ವಿಭಾಗಗಳು

ಸುದ್ದಿಪತ್ರ


 

ನಮ್ಮ ಅಧ್ಯಕ್ಷ ಪತ್ನಿಯರೇಕೆ ಹಾಗಿಲ್ಲ!?

ನಮ್ಮ ಪ್ರಧಾನ ಮಂತ್ರಿಗಳ ಮನೆಗೆ ಯಾರಾದರೂ ಹೋಗುತ್ತಾರೇನು? ನಮ್ಮೆಲ್ಲ ರಾಜಕಾರಣಿಗಳು ಅಷ್ಟಷ್ಟು ದೊಡ್ಡ ಬಂಗಲೆಗಳಲ್ಲಿ ಇರುತ್ತಾರಲ್ಲ, ಅದನ್ನು ಎಂದಾದರೂ ಸಾಮಾಜಿಕ ಚಟುವಟಿಕೆಗೆ ಬಳಸಿದ್ದಾರ? ನಮ್ಮಲ್ಲಿ ರಾಜಪತ್ನಿಯರೆಂದರೆ ಸಹಿ ಹಾಕಲು ಗಂಡನ ಮೇಲೆ ಪ್ರಭಾವ ಬೀರುವವರು ಅಂತಲಷ್ಟೆ!

ಪ್ರಧಾನಿ ಮನಮೋಹನ ಸಿಂಗರ ಪತ್ನಿಯ ಹೆಸರೇನು? ಎಂದು ಕೇಳಿದರೆ ಈ ದೇಶದ ಅದೆಷ್ಟು ಮಂದಿ ಸರಿಯಾದ ಉತ್ತರ ಕೊಡಬಲ್ಲರು ಹೇಳಿ? ರಾಜ್ಯದಲ್ಲಿ ಜಗದೀಶ್ ಶೆಟ್ಟರ್ ಹಲವಾರು ತಿಂಗಳಿಂದ ಮುಖ್ಯಮಂತ್ರಿಯಾಗಿದ್ದಾರಲ್ಲ, ಅವರ ಶ್ರೀಮತಿಯವರ ಬಗ್ಗೆ ಯಾರಿಗಾದರೂ ಗೊತ್ತಿದೆಯಾ? ಸಿ.ಎಮ್, ಪಿ.ಎಮ್‌ಗಳ ಹೆಂಡತಿಯರ ಬಗ್ಗೆ ಗೊತ್ತಿರಬೇಕಾದರೂ ಯಾಕೆ ಅಂತಾರೆ. ದು ಬಿಡಿ. ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾನ ಹೆಂಡತಿಯ ಹೆಸರು ಕೇಳಿ ನೋಡಿ. ಮಿಷೆಲ್ ಹೆಸರು ಸರಕ್ಕನೆ ಹೊರಡುತ್ತೆ. ಜಾರ್ಜ್ ಬುಷ್‌ರ ಕೈಹಿಡಿದವರು ಯಾರು ಅನ್ನೋದು ಜಗತ್ತಿನ ಅನೇಕ ರಾಷ್ಟ್ರಗಳಿಗೆ ಗೊತ್ತಿದೆ. ಕ್ಲಿಂಟನ್ ನೇಪಥ್ಯಕ್ಕೆ ಸರಿದರೂ ಹಿಲರಿ ಕ್ಲಿಂಟನ್ ಮಾತ್ರ ಇನ್ನೂ ಕಾರ್ಯಶೀಲಳಾಗಿಯೇ ಇದ್ದಾರೆ.
ಅಮೆರಿಕಾದಲ್ಲಿ ಅಧ್ಯಕ್ಷನಾಗುವುದೆಂದರೆ ಅದೊಂದು ಪದವಿ ಮಾತ್ರ ಅಲ್ಲ, ಜವಾಬ್ದಾರಿಯೂ ಕೂಡ. ಅಧ್ಯಕ್ಷರ ಧರ್ಮಪತ್ನಿಗೂ ಅಷ್ಟೇ. ಅದು ಗೌರವ ಮತ್ತು ಜವಾಬ್ದಾರಿ. ಹೀಗಾಗಿಯೇ ಅಲ್ಲಿಯ ಅಧ್ಯಕ್ಷರು ಪತ್ನಿಯ ವಿಷಯದಲ್ಲಿ ದಾರಿ ತಪ್ಪಿದರೆ ಅಲ್ಲಿಯ ಜನ ಸಹಿಸುವುದಿಲ್ಲ.

1358809082_michelle-barack-obama-467ಸುಮ್ಮನೆ ಒಮ್ಮೆ ಮಿಷೆಲ್ ಒಬಾಮಾರ ಬದುಕು ಅವಲೋಕಿಸಿ ನೋಡಿ. ಗಂಡ ಆಡಳಿತಾತ್ಮಕ ವಿಚಾರಗಳಲ್ಲಿ ಮುಳುಗಿ ಹೋಗಿದ್ದರೆ ಈಕೆ ಅಮೆರಿಕನ್ನರ ಬದುಕು ರೂಪಿಸುವಲ್ಲಿ ಕ್ರಿಯಾಶೀಲರು. ಇತ್ತೀಚೆಗಷ್ಟೆ ಅಮೆರಿಕಾದಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆ ಕುರಿತು ಕಾಳಜಿ ವಹಿಸಿದ ಮಿಷೆಲ್, ’ಗೆಟ್ ಅಪ್ ಅಂಡ್ ಗೋ’ ಎಂಬ ಚಳವಳಿಯನ್ನೆ ಆರಂಭಿಸಿದ್ದಾರೆ. ಶ್ವೇತ ಭವನದ ಹಿಂದಿನ ಹುಲ್ಲು ಹಾಸಿನ ಮೇಲೆ ಸಾವಿರಾರು ಮಂದಿಯನ್ನು ಸೇರಿಸಿ ಯೋಗ ದೀಕ್ಷೆಯನ್ನು ನೀಡಿದ್ದಾರೆ. ಬೆಳಗ್ಗೆ ಬೇಗನೆದ್ದು ಹಾಸಿಗೆ ಬಿಟ್ಟು ಹೊರಡಬೇಕೆಂದು ತಾಕೀತು ಮಾಡಿದ್ದಾರೆ. ಆಕೆಯ ಈ ನಡೆ ಅಮೆರಿಕಾದಲ್ಲಿ ದೊಡ್ಡ ಸಂಚಲನವನ್ನೆ ಉಂಟು ಮಾಡಿಬಿಟ್ಟಿದೆ.
ಈ ಹಿಂದೆ ಇದೇ ಕಾರಣಕ್ಕಾಗಿ ಆಕೆ ಶುರು ಮಾಡಿದ್ದ ’ಹೆಲ್ತಿ ಈಟಿಂಗ್’ ಕೂಡ ಭಾರೀ ಸದ್ದು ಮಾಡಿತ್ತು. ಸಾವಯವ ಕೃಷಿ ಅಂತ ನಾವು ಜೋರುಜೋರಾಗಿ ಮಾತನಾಡುತ್ತೇವಲ್ಲ, ಅಮೆರಿಕಾದ ಈ ಪ್ರಥಮ ಮಹಿಳೆ ಬಲು ಹಿಂದೆಯೇ ನಮ್ಮ ಈ ಚಿಂತನೆಗೆ ಮನ ಸೋತು ಅಲ್ಲಿಯೂ ಶುದ್ಧ ಆಹಾರದ ಜಾಗೃತಿಗೆ ಯೋಜನೆ ರೂಪಿಸಿದ್ದರು. ಆಕೆಯ ಈ ಯೋಜನೆಯನ್ನು ರಕ್ಷಣಾ ಇಲಾಖೆ ಕೂಡ ಬಹಳ ಪ್ರಶಂಸೆ ಮಾಡಿತ್ತು. ಕಾರಣವೇನು ಗೊತ್ತೆ? ಪಾಪ! ಸೈನ್ಯಕ್ಕೆ ಸೇರಬೇಕಾದ ತರುಣರೆಲ್ಲ ಬೊಜ್ಜು ಬೆಳೆಸಿಕೊಂಡು ಕೂತುಬಿಟ್ಟರೆ ಸೈನ್ಯದ ಕಥೆ ಏನಾಗಬೇಕು ಹೇಳಿ! ಮಿಷೆಲ್ ಈಗ ಅವರ ಪಾಲಿಗೆ ರಾಮ ಬಾಣ.
ಜನ ಆಕೆಯ ಮಾತನ್ನು ಸುಮ್ಮಸುಮ್ಮನೆ ಕೇಳುತ್ತಿಲ್ಲ. ಈ ಹಿಂದೆ ಆಕೆ ಸೈನಿಕ ಕುಟುಂಬಗಳಿಗೆ ಸಹಾಯ ಮಾಡುತ್ತ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದರು. ಕೆಲಸ ಮಾಡುವ ಹೆಣ್ಣು ಮಕ್ಕಳು ಕಚೇರಿ, ಮನೆ ಎರಡನ್ನೂ ಸಂಭಾಳಿಸುವ ಕುರಿತಂತೆ ರಾಷ್ಟ್ರ ಮಟ್ಟದಲ್ಲಿ ಚರ್ಚೆ ಮಾಡುತ್ತಾ ಸ್ವತಃ ತಾವೇ ಉದಾಹರಣೆಯಾಗಿ ನಿಂತರು. ಹೆಣ್ಣು ಮಕ್ಕಳಲ್ಲಿ ರಾಷ್ಟ್ರ ಪ್ರಜ್ಞೆ ಮೂಡಿಸುವ ಕುರಿತಾಗಿಯಂತೂ ಆಕೆಯ ಪ್ರಯಾಸ ಬಲು ದೊಡ್ಡದು.
ಮೊನ್ನೆ ಇತ್ತೀಚೆಗೆ ಅಲ್ಲಿನ ಶಾಲೆಗಳಲ್ಲಿ ಹೆಚ್ಚುತ್ತಿರುವ ಬಾಲಾಪರಾಧ ಬಗ್ಗೆ ಆಕೆ ನಡೆಸಿದ ಕಾರ್ಯಕ್ರಮವಂತೂ ಇಡಿಯ ಜಗತ್ತಿಗೇ ಮಾದರಿ. ಭವಿಷ್ಯದ ಜನಾಂಗಕ್ಕೆ ಸೂಕ್ತ ದಾರಿ ತೋರುವ ವ್ಯವಸ್ಥೆಗೆ ಹಣ ಒಟ್ಟುಗೂಡಿಸುವ ನಿಟ್ಟಿನಲ್ಲಿ ಸಿರಿವಂತರನ್ನು ಸೇರಿಸಿ ಆಕೆ ನೀಡಿದ ಭಾಷಣವನ್ನು ಕೇಳಿಯಂತೂ ಅನೇಕರು ಕಣ್ಣೀರು ಸುರಿಸಿದ್ದಾರೆ. ಗಂಡ ಹೆಂಡಿರಿಬ್ಬರೂ ದುಡಿಮೆಗೆ ಹೊರಹೋಗುವುದರ ಜೊತೆಗೆ ಮನೆಯನ್ನೂ ಸಂಭಾಳಿಸಬೇಕು, ಮಕ್ಕಳಿಗೆ ಕನಸು ಕಟ್ಟಿಕೊಡಬೇಕು ಎಂಬ ಆಕೆಯ ಮಾತಿಗೆ ಎಲ್ಲರೂ ತಲೆದೂಗಿದ್ದಾರೆ. ಈ ಕುರಿತಂತೆ ಆಲೋಚಿಸುವುದು ಅಕ್ಷರಶಃ ನೈತಿಕ ಕರ್ತವ್ಯವೆಂದು ಆಕೆ ರಾಷ್ಟ್ರಕ್ಕೆ ಮನದಟ್ಟು ಮಾಡಿಸಿದ್ದಾರೆ. ಅಲ್ಲಿನ ಕೆಲ ಸಿರಿವಂತರೀಗ ಈ ನಿಟ್ಟಿನಲ್ಲಿ ಹಣ ಹೂಡಿ ಕೆಲಸ ಮಾಡಲು ಶುರುವಿಟ್ಟಿದ್ದಾರೆ.
ಮಿಷೆಲ್‌ರ ಆಸಕ್ತಿಯ ಕ್ಷೇತ್ರ ವಿಸ್ತಾರವಾದುದು. ಶ್ವೇತ ಭವನಕ್ಕೆ ಎಲ್ಲೆಡೆಯಿಂದ ಆಯ್ದು ಕರೆ ತಂದ ಎಂಭತ್ತು ಮಕ್ಕಳೊಂದಿಗೆ ತಾನೂ ಸೇರಿ ’೪೨’ ಎಂಬ ಸಿನೆಮಾ ನೋಡಿದ್ದಾರೆ. ರಾಬಿನ್‌ಸನ್ ಛಲವಂತನಾಗಿ ಮಾಡುವ ಸಾಧನೆಯ ಅನಾವರಣ ಈ ಚಿತ್ರದ ವಷ್ತು. ಚಿತ್ರ ನೋಡಿ ಮುಗಿದ ಮೇಲೆ ಅದರ ಬಗ್ಗೆ ಮಕ್ಕಳೆದುರು ಪ್ರೇರಣಾದಾಯಿಯಾಗಿ ಮಾತನಾಡಿದ ಮಿಷೆಲ್, ಇದು ಬರೀ ಸಿನೆಮಾ ಅಲ್ಲ, ಬದುಕು ಎಂದು ಹೇಳಿ, ಸ್ವತಃ ರಾಬಿನ್‌ಸನ್ ಅನ್ನು ಕರೆಸಿ ಮಕ್ಕಳೊಂದಿಗೆ ಮಾತನಾಡುವ ಏರ್ಪಾಟು ಮಾಡಿದ್ದಾರೆ. ಭವಿಷ್ಯದ ಜನಾಂಗದ ಬಗ್ಗೆ ಆಕೆಯ ಕನಸು ಎಂಥದ್ದಿರಬಹುದೆಂದು ಒಂದು ಕ್ಷಣ ಯೋಚಿಸಿ ನೋಡಿ.
ಈಗ ಸ್ವಲ್ಪ ಭಾರತಕ್ಕೆ ಬನ್ನಿ. ನಮ್ಮ ಪ್ರಧಾನ ಮಂತ್ರಿಗಳ ಮನೆಗೆ ಯಾರಾದರೂ ಹೋಗುತ್ತಾರೇನು? ನಮ್ಮೆಲ್ಲ ರಾಜಕಾರಣಿಗಳು ಅಷ್ಟಷ್ಟು ದೊಡ್ಡ ಬಂಗಲೆಗಳಲ್ಲಿ ಇರುತ್ತಾರಲ್ಲ, ಅದನ್ನು ಎಂದಾದರೂ ಸಾಮಾಜಿಕ ಚಟುವಟಿಕೆಗೆ ಬಳಸಿದ್ದಾರ? ನಮ್ಮಲ್ಲಿ ರಾಜಪತ್ನಿಯರೆಂದರೆ ಸಹಿ ಹಾಕಲು ಗಂಡನ ಮೇಲೆ ಪ್ರಭಾವ ಬೀರುವವರು ಅಂತ! ಹೆಂಡತಿಯ ಅಣ್ಣ ತಮ್ಮಂದಿರದಂತೂ ಬಲು ದೊಡ್ಡ ಕಾರುಬಾರು. ಅನೇಕ ಮಂತ್ರಿಗಳು, ಶಾಸಕರು ಸ್ವಂತ ಅಣ್ಣ ತಮ್ಮಂದಿರಿಗಿಂತಲೂ ಹೆಚ್ಚು ಅವರನ್ನೆ ನಂಬಿಕೊಳ್ಳೋದು! ಮಿಷೆಲ್ ಗ್ರೇಟ್ ಅನ್ನಿಸೋದು ಅದಕ್ಕೇ. ಆಕೆ ಗಂಡನ ಮೇಲೆ ಮಾತ್ರವಲ್ಲ, ಇಡಿಯ ಅಮೆರಿಕಾದ ಮೇಲೆ ಪ್ರಭಾವ ಬೀರುತ್ತಾರೆ. ಆದರೆ ಅದು ರಾಷ್ಟ್ರಪ್ರಜ್ಞೆಯ ಕುರಿತಂತೆ ಮಾತ್ರ.

LauraBush6ಇದು ಬರೀ ಮಿಷೆಲ್ ಕಥೆಯಷ್ಟೆ ಅಲ್ಲ. ಲಾರಾ ಬುಷ್ ಕೂಡ ಹೀಗೆಯೇ ಇದ್ದರು. ಬಹುಶಃ ಒಂದು ತೂಕ ಹೆಚ್ಚು. ಆಕೆಯ ಕ್ಯಾಂಪೇನ್‌ಗಳು ವಿಶೆಷವಾಗಿರುತ್ತಿದ್ದವು. ತಾಯಂದಿರಿಗೆ ಆಕೆ ಕೊಟ್ಟ ಕರೆ, ’ಮಕ್ಕಳಿಗಾಗಿ ಸಮಯ ಕೊಡಿ’ ಇರಬಹುದು, ಸಿರಿವಂತರಿಗೆ ಬಡ ಮಕ್ಕಳನ್ನು ಸಾಕಲು ಪ್ರೇರಣೆ ನೀಡುವ ’ಅಡಾಪ್ಟ್ ಎ ಚೈಲ್ಡ್’ ಇರಬಹುದು- ಇವು ಅಮೆರಿಕಾಕ್ಕೆ ಹೊಸ ತಿರುವು ನೀಡಿದವು. ಇನ್ನು, ಮನೆಯ ಜನರೆಲ್ಲ ಒಟ್ಟಿಗೆ ಕೂತು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕೆಂಬುದು ವ್ಯಾಪಕ ಪ್ರಚಾರ ಪಡೆದ ಆಕೆಯ ಆಂದೋಲನಗಳಲ್ಲಿ ಒಂದು. ಹಾಗೆ ಕುಳಿತು ಓದುವಾಗ ಚಿಂತನೆಗಳ ವಿನಿಮಯ ಸಾಧ್ಯವಾಗುತ್ತದೆ ಎನ್ನುವುದು ಆಕೆಯ ಅಭಿಪ್ರಾಯವಾಗಿತ್ತು. ಆಕೆ ಶುರು ಮಾಡಿದ ರಾಷ್ಟ್ರೀಯ ಪುಸ್ತಕ ಮೇಳದ ಕಲ್ಪನೆ ಪುಸ್ತಕ ವ್ಯಾಪಾರಿಗಳನ್ನು – ಓದುಗರನ್ನು ಹತ್ತಿರಕ್ಕೆ ತಂದ ಅದ್ಭುತ ಪ್ರಯೋಗ. ಜಗತ್ತಿನ ಅನೇಕ ರಾಷ್ಟ್ರಗಳಿಗೆ ಹಬ್ಬಿಕೊಂಡ ಪ್ರಯೋಗ ಅದು. ಸಂಗೀತ ಮತ್ತು ದೇಶಭಕ್ತಿ ಎರಡನ್ನೂ ಶಾಲಾ ಮಕ್ಕಳಲ್ಲಿ ಚಿಗುರಿಸುವುದಕ್ಕಾಗಿ ಲಾರಾ ’ರಾಷ್ಟ್ರಗೀತೆಯ ಯೋಜನೆ’ಯನ್ನು ರೂಪಿಸಿದ್ದರು. ಇದು ಅಮೆರಿಕಾದಲ್ಲಿ ಹೊಸ ಅಲೆಯನ್ನೆ ಎಬ್ಬಿಸಿತ್ತು. ಅಲ್ಜೈಮರ‍್, ಕ್ಯಾನ್ಸರ್ ಹಾಗೂ ಹೃದ್ರೋಗಗಳ ಕುರಿತಂತೆ ಅಮೆರಿಕದಲ್ಲಿ ಜಾಗೃತಿ ಮೂಡಿಸಲು ಹಲವು ಯೋಜನೆಗಳನ್ನು ಹಾಕಿಕೊಂಡು ಹೊಸ ಭಾಷ್ಯ ಬರೆದಿದ್ದರು ಲಾರಾ. ಮಲೇರಿಯಾ ಕುರಿತಂತೆ ಜಾಗೃತಿ ಮೂಡಿಸಲು ಆಫ್ರಿಕಾಕ್ಕೆ, ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲು ಮೊಜಾಂಬಿಯಾದಂಥ ದೇಶಗಳಿಗೆ ಹೋಗಿ ಬಂದರು. ಆಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳ ಮೇಲೆ ತಾಲಿಬಾನಿಗಳು ನಡೆಸುತ್ತಿದ್ದ ದುರಾಚಾರದ ಅಧ್ಯಯನ ಮಾಡಿ, ಅಲ್ಲಿನ ರೇಡಿಯೋದಲ್ಲಿ ಭಾಷಣ ಮಾಡಿದ ಗಟ್ಟಿಗಿತ್ತಿ ಆಕೆ. ಅಮೆರಿಕಾದಲ್ಲಿ ಅಧ್ಯಕ್ಷರನ್ನುಳಿದು, ವಾರವಾರವೂ ರೇಡಿಯೋದಲ್ಲಿ ಮಾತನಾಡಿದ ಮೊದಲ ಮಹಿಳೆ ಆಕೆಯೇ!
ಅಚ್ಚರಿಯ ವಿಷಯ ಗೊತ್ತೆ? ಪತ್ರಿಕೆಯೊಂದು ಅಧ್ಯಕ್ಷ ಬುಷ್‌ಗಿಂತ ಅವರ ಪತ್ನಿ ಲಾರಾ ಬುಷ್‌ರೇ ಅಮೆರಿಕಾದಲ್ಲಿ ಜನಪ್ರಿಯರೆಂದು ವರದಿ ಮಾಡಿತ್ತು. ಬುಷ್ ಎರಡನೇ ಬಾರಿಗೆ ಆಯ್ಕೆಯಾಗಿದ್ದುದರಲ್ಲಿ ಆಕೆಯ ಪಾತ್ರ ಗಣ್ಯವಾಗಿತ್ತೆಂದು ಎಲ್ಲರೂ ಒಪ್ಪುತ್ತಾರೆ.
ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಮನೆಯನ್ನೇನು ರಾಷ್ಟ್ರವನ್ನೆ ಕಟ್ಟಬಲ್ಲರೆಂಬುದಕ್ಕೆ ಇದಕ್ಕಿಂತ ಹೆಚ್ಚಿನ ಇನ್ಯಾವ ಸಾಕ್ಷಿ ಬೇಕು ಹೇಳಿ. ಆದರೆ ನಮ್ಮಲ್ಲಿ ಹೆಣ್ಣು ಮಕ್ಕಳು ಮೀಸಲಾತಿ ಕೇಳುತ್ತ ಉಳಿದರೇ ಹೊರತು ಈ ರೀತಿಯ ಪ್ರಭಾವೀ ಚಟುವಟಿಕೆಗಳತ್ತ ಹೊರಳಲೇ ಇಲ್ಲ. ಅಥವಾ ಅಧಿಕಾರಸ್ಥ ಗಂಡಸರು ಆಕೆಯನ್ನು ಮುಂಬರಿಯಲು ಬಿಡಲೇ ಇಲ್ಲ. ಕಸ್ತೂರ್ ಬಾ ಮೇಲೆ ಗಾಂಧೀಜಿ ಹಾಕಿದ್ದ ಒತ್ತಡವೂ ಹಾಗೆಯೇ ಇತ್ತು. ನೆಹರೂ ಕಥೆಯಂತೇ ಕೇಳಲೇ ಬೇಡಿ. ಆತ ತನ್ನ ಸ್ಥಾನದ ಪ್ರಭಾವ ಬೀರಿ ಅದೆಷ್ಟು ಹೆಣ್ಣು ಮಕ್ಕಳೊಂದಿಗೆ ರಂಗಿನಾಟ ಆಡಿದ್ದರೆಂದರೆ, ಸ್ವಂತ ಪತ್ನಿ ಕಮಲ ನೆಹರೂ ಮರೆತೇ ಹೋಗಿದ್ದರು. ಆಕೆಗೆ ಕ್ಷಯದಂತಹ ಗಂಭೀರ ಕಾಯಿಲೆ ಇದ್ದುದರಿಂದ ತಾನಂತೂ ಹತ್ತಿರ ಸುಳಿಯುತ್ತಿರಲಿಲ್ಲ, ಮಗಳನ್ನೂ ಹತ್ತಿರ ಬಿಡಲಿಲ್ಲ. ಪಾಪ, ಆಕೆ ಮುಖ್ಯ ವಾಹಿನಿಗೆ ಎಂದಿಗೂ ಬರಲಾಗಲೇ ಇಲ್ಲ. ಆಕೆಯ ಆರೋಗ್ಯವನ್ನು ಗಮನಿಸುತ್ತಿದ್ದ ಫಿರೋಜ್ ಒಬ್ಬ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತ. ಆತ ಕಮಲಾ ನೆಹರೂಗೆ ಅತ್ಯಂತ ಹತ್ತಿರವದ. ಈ ಕಾರಣದಿಂದಾಗಿಯೇ ಇಂದಿರಾ ಅವನಿಗೆ ಮನಸೋತರು. ಹಾಗಂತ ಇಂದಿರಾ ಗಾಂಧಿಯ ಬದುಕಿನ ಉಲ್ಲೇಖ. ನೆಹರೂ ಮಗಳೆಂಬ ಕಾರಣಕ್ಕೆ ಆಕೆ ಪ್ರಧಾನಿಯಾದರು, ರಾಜಕಾರಣಕ್ಕಿಳಿದರು. ಮಿಷೆಲ್‌ರಂತೆ, ಲಾರಾರಂತೆ ಪರೋಕ್ಷ ಶಕ್ತಿಯಾಗುವ ಆದರ್ಶವನ್ನು ಯಾರೂ ಆಕೆಯ ಮುಂದಿಡಲೇ ಇಲ್ಲ.
ಎಷ್.ಡಿ.ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದರಲ್ಲ, ಆ ಇಪ್ಪತ್ತು ತಿಂಗಳ ಕಾಲ ಅವರ ’ಧರ್ಮಪತ್ನಿ’ ಅನಿತಾ ಕುಮಾರಸ್ವಾಮಿ ಯಾವುದಾದರೊಂದು ಸಾಮಾಜಿಕ ಜವಾಬ್ದಾರಿ ಹೊರಬಹುದಿತ್ತು. ಆದರೆ ಆಗ ಸರ್ಕಾರದ ಮನೆಯಲ್ಲಿ ಸ್ವಂತದ ಟೀವಿ ಚಾನೆಲ್ ಕೆಲಸ ಮಾಡುತ್ತಿತ್ತೇ ಹೊರತು, ರಾಜ್ಯದ ಪ್ರತಿಭಾವಂತ ಮಕ್ಕಳ ಸೆಮಿನಾರ್ ಅಲ್ಲ! ಆಕೆ ಒಬ್ಬ ಶಾಸಕಿಯಾಗಿ ಸಾಧಿಸಿದ್ದಕ್ಕಿಂತ ಹೆಚ್ಚಿನದನ್ನು ಮುಖ್ಯಮಂತ್ರಿಯ ಪತ್ನಿಯೆಂಬ ಪ್ರೀತಿ- ಪ್ರಭಾವಗಳಿಂದ ಸಾಧಿಸಬಹುದಿತ್ತು.
ಈಗ ಮತ್ತೆ ಪ್ರಧಾನಿಯತ್ತ ಬನ್ನಿ. ಕಳೆದ ಹತ್ತು ವರ್ಷಗಳಿಂದ ಪ್ರಧಾನಿ ಪತ್ನಿಯೆಂಬ ಪಟ್ಟ ಅಲಂಕರಿಸಿರುವ ಗುರುಶರಣ್ ಕೌರ್, ದೆಹಲಿಯಲ್ಲಿ ಅತ್ಯಾಚಾರ ಪ್ರಕರಣ ನಡೆದಾಗಲಾದರೂ ಬೆಳಕಿಗೆ ಬರಬಹುದಿತ್ತು. ಒಂದು ಆಂದೋಲನವನ್ನೆ ಹುಟ್ಟು ಹಾಕಿ ಸಾಮಾಜಿಕ ಪ್ರಭಾವ ಬೀರಬಹುದಿತ್ತು. ಪಾಕಿಸ್ತಾನ ಸೈನಿಕರ ತಲೆ ಕಡಿದು ಹೋದಾಗ ಆ ಮನೆಗಳಿಗೆ ಹೋಗಿ ಸಾಂತ್ವನ ಹೇಳಬಹುದಿತ್ತು. ಸೈನಿಕರ ವಿಧವೆ ಪತ್ನಿಯರ ಸವಲತ್ತುಗಳಿಗಾಗಿ ಸರ್ಕಾರದ ಮೇಲೆ ಒತ್ತಡ ತರಬಹುದಾಗಿತ್ತು.
ಮಾಡಲು ಬೆಟ್ಟದಷ್ಟಿದೆ. ಮಾಡುವ ಮನಸೆಲ್ಲಿದೆ ಹೇಳಿ!?

Leave a Reply