ವಿಭಾಗಗಳು

ಸುದ್ದಿಪತ್ರ


 

ಧರ್ಮನಾಶಕ್ಕೆ ಕಟಿಬದ್ಧರಾಗಿ ನಿಂತವರ ಎದುರು…

ಹಿಂದೂ ಧರ್ಮವನ್ನು ಅನುಸರಿಸುವವರು ಜೀವ ಉಳಿಸುವಲ್ಲಿ, ಸ್ನೇಹ ಬೆಳೆಸುವಲ್ಲಿ ನಿರತರಾಗುವರು. ಸದ್ಯಕ್ಕಂತೂ ಬೇರೆಯವರ‍್ಯಾರೂ ಹಾಗೆ ಕಾಣುತ್ತಿಲ್ಲ. ಅದಕ್ಕೇ ಹಿಂದೂ ರಾಷ್ಟ್ರದ ನಿರ್ಮಾಣವಾದರೆ ಅದು ಜಗತ್ತಿಗೇ ಒಳಿತನ್ನು ಮಾಡುವಂಥದ್ದಾಗುವುದು. ಅದು ಭಗವಂತನ ಇಚ್ಛೆಯೂ ಹೌದು.

ಗೋವಾ! ಐದು ಶತಕಗಳ ಹಿಂದೆ ಹಿಂದೂಗಳು ಕ್ರಿಶ್ಚಿಯನ್ನರ ದಾಳಿಯಿಂದ ನಲುಗಿ ಹೋಗಿದ್ದ ಜಾಗ. ದೇವಸ್ಥಾನಗಳನ್ನು, ಆಚಾರ ಪದ್ಧತಿಗಳನ್ನು, ಕೊನೆಗೆ ತುಳಸೀಕಟ್ಟೆಯನ್ನು ಉಳಿಸಿಕೊಳ್ಳಲೆಂದು ರಕ್ತದ ಕೋಡಿ ಹರಿದಿತ್ತು. ಹಿಂದೂ ರಾಷ್ಟ್ರದ ನಾಶಕ್ಕೆ ಕಟಿಬದ್ಧರಾಗಿದ್ದ ರಾಕ್ಷಸರೋಪಾದಿಯಲ್ಲಿ ಸಂತ ಝೇವಿಯರ್ ಮತ್ತು ಸೇನಾಪತಿ ಅಲ್ಬುಕರ್ಕ್ ನಿಂತಿದ್ದರು. ಭೂಮಿಯ ಮೇಲಿನ ಮಹಾನ್ ಕ್ರೌರ್ಯದ ದರ್ಶನ ಶಾಂತಿ ದೂತನ ಹೆಸರಲ್ಲಿ ನಡೆದುಹೋಗಿತ್ತು. ಹಿಂದೂ ರಾಷ್ಟ್ರದ ಸಮಾಧಿಗೆ ಬಲು ದೊಡ್ಡ ಪ್ರಯತ್ನ ನಡೆದಿತ್ತು.
ಸತ್ಯವೆಂದಿಗೂ ಶಾಶ್ವತ ಎನ್ನುವುದಕ್ಕೆ ಇದೇ ಸಾಕ್ಷಿ. ಕಳೆದ ವಾರ ಅದೇ ಗೋವೆಯಲ್ಲಿ ಹಿಂದೂ ರಾಷ್ಟ್ರ ನಿರ್ಮಾಣದ ರೂಪುರೇಷೆಗಳ ಕುರಿತಂತೆ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ನಡೆಯಿತು. ಬಾಂಗ್ಲಾ – ನೇಪಾಳ – ಶ್ರೀಲಂಕಾ – ಪಾಕಿಸ್ತಾನಗಳಿಂದಲ್ಲದೆ ದೂರದ ಮಲೇಷಿಯಾದಿಂದಲೂ ಹಿಂದೂ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಅಭಿಪ್ರಾಯಗಳನ್ನು ಮಂಡಿಸಿದರು, ಆತಂಕಗಳನ್ನು ಹಂಚಿಕೊಂಡರು. ಇವಿಷ್ಟೂ ಕಾರ್ಯಕ್ರಮವನ್ನು ಸಂಘಟಿಸಿದ್ದು ಇಂದು ರಾಷ್ಟ್ರವ್ಯಾಪಿಯಾಗಿ ಬೆಳೆದು ನಿಂತಿರುವ ಒಂದು ಸಾಮಾನ್ಯ ಸಂಘಟನೆ, ‘ಹಿಂದೂ ಜನ ಜಾಗೃತಿ ಸಮಿತಿ’!

hiತಿಂಗಳ ಹಿಂದೆ ಮಾನ್ಯ ಮುಖ್ಯಮಂತ್ರಿಗಳು ಏಕಾಏಕಿ ಗೋಹತ್ಯಾ ನಿಷೇಧದ ಕುರಿತಂತೆ ಮಾತನಾಡುವಾಗ; ಮಂದಿರಗಳನ್ನು ವಶಪಡಿಸಿಕೊಳ್ಳುವ ಕುರಿತು ಏರಿದ ದನಿಯಲ್ಲಿ ಹೇಳುವಾಗ ಆತಂಕದ ಕಾರ್ಮೋಡ ಆವರಿಸಿಕೊಂಡಿತ್ತು. ಯಾರಿಗೂ ಗೊತ್ತೇ ಇರದ ಕ್ರಿಶ್ಚಿಯನ್ ಜಾರ್ಜ್‌ರನ್ನು ಗೃಹ ಸಚಿವರನ್ನಾಗಿ ಮಾಡಿರುವುದೇ ಮತಾಂತರದ ಪ್ರಕ್ರಿಯೆಗೆ ಕಾನೂನಿನ ರಕ್ಷಣೆ ಕೊಡಿಸಲಿಕ್ಕೆ ಅನ್ನೋದು ಅರಿವಾದಾಗಲಂತೂ ಭಯವೇ ಆಗಿತ್ತು. ಹಿಂದೂ ಸಂಘಟನೆಗಳ ವಿರುದ್ಧ ಹೋರಾಡಲು ಪೊಲೀಸರಿಗೆ ಸಶಸ್ತ್ರ ತರಬೇತಿ ನೀಡುವ ಕುರಿತಂತೆ ಪೊಲೀಸರ ಸಭೆಯಲ್ಲಿ ಮುಖ್ಯಮಂತ್ರಿಗಳು ಹೇಳಿದ್ದು, ಅದಕ್ಕೆ ಇದಿರಾಗಿ ಮದನಿಯನ್ನು ಬಂಧಮುಕ್ತಗೊಳಿಸುವ ಭರವಸೆ ನೀಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಒಂದಂತೂ ಸ್ಪಷ್ಟವಾಗಿ ಕಾಣುತ್ತಿತ್ತು. ರಾಷ್ಟ್ರ ವಿರೋಧಿ – ಧರ್ಮವಿರೋಧಿ ಶಕ್ತಿಗಳಿಗೆ ಜೈ, ರಾಷ್ಟ್ರ ಭಕ್ತರಿಗೆ ಜೈಲು! ಇದು ಅಂಧಕಾರವಲ್ಲದೆ ಮತ್ತೇನು? ಅನೇಕರು ರಾತ್ರಿಯ ನಿದ್ದೆ ಕಳಕೊಂಡರು. ಮುಂದೇನೆಂದು ತಲೆಯ ಮೇಲೆ ಕೈಹೊತ್ತು ಕುಂತರು.
ಆಗ ಭರವಸೆಯ ಬೆಳಕಾಗಿ ಬಂದದ್ದು ಹಿಂದೂ ರಾಷ್ಟ್ರ ನಿರ್ಮಾಣದ ಅಧಿವೇಶನ. ಹಿಂದೂ ರಾಷ್ಟ್ರ ಮಾತ್ರ ನಿಜಾರ್ಥದಲ್ಲಿ ಸೆಕ್ಯುಲರ್ ಎಂಬ ಚರ್ಚೆಯೊಂದಿಗೆ ಆರಂಭವಾದ ಅಧಿವೇಶನ, ವಿದೇಶೀ ಹಿಂದೂಗಳ ಸ್ಥಿತಿಗತಿಯನ್ನು ಸೂಕ್ಷ್ಮವಾಗಿ ಅನಾವರಣಗೊಳಿಸಿತು. ಹಾಗೆ ನೊಡಿದರೆ ಜಗತ್ತಿನುದ್ದಕ್ಕೂ ಹರಡಿರುವ ೧೫೦ಕ್ಕೂ ಹೆಚ್ಚು ಕ್ರಿಶ್ಚಿಯನ್ ರಾಷ್ಟ್ರಗಳು; ೫೦ಕ್ಕೂ ಹೆಚ್ಚು ಮುಸ್ಲಿಮ್, ಹತ್ತು ಹನ್ನೆರಡು ಬುದ್ಧನ ರಾಷ್ಟ್ರಗಳು; ಒಂದು ಯಹೂದಿ ಮತ್ತೆರಡು ಸೆಕ್ಯುಲರ್ ರಾಷ್ಟ್ರಗಳು – ಇವುಗಳ ನಡುವೆ ಒಂದೇ ಒಂದು ಹಿಂದೂ ರಾಷ್ಟ್ರವಿಲ್ಲವೆನ್ನುವುದೆ ಗಾಬರಿಯ ವಿಚಾರ. ಹೀಗೆ ಹಿಂದುವಿನ ಪರವಾದ ರಾಷ್ಟ್ರವೊಂದಿಲ್ಲದೆ ಇರುವುದರಿಂದಲೆ ಜಗತ್ತಿನಲ್ಲಿ ಎಲ್ಲಾದರೂ ಆತನ ಮೇಲೆ ಅತ್ಯಾಚಾರವಾದಾಗ ಕೇಳುವವರೇ ಇಲ್ಲದಂತಿರುವುದು.
ಬಾಂಗ್ಲಾ ದೇಶದ ಕಥೆಯನ್ನೇ ನೋಡಿ. ೧೯೪೧ರ ಅಂಕಿ ಅಂಶದ ಪ್ರಕಾರ ಇದ್ದ ೨೮ ಪ್ರತಿಶತ ಹಿಂದೂಗಳು ೨೦೦೧ರ ವೇಳೆಗೆ ಶೇಕಡಾ ೮ಕ್ಕೆ ಬಂದು ನಿಂತರು. ಪ್ರತಿನಿತ್ಯ ಒಂದಿಲ್ಲ ಒಂದೆಡೆಯಲ್ಲಿ ಮನೆ, ಭಗ್ನ, ಮಾನಭಂಗದ ಸುದ್ದಿಗಳು ಸರ್ವೇಸಾಮಾನ್ಯ. ೧೪ ವರ್ಷದ ರುಮಾ ರಾಣಿ ದಾಸ್, ೧೬ರ ಲವ್ಲಿ, ಪೂರ್ಣಿಮಾ ಸರ್ಕಾರ್‌ರಂಥವರನ್ನು ಹೊತ್ತೊಯ್ದು ನಿರಂತರವಾಗಿ ಅತ್ಯಾಚಾರಗೈದು ಕೊಲ್ಲಲಾಯ್ತು. ಜೀವ ಉಳಿಸಿಕೊಂಡ ಲವ್ಲಿ ಮನೆಗೆ ಬಂದ ಆರೇಳು ತಿಂಗಳ ಅನಂತರ ಗರ್ಭಿಣಿ ಎಂದರಿವಾದಾಗ ತಂದೆ ತಾಯಿಯರ ಮೇಲೆ ಆಕಾಶವೆ ಕಳಚಿ ಬಿದ್ದಂತಾಗಿತ್ತು. ಎಂ.ಆರ್.ಡೇ ಎನ್ನುವ ಹುಡುಗಿಯನ್ನಂತೂ ದುಷ್ಕರ್ಮಿಗಳು ಅತ್ಯಾಚಾರಗೈದಿದ್ದಲ್ಲದೆ ನರಗಳನ್ನು ಕೊಯ್ದು ಕೊಲ್ಲುವ ಪ್ರಯತ್ನವನ್ನೂ ಮಾಡಿದ್ದರು. ೨೦೧೨ರ ಆಗಸ್ಟ್ ತಿಂಗಳಿನಲ್ಲಿ ಸುಮಾರು ೫೦ ಹಿಂದೂ ಕುಟುಂಬಗಳನ್ನು ನಿರ್ವಸಿತರನ್ನಾಗಿ ಮಾಡಿ ಓಡಿಸಲಾಗಿತ್ತು. ಬುದ್ಧನ ಮಂದಿರವನ್ನು ಬರ್ಬರವಾಗಿ ಛಿದ್ರಗೊಳಿಸಲಾಗಿತ್ತು. ಪೊಲೀಸರೆದುರಲ್ಲೆ ಹಿಂದೂ ದೇವಾಲಯವೊಂದನ್ನು ಹೊಡೆದುರುಳಿಸಲಾಗಿತ್ತು. ಭಯಭೀತರಾಗಿ ಭಾರತದೊಳಕ್ಕೆ ನುಸುಳಿ ಬಂದ ಹಿಂದೂಗಳನ್ನು ಇಲ್ಲಿನ ಸರ್ಕಾರ ಅಸ್ಪೃಶ್ಯರಂತೆ ಕಂಡಿತಲ್ಲದೇ ಅವರಿಗೆ ವಲಸಿಗರ ಸ್ಥಾನಮಾನಗಳನ್ನೂ ನಿರಾಕರಿಸಿತು. ಆದರೆ ಅತ್ತ ಅಕ್ರಮವಾಗಿ ನುಸುಳಿ ಬಂದ ಬಾಂಗ್ಲಾ ಮುಸಲ್ಮಾನರನ್ನು ನಾಗರಿಕರೆಂದೇ ಒಪ್ಪಿಕೊಂಡುಬಿಟ್ಟಿತು! ಈ ಎಲ್ಲ ಸಂಗತಿಗಳಿಗಾಗಿ ಬಾಂಗ್ಲಾದಲ್ಲಿ ಜೀವದ ಹಂಗು ತೊರೆದು ಕಾದಾಡುತ್ತಿರುವ ವಕೀಲ ರಬೀಂದ್ರ ಘೋಷ್ ಭಾರತಕ್ಕೆ ಬಂದು ರಾಜಕಾರಣಿಗಳನ್ನು ಭೇಟಿ ಮಾಡಿದರೆ, ನೀವೇಕೆ ಇನ್ನೂ ಅಲ್ಲಿಯೇ ಇದ್ದೀರಿ? ಇಲ್ಲಿಗೆ ಬಂದು ಬಿಡಿ ಎಂಬ ಪುಕ್ಕಟೆ ಸಲಹೆ ನೀಡಿದ್ದರಂತೆ! ಅಲ್ಲಿರುವ ಹಿಂದೂಗಳ ರಕ್ಷಣೆ ನಮ್ಮ ಜವಾಬ್ದಾರಿ ಅಲ್ಲವೇ ಅಲ್ಲ ಅಂತ ಇಲ್ಲಿನ ರಾಜಕಾರಣಿಗಳು ನಿರ್ಧರಿಸಿಬಿಟ್ಟಿದ್ದಾರೆ. ಎಷ್ಟಾದರೂ ಸೆಕ್ಯುಲರ್ ರಾಷ್ಟ್ರವಲ್ಲವೇ ನಮ್ಮದು.
ಪಾಕಿಸ್ತಾನದ್ದೂ ಇದೇ ಕತೆಯೇ. ಅಲ್ಲಿಂದ ತೀರ್ಥಯಾತ್ರೆಗೆಂದು ಬರುವ ಹಿಂದೂಗಳು ಮರಳಿ ತೆರಳಲು ಇಚ್ಛಿಸುವುದೇ ಇಲ್ಲ. ನೇಪಾಳ ೯೮ ಪ್ರತಿಶತ ಹಿಂದೂಗಳಿಂದ ಕೂಡಿದ್ದರೂ ಅದು ಸೆಕ್ಯುಲರ್ ರಾಷ್ಟ್ರವಾಗಿಬಿಟ್ಟಿದೆ. ಶ್ರೀಲಂಕಾದಲ್ಲಿ ಹಿಂದೂಗಳ ಸಮಸ್ಯೆಯನ್ನು ತಮಿಳರ ಸಮಸ್ಯೆ ಅಂತ ನಾವೂ ಭಾವಿಸಿದ್ದೇವೆ; ತಮಿಳರೂ ಅದನ್ನೆ ಡೋಲು ಬಡಿದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಹಿಂದೂವಿನ ಮೇಲೆ ದಾಳಿಯಾಗಿ ಆತ ಸತ್ತರೆ ಮಂತ್ರಿ ಮಾಗಧರು ಅಲುಗಾಡುವುದೂ ಇಲ್ಲ. ಒಬ್ಬ ಮುಸಲ್ಮಾನನ್ನು ಅನುಮಾನದಿಂದ ಬಂಧಿಸಿದರೆ ರಾಜ್ಯ – ರಾಷ್ಟ್ರಗಳೆಲ್ಲ ಪತರಗುಟ್ಟಿಬಿಡುತ್ತವೆ. ಮುಸಲ್ಮಾನ ಮಾತ್ರ ಮನುಷ್ಯ. ಹಿಂದೂ ಮನುಷ್ಯನಾಗಿರಲಿಕ್ಕೂ ಯೋಗ್ಯನಲ್ಲವೆಂದು ನಿರ್ಧರಿಸಿಬಿಟ್ಟಿರುವಂತಿದೆ. ಹಾಗಂತ ಅನೇಕರು ಅಲ್ಲಿ ಪ್ರಶ್ನೆ ಕೇಳುತ್ತಲಿದ್ದರು. ಉತ್ತರಿಸಬೇಕಾದ ಜವಾಬ್ದಾರಿ ಇರುವವರು ಯಾರೂ ಇರಲಿಲ್ಲ ಅಷ್ಟೇ.
ಅಧಿವೇಶನದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಮುಖದಲ್ಲೂ ಹಿಂದೂ ರಾಷ್ಟ್ರ ನಿರ್ಮಾಣದ ಕಳಕಳಿ, ವಿಶ್ವಾಸ ಎದ್ದು ಕಾಣುತ್ತಿತ್ತು. ಹಾಗೆ ನೋಡಿದರೆ ಕ್ರಿಶ್ಚಿಯನ್ ಜಗತ್ತು, ಮುಸ್ಲಿಮ್ ಜಗತ್ತುಗಳ ಬಗ್ಗೆ ಅವರೆಲ್ಲ ಯೋಚಿಸುತ್ತಿದ್ದರೆ ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುವುದು ಅನೇಕರಿಗೆ ಕಿರಿಕಿರಿಯಾದೀತು. ಅದಾಗಲೇ ಮುಸಲ್ಮಾನರನ್ನು ಸೆಳೆಯುವಲ್ಲಿ ಪೋಪ್ ಪಡೆ, ಶಿಲುಬೆಯವರನ್ನು ಸೆಳಕೊಳ್ಳಲು ಮುಲ್ಲಾಗಳ ತಂಡ ಹರಸಾಹಸ ಮಾಡುತ್ತಿವೆ. ಯೂ ಟ್ಯೂಬ್‌ನಲ್ಲಿ ಸುಮ್ಮನೆ ಒಮ್ಮೆ ಹುಡುಕಿ ನೋಡಿ. ಸಾಲುಗಟ್ಟಲೆ ವಿಡಿಯೋಗಳು ತೆರಕೊಳ್ಳುತ್ತವೆ. ಇಂತಹ ವಿಚ್ಛಿದ್ರಕಾರಿ ಪ್ರಯತ್ನಗಳ ನಡುವೆ ಹಿಂದೂ ಅತ್ಯಂತ ಶಾಂತವಾಗಿದ್ದಾನೆ. ಕುರುಕ್ಷೇತ್ರ ಕದನದಲ್ಲೂ ಶಾಂತವಾಗಿದ್ದವ ಕೃಷ್ಣ ಮಾತ್ರ, ನೆನಪಿರಲಿ.
ಹೌದು ಮತ್ತೆ. ಗೋವಾದ ಸನಾತನ ಸಂಸ್ಥೆಯೊಂದರಲ್ಲಿಯೇ ಸಾವಿರಕ್ಕೂ ಮಿಕ್ಕಿ ಪೂರ್ಣಾವಧಿ ಕಾರ್ಯಕರ್ತರಿದ್ದಾರೆ. ಅಷ್ಟೂ ಜನ ಅತೀವ ಶ್ರದ್ಧೆಯಿಂದ ನಾನು ಜಪ ಮಾಡುತ್ತ ಭಗವಂತನ ಶಕ್ತಿಯನ್ನು ಪ್ರವಾಹವಾಗಿ ಹರಿಸುವಲ್ಲಿ ತೊಡಗಿದ್ದಾರೆ. ಅವರಿಗೆ ನಂಬಿಕೆ ಇರುವುದು ಇಂದಿನ ರಾಜಕಾರಣಿಗಳ, ಅಧಿಕಾರಿಗಳ ಮೇಲಲ್ಲ, ಸಾಕ್ಷಾತ್ ಈಶ್ವರನ ಮೇಲೇ!
ಸರಿಸುಮಾರು ಅವರಂತೆಯೇ ಕೆಲಸ ಮಾಡುತ್ತ ಸನಾತನ ಧರ್ಮದ ಪುನಸ್ಥಾಪನೆಗೆ ಗುಪ್ತವಾಹಿನಿಯಾಗಿ ಕೆಲಸ ಮಾಡ್ತಿರುವವರು ಬ್ರಹ್ಮ ಕುಮಾರಿಯರು. ರಾಜಸ್ಥಾನದ ಮೌಂಟ್ ಅಬುವಿನಲ್ಲಿ ಕೇಂದ್ರಸ್ಥಾನ ಹೊಂದಿರುವ ಈ ಸಂಸ್ಥೆಗೆ ಜಗತ್ತಿನಲ್ಲಿಯೇ ಮತ್ತೊಂದು ಪರ್ಯಾಯವಿಲ್ಲ. ಹೆಚ್ಚೂಕಡಿಮೆ ಹತ್ತು ಸಾವಿರ ಜನ ಪೂರ್ಣಾವಧಿ ಸ್ವಯಂಸೇವಕರನ್ನು ಹೊಂದಿರುವ ಈ ಸಂಸ್ಥೆಯ ಪೂರ್ಣ ಮೇಲುಸ್ತುವಾರಿ ಹೆಣ್ಣು ಮಕ್ಕಳದೇ. ಅತ್ಯಂತ ಹಿರಿಯರಾಗಿರುವ ದಾದಿಯರ ಮಾತೇ ಇಲ್ಲಿ ಅಂತಿಮ. ವಿದೇಶಗಳಲ್ಲೂ ಪ್ರಭಾವಿಯಾಗಿರುವ ಈ ಸಂಸ್ಥೆ ವಿಸ್ತಾರವಾಗುತ್ತಿದೆಯಷ್ಟೇ ಅಲ್ಲ, ಹಳ್ಳಿಗಳನ್ನೂ ತಲುಪಿ ಆಳಕ್ಕೂ ಇಳಿಯುತ್ತಿದೆ.
ದಕ್ಷಿಣದತ್ತ ಮುಖ ಮಾಡಿದರೆ, ಮಾತಾ ಅಮೃತಾನಂದಮಯಿ ಮೂರ‍್ನಾಲ್ಕು ಸಾವಿರ ತ್ಯಾಗಿಗಳ ಸಹಾಯದಿಂದ ಸನಾತನ ಧರ್ಮದ ಮರೆತುಹೋದ ವೈಭವವನ್ನು ಮರಳಿ ತರುವ ಯತ್ನದಲ್ಲಿ ನಿರತರಾಗಿದ್ದಾರೆ. ಅವರು ಶಿಕ್ಷಣ ಕ್ಷೇತ್ರವನ್ನು ಅಪ್ಪಿಕೊಂಡ ಮೇಲೆ ಕ್ರಿಶ್ಚಿಯನ್ನರ ಶಾಲೆಗಳನ್ನು ಜನ ಮರೆತೇಹೋಗಿದ್ದಾರೆ. ಬಡ ಬೆಸ್ತರ ಜೋಪಡಿಯಿಂದ ಭಾರತ ಮಾತೆ ಮೈದಳೆಯುತ್ತಾಳೆ ಎಂದಿದ್ದರಲ್ಲ ಸ್ವಾಮಿ ವಿವೇಕಾನಂದರು, ಹಾಗೆ ಬೆಸ್ತರ ಗುಡಿಸಿಲಿನಿಂದಲೇ ಬಂದ ಅಮ್ಮ, ಇಂದು ಪ್ರತಿಯೊಬ್ಬರಿಗೂ ಅಮ್ಮ.
ಹೇಳಬೇಕಾದ್ದು ಸಾಕಷ್ಟಿದೆ. ಬುದ್ಧಿವಂತ ಶ್ರೀಮಂತ ವರ್ಗವನ್ನು ಮಣಿಸಿ ಧರ್ಮದ ಮೌಲ್ಯಗಳತ್ತ ಎಳೆದು ತರುತ್ತಿರುವ ರವಿಶಂಕರ್ ಗುರೂಜಿ, ಯೋಗದಿಂದಲೇ ಹೃದಯ ಸೂರೆಗೊಂಡ ರಾಮದೇವ್ ಬಾಬಾ, ಪ್ರವಚನಗಳಿಂದ ಹಳ್ಳಿಗರಲ್ಲಿ ಮತ್ತೆ ಚೈತನ್ಯ ತುಂಬುತ್ತಿರುವ ಮುರಾರಿ ಬಾಪು, ಆಸಾರಾಮ್ ಬಾಪು ಇವರೆಲ್ಲ ಹಿಂದೂ ಧರ್ಮದ ಮೂಲಸ್ರೋತಕ್ಕೆ ಶಕ್ತಿಯೂಡುತ್ತಿರುವವರೇ. ಇನ್ನು ರಾಮಕೃಷ್ಣಾಶ್ರಮ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳ ಈ ಬಗೆಯ ಸೇವಾಕಾರ್ಯಗಳಿಗಂತೂ ನೂರು ವರ್ಷಗಳಷ್ಟು ಇತಿಹಾಸವಿದೆ.
ಇವರೆಲ್ಲ ಬರಿಯ ಧರ್ಮ ಬೋಧನೆ ಮಾಡಿ ಸುಮ್ಮನಾಗುವವರಲ್ಲ. ಸಮಾಜದ ಮೂಲಧನ ವೃದ್ಧಿಸುವಲ್ಲಿ ತೊಡಗಿರುವವರು. ಸನಾತನ ಸಂಸ್ಥೆ ಆಧ್ಯಾತ್ಮಿಕ ಸಂಶೋಧನೆಗೆ ವಿದೇಶೀಯರನ್ನೆ ಹಚ್ಚಿದೆ. ಬ್ರಹ್ಮ ಕುಮಾರಿಯರ ಸಂಘಟನೆ ಜಗತ್ತಿಗೇ ಮಾದರಿಯಾಗುವಂತಹ ಸೌರ ಶಕ್ತಿಯ ಸಂಶೋಧನೆಯಲ್ಲಿ ನಿರತವಾಗಿದೆ. ಮಾತಾ ಅಮೃತಾನಂದಮಯಿ ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಅತ್ಯಾಧುನಿಕ ಚಿಕಿತ್ಸೆ ಕೊಡಿಸುವ ಯೋಜನೆಯಲ್ಲಿ ಪೂರ್ಣ ಶಕ್ತಿ ಹಾಕಿದ್ದರೆ, ರಾಮದೇವ್ ಬಾಬಾ ಆಯುರ್ವೇದದ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ.
ಹಿಂದೂ ಧರ್ಮವನ್ನು ಅನುಸರಿಸುವವರು ಜೀವ ಉಳಿಸುವಲ್ಲಿ, ಸ್ನೇಹ ಬೆಳೆಸುವಲ್ಲಿ ನಿರತರಾಗುವರು. ಸದ್ಯಕ್ಕಂತೂ ಬೇರೆಯವರ‍್ಯಾರೂ ಹಾಗೆ ಕಾಣುತ್ತಿಲ್ಲ. ಅದಕ್ಕೇ ಹಿಂದೂ ರಾಷ್ಟ್ರದ ನಿರ್ಮಾಣವಾದರೆ ಅದು ಜಗತ್ತಿಗೇ ಒಳಿತನ್ನು ಮಾಡುವಂಥದ್ದಾಗುವುದು. ಅದು ಭಗವಂತನ ಇಚ್ಛೆಯೂ ಹೌದು.
ಅದಕ್ಕೇ, ಈ ಧರ್ಮನಾಶಕ್ಕೆ ಕಟಿಬದ್ಧರಾದವರು ನೂರು ಜನ ಬಂದರೂ ಉಳಿಸಲು ನೂರೊಂದನೆಯವನೊಬ್ಬ ಸಾಕು ಅನ್ನೋದು. ಅದೇ ವಿಶ್ವಾಸ.. ಅದೇ ಬೆಳ್ಳಿರೇಖೆ.

Leave a Reply