ವಿಭಾಗಗಳು

ಸುದ್ದಿಪತ್ರ


 

ಬದುಕೆಂಬ ಪರೀಕ್ಷೆ, ನಪಾಸಾಗದಿದ್ದರೆ ಸಾಕು!

ಪರೀಕ್ಷೆ ಕೊಠಡಿಯಲ್ಲಿ ಮೇಷ್ಟ್ರು ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಹಂಚಿದ್ದಾರೆ. ಉತ್ತರ ಬರೆಯಬೇಕಾದ ಹುಡುಗ ಸುಮ್ಮನೆ ಕುಳಿತ. ಮೂರು ತಾಸು ಕಳೆಯಿತು. ಗಂಟೆ ಬಾರಿಸುವುದಕ್ಕೆ ಕೆಲವೇ ಕ್ಷಣ ಉಳಿದಿರುವಾಗ ಆತ ಪತ್ರಿಕೆಯ ಮೇಲೆ ಒಂದಷ್ಟು ಗೀಚಿದ. ಪ್ರಶ್ನೆ ಓದುವ ಪ್ರಯತ್ನ ಮಾಡಿದ. ಆದರೆ ಸಮಯ ಮೀರಿತ್ತು. ಮೇಷ್ಟ್ರು ಬಂದು ಉತ್ತರ ಪತ್ರಿಕೆ ಪಡೆದು ನಡೆದೇ ಬಿಟ್ಟರು! ಈ ಕಥೆಯಲ್ಲಿ ಅದೇನು ವಿಶೇಷವೆಂದರೆ ಅಚ್ಚರಿಯೇ? ಉತ್ತರ ಬರೆಯಬೇಕಿದ್ದ ಆ ಹುಡುಗರು ನಾವೇ. ಪ್ರಶ್ನೆ ಪತ್ರಿಕೆ ಕೊಟ್ಟವ ಭಗವಂತ. ಮೂರು ತಾಸು ಬದುಕಿನ ಅವಧಿ. ಬರೆಯದೇ ಮರಳಿ ಕೊಟ್ಟ ಉತ್ತರ ಪತ್ರಿಕೆ ನಮ್ಮ ಸಾಧನೆ. ಪರೀಕ್ಷೆಯಲ್ಲಿ ಆ ಹುಡುಗ ನಪಾಸಾಗುವುದು ಅದೆಷ್ಟು ಖಾತ್ರಿಯೋ ಜೀವನದಲ್ಲಿ ನಾವು ಸೋಲುವುದೂ ಅಷ್ಟೇ ಖಾತ್ರಿ.
‘ಮಾನವ ಜನ್ಮ ದೊಡ್ಡದು, ಅದನ್ನು ಹಾನಿ ಮಾಡಿಕೊಳ್ಳಬೇಡಿ’ ಎಂಬ ಹಿರಿಯರ ಮಾತಿದೆ. ಆದರೆ ನಮಗದು ಅರ್ಥವಾಗುವ ವೇಳೆಗೆ ಕಾಲ ಮೀರಿಯೇ ಹೋಗಿರುತ್ತದೆ. ‘ನಾನು ಯಾರು?’ ಎಂಬ ಒಂದು ಪ್ರಶ್ನೆಯೇ ಸಾಕು, ನಮ್ಮ ಮನಸ್ಸಿನೊಳಗೆ ಚಳವಳಿಯನ್ನು ಹುಟ್ಟು ಹಾಕಲು. ಆದರೆ, ಈ ಪ್ರಶ್ನೆ ಕೇಳಿಕೊಳ್ಳಲು ಸಮಯವೇ ಇಲ್ಲವಲ್ಲ ನಮಗೆ. ಬಾಲ್ಯದಲ್ಲಿ ಆಟದ ಹೊತ್ತು. ಆಗ ಗಹನವಾದುದು ಬೇಡ. ಯೌವ್ವನದಲ್ಲಿ ಗಮ್ಮತ್ತಿನ ಸಮಯ. ಆಗ ‘ನಾನು’ ದೇಹವಾಗಿ ಬಿಟ್ಟಿರುತ್ತೇನೆ. ಅದರ ಆಕರ್ಷಣೆಯಲ್ಲೇ ಮುಳುಗಿ ಹೋಗಿರುತ್ತೇನೆ. ನಾನು ನಂಬಿಕೊಂಡು ಬಂದ ದೇಹದ ಕಸುವು ತೀರುವ ವೇಳೆಗೆ ಸಮಯ ಮುಗಿಯಲು ಇನ್ನು ಕೆಲವೇ ದಿನ ಬಾಕಿ ಎಂಬ ಸಂದೇಶ ಬರುತ್ತದೆ. ಆಗ ನೋಡಿ ನಮ್ಮ ಧಾವಂತ…. ನಾವು ಆತುರಾತುರವಾಗಿ ಇಷ್ಟೂ ದಿನ ಮಾಡದ್ದನ್ನು ಮಾಡ ಹೊರಡುತ್ತೇವೆ. ಖಾಲಿ ಹಾಳೆಯಲ್ಲಿ ಗೀಚಲಾರಂಭಿಸುತ್ತೇವೆ. ಈ ಗೀಚುವಿಕೆಯ ಪ್ರಯತ್ನವಾಗಿಯೇ ಮಂದಿರಗಳಿಗೆ ಹೋಗೋದು, ಪ್ರವಚನ ಕೇಳೋದು ಎಲ್ಲ.
ಬಾಲ್ಯದಿಂದಲೇ ಯೋಗ್ಯ ಶಿಕ್ಷಣ ಪಡೆದು ಬದುಕಿನ ಪುಟಗಳಿಗೆ ತೆರೆದುಕೊಳ್ಳುವುದು ಒಳಿತು. ಆರಂಭದಿಂದಲೂ ಯಾವುದಕ್ಕೆ ಪ್ರಯತ್ನ ಪಟ್ಟಿರುತ್ತೇವೆಯೋ, ಅದು ಮಾತ್ರ ಅಂತ್ಯಕಾಲದವರೆಗೂ ಜೊತೆಗಿರುತ್ತದೆ. ಉಳಿದಂತೆ ಎಲ್ಲವೂ ಜೊತೆಗೆ ಬರುವಂತಹುದಲ್ಲ. ಹೀಗಾಗಿಯೇ ಸಮಯ ಸರಿಯಾಗಿದ್ದಾಗಲೇ ಸೂಕ್ತ ಗುರುವನ್ನು ಹುಡುಕಿಕೊಂಡು ಬೆಳಕಿನತ್ತ ನಡೆದುಬಿಡಬೇಕು. ಒಮ್ಮೆ ಬೆಳಕಿನ ದರ್ಶನವಾದರೆ ಮುಗಿಯಿತು. ಆಮೇಲೆ ಆ ಆನಂದದ ಅಲೆಯ ಏರಿಳಿತಗಳಿಂದಲೇ ಮನಸ್ಸು ಪ್ರಫುಲ್ಲಿತವಾಗಿಬಿಡುತ್ತದೆ. ಮತ್ತೇಕೆ ತಡ? ಪರೀಕ್ಷೆಗೆಂದು ಕುಳಿತಿದ್ದೇನೆ. ಕೊಟ್ಟ ಪ್ರಶ್ನೆಗಳಿಗೆ ಸೂಕ್ತ ಉತ್ತರ ಬರೆಯೋಣ. ಬೆಲ್ಲು ಹೊಡೆಯುವ ಮುನ್ನ ಉತ್ತರ ಬರೆದು ಮುಗಿಸಿ ನಿರಾಳವಾಗೋಣ. ನಪಾಸಾಗಿ ಮತ್ತೆ ಉತ್ತರ ಬರೆಯುವ ಪ್ರಮೇಯ ಬರದಿದ್ದರೆ ಸಾಕು.

Leave a Reply