ವಿಭಾಗಗಳು

ಸುದ್ದಿಪತ್ರ


 

ಪಶ್ಚಿಮಕ್ಕೆ ಬೆಳಕು ಕೊಟ್ಟ ಪೂರ್ವದ ಸೂರ್ಯ!

ಅಸೀಮ ಸ್ಥೈರ್ಯದಿಂದಲೇ ಭಾರತದೆಡೆಗೆ ನಡೆದ ಬಿರು ಮನಸಿನ ಸನ್ಯಾಸಿ ಪ್ರಚಂಡ ಸಿಡಿ ಗುಂಡಾಗಿಯೇ ಭಾರತದ ಮೇಲೆರಗಿದ. ದಾಸ್ಯದ ಅಮಲೇರಿದ ಮದ್ಯ ಕುಡಿದು ಅಂಗಾತ ಬಿದ್ದುಕೊಂಡಿದ್ದ ತರುಣ ಜನಾಂಗವನ್ನು ಝಾಡಿಸಿ ಒದ್ದ. ಅವನ ಮಾತುಗಳಲ್ಲಿನ ಕೆಚ್ಚು ತಣ್ಣಗಾಗಿದ್ದ ಹೃದಯಗಳನ್ನು ಬೆಚ್ಚಗಾಗಿಸಿತ್ತು. ಭಾರತವೇ ಮತ್ತೆ ಯೌವ್ವನದತ್ತ ಮರಳಲಾರಂಭಿಸಿತು. ಹೊಸ ಜಾಗೃತಿಯ ಅಲೆ ಭಾರತದ ಬಂಡೆಗಳನ್ನು ಬಡಿಯಲಾರಂಭಿಸಿತು. ಅಗೋ! ಈ ಅಲೆಯ ರಭಸಕ್ಕೆ ಒಂದೊಂದೇ ಬಂಡೆ ಕದಲಿತು. ಎದೆ ಸೆಟಿಸಿ ನಿಂತಿತು. ದಾಸ್ಯದ ಧೂಳನ್ನು ಕೆಡವಿಕೊಂಡು ಯುದ್ಧಕ್ಕೆ ಸಜ್ಜಾಯ್ತು.

vivekananda_rock_memorial_kanyakumari_india_2

‘ಮೊರೆಯುವ ಕಡಲಿಗೆ ಹಾರಿ ಧುಮುಕಿದ, ಈಜಿದ, ನುಗ್ಗಿದ. ಗಟ್ಟಿ ಬಂಡೆಯಲಿ ಬೇರೂರಿದ, ಬಾನೆತ್ತರ ಬೆಳೆದ. ಬೆಳಕಿನ ಗೋಪುರವಾದ’ ಕವಿ ಜಿ.ಎಸ್ ಶಿವರುದ್ರಪ್ಪನವರ ಸಾಲುಗಳು. ಅನುಮಾನವೇ ಇಲ್ಲ, ಬರೆದದ್ದು ವಿವೇಕಾನಂದರ ಕುರಿತಂತೇ. ಏಳು ವರ್ಷಗಳಷ್ಟು ದೀರ್ಘಕಾಲ ಭಾರತವನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿ, ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಾಣದಾದಾಗ ಕನ್ಯಾಕುಮಾರಿಯ ಕಡಲತಡಿಯಲ್ಲಿ ನಿಂತು ದೂರದಲ್ಲಿ ಕಾಣುವ ಬಂಡೆಯನ್ನೇರಿ ಕುಳಿತುಕೊಳ್ಳುವ ಕನಸು ಕಂಡವ ತರುಣ ಸನ್ಯಾಸಿ. ಕಾಯುವಷ್ಟು ಪುರುಸೊತ್ತಿಲ್ಲ, ದೋಣಿಯವನಿಗೆ ‘ಒಯ್ದು ಬಿಡು’ ಎನ್ನುವಷ್ಟು ಹಣವಿಲ್ಲ. ಇದ್ದದ್ದು ತಾರುಣ್ಯದ ಹಸಿ ಉತ್ಸಾಹ, ಹೃದಯದೊಳಗೆ ಕುದಿಯುತ್ತಿರುವ ರಾಷ್ಟ್ರದ ಸಮಸ್ಯೆಗಳ ಉರಿ ಅಷ್ಟೇ. ತಂಪನ್ನರಸಿದ ಜೀವ ಕಡಲ ನಡುವಿನ ಬಂಡೆಯತ್ತ ಧಾವಿಸಿತು. ಸಾಗರದಲೆಗಳ ಸೀಳಿ ನುಗ್ಗಿತು. ಧಾವಿಸಿ ಬರುವ ಅಲೆಗಳ ಧಿಕ್ಕರಿಸಿ ಈಜಿದ ಬೈರಾಗಿ ಬಂಡೆಯ ಮೇಲೆ ಹೋಗಿ ಅಂಗಾತ ಬಿದ್ದುಕೊಂಡ. ಕಾದ ಬಂಡೆ ಸಂಕಟಗಳ ಹೊತ್ತು ನಿಸುಡುಯ್ದ ಅವನ ಹೃದಯವನ್ನೇ ಪ್ರತಿನಿಧಿಸುತ್ತಿತ್ತು. ನೀಲಿ ಸಾಗರ ಈ ಲೋಕದ ಪ್ರತೀಕ. ಮೇಲೆ ಕಾಣುತ್ತಿದ್ದ ನೀಲಾಕಾಶ ಪರಿಹಾರವಾಗಿ ಕಾಣುತ್ತಿತ್ತು. ಆದರೆ ಏನದು? ಯಾವುದು ಪರಿಹಾರ? ಅದನ್ನು ಅರಸಲೆಂದೇ ಪದ್ಮಾಸನ ಹಾಕಿ ಕುಳಿತ ಸನ್ಯಾಸಿ ಕಣ್ಮುಚ್ಚಿಕೊಂಡ. ಅವನೊಳಗೇ ವಿಸ್ತಾರವಾದ ಆಗಸ ಕಂಡಿತು. ಅಲೆಗಳ ಸರಮಾಲೆ ಹೃದಯಕ್ಕೆ ಅಪ್ಪಳಿಸುವಂತೆ ಭಾಸವಾಯ್ತು. ಅಂಧಕಾರದಲ್ಲಿದ್ದ ಪಶ್ಚಿಮಕ್ಕೆ ಪೂರ್ವದ ಸೂರ್ಯನ ಬೆಳಕು ಉಲ್ಲಾಸ ತಂದಂತೆ ಕಂಡಿತು. ಊಹೂಂ. ಅರ್ಥವಾಗಲಿಲ್ಲ. ಪೂರ್ವದ ಸೂರ್ಯ, ಪಶ್ಚಿಮಕ್ಕೆ ಬೆಳಕು ಕೊಡುವುದೇ? ಓಹ್! ಮೂರು ದಿನ ಕಳೆದದ್ದು ತಿಳಿಯಲೇ ಇಲ್ಲ. ಉತ್ತರ ಸಿಕ್ಕಿತ್ತು. ಆದರೆ ಏನೆಂದು ಅರ್ಥವಾಗಿರಲಿಲ್ಲ. ಕಣ್ಬಿಟ್ಟು ನೋಡಿದರೆ ಬಂಡೆಗೆ ಅಪ್ಪಳಿಸುತ್ತಿದ್ದ ಅಲೆಗಳ ಭೋರ್ಗರೆವ ಸದ್ದು ಶಾಂತ ಸಂಗೀತದಂತೆ ಕೇಳುತ್ತಿತ್ತು. ಆಗಸ ಮೂಡಣದ ಕೆಂಪಿನಿಂದ ರಂಗೇರಿತ್ತು. ಹೃದಯ ಹಿಂದೆಂದಿಗಿಂತಲೂ ಉಲ್ಲಸಿತವಾಗಿತ್ತು. ‘ನರೇನ್’ ಕರೆದಂತಾಯ್ತು. ಅದು ಗುರುದೇವನ ವಾಣಿ. ಆಘಾತಕ್ಕೊಳಗಾದ ನರೇಂದ್ರ ಹಿಂದೆ ತಿರುಗಿದ. ಗುರು ರಾಮಕೃಷ್ಣರು ಸಾಗರದ ಅಲೆಗಳ ಮೇಲೆ ನಡೆದು ಬರುತ್ತಿದ್ದರು. ಕೈ ಬೀಸಿ ಕರೆಯುತ್ತಿದ್ದರು. ಉದಯಿಸುತ್ತಿದ್ದ ಸೂರ್ಯನಿಗೆ ಅಭಿಮುಖವಾಗಿದ್ದರಿಂದ ಅವರ ಮುಖ ಕೇಸರಿಯ ರಂಗಿನಿಂದ ತುಂಬಿ ಹೋಗಿತ್ತು. ಅದೂ ಸರಿಯೇ. ಇಡಿಯ ಬದುಕನ್ನು ತ್ಯಾಗದ ಶ್ರೇಷ್ಠ ಆದರ್ಶದ ಮೇಲೆಯೇ ಕಟ್ಟಿದ ಮಹಾತ್ಮನಿಗೆ ಕೇಸರಿಯಲ್ಲದೇ ಮತ್ತ್ಯಾವ ರಂಗು ಒಗ್ಗೀತು? ಗುರುದೇವನ ದರ್ಶನ ಉತ್ತರ ಕೊಡಿಸಬೇಕಿತ್ತು. ಆದರೆ ಪ್ರಶ್ನೆ ಹಾಗೆಯೇ ಉಳಿಯಿತು. ಅವರು ಕರೆಯುತ್ತಿರುವುದಾದರೂ ಎಲ್ಲಿಗೆ? ಪಶ್ಚಿಮ ದಿಕ್ಕಿನಲ್ಲಿ ನಿಂತು ಕರೆಯುತ್ತಿರುವುದರ ಮರ್ಮವೇನು? ನರೇನ್ ಜಗತ್ತಿಗೇ ಶಿಕ್ಷಣ ಕೊಡುತ್ತಾನೆನ್ನುತ್ತಿದ್ದರು ಅವರು. ದಿಟವೇ? ಕೊಡಲಿಕ್ಕೆ ನನ್ನ ಬಳಿ ಇರುವುದಾದರೂ ಏನು? ಹಾಗೆಂದುಕೊಳ್ಳುವಾಗಲೇ ಕನ್ಯಾಕುಮಾರಿಯ ಹಿರಿಯರೊಬ್ಬರು ದೋಣಿಯೊಂದಿಗೆ ಬಂದು ತಾವೊಬ್ಬರೇ ಇಲ್ಲಿರುವುದು ಊರಿನವರಿಗೆ ಶ್ರೇಯಸ್ಕರವಲ್ಲವೆಂದು ಒತ್ತಾಯ ಮಾಡಿ ವಿವೇಕಾನಂದರನ್ನು ದೋಣಿಯಲ್ಲಿ ಕೂರಿಸಿ ಕರೆದೊಯ್ದರು! ಹೌದು. ವಿವೇಕಾನಂದರು ತಪ್ತ ಹೃದಯದಿಂದ ರಾಷ್ಟ್ರೋದ್ಧಾರದ ಕನಸು ಕಂಡಿದ್ದರಿಂದಲೇ ಅವರಿಗೆ ದೂರದಲ್ಲೊಂದು ಬೆಳಕು ಕಂಡಿತ್ತು. ಬಂಡೆಯ ಮೇಲೆ ತಾವೂ ಬಂಡೆಯಾಗಿ ಕುಳಿತದ್ದರಿಂದಲೇ ಭಾರತದ ಬಂಡೆಯಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಶಕ್ತಿ ಅವರೆಡೆ ಹರಿದು ಬಂದಿತ್ತು. ಅವರೀಗ ಬರಿಯ ಬೈರಾಗಿಯಾಗಿರಲಿಲ್ಲ. ಒಡಲೊಳಗೆ ಧಗಧಗಿಸುವ ಉರಿಯನ್ನೇ ಹೊತ್ತುಕೊಂಡ ಡೈನಮೋ ಆಗಿಬಿಟ್ಟಿದ್ದರು. ಮುಟ್ಟಿದ್ದೆಲ್ಲವನ್ನೂ ಬೆಳಗಿಸಬಲ್ಲ ಸ್ಪರ್ಶಮಣಿಯಾಗಿದ್ದರು. ‘ನ ರತ್ನಂ ಅನ್ವಿಶ್ಯತೇ, ಮೃಗ್ಯತೇ ಹಿ ತತ್’ ಎಂಬುದೊಂದು ಮಾತಿದೆ. ರತ್ನ ತಾನೇ ಹೋಗಿ ತನ್ನ ಪರಿಚಯ ಮಾಡಿಕೊಳ್ಳಬೇಕಾಗಿಲ್ಲ. ಅದನ್ನೇ ಹುಡುಕಿಕೊಂಡು ಜನ ಬರುತ್ತಾರೆ. ಹಾಗೆಯೇ ಆಯಿತು. ಸ್ವಾಮಿ ವಿವೇಕಾನಂದರೀಗ ಚಿಕಾಗೋ ಸರ್ವಧರ್ಮ ಸಮ್ಮೇಳನದ ಹಿಂದೂ ಪ್ರತಿನಿಧಿಯಾಗಿ ವೇದಿಕೆಯನ್ನೇರಲು ಸಿದ್ಧತೆ ನಡೆಸಿದ್ದರು. ಆಮೇಲಿನದ್ದು ಇತಿಹಾಸ.

swami_vivekananda_at_parliament_of_religions

ಪೂರ್ವದ ಬೆಳಕು ಪಶ್ಚಿಮದ ದುರಹಂಕಾರದ ಒಣ ಹುಲ್ಲಿಗೆ ಕಿಡಿ ತಾಕಿಸಿ ಧಿಗ್ಗನೆ ಉರಿದು ಹೋಗುವಂತೆ ಮಾಡಿತ್ತು. ಸದಾ ಶಿಸ್ತು, ಸಭ್ಯತೆ, ಆಚರಣೆಗಳ ವಿಚಾರಕ್ಕೆ ಬೆಲೆ ಕೊಡುವ ಪಶ್ಚಿಮದ ಜನ ಈ ತರುಣನೆದುರಿಗೆ ನೆಲದ ಮೇಲೆ ಕುಳಿತು ಭಾಷಣ ಆಲಿಸುತ್ತಿದ್ದರು. ಸ್ವತಃ ಭಾರತವನ್ನಾಳುತ್ತಿದ್ದ ಬ್ರಿಟನ್ನಿನ ರಾಣಿ ಮಾರುವೇಷದಲ್ಲಿ ಈತನ ಮಾತು ಕೇಳಲು ಬರುತ್ತಿದ್ದಳೆಂತೆ. ಜಗತ್ತಿನಲ್ಲಿ ನಮಗಿಂತ ಬುದ್ಧಿವಂತರು, ನಾಗರಿಕರು ಯಾರೂ ಇಲ್ಲ ಎಂಬ ಪಶ್ಚಿಮದವರ ಅಹಂಕಾರ, ಅಜ್ಞಾನ ಕರಗಿ ಮಾಯವಾಗಿತ್ತು. ಭಾರತದ ಬಗೆಗಂತೂ ಅವರಿಗೀಗ ಹೊಸ ಅಧ್ಯಯನವೇ ಸರಿ. ಅಲ್ಲಿಯವರೆಗೂ ಭಾರತವೆಂದರೆ ಅರೆ ನಗ್ನ, ಸದಾ ಮೋಕ್ಷವೆಂಬ ಬಿಸಿಲುಗುದುರೆಯ ಬೆನ್ನು ಹತ್ತಿ ಓಡುವ ಬ್ರಾಹ್ಮಣರ ಸಂಕುಲವೆಂದು ಭಾವಿಸಿತ್ತು ಪಶ್ಚಿಮ. ಸ್ವಾಮಿ ವಿವೇಕಾನಂದರು ಈ ಮೂಲ ಚಿಂತನೆಗೇ ಕೊಡಲಿ ಏಟು ಕೊಟ್ಟರು. ಕ್ಷತ್ರಿಯ ಕುಲಕ್ಕೆ ಸೇರಿದ ತರುಣನೊಬ್ಬ ವೈರಾಗ್ಯವನ್ನೇ ಮೈವೆತ್ತು ಕಾವಿಧಾರಿಯಾಗಿ ಭಾರತವನ್ನೆಲ್ಲ ಸಂಚರಿಸಿ ಅಮೋಘವಾದ ಇಂಗ್ಲೀಷಿನಲ್ಲಿ ಮಾತನಾಡುವುದು ಅವರಿಗೆ ಜೀಣರ್ಿಸಿಕೊಳ್ಳಲು ಆಗಲೇ ಇಲ್ಲ. ಜೊತೆಗೆ ಭೂಗೋಳದಿಂದ ಹಿಡಿದು ಖಗೋಳದವರೆಗೆ, ಮತ-ಶಾಸ್ತ್ರಗಳಿಂದ ಶುರುಮಾಡಿ ಬಲಾಢ್ಯ ಆಧ್ಯಾತ್ಮ ಚಿಂತನೆಯವರೆಗೆ ಆತನಿಗೆ ತಿಳಿಯದೇ ಇರುವ ಸಂಗತಿಯೇ ಇರಲಿಲ್ಲ. ಭಾರತವೆಂದರೆ ಅನಾಗರಿಕರ ನಾಡು, ಅಜ್ಞಾನಿಗಳ, ದುಷ್ಟರ ಬೀಡೆಂದು ಕಥೆ ಕಟ್ಟಿ ಅವರ ಉದ್ಧಾರಕ್ಕೆಂದು ಹಣ ಸಂಗ್ರಹಿಸುತ್ತಿದ್ದ ಮಿಶನರಿಗಳಿಗೆ ಸಹಿಸಲಾಗದ ವೇದನೆ ಶುರುವಾಯ್ತು. ತಂಡೋಪತಂಡವಾಗಿ ಜನ ಸ್ವಾಮಿ ವಿವೇಕಾನಂದರತ್ತ ಧಾವಿಸುವುದು, ಅವರಿಂದ ಶ್ರೇಷ್ಠ ವಿಚಾರಗಳನ್ನು ತಿಳಿಯುವ ಪ್ರಯತ್ನ ಮಾಡುವುದನ್ನು ಕಂಡೇ ಅನೇಕ ಕ್ರಿಶ್ಚಿಯನ್ ಮಿಶನರಿಗಳು ಅವರ ವಿರುದ್ಧ ಸುಳ್ಳು ಸುಳ್ಳೇ ಆರೋಪ ಮಾಡಲಾರಂಭಿಸಿದರು. ಇದ್ಯಾವುದೂ ಮುವ್ವತ್ತರ ಆ ತರುಣನಿಗೆ ಹೊಸತಲ್ಲ. ಕನ್ಯಾಕುಮಾರಿಯ ಬಂಡೆಯ ಮೇಲೆ ಕುಳಿತಿದ್ದಾಗಲೂ ಪದೇ ಪದೇ ಅಪ್ಪಳಿಸುವ ಅಲೆಗಳನ್ನು ಆತ ಕಂಡಿದ್ದ. ಆ ಅಲೆಗಳು ಬಡಿ ಬಡಿದು ಬಳಲಿದವೇ ಹೊರತು ಬಂಡೆ ಒಂದಿಂಚೂ ಅಲುಗಾಡಿರಲಿಲ್ಲ! ಸ್ವಾಮಿ ವಿವೇಕಾನಂದ ಈಗ ಅದೇ ಅಚಲ ಬಂಡೆಯಾಗಿ ನಿಂತಿದ್ದರು. ಸಮಸ್ಯೆಯ ಅಲೆಗಳು ಬಡಿದವಷ್ಟೇ. ಕತ್ತಲು ಕಳೆದು ಮೂಡಣದ ರಂಗು ಕಂಪೇರುತ್ತಿದ್ದಂತೆ ಅಲೆಗಳು ಶಾಂತವಾಗಿ ಬಂಡೆಗೆ ಹೇಗೆ ನತಮಸ್ತಕವಾಗುತ್ತಿದ್ದವೋ ಪಶ್ಚಿಮದ ಜನ ವಿವೇಕಾನಂದರ ಕಾಲಿಗೆ ಹಾಗೆಯೇ ಅಡ್ಡ ಬಿದ್ದರು. ಸ್ವಾಮೀಜಿ ಈಗ ಪಶ್ಚಿಮದ ಸೂಪರ್ ಹೀರೋ! ಪೂರ್ವದ ಸೂರ್ಯ ಪಶ್ಚಿಮಕ್ಕೆ ಬೆಳಕು ತಂದಿದ್ದು ಹೀಗೆ.

swami_vivekananda_jaipur

ಹಾಗಂತ ಕೆಲಸ ಮುಗಿದಿರಲಿಲ್ಲ. ಇತ್ತ ಭಾರತದಲ್ಲಿ ಬಡತನ, ಅನಕ್ಷರತೆ, ಮೇಲು-ಕೀಳುಗಳ ತಾಪತ್ರಯ ಕಾಡುತ್ತಲೇ ಇತ್ತು. ಪಶ್ಚಿಮವನ್ನು ಮಣಿಸಿ ಕಾಲಿಗೆ ಕೆಡವಿಕೊಂಡ ಅಸೀಮ ಸ್ಥೈರ್ಯದಿಂದಲೇ ಭಾರತದೆಡೆಗೆ ನಡೆದ ಬಿರು ಮನಸಿನ ಸನ್ಯಾಸಿ ಪ್ರಚಂಡ ಸಿಡಿ ಗುಂಡಾಗಿಯೇ ಭಾರತದ ಮೇಲೆರಗಿದ. ದಾಸ್ಯದ ಅಮಲೇರಿದ ಮದ್ಯ ಕುಡಿದು ಅಂಗಾತ ಬಿದ್ದುಕೊಂಡಿದ್ದ ತರುಣ ಜನಾಂಗವನ್ನು ಝಾಡಿಸಿ ಒದ್ದ. ಅವನ ಮಾತುಗಳಲ್ಲಿನ ಕೆಚ್ಚು ತಣ್ಣಗಾಗಿದ್ದ ಹೃದಯಗಳನ್ನು ಬೆಚ್ಚಗಾಗಿಸಿತ್ತು. ಭಾರತವೇ ಮತ್ತೆ ಯೌವ್ವನದತ್ತ ಮರಳಲಾರಂಭಿಸಿತು. ಹೊಸ ಜಾಗೃತಿಯ ಅಲೆ ಭಾರತದ ಬಂಡೆಗಳನ್ನು ಬಡಿಯಲಾರಂಭಿಸಿತು. ಅಗೋ! ಈ ಅಲೆಯ ರಭಸಕ್ಕೆ ಒಂದೊಂದೇ ಬಂಡೆ ಕದಲಿತು. ಎದೆ ಸೆಟಿಸಿ ನಿಂತಿತು. ದಾಸ್ಯದ ಧೂಳನ್ನು ಕೆಡವಿಕೊಂಡು ಯುದ್ಧಕ್ಕೆ ಸಜ್ಜಾಯ್ತು. ವೈಸರಾಯ್ ಕರ್ಜನ್ ಇದನ್ನು ಗುರುತಿಸಿದ್ದ. ‘ಸಂಪ್ರದಾಯಬದ್ಧವಾದ ಆದರೆ ಪ್ರತಿಕ್ರಿಯಾತ್ಮಕವಾದ ವಿಚಿತ್ರವಾದುದೇನೋ ನಡೆಯುತ್ತಿದೆ’ ಎಂದು ಮ್ಯಾಕ್ಸ್ ಮುಲ್ಲರ್ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿ ಹೇಳಿದ್ದ. ಆದರೆ ಸಂಪ್ರದಾಯಕ್ಕೆ ಪೂರಕವಾದ ದಾಸ್ಯಕ್ಕೆ ಪ್ರತೀಕಾರ ರೂಪಿಯಾದ ಆ ರಾಸಾಯನಿಕ ಕ್ರಿಯೆಯನ್ನು ಗುರುತಿಸುವಲ್ಲಿ ಅವನು ಸೋತಿದ್ದ. ಅನುಮಾನವೇ ಇಲ್ಲ. ಅದು ವಿವೇಕಾನಂದರು ಹೊತ್ತಿಸಿದ ಕಿಡಿ. ಸಿಡಿದ ಮೊದಲ ಪಟಾಕಿ ದೇಶದಾದ್ಯಂತ ಸರಮಾಲೆಯನ್ನೇ ಹಬ್ಬಿಸಿತು. ಬಂಗಾಳದ ವಿಭಜನೆಯ ಹೊತ್ತಲ್ಲೆ ಇದರ ವ್ಯಕ್ತರೂಪ ಕಂಡಿತು. ಅರಿಯುವ ವೇಳೆಗೆ ಆಂಗ್ಲರ ಕೈ ಮೀರಿಯಾಗಿತ್ತು. ಭಾರತ ಹೊಸ ಮನ್ವಂತರದತ್ತ ಹೆಜ್ಜೆ ಹಾಕಿತ್ತು. ಇಷ್ಟಕ್ಕೂ ಮೂಲ ಪ್ರೇರಣೆ ಡಿಸೆಂಬರ್ 25ರ ಕನ್ಯಾಕುಮಾರಿಯ ಮೇಲಿನ ಸ್ವಾಮಿ ವಿವೇಕಾನಂದರ ತಪಸ್ಸು. ದೇಶದ ಪ್ರತಿಯೊಬ್ಬ ತರುಣನೂ ಆ ತಪಸ್ಸಿಗೆ ಅಣಿಯಾಗಬೇಕು. ದೇಹ ಬಂಡೆಯಾಗಬೇಕು. ಸಮಸ್ಯೆಗಳ ಅಲೆಗಳಿಗೆ ಜಗ್ಗದ ಕಲ್ಲುಬಂಡೆಯಾಗಬೇಕು. ಹಾಗೆಂದೇ ಈ ದಿನವನ್ನು ಯುವಾಬ್ರಿಗೇಡ್ ರಾಕ್ ಡೇ ಅಂತ ಆಚರಿಸೋದು. ಬಂಡೆಯ ಮೇಲೆ ಕುಳಿತು ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕ್ಷಮತೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಪರಿಹಾರ ಕಂಡುಕೊಂಡವ ತೋರಿದ ಹಾದಿಯಲ್ಲಿ ನಾಲ್ಕು ಹೆಜ್ಜೆಯಾದರೂ ಇಡುವ ತಾಕತ್ತು ತೋರುವ ಸಂಕಲ್ಪ ಮಾಡುವ ದಿನ, ಡಿಸೆಂಬರ್ 25 ನಮ್ಮ ಪಾಲಿಗೆ. ಈ ಬಾರಿಯದು ಮೂರನೇ ವರ್ಷದ ರಾಕ್ ಡೇ. ರಾಜ್ಯದ ನೂರಾರು ಕಡೆಗಳಲ್ಲಿ ಸಂಭ್ರಮದ ಆಚರಣೆ ನಡೆಯುತ್ತಿದೆ. ತಾರುಣ್ಯದ ಎದೆ ಗೂಡಲ್ಲಿ ವಿವೇಕಾನಂದರ ಹಣತೆ ಬೆಳಗುವುದಕ್ಕಿಂದ ಬೇರೆ ಆನಂದ ಭಾರತಕ್ಕೆ ಮತ್ತೇನಿದ್ದೀತು ಹೇಳಿ! ನಿಮಗೆಲ್ಲ ‘ರಾಕ್ ಡೇ’ ಶುಭಾಶಯಗಳು.

Leave a Reply