ವಿಭಾಗಗಳು

ಸುದ್ದಿಪತ್ರ


 

‘ಬ್ರೂನಿ’ಯ ಮೂಕ ಮಾತುಗಳು…

ಮಾನ್ಯ ಮುಖ್ಯಮಂತ್ರಿಗಳಿಗೆ ನಮಸ್ಕಾರ.

ನನ್ನ ಯಜಮಾನನ ಸಾವಿಗೆ ನಾಲ್ಕು ದಿನ ಕಳೆದೇ ಹೋಯಿತು. ಮೊದಲ ದಿನದಿಂದಲೂ ಇದನ್ನು ಆತ್ಮಹತ್ಯೆಯೆಂದೇ ಸಾಬೀತು ಪಡಿಸಲು ಹೆಣಗಾಡುತ್ತಿದ್ದ ನಿಮಗೂ-ನಿಮ್ಮ ವ್ಯವಸ್ಥೆಗೂ ನಾಲ್ಕು ದಿನವಾದರೇನು? ನಲ್ವತ್ತು ದಿನವಾದರೇನು? ನನಗಿರುವ ನಿಯತ್ತಿನ ಹತ್ತು ಪರ್ಸೆಂಟು ನಿಮ್ಮ ವ್ಯವಸ್ಥೆಗೆ ಇದ್ದಿದ್ದರೆ ಇವತ್ತು ನಮ್ಮ ಯಜಮಾನರು ಸಾಯುವ ಸ್ಥಿತಿ ಬರುತ್ತಿರಲಿಲ್ಲ.

ನಮ್ಮ ಮನೆಗೆ ಬಂದಾಗಲೆಲ್ಲ ಅವರು ಮೊದಲು ನನ್ನತ್ತಲೇ ಬರಬೇಕಿತ್ತು. ಪ್ರೀತಿಯಿಂದ ನೇವರಿಸಿ ನನ್ನೊಡನೆ ಹತ್ತು ನಿಮಿಷ ಆಡಿದ ಮೇಲೆಯೇ ಮನೆಯೊಳಗೆ ಹೋಗುತ್ತಿದ್ದರು. ಅವರು ಮುಟ್ಟುವಾಗ,ಮುದ್ದಿಸುವಾಗ ಅವರೊಬ್ಬ ದೊಡ್ಡ ಅಧಿಕಾರಿ ಅಂತ ನನಗೆಂದೂ ಅನ್ನಿಸಲೇ ಇಲ್ಲ. ಕುಸುಮಕ್ಕ ಆಗಾಗ ದೊಡ್ಡ ಯಜಮಾನರ ಜೊತೆಗೆ ಸಾಹೇಬರ ಕುರಿತಂತೆ ಮಾತನಾಡುವುದನ್ನು ಕೇಳಿ ರೋಮಾಂಚನವಾಗುತ್ತಿದ್ದೆ. ನಿಷ್ಠೆಗೆ ಇನ್ನೊಂದು ಹೆಸರು ಅಂತ ನನಗೆ ಹೇಳುತ್ತಾರೆ ಅನ್ನೋ ಧಿಮಾಕು ನನಗಿತ್ತು. ಆದರೆ ರಾಷ್ಟ್ರನಿಷ್ಠೆಗೆ ನಮ್ಮ ಯಜಮಾನರೇ ನಿಜವಾದ ಸಂಕೇತ ಎನ್ನುವುದು ನನಗೆ ಖಾತ್ರಿಯಾಗಿತ್ತು. ಥೂ! ಬಿಡಿ ವೋಟಿಗಾಗಿ ದೇಶವನ್ನೂ ಮಾರಿಬಿಡುವವರಿಗೆ ರಾಷ್ಟ್ರನಿಷ್ಠೆಯೆಂಬುದೆಲ್ಲ ಹೇಗೆ ಅರ್ಥವಾಗಬೇಕು.

ಸಾಹೇಬರು ಕಷ್ಟಪಟ್ಟು ಮೇಲೆ ಬಂದವರು ಬಡತನದ ನಡುವೆ ಅಧ್ಯಯನವನ್ನೂ ಸಮರ್ಥವಾಗಿಯೇ ಮಾಡಿದವರು.ಅಬಕಾರಿ ಇನ್ಸಪೆಕ್ಟರ್ ಆಗಿದ್ದಾಗಲೇ ಕೆಎಎಸ್ ಬರೆದು ಸಂದರ್ಶನದವರೆಗೂ ಹೋಗಿಬಂದಿದ್ದರು. ಐಎಎಸ್ ಪರೀಕ್ಷೆ ಅಧ್ಯಯನಕ್ಕೆ ರಜೆ ಕೊಡುವುದಿಲ್ಲವೆಂದಾಗ ಸರ್ಕಾರಿ ನೌಕರಿಗೆ ರಾಜಿನಾಮೆ ಇತ್ತು, ಹ್ಞಾಂ.. ಮತ್ತೆ ಹೇಳುತ್ತಿದ್ದೇನೆ;ಸರ್ಕಾರಿ ನೌಕರಿಗೆ ರಾಜೀನಾಮೆ ಇತ್ತು ಅಧ್ಯಯನ ಮಾಡಿ ಐ.ಎ.ಎಸ್ ಅಧಿಕಾರಿಯಾದವರು.ಬಡತನದಲ್ಲಿದ್ದಾಗ ಸಾರ್ಕಾರಿ ನೌಕರಿಗೆ ರಾಜಿನಾಮೆ ಕೊಡಲು ಹಿಂದೆ-ಮುಂದೆ ನೋಡದ ಆ ಗಟ್ಟಿಗ ಈಗ ಆತ್ಮಹತ್ಯೆ ಮಾಡಿಕೊಳ್ತಾನಾ ಮುಖ್ಯಮಂತ್ರಿಗಳೇ?

ಇಷ್ಟಕ್ಕೂ ಯಜಮಾನರು ಐ.ಎ.ಎಸ್ ಮಾಡಿದ್ದು ಯಾಕೆ ಗೊತ್ತಾ?ದರ್ಪ ತೋರಿ,ಎಲ್ಲರೆದುರು ಮೆರೆಯಲಿಕ್ಕಲ್ಲ,ಬಡವರೊಂದಿಗೆ ಬೆರೆಯಲಿಕ್ಕೆ.ಕೋಲಾರದ ಜನರನ್ನೊಮ್ಮೆ ಮಾಡನಾಡಿಸಿ ನೋಡಿ.ಅವರು ಮಾತನಾಡಲಾರರು ಬರೀ ಕಣ್ಣೀರಿಡುತ್ತಾರೆ.ನಿಮಗೇನು ಮುಖ್ಯಮಂತ್ರಿಗಳೇ! ಸದನದಲ್ಲಿ ಬರೀ ರವಿಯವರ ಮಾವ ನನ್ನ ಬಳಿ ಬಂದು ಬೆಂಗಳೂರಿಗೆ ವರ್ಗಮಾಡುವಂತೆ ಕೇಳಿಕೊಂಡರು ಎಂದುಬಿಟ್ಟಿರಿ. ನಿಮ್ಮ ಮಾತಿನ ಧಾಟಿ ಆಯಕಟ್ಟಿನ ಜಾಗಕ್ಕೆ  ಬರಲು ರವಿ ನಡೆಸಿದ ಪ್ರಯತ್ನ ಎಂಬಂತೆ ಇತ್ತು.ಬಿಡಿ. ರಾಜ್ಯದ ಜನತೆಗೆ ನಿಮಗಿಂತ ಹೆಚ್ಚು ನಂಬಿಕೆ ಇರೋದು ರವಿ ಸಾಹೇಬರ ಮೇಲೇನೇ.ನಿಮ್ಮ ಯಾವ ಪ್ರಯತ್ನವೂ ಯಶಸ್ವಿಯಾಗಲ್ಲ.

ಇಷ್ಟಕ್ಕೂ ಅವರನ್ನು ಕೋಲಾರದಿಂದ ವರ್ಗಾವಣೆ ಮಾಡಲು ಕಾರಣವಾಗಿದ್ದೇ ಭ್ರಷ್ಟರೊಂದಿಗೆ ಅವರ ಕಠೋರ ವರ್ತನೆ.ಜನರಿಗೆ ದೊರಕಬೇಕಾದ ಸೌಕರ್ಯ ಮತ್ತು ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿಮಾಡಿಕೊಳ್ಳದ ಅವರ ಖಡಕ್ಕು ವ್ಯಕ್ತಿತ್ವದಿಂದಾಗಿಯೇ ನಿಮಗೆ ಸಾಕಷ್ಟು ಕಿರಿಯಾಗಿತ್ತು.ನಿಮ್ಮ ಅನೇಕ ಆಪ್ತರು ಒತ್ತಡ ಹೇರಿ ಅವರನ್ನು ದೂರದೂರಿಗೆ ಕಳೆಸಲು ಯತ್ನ ನಡೆಸಿದ್ದರೆಂದು ದೊಡ್ಡ ಯಜಮಾನರು ಮನೆಯಲ್ಲಿ ಮಾತನಾಡುತ್ತಿದ್ದನ್ನು ನಾನೇ ಕೇಳಿದ್ದೇನೆ.

ಕೋಲಾರದ ಜನ ಫೋನ್ ಮಾಡುತ್ತಿದ್ದರು.ಎಷ್ಟೋ ಬಾರಿ ಆ ಜನರ ಮೇಲೆ ನನಗೆ ಕೋಪ ಬರುತ್ತಿತ್ತು.ಆದರೆ ಸಾಹೇಬರು ಎಂದಿಗೂ ಕೋಪಿಸಿಕೊಳ್ಳುತ್ತಿರಲಿಲ್ಲ.ಯಾರೊಂದಿಗೂ ಕೆಟ್ಟದಾಗಿ ಮಾತನಾಡುತ್ತಿರಲಿಲ್ಲ.ಯಾರಿಗೂ ಅಪಹಾಸ್ಯ ಮಾಡಲಿಲ್ಲ.ಇವರು ತೀರಿಕೊಂಡಾಗ ‘ಮೇಲ್ನೋಟಕ್ಕೆ ಆತ್ಮಹತ್ಯೆ’ ಎಂದು ಹೇಳಿಬಿಟ್ಟಿರಲ್ಲ ನಿಮಗೆ ಮನಸಾದರೂ ಹೇಗೆ ಬಂತು?ಅವರು ಕೆಟ್ಟದಾಗಿ ನಡೆದುಕೊಂಡಿದ್ದರೆ ಅದು ಭ್ರಷ್ಟರೊಂದಿಗೆ ಮಾತ್ರ.ಅದೊಮ್ಮೆ ಬಡವರೊಬ್ಬರ ಬಳಿ ತಮ್ಮ ಕೆಳಗಿನ ವ್ಯಕ್ತಿಯೊಬ್ಬ ಲಂಚ ತೆಗೆದುಕೊಂಡಿದ್ದ ಸುದ್ದಿ ಬಂದೊಡನೆ ಕುಪಿತರಾಗಿದ್ದ ಸಾಹೇಬರು ಅವನನ್ನು ಬೈದು ಒಂದೆರಡು ಬಿಗಿದುಬಿಟ್ಟಿದ್ದರಂತೆ.ಪ್ರಾಮಾಣಿಕತೆಯ ಮೂರ್ತಿ ಅದು. ನಿಮಗೆ ಅದೆಲ್ಲ ಹೇಗೆ ಅರ್ಥವಾಗಬೇಕು ಹೇಳಿ!

ಹೌದು ನಮ್ಮ ಸಾಹೇಬರು ನಿಮ್ಮಂತೆ ರಾಜಕಾರಣಿಯಾಗಿಬಿಟ್ಟಿದ್ದರೆ ಚೆನ್ನಾಗಿತ್ತು.ಅಧಿಕಾರ ಸಿಗುವ ಮುನ್ನ ಒಂದು ಬಗೆ;ಸಿಕ್ಕ ಮೇಲೆ ಮತ್ತೊಂದು ಅವರು ಹಾಗಿರಲಿಲ್ಲ. ಐಎಎಸ್ ಓದುವಾಗ ಬಡವರ ಸೇವೆಗೆ ಯಾವ ಕನಸು ಕಟ್ಟಿದ್ದರೋ ಜಿಲ್ಲಾಧಿಕಾರಿಯಾದ ಮೇಲೆ ಅದಕ್ಕೆ ತಕ್ಕಂತೆ ಬದುಕಿದ್ದರು.ಕಾಲೇಜಿನ ಮಕ್ಕಳಿಗೆ ಸ್ಪರ್ಧಾತ್ಮಕ ಪರಿಕ್ಷೆಗಳ ತರಬೇತಿ ನೀಡುತ್ತಿದ್ದರು;

ಅಧಿಕಾರಕ್ಕಾಗಿ ಅವರು ತಮ್ಮನ್ನುತಾವು ಶೋಷಣೆಗೊಳಗಾದ ದಲಿತರು ಎಂದು ಪತ್ತಿಕಾ ಹೇಳಿಕೆ ಕೊಡಲಿಲ್ಲ.ಪತ್ನಿಯೊಂದಿಗೆ ದಲಿತರೆನಿಸಿಕೊಂಡವರ ಮನೆಯಲ್ಲಿ ಊಟ ಮಾಡಿ ಮೇಲ್ಪಂಕ್ತಿ ಹಾಕಿಕೊಟ್ಟರು.ನನಗೆ ಗೊತ್ತು ನಿಮ್ಮಲ್ಲಿ ಯಾರಿಗೂ ಇದರಿಂದ ಆಗಬೇಕಾದ್ದೇನೂ ಇರಲಿಲ್ಲ. ಈ ದೇಶಕ್ಕೆ  ಈ ಮನುಷ್ಯ ಬೇಕಿತ್ತು;ವ್ಯವಸ್ಥೆ ಕೊಂದು ಬಿಟ್ಟಿತು!

ಛೇ! ಅವರು  ತೀರಿಕೊಂಡದ್ದು ನಮಗೆಲ್ಲ ಅಚ್ಚರಿಯೇ ಅವರ ಕೈಗಳನ್ನು ನೇವರಿಸುತ್ತಾ ಅವರ ಕಾಲ್ಗಳ ಮೇಲೆ ನನ್ನ ಪ್ರಾಣ ಹೋಗುವುದೆಂದು ನಾನು ಆಶಿಸಿದ್ದೆ. ಗಾಜಿನ ಪೆಟ್ಟಿಗೆಯಲ್ಲಿ ಅಂಗಾತ ಮಲಗಿದ್ದ ಪುಣ್ಯಾತ್ಮನನ್ನೂ ನೋಡಬೇಕಾಗಿ ಬಂತು.ಆ ಕ್ಷಣವೇ ನಾನು ಸತ್ತು ಹೋಗಿಬಿಟ್ಟಿದ್ದರೆ ಚೆನ್ನಾಗಿತ್ತೆನಿಸಿತ್ತು.ಅತ್ತೂ ಅತ್ತೂ ನನ್ನ ಕಣ್ಣೀರು ಬತ್ತಿ ಹೊಯ್ತು.ಸಾಹೇಬರು ಕುತ್ತಿಗೆಗೆ ಸುತ್ತಿಕೊಂಡಿದ್ದ ಬಟ್ಟೆ ಅಗಲವಾಗಿತ್ತು,ಸತ್ತಾಗ ನಾಲಗೆ-ಕಣ್ಣು ಹೊರಬಂದಿರಲಿಲ್ಲ.ಮೈಮೇಲೆ ಗಾಯವಿತ್ತು.ಅವರ ಭಾರಕ್ಕೆ ಫ್ಯಾನು ಜಖಂ ಕೂಡ ಆಗಿರಲಿಲ್ಲ ಎಂದೆಲ್ಲ ಜನ ಅನುಮಾನ ವ್ಯಕ್ತಪಡಿಸುತ್ತಿದ್ದರು.ಆದರೆ ಪೋಲಿಸ್ ಕಮಿಷನರ್ ಮಾತ್ರ ಮೇಲ್ನೋಟಕ್ಕೆ ಆತ್ಮ ಹತ್ಯೆ ಎಂದು ಹೇಳಿಯೇ ಬಿಟ್ಟರು. ಗೃಹಸಚಿವರು, ನೀವೂ ಅದನ್ನು ಅನುನೋದಿಸಿದಿರಿ,ಮತ್ತೆ ಮತ್ತೆ ಸಾಧಿಸಲು ಯತ್ನಿಸಿದಿರಿ.

ಸಿಬಿಐ ಗೆ ಬೇಡ ಸಿಐಡಿ ಗೆ ಇದರ ತನಿಖೆ ಕೊಡೊಣ ಎನ್ನುತ್ತ ಅಲ್ಲಿನ ದಕ್ಷ ಅಧಿಕಾರಿ ಪ್ರಣಬ್ ಮೋಹಾಂತಿಯವರನ್ನು ಎತ್ತಂಗಡಿ ಮಾಡಿಬಿಟ್ಟಿರಿ.ನಿಜ ಹೇಳಿ.ಯಾರನ್ನು ಉಳಿಸಬೇಕೆಂದು ಇಷ್ಟಲ್ಲಾ ಪ್ರಯತ್ನ?! ಓಹ್ ಕ್ಷಮಿಸಿ ನಿಜ ಎನ್ನುವ ಪದದ ಅರ್ಥವನ್ನೂ ನಾನೇ ಹೇಳ ಬೇಕೇನೋ?

ನಾನಂತೂ ನಿಜ ಹೇಳುತ್ತೇನೆ ಪ್ರಾಣಿಲೋಕಕ್ಕೆ ಮಾತ್ರ ಪ್ರಾಮಾಣಿಕತೆ ಸೀಮಿತ ಎಂದು ನಾವು ನಂಬಿಕೊಂಡಿದ್ದಾಗ ಮನುಷ್ಯರು ಪ್ರಾಮಾಣಿಕೂ,ದೇಶಭಕ್ತರೂ ಆಗಿರುತ್ತಾರೆ ಎಂಬುದನ್ನು ಸಾಬೀತು ಪಡಿಸಿದ್ದು ಸಾಹೇಬರು.ಅಂಥವರ ಸಾವಿನಲ್ಲೂ ರಾಜಕೀಯ ಮಾಡಿ ನೀವು  ಪ್ರಮಾಣಿಕತೆಯೇ ತಪ್ಪು ಎನ್ನುವುದನ್ನು ಬಿಂಬಿಸ ಹೊರಟಿದ್ದೀರಿ.ಕೋಮುವಾದದ ವಾಸನೆ ನಿಮಗೆ ಬಲು ಬೇಗ ಬಡಿದುಬಿಡುತ್ತದೆ ಈಗ ಇಲ್ಲಿ ನಡೆದಿರುವ ಕುಕೃತ್ಯದ ವಾಸನೆ ಬರುತ್ತವೇ ಇಲ್ಲವೇನು?

ಬೇಡ ಮುಖ್ಯಮಂತ್ರಿಗಳೇ ಬೇಡ. ದಕ್ಷರ – ಪ್ರಾಮಾಣಿಕರ ಜನಾನುರಾಗಿಗಳ ಪ್ರಾಣದೊಂದಿಗೆ ಚೆಲ್ಲಾಟ ಆಡಬೇಡಿ.ಕನ್ನಡದ ಜನ,ದೇಶದ ಜನ ಸುಮ್ಮನಿರಬಹುದೇನೋ ಆದರೆ ನಮ್ಮ ಶಾಪ ನಿಮ್ಮನ್ನು ತಟ್ಟಿಯೇ ತಟ್ಟುತ್ತದೆ.

ಸತ್ಯ ಇಂದಲ್ಲ ನಾಳೆ ಹೊರಗೆ ಬರುತ್ತೆ. ಆವತ್ತು ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಳ್ಳಲಿಕ್ಕೂ ನಿಮಗೆ ನಾಚಿಕೆಯಾದೀತು.

ಹ್ಞಾಂ ಇನ್ನೊಂದ್ಮಾತು ನಾನೇ ಆತ್ಮಹತ್ಯೆ ಮಾಡಿಕೊಳ್ಳೊ ಜಾಯಮಾನದವನಲ್ಲ;ಇದೇ ನಮ್ಮ ಸಾಹೇಬರು.ಛೇ! ಸಾಧ್ಯವೇ ಇಲ್ಲ. ಅದನ್ನು ಆತ್ಮಹತ್ಯೆಯೆಂದು ಸಾಬೀತು ಪಡಿಸಲಿಕ್ಕೆ ಪ್ರೇಮ ಪ್ರಕರಣ, ಅನೈತಿಕ ಸಂಬಂಧ, ಮದುವೆಯ ಅಪಸ್ವರ ಏನೇನೇ ಹುಡುಕಾಟ ನಡೆಸುತ್ತಿದ್ದೀರಿ ಅಂತ  ಕಿವಿಗೆ ಬಿತ್ತು.ವಿಧಾನ ಸೌಧದ ಪಡಸಾಲೆಗಳಲ್ಲಿ ಹಾಗೆ ಮಾತನಾಡಿಕೊಳ್ಳುತ್ತಿದ್ದೀರಿ ಅಂತ ಒರಗೆಯ ನಾಯಿಗಳು ಹೇಳಿಕೊಳ್ಳುತ್ತಿದ್ದವು.ನಿಜ ನಾವು ಮತ್ತೇರಿದಾಗ ಬೀದಿಯಲ್ಲಿ ನಮಗಿಷ್ಟವಾದುದನ್ನು ಮಾಡಿಬಿಡುತ್ತೇವೆ.ಆದರೆ ನೀವುಗಳು ಆ ಪವಿತ್ರ ಜಾಗದಲ್ಲಿ ನಿಂತು ಈ ಪ್ರಾಮಾಣಿಕ ವ್ಯಕ್ತಿಯ ಬಗ್ಗೆ ಇಷ್ಟಲ್ಲಾ ಕೀಳಾಗಿ ಯೋಚಿಸುತ್ತಿದ್ದಿರಿ ಎಂದು ಗೊತ್ತಾದ ಮೇಲೆ..ಯಾಕೋ ನಿಮಗಿಂತ ನಾವೇ ವಾಸಿ ಎನಿಸಿತು.ಹನ್ನೊಂದು ದಿನ ಕಳೆಯುವುದರೊಳಗೆ ಜನ ಮರೀತಾರೆ,ಪತ್ರಿಕೆಗಳು ಮರೀತಾವೆ.ಆದರೆ ನಮ್ಮ ಪ್ರೀತಿಯ ದೊರೆಯನ್ನು ನಮ್ಮ ಕೊನೆಯುಸಿರುನವರೆಗೆ ಮರೆಯಲಾರೆವು. ಹೃದಯ ಬೆಂದು ಹೋಗಿದೆ.

ನಿಮಗೆ ಒಳಿತಾಗಲಿ.

ಒಡೆಯನ ನಿಷ್ಠ ‘ಬ್ರೂನಿ’

1 Response to ‘ಬ್ರೂನಿ’ಯ ಮೂಕ ಮಾತುಗಳು…

  1. ಹೇಮಂತ

    ಹೃದಯ ತುಂಬಿ, ಕಣ್ಣಾಲಿಗಳು ತುಂಬಿದೆ, ನರ ರೂಪದ ರಕ್ಕಸರಗಳು ಬಂಗಾರದಂತಹ ಜೀವವನ್ನು ತೆಗೆದು ಅದಕ್ಕೆ ಅನೈತಿಕ ಸಂಬಂದದ ಪಟ್ಟ ಬೇರೆ ಕಟ್ಟುತಿದ್ದಾರೆ… ದಿಕ್ಕಾರವಿರಲಿ ಅವರ ಜನ್ಮಕ್ಕೆ…

Leave a Reply