ವಿಭಾಗಗಳು

ಸುದ್ದಿಪತ್ರ


 

ಪುಣ್ಯಕೋಟಿಯ ಬೆಂಬೆತ್ತಿರುವ ಪಾಪಿಷ್ಠರು

ಕ್ಯೂಬಾದಲ್ಲಿ ಜನ ಗೋವನ್ನು ಪೂರ್ತಿ ತಿಂದು ಖಾಲಿ ಮಾಡಿದ ಮೇಲೆ, ಅಳಿದುಳಿದ ಗೋವನ್ನು ಉಳಿಸಲು ಅಲ್ಲಿನ ಸರ್ಕಾರ ಗೋಹತ್ಯೆ ನಿಷೇಧಿಸಿತಂತೆ. ಇರಾನ್‌ನಲ್ಲಿ ಪಾರ್ಸಿಯವನೊಬ್ಬ ಕೇಳಿಕೊಂಡನೆನ್ನುವ ಕಾರಣಕ್ಕೆ ಅಲ್ಲಿನ ಮುಸ್ಲಿಮ್ ಸರ್ಕಾರ ಗೋಹತ್ಯೆ ನಿಷೇಧಿಸಿತಂತೆ. ಭಾರತದಲ್ಲಿ ಮಾತ್ರ ಹಾಗಾಗುವುದಿಲ್ಲ ಎನ್ನುವುದೇ ಅಚ್ಚರಿ!

ಹೊಸ ಮುಖ್ಯಮಂತ್ರಿ, ಹೊಸ ಸರ್ಕಾರವನ್ನು ಆರಿಸಿದುದರ ಫಲವನ್ನು ಇಷ್ಟು ಬೇಗ ಉಣ್ಣಬೇಕಾಗುತ್ತದೆಂದು ಖಂಡಿತ ಗೊತ್ತಿರಲಿಲ್ಲ. ವಿಶೇಷವಾಗಿ ಕರಾವಳಿ ಭಾಗದವರು! ಮಾನ್ಯವರ ಸಿದ್ಧರಾಮಯ್ಯನವರು ಅಧಿಕಾರ ಪಡಕೊಂಡ ದಿನವೇ ಗೋವುಗಳನ್ನು ಕೊಲ್ಲುವ ತಮ್ಮ ಸಂಕಲ್ಪವನ್ನು ಗಟ್ಟಿಯಾಗಿ ಉಚ್ಚರಿಸಿದ್ದರು. ಆ ಪಾಪದ ಗೋವುಗಳ ಮೇಲೆ ಅವರಿಗೆ ಅದೇನು ಆಕ್ರೋಶವಿತ್ತೋ ದೇವರೇ ಬಲ್ಲ. ಅಷ್ಟು ಕೋಪ ನಮ್ಮ ಸೈನಿಕರನ್ನು ಕೊಂದ ಪಾಕಿಸ್ತಾನಿಗರ ಮೇಲೆ ಈ ದೇಶದ ಪ್ರಧಾನ ಮಂತ್ರಿಗೂ ಇಲ್ಲ!
ಹಿಂದಿನ ಸರ್ಕಾರ ಒಪ್ಪಿಕೊಂಡು ಆಚರಣೆಗೆ ತಂದ ಕಾಯ್ದೆಯನ್ನು ವಾಪಸು ತೆಗೆದುಕೊಳ್ಳುವುದು ಉಪ್ಪಿನ ಕಾಯಿ ನೆಕ್ಕಿದಷ್ಟು ಸುಲಭವಲ್ಲ ಬಿಡಿ. ಆದರೆ ಮುಖ್ಯ ಮಂತ್ರಿಯವರು ಕೊಟ್ಟ ಹೇಳಿಕೆ ಧೂರ್ತರ ಧಾರ್ಷ್ಟ್ಯಕ್ಕೆ ಕಸುವು ತುಂಬಲು ಸಾಕಷ್ಟೇ. ಕರಾವಳಿ ಭಾಗದಲ್ಲಿ ಅದಾಗಲೇ ದನಗಳ್ಳತನ ಮಿತಿ ಮೀರಿ ಹೋಗಿದೆ. ಮೊದಲೆಲ್ಲ ರಸ್ತೆಯ ಮೇಲಿರುತ್ತಿದ್ದ ಬೀಡಾಡಿ ದನಗಳನ್ನು ಹೊತ್ತೊಯ್ಯುತ್ತಿದ್ದ ಕಟುಕರು ಈಗ ಕೊಟ್ಟಿಗೆಗೆ ನುಗ್ಗಿ, ಅಕ್ಷರಶಃ ತಲವಾರ್ ತೋರಿಸಿ ಮನೆಯವರನ್ನು ಬೆದರಿಸಿ ಗೋವುಗಳನ್ನು ಒಯ್ಯಲಾರಂಭಿಸಿದ್ದಾರೆ. ಉಪ್ಪಿನಂಗಡಿಯಲ್ಲಂತೂ ಕಟುಕರ ಕಣ್ತಪ್ಪಿಸಿ ಮನೆಯ ಹಿಂಬದಿಯಲ್ಲಿ ಮುಚ್ಚಿಟ್ಟುಕೊಂಡಿದ್ದ ದನವನ್ನು ಬಾಲ ಹಿಡಿದು ದರದರನೆ ಎಳೆದೊಯ್ಯುವಾಗ ಅದರ ಚೀರಾಟ ಅಕ್ಕಪಕ್ಕದವರನ್ನೆಬ್ಬಿಸಿತ್ತು. ಕಟುಕರ ಕೈಲಿ ತಲವಾರುಗಳನ್ನು ಕಂಡವರು ಮಿಸುಕಾಡದೆ ಉಳಿಯಬೇಕಾಯ್ತು. ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕಾರವಾಗುತ್ತಿಲ್ಲ. ಕಟುಕರ ದೌರ್ಜನ್ಯ ಕಡಿಮೆಯಾಗುತ್ತಿಲ್ಲ. ಸ್ವತಃ ಮುಖ್ಯಮಂತ್ರಿಗಳೇ ರಕ್ಷಣೆಗೆ ನಿಂತು ಬಿಟ್ಟಿದ್ದಾರಲ್ಲ! ಶಭಾಷ್!!

ಸುರಬಹಿಕರಾವಳಿ ಅಷ್ಟೇ ಅಲ್ಲ. ರಾಜ್ಯದ ಉದ್ದಗಲಕ್ಕೂ ಗೋಹಂತಕರು ಚಿಗಿತು ಕುಂತುಬಿಟ್ಟಿದ್ದಾರೆ. ಬೆಂಗಳೂರಿನಿಂದ ಆಂಧ್ರದೆಡೆಗೆ ಸಾಗುತ್ತಿದ್ದ ಗೋವುಗಳನ್ನು ಅಡ್ಡ ಹಾಕಿ ಪೊಲೀಸ್ ಠಾಣೆಗೆ ಒಯ್ದದ್ದಷ್ಟೇ ಬಂತು; ಇಸ್ಲಾಂಪುರದಲ್ಲಂತೂ ಸಾಮಾಜಿಕ ಕಾರ್ಯಕರ್ತೆಯನ್ನು ಕಟುಕರು ಅವಮಾನಿಸಿದ್ದೂ ಆಯಿತು. ರಾಜ್ಯ ಮಾತ್ರ ತಣ್ಣಗಿತ್ತು. ಗೋವನ್ನು ಹಿಡಿದ ಸುದ್ದಿ ಗೊತ್ತಾದೊಡನೆ ಎಲ್ಲಿಂದಲೋ ಧಾವಿಸಿ ಬರುತ್ತಾರಲ್ಲ ಗೂಂಡಾಗಳು, ಅವರು ಯಾರು? ಅವರ ಉದ್ದೇಶವೇನು ಅನ್ನೋದನ್ನಾದರೂ ನಮ್ಮ ಇಲಾಖೆಗಳು ತಿಳಿದುಕೊಳ್ಳುವುದು ಬೇಡವೇ? ಗೋಮಾಂಸಕ್ಕಾಗಿ ಹೀಗೆ ಒಟ್ಟಾಗಿ ನುಗ್ಗುತ್ತಾರಲ್ಲ ಅವರಿಗೆ ಬೇಕಿರೋದು ನಿಜವಾಗಿಯೂ ಗೋವಾ? ಅಥವಾ ಬೇರೆ ಏನಾದರೂ ಹುನ್ನಾರವಾ? ಅದ್ಯಾಕೆ ಯಾವ ಮಾಧ್ಯಮವೂ ಪ್ರಶ್ನಿಸೋದಿಲ್ಲ? ಗಣೇಶನ ಮೆರವಣಿಗೆ ಹೋದರೆ ಒಂದು ಕೋಮಿಗೆ ನೋವಾಗುತ್ತೆ ಅನ್ನೋ ಕಾರಣಕ್ಕಾಗಿ ಶೋಭಾಯಾತ್ರೆಯನ್ನೇ ಬೇರೆ ಮಾರ್ಗದಲ್ಲಿ ಒಯ್ಯುತ್ತೇವಲ್ಲ, ಈ ಸೌಹಾರ್ದತೆಯನ್ನು ನಮಗೆ ಯಾರೂ ತೋರಿಸೋದು ಬೇಡವಾ?
ಅವೆಲ್ಲ ಒತ್ತಟ್ಟಿಗಿರಲಿ, ಮುಂಬೈನಲ್ಲಿ ಗೋಭಕ್ಷಕರು ಗರ್ಭಿಣಿಯಾಗಿದ್ದು ಹಾಲು ಕೊಡುವ ಗೋವನ್ನೇ ಅಪೇಕ್ಷಿಸುತ್ತಾರಂತೆ. ಕಡಿಯುವ ಹತ್ತು ನಿಮಿಷಕ್ಕೂ ಮುಂಚೆ ಹಾಲು ಕರೆದು ತಲೆ ತೆಗೆಯುತ್ತಾರಂತೆ. ಗೋಮಾಂಸದೊಂದಿಗೆ ಭ್ರೂಣವನ್ನೂ ಮಾರಿ ಇದು ತಾಯಿಯದ್ದೇ ಎಂದು ಖಚಿತಪಡಿಸಲಾಗುತ್ತಂತೆ. ಹಾಗಂತ ಮೇನಕಾ ಗಾಂಧಿ ಹೇಳುತ್ತಾರಲಲ್ಲದೇ ಇದಕ್ಕೆ ಸಂಬಂಧಪಟ್ಟ ದೃಶ್ಯ ದಾಖಲೆಗಳನ್ನೂ ಉಲ್ಲೇಖಿಸುತ್ತಾರೆ.
ಅದಾಗಲೇ ಬಿಹಾರದ ಹಳ್ಳಿಗಳಲ್ಲಿ ಗೋವು ಕಾಣೆಯಾಗಿದೆ. ಆಂಧ್ರದಲ್ಲಿ ಪಿಸ್ತೂಲು ಹಿಡಿದು ದನಗಳನ್ನು ಒಯ್ಯಲಾಗುತ್ತಿದೆ. ಉತ್ತರ ಪ್ರದೇಶವಂತೂ ಕಸಾಯಿಖಾನೆಗಳ ಅಡ್ಡಾ ಆಗಿಬಿಟ್ಟಿದೆ. ರಾಜಸ್ತಾನದಿಂದ ಗೋವುಗಳನ್ನು ಗುಜರಾತಿಗೆ ಒಯ್ದು ಅಲ್ಲಿಂದ ಮುಂಬೈಗೆ ಸಾಗಿಸಲಾಗುತ್ತದೆ. ಒಡಿಶಾ, ಬಿಹಾರದ ದನಗಳು ಬಂಗಾಳದಲ್ಲಿ ಮುಕ್ತಿ ಕಂಡು ಬಾಂಗ್ಲಾದ ಮೂಲಕ ರಫ್ತಾಗುತ್ತವೆ. ಆಂಧ್ರ-ಕರ್ನಾಟಕ-ತಮಿಳುನಾಡುಗಳಿಂದ ಕೇರಳಕ್ಕೆ ಹೋಗುವ ದನಗಳನ್ನು ಕಡಿದು ಮಧ್ಯಪೂರ್ವ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಹೀಗೆ ರಫ್ತು ಮಾಡಲೆಂದೇ ಸರಿಸುಮಾರು ೩೦ ಸಾವಿರ ಅಧಿಕೃತ ಕಸಾಯಿಖಾನೆಗಳಿದ್ದರೆ, ದೆಹಲಿಯೊಂದರಲ್ಲಿಯೇ ೧೧ ಸಾವಿರ ಅನಧಿಕೃತ ಕಸಾಯಿಖಾನೆಗಳಿವೆ. ಅಂದ ಮೇಲೆ ಗೋವುಗಳ ರೋದನ ಕೇಳುವುದಾದರೂ ಯಾರು ಹೇಳಿ?
ಅಮೆರಿಕದ ಕೃಷಿ ವಿಭಾಗ ಬಲುಹಿಂದೆಯೇ ೨೦೧೨ರ ವೇಳೆಗೆ ಭಾರತ ಒಂದೂವರೆ ದಶಲಕ್ಷ ಟನ್‌ಗಳಷ್ಟು ಗೋಮಾಂಸ ರಫ್ತು ಮಾಡುವುದೆಂದು ಭವಿಷ್ಯ ನುಡಿದಿತ್ತು. ನಾವು ಅದಾಗಲೇ ಅದನ್ನು ದಾಟಿ ಬಹಳ ಮುಂದೆ ಬಂದಾಗಿದೆ. ನಮ್ಮಿಂದ ಕದ್ದೊಯ್ದು ರಫ್ತು ಮಾಡುವ ಬಾಂಗ್ಲಾ ದೇಶವೇ ಒಂದು ಲಕ್ಷ ಟನ್‌ಗಿಂತಲೂ ಹೆಚ್ಚು ರಫ್ತು ಮಾಡುತ್ತದೆಂದ ಮೇಲೆ ಲೆಕ್ಕ ಹಾಕಿ. ಕುಸಿಯುತ್ತಿರುವ ರೂಪಾಯಿಯನ್ನು ತಡೆಯಲು ರಫ್ತು ಹೆಚ್ಚಿಸಬೇಕಲ್ಲ ಅದಕ್ಕೆ ನಿರ್ಲಜ್ಜ ಸರ್ಕಾರಗಳು ಕಂಡುಕೊಂಡ ಮಾರ್ಗ ಇದು. “ಇಟ್ಟರೆ ಸೆಗಣಿಯಾದೆ” ಅಂತೆಲ್ಲ ಹಾಡುತ್ತೇವಲ್ಲ “ಕಟುಕರೊಯ್ದರೆ ವಿದೇಶೀ ವಿನಿಮಯವಾದೆ” ಅಂತಾನೂ ಸೇರಿಸಬಹುದು. ಇದನ್ನು ಪಿಂಕ್ ರೆವಲೂಷನ್ ಅಂತ ಕರೆದದ್ದಲ್ಲದೇ ಕೃಷಿ ಸಚಿವರು ಅತಿ ಹೆಚ್ಚು ಗೋಮಾಂಸ ಮತ್ತು ಚರ್ಮದ ರಫ್ತಿನ ಕುರಿತಂತೆ ಹೆಮ್ಮೆಯ ಹೇಳಿಕೆ ಕೊಟ್ಟಾಗಲೆಲ್ಲ ಹೊಟ್ಟೆ ಚುರುಗುಡುತ್ತದೆ.
ದೇಶದ ಸಂಪತ್ತನ್ನು ಹೀಗೆ ಕವಡೆ ಕಿಮ್ಮತ್ತಿಗೆ ಮಾರೋದು ನಮಗೆ ಯಾವತ್ತಿದ್ರೂ ರೂಢಿಯೇ! ಅದಿರನ್ನು ಪೈಸೆಗಳಲ್ಲಿ ಮಾರಿ ಸಂಸ್ಕರಿಸಿದ ಕಬ್ಬಿಣವನ್ನು ರೂಪಾಯಿಗಳಲ್ಲಿ ಕೊಂಡುಕೊಳ್ಳುವ ಮೂರ್ಖರು ನಾವು. ಗೋವಿನ ವಿಚಾರದಲ್ಲೂ ಹಾಗೆಯೇ. ಶೇ. ೭೦ರಷ್ಟು ಕೃಷಿ ಅವಲಂಬಿತ ರಾಷ್ಟ್ರ. ಒಂದುಕಾಲದಲ್ಲಿ ವ್ಯಕ್ತಿಗೆ ಎರಡರ ಅನುಪಾತದಲ್ಲಿದ್ದ ಗೋವುಗಳ ಸಂಖ್ಯೆ ಇಂದು ಹತ್ತು ಜನರಿಗೆ ಒಂದಕ್ಕಿಂತಲೂ ಕಡಿಮೆಯಾಗಿ ಹೋಗಿದೆ. ಮುಂದಿನ ಹತ್ತೇ ವರ್ಷಗಳಲ್ಲಿ ಹುಲಿಗಳಿಗಾದ ಗತಿ ಗೋವಿಗೆ ಬಂದರೆ ಅಚ್ಚರಿಪಡಬೇಕಿಲ್ಲ. ಸುಮ್ಮನೆ ಬುದ್ಧಿವಂತಿಕೆಯ ಲೆಕ್ಕಾಚಾರ ಹಾಕಿನೋಡಿ. ಇರುವ ಏಳೂವರೆ ಕೋಟಿ ಗೋವುಗಳನ್ನು ಕಡಿದು ಹಾಕಿದರೆ ಕೃಷಿಗೆ ಕಡಿಮೆ ಅಂದರೂ ಎಪ್ಪತ್ತೈದು ಲಕ್ಷ ಟ್ರ್ಯಾಕ್ಟರುಗಳು ಬೇಕು. ಟ್ರ್ಯಾಕ್ಟರುಗಳ ಬೆಲೆಯನ್ನು ಹೊಂದಿಸಿ ಲೆಕ್ಕ ಹಾಕಿದರೆ ಸುಮಾರು ೨೦ ಸಾವಿರ ಕೋಟಿಯಾಯ್ತು. ಕರ್ನಾಟಕದ ಬಜೆಟ್‌ನ ಕಾಲು ಭಾಗಕ್ಕೆ ಹತ್ತಿರ! ಈಗ ಇರುವ ಈ ದನಗಳು ಮಾಡುವ ಕೆಲಸವನ್ನು ಶಕ್ತಿಯಾಗಿ ಪರಿಗಣಿಸಿ ಲೆಕ್ಕ ಹಾಕಿದರೆ ಹೆಚ್ಚು ಕಡಿಮೆ ೨೭ ದಶಲಕ್ಷ ಮೆಗಾವಾಟ್‌ಗಳಷ್ಟೆಂದು ಸರ್ಕಾರವೇ ಹುಟ್ಟು ಹಾಕಿದ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಎಂಜಿನಿಯರಿಂಗ್ ೧೯೯೦ರಲ್ಲಿ ಕೊಟ್ಟ ಅಂಕಿಅಂಶ. ಗೋವುಗಳು ಉಳಿಸಿರುವ ಡೀಸೆಲ್ಲು ಎಷ್ಟೆಂದು ಅಂದಾಜಿದೆಯೇ? ಇವೆಲ್ಲ ಲೆಕ್ಕಾಚಾರ ಮಾಡುವವರು ಯಾರು ಹೇಳಿ?
ಕ್ಷೀರ ಕ್ರಾಂತಿಯ ನೆಪದಲ್ಲಿ ವಿದೇಶೀ ಹಸುಗಳನ್ನು ಆಮದು ಮಾಡಿಕೊಂಡೆವು. ಅದು ಲೀಟರುಗಟ್ಟಲೆ ಸುರಿಸುವ ಹಾಲು ಕಂಡ ರೈತ ನಮ್ಮ ಮುದ್ದಾದ ಹಸುಗಳನ್ನು ಮಾರಿದ. ಈಗ ಈ ಹಾಲಿನಲ್ಲಿ ಸತ್ತ್ವವಿಲ್ಲವೆಂದು ಗೊತ್ತಾಯ್ತು, ನಮ್ಮ ತಳಿಗಳೂ ಕಾಣೆಯಾದವು. ಈಗ ಬೊಬ್ಬೆ ಹಾಕುತ್ತಿದ್ದೇವೆ.
ಘಜ್ನಿ-ಘೋರಿಯರಿಂದ ಶುರು ಮಾಡಿ ಇತ್ತೀಚಿನ ಬುದ್ಧಿಜೀವಿಗಳವರೆಗೆ ಎಲ್ಲರಿಗೂ ‘ಗೋವು’ ಹಿಂದುಗಳ ಶ್ರದ್ಧಾ ಸಂಕೇತವೆನ್ನುವುದೊಂದೇ ಆಕ್ರೋಶ. ನಾವು ಪೂಜಿಸುತ್ತೇವೆ ಅನ್ನೋದೇ ಅದರ ಸಾವಿಗೆ ಕಾರಣವಾಯಿತಲ್ಲ ಅನ್ನೋದು ನೋವಿನ ಸಂಗತಿಯೋ ಷಂಡತನವೋ ದೇವರೇ ಬಲ್ಲ. ಆದರೆ ಗೊತ್ತಿರಲಿ. ಈ ದೇಶದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಗಳೆಲ್ಲ ಗೋ ಕೇಂದ್ರಿತವೇ. ಮೊಘಲರ ವಿರುದ್ಧ ತೊಡೆತಟ್ಟಿ ನಿಂತ ಶಿವಾಜಿ ಮಂದಿರ ಮತ್ತು ಗೋವುಗಳ ರಕ್ಷಣೆಗೆಂದೇ ಪಡೆ ಕಟ್ಟಿದ್ದು. ಬಿಜಾಪುರಕ್ಕೆ ಬಂದಿದ್ದ ಪುಟ್ಟ ಶಿವಾಜಿ ಗೋವು ಕಡಿಯುವವನ ಕೈ ಕಡಿದಿದ್ದನ್ನು ಕೇಳುವಾಗಲೇ ಮೈಮೇಲೆ ಮುಳ್ಳುಗಳೇಳುತ್ತವೆ. ಅತ್ತ ಸಿಖ್ಖರ ಸೇನೆಯಲ್ಲಿ ಕಾದಾಡಿದ ನಂತರ ಸಾಧುವಾದ ಸೈನಿಕ ರಾಮ್‌ಸಿಂಗ್ ಕೂಕಾನ ಶಿಷ್ಯರು ಬಡಿದಾಡಿದ್ದು ಗೋ ರಕ್ಷಣೆಗೆಂದೇ. ಆ ಮೂಲಕ ಸ್ವಾತಂತ್ರ್ಯಕದನ. ೧೮೫೭ರಲ್ಲಿ ಕದನದ ಕಿಡಿ ಹೊತ್ತಿಸಿದ್ದು ಗೋವಿನ ಕೊಬ್ಬನ್ನು ಕಾಡತೂಸುಗಳಿಗೆ ಸವರಿದ ಸುದ್ದಿಯೇ. ಆ ವೇಳೆಗಾಗಲೇ ಗೋರಕ್ಷಣೆಗಾಗಿ ಪ್ರಾಣ ನೀಡಲು ಹಳ್ಳಿಗರು ಸಿದ್ಧರಾಗಿದ್ದನ್ನು ಬ್ರಿಟಿಷ್ ಇತಿಹಾಸಕಾರರೂ ಅಲ್ಲಗಳೆಯುವುದಿಲ್ಲ. ಹೀಗಾಗಿಯೇ ಆರಂಭದಲ್ಲಿ ಎಗರಾಡಿದ ಮೊಘಲರು ಆನಂತರದ ದಿನಗಳಲ್ಲಿ ಮುಕ್ತವಾಗಿ ಗೋವಿನ ತಂಟೆಗೆ ಬರೋದನ್ನು ಬಿಟ್ಟುಬಿಟ್ಟರು. ಇವೆಲ್ಲವನ್ನು ಗಮನಿಸಿದ ಬ್ರಿಟಿಷರು ಗೋಹತ್ಯೆಯನ್ನೇ ಇಲ್ಲಿ ರಾಜ್ಯವಾಳಲು ಪ್ರಮುಖ ಅಸವಾಗಿಸಿಕೊಂಡರೆನ್ನುವುದಕ್ಕೆ ಸಾಕಷ್ಟು ಪುರಾವೆಗಳು ದೊರೆಯುತ್ತವೆ. ರಾಬರ್ಟ್ ಕ್ಲೈವ್ ೧೭೬೦ರಲ್ಲಿ ಮೊದಲ ಕಸಾಯಿಖಾನೆಯನ್ನು ಬಂಗಾಳದಲ್ಲಿ ನಿರ್ಮಿಸಿದ್ದು ಈ ಹಿನ್ನೆಲೆಯಲ್ಲಿಯೇ. ಹಿಂದು-ಮುಸಲ್ಮಾನರ ನಡುವೆ ಗೋವು ಇರುವಂತೆ ನೋಡಿಕೊಂಡ ಬಿಳಿಯರು ಮುಸಲ್ಮಾನರಿಗೆ ಗೋವು ತಿನ್ನುವುದು ಹಿಂದುಗಳ ಮೇಲಿನ ಸಾರ್ವಭೌಮತೆಯ ಸಂಕೇತ ಅಂದರು. ಈ ಕಾರಣಕ್ಕಾಗಿಯೇ ನಾವಿಬ್ಬರೂ ಬಡಿದಾಡಿದೆವು, ಬಡಿದಾಡುತ್ತಲೇ ಉಳಿದೆವು.
ಕಳೆದ ಸರ್ಕಾರ ಗೋವಿನ ಹಾಡನ್ನು ಹಿಂದಿಗೆ ಪಠ್ಯವಾಗಿ ತಂದಿತ್ತು. ಸಾಯುವಾಗ ಹುಲಿ ಇನ್ನು ಮುಂದೆ ಗೋಮಾಂಸ ತಿನ್ನುವುದಿಲ್ಲವೆಂದು ಶಪಥ ಮಾಡುವಂತೆ ಪಾಠಾಂತರ ಮಾಡಲಾಗಿತ್ತು. ಸರಿ. ಲೇಖಕನ ಆಶಯಕ್ಕೆ ಭಂಗ ತರುವುದು ಸರಿಯಲ್ಲವೆಂದು ಕನ್ನಡದ ಖ್ಯಾತ ಕತೆಗಾರರೊಬ್ಬರು ವಾದಿಸಿದ್ದಾಗ ನಾನೂ ಹೌದೆಂದಿದ್ದೆ. ಈಗ ಹೊಸ ಸರ್ಕಾರ ಆ ಪಠ್ಯದ ಕೊನೆಯ ಸಾಲುಗಳನ್ನು ಪೂರ್ತಿ ಬದಲಿಸಿ ಮಾಂಸ ತಿನ್ನುವುದು ನಮ್ಮ ಹಕ್ಕೆಂದು ಹುಲಿಯ ಬಾಯಲ್ಲಿ ಹೇಳಿಸುವಂತೆ ಮಾಡಿದೆ. ಈಗ ಯಾಕೋ ಆ ಸೆಕ್ಯುಲರ್ ಲೇಖಕರ ದನಿಯೇ ಅಡಗಿದೆಯಪ್ಪ. ಅವರು ಮಾತಾಡಿದ್ದು ಎಲ್ಲಿಯೂ ಕೇಳುತ್ತಲೇ ಇಲ್ಲ. ಇಂಥವರನ್ನು ಕಂಡೇ ಆ ಗೋವು “ನೀನಾರಿಗಾದೆಯೋ ಎಲೆ ಮಾನವ” ಅಂತ ಪ್ರಶ್ನಿಸೋದು.
ಹ್ಹಾಂ! ಅಂದ ಹಾಗೆ ರಾಜ್ಯದ ಮೂಲೆಮೂಲೆಗಳಿಂದ ಗೋವನ್ನು ಕದಿಯುವವರ ಕುರಿತಂತೆ ಸುದ್ದಿ ಬರುತ್ತಿದೆ. ಅದನ್ನು ತಡೆಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕದನದ ವಾತಾವರಣವೂ ನಿರ್ಮಾಣವಾಗಿದೆ. ಬುಸುಗುಡುವ ಆಕ್ರೋಶ ಹೊರಬಿದ್ದರೆ ವಿಷವಾಗಿಬಿಡುತ್ತದೆ. ಗೃಹ ಸಚಿವರು ಆದಷ್ಟು ಬೇಗ ಎಚ್ಚೆತ್ತರೆ ಒಳಿತು. ನಮ್ಮ ಅನೇಕ ಸಾಹಿತಿಗಳು, ಬುದ್ಧಿಜೀವಿಗಳು ನಕ್ಸಲರೊಂದಿಗೆ ಮಾತುಕತೆ ನಡೆಸಿರೆಂದು ಮುಖ್ಯಮಂತ್ರಿಗಳಿಗೆ ಕಿವಿಮಾತು ಹೇಳಿಬಂದಿದ್ದಾರೆ. ಮುಗ್ಧರ ರಕ್ತ ಹರಿಸುವ ನಕ್ಸಲರನ್ನು ಪೊಲೀಸ್ ಪಡೆ ಕೊಂದರೆ ಈ ಬುದ್ಧಿಜೀವಿಗಳ ಕರುಳು ಚುರುಕ್ ಅಂದುಬಿಡುತ್ತದೆ. ಆದರೆ ಮನುಕುಲಕ್ಕೆ ಹಾಲನ್ನುಣಿಸಿ ಹೊಟ್ಟೆ ತಣಿಸುವ ಗೋವುಗಳ ಬಗ್ಗೆ ಮಾತ್ರ ಇವರದ್ದು ದಿವ್ಯಮೌನ.
ಕ್ಯೂಬಾದಲ್ಲಿ ಜನ ಗೋವನ್ನು ಪೂರ್ತಿ ತಿಂದು ಖಾಲಿ ಮಾಡಿದ ಮೇಲೆ, ಅಳಿದುಳಿದ ಗೋವನ್ನು ಉಳಿಸಲು ಅಲ್ಲಿನ ಸರ್ಕಾರ ಗೋಹತ್ಯೆ ನಿಷೇಧಿಸಿತಂತೆ. ಇರಾನ್‌ನಲ್ಲಿ ಪಾರ್ಸಿಯವನೊಬ್ಬ ಕೇಳಿಕೊಂಡನೆನ್ನುವ ಕಾರಣಕ್ಕೆ ಅಲ್ಲಿನ ಮುಸ್ಲಿಮ್ ಸರ್ಕಾರ ಗೋಹತ್ಯೆ ನಿಷೇಧಿಸಿತಂತೆ. ಭಾರತದಲ್ಲಿ ಮಾತ್ರ ಹಾಗಾಗುವುದಿಲ್ಲ ಎನ್ನುವುದೇ ಅಚ್ಚರಿ. ನೆನಪಿರಲಿ. ಈ ದೇಶವನ್ನು ಕಟ್ಟಿರುವುದು ಧರ್ಮದ ಆಧಾರದ ಮೇಲೆಯೇ. ಧರ್ಮದ ನಂಬಿಕೆಗಳಿಗೆ ಆಘಾತವಾದಾಗ ಸಮಾಜ ಸಿಡಿದೆದ್ದಿದೆ, ಸೂಕ್ತ ಪಾಠ ಕಲಿಸಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಹೊಸದೊಂದು ಆಂದೋಲನ ಗೋವಿನ ಹೆಸರಲ್ಲಿ ಶುರುವಾದರೆ ಅಚ್ಚರಿಪಡಬೇಕಿಲ್ಲ. ಯಾಕೆ? ನಿಮಗೂ ಹಾಗನ್ನಿಸುತ್ತಿಲ್ಲವೇ?

 

Leave a Reply