ವಿಭಾಗಗಳು

ಸುದ್ದಿಪತ್ರ


 

ನಮ್ಮೊಳಗಿನ ಭಗೀರಥ ಜಾಗೃತವಾಗಲಿ

ನೀರಿನ ಹೆಸರಲ್ಲಿ ಈ ದೇಶದಲ್ಲಿ ಬಲುದೊಡ್ಡ ಲೂಟಿಯೇ ನಡೆಯುತ್ತಿದೆ. ಪ್ರತಿ ವರ್ಷದ ಬಜೆಟ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ಎತ್ತಿಡೋದು, ಅದಕ್ಕೆ ಹಣ ಹೊಂದಿಸಲು ವಿದೇಶೀ ಸಾಲ ಪಡೆಯೋದು ಅದನ್ನು ಗುತ್ತಿಗೆದಾರರಿಗೆ ಹಂಚಿ ಲೂಟಿ ಮಾಡಲು ಪೂರ್ಣ ವ್ಯವಸ್ಥೆ ಮಾಡಿಕೊಡೋದು. ಅತ್ತ ಯೋಜನೆಯೂ ಮುಗಿಯಲಿಲ್ಲ ಇತ್ತ ಪಡೆದ ಸಾಲವೂ ಹೋಯ್ತು.

bhagiratha

ಭಗೀರಥನ ಕಥೆ ಗೊತ್ತಲ್ಲ. ಅವನ ಪೂರ್ವಜರು ಕಪಿಲ ಮುನಿಯ ತಪಸ್ಸಿಗೆ ಭಂಗ ತಂದು ಬೆಂಕಿಗೆ ಆಹುತಿಯಾಗಿ ಬೂದಿಯಾಗಿಬಿಟ್ಟಿದ್ದರು. ಅವರಿಗೆ ಸದ್ಗತಿ ದೊರೆಯಲೆಂಬ ಕಾರಣದಿಂದ ತಪಸ್ಸಿಗೆ ನಿಂತ ಆತ ದೇವ ಗಂಗೆಯನ್ನು ಭೂಮಿಗೆ ಹರಿಯುವಂತೆ ಮಾಡಿದ. ಆತ ಸಾವಿರ ವರ್ಷಗಳ ತಪಸ್ಸು ಮಾಡಿದ ಅಂತಾರೆ. ಈ ತಪಸ್ಸನ್ನು ಕಾಡಿನೊಳಗೆ ಒಬ್ಬಂಟಿಯಾಗಿ ಮೂಗು ಮುಚ್ಚಿಕೊಂಡು ಕುಳಿತು ಆತ ಮಾಡಿರಲಾರ. ಹಿಮಾಲಯದಲ್ಲಿ ಅವತರಿಸಿದ ಗಂಗೆಯನ್ನು ದಕ್ಷಿಣಾಭಿಮುಖವಾಗಿ ಹರಿಯುವಂತೆ ಮಾಡಿ ನೆಲವನ್ನು ತೋಯಿಸಲು ಸಾಕಷ್ಟು ಶ್ರಮ ಪಟ್ಟಿರಬೇಕು. ಅವನ ಪೂರ್ವಜರೂ ನಮ್ಮಂತೆಯೇ ನೀರಿನ ಸದ್ಬಳಕೆ ಮಾಡದೇ ಪರಿಸರವನ್ನು ನಾಶಗೈದು ಪ್ರಕೃತಿಯ ಶಾಪಕ್ಕೆ ತುತ್ತಾಗಿಯೇ ಸತ್ತಿರಬೇಕು. ಬಹುಶಃ ಅವರು ಬೂದಿಯಾದರು ಎನ್ನುವಾಗ ನನಗೆ ಕಲ್ಲಿದ್ದಲು ಸುಟ್ಟು ಭೂಮಿಯ ಮೇಲೆ ಆಚ್ಛಾದಿಸುವ ಕಲ್ಲಿದ್ದಲ ಬೂದಿ, ಮ್ಯಾಂಗ್ನೀಸ್ನ್ನು ಭೂಮಿಯಿಂದ ತೆಗೆದಾಗ ಎಲ್ಲೆಡೆ ಹರಡಿಕೊಳ್ಳುವ ಕೆಂಪು ಧೂಳು, ಮರಗಳ ನೆರಳಿಲ್ಲದೇ ಕಾದ ಮರಳ ಕಣದಂತಾಗುವ ಭೂಮೇಲ್ಮೈ ಮಣ್ಣು ಇವೆಲ್ಲವೂ ನೆನಪಾಗುತ್ತದೆ. ಆದರೆ ನಮಗೀಗ ಒಬ್ಬ ಭಗೀರಥ ಸಾಲಲಾರ. ನಾವೇ ಶಾಪಗ್ರಸ್ತರಾಗಿ ಬೂದಿಯಾಗಿಬಿಡುವ ಮುನ್ನ ನಮ್ಮೊಳಗಿನ ಭಗೀರಥ ಜಾಗೃತವಾಗಿಬಿಟ್ಟರೆ ಮತ್ತೆ ಭೂಮಂಡಲವನ್ನು ನಳನಳಿಸುವಂತೆ ಮಾಡಬಹುದು. ಅಂದಹಾಗೆ ನಾನು ಭಗೀರಥನ ಕುರಿತಂತೆ ಹೇಳ ಹೊರಟಿದ್ದು ಅದಕ್ಕಲ್ಲ. ಬಹಳ ಹಿಂದೆ ಉತ್ತರ ಪ್ರದೇಶದ ಮುಖ್ಯ ಮಂತ್ರಿಯಾಗಿದ್ದ ಮಿಶ್ರಾ ಖ್ಯಾತ ನೀರಾವರಿ ತಜ್ಞ ದೇವೀಂದರ್ ಶಮರ್ಾರಿಗೆ ಒಂದು ಸುಂದರ ಕಥೆ ಹೇಳಿದ್ದರಂತೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂತ ಅಷ್ಟೇ.

ಭಗೀರಥ ಗಂಗೆಯನ್ನು ಕರೆತರುವ ಯೋಜನೆಯಲ್ಲಿ ಮಗ್ನನಾಗಿರುವಾಗಲೇ ಆಧುನಿಕ ನೀರಾವರಿ ಇಂಜಿನಿಯರ್ನನ್ನು ಭೇಟಿಯಾದನಂತೆ. ಆತ ಈ ದೈತ್ಯ ಯೋಜನೆಯನ್ನು ಕಂಡು ಗಾಬರಿಯಾಗಿ ಭಗೀರಥನನ್ನು ಈ ಕುರಿತು ವಿಚಾರಿಸಿದ. ತನ್ನ ನಾಲ್ಕು ಪೀಳಿಗೆಯ ಹಿರಿಯರ ನೆಮ್ಮದಿ ಮತ್ತು ಸದ್ಗತಿಗಾಗಿ ಈ ಕೆಲಸ ಮಾಡುತ್ತಿರುವುದಾಗಿ ಆತ ಹೇಳಿದಾಗ ಕಣ್ಣರಳಿಸಿದ ಇಂಜಿನಿಯರ್ ‘ಯೋಜನೆಯ ಹಣದ ಒಂದು ಪಾಲು ನನಗೆ ಕೊಡು ನನ್ನ ಮುಂದಿನ ಹತ್ತು ಪೀಳಿಗೆ ನೆಮ್ಮದಿಯಿಂದ ಇರುವಂತೆ ಮಾಡಿಬಿಡುತ್ತೇನೆ’ ಅಂದನಂತೆ!

ಹೌದು. ಮೇಲ್ನೋಟಕ್ಕೆ ಇದು ತಮಾಷೆಯ ಸಂಗತಿ ಎನಿಸಿದರೂ ಅಕ್ಷರಶಃ ಸತ್ಯ. ನೀರಿನ ಹೆಸರಲ್ಲಿ ಈ ದೇಶದಲ್ಲಿ ಬಲುದೊಡ್ಡ ಲೂಟಿಯೇ ನಡೆಯುತ್ತಿದೆ. ಪ್ರತಿ ವರ್ಷದ ಬಜೆಟ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ಎತ್ತಿಡೋದು, ಅದಕ್ಕೆ ಹಣ ಹೊಂದಿಸಲು ವಿದೇಶೀ ಸಾಲ ಪಡೆಯೋದು ಅದನ್ನು ಗುತ್ತಿಗೆದಾರರಿಗೆ ಹಂಚಿ ಲೂಟಿ ಮಾಡಲು ಪೂರ್ಣ ವ್ಯವಸ್ಥೆ ಮಾಡಿಕೊಡೋದು. ಅತ್ತ ಯೋಜನೆಯೂ ಮುಗಿಯಲಿಲ್ಲ ಇತ್ತ ಪಡೆದ ಸಾಲವೂ ಹೋಯ್ತು. ಇತ್ತೀಚೆಗೆ ರಾಜ್ಯದ ನೀರಾವರಿ ಮಂತ್ರಿ ಎಂ.ಬಿ ಪಾಟೀಲರು ಪತ್ರಿಕಾ ಗೋಷ್ಠಿ ಕರೆದು ಸುಮಾರು 1 ಲಕ್ಷಕೋಟಿ ರೂಪಾಯಿಯನ್ನು ನೀರಾವರಿ ಯೋಜನೆಗಳಲ್ಲಿ ಹೂಡುವುದಾಗಿ ಪ್ರಕಟಿಸಿದರು. 2012 ರಲ್ಲಿ 17 ಸಾವಿರ ಕೋಟಿ ಇದ್ದ ಕೃಷ್ಣ ಮೇಲ್ದಂಡೆ ಯೋಜನೆ ಈಗ 50 ಸಾವಿರ ಕೋಟಿ ದಾಟಿದೆ ಎಂದು ಸೇರಿಸುವುದನ್ನು ಮರೆಯಲಿಲ್ಲ. ಹೆಚ್ಚು-ಕಡಿಮೆ ಪ್ರತಿಯೊಂದು ನೀರಾವರಿ ಯೋಜನೆಯೂ ಬಲು ದೊಡ್ಡ ನಾಟಕವೇ. ಕಳೆದ 15 ವರ್ಷಗಳಲ್ಲಿ ಭಾರತ ಸಕರ್ಾರ 26 ಸಾವಿರ ಕೋಟಿ ವ್ಯಯಿಸಿ ಅರ್ಧದಷ್ಟು ಗುರಿಯನ್ನೂ ಮುಟ್ಟಲಾಗಲಿಲ್ಲವೆಂದು ಸಿಎಜಿ 2010ರಲ್ಲಿಯೇ ಆರೋಪಿಸಿದೆ. ಅದೇ ವರದಿಯ ಪ್ರಕಾರ 2003 ರಿಂದ 2008ರವರೆಗೆ ಮಂಜೂರಾದ 28 ದೊಡ್ಡ ನೀರಾವರಿ ಯೋಜನೆಗಳಲ್ಲಿ 11 ಕ್ಕೆ ಸೂಕ್ತ ಯೋಜನಾ ವರದಿ, ಸವರ್ೇಗಳಿಲ್ಲದೇ ಒಪ್ಪಿಗೆ ನೀಡಲಾಗಿತ್ತು. ಪೂರ್ಣವಾಗಿದೆ ಎಂದು ಹಣ ಪಡೆದಿದ್ದ ನೂರು ಯೋಜನೆಗಳಲ್ಲಿ 12 ಯೋಜನೆಗಳು ಹಾಳೆಯ ಮೇಲಷ್ಟೇ ಇದ್ದವು. ಭೂಮಿಯ ಮೇಲೆ ಅದರ ಕುರುಹೂ ಇರಲಿಲ್ಲ. ಕನರ್ಾಟಕವೂ ಸೇರಿದಂತೆ 6 ರಾಜ್ಯಗಳಲ್ಲಿ ಮುಕ್ಕಾಲು ಭಾಗದಷ್ಟು ಹಣ ಕಾರ್ಯ ನಿರ್ವಹಣೆಯ ವರದಿ ಪಡೆಯದೇ ಕೊಡಲಾಗಿತ್ತು. 14 ರಾಜ್ಯಗಳಲ್ಲಿ ಗುತ್ತಿಗೆದಾರರಿಗೆ 186 ಕೋಟಿ ರೂಪಾಯಿಯಷ್ಟು ಹಣ ಅನಗತ್ಯವಾಗಿ ಸಂದಾಯವಾಗಿತ್ತು. ಏಳು ವರ್ಷಗಳ ಹಿಂದೆಯೇ ಇಷ್ಟೆಲ್ಲಾ ರಾದ್ಧಾಂತಗಳಾಗಿರಬೇಕಾದರೆ ಈಗಿನ ಕಥೆ ಏನಿರಬೇಕು ಹೇಳಿ. ಕೇಂದ್ರ ಸಕರ್ಾರ ಕಳೆದ ಬಜೆಟ್ನಲ್ಲಿ ನೀರಾವರಿಗೆಂದು ಮೀಸಲಾಗಿಟ್ಟ ಹಣ ಸುಮಾರು 86 ಸಾವಿರ ಕೋಟಿ ರೂಪಾಯಿ. ಅಂದಾಜು ಮಾಡಿ. ನೀರಿನ ಹೆಸರಿನಲ್ಲಿ ಎಷ್ಟೊಂದು ಹಣವಿದೆ. ನೀರಲ್ಲಿ ಹೋಮ ಅಂದರೆ ಇದೇನೇ.

ಇದು ಈ ದೇಶದ ಕಥೆ ಅಂತ ತಿಳಿದುಕೊಳ್ಳಬೇಡಿ. ಆಫ್ರಿಕಾದ ತಾಂಜಾನಿಯಾಕ್ಕೆ ಕುಡಿಯುವ ನೀರಿನ ಯೋಜನೆಗೆಂದು ವಿಶ್ವಬ್ಯಾಂಕು ವ್ಯಯಿಸಿದ ಹಣವೆಲ್ಲವೂ ಅಕ್ಷರಶಃ ಪೋಲಾಗಿ ಹೋಗಿದೆ. ದೊಡ್ಡ ದೊಡ್ಡ ಯೋಜನೆಗಳಲ್ಲಿ ಹಣಕಾಸಿನ ಹರಿವು ದೊಡ್ಡ ಮೊತ್ತದ್ದೇ ಇರುವುದರಿಂದ ಯಾವ ರಾಜಕಾರಣಿಯೂ ಸಣ್ಣ ಸಣ್ಣ ಯೋಜನೆಗಳಲ್ಲಿ ಆಸಕ್ತಿ ತೋರುವುದೇ ಇಲ್ಲ. ತಾಂಜಾನಿಯಾದ ಕುರಿತಂತೆ ವರದಿ ತರಿಸಿಕೊಂಡ ಮೇಲೆ ವಿಶ್ವಬ್ಯಾಂಕಿಗೆ ಈ ವಿಷಯ ನಿಚ್ಚಳವಾಗಿದೆ. ಅವರ ಪ್ರಕಾರ ಯೋಜನೆ ಅನುಷ್ಠಾನಕ್ಕೂ ಮುನ್ನ ತಾಂಜಾನಿಯಾದ 54 ಶೇಕಡಾ ಜನರಿಗೆ ಭಿನ್ನ ಭಿನ್ನ ರೂಪದ ನೀರಿನ ಸೌಲಭ್ಯ ದೊರೆಯುತ್ತಿತ್ತು. ಯೋಜನೆ ಸಂಪೂರ್ಣಗೊಂಡ ನಂತರ ಪಡೆದ ವರದಿಯ ಪ್ರಕಾರ ಈ ಪ್ರಮಾಣ 53 ಶೇಕಡಾಕ್ಕೆ ಇಳಿದಿತ್ತು. ಹಣ ಮಾತ್ರ ಪೂತರ್ಿ ಖಚರ್ಾಗಿತ್ತು!

3

ಕನರ್ಾಟಕದ ಸ್ಥಿತಿಯೂ ಅದೇ. ಕೋಲಾರದ ಬಂಗಾರಪೇಟೆ ತಾಲೂಕಿನ ಯರ್ರ್ರಗೊಳು ಗ್ರಾಮದ ಸುತ್ತಮುತ್ತಲಿನ ಬೆಟ್ಟದಿಂದ ಜಾರಿ ಬಂದು ಕೆಳಗೆ ಶೇಖರಣೆಯಾಗುವ ನೀರು ತಮಿಳುನಾಡಿಗೆ ಹರಿದುಬಿಡುತ್ತದೆ. ಅದನ್ನು ಕೋಲಾರ, ಮಾಲೂರು, ಬಂಗಾರಪೇಟೆಗಳತ್ತ ತಿರುಗಿಸುವ ಪೈಪ್ಲೈನ್ ವ್ಯವಸ್ಥೆಗೆ ಸಕರ್ಾರ ಸಜ್ಜಾಯ್ತು. ಈ ಯೋಜನೆ ರೂಪುಗೊಂಡು ಒಂದಿಡೀ ದಶಕವೇ ಕಳೆಯಿತು. ಯೋಜನೆಯ ಒಟ್ಟಾರೆ ಗಾತ್ರ 280 ಕೋಟಿ ರೂಪಾಯಿ. ಅದಾಗಲೇ 150 ಕೋಟಿ ಬಿಡುಗಡೆಯೂ ಆಯಿತು. ಆ ಹಣದಲ್ಲಿ ಗುತ್ತಿಗೆದಾರರು ಒಂದಷ್ಟು ಪೈಪುಗಳನ್ನು ಖರೀದಿ ಮಾಡಿ ರಸ್ತೆಯ ಇಕ್ಕೆಲಗಳಲ್ಲೂ ಜೋಡಿಸಿಟ್ಟರು. ನೀರು ಹರಿಯಲಿಲ್ಲ, ಕೋಲಾರ ತಣಿಯಲಿಲ್ಲ!

ಇದರ ಹಿಂದು ಹಿಂದೆಯೇ ಮತ್ತೊಂದು ಯೋಜನೆ ಕೈಗೆತ್ತಿಕೊಳ್ಳಲಾಯ್ತು. ಬೆಂಗಳೂರು ನಗರದ ತ್ಯಾಜ್ಯದ ನೀರನ್ನು ಕೆಸಿ ವ್ಯಾಲಿಯಲ್ಲಿ ಸಂಗ್ರಹಿಸಿ ಅದನ್ನು ಮತ್ತೆ ಮತ್ತೆ ಶುದ್ಧೀಕರಿಸಿ ಕೋಲಾರದ ನೂರಾರು ಕೆರೆಗಳಿಗೆ ಹರಿಸಿ ಅಂತರ್ಜಲ ವೃದ್ಧಿಸುವ ಆಲೋಚನೆ. ಕಲ್ಪನೆ ನಿಜಕ್ಕೂ ಚೆನ್ನಾಗಿದೆ. ಆದರೆ ತ್ಯಾಜ್ಯ ನೀರನ್ನು ಸಮರ್ಥವಾಗಿ ಶುದ್ಧೀಕರಿಸದೇ ಹಾಗೆ ಕೆರೆಯಲ್ಲಿ ಇಂಗಿಸಿಬಿಟ್ಟರೆ ಶಾಶ್ವತವಾಗಿ ಅಂತರ್ಜಲವೇ ಕಲುಷಿತವಾಗಿಬಿಡುತ್ತದೆ. ಈ ಯೋಜನೆಯ ಅಂದಾಜು ವೆಚ್ಚ ಹೆಚ್ಚು ಕಡಿಮೆ ಎರಡು ಸಾವಿರ ಕೋಟಿ ರೂಪಾಯಿ. ಅದಾಗಲೇ ಶೇಕಡಾ 40ರಷ್ಟು ಹಣ ಬಿಡುಗಡೆಯೂ ಆಗಿದೆ.

Karanja

‘ಬೀದರ್ನ ಕಾರಂಜಾ ಯೋಜನೆಯಿಂದ ಮುಂದಿನ 18 ತಿಂಗಳೊಳಗೆ 15 ಲಕ್ಷ ಎಕರೆಯಷ್ಟು ಭೂಮಿಗೆ ನೀರು ಸಿಗಲಿದೆ. ಜೆಲ್ಲೆಯ ಶೇಕಡಾ 90 ರಷ್ಟು ಕೆರೆಗಳು ತುಂಬಿ ನಳನಳಿಸಲಿವೆ’ ಎಂದು ಕಳೆದ ನವೆಂಬರ್ನಲ್ಲಿ ಭಾಷಣ ಮಾಡಿದ ನೀರಾವರಿ ಸಚಿವರಿಗೆ ಯೋಜನೆ ಎಷ್ಟು ಮುಂದೆ ಹೋಯ್ತು ಅಂತ ಕೇಳಿ ನೋಡಿ; ನಕ್ಕು ಸುಮ್ಮನಾಗುತ್ತಾರೆ ಅಷ್ಟೇ. 2007 ರಲ್ಲಿ ಟೆಂಡರ್ ಕರೆದಿದ್ದ ಹೊಳಲೂರಿನ ಡ್ರಿಪ್ ಇರಿಗೇಶನ್ ಯೋಜನೆ 2010ರಲ್ಲಿ ಮುಗಿಯಬೇಕಿತ್ತು. 2017 ಕೂಡ ಕಳೆಯುವ ಹೊತ್ತು ಬಂತು. 7 ಕೋಟಿಯ ವೆಚ್ಚದೊಂದಿಗೆ ಶುರುವಾದ ಈ ಯೋಜನೆ 13 ಕೋಟಿ ರೂಪಾಯಿ ದಾಟಿತು. ಕಳೆದ ಅಕ್ಟೋಬರ್ನಲ್ಲಿ ಕಾನೂನು ಸಚಿವ ಜಯಚಂದ್ರ ಈ ವಿಳಂಬದಿಂದಾಗಿ ಕಿರಿಕಿರಿಗೊಂಡು ಪ್ರತಿಕ್ರಿಯಿಸಿದ್ದು ದಾಖಲಾಗಿತ್ತು. 35 ವರ್ಷ ಕಳೆದರೂ ಮುಗಿಯದ ವಾರಾಹಿ ಯೋಜನೆ ಇದಕ್ಕೆ ಜೋಡಿಸಬಹುದಾದ ಮತ್ತೊಂದು ನೀರಾವರಿ ಕಿರಿಕಿರಿ ಅಷ್ಟೇ!

ಆರೇಳು ವರ್ಷಗಳ ಹಿಂದೆ ಅಮಿತ್ ಭಟ್ಟಾಚಾರ್ಯ ಸಿದ್ಧ ಪಡಿಸಿದ ವರದಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾಗಿತ್ತು. ಅದರ ಪ್ರಕಾರ ಭಾರತದ ಕೃಷಿಯ ಶೇಕಡಾ 60 ರಷ್ಟು ನಿರ್ಭರವಾಗಿರೋದು ಭೂ ಮೇಲ್ಮೈಯ ನೀರಾವರಿಯ ಮೇಲೆಯೇ. ಅಂದರೆ ಕೆರೆ, ನದಿ, ಮಳೆಯನ್ನು ನಂಬಿಯೇ ಈ ನಾಡಿನ ಬಹುತೇಕ ಕೃಷಿಕರು ಬದುಕಿರೋದು. ಇವೆಲ್ಲವನ್ನು ಉಳಿಸಿಕೊಳ್ಳಲು ಪ್ರಯತ್ನಿಸದೇ 1991 ರಿಂದ 2007ರವರೆಗೆ ಸಕರ್ಾರಗಳ 1.3 ಲಕ್ಷ ಕೋಟಿರೂಗಳನ್ನು ಬೃಹತ್ ಮತ್ತು ಮಧ್ಯಮ ನೀರಾವರಿ ಯೋಜನೆಗಳಿಗೆ ಖಚರ್ು ಮಾಡಿ ಅಲ್ಪ ಪ್ರಮಾಣದ ಕೃಷಿ ಭೂಮಿಯನ್ನು ವಿಸ್ತರಿಸುವಲ್ಲಿಯೇ ಸೋತು ಹೋಗಿದೆ. ಗಮನಿಸಬೇಕಾದ ಅಂಶವೆಂದರೆ ಕಾಲುವೆಯಿಂದ ನೀರಾವರಿ ಪಡೆದ ಭೂಮಿಯ ಪ್ರಮಾಣದಲ್ಲಿ ಇಳಿತ ಕಂಡಿದೆ. ಅಷ್ಟೇ ಅಲ್ಲ. 2005 ರ ವಿಶ್ವಬ್ಯಾಂಕಿನ ವರದಿಯ ಪ್ರಕಾರ ಕಾಲುವೆಗಳ ಪೋಷಣೆಗೆ ಪ್ರತಿ ವರ್ಷ ಬೇಕಾಗಿರುವ ಹಣ ಸುಮಾರು 17 ಸಾವಿರ ಕೋಟಿ. ಆದರೆ ಭಾರತ ಅದಕ್ಕೆಂದು ಮೀಸಲಿಟ್ಟಿರುವ ಹಣ ಎರಡು ಸಾವಿರ ಕೋಟಿಯೂ ಇಲ್ಲ. ಒಟ್ಟಾರೆ ಗಮನಿಸಬೇಕಾದ ಅಂಶವೇನು ಗೊತ್ತೇ? ದೊಡ್ಡ ಮೊತ್ತದ ಹಣ ವ್ಯಯಿಸಿ ನಾವು ಕಟ್ಟಿದ ಕಾಲುವೆಗಳು, ಡ್ಯಾಂಗಳು ಕಳಪೆ ಕಾಮಗಾರಿಯಿಂದಾಗಿ ಕೆಲವೆಡೆ ಅವು ನೀರು ಹರಿಯುವ ಮುನ್ನವೇ ಹಾಳಾಗಿ ಹೋಗಿರುತ್ತದೆ. ಇನ್ನೂ ಕೆಲವೆಡೆ ಕೆಲವೇ ವರ್ಷಗಳಲ್ಲಿ ಅವು ದುಸ್ಥಿತಿ ತಲುಪುತ್ತವೆ.

ದಕ್ಷಿಣ ಏಷಿಯಾದ ಅಣೆಕಟ್ಟು-ನದಿ-ಜನರ ಕುರಿತಂತ ಸಂಘಟನೆಯೊಂದರ ಪ್ರಮುಖರಾಗಿದ್ದ ಹಿಮಾಂಶು ಠಕ್ಕರ್ ಮಂಡಿಸಿದ ಪ್ರಬಂಧವೊಂದರಲ್ಲಿ ಹೇಳಿದ್ದರು, ‘ಹಳೆಯ ಅಣೆಕಟ್ಟು, ಕಾಲುವೆಗಳಲ್ಲಿ ಅನೇಕವು ಹೂಳು ತುಂಬಿ, ಸೂಕ್ತ ರಕ್ಷಣೆ ಇಲ್ಲದೆ, ಯರ್ರಾಬಿರ್ರಿ ಬಳಕೆಯಿಂದ ಪೂರ್ಣವಾಗಿ ಇಲ್ಲವೇ ಬಹುಪಾಲು ಕೆಲಸ ಮಾಡುವುದನ್ನು ನಿಲ್ಲಿಸಿಬಿಟ್ಟಿದೆ.’ ತಜ್ಞರ ವರದಿ ಹೀಗೆ ಗಾಬರಿಗೊಳ್ಳುವ ಅಂಶವನ್ನು ಮುಂದಿಡುತ್ತಿದ್ದರೂ ನಾವು ಮಾತ್ರ ನೀರಿನ ಯೋಜನೆಗಳಿಗೆ ಸಾವಿರಾರು ಕೋಟಿ ಸುರಿದು ಪ್ರಜ್ಞಾಶೂನ್ಯರಾಗಿ ಬದುಕುತ್ತಿದ್ದೇವೆ.

DSC00835

ಹಾಗೆ ನೋಡಿದರೆ ಭೂಮಿಗೆ ರಂಧ್ರ ಕೊರೆದು ಕೊಳವೆ ಬಾವಿಗಳ ನಿಮರ್ಿಸಿದ್ದೇ ಈ ದೇಶದ ಜಲ ಸಂಬಂಧಿ ಅಧಃ ಪತನದ ಮೊದಲ ಹೆಜ್ಜೆ. ದೂರದಿಂದ ಬಿಂದಿಗೆಗಳಲ್ಲಿ ನೀರನ್ನು ಹೊತ್ತು ತರಬೇಕಾದ ಸ್ಥಿತಿ ಇದ್ದಾಗ ನಮಗೆ ಪ್ರತಿ ಹನಿಯ ಬೆಲೆಯೂ ಗೊತ್ತಿತ್ತು. ಆದರೆ ನೀರು ನೇರವಾಗಿ ಮನೆಯ ನಲ್ಲಿಯವರೆಗೆ ಬರಲಾರಂಭಿಸಿದಾಗ ನಾವು ಮೈಮರೆತೆವು. ನೀರು ಪೋಲಾದರೂ ತಡೆಯಲು ಹೋಗಲಿಲ್ಲ. ರೈತರಿಗೂ ಅಷ್ಟೇ. ಕೆರೆಗಳು, ನದಿಗಳ ನೀರನ್ನು ಬಳಸಬೇಕಾದಾಗ ಅದು ಸಾರ್ವಜನಿಕ ಜಲವ್ಯವಸ್ಥೆ ಎಂಬ ಹೆದರಿಕೆ ಇದ್ದೇ ಇತ್ತು. ಕೊಳವೆ ಬಾವಿಗಳ ಮೇಲೆ ಸ್ವಂತದ ಅಧಿಕಾರ ಸ್ಥಾಪನೆಯಾಯ್ತು. ಅದನ್ನು ಹೇಗೆ ಬೇಕಾದರೂ ಬಳಸಬಹುದೆಂಬ ದುರಹಂಕಾರ ಕೂಡ. ರೈತರ ಬೋರ್ವೆಲ್ಗಳಿಗೆ ಸಬ್ಸಿಡಿ ಕೊಟ್ಟದ್ದಲ್ಲದೇ ಪಂಪುಗಳಿಗೆ ಉಚಿತ ವಿದ್ಯುತ್ತನ್ನು ಸಕರ್ಾರ ಕೊಟ್ಟಿತು. ಪರಿಣಾಮ ಹನಿ ನೀರಿನ ಮೌಲ್ಯ ಅವನಿಗೆ ಮರೆತೇ ಹೋಯ್ತು. ಬಿಟ್ಟಿ ಸಿಕ್ಕಿದಕ್ಕೆ ನಯಾಪೈಸೆ ಕಿಮ್ಮತ್ತಿಲ್ಲ ಅಂತಾರಲ್ಲ, ಹಾಗೆಯೇ ಆಯ್ತು. ಮನೆಯ ಟ್ಯಾಂಕಿನ ನೀರು ತುಂಬಿ ಸೋರಿ ಹೋಗುವಾಗಿನ ಮನೆಯೊಡತಿಯ ಮನೋಭಾವನೆಯಿಂದ ಹಿಡಿದು ಅನವಶ್ಯಕವಾಗಿ ಬೆಳೆಗೆ ಅಧಿಕ ನೀರುಣಿಸುವವರೆಗಿನ ರೈತನ ಮನೋಭಾವನೆಯವರೆಗೆ ಬದಲಾಗಬೇಕಾದ್ದು ಬಹಳ ಇದೆ. ಇದನ್ನೇ ಜಲಜಾಗೃತಿ ಅನ್ನೋದು.

ಇದು ನಿಜಕ್ಕೂ ಸೂಕ್ತ ಸಮಯ. ಜಲ ಸಂರಕ್ಷಣೆಯ ಜವಾಬ್ದಾರಿಯನ್ನು ನಾವೇ ಹೊರೋಣ. ಈ ಬಾರಿ ಬಿದ್ದ ಒಂದೊಂದು ಮಳೆಯ ಹನಿಯನ್ನೂ ಉಳಿಸಿ ಕಾಪಾಡೋಣ. ಎತ್ತಿನ ಹೊಳೆಯ ಯೋಜನೆಯನ್ನು ಜಾರಿಗೆ ತರುವ ಕಲ್ಪನೆಯನ್ನು ಹಿಂದಿನ ಸಕರ್ಾರ ಮುಂದಿಟ್ಟಾಗ ಯೋಜನೆಯ ಗಾತ್ರ 8 ಸಾವಿರ ಕೋಟಿ ಇತ್ತು. ಈಗ ಅದು 13 ಸಾವಿರ ಕೋಟಿಗೇರಿದೆ. ಇಷ್ಟಾಗಿಯೂ ಕೊನೆಗೆ ಫಲಾನುಭವಿ ಕೋಲಾರಕ್ಕೆ ದಕ್ಕೋದು ಹೆಚ್ಚೆಂದರೆ 2 ಟಿಎಂಸಿ ನೀರು ಮಾತ್ರ! ಅದರ ಹತ್ತು ಪಟ್ಟು ನೀರನ್ನು ಈ ಮಳೆಯಲ್ಲಿ ಕೋಲಾರದ ಕೆರೆಗಳು ಹಿಡಿದಿಟ್ಟುಕೊಳ್ಳಬಲ್ಲದು. ಅಲ್ಲಿನ ಬೆಟ್ಟದ ತಪ್ಪಲಿನಲ್ಲಿ ಬಿರು ಬೇಸಿಗೆಯಲ್ಲೂ ನಳನಳಿಸುವ ಕೆರೆಗಳನ್ನು ನೋಡಿದ್ದೇನೆ. ಹೀಗಿರುವಾಗ ಕಬ್ಬಿಣದ ಪೈಪುಗಳಿಗೆ, ಅದನ್ನು ಹೂಳುವ ಹೊಂಡಗಳಿಗೆ ನಮ್ಮ ತೆರಿಗೆಯನ್ನು ವ್ಯಯಿಸುವ ಈ ಯೋಜನೆಗಳಿಗೆ ಕಡಿವಾಣ ಹಾಕಲೇಬೇಕು.

ಕಾಮರ್ೋಡದ ನಡುವೆಯೂ ಬೆಳ್ಳಿಗೆರೆ ಯಾವುದು ಗೊತ್ತಾ? ಇತ್ತೀಚೆಗೆ ತುಂಗಭದ್ರಾಕ್ಕೆ ಜಲಾಶಯದಲ್ಲಿ ತುಂಬಿದ್ದ ಹೂಳನ್ನೆತ್ತಲು ರೈತರೇ ಮುಂದಾಗಿದ್ದು ಮತ್ತು ಅದಕ್ಕೆ ಒಂದಷ್ಟು ಸಂತರು ನೇತೃತ್ವ ವಹಿಸಿದ್ದು. ಸಕರ್ಾರವನ್ನು ಕೇಳಿಕೊಂಡು, ಬೇಡಿಕೊಂಡು ಸಾಕಾದ ರೈತ ತಾನೇ ಶ್ರಮದಾನ ಮಾಡಿ ಹೂಳೆತ್ತಲು ನಿಂತಿದ್ದ. ನಮ್ಮೊಳಗಿನ ಭಗೀರಥ ಜಾಗೃತವಾಗಿದ್ದರ ಸಂಕೇತ ಇದು.

Leave a Reply