ವಿಭಾಗಗಳು

ಸುದ್ದಿಪತ್ರ


 

ಭಾರತದ ಕಂಕುಳಲ್ಲಿ ಮತ್ತೊಂದು ಕಾಶ್ಮೀರ

ಈಗ ಯೋಚಿಸಿ. ಗಿಲಾನಿಯ ಸ್ಥಾನದಲ್ಲಿ ಓವೈಸಿ ಇದ್ದಾನೆ. ಈಗಲೂ ಪಾಕಿಸ್ತಾನದಿಂದ ಅವರಿಗೆ ಸಂದೇಶಗಳು, ಶಸ್ತ್ರಗಳು ದಕ್ಕುತ್ತಿವೆ. ರಾಜೀವ್ ಗಾಂಧಿಯ ಜಾಗವನ್ನು ಸೋನಿಯಾ ಆಕ್ರಮಿಸಿಕೊಂಡಿದ್ದಾರೆ. ಅಂದಮೇಲೆ, ಹೈದರಾಬಾದಿನ ಕತೆಯೇನು? ಹೆದರಿಕೆಯಾಗುತ್ತಿರುವುದು ಅದಕ್ಕೇ.

ಇತಿಹಾಸದ ಪಾಠ ಬಲು ನಿಚ್ಚಳವಾಗಿದೆ. ರಾಜ ಗಟ್ಟಿಗನಾಗಿರುವವರೆಗೂ ಸಾಮ್ರಾಜ್ಯ ಭದ್ರ. ಹೇಡಿಯಾಗಿರುವ, ಸರಿಯಾದ ನಿರ್ಧಾರ ಕೈಗೊಳ್ಳದ, ದೂರ ದೃಷ್ಟಿಯಿಲ್ಲದ ರಾಜ ಗದ್ದುಎಗಯೇರಿದಾಗಲೆಲ್ಲ ಅರಸೊತ್ತಿಗೆ ಸಂಕಟಕ್ಕೆ ಸಿಲುಕಿದೆ, ನಾಡು ನಲುಗಿದೆ. ಕೃಷ್ಣದೇವ ರಾಯನ ಕಾಲಕ್ಕೆ ಉತ್ತುಂಗದಲ್ಲಿದ್ದ ವಿಜಯ ನಗರದ ಎದುರಿಗೆ ಸುತ್ತಲಿನ ದೊರೆಗಳು ಬಾಲ ಮುದುರಿದ ನಾಯಿಗಳಂತಿದ್ದರು. ಅಳಿಯ ರಾಮರಾಯನ ಮೇಲೆ ಅದೇ ಕುನ್ನಿಗಳು ತೋಳಗಳಂತೆ ಮುಗಿಬಿದ್ದವು. ಶತ್ರುಗಳು ಅವರೇ ಇದ್ದರು, ಆದರೆ ಎದೆಯೆತ್ತಿ ಕಾದಾಡಬೇಕಾದವರು ಹುಲಿಯಿಂದ ಮೊಲವಾಗಿ ಬದಲಾಗಿದ್ದರು ಅಷ್ಟೇ. ಶಿವಾಜಿಯ ನಂತರ ಪೇಶ್ವೆಗಳು ಬಂದಿರದಿದ್ದರೆ ಮರಾಥಾ ಸಾಮ್ರಾಜ್ಯದ ಕಥೆಯೂ ಅದೇ ಆಗಿರುತ್ತಿತ್ತು. ಇಂದಿನ ರಾಜನ ಮತ್ತು ರಾಜಕೀಯದ ಪರಿಸ್ಥಿತಿ ನೋಡಿ ಯಾಕೋ ಇವೆಲ್ಲ ಹೇಳಬೇಕೆನ್ನಿಸಿತು.

ಅಮರನಾಥ ವೈಷ್ಣವಿ ಜೀಯವರ ಕೊನೆಯ ಭಾವಚಿತ್ರ

ಅಮರನಾಥ ವೈಷ್ಣವಿ ಜೀಯವರ ಕೊನೆಯ ಭಾವಚಿತ್ರ

ಮೊನ್ನೆ ಮೊನ್ನೆ ಹೈದರಾಬಾದಿನಲ್ಲಿ ಬಾಂಬು ಸ್ಫೋಟಿಸಿತು. ಅದಕ್ಕೆ ಕೆಲವೇ ದಿನ ಮುಂಚೆ ಓವೈಸಿ ಭಾರತವನ್ನು ನಾಶ ಮಾಡಿಬಿಡುವ ಬೆದರಿಕೆಯನ್ನು ಬಹಿರಂಗವಾಗಿಯೇ ನೀಡಿದ್ದ. ಅದಾದ ಕೆಲವೇ ದಿನಗಳಲ್ಲಿ ಗೃಹ ಮಂತ್ರಿ ಶಿಂಧೆ ಭಯೋತ್ಪಾದಕರು ಮುಸಲ್ಮಾನರಷ್ಟೇ ಅಲ್ಲ, ಹಿಂದೂಗಳೂ ಕೂಡ ಎನ್ನುವ ಮೂಲಕ ಮುಸಲ್ಮಾನರಲ್ಲಿ ಕಳೆದು ಹೋಗುತ್ತಿದ್ದ ನೈತಿಕ ಸ್ಥೈರ್ಯ ತುಂಬಿದ. ಬಾಂಬು ಸಿಡಿಯಿತು. ಜನ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದರು. ಉಳಿದವರು ದಿಕ್ಕಾಪಾಲಾಗಿ ಓಡಿದರು. ಸರ್ಕಾರ ಕಮಕ್ ಕಿಮಕ್ ಎನ್ನಲಿಲ್ಲ. ಪ್ರಧಾನ ಮಂತ್ರಿಗಳು ಬಂದು ಸತ್ತವರ ಮನೆಗಳವರಿಗೆ ಸರ್ಕಾರಿ ನೌಕರಿ ಕೊಡುವಂತೆ ಆಂಧ್ರದ ಮುಖ್ಯಮಂತ್ರಿಗೆ ವಿನಂತಿ ಮಾಡಿ ಹೊರಟರು. ಅಲ್ಲಿಗೆ ರಕ್ತದಾಹಿಗಳು ಅಂದುಕೊಂಡಂತೆಯೇ ಆಯ್ತು. ಹಿಂದೂಗಳಿಗೆ ಹೆದರಿಕೆ ಹುಟ್ಟಿಸೋದು, ಸರ್ಕಾರದ ಬೆಂಬಲ ಇಲ್ಲದಂತೆ ಮಾಡೋದು. ಇದರ ಮುಂದಿನ ಹೆಜ್ಜೆ ಏನು ಗೊತ್ತೆ? ಇನ್ನೊಂದಷ್ಟು ಭಯ ಹುಟ್ಟಿಸುವ ಸ್ಫೋಟಗಳನ್ನು ಮಾಡಿ ಹಿಂದೂಗಳನ್ನು ಹೈದರಾಬಾದಿನಿಂದ ಓಡಿಸಿಬಿಡೋದು. ಅಲ್ಲಿಗೆ, ಭಾರತದ ಕಂಕುಳಲ್ಲಿ ಮತ್ತೊಂದು ಕಾಶ್ಮೀರ.
ಹಾಗೆ ಹೇಳಲಿಕ್ಕೆ ಕಾರಣವಿದೆ. ಕಾಶ್ಮೀರದಿಂದ ಪಂಡಿತರನ್ನು ಓಡಿಸಲು ರಕ್ತದಾಹಿಗಳು ಇದೇ ಮಾರ್ಗ ಅನುಸರಿಸಿದ್ದರು. ಅದೇನು ಸ್ವಾತಂತ್ರ್ಯ ಬಂದನಂತರ ಶುರುವಾದ ಪ್ರಕ್ರಿಯೆಯಲ್ಲ. ೧೪ನೇ ಶತಮಾನದಲ್ಲಿ ಮೊದಲ ಬಾರಿಗೆ ಮುಸ್ಲಿಮ್ ದೊರೆಯೊಬ್ಬ ಆಳಲು ಕುಳಿತಾಗಲೇ ಶುರುವಾಗಿತ್ತು. ಆಗೇನು ಮುಸ್ಲಿಮರ ಸಂಖ್ಯೆ ಅಲ್ಲಿ ಹೆಚ್ಚಿರಲಿಲ್ಲ. ಬುದ್ಧಿವಂತ, ಸಹರದಯ ಪಂಡಿತರ ಮನವೊಲಿಸಿ ಅಂತರ್ವಿವಾಹಗಳಿಗೆ ಅವರನ್ನು ಒಪ್ಪಿಸಿ ಒಲವು ಗಳಿಸಿಕೊಳ್ಳಲಾಯ್ತು. ಅನಂತರ ಶುರುವಾಯ್ತು ಕ್ರೌರ್ಯದ ಪರ್ವ. ಅಧಿಕಾರಕ್ಕೆ ಬಂದ ಸಿಕಂದರನಂತೂ ಮಂದಿರಗಳನ್ನೂ ಮೂರ್ತಿಗಳನ್ನೂ ಭಗ್ನಗೊಳಿಸಿ ಪಂಡಿತರನ್ನು ಕತ್ತಿ ಹಿಡಿದೇ ಇಸ್ಲಾಮ್ ತಬ್ಬುವಂತೆ ಮಾಡಿದ. ಬುತ್‌ಶಿಕನ್ ಅನ್ನೋದು ಅವನಿಗೆ ಬಿರುದಾಗಿ ಬಂತು. ಅದರರ್ಥ, ’ಮೂರ್ತಿ ಭಂಜಕ’ ಅಂತ. ಕಾಶ್ಮೀರಿ ಪಂಡಿತರು ಜೀವವುಳಿಸಿಕೊಂಡು ದಿಕ್ಕಾಪಾಲಾಗಿ ಓಡಿದರು. ಅನೇಕರು ಕತ್ತಿಗೆ ಬಲಿಯಾದರು. ಹಲವರು ಮತಾಂತರಗೊಂಡರು. ಕೆಲವರು ಧೈರ್ಯದಿಂದ ಎದುರಿಸುತ್ತಾ ಉಳಿದುಬಿಟ್ಟರು. ಹೀಗೆ ಉಳಿದವರು ಜನಿವಾರ ಹಾಕದ್ದಕ್ಕೂ ಹಿಂದೂ ಸಂಪ್ರದಾಯಗಳನ್ನು ಅನುಸರಿಸುವುದಕ್ಕೂ ತೆರಿಗೆ ತೆತ್ತಬೇಕಿತ್ತು. (ಮೊನ್ನೆ ಕುಂಭ ಮೇಳಕ್ಕೆ ಹೋಗುವಾಗ ನನಗಿದು ನೆನಪಾಗಿಬಿಡ್ತು. ಏಕೆ ಗೊತ್ತೆ? ಅಲ್ಲಿಗೆ ಹೋಗುವ ಪ್ರತಿ ಯಾತ್ರಿಕನ ಮೇಲೂ ರೈಲ್ವೆ ಇಲಾಖೆ, ಸಾರಿಗೆ ಇಲಾಖೆಗಳ ಮೂಲಕ ಸರ್ಕಾರ ತೆರಿಗೆ ಹೇರಿತ್ತು!) ಶತಶತಮಾನಗಳ ಕಾಲ ಸಹಿಸುತ್ತ ಬಂದ ಕಾಶ್ಮೀರಿ ಪಂಡಿತ ಸ್ವಾತಂತ್ರ್ಯ ಬರುವ ಹೊತ್ತಿಗೆ ಬಹುಸಂಖ್ಯಾತನಿಂದ ಮೂರುವರೆ ಲಕ್ಷದಷ್ಟು ಸಂಖ್ಯೆಗೆ ಕುಸಿದುಬಿಟ್ಟಿದ್ದ!
ಸ್ವಾತಂತ್ರ್ಯದ ಹೊಸ್ತಿಲಲ್ಲಿ ಕಾಶ್ಮೀರದಲ್ಲಿ ತೀವ್ರ ಚಟುವಟಿಕೆ ಶುರುವಾಗಿಬಿಡ್ತು. ಹೇಗಾದರೂ ಮಾಡಿ ಮುಸಲ್ಮಾನ ಬಾಹುಳ್ಯದ ಕಾಶ್ಮೀರವನ್ನು ಕಸಿಯುವ ಇಚ್ಛೆ ಜಿನ್ನಾನಿಗೆ ಇತ್ತು. ಕಾಶ್ಮೀರದ ತರುಣರಿಗೆ ತಾಕೀತು ಮಾಡಿದ. ದಂಗೆಗಳಾದವು. ೧೯೪೭ರಲ್ಲಿ ಪಕಿಸ್ತಾನದ ಸೈನ್ಯದ ಸಹಾಯ ಪಡೆದು ದಾಳಿಯೂ ಆಗಿಹೋಯ್ತು. ಕಟ್ಟರ್‌ಗಳು ಭೂಮಿ ಕಸಿದುಕೊಂಡು ಸುಮ್ಮನಾಗಿಬಿಟ್ಟರು. ನಾವು ಗೆದ್ದೂ ಸೋತೆವು. ಆದರೆ ಕಾಶ್ಮಿರ ಕೊಳ್ಳ ಶಾಂತವಾಯ್ತು. ಪ್ರತ್ಯೇಕ ರಾಷ್ಟ್ರಕ್ಕಾಗಿ ಬಡಿದಾಡಿದರೆ ಹೊಸ ಪ್ರಭುತ್ವ ತಮ್ಮನ್ನೂ ಪಾಕಿಸ್ತಾನಕ್ಕೆ ಓಡಿಸಿಬಿಟ್ಟೀತೆಂಬ ಹೆದರಿಕೆಯಿಂದ ಮುಸ್ಲಿಮರು ತಣ್ಣಗಾದರು, ಪಂಡಿತರೊಂದಿಗೆ ಹೊಂದಿಕೊಂಡರು.
ಕಳೆದ ಜೂನ್‌ನಲ್ಲಿ ಜಮ್ಮುವಿನಲ್ಲಿ ಪಂಡಿತರ ಪಿತಾಮಹ ——–ವರ್ಷದ ಡಾ| ಅಮರನಾಥ ವೈಷ್ಣವಿಯವರನ್ನು ಭೇಟಿಯಾಗಿದ್ದೆ. ಅವರು ಹಳೆಯದೆಲ್ಲವನ್ನು ಮೆಲುಕು ಹಾಕತೊಡಗಿದರು. ಅವರು ಕಾಶ್ಮೀರ ಕೊಳ್ಳದಲ್ಲಿ ಶಿಕ್ಷಕರಾಗಿದ್ದ ಕಲ ಅದು. ಮುಸಲ್ಮಾನರೂ ಗೀತೆ ಹೇಳಿಕೊಳ್ಳುತ್ತಿದ್ದರು. ರಾಮಾಯಣದ ಕಥನ ಕೇಳುತ್ತಿದ್ದರು. ಯೋಗಾಭ್ಯಾಸಿಗಳಾಗಿದ್ದರು. ಹಿಂದಿಯನ್ನು ರಾಷ್ಟ್ರಭಾಷೆಯೆಂದು ಒಪ್ಪಿ, ಅದರ ಪ್ರಚಾರವೂ ನಡೆಯುತ್ತಿತ್ತು. ೧೯೫೦ರ ಆಸುಪಾಸಿನಲ್ಲಿ ಜಮಾತ್ ಎ ಇಸ್ಲಾಮಿ ಇದನ್ನು ಖಂಡಿಸಿತು. ಗಿಲಾನಿ ಬಂದ ನಂತರವಂತೂ ಮದರಸಾಗಳಲ್ಲಿ ಕಾಫಿರ್ (ಧರ್ಮದ್ರೋಹಿ) ಎಂದರೆ ಹಿಂದೂ, ಜಾಲಿಮ್ (ದುಷ್ಟ) ಎಂದರೆ ಸರ್ದಾರ ಎಂದೆಲ್ಲ ಪಾಠ ಮಾಡಲು ಶುರುವಾಯ್ತು. ಸ್ವತಃ ಫಾರುಕ್ ಅಬ್ದುಲ್ಲ ಬೇಡವೆಂದರೂ ಕೇಳದೆ ರಾಜೀವ್ ಗಾಂಧಿಯೇ ಜಗತ್ತಿನ ಮುಸಲ್ಮಾನರನ್ನು ಸೇರಿಸಿ ಕಾಶ್ಮೀರದಲ್ಲಿ ಸಭೆ ನಡೆಸಲು ಅನುಮತಿ ಕೊಟ್ಟರು. ಅಷ್ಟೇ ಅಲ್ಲ, ಸರ್ಕಾರದ ಸವಲತ್ತುಗಳನ್ನು, ರೆಡಿಯೋ, ದೂರದರ್ಶನಗಳನ್ನೂ ಇದಕ್ಕಾಗಿ ಬಳಸಿಕೊಳ್ಳಲು ಸಮ್ಮತಿ ನೀಡಿದರು. ಅಮರನಾಥ ವೈಷ್ಣವಿ ನೆನಪಿಸಿಕೊಳ್ಳುತ್ತಾರೆ, ’ಅವತ್ತು ರೇಡಿಯೋಗಳಲ್ಲಿ ’ಟೀವಿ ಮಾರಿ, ಚಿನ್ನ ಮಾರಿ, ಶಸ್ತ್ರವನ್ನು ಖರೀದಿಸಿ’ ಅಂತ ಗಿಲಾನಿಯ ಭಾಷಣಗಳು ಪ್ರಸಾರವಾಗುತ್ತಿದ್ದವಂತೆ. ಇಸ್ಲಾಮ್ ಬಲಗೊಳ್ಳುವುದು ಅನಿವಾರ್ಯವೆಂದು, ಅದಕ್ಕೆ ಪಂಡಿತರ ಸರ್ವನಾಶ ಆಗಲೇಬೇಕೆಂದು ತೀವ್ರ ಬಾಷೆಯಲ್ಲಿಯೇ ಆತ ಮಾತನಾಡುತ್ತಿದ್ದನಂತೆ. ಅವನನ್ನು ತಡೆದರೆ ಜಗತ್ತಿನ ಮುಸಲ್ಮಾನ ರಾಷ್ಟ್ರಗಳಿಗೆ ಕೆಟ್ಟ ಸಂದೇಶ ಕೊಟ್ಟಂತಾಗುತ್ತದೆ ಎಂದು ರಾಜೀವ್ ಗಾಂಧಿಯೂ ಸುಮ್ಮನುಳಿದುಬಿಟ್ಟರು. ಕೈಯಲ್ಲಿ ದೊಣ್ಣೆ ಹಿಡಿದಿದ್ದ ಕಾಶ್ಮೀರಿಯ ಕೈಗಳಿಗೀಗ ಕತ್ತಿ ಬಂದುಬಿಟ್ಟಿತ್ತು.
ಜನರಲ್ ಜಿಯಾ ಉಲ್ ಹಕ್ ಈ ಹೋರಾಟವನ್ನು ಕೈಗೆತ್ತಿಕೋಮಡ. ’ಕಾಶ್ಮೀರಿಗಳಿಗೆ ಒಂದಷ್ಟು ಅಪರೂಪದ ಗುಣಗಳಿವೆ. ಮೊದಲನೆಯದು ಧೈರ್ಯ ಮತ್ತು ಬುದ್ಧಿವಂತಿಕೆ. ಆಮೇಲೆ ಎಂಥಾ ಪರಿಸ್ಥಿತಿಯಲ್ಲೂ ತಮ್ಮತನದ ಉಳಿಸಿಕೊಳ್ಳೋದು ಮತ್ತು ಮೂರನೆಯದು, ರಾಜಕೀಯ ಚಾಣಾಕ್ಷತನ. ಇವುಗಳನ್ನು ಬಳಸಿಕೊಳ್ಳುವ ವ್ಯವಸ್ಥೆ ಮಾಡಿಕೊಟ್ಟರೆ ಅವರು ಅದ್ಭುತವಾದುದನ್ನು ಸಾಧಿಸುತ್ತಾರೆ. ಏನಾದರೂ ಸರಿ, ಕಾಶ್ಮೀರದ ಬಂಧುಗಳು ಭಾರತದೊಂದಿಗೆ ಇರಬಾರದು’ ಎಂದು ತನ್ನ ಚಿಂತನೆಯ ನೀಲ ನಕ್ಷೆ ಕೊಟ್ಟ. ಚಟುವಟಿಕೆಗಳು ತೀವ್ರಗೊಂಡವು. ರೈಫಲ್ಲುಗಳು ಕೊಳ್ಳಕ್ಕೆ ಬಂದವು. ಪಾಕ್ ಆಕ್ರಮಿತ ಕಾಶ್ಮೀರ ಭಯೋತ್ಪಾದಕರ ತರಬೇತಿ ತಾಣವಾಯ್ತು. ಆ ಹೊತ್ತಿಗೇ ಜಿಯಾ ಉಲ್ ಹಕ್ ತೀರಿಕೊಂಡ. ಪಾಕಿಸ್ತಾನದವ ತೀರಿಕೊಂಡರೆ ಕಾಶ್ಮೀರ ಕೊಳ್ಳದಲ್ಲಿ ಸೂತಕ ಆಚರಿಸಲಾಯ್ತು! ರಸ್ತೆಯಲ್ಲಿ ಸಂತಾಪ ಸೂಚಕ ಮೆರವಣಿಗೆ ನಡೆಸುವಾಗ ಪಂಡಿತರ ಮನೆಗಳಲ್ಲಿ ದೀಪವನ್ನು ಹೊತ್ತಿಸಿರಬಾರದೆಂಬ ಆಜ್ಞೆಯೂ ಹೊರಟಿತ್ತಂತೆ.
ಆ ಇಳಿವಯಸ್ಸಿನಲ್ಲೂ ವೈಷ್ಣವಿಯವರ ನೆನಪು ಬಲು ಚುರುಕು. ೧೯೯೦ರ ಜನವರಿ ೧೯ ಅವರ ಪಾಲಿಗೆ ಮರೆಯಲಾಗದ ದಿನ. ಅವತ್ತು ಮಸೀದಿಗಳು ಮೈಕುಗಳ ಮೂಲಕ ಅರಚಲಾರಂಭಿಸಿದವು. ’ಹಿಂದೂ ಗಂಡಸರನ್ನು ಓಡಿಸಿ, ಅವರ ಹೆಂಡತಿಯರನ್ನು ಉಳಿಸಿಕೊಂಡು ಕಶ್ಮೀರ ಪಾಕಿಸ್ತಾನಕ್ಕೆ ಸೇರುವುದು!’ ಎಂಬ ಅಸಭ್ಯ ಘೋಷಣೆಗಳು ಹೊರಟವು. ’ನಿಮ್ಮ ನಿಮ್ಮ ಹೆಂಡಿರನ್ನು, ಹೆಣ್ಣು ಮಕ್ಕಳನ್ನು ಇಲ್ಲಿಯೇ ಬಿಟ್ಟು ಜಾಗ ಖಾಲಿ ಮಾಡಿದರೆ ಸರಿ’ ಎಂಬ ಎಚ್ಚರಿಕೆಗಳೂ ಮೊಳಗಿದವು. ಇಂಥವನ್ನೆಲ್ಲ ಕೇಳಿಯೂ ಅದ್ಯಾವ ಪಂಡಿತ ಅಲ್ಲಿ ಉಳಿಯಬಯಸುತ್ತಾನೆ ಹೇಳಿ! ದೊಡ್ಡ ಸಮುದಾಯ ಹೋಗಲು ಸಾಧ್ಯವಿದ್ದೆಡೆಯೆಲ್ಲ ಧಾವಿಸಿತು. ಮುಸಲ್ಮಾನರನ್ನು ನಂಬಿ ಅವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದ ಶ್ರೀ ಪಿ.ಎನ್.ಭಟ್ ಅಲ್ಲಿಯೇ ಉಳಿದರು. ಕೆಲವೇ ದಿನಗಳಲ್ಲಿ ಅವರ ತಲೆ ಒಡೆದು ಚಿಂದಿ ಉಡಾಯಿಸಲಾಯ್ತು. ಯಾವೊಬ್ಬ ಮುಸಲ್ಮಾನನೂ ಕಣ್ಣೀರಿಡಲಿಲ್ಲ. ದೂರದರ್ಶನ ಕೇಂದ್ರದ ನಿರ್ದೇಶಕ ಲತಾ ಕೌಲ್‌ರನ್ನು ಕೇಂದ್ರದ ಹೊರಗೇ ಗುಂಡಿಟ್ಟು ಕೊಲ್ಲಲಾಯ್ತು. ತನ್ನ ನಿವೃತ್ತಿಯ ನಂತರ ಮುಸ್ಲಿಮ್ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದ ಪ್ರತಿಭಾವಂತ ಶಿಕ್ಷಕಿ ನೀಲಕಾಂತಾ ಲಾಲ್‌ರನ್ನು ಅವರ ಮನೆಯ ಹತ್ತಿರದ ಮುಸಲ್ಮಾನರೇ ಕೊಂದು ಬಿಸಾಡಿದರು. ನರ್ಸ್ ಸರಳಾ ಭಟ್‌ಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲ್ಲಲಾಯ್ತು. ಶಾಲಾ ಶಿಕ್ಷಕಿ ಗಿರಿಜಾಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿ ಮರ ಕೊಯ್ಯುವ ಯಂತ್ರಕ್ಕೆ ಆಕೆಯ ದೇಹವನ್ನು ಕೊಟ್ಟು ಎರಡು ತುಂಡು ಮಾಡಿ ಬಿಸಾಡಲಾಯ್ತು.
ಇಷ್ಟು ಹೇಳುವ ವೇಳೆಗೆ ವೈಷ್ಣವಿ ಜೀಯವರ ಕಣ್ಣು ಒದ್ದೆಯಾಗಿತ್ತು. ಆ ಪುಣ್ಯಾತ್ಮ ಅಂದಿನಿಂದ ಇಂದಿನವರೆಗೂ ಪಂಡಿತರ ಅಭಿವೃದ್ಧಿಗಾಗಿ ಬಡಿದಾಡುತ್ತ ಬಂದಿದ್ದರು. ಕೆಲವೊಮ್ಮೆ ಸರ್ಕಾರದೊಂದಿಗೆ, ಕೆಲವೊಮ್ಮೆ ಮಾಧ್ಯಮಗಳೊಂದಿಗೆ. ಕೆಲವೊಮ್ಮೆ ಮುಸಲ್ಮಾನರೊಂಧಿಗೆ, ಕೆಲವೊಮ್ಮೆ ತಮ್ಮದೇ ಜನರೊಂದಿಗೆ! ಹೀಗಾಗಿಯೇ ಅವರನ್ನು ಕಶ್ಮೀರಿ ಪಂಡಿತರ ಪಿತಾಮಹ ಎಂದು ಕರೆಯೋದು.
ಈಗ ಯೋಚಿಸಿ. ಗಿಲಾನಿಯ ಸ್ಥಾನದಲ್ಲಿ ಓವೈಸಿ ಇದ್ದಾನೆ. ಈಗಲೂ ಪಾಕಿಸ್ತಾನದಿಂದ ಅವರಿಗೆ ಸಂದೇಶಗಳು, ಶಸ್ತ್ರಗಳು ದಕ್ಕುತ್ತಿವೆ. ರಾಜೀವ್ ಗಾಂಧಿಯ ಜಾಗವನ್ನು ಸೋನಿಯಾ ಆಕ್ರಮಿಸಿಕೊಂಡಿದ್ದಾರೆ. ಅಂದಮೇಲೆ, ಹೈದರಾಬಾದಿನ ಕತೆಯೇನು? ಹೆದರಿಕೆಯಾಗುತ್ತಿರುವುದು ಅದಕ್ಕೇ.
ಹೇಳುವುದು ಮರೆತಿದ್ದೆ. ಅವತ್ತು ಮಧ್ಯಾಹ್ನ ಅಮರನಾಥ ವೈಷ್ಣವಿ ಜೀಯವರನ್ನು ಭೇಟಿ ಮಾಡಿ ಬಂದಿದ್ದೆ. ರಾತ್ರಿ ಹೃದಯಾಘಾತದಿಂದ ಅವರು ದೇಹ ತೊರೆದಿದ್ದರು. ನನ್ನೊಡನೆ ತಮ್ಮ ಕತೆ ಹೇಳಿಕೊಂಡು ಹಗುರಾಗಿಬಿಟ್ಟಿದ್ದರಿಂದಲೂ ಏನೋ ಅವರ ಹೃದಯ ಸ್ತಬ್ಧವಾಗಿಬಿಟ್ಟಿತ್ತು. ಅವರ ದೇಹಕ್ಕೆ ಅಂತಿಮ ನಮನ ಸಲ್ಲಿಸುವಾಗ ಕಣ್ತುಂಬಿ ಬಂದಿತ್ತು. ಅವರ ಬದುಕಿನ ಕೊನೆಯ ಮಾತು ಕೇಳುವ, ಕೊನೆಯ ಫೋಟೋ ಕ್ಲಿಕ್ಕಿಸುವ ಅವಕಾಶ ನನಗೆ ದಕ್ಕಿತಲ್ಲ ಎಂಬುದಷ್ಟೇ ನನ್ನ ಪಾಲಿಗೆ ಉಳಿದಿದ್ದು.

 

1 Response to ಭಾರತದ ಕಂಕುಳಲ್ಲಿ ಮತ್ತೊಂದು ಕಾಶ್ಮೀರ

  1. Aravind

    anna “nenu” yuvakara spoorti.m very sorry yakendre nanu ninge singular nali type madi heltidini….because devarige naavu singular nalli taane kareyodu?..thank u so much…

    Aravind Masali(KIMS Aravind Hubli.)
    presently from Ratnagiri

Leave a Reply