ವಿಭಾಗಗಳು

ಸುದ್ದಿಪತ್ರ


 

ಪ್ರಶ್ನೆಗಳೇನೋ ಸಾಕಷ್ಟಿವೆ.. ಕೇಳುವುದು ಯಾರನ್ನು?

ಮಠಕ್ಕೆ ಹಣ ಕೊಟ್ಟಾಗ ವಿಷಾದಿಸುವ ಅಗತ್ಯವಿಲ್ಲ. ಬದಲಿಗೆ ಭಕ್ತ ಸಮೂಹ ಅದು ಮಠದವರೆಗೂ ಬಂದು, ಸದ್ವಿನಿಯೋಗವಾಗುವಂತೆ ನೋಡಿಕೊಂಡರೆ ಅದು ಬಹು ಮುಖ್ಯ ಕೆಲಸವಾದೀತು. ಕೆಲವಾದರೂ ಮಠಾಧೀಶರು ಒಟ್ಟಿಗೆ ಕುಳಿತು ಸರ್ಕಾರದ ಹಣವನ್ನು ಬಳಸಿಕೊಳ್ಳುವ ಕುರಿತು ಒಂದು ನೀತಿ ಸಂಹಿತೆ ರಚಿಸಿಕೊಂಡರೆ ಮತ್ತೂ ಒಳಿತೇ.
– ಚಕ್ರವರ್ತಿ ಸೂಲಿಬೆಲೆ

ಬೇಲಿ ಮಠಾಧೀಶರು ಮಠಕ್ಕೆಂದು ಕೊಟ್ಟಅನುದಾನ ಮರಳಿಸಿಬಿಟ್ಟಿದ್ದಾರಂತೆ. ಹಾಗಂತ ಸುದ್ದಿ ನೋಡಿದಾಗ ಅಚ್ಚರಿಯಾಯ್ತು. ಇನ್ನೂ ಅನೇಕ ಮಠಾಧೀಶರಿಗೆ ಅದು ಮೇಲ್ಪಂಕ್ತಿಯಾಗಲೆಂಬ ಆಸೆಯನ್ನು ಹಲವರು ವ್ಯಕ್ತಪಡಿಸಿದರು.

ಸ್ವಾಮೀಜಿ

ಸ್ವಾಮೀಜಿ

ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವಾಗ ಈ ಹಣ ಬೇಡವೆಂದು ಸ್ವಾಮೀಜಿ ಹೇಳಿರುವುದು ಒಪ್ಪಬೇಕಾದ್ದೇ. ಆದರೆ ಒಂದು ಕೋಟಿ ರೂಪಾಯಿ ಹಣವನ್ನು ಸರ್ಕಾರಕ್ಕೆ ಮರಳಿಸಿಬಿಟ್ಟರೆ ಬರ ಪರಿಸ್ಥಿತಿ ಸುಧಾರಿಸಿಬಿಡುವುದಾ? ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಷ್ಟೇ. ಸರ್ಕಾರಿ ವ್ಯವಸ್ಥೆಗಳಿಂದ ಹೊರಗಿದ್ದು ಸತ್ಕಾರ್ಯಗಳಿಗೆ ಹಣ ಪಡೆದು ನಿಯತ್ತಾಗಿ ಖರ್ಚು ಮಾಡಬಲ್ಲ ಸಂಸ್ಥೆಗಳು ಇಂದು ನಿಜಕ್ಕೂ ಅಗತ್ಯವಿದೆ. ಒಂದೆರಡು ವರ್ಷಗಳ ಹಿಂದೆ ಸರ್ಕಾರೇತರ ಸಂಸ್ಥೆಗಳ ಲೆಕ್ಕಾಚಾರ ಶುರು ಮಾಡಿದಾಗ ಅಚ್ಚರಿಯ ಫಲಿತಾಂಶ ಹೊರಗೆ ಬಂದಿತ್ತು. ಪ್ರತಿ ನಾಲ್ಕುನೂರು ಜನರಿಗೆ ಒಂದು ಸಂಸ್ಥೆ. ಒಟ್ಟಾರೆ ೩೩ ಲಕ್ಷ ನೋಂದಾಯಿತ ಸರ್ಕಾರೇತರ ಸಂಸ್ಥೆಗಳು. ಇವುಗಳಿಗೆಂದು ಪ್ರತಿವರ್ಷ ಹರಿದು ಬರುವ ಹಣ ಹೆಚ್ಚೂಕಡಿಮೆ ಒಂದು ಲಕ್ಷ ಕೋಟಿ ರೂಪಾಯಿಗಳು. ಇದರಲ್ಲಿ ಬಹುಪಾಲು ಸರ್ಕಾರದ್ದೇ ಕೊಡುಗೆ. ಈ ಸಂಸ್ಥೆಗಳು ನಿಸ್ವಾರ್ಥವಾಗಿ ಕೆಲಸ ಮಾಡಿದ್ದೇ ಆದರೆ ದೇಶದ ಅನೇಕ ಸಮಸ್ಯೆಗಳು ಚಿಟಿಕೆ ಹೊಡೆಯುವಷ್ಟರಲ್ಲಿ ಪರಿಹಾರ ಕಾಣಬೇಕು. ಆದರೆ ಹಾಗೆ ಆಗಿದೆಯೇನು? ಅಂದಾಜಿನ ಪ್ರಕಾರ ಇವುಗಳಲ್ಲಿ ಬಹುಪಾಲು ಸಂಸ್ಥೆಗಳು ದುಡ್ಡು ಹೊಡೆಯಲೆಂದೇ ಇರುವಂಥವು. ಸರ್ಕಾರದ ಹಣವನ್ನು, ದಾನಿಗಳ ಹಣವನ್ನು ಕಬಳಿಸಲೆಂದೇ ರೂಪುಗೊಂಡಂಥವು. ಇಂತಹ ಮರುಭೂಮಿಯ ನಡುವೆ ಮಠಗಳು ಓಯಸಿಸ್ ಆಗಿ ಕೆಲಸ ಮಾಡಬಾರದಾ? ಜಿಲ್ಲೆಗೊಂದು ಮಠ ಸರ್ಕಾರದ ಅನುದಾನವನ್ನು, ಭಕ್ತರ ಸಹಕಾರವನ್ನೂ ಪಡೆದು ಒಂದಷ್ಟು ಕೆರೆಗಳ ಜವಾಬ್ದಾರಿ ಹೊರಬಾರದಾ?

ಇಷ್ಟಕ್ಕೂ ಮಠಗಳೇನು ಮದರಸಾಗಳೇ? ಮದರಸಾಗಳಲ್ಲಿ ಕುರಾನ್ – ಹದೀಸ್‌ಗಳ ಪಾಠ ಮಾಡಲಿಕ್ಕೆಂದು ಸರ್ಕಾರ ಕೋಟಿಗಟ್ಟಲೆ ಹಣ ಸುರಿಯುತ್ತಿದೆಯಲ್ಲ, ಅದೇಕೆ ಯಾರೂ ಚಕಾರ ಎತ್ತುವುದಿಲ್ಲ? ಸ್ವಂತ ಖರ್ಚಿನಲ್ಲಿ ಮಠವೊಂದು ಶಾಲೆಗಳಿಗೆ ಗೀತೆ ಬೋಧಿಸಿದರೆ ತಪ್ಪೆನ್ನುವ ಜನ, ಸರ್ಕಾರದ ಖರ್ಚಿನಲ್ಲಿ ಕುರಾನ್ ಪಾಠ ಹೇಳುವುದನ್ನು ವಿರೋಧಿಸುವುದಿಲ್ಲವಲ್ಲ! ಹಜ್ ಯಾತ್ರೆಗೆಂದು ಈ ದೇಶ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ವ್ಯಯ ಮಾಡುವುದನ್ನು ಸ್ವತಃ ಸುಪ್ರೀಮ್ ಕೋರ್ಟ್ ವಿರೋಧಿಸಿತು. ಅನೇಕ ಮುಸಲ್ಮಾನರೂ ದನಿ ಜೋಡಿಸಿ, ತೀರ್ಥಯಾತ್ರೆಗೆ ನಮ್ಮದೇ ಹಣದಲ್ಲಿ ಹೋಗುವುದು ಸೂಕ್ತ ಎಂದು ಪ್ರತಿಕ್ರಿಯಿಸಿದರು. ಯಾವ ಎಡ ಪಂಥೀಯನೂ ಮಾತನಾಡಲಿಲ್ಲ. ಅನೇಕ ರಾಜಕಾರಣಿಗಳ ಕರುಳು ಚುರುಕ್ ಎಂದುಬಿಡ್ತು. ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್‌ರಂತೂ ಈ ಯಾತ್ರಿಕರಿಗೆ ಬೇರೆ ರೀತಿಯಲ್ಲಿ ಸಹಕರಿಸುವುದು ಹೇಗೆಂಬ ಬಗ್ಗೆ ತಲೆ ಕೆಡಿಸಿಕೊಂಡರು. ಯಾವ ಪತ್ರಿಕೆಗಳೂ ಜನರ ಪ್ರತಿಕ್ರಿಯೆ ಕೇಳಿ ಪುಟಗಟ್ಟಲೆ ಪ್ರಕಟಿಸುವ ಗೋಜಿಗೆ ಹೋಗಲಿಲ್ಲ. ಹೀಗಿರುವಾಗ, ಮಠಗಳಿಗೆ ಹಣ ಕೊಟ್ಟಾಕ್ಷಣ ಇವರೊಳಗಿನ ಮಾನವತೆಯ ಮೂರ್ತಿ ಧಿಗ್ಗನೆದ್ದು ಕುಳಿತುಬಿಟ್ಟಿತು!

ಶೃಂಗೇರಿಗೆ ಅನೇಕ ಕಮ್ಯುನಿಸ್ಟ್ ನಾಯಕರು ಬರುತ್ತಾರೆ. ಅಲ್ಲಿ ಬೇರೂರುತ್ತಿರುವ ನಕ್ಸಲ್ ಮಿತ್ರರಿಗೆ ತಮ್ಮ ಮಾತುಗಳಿಂದ ಶಕ್ತಿ ತುಂಬುತ್ತಾರೆ. ಮಠಗಳಿಗೆ ಬೆಂಕಿ ಹಚ್ಚಿರೆಂದು ಭಾಷಣ ಬಿಗಿದು ಶೃಂಗೇರಿ ಮಠದಲ್ಲಿಯೇ ಗಡದ್ದು ಊಟ ಹೊಡೆದು ಮನೆಗೆ ತೆರಳುತ್ತಾರೆ! ಆ ಮಠ ಎಂದಿಗೂ ಈ ಕುರಿತಂತೆ ಆಕ್ಷೇಪ ಎತ್ತುವುದಿಲ್ಲ. ಹಸಿದವರಿಗೆ ಪ್ರಸಾದ ನೀಡುವುದು ಅದರ ಉದ್ದೇಶಿತ ಕಾರ್ಯಗಳಲ್ಲಿ ಒಂದು. ಕಳೆದ ಅನೇಕ ದಶಕಗಳಿಂದ ಈ ಕೆಲಸವನ್ನು ಅದು ಮಾಡಿಕೊಂಡು ಬಂದಿದೆ. ಒಂದು ನಯಾಪೈಸೆ ಅನುದಾನವನ್ನೂ ಈವರೆಗೆ ಕೇಳಿಲ್ಲ. ಇಂತಹ ಮಠಕ್ಕೆ ವಿಶಾಲ ಊಟದ ಕೋಣೆಯೊಂದನ್ನು ಸ್ವತಃ ಸರ್ಕಾರವೇ ಕಟ್ಟಿಸಿಕೊಟ್ಟರೆ ಅದು ತಪ್ಪಾ?
ದೇವನೂರಿನಲ್ಲಿ ಒಂದು ಮಠವಿದೆ. ಅದನ್ನು ’ಭಿಕ್ಷದ ಮಠ’ ಅಂತಾನೇ ಕರೆಯೋದು. ಇಂದಿಗೂ ಸುತ್ತಲ ಹಳ್ಳಿಗಳಿಂದ ನಿತ್ಯವೂ ಭಿಕ್ಷೆ ಬೇಡುವ ಕಾಯಕ ನಡೆಯುತ್ತದೆ. ಅಲ್ಲಿನ ಪ್ರಸಾದದ ರುಚಿ ಬಲು ಅದ್ಭುತವಾದುದು. ನೂರು ವರ್ಷಗಳಷ್ಟು ಹಳೆಯ ಈ ಮಠ ಅನ್ನ ದಾಸೋಹದ ಜೊತೆಗೆ ಜ್ಞಾನ ದಾಸೋಹವನ್ನೂ ಮಾಡುವತ್ತ ಕೈ ಹಾಕಿದೆ. ಸುತ್ತಲ ಬಡ ಜನರಿಗೆ ಶ್ರೇಷ್ಠ ಶಿಕ್ಷಣ ನೀಡುವ ಈ ಮಠಕ್ಕೆ ಸರ್ಕಾರದ ಅನುದಾನದಲ್ಲಿ ಕಾಲೇಜು ಕಟ್ಟಿಕೊಟ್ಟರೆ ತಪ್ಪಾ?
ಸುತ್ತೂರಿಗೆ ಹೋಗಿಬನ್ನಿ. ಐದು ಸಾವಿರ ಮಕ್ಕಳಿಗೆ ಉಚಿತ ವಸತಿ, ಊಟ, ಶಿಕ್ಷಣ ನೀಡುವ ದೊಡ್ಡ ಸಂಸ್ಥೆಯನ್ನು ಸ್ವಾಮೀಜಿ ನಿರ್ಮಿಸಿದ್ದಾರೆ. ಪಟ್ಟಣಿಗರಿಗೆ ಸರಿಸಮಾನವಾದ ಶಿಕ್ಷಣ ಹಳ್ಳಿಯಲ್ಲಿ ದೊರಕುವಂತೆ ಮಾಡಿದ್ದಾರೆ. ಇದು ಸರ್ಕಾರದ ಕೆಲಸವೆಂದು ಮಠ ಕೈಕಟ್ಟಿ ಕುಳಿತಿದ್ದರೆ ಹಳ್ಳಿಗರಿಗೆ, ಬಡಜನರಿಗೆ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಸಾಧ್ಯವಿತ್ತೇನು? ಆ ಮಠಕ್ಕೆ ಸರ್ಕಾರ ಕೊಡುವ ಒಂದೆರಡು ಕೋಟಿ ಯಾವ ಮೂಲೆಗೆ ಹೇಳಿ!

ಇಷ್ಟಕ್ಕೂ ಬರಗಾಲವೆರಗಿ ಹಾಹಾಕಾರ ಶುರುವಾದರೆ ನಮ್ಮ ಮಠಗಳು ಕಣ್ಮುಚ್ಚಿಕೊಂಡು ಕುಳಿತುಕೊಂಡು ಬಿಡುತ್ತವೆ ಅಂದುಕೊಂಡಿರೇನು? ಸುನಾಮಿಯಾದಾಗ ಸರ್ಕಾರಿ ವ್ಯವಸ್ಥೆಯೆಲ್ಲ ಕುಸಿದು ಬಿತ್ತಲ್ಲ, ಆಗ ನೆರವಿಗೆ ಬಂದದ್ದು ಮಠಗಳೇ. ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಾದಾಗ ಮಠಗಳೆಲ್ಲ ದಾಸೋಹದ ಕೇಂದ್ರಗಳಾಗಿಬಿಟ್ಟಿದ್ದವು. ಇದು ಬರಿ ಕರ್ನಾಟಕದ ಕಥೆಯಲ್ಲ. ಗುಜರಾತಿನಲ್ಲೊಂದು ಹಳ್ಳಿ ಧರ್ಮಜ ಅಂತ. ಅಲ್ಲೊಂದು ದೇವಸ್ಥಾನವಿದೆ. ಅಲ್ಲಿ ಬೂಂದಿಯನ್ನು ಪ್ರಸಾದವಾಗಿ ಕೊಡುತ್ತಾರೆ. ಗುಜರಾತಿನಲ್ಲಿ ಭೀಕರ ಭೂಕಂಪ ಉಂಟಾದಾಗ ಈ ದೇವಸ್ಥಾನದ ಒಲೆ ಆರಿರಲೇ ಇಲ್ಲ. ಟನ್‌ಗಟ್ಟಲೆ ಬೂಂದಿ ತಯಾರಿಸಿ ಪ್ಯಾಕೆಟ್ಟುಗಳಲ್ಲಿ ತುಂಬಿಸಿ ಸಂತ್ರಸ್ತರಿಗೆ ತಲುಪಿಸುವ ವ್ಯವಸ್ಥೆಯನ್ನದು ಕೈಗೊಂಡಿತ್ತು. ಜಿಲ್ಲಾಧಿಕಾರಿಗಳು, ಮಂತ್ರಿಗಳು ಬಿಡಿ, ಸಂತ್ರಸ್ತರ ಕೈಲಿ ಬೂಂದಿ ನೋಡಿ ಅಚ್ಚರಿಗೊಂಡ ಅಡ್ವಾಣಿ ಧರ್ಮಜ್ ಗ್ರಾಮವನ್ನರಸಿಕೊಂಡು ಬಂದು, ದೇವರ ದರ್ಶನ ಪಡೆದು ಹೋದದ್ದನ್ನು ಮಂದಿರದ ಕಮಿಟಿ ಈಗಲೂ ನೆನಪಿಸಿಕೊಳ್ಳುತ್ತೆ. ನಿಜ ಹೇಳಿ. ಇಂತಹುದನ್ನು ಮಾಧ್ಯಮಗಳು ಎಂದಾದರೂ ಹೇಳಿವೆಯಾ?
ಸರ್ಕಾರ ಕೊಡುವ ಒಂದೆರಡು ಕೋಟಿ ರೂಪಾಯಿಯಲ್ಲಿ ಯಾವ ಮಠಾಧೀಶರೂ ತಮ್ಮ ಮಲಗುವ ಕೋಣೆ ಕಟ್ಟಿಸಿಕೊಳ್ಳುವುದಿಲ್ಲ ಎಂಬುದನ್ನು ನೆನಪಿನಲ್ಲಿ ಇರಿಸಿಕೊಂಡರೆ ಸಾಕು. ನಮ್ಮ ಅನೇಕ ಅನುಮಾನಗಳು ನಿವಾರಣೆಯಾಗಿಬಿಡುತ್ತವೆ. ಮತ್ತೊಂದು ವಿಚಾರ ಗೊತ್ತಿರಲಿ, ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಪಡಕೊಂಡು ವಿನಿಯೋಗಿಸಸುವುದೂ ಒಂದು ಸಾಹಸವೇ. ಹಾಗೆ ನೋಡಿದರೆ ಹಣ ಘೋಷಣೆಯಾದ ಂಏಲೆ ಮಠಗಳಿಗೆ ನಿಜವಾದ ಸಮಸ್ಯೆ ಶುರುವಾಗುತ್ತೆ. ಆ ಹಣ ಸರ್ಕಾರದ ಹಣಕಾಸು ವಿಭಾಗದಿಂದ ಜಿಲ್ಲಾಧಿಕಾರಿಗೆ ಮುಟ್ಟಿ ಮಠ ತಲುಪುವ ವೇಳೆಗೆ ಮಠಾಧೀಶರ ಬೆನ್ನು ಬಾಗಿಬಿಡುತ್ತೆ. ಇಷ್ಟು ದಿನ ಮಠದ ಬೆನ್ನಿಗೆ ಆತುಕೊಂಡಿದ್ದ ಭಕ್ತ ಸಮೂಹವೂ ದೂರ ನಿಂತುಬಿಡುತ್ತೆ; ಸಾಕಷ್ಟು ಹಣ ಬಂದಿದೆಯಲ್ಲ, ಮತ್ತೆ ನಾವೇಕೆ ಕೊಡಬೇಕು ಅಂತ! ದೊಡ್ಡ ದೊಡ್ಡ ಮಠಗಳು ಮಂತ್ರಿಗಳನ್ನೆ ಬಗ್ಗಿಸಿ ಗುದ್ದಿ ಹಣ ತರಿಸಿಕೊಂಡುಬಿಡುತ್ತವೆ. ಸಣ್ಣಪುಟ್ಟ ಮಠಗಳು ಮಾತ್ರ ಹಣ ಘೋಷಣೆಯಾದ ಮೇಲೆ ಇನ್ನೂ ಸಣ್ಣವಾಗಿಬಿಡುತ್ತವೆ.
ನೆನಪಿರಲಿ. ಸರ್ಕಾರಕ್ಕೆ ಹೆಚ್ಚು ತೆರಿಗೆ ಕಟ್ಟುವವರು ನಾವು. ಹೆಚ್ಚು ಆದಾಯ ಇರುವ ನಮ್ಮ ದೇವಸ್ಥಾನಗಳನ್ನೆಲ್ಲ ಸರ್ಕಾರ ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿದೆ. ಆದರೆ ಅಲ್ಲಿಂದ ನಮ್ಮ ದೇವಸ್ಥಾನಗಳಿಗೆ ಹರಿಯೋದು ಮಾತ್ರ ಅತ್ಯಂತ ಕಡಿಮೆ ಹಣ. ಹಿಂದೊಮ್ಮೆ ಚಾಮರಾಜನಗರದಲ್ಲಿರುವ ಒಂದು ಪ್ರಾಚೀನ ದೇವಾಲಯಕ್ಕೆ ಹೋಗಿದ್ದೆ. ಕಲಾತ್ಮಕ ಕೆತ್ತನೆಗಳಿಂದ ಕೂಡಿದ ಆ ದೇವಸ್ಥಾನದ ಅರ್ಚಕರಿಗೆ ತಿಂಗಳಿಗೆ ಮೂವತ್ತೋ ನಲವತ್ತೋ ರೂಪಾಯಿಗಳಷ್ಟು ಸಂಬಳ ಕೊಡುತ್ತಿದ್ದರು. ದೇವಸ್ಥಾನದ ದೀಪೋತ್ಸವಕ್ಕೆಂದು ವರ್ಷಕ್ಕೆ ಹನ್ನೆರಡು ರೂಪಾಯಿ ಕೊಡುತ್ತಿದ್ದರೆಂಬುದನ್ನು ಕೇಳಿ ಗಾಬರಿಯಾಗಿಬಿಟ್ಟಿದ್ದೆ! ಬಹುಶಃ ಈಗ ಅದು ಸಾಕಷ್ಟು ಹೆಚ್ಚಿರಬಹುದೇನೋ. ಅಂದರೆ ನಮ್ಮದೇ ಹಣ, ನಮ್ಮ ಉಪಯೋಗಕ್ಕೆ ಬರಲಿಲ್ಲವೆಂದರೆ ಹೇಗೆ?
ಅದ್ಕಕೇ ಮಠಕ್ಕೆ ಹಣ ಕೊಟ್ಟಾಗ ವಿಷಾದಿಸುವ ಅಗತ್ಯವಿಲ್ಲ. ಬದಲಿಗೆ ಭಕ್ತ ಸಮೂಹ ಅದು ಮಠದವರೆಗೂ ಬಂದು, ಸದ್ವಿನಿಯೋಗವಾಗುವಂತೆ ನೋಡಿಕೊಂಡರೆ ಅದು ಬಹು ಮುಖ್ಯ ಕೆಲಸವಾದೀತು. ಕೆಲವಾದರೂ ಮಠಾಧೀಶರು ಒಟ್ಟಿಗೆ ಕುಳಿತು ಸರ್ಕಾರದ ಹಣವನ್ನು ಬಳಸಿಕೊಳ್ಳುವ ಕುರಿತು ಒಂದು ನೀತಿ ಸಂಹಿತೆ ರಚಿಸಿಕೊಂಡರೆ ಮತ್ತೂ ಒಳಿತೇ. ಜಿಲ್ಲೆಗೆ ಸಮಗ್ರ ಯೋಜನೆಯೊಂದನ್ನು ರಚಿಸಿಕೊಂಡು ತಾನೇ ಅನುಷ್ಠಾನಕ್ಕಿಳಿಯುವ ಕೈಂಕರ್ಯ ಮಾಡಿಬಿಟ್ಟರಂತೂ ಅದ್ಭುತ. ನಮ್ಮ ಜನಕ್ಕೆ ಇಂದಿಗೂ ಸರ್ಕಾರಕ್ಕಿಂತಲೂ ಹೆಚ್ಚಿನ ಭರವಸೆ ಇರೋದು ಮಠಗಳ ಮೇಲೆ, ಮಠಾಧೀಶರ ಮೇಲೆ. ಒಂದಿಬ್ಬರು ಮಠಾಧೀಶರು ದಾರಿ ತಪ್ಪಿದರೆಂಬ ಮಾತ್ರಕ್ಕೆ ಯಾರಿಗೂ ಅನುದಾನ ಬೇಡವೆನ್ನುವುದು, ವಿಶ್ವಾಸ ಕಳಕೊಂಡ ಸರ್ಕಾರಕ್ಕೆ ತೆರಿಗೆ ಕಟ್ಟಬೇಡಿ ಎಂಭಷ್ಟೇ ಘೋರ.
ಇನ್ನು ಮುಂದೆ ನಮ್ಮ ಬೇಡಿಕೆ ಸ್ವಲ್ಪ ಹೆಚ್ಚಬೇಕಿದೆ. ಮದರಸಾಗಳಿಗೆ ಅನುದಾನ ಕೊಡಬಹುದಾದರೆ ಹಿಂದೂ ದತ್ತಿ ಸಂಸ್ಥೆಗಳನ್ನು ಸಂಘಟಿಸಿ ಅನುದಾನಕ್ಕೆ ಆಗ್ರಹಿಸೋಣ. ಹಜ್‌ಗೆ ಸಾವಿರಾರು ಕೋಟಿ ಸಬ್ಸಿಡಿ ಕೊಟ್ಟರೆ, ಮಾನಸ ಸರೋವರಕ್ಕೆ, ಅಮರನಾಥಕ್ಕೆ ನಾವೂ ಹೋಗುತ್ತೇವೆ, ನಮಗೂ ಕೊಡಲಿ. ಅದೇಕೆ ಬೇಡ!? ಹಳ್ಳಿಹಳ್ಳಿಯಲ್ಲಿ ಗೋರಕ್ಷಣೆಗೆ ಅನುದಾನ ಕೇಳೋಣ. ನಮಗೆ ಕೊಡಬೇಕಾಗುತ್ತಲ್ಲ ಅನ್ನೋ ಕಾರಣಕ್ಕೆ ಬೇರೆಯವರಿಗೆ ಕೊಡೋದನ್ನು ನಿಲ್ಲಿಸಿಬಿಡ್ತಾರೆ. ಚರ್ಚುಗಳು ಸರ್ಕಾರದ ಯೋಜನೆಗಳನ್ನು ತನ್ನವೆಂದು ಬಿಂಬಿಸಿಕೊಂಡು ಹಳ್ಳಿಗಳಿಗೆ ಮುಟ್ಟಿಸಿ ಮತಾಂತರದ ಹುನ್ನಾರ ಮಾಡುವುದಾದರೆ, ಮಠಗಳು ಹಣ ಪಡೆದು ತಮ್ಮವರನ್ನ ತಾವು ಉಳಿಸಿಕೊಂಡರೆ ತಪ್ಪೇನು?
ಕೇಳುವುದಕ್ಕೆ ಪ್ರಶ್ನೆಗಳೇನೋ ಸಾಕಷ್ಟಿವೆ. ಯಾರಿಗೆ ಕೇಳಬೇಕೆಂಬುದೇ ದೊಡ್ಡ ಪ್ರಶ್ನೆ!

Leave a Reply