ವಿಭಾಗಗಳು

ಸುದ್ದಿಪತ್ರ


 

ಮೂರನೆ ಮಹಾಯುದ್ಧ, ಔಷಧ ಮಾರುಕಟ್ಟೆಯದ್ದಾ?

ಯೋಜನಾ ಆಯೋಗದ ವರದಿ ಬಂದಿದೆ. ಈ ದೇಶದ ಆರೋಗ್ಯದ ಕುರಿತು ಅಪಾರ ಕಾಳಜಿ ವ್ಯಕ್ತಪಡಿಸಿರುವ ನಮ್ಮದೇ ಸರ್ಕಾರದ ವರದಿ ಆಘಾತಕಾರಿ ಅಂಶಗಳನ್ನೂ ಹೊತ್ತು ತಂದಿದೆ. ಭಾರತದ ಔಷಧ ಮಾರುಕಟ್ಟೆಯಲ್ಲಿ ೯೦ ಸಾವಿರಕ್ಕೂ ಮಿಕ್ಕಿ ಫಾರ್ಮುಲೇಶನ್‌ಗಳು, ಬ್ರಾಂಡ್‌ಗಳು ಇವೆ. ಮಾರುಕಟ್ಟೆಯಲ್ಲಿ ಅವೈಜ್ಞಾನಿಕ ಸಂಯೋಜನೆಯ, ಅನಗತ್ಯ ಮತ್ತು ಅಪಾಯಕಾರಿ ಔಷಧಗಳು ತುಂಬಿಹೋಗಿವೆ, ಮಾರುಕಟ್ಟೆಯ ಶೇಕಡ ೧೦ರಷ್ಟು ವಹಿವಾಟು ನಡೆಸುವ ಕೆಮ್ಮಿನ ಔಷಧಿ, ವಿಟಮಿನ್ ಗುಳಿಗೆಗಳು ಮತ್ತು ಲಿವರ್ ಟಾನಿಕ್‌ಗಳನ್ನು ತಯಾರಿಸುವ ಹತ್ತು ಕಂಪನಿಗಳಂತೂ ಅನಗತ್ಯವಾಗಿಯೇ ಉಸಿರಾಡುತ್ತಿವೆ. ಹೆಚ್ಚು ಮಾರಾಟವಾಗುವ ೨೫ ಔಷಧಗಳಲ್ಲಿ ಹತ್ತು ಔಷಧಗಳು ರಕ್ತಶುದ್ಧಿ, ನೋವು ನಿವಾರಕ, ಶಕ್ತಿವರ್ಧಕ, ಲಿವರ್ ಸಮಸ್ಯೆಗಳ ಚಿಕಿತ್ಸೆಗೆ ನೀಡುವಂಥವೇ ಆಗಿವೆ. ಆದರೆ ಈ ಔಷಧಗಳು ಅಪಾಯಕಾರಿಯೆಂದು ವರದಿ ಹೇಳುತ್ತಿದೆ. ಅಂಕಿ ಅಂಶಗಳ ಪ್ರಕಾರ ೪೬ ನಿಷೇಧಿತ ಔಷಧಗಳು ನಿಷೇಧದ ನಂತರವೂ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ.
ಇದು ಯಾವುದೋ ಸ್ವಯಂ ಸೇವಾ ಸಂಸ್ಥೆ ಹೇಳಿರುವ ಮಾತುಗಳಲ್ಲ; ಈ ದೇಶದ ಅಧಿಕೃತ ಸರ್ಕಾರಿ ದಾಖಲೆ. ವರದಿ ಮುಂದೆ ಸಾಗುತ್ತಿದ್ದಂತೆ ಇನ್ನೂ ಭಯಾನಕ ವಿಷಯಗಳತ್ತ ಬೆಳಕು ಚೆಲ್ಲುತ್ತದೆ. ಹೃದಯಕ್ಕೆ ಸಂಬಂಧಪಟ್ಟ ಅನೇಕ ಔಷಧಗಳು ವಿಪರೀತ ಪರಿಣಾಮ ಉಂಟುಮಾಡುತ್ತವೆ ಎಂಬ ಅಂಶವಂತೂ ಆಘಾತಕಾರಿಯೇ ಸರಿ. ಮಾತೆತ್ತಿದರೆ ವೈದ್ಯರ ಬಳಿ ಓಡುವ ನಾವು ಅವರನ್ನು ದೇವರೆಂದು ಭಾವಿಸುತ್ತೇವೆ. ಆ ವೈದ್ಯರು ಮುಲಾಜಿಲ್ಲದೆ ನಮ್ಮ ಜೀವದೊಂದಿಗೆ ಆಟವಾಡುತ್ತಲೇ ಇರುತ್ತಾರೆ. ಒಂದು ವಿದೇಶ ಪ್ರವಾಸ, ಒಂದು ವಾಟರ್ ಫಿಲ್ಟರ್ರು, ಬರೆಯಲಿಕ್ಕೆ ನಾಲ್ಕಾರು ಪೆನ್ನು- ಇಷ್ಟಕ್ಕಾಗಿ ಅನಗತ್ಯ ಔಷಧಗಳನ್ನು ಬರೆದುಕೊಡುತ್ತಾರೆ.
ಔಷಧ ಮಾರಾಟದ ಒಂದು ದೊಡ್ಡ ಮಾಫಿಯಾ ಜಗತ್ತಿನಲ್ಲಿದೆ. ರೋಗ ಗುಣಪಡಿಸುವ ಔಷಧ ತಯಾರಿಸುವ ಈ ಕಂಪನಿಗಳು ಇದನ್ನು ಮಾರಾಟ ಮಾಡಲಿಕ್ಕಾಗಿ ಸರ್ಕಾರಗಳನ್ನೆ ಬುಟ್ಟಿಗೆಳೆದುಕೊಳ್ಳುತ್ತವೆ. ವೈದ್ಯರಿಗೆ ಆಮಿಷವೊಡ್ಡಿ ರೋಗಿಗೆ ತಮ್ಮ ಕಂಪನಿಯ ಔಷಧ ತಿನ್ನಿಸುತ್ತಾರೆ. ಎಷ್ಟೋ ಬಾರಿ ಈ ಔಷಧಗಳು ಆರೋಗ್ಯ ತರುವುದಕ್ಕಿಂತ ವ್ಯತಿರಿಕ್ತ ಪರಿಣಾಮ ಮಾಡುವುದೇ ಹೆಚ್ಚು. ಆದರೆ ಜನರ ಆರೋಗ್ಯದ ಜೊತೆ ಆಡುವುದನ್ನೆ ಉದ್ಯಮ ಮಾಡಿಕೊಂಡವರಿಗೆ ಇದರಿಂದ ಏನೂ ಆಗಬೇಕಿಲ್ಲ. ಅಮೆರಿಕಾ, ಯುರೋಪ್ ಮೊದಲಾದ ಮುಂದುವರೆದ ದೇಶಗಳಲ್ಲಿ ಈ ಕಂಪನಿಗಳು ತುಂಬಿರುವ ಕೋಟ್ಯಂತರ ಡಾಲರುಗಳಷ್ಟು ದಂಡವೇ ಇದಕ್ಕೆ ಸಾಕ್ಷಿ. ಇಂದಿನ ದಿನಗಳಲ್ಲಿ ಪೆಟ್ರೋಲು ಹಾಗೂ ಶಸ್ತ್ರ ಉದ್ಯಮಗಳಿಗೆ ಸೆಡ್ಡು ಹೊಡೆದು ನಿಲ್ಲಬಲ್ಲ ಮತ್ತೊಂದು ಉದ್ಯ ಔಷಧ ಉದ್ಯಮ ಎಂಬುದರಲ್ಲಿ ಅನುಮಾನವೇ ಇಲ್ಲ. ಅದಕ್ಕೆಂದೇ ಮೈಕ್ರೋಸಾಫ್ಟ್‌ನ ಸೌಧ ಕುಸಿಯುವ ಮುನ್ನ ಆಸರೆಗೆಂದು ಬಿಲ್‌ಗೇಟ್ಸ್ ದೊಡ್ಡದೊಂದು ಔಷಧ ಕಂಪನಿ ತೆರೆದಿದ್ದು. ಹಾಗೆ ಕಂಪನಿ ತೆರೆದೊಡನೆ ಆತ ಮಾಡಿದ ಮೊದಲ ಕೆಲಸವೇನು ಗೊತ್ತೆ? ಅಮೆರಿಕಾದ ಪ್ರಮುಖ ನಾಲ್ಕಾರು ಔಷಧ ಕಂಪನಿಗಳ ಗೆಳೆತನ ಬೆಳೆಸಿ, ತಂಡ ರಚಿಸಿಕೊಂಡು ಬಡ ರಾಷ್ಟ್ರಗಳಿಗೆ ಬಿಲಿಯನ್‌ಗಟ್ಟಲೆ ಸಹಾಯ ಘೋಷಿಸಿದ್ದು. ದುರಂತವೆಂದರೆ, ಈ ಬಡ ರಾಷ್ಟ್ರಗಳಲ್ಲಿ ಭಾರತವೂ ಒಂದು! ಈ ರೀತಿ ಸಹಾಯಧನವಾಗಿ ಬಂದ ಹಣ ನೇರ ಆಯಾ ರಾಷ್ಟ್ರಗಳಿಗೆ ಬರುವುದಿಲ್ಲ. ಜಗತ್ತಿನ ಆರೋಗ್ಯದ ಉಸ್ತುವಾರಿಯನ್ನು ಹೊತ್ತಿರುವ ವಿಶ್ವ ಆರೋಗ್ಯ ಸಂಸ್ಥೆ (WHO)ಗೆ ಹೋಗುತ್ತದೆ. ಈ ಹಣದಲ್ಲಿ ದೇಣಿಗೆ ಕೊಟ್ಟ ರಾಷ್ಟ್ರಗಳ ಔಷಧ ಕಂಪನಿಗಳಿಂದ ಔಷಧ ಖರೀದಿಸುವ WHO, ಬಡರಾಷ್ಟ್ರಗಳಿಗೆ ಅತೀ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತದೆ. ಹಣ ಕೊಡಲಾಗದ ರಾಷ್ಟ್ರಗಳಿಂದ ಅದಕ್ಕೆ ಪ್ರತಿಯಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ವಸೂಲು ಮಾಡಿ ಸಿರಿವಂತ ರಾಷ್ಟ್ರಗಳಿಗೆ ಮುಟ್ಟಿಸುತ್ತದೆ.
ಈಗ ಒಂದು ನಿಮಿಷ ಯೋಚನೆ ಮಾಡಿ. ಜಗತ್ತಿನ ಭಯಾನಕ ರೋಗಗಳೆಲ್ಲ ಆಫ್ರಿಕಾ ರಾಷ್ಟ್ರಗಳಲ್ಲಿಯೇ ಕಂಡುಬರೋದು ಅದೇಕೆಂದರೆ, ಅಲ್ಲಿನ ಪೆಟ್ರೋಲು ಲೂಟಿಗೈಯಲಿಕ್ಕಾಗಿ, ಅರಣ್ಯದ ಸಂಪತ್ತನ್ನು ಸೂರೆಗೈಯಲಿಕ್ಕಾಗಿ ಮಾತ್ರ!
ಯಾವುದಾದರೊಂದು ರೋಗಕ್ಕೆ ಹತ್ತು ಜನ ಬಲಿಯಾದರೆ, ಹತ್ತು ಲಕ್ಷವೆಂದು ಹೇಳಲು ಈ ಕಂಪನಿಗಳು ಹಿಂದೆ ಮುಂದೆ ನೋಡುವುದೇ ಇಲ್ಲ. ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ೫ ಕೋಟಿ ಜನರಿಗೆ ಏಡ್ಸ್ ಇದೆಯೆಂದು ಸರ್ಕಾರೇತರ ಸಂಸ್ಥೆಯೊಂದು ಪುಕಾರು ಹಬ್ಬಿಸಿತ್ತು. ೫ ಕೋಟಿ ಎಂದರೆ, ಇಪ್ಪತ್ತು ಜನರಲ್ಲಿ ಒಬ್ಬರಿಗೆ ಎಂದರ್ಥ! ಗಾಬರಿಗೊಂಡು ಅಂಕಿ ಅಂಶ ಕೇಳಿದ್ದಕ್ಕೆ, ಸಂಸ್ಥೆ ಸಾವರಿಸಿಕೊಂಡು ಎರಡು ಸೊನ್ನೆ ಕಡಿಮೆ ಮಾಡಿ ೫ ಲಕ್ಷವೆಂದು ಹೇಳಿ ಕೈ ತೊಳೆದುಕೊಂಡುಬಿಟ್ಟಿತು. H1N1 ಆಕ್ರಮಿಸಿದಾಗ ಸಾವಿರಾರು ಜನ ಸತ್ತೇಹೋದರೆಂಬಂತೆ ಪತ್ರಿಕೆಗಳಲ್ಲಿ, ಟೀವಿಗಳಲ್ಲಿ ಸುದ್ದಿ ಬಿತ್ತರವಾಯ್ತು. ಆಮೇಲೆ ಮುಖಕ್ಕೆ ಔಷಧಪ್ರೋಕ್ತ ಮುಖವಾಡ ಹಾಕಿಕೊಂಡು ತಿರುಗಾಡುವವರು ಎಲ್ಲೆಲ್ಲೂ ಕಂಡುಬಂದರು. ಮೂವತ್ತು ಪೈಸೆ ಬೆಲೆ ಬಾಳದ ಆ ಮಾಸ್ಕ್‌ಗಳು ೨೫ ರೂಪಾಯಿಗೆ ಮಾರಾಟಗೊಂಡವು. ಕೋಟ್ಯಂತರ ರೂಪಾಯಿ ವಹಿವಾಟು ನಡೆದುಹೋಯಿತು. ನಾವು ಬೆಪ್ಪರಾಗಿಬಿಟ್ಟೆವು. ಎರಡು ದಶಕಗಳಿಂದ ನಡುರಸ್ತೆಯಲ್ಲೂ ಪೋಲಿಯೋ ಹನಿ ಹಾಕಿಸುತ್ತಿದ್ದೇವಲ್ಲ, ಇದರ ಮೂಲಕ ನಡೆಯುವ ವಾರ್ಷಿಕ ವಹಿವಾಟಿನ ಅಂದಾಜಿದೆಯೇನು? ಒಬ್ಬ ಹುಡುಗನಿಗೆ ಒಂದು ಹನಿ ಪೋಲಿಯೋ ಹಾಕಲು ನೇರ ವೆಚ್ಚವೇ ೨೫ ರೂಪಾಯಿ. ಅದೂ ೨೦೦೪ರ ಅಂಕಿ ಅಂಶ. ಈಗ ಅದರ ಎರಡರಷ್ಟಾದರೂ ಆಗಿದೆ. ಅದಕ್ಕೆ ವೈದ್ಯರು ಕೊಡುವ ಸಮಯ, ಓಡಾಟದ ಖರ್ಚು ವೆಚ್ಚ, ಪ್ರಚಾರ ಎಲ್ಲವನ್ನೂ ಸೇರಿಸಿದರೆ ಒಂದು ಮಗುವಿಗೆ ಪೋಲಿಯೋ ಹನಿ ಹಾಕಿಸಲು ನೂರೈವತ್ತು ರೂಪಾಯಿಯಾದರೂ ಖರ್ಚು ಬಂದೀತು. ಐದು ಕೋಟಿ ಮಕ್ಕಳಿಗೆ ಹನಿ ಬಿದ್ದರೂ ೭೫೦ ಕೋಟಿ ರೂಪಾಯಿಯಾಯ್ತು. ವರ್ಷಕ್ಕೆ ಅಂತಹ ಎರಡು ಸುತ್ತು. ಸಾವಿರದ ಐದುನೂರು ಕೋಟಿ ರೂಪಾಯಿ ಬಾಬ್ತು! ಹೋಗಲಿ, ಇದರಿಂದ ಲಾಭವಾದರೂ ಇದೆಯಾ? ವ್ಯಾಕ್ಸಿನ್‌ಗಳ ಬಗ್ಗೆ ಜಗತ್ತಿನ ವೈದ್ಯ ವಿಜ್ಞಾನಿಗಳೇ ಇನ್ನೂ ತೃಪ್ತಿ ಹೊಂದಿಲ್ಲ. ಅದರ ಕೆಲಸ ಮಾಡುವ ರೀತಿಯ ಬಗ್ಗೆ ಈಗಲೂ ಅನುಮಾನಗಳು ದಟ್ಟವಾಗಿಯೇ ಇವೆ. ಪೋಲಿಯೋ ಪೀಡಿತರ ಸಂಖ್ಯೆಗಳೂ ಔಷಧೋದ್ಯಮದಿಂದ ಉಪಕೃತ ಸಂಖ್ಯೆಗಳೇ. ಹೀಗಾಗಿ ಅವುಗಳನ್ನು ನಂಬುವುದು ಕಷ್ಟ. ೨೦೦೫ರ ಬ್ರಿಟಿಷ್ ಮೆಡಿಕಲ್ ಜರ್ನಲ್ ಅಮೆರಿಕಾದಲ್ಲಿ ಫ್ಲೂನಿಂದ ಸತ್ತವರ ಸಂಖ್ಯೆ ವಿಜ್ಞಾನಕ್ಕಿಂತ ಹೆಚ್ಚಾಗಿ ಪ್ರಚಾರಕ್ಕೇ ಹತ್ತಿರವಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. ಹೋಗಲಿ, ಇತ್ತೀಚೆಗೆಪೋಲಿಯೋ ನಿರ್ಮೂಲನೆಗೊಂಡ ಸುದ್ದಿ ಬಂತಲ್ಲ, ಯಾಕೆ ಗೊತ್ತೇನು? ಈಗ ಭಾರತೀಯ ಔಷಧ ಕಂಪನಿಗಳು ಇದಕ್ಕೆ ಸಂಬಂಧಿಸಿದ ವ್ಯಾಕ್ಸಿನ್ ತಯಾರಿಸುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡುಕೊಳ್ಳುವ ಪ್ರಮೇಯ ಇರುವುದಿಲ್ಲ, ಅದಕ್ಕೇ!
ಏಡ್ಸ್‌ನ ಕಥೆಯೂ ಇದಕ್ಕಿಂತ ಭಿನ್ನವಲ್ಲ. HIV ಅನ್ನುವ ವೈರಸ್ ಬಗ್ಗೆಯೇ ವಿಜ್ಞಾನಿಗಳಿನ್ನೂ ಏಕಾಭಿಪ್ರಾಯ ಹೊಂದಿಲ್ಲ. ಅದು ಬರಿಯ RNA ತಂತು ಮಾತ್ರ. ಅದು ಇದ್ದೂ ಇಲ್ಲದಂತಿದ್ದು ಬಿಡುತ್ತದೆ. ಜಗತ್ತಿನ ಲೂಟಿಕೋರ ಔಷಧ ಕಂಪನಿಗಳೆಲ್ಲ ಈಗ ಏಡ್ಸ್‌ನತ್ತ ದೃಷ್ಟಿ ನೆಟ್ಟಿವೆ. ಅದಕ್ಕಾಗಿ ವ್ಯಾಪಕ ಪ್ರಚಾರವನ್ನೇ ಆರಂಭಿಸಿವೆ. ನಿಮಗೆ ಗೊತ್ತಿರಲಿ, ಜಗತ್ತಿನಾದ್ಯಂತ ನಡೆಯುವ ಕಾಂಡೋಮ್ ವಹಿವಾಟು ೧೩ ಬಿಲಿಯನ್ ಡಾಲರ್‌ಗಳಷ್ಟು. ಇದರಲ್ಲಿ ಶೇಕಡ ೮೨ರಷ್ಟು ಜನ ಅದನ್ನು ಬಳಸೋದೇ ಏಡ್ಸ್‌ಗೆ ಹೆದರಿ! ಅಂದಮೇಲೆ ಊರೂರಿನಲ್ಲಿ ರೆಡ್ ರಿಬ್ಬನ್ ಹಿಡಿದು ನಿಲ್ಲಲು ಸ್ವಯಂಸೇವಾ ಸಂಸ್ಥೆಗಳಿಗೆ ಪ್ರಚೋದನೆ, ಹಣ ಎಲ್ಲಿಂದ ಬರುತ್ತೆಂದು ಗೊತ್ತಾಯಿತಲ್ಲ? ಸಂಯಮದ ಪಾಠ ಹೇಳಿಕೊಟ್ಟು, ಬದುಕುವ ಕಲೆ ತಿಳಿಸಬೇಕಾದ ಸರ್ಕಾರಗಳು, ಅಧ್ಯಾಪಕರುಗಳೇ ಸೇಫ್ ಸೆಕ್ಸ್ ಅಂತೆಲ್ಲ ಮಾತಾಡುವಂತಾಯಿತಲ್ಲ!? ಏಡ್ಸ್‌ಗೆ ಔಷಧಿ ತಯಾರಿಸುವ ಕಂಪನಿಗಳಂತೂ ಮುಂದಿನ ದಶಕಗಳಲ್ಲಿ ಅತ್ಯಂತ ಸಿರಿವಂತ ಕಂಪನಿಗಳಾಗಿಬಿಡುತ್ತವೆ. ಆದರೆ, ಈ ಔಷಧಗಳ ಒಳಮುಖವೇ ಬೇರೆ ಇದೆ. ಏಡ್ಸ್ ನಿಯಂತ್ರಕಗಳೆಂದು ಹೇಳಲಾಗುವ ಔಷಧಗಳು ದೇಹದ ನರಸ್ವಾಧೀನವನ್ನು ತಪ್ಪಿಸಿಬಿಡುತ್ತವೆ. ಅದಕ್ಕೇ ಏಡ್ಸ್ ಔಷಧ ತೆಗೆದುಕೊಂಡವರಿಗಿಂತ, ಔಷಧ ತೆಗೆದುಕೊಳ್ಳದವರೇ ದೀರ್ಘಕಾಲ ಬದುಕಿರುವ ಉದಾಹರಣೆಗಳು ಹೆಚ್ಚು ದೊರಕೋದು. ಇಷ್ಟಕ್ಕೂ ಏಡ್ಸೊಂದು ಕಾಯಿಲೆ ಅನ್ನುವ ಬಗ್ಗೆಯೇ ವೈದ್ಯಜಗತ್ತಿಗೆ ಅನುಮಾನವಿದೆ.
ಇದನ್ನೆಲ್ಲ ದೊಡ್ಡ ದನಿಯಲ್ಲಿ ಮಾತಾಡುವವರನ್ನು ಈ ಕಂಪನಿಗಳು ಉಳಿಸೋದೇ ಇಲ್ಲ. ಇಡಾಹೋ ಅಬ್ಸರ್ವರ್ ಪತ್ರಿಕೆಯಲ್ಲಿ ನಿರಂತರವಾಗಿ ಇವುಗಳ ಬಗ್ಗೆ ಬರೆಯುತ್ತಿದ್ದ ಡಾನ್ ಹಾರ್ಕಿನ್ಸನ್‌ನನ್ನು ಈ ಕಂಪನಿಗಳು ಕೊಂದೇ ಹಾಕಿದವು. ಅವನ ಪತ್ನಿ ಈಗಲೂ ವ್ಯಾಕ್ಸಿನ್ ಲಿಬರೇಶನ್ ಸಂಸ್ಥೆ ಕಟ್ಟಿಕೊಂಡು ಜನರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದ್ದಾಳೆ. ಲಿಯೊನಾರ್ಡೊ ಹಾರ್ವಿಸ್ಟ್ ಮತ್ತು ಜೇನ್ ಬರ್ಗ್ ಮಿಸ್ಟರ್ ಎಂಬ ಇಬ್ಬರು ಪತ್ರಕರ್ತರು ಇವುಗಳ ಬಗ್ಗೆ ಮಾತನಾಡಿ, ಅವರ ಬದುಕೇ ನರಕವಾಗಿ ಹೋಯ್ತು. ಒಂದೆರಡಲ್ಲ, ಇಂತಹ ಕಥೆಗಳು ಅನೇಕ. ಅದಕ್ಕೇ ಇವರುಗಳ ಬಗ್ಗೆ ಮಾತನಾಡೋದೇ ಬೇಡ ಅಂತ ಕೆಲವು ಸಜ್ಜನರು ಸುಮ್ಮನಿದ್ದುಬಿಟ್ಟಿದ್ದಾರೆ, ಇನ್ನು ಕೆಲವರು ಹಣಕ್ಕಾಗಿ ಬಾಯಿ ಮುಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟಿನ ಆಫ್ ಸೈನ್ಸ್‌ನ ವಿಜ್ಞಾನಿಯೊಬ್ಬರು ಮಕ್ಕಳ ಮುಂದೆ ಮಾತನಾಡುತ್ತಾ ಲಸಿಕೆಗಳ ಬಗ್ಗೆ ಮನಮುಟ್ಟುವಂತೆ ಹೇಳಿದರು.  WHO  ಅನ್ನು, ಬಿಲ್‌ಗೇಟ್ಸ್ ಅನ್ನು ಮನದುಂಬಿ ಹೊಗಳಿದರು. ಅನಂತರ ಆಪ್ತವಾಗಿ ಮಾತಾಡುತ್ತಾ ಕೇಳಿದಾಗ, WHO ಅಪ್ರಾಮಾಣಿಕ ಸಂಘಟನೆ ಎಂದು ಒಪ್ಪಿಕೊಂಡರು. ಮತ್ತೇಕೆ ನೀವು ಅದರ ವಿರುದ್ಧ ಮಾತಾಡೋದಿಲ್ಲ ಎಂದು ಕೇಳಿದ್ದಕ್ಕೆ, ಕೆಲಸ ಹೋಗುತ್ತಲ್ಲ!ಅನ್ನುವ ಉತ್ತರ ಬಂತು!
ಪ್ರತಿಯೊಂದು ರಾಷ್ಟ್ರವೂ ಆರೋಗ್ಯಕ್ಕೆಂದು ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತದೆ. ಅದರಲ್ಲಿ ಬಹುಪಾಲು ಔಷಧ ಮಾರುಕಟ್ಟೆಯ ಕುಯುಕ್ತಿಗೆ ಬಲಿಯಾಗಿ, ಅವೈಚಾರಿಕ ಔಷಧ ಚಿಕಿತ್ಸೆಗಳಿಗೆ ಪೋಲಾಗಿಬಿಡುತ್ತದೆ. ಅಷ್ಟು ಮಾತ್ರವಲ್ಲ, ಪ್ರಜೆಗಳ ಆರೋಗ್ಯವನ್ನೂ ಹದಗೆಡಿಸುತ್ತದೆ. ಜಸ್ಟಿಸ್ ಹಾಥಿ ೭೦ರ ದಶಕದಲ್ಲಿಯೇ ಹೇಳಿದ್ದರು, ಈ ದೇಶದಲ್ಲಿರುವ ಎಲ್ಲ ರಓಗಗಳಿಗೆ ೧೭೫ ಔಷಧಗಳು ಸಾಕು!ಅಂತ. ಇಂದು ೯೦ಸಾವಿರದಷ್ಟು ಔಷಧಗಳು ಹರಡಿ ಕುಂತಿವೆ. ಇದನ್ನು ಕೇಳಿಯೇ ಎದೆಭಾರವಾಗುತ್ತದೆ. ಈ ಎದೆ ಭಾರ ಔಷಧದಿಂದ ಇಳಿಯುವಂಥದ್ದಲ್ಲ, ಔಷಧಗಳು ಲುಪ್ತವಾಗೋದರಿಂದ ಮಾತ್ರ ಇಳಿಯುವಂಥದ್ದು!

2 Responses to ಮೂರನೆ ಮಹಾಯುದ್ಧ, ಔಷಧ ಮಾರುಕಟ್ಟೆಯದ್ದಾ?

  1. Sridhar

    Well explained

  2. Prabhu

    ನಿತ್ಯ ನೈಜತೆಯ ಲೇಖನ ಅದ್ಭುತ ಬರಹ ಕಣ್ಣ್ತೆರೆಸಿದ್ದಕ್ಕೆ ಕೋಟಿ ನಮನಗಳು ಈ ಲೇಖನ ಎಲ್ಲರೂ ಓದಲಿ

Leave a Reply