ವಿಭಾಗಗಳು

ಸುದ್ದಿಪತ್ರ


 

ಪೊಲೀಸರನ್ನು ಕೊಲ್ಲಬೇಡಿ ಸಿಎಂ ಸಾಹೇಬ್ರೇ!!

ಸರ್ವೋಚ್ಚ ನ್ಯಾಯಾಲಯದ ಈ ನಿರ್ದೇಶನಗಳನ್ನು ಯಾವ ರಾಜ್ಯ ಸರ್ಕಾರಗಳೂ ಸ್ವೀಕರಿಸಲಿಲ್ಲ. ಎಲ್ಲಾ ರಾಜಕಾರಣಿಗಳಿಗೂ ಪೊಲೀಸರ ಮೇಲೆ ಅಧಿಕಾರ ಚಲಾಯಿಸುವ ಇರಾದೆ. ಆ ಮೂಲಕ ರಾಜ್ಯದಲ್ಲಿ ಬೇಕಾದವರನ್ನು ಬಗ್ಗಿಸುವ ತವಕ. ಎಲ್ಲಾ ಭ್ರಷ್ಟತೆಯ ಕೇಂದ್ರವಾಗಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿಕೊಂಡು ಬಿಟ್ಟರೆ ಮಂತ್ರಿಗಳು ಕುಂತಲ್ಲಿಯೇ ಮಾಲಾಮಾಲು! ಹೆಸರು ಕೆಡಿಸಿಕೊಳ್ಳೋನು ಮಾತ್ರ ನಮ್ಮೂರಿನ ಠಾಣೆಯಲ್ಲಿನ ಪೇದೆ!

441173-police

‘ಅದು ಸ್ವಾಭಿಮಾನವನ್ನು ಕಳಕೊಂಡ ಬದುಕು. ಊರ ಪುಢಾರಿಯ ದೂರದ ಸಂಬಂಧಿಕನಿಗೂ ಸಲಾಮು ಹೊಡೆಯಬೇಕು. ನೌಕರಿ ಸರ್ಕಾರದ್ದಾದರೂ ಸಾರ್ವಜನಿಕರೆದುರು ಕೈಚಾಚಿ ನಿಂತು ಛೀ ಥೂ ಅನ್ನಿಸಿಕೊಳ್ಳಬೇಕು. ಕೆಲಸಕ್ಕೆ ಸೇರುವಾಗಿನ ಉತ್ಸಾಹ ನಾಲ್ಕಾರು ತಿಂಗಳಲ್ಲಿಯೇ ಸರಕ್ಕನೇ ಇಳಿದು ನಿಸ್ತೇಜರಾಗಿಬೆಡಬೇಕು. ಇತ್ತ ಮನೆಯವರಿಗೂ ಒದಗದೇ, ಅತ್ತ ಊರಿಗೂ ದಕ್ಕದೇ ದೈನೇಸಿ ಬಾಳು ಬದುಕಬೇಕು’ ಹೌದು ನಾನು ಹೇಳುತ್ತಿರೋದು ಖಾಕಿಬಟ್ಟೆ ಹಾಕಿಕೊಂಡು ದರ್ಪದ ಮುಖವಾಡದ ಹಿಂದೆ ಕಣ್ಣೀರು ಸುರಿಸಿ ದಿನ ದೂಡುತ್ತಿರುವ ಪೊಲೀಸ್ ಪೇದೆಗಳದ್ದು.

‘ಕರ್ನಾಟಕ ಪೊಲೀಸ್’ ಹಾಗೊಂದು ಡೈಲಾಗನ್ನು ಸಾಯಿಕುಮಾರ್ ಬಾಯಲ್ಲಿ ಕೇಳಿದಾಗಲೆಲ್ಲ ರೋಮಾಂಚಿತರಾಗಿದ್ದೀರಲ್ಲ. ಆತ ಹೇಳುವ ಆ ಪೊಲೀಸ್ಗೂ ನಮ್ಮೂರಿನ ದಢೂತಿ ದೇಹದ, ಉಬ್ಬಿದ ಹೊಟ್ಟೆಯ, ನಿಸ್ತೇಜ ಮುಖದ ಪೊಲೀಸ್ಗೂ ತಾಳೆಯೇ ಆಗುತ್ತಿಲ್ಲವೆಂದು ನೊಂದುಕೊಂಡೂ ಇದ್ದೀರಿ, ನಂಗೊತ್ತು. ಅನೇಕ ಬಾರಿ ಅವರಿಗೆ ಶಾಪ ಹಾಕಿ ಕೈತೊಳೆದುಕೊಂಡೂ ಇದ್ದೇವೆ. ಆದರೆ ಎಂದಾದರೂ ಒಮ್ಮೆ ಅವರ ಬದುಕಿನ ಕುರಿತಂತೆ ಯೋಚಿಸಿದ್ದೇವಾ? ಅವರಿಗೂ ಒಂದು ಹೃದಯವಿದೆ; ಅವರನ್ನು ಪ್ರೀತಿಸುವ ಮಕ್ಕಳಿದ್ದಾರೆ. ಅವರ ಆರೋಗ್ಯವೂ ಹಾಳಾಗುತ್ತದೆ. ಹೀಗೆಲ್ಲಾ ಯಾವಾಗಲಾದರೂ ಮನಸ್ಸಿಗೆ ಬಂದಿದೆಯಾ?

ಬಿಡಿ. ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲೆಪ್ಮೆಂಟ್ ಕಳೆದ ಜೂನ್ನಲ್ಲಿ ಬಿಡುಗಡೆ ಮಾಡಿದ ವರದಿಯ ಪ್ರಕಾರ ದೇಶದ ತೊಂಭತ್ತು ಭಾಗ ಪೊಲೀಸರು ದುಡಿಯುವ ಸಮಯ ದಿನಕ್ಕೆ ಎಂಟು ಗಂಟೆಗಳನ್ನು ದಾಟುತ್ತದೆ ಹಾಗೆಯೇ ಮುಕ್ಕಾಲು ಭಾಗದಷ್ಟು ಪೊಲೀಸರು ತಿಂಗಳಿಗೊಮ್ಮೆಯೂ ವಾರದ ರಜೆ ಪಡೆಯದೇ ಕೆಲಸ ಮಾಡುತ್ತಾರೆ! ಅಷ್ಟೇ ಅಲ್ಲ, ರಜೆ ಹಾಕಿದಾಗಲೂ ತುತರ್ು ಕೆಲಸಕ್ಕೆಂದು ಅವರನ್ನು ಕರೆಸಿಕೊಳ್ಳಲು ಅಧಿಕಾರಿಗಳು ಹಿಂದೆ-ಮುಂದೆ ನೋಡುವುದೇ ಇಲ್ಲ. ಇತ್ತೀಚೆಗೆ ಪೊಲೀಸರ ಪತ್ನಿಯೊಬ್ಬರು ತನ್ನದೇ ಮದುವೆಯ ದಿನವೂ ರಜೆ ಮಂಜೂರಾಗದ ತಮ್ಮ ಯಜಮಾನರ ಕುರಿತಂತೆ ಹೇಳಿ ನೊಂದುಕೊಂಡಿದ್ದರು. ಹೇಳಿ. ಯಂತ್ರವೂ ಕೂಡ ಆಗಾಗ ಕೆಟ್ಟು ನಿಂತು ವಿಶ್ರಾಂತಿ ಪಡೆಯುತ್ತದೆ. ಆದರೆ ಜೀವಂತ ದೇಹಗಳು ಒಂದೇ ಕೆಲಸವನ್ನು ದಿನದ 18 ಗಂಟೆಗಳ ಕಾಲ ತಿಂಗಳಿಡೀ ಮಾಡಬೇಕೆಂದರೆ ಅವರ ಮಾನಸಿಕ ಸ್ಥಿತಿ ಹೇಗಾಗಿರಬೇಕು. ಎಲ್ಕೆಜಿಗೆ ಹೋಗುವ ಮಗು ರಾತ್ರಿ ಎಂಟು ಗಂಟೆಗೆ ಅಪ್ಪನಿಗೆ ಫೋನ್ ಮಾಡಿ ಮನೆಗೆ ಬೇಗ ಬರುವಂತೆ ಹೇಳಿ ಮಲಗಿಬಿಡುತ್ತದೆ. ಬೀಟ್ ಮುಗಿಸಿದ ಅಪ್ಪ ರಾತ್ರಿ 12 ಗಂಟೆಗೆ ಮಲಗಿದ ಮಗುವಿನ ಮುಖ ನೋಡುತ್ತಾನೆ; ಬೆಳಗ್ಗೆ ಇನ್ನೂ ಎದ್ದಿರದ ಮಗುವಿನ ಮುಖಕ್ಕೆ ಮುತ್ತಿಟ್ಟು ಅಧಿಕಾರಿಗಳ ಸೇವೆಗೆ ನಿಲ್ಲುತ್ತಾನೆ! ಮಧ್ಯಾಹ್ನ ಒಂದರ್ಧಗಂಟೆ ಟೇಬಲ್ಲಿನೆದುರು ತೂಕಡಿಸಿದರೆ ಯಾರೋ ವಿಡಿಯೋ ಮಾಡಿ ಫೇಸ್ಬುಕ್ಕಿನಲ್ಲಿ ಓಡಾಡಿಸಿ ಅವಹೇಳನ ಮಾಡಿಬಿಡುತ್ತಾರೆ. ನಿದ್ದೆಯಿಲ್ಲದೇ ಅವನ ರಕ್ತದೊತ್ತಡ ಹೆಚ್ಚಿ, ಆರೋಗ್ಯ ಏರುಪೇರಾದರೆ ಕೇಳುವವರೂ ಗತಿಯಿಲ್ಲ.

E9250570-5EFB-47F2-90A1-0FBC9FFEB366_mw1024_s_n

ಹಾಗೆ ಯೋಚನೆ ಮಾಡಿ. ಎರಡು ದಿನ ಸರಿಯಾಗಿ ನಿದ್ದೆ ಆಗದೇ ಹೋದರೆ ನಿಂತಲ್ಲೇ ಜೋಲಿ ಹೊಡೆಯುತ್ತೇವೆ, ಯಾರ್ಯಾರ ಮೇಲೋ ಕೂಗಾಡುತ್ತೇವೆ. ಹಾಗೆ ದಿನಗಟ್ಟಲೆ ನಿದ್ದೆಯ ಏರುಪೇರಿನಿಂದ, ಊಟದ ಅಸಮತೋಲನದಿಂದ ದೇಹದ ಕಡಕ್ಕುತನ ಕಳಕೊಂಡ ಪೊಲೀಸ್ ಪೇದೆ ಸ್ವಲ್ಪ ಕೂಗಾಡಿದರೆ ಸಾಕು, ನಮ್ಮ ಅಹಂಕಾರ ಜಾಗೃತವಾಗಿಬಿಡುತ್ತದೆ. ನಮಗೇನಾದರೂ ಸ್ಥಳೀಯ ಪಕ್ಷಗಳ ಮುಖಂಡರ ಪರಿಚಯವಿದ್ದರಂತೂ ಮುಗಿದೇ ಹೋಯ್ತು. ಅಲ್ಲಿಯೇ ಫೋನ್ ಮಾಡಿಸಿ ಅವಾಚ್ಯ ಶಬ್ದಗಳಲ್ಲಿ ನಿಂದಿಸುವಂತೆ ಮಾಡುತ್ತೇವೆ! ಉಫ್. ಪೊಲೀಸ್ ಪೇದೆಯಾಗುವುದೆಂದರೆ ಸ್ವಾಭಮಾನ ಅಡವಿಟ್ಟು ಬದುಕಿದಂತೆ ಸರಿ!

ಪೊಲೀಸರ ನಡತೆಯ ಕುರಿತಂತೆ ಮಾತನಾಡುವ ನಮ್ಮಲ್ಲನೇಕರಿಗೆ ದೇಶದಲ್ಲಿ ಒಂದು ಲಕ್ಷ ಜನರಿಗೆ 173 ಜನ ಮಾತ್ರ ಪೊಲೀಸರಿದ್ದಾರೆ ಎಂಬುದು ಮರೆತೇ ಹೋಗಿದೆ. ಅಂತರರಾಷ್ಟ್ರೀಯ ನಿಯಮಾವಳಿಗಳ ಪ್ರಕಾರ ಕನಿಷ್ಠ ಒಂದೂವರೆ ಪಟ್ಟಾದರೂ ಹೆಚ್ಚಿರಬೇಕು. ಈ ಸಂಖ್ಯೆಯ ಕೊರತೆಯಿಂದಾಗಿ ಸ್ಪಧರ್ಾತ್ಮಕವಾದ ವ್ಯವಸ್ಥೆ ರೂಪಿಸುವಲ್ಲಿ ಸಹಜವಾಗಿಯೇ ಸರ್ಕಾರಗಳು ಸೋತಿವೆ. ಅತಿ ಕಡಿಮೆ ಠಾಣೆಗಳು, ಅವುಗಳಿಗೆ ಮೂಲಭೂತ ಸೌಕರ್ಯದ ಕೊರತೆಗಳೂ ಸೇರಿ ಪೊಲೀಸರಾಗಿ ಯಶಸ್ಸು ಗಳಿಸುವುದೇ ಅಸಾಧ್ಯವೆನ್ನುವಂತಾಗಿಬಿಟ್ಟಿದೆ. ದೇಶದ ಅನೇಕ ಠಾಣೆಗಳಿಗೆ ಫೋನೂ ಇಲ್ಲ, ವೈರ್ಲೆಸ್ ವ್ಯವಸ್ಥೆಯೂ ಇಲ್ಲವೆನ್ನುವುದು 21ನೇ ಶತಮಾನಕ್ಕೆ ಶೋಭೆಯೇನು?

ಇವೆಲ್ಲವೂ ಒತ್ತಟ್ಟಿಗಿರಲಿ, ಇಡಿಯ ಪೊಲೀಸ್ ವ್ಯವಸ್ಥೆ ರಚನೆಯಾಗಿರೋದು ಯಾವಾಗ ಗೊತ್ತಾ? 1861 ರಲ್ಲಿ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತೀಯರನ್ನು ಮಟ್ಟಹಾಕಿ, ಹೆದರಿಸಿಡಬೇಕೆಂದು ಬ್ರಿಟೀಷರು ರೂಪಿಸಿದ ವ್ಯವಸ್ಥೆ ಇದು. ಅವತ್ತಿನ ನಿಯಮಗಳು, ಕಾನೂನುಗಳು ಬಿಡಿ; ಖಾಕಿ ಬಟ್ಟೆ, ಕೈಯ ದಂಡವನ್ನೂ ನಾವು ಬದಲಾಯಿಸಿಲ್ಲ. ಅಂದಿನಂತೆ ಇಂದೂ. ಕೆಳಹಂತದ ಪೊಲೀಸ್ ಪೇದೆ ಭಾರತೀಯನಾಗಿರುತ್ತಿದ್ದುದರಿಂದ ಅವನನ್ನು ಅಂದು ಕೀಳಾಗಿ ಕಾಣಲಾಗುತ್ತಿತ್ತು; ಇಂದೂ ಅದೇ ಪೃಥೆ ಮುಂದುವರೆದಿದೆ. ಮೇಲಿನ ಅಧಿಕಾರಿಗಳು ಬ್ರಿಟೀಷರಾಗಿದ್ದು ಅದೇ ಮಾದರಿಯ ದರ್ಪ ಇಂದೂ ಕಾಣಸಿಗುತ್ತದೆ. ಅಷ್ಟೇ ಅಲ್ಲ. ಸ್ಥಳೀಯರೊಂದಿಗೆ ವ್ಯವಹರಿಸುವಾಗ ಕಳ್ಳರೆಂದು ಭಾವಿಸಿಯೇ ಅತಿ ತುಚ್ಛ ಪದಗಳೊಂದಿಗೆ ಮಾತನಾಡುವುದೂ ಅವತ್ತಿನ ಕೊಡುಗೆಯೇ. ಇದನ್ನೆಲ್ಲಾ ಯಾರು ಬದಲಾಯಿಸಬೇಕು ಹೇಳಿ.

ಸರ್ಕಾರಕ್ಕೆ ಇದು ಗೊತ್ತಿಲ್ಲವೆಂದಲ್ಲ. ಸಮಿತಿಗಳ ಮೇಲೆ ಸಮಿತಿಗಳು ರಚನೆಯಾದವು. 1979ರಲ್ಲಿಯೇ ನ್ಯಾಶನಲ್ ಪೊಲೀಸ್ ಕಮೀಷನ್ ರಚನೆಯಾಗಿತ್ತು. ಅದರ ವರದಿಯನ್ನು ಯಾವ ರಾಜ್ಯ ಸಕರ್ಾರಗಳೂ ಒಪ್ಪಲಿಲ್ಲ. 1996 ರಲ್ಲಿ ಇಬ್ಬರು ಡಿಜಿಪಿಗಳು ಬೇಸತ್ತು ನ್ಯಾಯಾಲಯದ ಮೊರೆ ಹೊಕ್ಕಾಗ ಒಂದು ಸಮಿತಿ ರಚನೆಯಾಗಿತ್ತು. ಹಾಗೂ ಹೀಗೂ ಮುಂದುವರಿದ ವಿಚಾರಣೆ 2006 ರಲ್ಲಿ ತೀರ್ಪಾಗಿ ಹೊರಬಂತು. ಸರ್ವೋಚ್ಛ ನ್ಯಾಯಾಲಯ ಏಳು ಮಾರ್ಗದರ್ಶಿ ಸೂಚನೆಗಳನ್ನು ಕೊಟ್ಟಿತ್ತು. ಮೊದಲನೆಯದು ರಾಜ್ಯ ಸೆಕ್ಯುರಿಟಿ ಕಮಿಶ್ನ್ನ್ನು ರಚಿಸಿ ಅದರ ಮೂಲಕ ಪೊಲೀಸರ ನೋವುಗಳನ್ನು ಆಲಿಸುವ, ಪರಿಹಾರ ಸೂಚಿಸುವ ವ್ಯವಸ್ಥೆ ಮಾಡಬೇಕು. ಸದ್ಯಕ್ಕೆ ಪೇದೆ ತನ್ನ ನೋವನ್ನು ಅಧಿಕಾರಿಗಳಿಗೆ ಹೇಳುವಂತಿಲ್ಲ, ಮನೆಗೆ ಬಂದು ಹೆಂಡತಿಗೂ ಹೇಳುವಂತಿಲ್ಲ. ಅವನಿಗಿರೋದು ಹೆಂಡವೊಂದೇ ಸಾಥಿ! ಎರಡನೆಯದಾಗಿ ಸಕರ್ಾರದ ಹಸ್ತಕ್ಷೇಪವಿಲ್ಲದೇ ಸಾಮಥ್ರ್ಯದ ಆಧಾರದ ಮೇಲೆಯೇ ಎರಡು ವರ್ಷಗಳಿಗಾಗಿ ಡಿಜಿಪಿಯ ಆಯ್ಕೆ ಮಾಡಬೇಕು ಅಂತ. ಈಗಿನ ದಿನಗಳಲ್ಲಿ ಸರ್ಕಾರ ತನಗೆ ಕೈಗೊಂಬೆಯಾಗಿರಬಲ್ಲವನನ್ನು ಅಲ್ಲಿ ತಂದು ಕೂರಿಸಿಬಿಡುತ್ತದೆ! ಇತರೆ ಪೊಲೀಸ್ ಅಧಿಕಾರಿಗಳನ್ನೂ ಇದೇ ರೀತಿ ಎರಡು ವರ್ಷಗಳಿಗಾಗಿ ಆಯ್ಕೆ ಮಾಡುವ ಪ್ರಕ್ರಿಯೆ ಇರಬೇಕು ಹಾಗೆಯೇ ಅನವಶ್ಯಕವಾಗಿ ಯಾರನ್ನೂ ವರ್ಗಾಯಿಸುವಂತಿಲ್ಲ ಎಂಬುದು ಮೂರನೆಯ ಸೂಚನೆ. ನಾಲ್ಕನೆಯದೇನು ಗೊತ್ತೇ? ಕಾನೂನು ಸುವ್ಯವಸ್ಥೆ ಪಾಲಿಸುವ ಮತ್ತು ತಪ್ಪಿತಸ್ಥರ ಹಿಂದೆ ಬಿದ್ದು ಅವರಿಗೆ ಶಿಕ್ಷೆ ಕೊಡಿಸುವ ಎರಡೂ ವಿಭಾಗವನ್ನೂ ಬೇರ್ಪಡಿಸಬೇಕು ಅಂತ. ಈಗಂತೂ ಇನ್ವೆಸ್ಟಿಗೇಶನ್ ಮಾಡುವ ತಂಡದಲ್ಲಿರುವ ಪೇದೆಯೇ ಮರುದಿನ ಬೆಳಿಗ್ಗೆ ಊರಿಗೆ ಬರುವ ಮಂತ್ರಿಗಳಿಗೆ ಸೆಲ್ಯೂಟ್ ಹೊಡಕೊಂಡೂ ನಿಂತಿರಬೇಕು! ಐದನೆಯ ಸೂಚನೆ ಪೊಲೀಸರ ಆಯ್ಕೆ, ಉನ್ನತ ದರ್ಜೆಗೇರಿಸುವ ಪ್ರಕ್ರಿಯೆ, ವರ್ಗಾವಣೆ ಇವೆಲ್ಲವೂ ಇಂದು ನಡೆಯುವಂತೆ ರಾಜಕೀಯ ಹಸ್ತಕ್ಷೇಪವಿಲ್ಲದೇ ಅದಕ್ಕೋಸ್ಕರ ಪ್ರತ್ಯೇಕ ಪೊಲೀಸ್ ಎಸ್ಟಾಬ್ಲಿಶ್ಮೆಂಟ್ ಬೋರ್ಡ್ ರಚಿಸಬೇಕು ಅನ್ನೋದು. ಪೊಲೀಸರ ಕುರಿತಂತ ಜನಸಾಮಾನ್ಯರ ದೂರುಗಳನ್ನು ತುರ್ತಾಗಿ ವಿಚಾರಣೆ ನಡೆಸಿ ಶಿಕ್ಷೆ ಕೊಡಿಸುವ ಎಚ್ಚರಿಕೆಯ ಆರನೆಯ ಸೂಚನೆಯೂ ಸರ್ವೋಚ್ಛ ನ್ಯಾಯಾಲಯದಿಂದ ಬಂದಿದೆ. ಕೊನೆಯದಾಗಿ ರಾಷ್ಟ್ರೀಯ ಮಟ್ಟದ ಸಮಿತಿಯೊಂದು ಕೇಂದ್ರ ಪೊಲೀಸ್ ವ್ಯವಸ್ಥೆಯ ನಿಯಂತ್ರಣಕ್ಕೆ ಸೂಕ್ತ ವ್ಯಕ್ತಿಗಳ ಆಯ್ಕೆಗೆ ಪ್ರತಿಬದ್ಧವಾಗಿರಬೇಕು ಎಂದಿತು ನ್ಯಾಯಾಲಯ.

ಅಚ್ಚರಿಯೇನು ಗೊತ್ತೇ? ಸರ್ವೋಚ್ಚ ನ್ಯಾಯಾಲಯದ ಈ ನಿರ್ದೇಶನಗಳನ್ನು ಯಾವ ರಾಜ್ಯ ಸರ್ಕಾರಗಳೂ ಸ್ವೀಕರಿಸಲಿಲ್ಲ. ಎಲ್ಲಾ ರಾಜಕಾರಣಿಗಳಿಗೂ ಪೊಲೀಸರ ಮೇಲೆ ಅಧಿಕಾರ ಚಲಾಯಿಸುವ ಇರಾದೆ. ಆ ಮೂಲಕ ರಾಜ್ಯದಲ್ಲಿ ಬೇಕಾದವರನ್ನು ಬಗ್ಗಿಸುವ ತವಕ. ಎಲ್ಲಾ ಭ್ರಷ್ಟತೆಯ ಕೇಂದ್ರವಾಗಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿಕೊಂಡು ಬಿಟ್ಟರೆ ಮಂತ್ರಿಗಳು ಕುಂತಲ್ಲಿಯೇ ಮಾಲಾಮಾಲು! ಹೆಸರು ಕೆಡಿಸಿಕೊಳ್ಳೋನು ಮಾತ್ರ ನಮ್ಮೂರಿನ ಠಾಣೆಯಲ್ಲಿನ ಪೇದೆ!

ಈಗ ಹೇಳಿ. ಎಂದಿಗೂ ಪ್ರತಿಭಟನೆಗೆ ಇಳಿಯದ ಈ ನಾಡಿನ ಪೊಲೀಸು ಈಗ ಒಂದು ದಿನ ಸಾಮೂಹಿಕ ರಜೆ ಹಾಕುತ್ತಿದ್ದಾನೆಂದರೆ ಅವನೊಳಗಿನ ದುಃಖ ಅದೆಷ್ಟು ಮಡುಗಟ್ಟಿರಬೇಕು? ಅವನು ಕೇಳುತ್ತಿರುವುದ್ಯಾವುದೂ ಹೊಸತಲ್ಲ. 2006 ರಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಳಿದ್ದನ್ನು ಈಡೇರಿಸಿಕೊಟ್ಟರೆ ಸಾಕು, ಅಂತ. ಇದೂ ಅನ್ಯಾಯವಾ?

ಸರ್ಕಾರಗಳು ಇದನ್ನೂ ಕೇಳಿಸಿಕೊಳ್ಳಲಿಲ್ಲವೆಂದರೆ ಈ ಕಿವುಡುತನಕ್ಕೆ ಏನನ್ನಬೇಕು ಹೇಳಿ!!

Leave a Reply