ವಿಭಾಗಗಳು

ಸುದ್ದಿಪತ್ರ


 

ಮಂತ್ರಕ್ಕೆ ಮಾವಿನಕಾಯಿಯೂ ಉದುರುತ್ತದೆ

ಯಾವ ವಸ್ತು ಕಂಪಿಸುವುದೋ ಅದು ತನ್ನದೇ ಆದ ಸದ್ದನ್ನು ಹೊರಡಿಸುತ್ತದೆ. ಮತ್ತು ಕಂಪಿಸದೇ ಸ್ಥಿರವಾಗಿರುವ ವಸ್ತು ಯಾವುದೂ ಇಲ್ಲ. ಒಂದು ಅಣುವಿನಲ್ಲೂ ಸದಾ ಎಲೆಕ್ಟ್ರಾನಿಕ್ ಚಲಿಸುತ್ತಲೇ ಇರುವುದರಿಂದ ನೀವು ಮೇಜಿನ ಮೇಲೆ ಸ್ಥಿರವಾಗಿ ಇಟ್ಟ ಕಲ್ಲಿನ ಚೂರೂ ಸದ್ದು ಮಾಡುತ್ತಲೇ ಇರುತ್ತದೆ. ನಾವು ಕೇಳಿಸಿಕೊಳ್ಳಲಾರೆವು ಅಷ್ಟೇ. ಯಾರು ಯೋಗಿಯಾಗಿ ಅಂತಮರ್ುಖಿಯಾಗಿರುವರೋ ಅವರು ಕೇಳುವ ಸದ್ದಿಗೆ ಕಿವಿ ಮುಚ್ಚಿಕೊಳ್ಳುತ್ತಾರೆ; ಕೇಳದ ಸದ್ದುಗಳಿಗೆ ಕಿವಿ ತೆರೆಯುತ್ತಾರೆ.

mantra2
‘ಮೂಢನಂಬಿಕೆಗಳಿಗೆ ದಾಸರಾಗಬಾರದು’ ಅಂತ ಹೇಳುವ ಭರದಲ್ಲಿ ದೇವರ ಪೂಜೆ, ಶ್ರದ್ಧೆಗಳನ್ನು ನಂಬಿಕೆಯ ಪರಿಧಿಯಿಂದ ಆಚೆಗಿಡುತ್ತಾರೆ ಕೆಲವರು. ಅವುಗಳನ್ನೆಲ್ಲ ನಿಷೇಧಿಸಿಬಿಡಬೇಕೆಂಬ ಹಠ ಬೇರೆ. ಪಾನ ನಿಷೇಧ ಜಾರಿ ಮಾಡುವುದಕ್ಕಿಂತ ಜನ ದೇವರ ಬಳಿ ಹೋಗುವುದನ್ನು ತಪ್ಪಿಸುವುದೇ ಸುಲಭವೆಂಬ ಅಭಿಪ್ರಾಯವಿರಬಹುದು. ಅಚ್ಚರಿಯೆಂದರೆ ಹೀಗೆ ಹೇಳುವವರೇ ರಾಜ್ಯಕ್ಕೆ ಮಳೆ ಕೊರತೆಯಾದಾಗ ‘ಏನು ಮಾಡಿದರೆ ಮಳೆ ಬರುತ್ತೆ ಹೇಳಿ’ ಎಂದು ಗೋಗರೆದಿದ್ದು; ಕಿಗ್ಗದ ಋಷ್ಯಶೃಂಗನ ಸನ್ನಿಧಿಗೆ ಹೋಗಿ ಅಡ್ಡಬಿದ್ದಿದ್ದು ಬಲು ವಿಶೇಷವಾಗಿತ್ತು. ವಾಸ್ತವವಾಗಿ ನಂಬಿಕೆ ಮತ್ತು ಮೂಢನಂಬಿಕೆಗಳ ನಡುವಿನ ಗೆರೆ ಬಲು ತೆಳ್ಳಗಿನದ್ದು. ಅದನ್ನು ಅಷ್ಟೇ ಎಚ್ಚರಿಕೆಯಿಂದ ನಿಭಾಯಿಸಬೇಕು ಕೂಡ.
ಬಿಡಿ. ಚಚರ್ೆಯ ವಿಷಯ ಅದಲ್ಲ. ಯಾರೀತ ಮಳೆಯ ದೇವತೆ ಋಷ್ಯಶೃಂಗ? ಸಕರ್ಾರ ಯಾರದ್ದೇ ಇರಲಿ, ಅಧಿಕಾರದಲ್ಲಿ ಯಾರೇ ಕೂತಿರಲಿ, ಮಳೆ ಇಲ್ಲವೆಂದಾದೊಡನೆ ಶೃಂಗೇರಿಯ ಕಿಗ್ಗಕ್ಕೆ ಧಾವಿಸುತ್ತಾರಲ್ಲ ಏಕೆ? ಅದೊಂದು ಸುಂದರ ಕಥಾನಕ. ಋಷಿ ವಿಭಾಂಡಕರ ಮನಸ್ಸು ಚಂಚಲಗೊಳಿಸಿ ತಪಸ್ಸು ಕೆಡಿಸಲೆಂದು ಸ್ವರ್ಗದಿಂದಿಳಿದು ಬಂದವಳು ಊರ್ವಶಿ. ವಿಭಾಂಡಕರ ಬಳಿ ಸಂಗ್ರಹಗೊಂಡಿದ್ದ ಅಪಾರ ಶಕ್ತಿ ಕಣ್ಣು ಕುಕ್ಕುವಂತಾಗಿತ್ತು. ಅದು ಸೂಕ್ತವಾಗಿ ಬಳಕೆಯಾಗದಿದ್ದರೆ ಮನುಕುಲದ ವಿನಾಶಕ್ಕೆ ಕಾರಣವಾಗಬಹುದೆಂಬ ಹೆದರಿಕೆಯಿಂದ ಅವರ ತಪಸ್ಸು ಭಂಗಗೊಂಡಿದ್ದು.
ಊರ್ವಶಿಯೊಂದಿಗೆ ಮೋಹಿತರಾದ ವಿಭಾಂಡಕರು ಸಂಸಾರಸ್ಥರಾದರು. ಅವರಿಗೆ ಸಂತಾನವಾಯಿತು. ಅದಕ್ಕೇ ಋಷ್ಯಶೃಂಗನೆಂಬ ನಾಮಕರಣವಾಯಿತು. ಊರ್ವಶಿ ಪುತ್ರನನ್ನು ವಿಭಾಂಡಕರ ಕೈಲಿಟ್ಟು ಹೊರಟುಬಿಟ್ಟಳು. ಕುಪಿತ ಋಷಿಗಳಿಗೆ ಸ್ತ್ರೀಸಂಕುಲದ ಮೇಲೆಯೇ ದ್ವೇಷ ಬೆಳೆಯಿತು. ತನ್ನ ಮಗನನ್ನು ಸಮಾಜದಿಂದ ದೂರವಿಟ್ಟು ಸ್ತ್ರೀಯರ ಸಂಪರ್ಕಕ್ಕೂ ಸಿಗದಂತೆ ಬೆಳೆಸಿದರು. ಪ್ರಕೃತಿಯೊಂದಿಗೆ ಒಂದಾದ ಋಷ್ಯಶೃಂಗರು ಅನೇಕ ರಹಸ್ಯಗಳನ್ನು ಅರಿತರು. ಮತ್ತಿದು ಕಳೆದೆರಡು ವಾರಗಳಲ್ಲಿ ವಿವರಿಸಿದ ಬ್ರಹ್ಮಚರ್ಯದ, ತಪಸ್ಸಿನ ಶಕ್ತಿಯ ಫಲಿತಾಂಶ ಎಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ.
ಈ ವೇಳೆಗೆ ಅಂಗ ಸಾಮ್ರಾಜ್ಯಕ್ಕೆ ಭೀಕರ ಬರಗಾಲವೊದಗಿತು. ಮಳೆಯಾಗಬೇಕೆಂದರೆ ಸದಾ ಬ್ರಹ್ಮಚರ್ಯಚಿಂತನೆಯಲ್ಲಿಯೇ ಮಗ್ನರಾದ ಅಖಂಡ ಬ್ರಹ್ಮಚಾರಿಯೊಬ್ಬ ರಾಜ್ಯಕ್ಕಾಗಮಿಸಿ ಯಜ್ಞ-ಯಾಗಾದಿ ಕರ್ಮಗಳನ್ನು ನಡೆಸಿಕೊಡಬೇಕೆಂದು ಹೇಳಿಕೆಯಾಯ್ತು. ಋಷ್ಯಶೃಂಗರು ಬಿಟ್ಟರೆ ಈ ಹಂತದಲ್ಲಿ ಕಣ್ಣಿಗೆ ಬಿದ್ದವರು ಯಾರೂ ಇಲ್ಲ. ಆದರೆ ಕರೆತರೋದು ಹೇಗೆ? ಸಮಾಜದಿಂದ ದೂರವಿದ್ದು ತಂದೆ ತುಂಬಿದ ದ್ವೇಷದಿಂದಲೇ ಬೆಳೆದ ಈ ಋಷಿಯನ್ನು ಸರ್ವಸ್ವವನ್ನೂ ಪಣಕ್ಕಿಟ್ಟು ತರಬಲ್ಲವರು ಯಾರು? ಸ್ವತಃ ರಾಜಕುವರಿ ಶಾಂತಾ ಸಿದ್ಧಳಾದಳು. ಕಾಡು ಹೊಕ್ಕು ಋಷಿವರೇಣ್ಯರನ್ನು ರಮಿಸಿ ಅವರ ಕ್ರೋಢೀಕೃತ ಶಕ್ತಿ ಸಮಾಜದ ಒಳಿತಿಗೆ ಬಳಕೆಯಾಗಬೇಕೆಂಬುದನ್ನು ಮನವರಿಕೆ ಮಾಡಿಕೊಟ್ಟು ಕರೆದುಕೊಂಡು ಬಂದಳು. ಪ್ರಕೃತಿಯನ್ನು ಒಲಿಸಿಕೊಂಡಿದ್ದ ಋಷ್ಯಶೃಂಗರು ತಮ್ಮ ಮಂತ್ರ ಪುರಶ್ಚರಣದಿಂದ, ಯಜ್ಞಯಾಗಗಳಿಂದ ಸಂಪ್ರೀತಗೊಳಿಸಿ ಮುಸಲಧಾರೆಯಾಗುವಂತೆ ಮಾಡಿದರು. ಜನ ಸಾಮಾನ್ಯರ ರಕ್ಷಣೆಗಾಗಿ ತಮ್ಮ ಶಕ್ತಿಯನ್ನು ಧಾರೆ ಎರೆದರು!
ಋಷ್ಯಶೃಂಗರು ಪೂಜಿಸಿದ ಶಿವ ಕಿಗ್ಗದಲ್ಲಿದ್ದಾನೆ. ಹೀಗಾಗಿ ಅಲ್ಲಿ ಸಂದ ಪ್ರಾರ್ಥನೆಯನ್ನು ಋಷಿಗಳು ಈಡೇರಿಸಿಕೊಡುತ್ತಾರೆಂಬ ನಂಬಿಕೆ. ಮತ್ತು ಹೀಗೆ ಪ್ರಾರ್ಥನೆ ಮಾಡಿದಾಗಲೆಲ್ಲ ಮಳೆಯಾಗುತ್ತದೆಂಬುದು ಕಾಕತಾಳೀಯವೋ, ಆಕಸ್ಮಿಕವೋ ಅಚ್ಚರಿಯಂತೂ ಹೌದು!
ಇದು ಪೀಠಿಕೆ ಅಷ್ಟೇ. ಮುಖ್ಯ ವಿಷಯ ಈಗ. ಮಂತ್ರ ಹೇಳುವುದರಿಂದ, ಅದನ್ನೇ ಪುನರುಚ್ಚರಿಸುವುದರಿಂದ ಅಂದುಕೊಂಡಿದ್ದು ಪ್ರಾಪ್ತವಾಗುತ್ತಾ? ಇದು ನಮ್ಮ ಬುದ್ಧಿಜೀವಿಗಳು ಹೇಳುವಂತೆ ಬ್ರಾಹ್ಮಣರು ಹೊಟ್ಟೆಹೊರೆದುಕೊಳ್ಳಲು ಕಂಡುಕೊಂಡ ಶ್ರೇಷ್ಠ ಉಪಾಯವಾ? ಅಥವಾ ಇದಕ್ಕೆ ವೈಜ್ಞಾನಿಕವಾಗಿ ಹಿನ್ನೆಲೆಯನ್ನು ಒದಗಿಸುವುದು ಸಾಧ್ಯವಾ?
ನನಗೆ ಗೊತ್ತು. ಮಂತ್ರ ಪದದ ಬಳಕೆಯಾದೊಡನೆ ಅನೇಕರು ಮೂಗು ಮುರಿದುಬಿಡುತ್ತಾರೆ. ಅವರಿಗದು ಹಿಂದುತ್ವದ ಸಂಕೇತ ಎನಿಸುತ್ತೆ. ಇರಲಿ. ಅಂತಹವರ ಉಪಯೋಗಕ್ಕೋಸ್ಕರ ಸ್ವಲ್ಪ ಹೊತ್ತು ‘ನಾದ’ ಎನ್ನುವ ಪದ ಬಳಸೋಣ; ಬೇಕಿದ್ದರೆ ‘ದನಿ’ ಎಂತಲೂ ಹೇಳೋಣ.
ಈಗ ವಿಚಾರಕ್ಕೆ ಬನ್ನಿ. ನಾವಾಡುವ ಪ್ರತಿಯೊಂದು ಮಾತಿನಲ್ಲೂ ಭಾವನೆ ಇದೆ, ಅರ್ಥವಿದೆ. ಈ ಅರ್ಥ ಹೊಮ್ಮಿಸುವ ಪದಗಳಿವೆ. ಈ ಪದಗಳನ್ನು ಬೇರ್ಪಡಿಸಿ ನೋಡಿದರೆ ಅಕ್ಷರಗಳಿವೆ. ಅಚ್ಚರಿಯೆಂದರೆ ಈ ಅಕ್ಷರಗಳು ಬರಿಯ ಸದ್ದು ಮಾತ್ರ. ನಾಲಗೆ, ಹಲ್ಲು, ತುಟಿಗಳ ಬಳಕೆಯಿಂದ ಕಂಠ ಹೊರಡಿಸುವ ಬಗೆ ಬಗೆಯ ಸದ್ದುಗಳು! ಸಂಸ್ಕೃತ ವ್ಯಾಕರಣಶಾಸ್ತ್ರ ಕತರ್ೃ ಪಾಣಿನಿಯ ಕುರಿತಂತೆ ಹೇಳುತ್ತಾರೆ, ಆತ ತಪಸ್ಸಿನಲ್ಲಿರುವಾಗ ಶಿವ ಪ್ರತ್ಯಕ್ಷವಾಗಿ ನತರ್ಿಸಲಾರಂಭಿಸಿದನಂತೆ. ಶಿವನ ಢಮರುವಿನ ನಿನಾದ ಪಾಣಿನಿಗೆ ಅಕ್ಷರಗಳಾಗಿ ಕೇಳಿದವು. ಅವೇ ಮಾಹೇಶ್ವರ ಸೂತ್ರಗಳಾಗಿ ಮುಂದೆ ವ್ಯಾಕರಣಕ್ಕೆ ಮೂಲಸ್ರೋತವಾದವು! ಅಂದರೆ ದನಿಯೇ ಅಕ್ಷರದ ಮೂಲ. ಅಕ್ಷರದಿಂದ ಪದಗಳು. ಪದಗಳಿಗೆ ಭಾವನೆ ತುಂಬಿದಾಗ ಮಾತು.
ಈಗ ಒಂದು ಪ್ರಯೋಗ ಮಾಡೋಣ. ನೀವು ಯಾರದ್ದಾದರೂ ಮಾತನ್ನು ಕೇಳುವಾಗ ಸ್ವಲ್ಪ ಎಚ್ಚರಿಕೆಯಿಂದ ಕುಳಿತುಕೊಳ್ಳಿ. ಮೊದಲು ಮಾತಿನಿಂದ ಭಾವನೆಯನ್ನು ಪ್ರತ್ಯೇಕಿಸಿ. ಆ ಮಾತುಗಳಲ್ಲಿ ಅಡಗಿರುವ ನವರಸಗಳನ್ನೂ ಮರೆತುಬಿಡಿ. ಈಗ ಎದುರಿಗಿರುವವರು ಆಡುತ್ತಿರುವ ಮಾತು ನೀರಸವಾದ ಪದಗಳ ಗುಚ್ಛ ಮಾತ್ರ! ಈ ಪದಗಳಿಗೆ ಈಗಲೂ ಅರ್ಥ ಇದ್ದೇ ಇರುತ್ತದೆ. ಆದರೆ ಅದು ನಮ್ಮನ್ನು ಮೋಹಗೊಳಿಸುವಂಥದ್ದಾಗಿರುವುದಿಲ್ಲ. ಈಗ ಈ ಪದಗಳನ್ನು ಅಕ್ಷರಗಳ ಸಮೂಹವೆಂದು ಪ್ರಯತ್ನಪೂರ್ವಕವಾಗಿ ಭಾವಿಸುತ್ತ ಪ್ರತಿಯೊಂದು ಅಕ್ಷರವನ್ನೂ ಪ್ರತ್ಯೇಕವಾಗಿ ಕೇಳಲಾರಂಭಿಸಿ. ಅಚ್ಚರಿ ಏನು ಗೊತ್ತೇ? ವ್ಯಕ್ತಿ ಮಾತನಾಡುತ್ತಿದ್ದಾನೆಂಬುದನ್ನು ನೀವು ಮರೆತೇ ಬಿಡುತ್ತೀರಿ. ಆತನೂ ಪ್ರಾಣಿ-ಪಕ್ಷಿಗಳಂತೆ ಸದ್ದು ಹೊರಡಿಸುತ್ತಿದ್ದಾನೆ ಎನಿಸಲಾರಂಭಿಸುತ್ತದೆ. ಅಷ್ಟೇ ಅಲ್ಲ. ಆತ ಕೋಪದ ಭರದಲ್ಲಿ ಕೂಗಾಡುವುದನ್ನು ನೀವು ಯಾವುದೋ ಪ್ರಾಣಿಗೆ ಸಮೀಕರಿಸುತ್ತೀರಿ. ಪ್ರೀತಿಯಿಂದ ಆಡುತ್ತಿರುವ ಮಾತು ಯಾವುದೋ ಪಕ್ಷಿ ಕೂಗುತ್ತಿರುವಂತೆ ನಿಮಗನಿಸುತ್ತದೆ. ಒಟ್ಟಾರೆ ಒಂದಂತೂ ಸತ್ಯ. ಹೇಗೆ ಕಂಪ್ಯೂಟರಿನ ಎಲ್ಲಾ ಕೆಲಸಗಳು ಮೂಲದಲ್ಲಿ ಒಂದು ಮತ್ತು ಸೊನ್ನೆಗಳಿಗೆ ಬಂದು ನಿಲ್ಲುತ್ತವೆಯೋ ಹಾಗೆಯೇ ನಮ್ಮ ಮಾತುಕತೆಯೆಲ್ಲವೂ ಮೂಲದಲ್ಲಿ ಒಂದಷ್ಟು ದನಿಗಳ ಕಂತೆಯಾಗಿರುತ್ತವೆ ಅಷ್ಟೇ. ಒಮ್ಮೆ ಇದನ್ನು ಅರಿತುಕೊಳ್ಳಲು ನಾವು ಶಕ್ತರಾದರೆ ಪ್ರಕೃತಿಯ ಪ್ರತಿಯೊಂದು ದನಿಯನ್ನೂ ಅನುವಾದಿಸುವಲ್ಲಿ ನಾವು ಯಶಸ್ವಿಯಾಗಿಬಿಡುತ್ತೇವೆ. ನಾಯಿಯನ್ನು ಬಲುವಾಗಿ ಪ್ರೀತಿಸುವ ವ್ಯಕ್ತಿ ಅದರ ಪ್ರತಿಯೊಂದು ‘ಬೌ’ಕಾರದಲ್ಲಿನ ಭಿನ್ನತೆಯನ್ನೂ ಗಮನಿಸಬಲ್ಲ. ಅದರ ಹಸಿವು, ಆಕ್ರೋಶ, ಎಚ್ಚರಿಕೆಯ ಸಂದೇಶ ಎಲ್ಲವನ್ನೂ ಸದ್ದು ಕೇಳಿಯೇ ನಿರ್ಧರಿಸಬಲ್ಲ. ಸ್ವಲ್ಪ ಪ್ರಯತ್ನ ಹಾಕಿದರೆ ಬೆಕ್ಕಿನ ಕದಿಯುವ ‘ಮಿಯಾಂವ್’ ಮತ್ತು ಪ್ರೀತಿ ಬೆಯಸುವ ಮಿಯಾಂವ್ಗಳು ಬೇರೆ ಎಂಬುದನ್ನು ಗುರುತಿಸಿಬಿಡಬಹುದು. ಉಪನಿಷತ್ತಿನಲ್ಲಿ ಬರುವ ಸತ್ಯಕಾಮನ ಕಥೆ ಇದರಿಂದಲೇ ಪ್ರೇರೇಪಣೆ ಪಡೆದಿದ್ದಿರಬಹುದು. ಕಾಡಿನಲ್ಲಿ ಪ್ರಕೃತಿಯೊಂದಿಗೆ ಬೆರೆತು ಹೋದ ಸತ್ಯಕಾಮನಿಗೆ ಗೋವುಗಳೇ ಮಾತನಾಡಿಸುತ್ತಿದ್ದವಂತೆ!
ಹೌದು. ಪ್ರತಿಯೊಂದು ದನಿಯೂ ಯಾವುದೋ ಭಾವನೆಯ ಸಂಕೇತವೇ. ಶಕ್ತಿಯ ಮೂಲವೇ. ಇಂತಹ ಶಬ್ದಗಳು ತನ್ನ ಸುತ್ತಲೂ ರೂಪವನ್ನು ಸೃಷ್ಟಿಸಿಬಿಡುತ್ತವೆ. ಅಷ್ಟೇ ಅಲ್ಲ. ಅಂತಹ ಸದ್ದು ಹೊರಡಿಸುವುದರಿಂದ ದೇಹದೊಳಗೆ ಬದಲಾವಣೆಯೂ ಗಮನಕ್ಕೆ ಬರುತ್ತದೆ. ಯಾವಾಗಲಾದರೂ ಜ್ವರದಿಂದ ಮೈ ಕೈ ನೋವು ಅನುಭವಿಸಿದ್ದು ನೆನಪಿದೆಯಾ? ಆಗೆಲ್ಲ ನರಳುತ್ತೇವಲ್ಲ; ಆಗ ಹೊರಡುವ ಸದ್ದನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ‘ಮ್’ಕಾರದ ಸುತ್ತ ಸುತ್ತುವ ಆ ನರಳುವಿಕೆ ಅದೆಷ್ಟು ನೆಮ್ಮದಿ ಕೊಡುತ್ತದೆಯೆಂದರೆ ಔಷಧಿ ಕೊಡುವ ಸಮಾಧಾನಕ್ಕಿಂತಲೂ ಹೆಚ್ಚು! ಹಾಗಂತ ಎಲ್ಲಾ ಕ್ಷಣಗಳಲ್ಲೂ ಅದೇ ಸದ್ದಲ್ಲ. ನಮಗೆ ಅರಿವೇ ಇಲ್ಲದಂತೆ ಏಟು ಬಿದ್ದಾಗ ನಾವು ಜೋರಾಗಿ ಕೂಗುತ್ತೇವಲ್ಲ ಆಗ ಹೊರಡೋದು ‘ಆ’ಕಾರ. ಕರಾಟೆ ಪಟುಗಳ ಅಭ್ಯಾಸದಲ್ಲಿ ಭಾಗವಹಿಸಿ ನೋಡಿ. ಅವರು ಪ್ರತಿಯೊಂದು ಪಂಚ್ಗೂ ‘ಹ್’ ಎಂದು ಸದ್ದು ಹೊರಡಿಸಿಯೇ ಹೊರಡಿಸುತ್ತಾರೆ. ಆ ಸದ್ದು ಹೊರಡುತ್ತಿದ್ದಂತೆ ಇಡಿಯ ದೇಹದ ಶಕ್ತಿ ಮುಷ್ಟಿಯೆದುರಿಗೆ ಕೇಂದ್ರೀಕೃತವಾಗುವುದನ್ನು ಗಮನಿಸುತ್ತಾರೆ. ಅಂದ ಮೇಲೆ ನಮ್ಮಿಂದ ಹೊರಡುವ ಈ ದನಿಗೂ ನಮ್ಮಲ್ಲಿನ ಶಕ್ತಿ ಸಂಚಾರಕ್ಕೂ ಸಂಬಂಧವಿದೆ ಅನ್ನೋದು ಸತ್ಯ ಅನಿಸಿಲ್ವೇ? ಇದನ್ನೇ ಆಧುನಿಕ ವಿಜ್ಞಾನ ಶಬ್ದ ವಿಜ್ಞಾನ ಎಂತಲೋ, ದನಿ ಚಿಕಿತ್ಸೆ ಎಂತಲೋ ಕರೆಯುತ್ತದೆ. ಭಾರತ ಅದನ್ನೇ ವಿಶೇಷವಾಗಿ, ಆಧ್ಯಾತ್ಮಿಕ ದೃಷ್ಟಿಯಿಂದ ಅಭಿವೃದ್ಧಿ ಪಡಿಸಿ ಮಂತ್ರ ಶಕ್ತಿ ಎಂದಿದೆ ಅಷ್ಟೇ!
ತರ್ಕ ಬಹಳ ಸರಳವಾಗಿದೆ. ಯಾವ ದನಿ ಅಯಾಚಿತವಾಗಿ ಹೊರಡುವುದರಿಂದ ದೇಹದೊಳಗೆ ನೆಮ್ಮದಿ ಮೂಡುವುದೋ, ನೋವನ್ನು ಸಹಿಸುವ ಶಕ್ತಿ ಲಭಿಸುವುದೋ ಅಂತಹ ಸದ್ದುಗಳನ್ನೆಲ್ಲ ಗುರುತಿಸಿ ಒಟ್ಟುಮಾಡಿ ನಾವೇ ಅದನ್ನು ಪ್ರಯತ್ನಪೂರ್ವಕವಾಗಿ ಉಚ್ಚರಿಸಿ ಲಾಭವೇಕೆ ಪಡೆಯಬಾರದು? ಹೌದಲ್ಲವೇ. ಇದನ್ನೇ ನಾವು ಮಂತ್ರ ಜಪ ಅನ್ನೋದು. ಮಂತ್ರದ ಅರ್ಥವೇ ಅದು. ‘ನಿರಂತರ ಉಚ್ಚಾರದಿಂದ ಯಾವುದು ರಕ್ಷಣೆ ಕೊಡುವುದೋ ಅದು’ ಅಂತ!
ಈ ಕುರಿತಂತೆ ಜಾಗತಿಕವಾಗಿ ಅನೇಕ ಸಂಶೋಧನೆಗಳಾಗಿವೆ. ಅಂತರರಾಷ್ಟ್ರೀಯ ಶೋಧ ಪ್ರಬಂಧ ಸಂಕಲನಗಳಲ್ಲಿ ಅನೇಕ ಲೇಖನಗಳೂ ಪ್ರಕಟಗೊಂಡಿವೆ. ಈ ನಿಟ್ಟನಲ್ಲಿ ಗಾಯತ್ರಿ ಪರಿಪಾಠದ ಪಂಡಿತ ಶ್ರೀರಾಮ್ ಶಮರ್ಾ ಆಚಾರ್ಯರು ಬರೆದಿರುವ ‘ಎಟನರ್ಿಟಿ ಆಫ್ ಸೌಂಡ್ ಎಂಡ್ ಸೈನ್ಸ್ ಆಫ್ ಮಂತ್ರಾಸ್’ ಓದಲೇಬೇಕಿರುವ ಕೃತಿ.
ಆಧುನಿಕ ವಿಜ್ಞಾನ ಸೂಕ್ಷ್ಮ ಸದ್ದುಗಳmantra1 ಕುರಿತಂತೆ ಸಾಕಷ್ಟು ಸಂಶೋಧನೆ ನಡೆಸಿದೆ. 20 ರಿಂದ 20 ಕಿಲೋ ಹಟ್ಜರ್್ ಗಳಷ್ಟಿರುವ ದನಿ ಸಂಕೇತಗಳನ್ನು ನಮ್ಮ ಕಿವಿಗಳು ಗ್ರಹಿಸಬಲ್ಲವು ಅಷ್ಟೇ. ಈ ವ್ಯಾಪ್ತಿಯನ್ನು ಮೀರಿದ ಅಸಂಖ್ಯ ಸದ್ದು ನಮ್ಮ ಸುತ್ತಲೂ ಹೊರಡುತ್ತಲೇ ಇವೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಅತ್ಯಂತ ಶಾಂತ ಪ್ರದೇಶದಲ್ಲೂ ನಾವು ಶಾಂತವಾಗಿರಲಾರೆವು. ಏಕೆಂದರೆ ನಮ್ಮ ಕಿವಿ ಕೇಳಲಾಗದ ಸದ್ದು-ಗದ್ದಲ ನಡೆದೇ ಇರುತ್ತದೆ!
ಅದರರ್ಥ ನಾವು ಸೂಕ್ಷ್ಮ ಸದ್ದಿನ ಸಾಗರದ ನಟ್ಟ ನಡುವೆ ನಿಂತಿದ್ದೇವೆ. ಇದು ಅರ್ಥವಾಗದ ಸಂಗತಿಯೇನಲ್ಲ. ಯಾವ ವಸ್ತು ಕಂಪಿಸುವುದೋ ಅದು ತನ್ನದೇ ಆದ ಸದ್ದನ್ನು ಹೊರಡಿಸುತ್ತದೆ. ಮತ್ತು ಕಂಪಿಸದೇ ಸ್ಥಿರವಾಗಿರುವ ವಸ್ತು ಯಾವುದೂ ಇಲ್ಲ. ಒಂದು ಅಣುವಿನಲ್ಲೂ ಸದಾ ಎಲೆಕ್ಟ್ರಾನಿಕ್ ಚಲಿಸುತ್ತಲೇ ಇರುವುದರಿಂದ ನೀವು ಮೇಜಿನ ಮೇಲೆ ಸ್ಥಿರವಾಗಿ ಇಟ್ಟ ಕಲ್ಲಿನ ಚೂರೂ ಸದ್ದು ಮಾಡುತ್ತಲೇ ಇರುತ್ತದೆ. ನಾವು ಕೇಳಿಸಿಕೊಳ್ಳಲಾರೆವು ಅಷ್ಟೇ. ಯಾರು ಯೋಗಿಯಾಗಿ ಅಂತಮರ್ುಖಿಯಾಗಿರುವರೋ ಅವರು ಕೇಳುವ ಸದ್ದಿಗೆ ಕಿವಿ ಮುಚ್ಚಿಕೊಳ್ಳುತ್ತಾರೆ; ಕೇಳದ ಸದ್ದುಗಳಿಗೆ ಕಿವಿ ತೆರೆಯುತ್ತಾರೆ. ಇದೇ ಅಂತಗರ್ಿವಿ ಎನಿಕೊಳ್ಳುತ್ತೆ.
ಧ್ಯಾನದ ಸಿದ್ಧಿಯಾಗುತ್ತಾ ನಡೆದಂತೆ ಕೆಲವರಿಗೆ ಘಂಟಾನಾದ; ಶಂಖನಾದ ಕೇಳುವುದು ಹೀಗೆಯೇ. ಕೆಲವರು ಇತರರ ಮನಸ್ಸನ್ನು ಓದುತ್ತಾರೆ ಅಂತಾರಲ್ಲ ಅದೂ ಹೀಗೆಯೇ ಇರಬೇಕು. ಮನಸ್ಸಿನ ಆಲೋಚನೆಗಳು ಸೂಕ್ಷ್ಮ ತರಂಗಗಳಾಗಿ ಹೊಮ್ಮುವಾಗ ವಾತಾವರಣದಲ್ಲಿ ಉಂಟುಮಾಡುವ ದನಿಯನ್ನು ಅರಿಯಬಲ್ಲವರು ಅವರು. ಆದರೆ ಇವೆಲ್ಲವನ್ನೂ ಪಕ್ಕಕ್ಕಿಟ್ಟು ತಮ್ಮೊಳಗಿನ ಬದಲಾವಣೆಯನ್ನು ಗಮನಿಸುತ್ತ ಕುಳಿತ ಸಾಧಕ ಅಪರೂಪದ ದನಿಗಳನ್ನು ಗುರುತಿಸುತ್ತಾನೆ. ಕುಂಡಲಿನಿ ಏಳುವಾಗ, ಒಂದೊಂದು ಚಕ್ರದ ಬಳಿ ಸಾರಿದಾಗ, ಸಹಸ್ರಾರ ತೆರಕೊಂಡಾಗ ಉಂಟಾಗುವ ನಾದವನ್ನು ಆನಂದಿಸುತ್ತಾನೆ, ಅದನ್ನು ಸಮಾಜಕ್ಕೆ ಕೊಡುತ್ತಾನೆ. ಯಾವ್ಯಾವ ಸಂದರ್ಭದಲ್ಲಿ ಯಾವ್ಯಾವ ನಾದ ಆತನಲ್ಲಿ ಹೊಮ್ಮಿತೋ ಆ ನಾದವನ್ನು ನಾವು ಉಚ್ಚರಿಸಿದರೆ ನಮ್ಮೊಳಗೆ ಅಂತಹ ಸಂದರ್ಭಗಳು ರೂಪುಗೊಳ್ಳುವವೆಂಬ ರಿವಸರ್್ ಇಂಜಿನಿಯರಿಂಗ್ ಆಲೋಚನೆಯೇ ಮಂತ್ರೋಚ್ಚಾರಣೆ ಇರಬೇಕು! ಏನಂತೀರಿ?
ನಮ್ಮೊಳಗಿನ ಪಂಚಭೂತಗಳನ್ನು ನಿಯಂತ್ರಿಸುವ ಸಾಮಥ್ರ್ಯ ಮಂತ್ರ ನಮಗೆ ಕೊಡುವುದಾದರೇ ವಿಶ್ವದ ಆಗು-ಹೋಗುಗಳಲ್ಲಿ ಕೈಯ್ಯಾಡಿಸುವ ಶಕ್ತಿಯೂ ಅದಕ್ಕೆ ಇರಲೇಬೇಕು. ಹೀಗಿರುವಾಗ ಸೂಕ್ತ ಮಂತ್ರಗಳ ಉಚ್ಚಾರಣೆಯಿಂದ ಮಳೆ ಬರುವುದು, ಬಿರುಗಾಳಿ ಬೀಸುವುದು ಅಸಾಧ್ಯವೇನೂ ಆಗಿರಲಿಕ್ಕಿಲ್ಲ. ಹೇಗೆ ಎಂ ಬಿ ಬಿ ಎಸ್ ಮಾತ್ರ ಮುಗಿಸಿದ ವ್ಯಕ್ತಿ ಎಲ್ಲ ಸೂಕ್ಷ್ಮ ಶಸ್ತ್ರಕ್ರಿಯೆಗಳನ್ನು ಮಾಡಲಾರನೋ ಹಾಗೆಯೇ ಈ ಬಗೆಯ ಸಿದ್ಧಿಗಳೂ ವಿಶೇಷ ಪ್ರಯತ್ನದಿಂದ ಮಾತ್ರ ಸಿದ್ಧಿಸುವಂತಹದ್ದು.
ಒಟ್ಟಲ್ಲಿ ಒಂದೇ ಮಾತು. ಸುಮ್ಮನೆ ಆವರಣದ ಹೊರಗೆ ನಿಂತು ಒಳಗೆ ಇರುವುದೆಲ್ಲ ನಿಷ್ಪ್ರಯೋಜಕವೆಂದು ಕಲ್ಲೇಕೆ ತೂರುತ್ತೀರಿ. ಒಮ್ಮೆ ಒಳಗೆ ಬನ್ನಿ. ನಾಲ್ಕು ಸುತ್ತು ಹಾಕಿ. ಆಮೇಲೂ ಸತ್ತ್ವವಿಲ್ಲವೆನಿಸಿದರೆ ಹೊರಗೆ ಹೊರಟುಬಿಡಿ. ಸರೀತಾನೆ?

Leave a Reply