ವಿಭಾಗಗಳು

ಸುದ್ದಿಪತ್ರ


 

ನಿಜವಾದ ಸ್ವರಾಜ್ಯ ನಮಗೆ ಬಂದಿದೆಯಾ?

ಮೊನ್ನೆ ಸಂಸತ್ತಿನಲ್ಲಿ ಆಹಾರ ರಕ್ಷಣಾ ಮಸೂದೆ ಅಂಗೀಕಾರವಾಗುತ್ತಿದ್ದಂತೆ ಅನೇಕ ಹೂಡಿಕೆದಾರರು ತಮ್ಮ ಹೂಡಿಕೆ ಹಣವನ್ನು ಇಲ್ಲಿಂದ ತೆಗೆಯಲು ಶುರು ಮಾಡಿದ್ದಾರೆ. ಭಾರತದ ಯೋಜನೆಗಳೆಲ್ಲ ಅಭಿವೃದ್ಧಿಪರವಾದ ಯೋಜನೆಗಳಲ್ಲ, ಜನಪ್ರಿಯ ಯೋಜನೆಗಳು.

‘ಈ ಸಂಸತ್ ವ್ಯವಸ್ಥೆ ಇದೆಯಲ್ಲ ಇದು ವೇಶ್ಯೆ ಇದ್ದಂತೆ. ಕ್ಯಾಬಿನೆಟ್ಟಿಗೆ ತನ್ನ ಸೆರಗು ಹಾಸೋದು ಇದರ ಕೆಲಸ. ಇವತ್ತು ಒಬ್ಬ ಒಡೆಯನೊಂದಿಗೆ ಮಲಗಬೇಕು, ನಾಳೆ ಮತ್ತೊಬ್ಬ ಬಂದರೆ ಅವನೊಡನೆ ಹೋಗಬೇಕು’. ಯುರೋಪನ್ನು ದೃಷ್ಟಿಯಲ್ಲಿಟ್ಟುಕೊಂಡು ಗಾಂಧೀಜಿ ಹೇಳಿದ ಮಾತಿದು. ದುರ್ದೆಶೆಯೆಂದರೆ ಚಾಚೂ ತಪ್ಪದೇ ಅದೇ ವ್ಯವಸ್ಥೆಯನ್ನು ನಾವೂ ಅನುಸರಿಸುವುದರಿಂದ ಈ ಮಾತು ನಮ್ಮ ಸಂಸತ್ತಿಗೂ ಅನ್ವಯಿಸುತ್ತದೆ. ಮಹಾತ್ಮಾ ಸ್ಪಷ್ಟವಾದ ಮಾತುಗಳಲ್ಲಿ ಹೇಳಿದ್ದರು, ‘ಗುಲಾಮಿತನದ ಸಂಕೇತವಾಗಿರುವ ಇಂಗ್ಲೆಂಡ್ ಸಂಸತ್ತನ್ನು ಭಾರತೀಯರು ನಕಲು ಮಾಡಿದ್ದೇ ಆದರೆ ಭಾರತ ನಾಶವಾಗೋದು ಖಾತ್ರಿ’.
ಆಹಾರ ಭದ್ರತಾ ಮಸೂದೆಯ ಚರ್ಚೆ, ಗಲಾಟೆ ಕೊನೆಗೆ ಅನುಮೋದನೆ ಇವೆಲ್ಲ ಪ್ರಹಸನಗಳನ್ನು ನೋಡುವಾಗ ಯಾಕೋ ಮಹಾತ್ಮಾ ತುಂಬಾ ನೆನಪಾದರು. ಅಧಿನಾಯಕಿ ಸೋನಿಯಾ ಬಯಸಿದ್ದಾರೆಂಬ ಒಂದೇ ಒಂದು ಕಾರಣಕ್ಕೆ ಇಡಿಯ ಕಾಂಗ್ರೆಸ್ಸು ಅದರ ಬೆಂಬಲಕ್ಕೆ ನಿಂತು ಅನುಮೋದನೆ ಪಡಕೊಂಡಿತಲ್ಲ ; ಈ ಯೋಜನೆಯಿಂದ ದೇಶದ ಮೇಲೆ ಆಗಿರುವ ಆಘಾತಗಳ ಅಧ್ಯಯನ ನಡೆಸುವ ಜವಾಬ್ದಾರಿಯನ್ನಾದರೂ ಯಾರಾದರೂ ಹೊತ್ತಿದ್ದಾರಾ? ಗಾಂಧೀಜಿಯನ್ನೇ ಮತ್ತೆ ಉಲ್ಲೇಖಿಸುವುದಾದರೆ ಸಂಸತ್ತೆಂಬ ವೇಶ್ಯೆಯ ಸಹವಾಸದಲ್ಲಿರುವ ಈ ವಿಕಟಪುರುಷರಿಂದ ಮತ್ತೇನನ್ನು ತಾನೇ ನಿರೀಕ್ಷಿಸಲು ಸಾಧ್ಯ!
೧೯೨೮ರಲ್ಲಿ ಸರ್ವಪಕ್ಷಗಳ ವತಿಯಿಂದ ರೂಪಿಸಲಾಗಿದ್ದ ಮೋತಿಲಾಲ್ ನೆಹರೂ ನೇತೃತ್ವದ ಸಮಿತಿ ಸಂಸದೀಯ ವ್ಯವಹಾರಗಳಿಗೆ ಇಂಗ್ಲೆಡಿನ ಮಾದರಿಯೇ ಸೂಕ್ತವೆಂದು ಅಭಿಪ್ರಾಯಪಟ್ಟಿತು. ಸ್ವಾತಂತ್ರ್ಯಾನಂತರದ ಮೊದಲೆರಡು ವರ್ಷಗಳಲ್ಲಿ ನಮ್ಮದೇ ಹಳೆಯ ಮಾದರಿಯನ್ನು ಸೂಕ್ತ ಬದಲಾವಣೆಗಳೊಂದಿಗೆ ಒಪ್ಪಿಕೊಳ್ಳಬೇಕೆಂಬ ವಾದವನ್ನು ತಿರಸ್ಕರಿಸಲಾಯಿತು. ಈ ರೀತಿ ಯೋಚಿಸುವುದು ಅಂದಿನ ದಿನಗಳಲ್ಲಿ ಸಾಂಪ್ರದಾಯಿಕ ಎನಿಸಿದ್ದರಿಂದ ಅದಕ್ಕೆ ಬೆಂಬಲವೂ ದೊರೆಯಲಿಲ್ಲ. ಹೀಗಾಗಿಯೇ ಪಿರಮಿಡ್ ಮಾದರಿಯ ವ್ಯವಸ್ಥೆಯನ್ನು ನಾವು ತಬ್ಬಿಕೊಂಡೆವು. ಶೃಂಗದ ನಿರ್ಧಾರಗಳನ್ನು ಹೊತ್ತು ಮೆರೆಸಬೇಕಾದ ಬುಡದ ಜವಾಬ್ದಾರಿ ಅದು!
ಹೀಗಾಗಿಯೇ ಆಹಾರ ಭದ್ರತೆಯ ನಿರ್ಧಾರ ಘೋಷಿಸಿದ್ದು ಸೋನಿಯಾ. ಆದರೆ ಅದರ ಅಷ್ಟೂ ಭಾರವನ್ನು ಹೊರಬೇಕಾದ್ದು ಮಾತ್ರ ಬುಡದಲ್ಲಿರುವ ಸಾಮಾನ್ಯಜನ. ಇದಕ್ಕೆ ಪ್ರತಿಯಾಗಿ ಮಹಾತ್ಮಾ ಗಾಂಧೀಜಿ ಅಲೆಗಳ ಪರಿಧಿಯ ಕಲ್ಪನೆಯೊಂದನ್ನು ಬಲು ಹಿಂದೆಯೇ ಹರಿಬಿಟ್ಟಿದ್ದರು. ದೂರ ದೂರದವರೆಗೆ ಹಬ್ಬಿರುವ ಅಲೆಗಳ ಕೇಂದ್ರ ವ್ಯಕ್ತಿ. ಆತನಿಂದಾಗಿಯೇ ಅಲೆಗಳು ಹುಟ್ಟಿರೋದು. ಅತ್ಯಂತ ಕೊನೆಯ ಅಲೆ ವೈಶ್ವಿಕವಾದುದು, ಅದರೊಳಗೆ ದೇಶ, ರಾಜ್ಯ, ಜಿಲ್ಲೆಗಳ ಅಲೆಗಳು! ಇಲ್ಲಿ ಅಧಿಕಾರದ ಪ್ರಭಾವ ಬಲು ಕಡಿಮೆ ಆದರೆ ಪ್ರಭಾವ ಇಲ್ಲದಿಲ್ಲ. ಊಹೂಂ. ಯಾರಿಗೂ ಇದು ಮೆಚ್ಚುಗೆಯಾಗಲಿಲ್ಲ. ಚಿಂತಕ, ರಾಜಕಾರಣಿ ರಫಿಕ್ ಜಕಾರಿಯಾ ಶೃಂಗ ಕೇಂದ್ರೀತ ವ್ಯವಸ್ಥೆಯನ್ನು ‘ಭ್ರಷ್ಟಾಚಾರದ ಗಂಗೋತ್ರಿ’ ಅಂತ ಕರೆದದ್ದಲ್ಲದೇ ಇದನ್ನು ಸಮೂಲನಾಶ ಮಾಡುವವರೆಗೂ ಭಾರತದ ರಕ್ಷಣೆ ಸಾಧ್ಯವೇ ಇಲ್ಲವೆಂದು ಅಭಿಪ್ರಾಯಪಟ್ಟಿದ್ದರು.
ಆದರೆ ಈ ಪ್ರಯತ್ನ ಮಾಡುವ ಸಾಹಸ ಯಾರಿಗಾದರೂ ಇದೆಯೇನು? ಉಪರಾಷ್ಟ್ರಪತಿಯಾಗಿದ್ದ ಕೃಷ್ಣಕಾಂತರು ‘ಸಿದ್ಧಾಂತವಾಗಲಿ, ರಾಷ್ಟ್ರೀಯ ಚಿಂತನೆಗಳಾಗಲೀ ಇಲ್ಲದ ಸಣ್ಣ ಸಣ್ಣ ಗುಂಪುಗಳ ಒಕ್ಕೂಟವನ್ನು ಪಕ್ಷ ಎನ್ನಬಹುದು’ ಅಂತಾರೆ. ‘ಗೆಲ್ಲಬೇಕಾದವ ತನ್ನ ಆಟ ಆಡಲೇ ಬೇಕು’ ಎಂಬುದೂ ಅವರದ್ದೇ ಅಭಿಪ್ರಾಯ. ಈಗ ಹೇಳಿ. ಒಮ್ಮೆ ಆಟದಲ್ಲಿ ಗೆಲ್ಲುವ ಕಲೆ ಸಿದ್ಧಿಸಿಬಿಟ್ಟ ಮೇಲೆ ಆಟ ಬದಲಿಸುವ, ನಿಯಮಗಳನ್ನು ಬಿಗಿಗೊಳಿಸುವ ಪ್ರಯತ್ನಕ್ಕೆ ಯಾರಾದರೂ ಕೈಹಾಕುವರೇನು? ಜೈಲಿನಲ್ಲಿದ್ದೇ ಗೆಲ್ಲುವ, ತನ್ನ ಬದಲು ಮತ್ತೊಬ್ಬರನ್ನು ನಿಲ್ಲಿಸಿ ಗೆಲ್ಲಿಸುವ, ಸಿನಿಮಾದ ಖ್ಯಾತಿಯನ್ನು ಗೆಲುವಾಗಿಸಿಕೊಳ್ಳುವ ವಿದ್ಯೆ ಕರಗತವಾಗಿರುವವರನ್ನು ನಾವು ನೋಡಿದ್ದೇವೆ, ವೋಟು ಹಾಕಿದ್ದೇವೆ ; ಗೆಲ್ಲಿಸಿದ್ದೇವೆ!

gandhiಪ್ರಜಾಪ್ರಭುತ್ವದಲ್ಲಿ ಮತದಾರರು ಪ್ರಜ್ಞಾವಂತರಾಗಿರಬೇಕು, ಸ್ವಾಭಿಮಾನಿಗಳಾಗಿರಬೇಕು ಅಂತೆಲ್ಲ ಹೇಳಲಾಗುತ್ತೆ. ಹೀಗಾಗಿಯೇ ಈ ಮಾದರಿಯ ಪ್ರಜಾಪ್ರಭುತ್ವ ಇಂಗ್ಲೆಂಡಿನಲ್ಲಿ ಸರಿ. ಭಾರತ ಇನ್ನೂ ಬೆಳೆಯಬೇಕಿದೆ. ಇಂದಿರಾ ಗಾಂಧಿ ಗುಂಡಿಗೆ ಬಲಿಯಾಗಿ ದಶಕಗಳೇ ಉರುಳಿವೆ. ಇಂದಿಗೂ ಅನೇಕ ತಾಂಡಾಗಳಲ್ಲಿ ಆಕೆಯ ಚರ್ಚೆ ನಡೆಯುತ್ತಲೇ ಇದೆ. ಹೀಗಾಗಿಯೇ ಸೋನಿಯಾ, ಪ್ರಿಯಾಂಕಾ ಎಲ್ಲರೂ ಅದೇ ಎರಕದಿಂದ ಎದ್ದು ಬಂದವರಂತೆ ಬಿಂಬಿಸಿಕೊಳ್ಳುವ ಪ್ರಯತ್ನ ಮಾಡೋದು. ಪಿರಮಿಡ್‌ನ ತುದಿಗೆ ತಲೆಬಾಗುವ ಜಾಯಮಾನ ಬಲೂಗಿರುವುದರಿಂದಲೇ ಇನ್ನೂ ಪರಿವಾರದ ಹಿಡಿತ ಗಟ್ಟಿಯಾಗಿರೋದು.
ಈಗ ಹೇಳಿ. ಈ ವ್ಯವಸ್ಥೆ ಬದಲಾಗೋದು ಬೇಡವಾ? ಹಾಗೆಂದೇ ಎನ್‌ಡಿಎ ಕಾಲಕ್ಕೆ ಸಂವಿಧಾನ ಪರಾಮರ್ಶೆಯ ಪ್ರಯತ್ನ ನಡೆದಿತ್ತು. ಆ ಪದಗುಚ್ಛ ಕೇಳುತ್ತಲೇ ದೇಶ ಗುರ್ ಎಂದು ಬಿಟ್ಟಿತು. ಬಹುಶಃ ಅಲ್ಲಿಯೂ ಅವರಿಗೆ ಕೇಸರಿಕರಣದ ವಾಸನೆ ಬಡಿದಿರಲಿಕ್ಕೆ ಸಾಕು! ಪ್ರಯತ್ನ ಮುರಿದುಬಿತ್ತು. ನಮಗೆ ವಿಕಾಸ ಬೇಕಿಲ್ಲ ; ಎಲ್ಲ ಮತಗಳ, ಜಾತಿಗಳ, ಭಾಷೆಯ, ರಾಜ್ಯಗಳ ಜನರು ಒಟ್ಟಿಗಿರುವಂತಾದರೆ ಸಾಕು. ಭಾರತೀಯ ಮೂಲದ ಬ್ರಿಟಿಷ್ ಆರ್ಥಿಕ ತಜ್ಞ ಮೇಘನಾಥ ದೇಸಾಯಿ ಹೇಳುವಂತೆ ‘ಎಲ್ಲರನ್ನೂ ಹಿಡಿದಿಡಲು ಮಂದಗತಿಯ, ಎಷ್ಟಾದರೂ ಬಾಗಬಲ್ಲ ಪ್ರಜಾಪ್ರಭುತ್ವವೇ ಸೂಕ್ತ’.
೬೫ ವರ್ಷಗಳಿಂದ ಈ ಉದ್ದೇಶಕ್ಕಾಗಿ ಬದುಕಿದರೂ ಒಂದಾಗಿರುವುದು ನಮ್ಮಿಂದ ಸಾಧ್ಯವಾಗಿಲ್ಲ. ಅತ್ತ ದೇಶದ ಬೆಳವಣಿಗೆಯೂ ಗೌಣ. ಹಾಗಿದ್ದ ಮೇಲೆ ಮತ್ಯಾವ ಪುರುಷಾರ್ಥದ ಸಾಧನೆಯಾಯ್ತು ಹೇಳಿ! ಈಗೊಂದು ಚುನಾವಣೆ ಸಮೀಪಿಸುತ್ತಿದೆ. ಮತದಾರ ಜಾಗೃತನಾಗಬೇಕಿದೆ. ಪಿರಮಿಡ್‌ನ ತುದಿ ಒಬ್ಬ ವ್ಯಕ್ತಿಯೋ, ಒಂದು ಪಾರ್ಟಿಯೋ ಅಲ್ಲ ಅದು ರಾಷ್ಟ್ರದ ಹಿತಾಸಕ್ತಿಯಾಗಬೇಕಿದೆ. ರಾಷ್ಟ್ರದ ಒಳಿತಿನಲ್ಲಿ ನನ್ನ ಒಳಿತು ಅಡಗಿದೆ ಎಂಬುದನ್ನು ಅರಿಯುವ ಕಾಲಬಂದಿದೆ.
ಈ ಅರಿವು ಒಮ್ಮೆ ಬಂದರೆ ಸೋನಿಯಾರ ಕನಸಿನ ಕೂಸಾದ ಆಹಾರ ಭದ್ರತಾ ಮಸೂದೆ ಅದೆಷ್ಟು ಭಯಾನಕವೆನ್ನುವುದು ನಿಮ್ಮ ಅರಿವಿಗೆ ಬಂದೀತು. ಎಲ್ಲ ಬಿಡಿ. ಕರ್ನಾಟಕ ಸರ್ಕಾರ ಕೇಜಿಗೊಂದು ರೂಪಾಯಿಯಂತೆ ಅಕ್ಕಿ ಕೊಡುವ ಯೋಜನೆಗೆ ಹಣ ಉಳಿಸಲು ಅಭಿವೃದ್ಧಿ ಕಾರ್ಯಗಳನ್ನೇ ನಿಲ್ಲಿಸಿಬಿಟ್ಟಿರುವುದು ಗೊತ್ತಿದೆಯಾ? ಕಳೆದ ನಾಲ್ಕು ತಿಂಗಳಿಂದ ನನ್ನೂರಿನ ಯಾವ ಗುತ್ತಿಗೆದಾರನಿಗೂ ಹಿಂದೆ ಮಾಡಿದ ಗುತ್ತಿಗೆ ಕೆಲಸದ ಹಣ ಬಿಡುಗಡೆಯಾಗಿಲ್ಲ. ಅವನ ದೃಷ್ಟಿಯಲ್ಲಿ ಈ ಸರ್ಕಾರ ಕಪ್ಪುಪಟ್ಟಿಗೆ ಸೇರಿದೆ. ಇನ್ನು ಮುಂದೆ ರಸ್ತೆ ರಿಪೇರಿ, – ಓವರ್ ನಿರ್ಮಾಣ, ಶಾಲೆಗಳನ್ನು ಅನುದಾನಕ್ಕೊಳಪಡಿಸುವ, ಸಂಶೋಧನಾ ಕ್ಷೇತ್ರಗಳ ಗುಣಮಟ್ಟ ವೃದ್ಧಿಸುವ ಎಲ್ಲ ಕೆಲಸಗಳೂ ನಿಲ್ಲಲಿವೆ. ಆ ಎಲ್ಲ ಹಣವನ್ನು ಸೋಮಾರಿಗೆ ಊಟ ಬಡಿಸಲು ಬಳಸಲಾಗುತ್ತಿದೆ. ನಾಲ್ಕೂವರೆ ಸಾವಿರ ಕೋಟಿ ಸಂಗ್ರಹಕ್ಕೇ ಈ ಪರಿಯ ಪಡಿಪಾಟಲು ಎನ್ನುವುದಾದರೆ ಇನ್ನೂ ಇಡಿಯ ದೇಶದಲ್ಲಿ ಒಂದೂ ಕಾಲು ಲಕ್ಷ ಕೋಟಿ ಹಣ ಒಟ್ಟುಗೂಡಿಸಬೇಕೆಂದರೆ ಏನೇನು ಮಾಡಬೇಕು ಹೇಳಿ.
ಅಂದಹಾಗೆ ಒಂದೂ ಕಾಲು ಲಕ್ಷ ಅನ್ನೋದು ಸಮಾಧಾನ ಮಾಡಲೆಂದೇ ಸರ್ಕಾರ ಕೊಟ್ಟಿರುವ ಅಂಕಿ. ವಾಸ್ತವವಾಗಿ ಧಾನ್ಯದ ಶೇಖರಣೆ, ವಿತರಣೆ, ಸೋರಿಕೆ ಇವೆಲ್ಲವನ್ನೂ ಲೆಕ್ಕ ಹಾಕಿದರೆ ಎರಡೂವರೆ ಲಕ್ಷ ಕೋಟಿ ಕೋಟಿಯಷ್ಟಾದರೂ ಬೇಕೇನ್ನೋದು Commission for Agricultural Costs and Priceನ ಅಭಿಪ್ರಾಯ. ಅಂದರೆ ನಮ್ಮ ರಾಜ್ಯದ ಒಟ್ಟೂ ಬಜೆಟ್‌ನ ಎರಡರಷ್ಟು ಹಣ! ಇಷ್ಟು ಹಣವನ್ನು ಸಂಗ್ರಹಿಸಬೇಕೆಂದರೆ ತೆರಿಗೆ ಹೆಚ್ಚಿಸಬೇಕು. ಅದಾಗಲೇ ಈ ದೇಶದ ಎಪ್ಪತ್ತು ಪ್ರತಿಶತ ಜನರ ಕೈಲಿ ನಾವೇ ಕೊಟ್ಟ ಬಿಪಿಎಲ್ ಕಾರ್ಡ್‌ಗಳಿವೆ.ಹೀಗಾಗಿ ಬಡವರಲ್ಲದ ಮೂವ್ವತ್ತು ಪ್ರತಿಶತ ಜನ ಉಳಿದವರ ಹೊಟ್ಟೆ ತುಂಬಿಸಲು ಕೆಲಸ ಮಾಡಿ ತೆರಿಗೆ ಕಟ್ಟಬೇಕು. ಮನಸ್ಸಾದರೂ ಹೇಗೆ ಬರುತ್ತೆ ಹೇಳಿ. ಆತ ಒಂದೋ ತೆರಿಗೆ ಕಳ್ಳತನ ಮಾಡುತ್ತಾನೆ. ಇಲ್ಲವೆ ಕೆಲಸ ಮಾಡೋದು ಬಿಟ್ಟು ಬಡವನಾಗಿ ಬಿಟ್ಟಿ ಉಣ್ಣುತ್ತಾನೆ. ಈಗಾಗಲೇ ದೇಶದಲ್ಲಿ ಎರಡೂ ತರಹದ ಜನರು ತಯಾರಾಗಿದ್ದಾರೆ. ಮಾನ್ಯ ಹಣಕಾಸು ಮಂತ್ರಿಗಳೇ ಕೊಟ್ಟ ವರದಿಯ ಪ್ರಕಾರ ಒಂದು ಕೋಟಿಗಿಂತಲೂ ಹೆಚ್ಚಿನ ಹಣಕ್ಕೆ ತೆರಿಗೆ ಕಟ್ಟುವವರ ಸಂಖ್ಯೆ ನಲ್ವತ್ಮೂರು ಸಾವಿರವೂ ದಾಟುವುದಿಲ್ಲ! ಅತ್ತ ಮತ್ತೊಂದೆಡೆ ಕೃಷಿ ಕೈಗಾರಿಕೆಗಳಿಗೆ ಕೆಲಸದವರೇ ದೊರೆಯದೇ ಅನೇಕರು ತಮ್ಮ ತಮ್ಮ ಜಮೀನನ್ನು ಹಾಗೆ ಬಿಟ್ಟುಬಿಟ್ಟಿರೋದೂ ಕಂಡುಬರುತ್ತದೆ! ಇದರಿಂದಾಗಿಯೇ ದೇಶದ ಒಟ್ಟಾರೆ ಉತ್ಪನ್ನ ಕುಂಠಿತವಾಗಿರೋದು. ವಿದೇಶೀ ವಿನಿಮಯ ಇಳಿಮುಖವಾಗಿರೋದು. ರೂಪಾಯಿ ಕುಸಿಯುತ್ತಿರೋದು, ಬೆಲೆಗಳು ಏರುತ್ತಿರೋದು.
ಈಗ ಹಣ ಸಂಗ್ರಹಣೆಗೆ ಸರ್ಕಾರಕ್ಕಿರುವ ಮಾರ್ಗ ಒಂದೇ. ನೋಟುಗಳ ಮುದ್ರಣ! ಮುಲಾಜಿಲ್ಲದೇ ನೋಟುಗಳನ್ನು ಮುದ್ರಿಸುತ್ತ ನಡೆದರೆ ಅದರ ಮೌಲ್ಯ ಕುಸಿದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತೆ. ಹಾಗಿಲ್ಲದೇ ಸರ್ಕಾರದ ಬಳಿ ಅಗತ್ಯ ವಸ್ತುಗಳ ಸಾಕಷ್ಟು ಹಣವಿದೆ ಅಂತಿಟ್ಕೋಳ್ಳಿ. ರೈತರ ಬಳಿ ಬೆಂಬಲಬೆಲೆ ಕೊಟ್ಟು ಸರ್ಕಾರ ಧಾನ್ಯ ಖರೀದಿಸುತ್ತೆ. ಆಗ ಸ್ವತಃ ರೈತನೂ ಇತರೆಲ್ಲವನ್ನೂ ಬಿಟ್ಟು ಧಾನ್ಯವನ್ನೇ ಬೆಳೆಯುತ್ತಾನೆ. ತರಕಾರಿಗೆ ಕೊರತೆಯಾಗುತ್ತೆ. ಆಗಲೂ ಅವುಗಳ ಬೆಲೆ ಗಗನ ಮುಟ್ಟುತ್ತೆ. ಬೆಲೆಏರಿಕೆಯ ಬೇಗೆಯಲ್ಲಿ ಬೇಯುವ ಜನಸಾಮಾನ್ಯ ಹಣ ಉಳಿಸೋದು ಕಡಿಮೆ ಮಾಡುತ್ತಾನೆ. ಅಭಿವೃದ್ಧಿ ಕಾರ್ಯಕ್ಕೆ ಹಣ ದೊರೆಯದೇ ಸರ್ಕಾರ ವಿದೇಶಿ ಸಾಲದ ಮೊರೆ ಹೋಗುತ್ತೆ. ಅಲ್ಲಿ ಪಾಕಿಸ್ತಾನಕ್ಕಿಂತಲೂ ಹೀನ ಸ್ಥಿತಿಗೆ ತಲುಪುತ್ತೆ ಭಾರತ! ಖ್ಯಾತ ಲೇಖಕ ಸ್ವಪನ್‌ದಾಸ್ ಗುಪ್ತರಂತೂ ಭಾರತ ಜಿಂಬಾಬ್ವೆಯಂತಹ ದೇಶಗಳ ಸಾಲಿಗೆ ನಿಂತರೂ ಅಚ್ಚರಿ ಪಡಬೇಡಿ ಅಂತಾರೆ.
ಮೊನ್ನೆ ಸಂಸತ್ತಿನಲ್ಲಿ ಆಹಾರ ರಕ್ಷಣಾ ಮಸೂದೆ ಅಂಗೀಕಾರವಾಗುತ್ತಿದ್ದಂತೆ ಅನೇಕ ಹೂಡಿಕೆದಾರರು ತಮ್ಮ ಹೂಡಿಕೆ ಹಣವನ್ನು ಇಲ್ಲಿಂದ ತೆಗೆಯಲು ಶುರು ಮಾಡಿದ್ದಾರೆ. ಭಾರತದ ಯೋಜನೆಗಳೆಲ್ಲ ಅಭಿವೃದ್ಧಿಪರವಾದ ಯೋಜನೆಗಳಲ್ಲ, ಜನಪ್ರಿಯ ಯೋಜನೆಗಳು. ಇಂತಹ ಯೋಜನೆಗಳಿಂದ ವೋಟು ಪಡೆಯಬಹುದೇ ಹೊರತು ರಾಷ್ಟ್ರವನ್ನು ಬಲಾಢ್ಯಗೊಳಿಸಲು ಸಾಧ್ಯವಿಲ್ಲ ಅನ್ನೋದು ಅವರಿಗೆಲ್ಲ ಚೆನ್ನಾಗಿ ಗೊತ್ತಿದೆ.
ಅವರಿಗೇನೋ ಗೊತ್ತಿದೆ ಸರಿ. ನಾವು ಮತ ಕೊಟ್ಟು ಆರಿಸಿ ಕಳಿಸಿದ್ದೇವಲ್ಲ ಅವರಿಗೆ ಗೊತ್ತಿದ್ಯಾ? ಹೋಗಲಿ ನಾವಾದರೂ ನಿಮ್ಮ ಒಂದು ರೂಪಾಯಿಯ ಅಕ್ಕಿ ನಮಗೆ ಬೇಡ, ಬಲಾಢ್ಯ ಭಾರತ ನಮಗೆ ಕೊಡಿ ಅಂತ ಹೇಳುವ ಧಾಷ್ಟ್ಯತೆ ತೋರಬಲ್ಲೆವಾ? ಈ ಬಾರಿ ಚುನಾವಣೆಯಲ್ಲಿ ನಮಗೆ ಹಣ ಬೇಡವೆನ್ನುವ, ನಮ್ಮ ಜಾತಿಯವ ಚುನಾವಣೆಗೆ ನಿಂತರೂ ರಾಷ್ಟ್ರದ ಹಿತಕ್ಕಾಗಿ ಮತ ಚಲಾಯಿಸುವ ತಾಕತ್ತು ನಮಗಿದೆಯಾ? ಇಷ್ಟಕ್ಕೂ ನಾವು ಕೊಂಡ ಹೊಸ ಕಾರಿಗೆ ಒಳ್ಳೆಯ ಚಾಲಕ ಬೇಕೋ, ನಮ್ಮ ಜಾತಿಯ ಚಾಲಕ ಬೇಕೋ ನೀವೇ ಯೋಚಿಸಿ.
ಹೌದು. ಇಂತಹ ಅನೇಕ ಸಮಸ್ಯೆಗಳಿದ್ದುದರಿಂದಲೇ ಗಾಂಧೀಜಿ ಈ ವ್ಯವಸ್ಥೆಯನ್ನು ವೇಶ್ಯೆಗೆ ಹೋಲಿಸಿದ್ದು. ಈ ವಿಚಾರದಲ್ಲಿ ಅವರ ದೃಷ್ಟಿ ನಿಚ್ಚಳವಾಗಿತ್ತು. ಅದಕ್ಕೇ ಅವರು ಸ್ವಾತಂತ್ರ್ಯ ಬಂದೋಡನೆ ಕಾಂಗ್ರೆಸ್ಸನ್ನು ವಿಸರ್ಜಿಸಲು ಆಗ್ರಹಿಸಿದ್ದರು. ಆನಂತರ ನಾಯಕರೆನಿಸಿಕೊಂಡವರು ಹಳ್ಳಿಗಳಿಗೆ ಹೋಗಿ ಬುಡದಿಂದ ರಾಷ್ಟ್ರವನ್ನು ಗಟ್ಟಿ ಮಾಡಿಕೊಂಡು ಬನ್ನಿ ಎಂದಿದ್ದರು. ಅಷ್ಟೆಲ್ಲಾ ವ್ಯವಧಾನ ಅವತ್ತಿನ ನಾಯಕರಿಗಿರಲಿಲ್ಲ, ಇಂದಿನ ನಾಯಕರಿಗೂ ಇಲ್ಲ. ಹೀಗಾಗಿಯೇ ನಕಲಿ ಗಾಂಧಿಯ ಹೆಸರನ್ನು ಜಪಿಸುತ್ತ, ಆ ಪ್ರಭಾವಲಯದಲ್ಲಿಯೇ ತಮ್ಮ ಬೇಳೆಕಾಳು ಬೇಯಿಸಿಕೊಂಡು ರಾಷ್ಟ್ರವನ್ನು ಅಧೋಗತಿಗೆ ತಳ್ಳುತ್ತಿದ್ದಾರೆ. ಸ್ವರಾಜ್ಯವೆಂದರೆ ತಮ್ಮನ್ನೇ ತಾವು ಆಳಿಕೊಳ್ಳುವುದು ಅಂತ ಹೇಳ್ತಾರಲ್ಲ ಗಾಂಧೀಜಿ, ನಿಜ ಹೇಳಿ… ಅಂತಹ ಸ್ವರಾಜ್ಯ ನಮಗೆ ಬಂದಿದೆಯಾ?

Leave a Reply