ವಿಭಾಗಗಳು

ಸುದ್ದಿಪತ್ರ


 

ಪಾಕೀಸ್ತಾನದೊಂದಿಗೆ ಯುದ್ಧ ಯಾವಾಗ?

 

ಭಾರತದ ಸೇನೆ ಹಿಂದೆಂದಿಗಿಂತಲೂ ಆಕ್ರಮಣಕಾರಿಯಾಗಿರುವ ಪರ್ವಕಾಲವಿದು. ಈಗ ಹೋರಾಡುವ ಮಾರ್ಗಗಳು ಎರಡು. ಸೈನ್ಯಕ್ಕೆ ಹೆಚ್ಚಿನ ಹಣ ಹೂಡಿ ಪಾಕಿನ ಎದುರು ನಿಲ್ಲುವುದು ಅಥವಾ ಭಾರತದ ವಿರುದ್ಧ ಕಾದಾಡುವುದೆಂದರೆ ಪಾಕೀಸ್ತಾನಕ್ಕೆ ವಿಪರೀತ ದುಬಾರಿಯಾಗುವಂತೆ ಮಾಡುವುದು. ಭಾರತ ಎರಡನೆಯದರತ್ತ ಹೆಚ್ಚು ಒಲವು ತೋರುತ್ತಿದೆ. ಚೀನಾದ ಬೆಂಬಲ ಇಲ್ಲದಂತೆ ಮಾಡಿ, ಪಾಕೀಸ್ತಾನವನ್ನು ಅದರ ನೆರೆ ಹೊರೆಯವರೇ ಹಣಿಯುವಂತೆ ಮಾಡುವತ್ತ ಭಾರತ ದೃಷ್ಟಿ ಹರಿಸಿದೆ. ಹಾಗಂತ ಸೈನ್ಯ ಪಾಕೀಸ್ತಾನಕ್ಕೆ ಸಮರ್ಥ ಉತ್ತರ ಕೊಡುವುದಿಲ್ಲವೆಂದುಕೊಳ್ಳಬೇಡಿ. ದಿನಾಂಕ, ಸ್ಥಳ, ಸಮಯವನ್ನು ತಾನೇ ನಿರ್ಧರಿಸಿ ಉತ್ತರಿಸಲಿದೆ ಸೇನೆ. ಈ ಬಾರಿಯ ಉತ್ತರ ಬಲು ಜೋರಾಗಿಯೇ ಇರಲಿದೆ.

400x400_94b5518f4f4ff9ca6459b8fab378d414

ಸೈನಿಕರ ತಲೆ ಕಡಿದು ಹೇಡಿಯಂತೆ ಪಾಕೀ ಸೈನಿಕರು ಓಡಿ ಹೋದರಲ್ಲ, ಅವತ್ತು ಮತ್ತು ಆನಂತರ ನಾಲ್ಕಾರು ದಿನ ದೇಶದಲ್ಲಿ ಸೂತಕದ ಛಾಯೆ ಹರಡಿತ್ತು. ಪಾಕೀಸ್ತಾನವನ್ನು ಮುಗಿಸಿಬಿಡಬೇಕೆಂದು ಕೂಗಾಡಿದ್ದರು ಅನೇಕರು. ಯುದ್ಧ ನಡೆದೇ ಬಿಡಲಿ ಎಂದರು ಹಲವರು. ಆ ಹೊತ್ತಲ್ಲಿಯೇ ಸೈನಿಕರ ಮೇಲೆ ಕೈ ಮಾಡಿದ ಕಾಶ್ಮೀರಿಗಳ ವಿಡಿಯೋ ವೈರಲ್ ಆಗಿದ್ದು. ಇದರ ಹಿಂದು ಹಿಂದೆಯೇ ಭಾರತೀಯ ಸೈನಿಕರು ಕಾಶ್ಮೀರಿ ತರುಣನಿಗೆ ಬಾರುಕೋಲಿನಿಂದ ಬಾರಿಸುತ್ತಿರುವ ಫೇಕ್ ವಿಡಿಯೋ ವ್ಯಾಪಕವಾಯಿತು. ಭಾರತೀಯ ಸೈನಿಕರನ್ನು ಕೊಂಡಾಡುವ ನೆಪದಲ್ಲಿ ನಮ್ಮವರೇ ಅನೇಕರು ಅದನ್ನು ಶೇರ್ ಮಾಡಿ ಫೇಕ್ ವಿಡಿಯೋ ಹಬ್ಬಿಸಿದವರ ಬಲ ಹೆಚ್ಚಿಸಿದ್ದರು. ಕಾಶ್ಮೀರದಲ್ಲಿ ತಲ್ಲಣದ ತರಂಗ ವಿಸ್ತರಿಸುತ್ತಲೇ ಹೋಯಿತು. ಕೊನೆಗೆ ಭಾರತೀಯ ಸೇನೆಯ ಲೆಫ್ಟಿನೆಂಟ್ ಉಮರ್ ಫಯಾಜ್ನನ್ನು ಶೋಪಿಯಾನ್ನಲ್ಲಿ ಅಪಹರಿಸಿ ಹತ್ಯೆ ಮಾಡಲಾಯ್ತು. ಇದಕ್ಕೂ ಸ್ವಲ್ಪ ಮುನ್ನ ನಿವೃತ್ತ ನೌಕಾ ಸೇನಾಧಿಕಾರಿ ಕುಲಭೂಷಣ್ ಜಾಧವ್ರನ್ನು ಗಲ್ಲಿಗೇರಿಸುವ ನಿರ್ಣಯವನ್ನೂ ಕಾಂಗರೂ ಕೋರ್ಟು ತೆಗೆದುಕೊಂಡಿತು. ಒಂದಾದ ಮೇಲೊಂದು ಘಟನೆಗಳು ಪಟಾಕಿ ಸಿಡಿದಂತೆ ಸಿಡಿದುಬಿಟ್ಟವು. ಇಷ್ಟನ್ನೇ ನೋಡಿದರೆ ಪಾಕೀಸ್ತಾನದ ಕೈವಾಡ ಈ ಎಲ್ಲಾ ಘಟನೆಗಳಲ್ಲಿ ನೇರವಾಗಿ ಕಾಣುತ್ತದೆ.

ಇದೇ ಹೊತ್ತಲ್ಲಿ ಭಾರತದ ಚಿತ್ತವನ್ನು ಪೂರ್ವದತ್ತ ಸೆಳೆಯಲು ನಡೆಸಿದ ಕುತಂತ್ರವೊಂದು ಮಾವೋವಾದಿಗಳ ರೂಪದಲ್ಲಿ ಸೈನಿಕರ ಮೇಲೆರಗಿತು. ಅದರ ನೋವಿನ ಕತೆ ಆರುವ ಮುನ್ನವೇ ಪಾಕೀಸ್ತಾನದ ಗಡಿಯಲ್ಲಿ ತಳಮಳ ಶುರುವಾಗಿತ್ತು. ಒಟ್ಟಾರೆ ಚಿತ್ರಣ ಇನ್ನೂ ನಿಚ್ಚಳವಾಗಲಿಲ್ಲವೆಂದರೆ ಇನ್ನೂ ಸ್ಪಷ್ಟ ಪಡಿಸುತ್ತೇನೆ. ಈ ಎರಡೂ ದಿಕ್ಕಿನ ದಾಳಿಗೆ ಕೆಲವೇ ದಿನಗಳ ಮುನ್ನ ಚೀನಾ ತವಾಂಗ್ಗೆ ಬಂದ ದಲೈಲಾಮಾರನ್ನು ವಿರೋಧಿಸಿ ಪ್ರತಿಭಟನೆ ಸಲ್ಲಿಸಿತ್ತು. ಕಾಶ್ಮೀರದ ವಿಚಾರದಲ್ಲಿ ತಾನು ಮೂಗು ತೂರಿಸುವುದಾಗಿ ಬೆದರಿಸಿತ್ತು. ಅರುಣಾಚಲ ಪ್ರದೇಶದ ನಗರಗಳ ಹೆಸರುಗಳನ್ನು ಬದಲಿಸಿ ಪ್ರಕಟಿಸಿತ್ತು. ಒಂದೆಡೆ ಮಾವೋವಾದಿಗಳನ್ನೂ ಇನ್ನೊಂದೆಡೆ ಜಿಹಾದಿ ಉಗ್ರರನ್ನು ಛೂ ಬಿಟ್ಟು ತನ್ನ ಎದುರು ಹಾಕಿಕೊಂಡರೆ ಆಗುವ ಅನಾಹುತದ ಝಲಕ್ ತೋರಿಸಿತ್ತು ಅಷ್ಟೇ. ಈಗ ಹೇಳಿ. ದಾಳಿಯ ಹಿಂದಿದ್ದಿದ್ದು ಚೀನಾ ಅಂತ ಸ್ಪಷ್ಟವಾಗಿ ಗೊತ್ತಿದ್ದ ಮೇಲೂ ಏಕಾಕಿ ಪಾಕೀಸ್ತಾನದ ಮೇಲೆ ಏರಿ ಹೋಗುವುದು ಬುದ್ಧಿವಂತಿಕೆಯ ಲಕ್ಷಣವಾಗುತ್ತಿತ್ತೇನು? ಕೆಲವೊಮ್ಮೆ ದಾಳಿಯ ವೇಳೆ ತಾಳ್ಮೆ ವಹಿಸಿ ಸರಿಯಾದ ಸಮಯಕ್ಕೆ ತಿರುಗಿ ಬಾರಿಸುವುದು ಯುದ್ಧ ಕೌಶಲವೇ. ಭಾರತ ಅದಕ್ಕೇ ಯೋಜನೆ ರೂಪಿಸಿಕೊಂಡಿತು. ಕಣ್ಣೆದುರಿಗೆ ಕಾಣುವ ಪಾಕೀಸ್ತಾನವನ್ನಂತೂ ದೀರ್ಘಕಾಲ ಏಳದಂತೆ ಬಡಿಯಲೇಬೇಕು ಆದರೆ ಗುರಿ ಚೀನಾದೆಡೆಗೇ ನೆಟ್ಟಿರಬೇಕು. ಕೇರಂನಲ್ಲಿ ಆಟಗಾರ ರಾಣಿಯನ್ನು ಅಟ್ಟಿಸಿಕೊಂಡು ಹೋಗೋದಿಲ್ವೇ? ಹಾಗೆ!

 

ಪಾಕೀಸ್ತಾನದೊಂದಿಗಿನ ಭಾರತದ ರಾಜನೀತಿಯ ಹೆಜ್ಜೆಗಳು ಸ್ಪಷ್ಟ ಮತ್ತು ದಿಟ್ಟವೇ. ಆರಂಭದಲ್ಲಿ ಶಾಲು-ಶಾದಿಗಳ ರಾಜನೀತಿ ಮಾಡಿ ಜಗತ್ತಿನಲ್ಲಿ ತನ್ನ ಬಗ್ಗೆ ಇದ್ದ ಅನುಮಾನ ತೊಳೆದುಕೊಂಡಿದ್ದರು ಮೋದಿ. ಸ್ನೇಹದ ಕೈ ಚಾಚಿದ್ದು ತಾವೇ ಎಂಬ ಸ್ಪಷ್ಟ ಸಂದೇಶ ಜಗತ್ತಿಗೆ ರವಾನಿಸಿ ತಮ್ಮ ಇಚ್ಚೆಯನ್ನು ಸ್ಪಷ್ಟ ಪಡಿಸಿಬಿಟ್ಟಿದ್ದರು. ಪಾಕೀಸ್ತಾನವೇ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿರುವುದನ್ನು ಕಾಲಕಾಲಕ್ಕೆ ಸಾಬೀತು ಪಡಿಸಿ ಸರ್ಜಿಕಲ್ ಸ್ಟ್ರೈಕ್ನ್ನೂ ಮಾಡಿಬಿಟ್ಟಿತು ಭಾರತ. ಮಾಡಿದ್ದಷ್ಟೇ ಅಲ್ಲ. ಅದನ್ನು ಜಗಜ್ಜಾಹೀರುಗೊಳಿಸಿ ಪಾಕೀಸ್ತಾನಕ್ಕೆ ಮುಖಭಂಗವಾಗುವಂತೆ ಮಾಡಿತು. ಪಾಕೀ ಸೇನೆ ಸರ್ಜಿಕಲ್ ಸ್ಟ್ರೈಕ್ ನಿರಾಕರಿಸುವಾಗಲೇ ಅಲ್ಲಿನ ಅಧ್ಯಕ್ಷ ಈ ದಾಳಿಯನ್ನು ಖಂಡಿಸಿ ಜಗತ್ತಿನ ಮುಂದೆ ಗೋಳು ಹೋಯ್ದುಕೊಳ್ಳುತ್ತಿದ್ದ. ಆದರೆ ಜಗತ್ತಿನ ರಾಷ್ಟ್ರಗಳೆಲ್ಲ ತನ್ನ ಗಡಿ ಕಾಯ್ದುಕೊಳ್ಳುವ ಅಧಿಕಾರ ಭಾರತಕ್ಕೆ ಇದ್ದೇ ಇದೆ ಎಂದು ನಮ್ಮ ಪರವಾಗಿಯೇ ನಿಂತು ಪಾಕಿಗೆ ಅಚ್ಚರಿ ಮಾಡಿಸಿತ್ತು. ಶಾಲು-ಶಾದಿಗಳ ರಾಜನೀತಿಯ ಲಾಭ ಅದು.

3

ಪಾಕೀಸ್ತಾನಕ್ಕೆ ಮತ್ತೊಂದು ಭಯಾನಕ ‘ಶಾಕ್’ ಎಂದರೆ ಸಿಂಧೂನದಿ ಒಪ್ಪಂದವನ್ನು ಮುರಿಯಲು ಸಿದ್ಧವೆಂದು ಭಾರತ ಘೋಷಿಸಿದ್ದು. 1960 ರಲ್ಲಿ ನೆಹರೂ ಮತ್ತು ಅಯೂಬ್ ಖಾನ್ರ ನಡುವೆ ಸಿಂಧು, ಬಿಯಾಸ್, ರಾವಿ, ಸಟ್ಲೆಜ್, ಝೀಲಂ, ಚೀನಾಬ್ ನದಿಗಳ ಅಧಿಕಾರದ ಕುರಿತಂತೆ ಆದ ಒಪ್ಪಂದ ಅದು. ಭಾರತ ಶೇಕಡಾ 20 ರಷ್ಟು ಮಾತ್ರ ನೀರನ್ನು ಬಳಸಬೇಕೆಂಬ ಪಾಕೀ ಬೇಡಿಕೆಗೆ ಜಾಗತಿಕ ಮಟ್ಟದಲ್ಲಿ ಒಪ್ಪಿಗೆ ಕೊಟ್ಟಿತ್ತು ಭಾರತ. 1965, 1971, 1999 ರಲ್ಲಿ ಪಾಕಿನೊಂದಿಗೆ ಕದನವಾದಾಗಲೂ ಭಾರತ ಈ ಒಪ್ಪಂದದ ಬಗ್ಗೆ ಚಕಾರವೆತ್ತಿರಲಿಲ್ಲ. ಆದರೆ ಈಗ ಮೋದಿ ಸಕರ್ಾರ ಮುಲಾಜು ನೋಡದೇ ತೀರಾ ಕಿರಿಕಿರಿಯಾದರೆ ಒಪ್ಪಂದವನ್ನೂ ಮರುಪರಿಶೀಲಿಸುವ ಮಾತನ್ನಾಡಿತು.
ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಂದೆಂದಿಗಿಂತಲೂ ಆಕ್ರಮಣಕಾರಿಯಾಗಿ ಪಾಕೀಸ್ತಾನದ ವಿರುದ್ಧ ಮಾತನಾಡಲಾರಂಭಿಸಿತು. ಸುಷ್ಮಾಸ್ವರಾಜ್, ಸೈಯ್ಯದ್ ಅಕ್ಬರುದ್ದೀನ್ ಮೊದಲಾದವರೆಲ್ಲ ಬಲು ಜೋರಾಗಿಯೇ ಭಾರತದ ಪರವಾದ ವಾದ ಮಂಡಿಸಿ ಪಾಕೀಸ್ತಾನದ ಪರಿಸ್ಥಿತಿಯನ್ನು ದೈನೇಸಿಯಾಗಿಸಿದರು. ಅದರ ಜೊತೆ ಜೊತೆಯಲ್ಲಿಯೇ ಬಲೂಚಿಸ್ತಾನದಲ್ಲಿ ಪ್ರತ್ಯೇಕತಾವಾದದ ಬೀಜ ಹೆಮ್ಮರವಾಗಿ ಬೆಳೆಸುವಂತೆ ಮಾಡಿ ಪಾಕೀಸ್ತಾನ ಒಳಗೊಳಗೇ ಕುದಿಯುವಂತೆ ಮಾಡಲಾಯಿತು. ಎಲ್ಲಕ್ಕೂ ಮಿಗಿಲಾಗಿ ಪಟಾಣ್ಕೋಟ್ ದಾಳಿಯಾದಾಗ ವಿಚಾರಣೆಗಾಗಿ ಪಾಕೀ ಅಧಿಕಾರಿಗಳಿಗೆ ಭಾರತದ ನೆಲವನ್ನು ಬಿಟ್ಟುಕೊಟ್ಟ ಮೋದಿ ಸರ್ಕಾರದ ಮೇಲೆ ಅನೇಕರು ಕಿಡಿಕಾರಿದ್ದರು. ಆದರೆ ಇಡಿಯ ಪ್ರಹಸನದಲ್ಲಿ ಪಾಕೀಸ್ತಾನ ತಾನೇ ಸಿಕ್ಕಿಹಾಕಿಕೊಂಡುಬಿಟ್ಟಿತ್ತು. ಏಕೆಂದರೆ ಅಲ್ಲಿನ ಅಧಿಕಾರಿಗಳು ಇಲ್ಲಿಗೆ ಬಂದು ಹೋದ ಮರುಕ್ಷಣವೇ ಭಾರತ ಮೌಲಾನಾ ಮಸೂದ್ ಅಜರ್ನ ವಿಚಾರಣೆ ಪಾಕೀ ನೆಲ ಮುಕ್ತಗೊಳಿಸುವ ಬೇಡಿಕೆ ಇಟ್ಟಿತು. ಪತರಗುಟ್ಟಿದ ಪಾಕೀಸ್ತಾನ ನಿರಾಕರಿಸಿ ಜಗತ್ತಿನ ರಾಷ್ಟ್ರಗಳೆದುರು ಮತ್ತೆ ಮಂಕಾಗಿಬಿಟ್ಟಿತು. ಚೀನಾ ಬಯಸಿಯೂ ಪಾಕೀಸ್ತಾನಕ್ಕೆ ಸಹಾಯ ಮಾಡಲಾಗಲಿಲ್ಲ.

CPEC

ಕೈ ಕೈ ಹಿಸುಕಿಕೊಳ್ಳುತ್ತಿದ್ದ ಚೀನಾ ತನ್ನ ಚೀನಾ ಪಾಕ್ ಎಕನಾಮಿಕ್ ಕಾರಿಡಾರನ್ನು ಉಳಿಸಿಕೊಳ್ಳಲು ಭಾರತವನ್ನು ತಣ್ಣಗೆ ಮಾಡಲೇಬೇಕಿತ್ತು. ಅದಕ್ಕೆ ಬಗೆ ಬಗೆಯ ಉಪಾಯ ಮಾಡುತ್ತಿತ್ತು. ಆದರೆ ಈ ಬಾರಿ ಭಾರತ ಎಚ್ಚರಿಕೆಯಿಂದಲೇ ಹೆಜ್ಜೆ ಇಟ್ಟು, ಇಡಿಯ ಕಾಶ್ಮೀರ ತನ್ನದು ಎಂದು ಜಗತ್ತಿನೆದುರು ವಾದ ಮಂಡಿಸಿತು. ಚೀನಾಕ್ಕಿದು ಕಿರಿಕಿರಿ. ರೆನ್ಮಿನ್ ವಿಶ್ವವಿದ್ಯಾಲಯದ ಡೋನ್ ವಾಂಗ್ಯಿವೆಯಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿ ‘ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದಲ್ಲ’ ಎಂದು ಅಲವತ್ತುಕೊಂಡ. ಸ್ವತಃ ಚೀನಾ ಅಧಿಕೃತವಾಗಿ ಭಾರತದೊಂದಿಗೆ ನಯವಾದ ಮಾತುಗಳನ್ನಾಡುತ್ತಾ ಸೀಪೆಕ್ನ ಹೆಸರನ್ನು ಬೇಕಿದ್ದರೆ ಬದಲಿಸೋಣ ಎಂದಿತು. ಸಿಲ್ಕ್ ರೂಟ್ನ ಮೂಲಕ ಜಗತ್ತನ್ನು ಬೆಸೆಯುವಲ್ಲಿ ಭಾರತದ ಪಾತ್ರ ಬಲು ದೊಡ್ಡದಿತ್ತು ಎಂದು ನೆನಪಿಸಿಕೊಟ್ಟಿತು.

ಹಾಗಂತ ಭಾರತ ಇಲ್ಲಿಗೇ ನಿಂತಿಲ್ಲ. ಶ್ರೀಲಂಕಾವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊಲಂಬೋದಲ್ಲಿ ತನ್ನ ಸಬ್ಮೇರಿನ್ ನಿಲ್ಲಿಸುವ ಚೀನಾದ ಕೋರಿಕೆಯನ್ನು ತಿರಸ್ಕರಿಸುವಂತೆ ಪ್ರೇರೇಪಿಸಿದೆ. 2014 ರಲ್ಲಿ ಚೀನಾ ಅನುಮತಿ ಪಡಕೊಂಡಿತ್ತು. ಆದರೆ ಈ ಬಾರಿ ಭಾರತದ ರಾಜನೀತಿ ಗೆದ್ದಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಜಗತ್ತನ್ನು ಅಹ್ವಾನಿಸಿ, ಅತ್ತ ಇಸ್ರೇಲಿನೊಂದಿಗೆ ಸಬ್ಮೇರಿನ್ ಅಭ್ಯಾಸಕ್ಕೆ ತಯಾರಿ ನಡೆಸಿ ಭಾರತ ಮಾಡುತ್ತಿರುವ ಪ್ರಯತ್ನ ಚೀನಾಕ್ಕೆ ನುಂಗಲಾರದ ತುತ್ತು.

ಪಾಕೀಸ್ತಾನಕ್ಕೆ ಹಣ, ಶಸ್ತ್ರ ಮತ್ತು ನೈತಿಕ ಬೆಂಬಲವೆಲ್ಲ ದಕ್ಕುತ್ತಿರೋದು ಚೀನಾದಿಂದ. ಇದನ್ನೇ ತುಂಡರಿಸಿಬಿಟ್ಟರೆ ಅವರ ಶಕ್ತಿ ಉಡುಗಿ ಹೋಗೋದು ನಿಸ್ಸಂಶಯ. ಭಾರತ ಮೊದಲ ಹೆಜ್ಜೆ ಇಟ್ಟಿದ್ದು ಅದೇ ದಿಕ್ಕಿನಲ್ಲಿ. ಆಮೇಲೆ ನಿಜವಾದ ಆಟ ಶುರುವಾಯ್ತು. ನೇರ ಯುದ್ಧ ಮಾಡಲು ಭಾರತ ನಿಂತರೆ ಅದು ಚೀನಾಕ್ಕೆ ಲಾಭವೆಂದರಿತೇ ಅಫ್ಘಾನಿಸ್ತಾನ ಮತ್ತು ಇರಾನ್ ಗಡಿಗಳಲ್ಲಿ ಪಾಕೀಸ್ತಾನ ಕದನಕ್ಕೆ ತಯಾರಾಗುವಂತೆ ಮಾಡಲಾಯಿತು. ಅಫ್ಘಾನಿಸ್ತಾನದ ಗಡಿಯಲ್ಲಿ ಪಾಕೀ ಸೈನಿಕರ ಶವಗಳು ಉರುಳಿಬಿದ್ದವು. ಇರಾನ್ ಒಂದು ಹೆಜ್ಜೆ ಮುಂದೆ ಹೋಗಿ ಕುಲಭೂಷಣ್ ಜಾಧವ್ರನ್ನು ಬಂಧಿಸಿದ್ದು ಇರಾನ್ ನೆಲದಿಂದಲೇ ಆಗಿದ್ದರಿಂದ ಅವರನ್ನು ತಮ್ಮ ತೆಕ್ಕೆಗೆ ಒಪ್ಪಿಸಬೇಕೆಂದು ತಾಕೀತು ಮಾಡಲಾರಂಭಿಸಿತು. ಬಲೂಚಿಸ್ತಾನದಲ್ಲಿ ಪ್ರತ್ಯೇಕತಾವಾದಿಗಳು ತೀವ್ರವಾದ ಗಲಾಟೆ ಆರಂಭಿಸಿದರು. ಇತ್ತ ಪಾಕೀಗಳ ಬೆಂಬಲದಿಂದ ಹಣ ಪಡೆದು ಕಾಶ್ಮೀರದಲ್ಲಿ ಭಯೋತ್ಪಾದನಾ ಕೃತ್ಯ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ನಿರ್ಣಯ ಕೈಗೊಳ್ಳಲಾಯಿತು. ಅದರ ಪರಿಣಾಮದಿಂದಲೇ 15 ವರ್ಷಗಳ ಹಿಂದೆಯೇ ಸಾಮಾನ್ಯ ನಾಗರಿಕರಿಗೆ ತೊಂದರೆಯಾಗುವುದರಿಂದ ಇನ್ನು ಬೇಡವೆಂದು ನಿಶ್ಚಯಿಸಿದ್ದ ‘ಕಾರ್ಡನ್ ಅಂಡ್ ಸರ್ಚ್’ ಆಪರೇಶನ್ನ್ನು ಮತ್ತೆ ಜಾರಿಗೆ ತಂದು ಮನೆ ಮನೆಗಳಿಗೆ ನುಗ್ಗಿ ಭಯೋತ್ಪಾದಕರನ್ನು ಬಲಿಹಾಕುವ ಚಿಂತನೆಗೆ ವೇಗ ದೊರೆಯಿತು.

indian-army-new

ಭಾರತದ ಸೇನೆ ಹಿಂದೆಂದಿಗಿಂತಲೂ ಆಕ್ರಮಣಕಾರಿಯಾಗಿರುವ ಪರ್ವಕಾಲವಿದು. ಈಗ ಹೋರಾಡುವ ಮಾರ್ಗಗಳು ಎರಡು. ಸೈನ್ಯಕ್ಕೆ ಹೆಚ್ಚಿನ ಹಣ ಹೂಡಿ ಪಾಕಿನ ಎದುರು ನಿಲ್ಲುವುದು ಅಥವಾ ಭಾರತದ ವಿರುದ್ಧ ಕಾದಾಡುವುದೆಂದರೆ ಪಾಕೀಸ್ತಾನಕ್ಕೆ ವಿಪರೀತ ದುಬಾರಿಯಾಗುವಂತೆ ಮಾಡುವುದು. ಭಾರತ ಎರಡನೆಯದರತ್ತ ಹೆಚ್ಚು ಒಲವು ತೋರುತ್ತಿದೆ. ಚೀನಾದ ಬೆಂಬಲ ಇಲ್ಲದಂತೆ ಮಾಡಿ, ಪಾಕೀಸ್ತಾನವನ್ನು ಅದರ ನೆರೆ ಹೊರೆಯವರೇ ಹಣಿಯುವಂತೆ ಮಾಡುವತ್ತ ಭಾರತ ದೃಷ್ಟಿ ಹರಿಸಿದೆ. ಇವೆಲ್ಲವೂ ದೀರ್ಘಕಾಲದ ಯೋಜನೆಗಳೇ. ಹಾಗಂತ ಸೈನ್ಯ ಪಾಕೀಸ್ತಾನಕ್ಕೆ ಸಮರ್ಥ ಉತ್ತರ ಕೊಡುವುದಿಲ್ಲವೆಂದುಕೊಳ್ಳಬೇಡಿ. ದಿನಾಂಕ, ಸ್ಥಳ, ಸಮಯವನ್ನು ತಾನೇ ನಿರ್ಧರಿಸಿ ಉತ್ತರಿಸಲಿದೆ ಸೇನೆ. ಈ ಬಾರಿಯ ಉತ್ತರ ಬಲು ಜೋರಾಗಿಯೇ ಇರಲಿದೆ.

ಹ್ಞಾಂ. ಹೇಳುವುದು ಮರೆತಿದ್ದೆ. ಅಂತರರಾಷ್ಟ್ರೀಯ ನ್ಯಾಯಾಲಯ ಕುಲಭೂಷಣ್ ಜಾಧವ್ರನ್ನು ನೇಣಿಗೇರಿಸಬಾರದೆಂದು ನಿರ್ಣಯ ಘೋಷಿಸಿರುವುದೂ ಭಾರತದ ಪಾಲಿಗೆ ರಾಜನೈತಿಕ ವಿಜಯವೇ!

Leave a Reply