಲಿ ಆಯಕಟ್ಟಿನ ಜಾಗ ಗಿಟ್ಟಿಸಿ ಕೂತಿರುವ ಚರ್ಚಿನ ಜಮೀನಿನ ಮೇಲೆ ಸರ್ಕಾರಕ್ಕೆ ಹಿಡಿತವೇ ಇಲ್ಲ ಅನ್ನೋದು. ಈ ರೀತಿಯ ವಿಚಾರಗಳ ಕುರಿತಂತೆ ಮದ್ರಾಸಿನ ಉಚ್ಚ ನ್ಯಾಯಾಲಯ ಇತ್ತೀಚೆಗೆ ನೀಡಿದ ತೀರ್ಪು ಗಮನ ಸೆಳೆಯುವಂಥದ್ದು.
ದೇಶದ ಅಸ್ಮಿತೆಗೆ ಸವಾಲಾಗಿರುವ ಈ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ೬೫ ವರ್ಷಗಳಿಂದ ಹುಡುಕದೇ ಈಗ ಏಕಾಏಕಿ ಮಂದಿರಗಳು ಕೂಡಿಟ್ಟಿರುವ ಚಿನ್ನವನ್ನು ಕರಗಿಸಿ ರಿಸರ್ವ್ ಬ್ಯಾಂಕಿಗೆ ಕೊಡಬೇಕೆನ್ನುವುದು ಒಪ್ಪಬಹುದಾದ ಮಾತೇನು? ಸತ್ಯ ಹೇಳಿ. ಸರ್ಕಾರಕ್ಕೆ ಕೊಟ್ಟ ದುಡ್ಡು ಮರಳಿ ಬರುವ ವಿಶ್ವಾಸ ನಿಮಗಿದೆಯಾ? ದೇಶ ಸಂಕಟದಲ್ಲಿರುವಾಗ ದೇವಸ್ಥಾನದ್ದೇನು, ಸ್ವಂತದ ಹಣವೂ ಸಮರ್ಪಣೆಯಾಗಲೇಬೇಕು. ಆದರೆ ಮೊದಲು ನಾವು ಕೂಡಿಟ್ಟ ಹಣ ಹೊರಗೆ ಬರಬೇಕು. ಕಳೆದ ನಾಲ್ಕೈದು ವರ್ಷಗಳಲ್ಲಿ ಸ್ವಿಸ್ ಬ್ಯಾಂಕಿನಲ್ಲಿ ಕೂಡಿಟ್ಟ ಹಣದ ಕುರಿತಂತೆ ಗಂಭೀರ ಚರ್ಚೆಗಳಾಗುತ್ತಿವೆ. ಹಠ ಹಿಡಿದು ಅದನ್ನು ತರೋಣ. ಕಳೆದ ವರ್ಷ ಆoಜ್ಞಿಛಿoo ಜ್ಞಿoಜಿbಛ್ಟಿ ಪತ್ರಿಕೆ ಶ್ರೀಮಂತ ರಾಜಕಾರಣಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ಸರಿಸುಮಾರು ಇಪ್ಪತ್ತು ಬಿಲಿಯನ್ ಡಾಲರ್‌ಗಳಷ್ಟು ಆಸ್ತಿ ಹೊಂದುವ ಮೂಲಕ ಸೋನಿಯಾ ಗಾಂಧಿ ನಾಲ್ಕನೇ ಸ್ಥಾನದಲ್ಲಿದ್ದರು. ಈ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರ ಹಗರಣಗಳ ಸರಮಾಲೆಯನ್ನೇ ಧರಿಸಿಕೊಂಡಿದೆ. ಅಂದರೆ ಇನ್ನೊಂದಷ್ಟು ಬಿಲಿಯನ್ ಡಾಲರ್‌ಗಳು ಸೇರಿರಲಿಕ್ಕೆ ಸಾಕು. ಈ ಹಣ ತರೋದು ಬೇಡವಾ? ಕೋಟ್ಯಂತರ ರೂಪಾಯಿಗಳ ಅಧಿಕೃತ ಆಸ್ತಿಯನ್ನು ಘೋಷಣೆ ಮಾಡಿ ಅದರ ಹತ್ತು ಪಟ್ಟಾದರೂ ಕಾಣದಂತೆ ಇಟ್ಟಿರುವವರ ಹಣವನ್ನು ವಶಪಡಿಸಿಕೊಳ್ಳೋದು ಬೇಡವಾ?
ಸರಿ. ತೀರಾ ಇಷ್ಟೆಲ್ಲ ಅಗತ್ಯ ಇದೆ ಅನ್ನೋದೇ ಆದರೆ, ದೆಹಲಿಯಲ್ಲಿ ರಾಷ್ಟ್ರಪತಿಗಳ ವಾಸಕ್ಕೆ ಅಂತ ಮುನ್ನೂರಕ್ಕೂ ಹೆಚ್ಚು ಕೋಣೆಗಳ ಅರಮನೆ, ಹೆಕ್ಟೇರುಗಟ್ಟಲೆ ಗಾರ್ಡನ್ನು ಇವುಗಳ ರಿಯಲ್ ಎಸ್ಟೇಟ್ ಮೌಲ್ಯವೇ ೨೦೦೭ರ ವರದಿಯಂತೆ ಹದಿನಾರು ಸಾವಿರ ಕೋಟಿ! ಈಗ ಮೂರ‍್ನಾಲ್ಕು ಪಟ್ಟಾದರೂ ಜಾಸ್ತಿಯಾಗಿರಲಿಕ್ಕೆ ಸಾಕು. ಮಾರಿಬಿಡೋಣ ಬಿಡಿ! ಹೋಗಲಿ. ಮಹಾತ್ಮಾ ಗಾಂಧಿ, ನೆಹರೂ, ಇಂದಿರಾರ ಸಮಾಧಿ ಸ್ಥಳ ೧೪೧ ಎಕರೆ ವಿಸ್ತಾರಕ್ಕೆ ಹಬ್ಬಿದೆಯಲ್ಲ; ಆಯಕಟ್ಟಿನ ಜಾಗದಲ್ಲಿ ಸಮಾಧಿಗಾಗಿ ಇಷ್ಟೊಂದು ಜಾಗವೇಕೆ? ದೇಶವೇ ಸಂಕಟದಲ್ಲಿರುವಾಗ ಗೋರಿಗಳ ಮುಂದೆ ಭಜನೆಗೆ ಸಮಯವೆಲ್ಲಿ? ನಡೀರಿ ಸಮಯ ಬಂದರೆ ಮಾರಿಬಿಡೋಣ. ತೀರಾ ಭಾವನಾತ್ಮಕ ಸಂಬಂಧ ಅನ್ನೋದಾದರೆ ಗಾಂಧೀಜಿಯ ಸಮಾಧಿಸ್ಥಳ ಉಳಿಸಿಕೊಂಡು, ಉಳಿದಿಬ್ಬರದನ್ನು ರಿಯಲ್ ಎಸ್ಟೇಟಿಗೆಂದು ಕೊಟ್ಟುಬಿಟ್ಟರೆ ಗಂಟೇನು ಹೋಗುತ್ತೆ ಅಂದರೆ ಕಾಂಗ್ರೆಸ್ಸಿಗರು ಸುಮ್ಮನಿರುತ್ತಾರಾ?
ನೀವು ನಾಯಕರೆಲ್ಲ ತಿರುಗಾಡಲಿಕ್ಕೆ, ಉಳಕೊಳ್ಳಲಿಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದೀರಲ್ಲ ಅದನ್ನು ಕಡಿಮೆ ಮಾಡಿ ; ನಿಮ್ಮ ಸಂಬಳವನ್ನು, ಪೆನ್ಷನ್‌ಗಳನ್ನು ತಡೆ ಹಿಡಿದು ದೇಶಕ್ಕೆ ಕೊಡಿ ಅಂದರೆ ಇವರೆಲ್ಲ ಕೇಳುತ್ತಾರೇನು?
ಹಾಗೆ ನೋಡಿದರೆ ಮಂದಿರದ ಚಿನ್ನಕ್ಕೆ ಕೈ ಹಾಕೋದು ಕೊನೆಯ ಪ್ರಯತ್ನ. ಮೊದಲು ಉಳಿದ ದಾರಿಗಳನ್ನು ಅವಲೋಕಿಸಬೇಕು. ಆದರೆ ಉಳಿದ ದಾರಿಗಳು ತಮ್ಮ ಬುಡಕ್ಕೇ ಬಂದು ನಿಲ್ಲುವುದರಿಂದ ಆ ಪ್ರಯತ್ನಕ್ಕೆ ಯಾರೂ ತಯಾರಾಗುತ್ತಿಲ್ಲ. ದೇಶದ ವಿತ್ತೀಯ ಕೊರತೆ ತೀವ್ರವಾಗಿ ಏರಿಬಿಟ್ಟಿದೆ. ಆದಾಯಕ್ಕಿಂತ ಖರ್ಚು ಜಾಸ್ತಿಯಾಗೋದನ್ನು ವಿತ್ತೀಯ ಕೊರತೆ ಅಂತಾರೆ. ವಿತ್ತೀಯ ಕೊರತೆ ಹೆಚ್ಚಾದರೆ ಮನೆಯೇ ನಡೆಯೋಲ್ಲ, ಇನ್ನು ದೇಶ ಹೇಗೆ ನಡೆಯುತ್ತೆ? ಮನೆಯಲ್ಲಿ ಕೊರತೆ ಹೆಚ್ಚಾದರೆ ಸಾಲ ಪಡೆಯುತ್ತೇವೆ. ಸಾಲ ಅದಾಗಲೇ ಹೆಗಲೇರಿ ಕುತ್ತಿಗೆ ಹಿಸುಕುವಂತಿದ್ದರೆ ಒಡವೆ ಅಡವಿಡುತ್ತೇವೆ. ಸರಿ. ಇಲ್ಲಿಯವರೆಗಿನ ಸಾಲದ ಒಂದು ಭಾಗ ತೀರಿತು. ಮುಂದೇನು? ಮತ್ತೆ ಹಣದ ಕೊರತೆ. ಈಗ ಸಾಲ ಕೊಡುವವರೂ ಇಲ್ಲ, ಅಡವಿಡಲು ಚಿನ್ನವೂ ಇಲ್ಲ. ಇರುವುದೊಂದೇ ದಾರಿ ಮನೆ ಮಾರೋದು, ಮಾನ ಉಳಿಸಿಕೊಳ್ಳೋದು. ನಮ್ಮ ಬುದ್ಧಿವಂತ ಹಣಕಾಸು ಮಂತ್ರಿಗಳೆಲ್ಲರ ಬುದ್ಧಿವಂತಿಕೆಯ ಐಡಿಯಾಗಳಿವು!
ಈಗ ದೇಸೀ ಮಾಧ್ಯಮಕ್ಕೆ ಬನ್ನಿ. ನಮ್ಮ ಮನೆಯಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಾದರೆ ಮಾಡುವ ಮೊದಲ ಕೆಲಸ ಖರ್ಚು ಕಡಿಮೆ ಮಾಡೋದು. ಆಮೇಲಿನದು ಆದಾಯ ಹೆಚ್ಚಿಸೋದು. ಒಟ್ಟಾರೆ ಬೇಡುವ ಸ್ಥಿತಿಗೆ ಒಯ್ಯದಿರೋದು ನಮ್ಮ ಉದ್ದೇಶ. ನಮ್ಮ ಸರ್ಕಾರಗಳೂ ಮಾಡಬೇಕಿರೋದು ಅದನ್ನೇ. ಅನವಶ್ಯಕವಾಗಿ ಅಕ್ಕಿ-ಬೇಳೆ ಕೊಡುವ, ಕೂತಲ್ಲೇ ಹಣ ಕೊಡುವ ಯೋಜನೆಗಳನ್ನು ಕೈಬಿಟ್ಟು ಖರ್ಚು ಕಡಿಮೆ ಮಾಡಬೇಕು ; ಹೊಸ ಹೊಸ ಉದ್ಯೋಗಗಳನ್ನು ಸೃಷ್ಟಿಸಿ ಆದಾಯ ಹೆಚ್ಚಿಸಬೇಕು. ಸಾಲ ಪಡೆದು ಸರ್ಕಾರ ನಡೆಸಲಿಕ್ಕೆ ಇಂಗ್ಲಿಷ್ ಮಾಧ್ಯಮಗಳ ನೀಲಿಕಂಗಳ ಹುಡುಗ ಮನಮೋಹನರೇ ಬೇಕಿಲ್ಲ ಅನ್ನೋದನ್ನು ದೇಶ ಅರ್ಥ ಮಾಡಿಕೊಳ್ಳಬೇಕು.
ಕಳೆದ ಒಂದೂವರೆ ದಶಕದಿಂದ ದೇಶದಲ್ಲಿ ಅರ್ಥಕ್ರಾಂತಿಯ ಹೆಸರಲ್ಲಿ ದೊಡ್ಡದೊಂದು ಆಂದೋಲನ ನಡೆಯುತ್ತಿದೆ. ಔರಾಂಗಾಬಾದಿನ ಅನಿಲ್ ಬೋಕಿಲ್ ನೇತೃತ್ವದ ಈ ಹೋರಾಟ ಸರಳ ಸೂತ್ರವೊಂದನ್ನು ಸಮಾಜದ ಮುಂದಿರಿಸಿದೆ. ಸರ್ಕಾರದ ದೃಷ್ಟಿಯಲ್ಲಿ ಶೇಕಡಾ ಎಪ್ಪತ್ತರಷ್ಟು ಜನ ಬಡವರೆನ್ನುವುದೇ ನಿಜವಾದರೆ, ಇಷ್ಟು ಜನರಿಗೆ ಅನ್ನ ಗಳಿಸುವುದು, ದಿನಕ್ಕೆ ನೂರು ರೂಪಾಯಿ ದುಡಿಯೋದು ಕಷ್ಟವೆನ್ನುವುದಾದರೆ ಐದು ನೂರು, ಸಾವಿರ ರೂ.ಗಳ ನೋಟುಗಳೇಕೆ? ಅನ್ನೋದು ಅವರ ಪ್ರಶ್ನೆ. ದೇಶದ ಕೆಲವು ಸಿರಿವಂತರು ಹಣ ಕೂಡಿಡಲು ಸಹಾಯ ಮಾಡಲೆಂದು ಇಷ್ಟು ಮೌಲ್ಯದ ನೋಟುಗಳನ್ನು ತಂದು ಅದು ಕಪ್ಪುಹಣವಾಗಿಸಲು ನಾವೇ ತಾನೇ ವ್ಯವಸ್ಥೆ ಮಾಡಿಕೊಟ್ಟಿರೋದು. ಸರ್ಕಾರ ಒಂದು ನಿರ್ಧಾರಕ್ಕೆ ಬರಲಿ. ಈ ದೇಶದ ಬಹುಪಾಲು ಜನರಿಂದ ಗಳಿಸಲಾಗದ ಆ ನೋಟುಗಳು ನಮಗೇಕೆ? ಹಾಗೆಂದು ಅವುಗಳನ್ನು ನಿಷೇಧಿಸಿ ಈ ನೋಟುಗಳನ್ನು ನೂರರ ನೋಟುಗಳಿಗೆ ಪರಿವರ್ತಿಸಿಕೊಳ್ಳಿ ಅಂತ ಸಮಯ ನಿಗದಿ ಮಾಡಿಬಿಟ್ಟರಾಯ್ತು. ಪಾಪ! ನಿಯತ್ತಾಗಿ ದುಡಿದವರು ಬ್ಯಾಂಕಿಗೆ ಬಂದು ವಿನಿಮಯ ಮಾಡಿಕೊಳ್ಳುತ್ತಾರೆ. ಕಪ್ಪುಹಣ ಇಟ್ಟವರು ಬಾಯಿ ಬಡಕೊಳ್ಳುತ್ತಾರೆ. ಅವರಿಗೆ ಒಂದಷ್ಟು ತೆರಿಗೆ ಹಾಕಿ ಮುಖ್ಯವಾಹಿನಿಗೆ ಆ ಹಣ ಬರುವಂತೆ ಮಾಡಿದರೆ ದೇಶ ಬಲು ಸುಭಿಕ್ಷವಾಗಿ ಬಿಡುತ್ತದೆ! ಖೋಟಾನೋಟಿನ ಹಾವಳಿ ಒಮ್ಮೆಗೇ ತಣ್ಣಗಾಗಿ ಬಿಡುತ್ತದೆ. ಒಂದೇ ಏಟಿಗೆ ಎರಡು ಹಕ್ಕಿ. ಅದರೊಟ್ಟಿಗೆ ಇನ್ನು ಮುಂದಿನ ಎಲ್ಲ ವಹಿವಾಟು ಬ್ಯಾಂಕಿನ ಮೂಲಕವೇ ನಡೆಯಬೇಕೆಂದು ನಿಯಮ ಮಾಡಿದರಂತೂ ಸಮಸ್ಯೆಗಳಿಗೆಲ್ಲ ಸ್ಥೂಲ ರೂಪದ ಪರಿಹಾರ ದಕ್ಕಿಬಿಡುತ್ತದೆ. ಹಾಗಂತ ‘ಅರ್ಥಕ್ರಾಂತಿ’ ಗಂಭೀರ ದನಿಯಲ್ಲಿ ಮಾತನಾಡುತ್ತದೆ. ಕೇಳುವವರ‍್ಯಾರು?
ರೂಪಾಯಿಯ ಮೌಲ್ಯ ಕುಸಿದು ಪೆಟ್ರೋಲ್ ಬೆಲೆ ಏರುತ್ತಿದ್ದರೆ, ಅಪಮೌಲ್ಯ ತಡೆಗಟ್ಟೋದು ಬಿಟ್ಟು ರಾತ್ರಿಯ ವೇಳೆ ಪೆಟ್ರೋಲ್ ಬಂಕ್‌ಗಳನ್ನು ಬಂದ್ ಮಾಡಿಬಿಡೋಣ ಎನ್ನುವ ಬುದ್ಧಿವಂತ ವೀರಪ್ಪ ಮೊಯ್ಲಿಯಂಥವರಲ್ಲವೇ ಆಳುತ್ತಿರೋದು, ಇವರಿಗೆ ಇವೆಲ್ಲ ಅದೆಲ್ಲಿ ಅರ್ಥವಾಗಬೇಕು?
ದೇಶಕ್ಕೆ ಈಗ ಜಾಗೃತ ಪ್ರಜೆಗಳು ಬೇಕಾಗಿದ್ದಾರೆ. ಇದೊಂದು ಸಾಮಾಜಿಕ ಆಂದೋಲನದ ಸಮಯ. ನೆನಪಿಡಿ. ಈ ದೇಶದಲ್ಲಿ ದೇವಸ್ಥಾನಗಳನ್ನು ಮುಟ್ಟಿದಾಗಲೆಲ್ಲ ಕ್ರಾಂತಿಯಾಗಿದೆ. ಈಗ ಕೇಂದ್ರದ ಕಾಂಗ್ರೆಸ್ಸು ಶ್ರದ್ಧಾಕೇಂದ್ರಕ್ಕೆ ಕೈಹಾಕುತ್ತಿದೆ. ಈ ಹೊತ್ತಲ್ಲೇ ಎಡಪಂಥೀಯರು ಧಿಗ್ಗನೆದ್ದು ಕುಳಿತು ಬಿಡುತ್ತಾರೆ. ದೇಶ ಮೊದಲು ಅಂತೆಲ್ಲ ಮಾತನಾಡುತ್ತಾರೆ. ಈಗ ಅವರಿಗೆ ಮಂದಿರಗಳು ಬೇಕು, ಇಲ್ಲಿರುವ ಹಣ-ಚಿನ್ನ ಎಲ್ಲ ಬೇಕು. ರಾಮ ಮಂದಿರ ಆಗಬೇಕು ಅಂತ ಹೇಳಿದರೆ ಮಾತ್ರ ಅವರ ದನಿ ಬದಲಾಗಿಬಿಡುತ್ತೆ. ಬಿಡಿ. ಹೀಗೆ ದನಿ ಬದಲಾಯಿಸೋದು, ಪಕ್ಷ ಬದಲಾಯಿಸೋದು ಅವರಿಗೆ ಯಾವಾಗಲೂ ಅಭ್ಯಾಸ.
ಆದರೆ ನಾವೀಗ ಗಟ್ಟಿಯಾಗಿ ನಿಲ್ಲೋಣ. ಮಂದಿರಗಳ ಚಿನ್ನ ಕೊಡುವ ಮುನ್ನ ನೀವು ವಿದೇಶಗಳಲ್ಲಿ ಕೂಡಿಟ್ಟ ಹಣ ತನ್ನಿರೆಂದು ಆಗ್ರಹಿಸೋಣ. ಈಗ ಸಮಯ ಬಂದಿದೆ. ಸುಮ್ಮನಿದ್ದರೆ ಸೋಮನಾಥ ಮಂದಿರಕ್ಕೆ ಬಂದ ದುರ್ಗತಿ ತಿರುಪತಿಗೂ ಬಂದರೆ ಅಚ್ಚರಿಯಿಲ್ಲ, ಎಚ್ಚರಿಕೆ!

Leave a Reply