ವಿಭಾಗಗಳು

ಸುದ್ದಿಪತ್ರ


 

ಯುದ್ಧಮಾಡದೇ ಗೆಲ್ಲುವುದೇ ಚಾಣಕ್ಯ ತಂತ್ರ

ಚೀನಾ ತಾನು ತಯಾರಿಸಿದ ಕ್ಷಿಪಣಿಗಳನ್ನು ಪಾಕೀಸ್ತಾನಕ್ಕೆ ಕೊಟ್ಟು ನಮ್ಮ ವಿರುದ್ಧ ಅದನ್ನು ತಿರುಗಿಸಿ ಹೆದರಿಸುತ್ತಾ ಕುಳಿತಿತ್ತು. ಅನ್ಯ ಮಾರ್ಗವಿಲ್ಲದೇ ನಾವೂ ಅಳುತ್ತಾ ಆಗಾಗ ಚೀನಾದೆದುರು ತೆವಳುತ್ತಾ ಒಂದಿಡೀ ಐದು ದಶಕ ಕಳೆದುಬಿಟ್ಟೆವು. ಈಗ ಚಾಣಕ್ಯ ತಂತ್ರ ಹೆಣೆಯುತ್ತಿದ್ದೇವೆ. ಚೀನಾದೊಂದಿಗೆ ನಾವು ನೇರವಾಗಿ ಕಾದಾಡುತ್ತಲಿಲ್ಲ. ಅವರ ಬದ್ಧವೈರಿ ವಿಯೆಟ್ನಾಂಗೆ ‘ಬ್ರಹ್ಮೋಸ್’ ಮಿಸೈಲುಗಳನ್ನು ಕೊಟ್ಟು ಚೀನಾದ ವಿರುದ್ಧ ತಿರುಗಿಸಿ ನಿಲ್ಲಿಸುವಂತೆ ಮಾಡಿದ್ದೇವೆ. ತನಗೆ ಹೊಂದಿಕೊಂಡ ದಕ್ಷಿಣ ಸಮುದ್ರದಲ್ಲಿ ಏಕಸ್ವಾಮ್ಯ ಹೊಂದಿದ್ದ ಚೀನಾ ರೌಡಿಯಂತೆ ಮೆರೆಯುತ್ತಿದ್ದ ಕಾಲ ಈಗಿಲ್ಲ. ಅಮೇರಿಕಾ, ಜಪಾನ್ಗಳೊಂದಿಗೆ ಸೇರಿ ಭಾರತ ಸಬ್ಮೆರೀನ್ ಸಮರಾಭ್ಯಾಸ ನಡೆಸುವ ಮೂಲಕ ಈ ಸಾರ್ವಭೌಮತೆಯನ್ನು ಮುರಿದು ಬಿಸಾಡಿದೆ. ಜಗತ್ತಿನೆದುರು ಪಾಕೀಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದೂ, ಅದಕ್ಕೆ ಬೆಂಬಲ ಕೊಡುತ್ತಿರುವ ಚೀನಾವನ್ನು ಖಳನಾಯಕನೆಂದು ಬಿಂಬಿಸುವಲ್ಲಿ ನಾವಿಂದು ಯಶಸ್ವಿಯಾಗಿದ್ದೇವೆ.

 

12

‘ಚಾಣಕ್ಯ’ ಬುದ್ಧಿ ಮತ್ತೆಗೆ, ಕುಶಲ ರಾಜನೀತಿಗೆ, ಕಠೋರ ದಂಡನೀತಿಗೆ, ಪ್ರಖಂಡ ದೇಶಭಕ್ತಿಗೆ, ಉಗ್ರ ಸಂಕಲ್ಪಕ್ಕೆ ಪಯರ್ಾಯ ಹೆಸರಿದ್ದಂತೆ. ನಂದರ ಸಾಮ್ರಾಜ್ಯದ ಮೂಲೋತ್ಪಾಟನೆಯ ಆತನ ಸಂಕಲ್ಪಕ್ಕೆ ಪರಿಸರ ರೂಪುಗೊಳ್ಳುತ್ತಿತ್ತು. ವಿಶ್ರಾಂತಿಗೆ ಒಂದರೆಕ್ಷಣ ಬಿಡುವಿರಲಿಲ್ಲ. ಮುಂದಿನ ಯೋಜನೆಗೆ ಬೀಜವಾಗಬಲ್ಲ ಉಪಾಯವೊಂದು ಹೊಳೆದಿತ್ತು. ಅದನ್ನು ಚಂದ್ರಗುಪ್ತನೆದುರು ಬಿಡಿಸಿಟ್ಟರು. ಅದಕ್ಕೆ ಪೂರಕವಾಗುವ ಪತ್ರವೊಂದನ್ನು ಬರೆದು ಅವನ ಕೈಲಿಟ್ಟು ಕೆಲಸ ಪೂರೈಸಿಕೊಂಡು ಆದಷ್ಟು ಬೇಗ ಮರಳಿ ಬಾರೆಂದು ಕಳಿಸಿಕೊಟ್ಟರು.
ಆ ಪತ್ರವನ್ನೊಯ್ದ ಚಂದ್ರಗುಪ್ತ ನೇರವಾಗಿ ಮಹಾ ಸೇನಾಪತಿ ಬಾಗುರಾಯಣನನ್ನು ಭೇಟಿ ಮಾಡಿ ಚಾಣಕ್ಯ ಹೇಳಿಕೊಟ್ಟ ಕಥೆಯನ್ನು ಮನಮುಟ್ಟುವಂತೆ ವಿವರಿಸಿದ. ದೇವಸ್ಥಾನದ ಉತ್ಸವವೊಂದಕ್ಕೆ ತನ್ನ ತಂದೆ ಮಿತ್ರರೊಬ್ಬರ ಬಳಿ ಇಟ್ಟ ಹಣ; ಅದನ್ನೀಗ ಬಳಸಿ ಉತ್ಸವ ನಡೆಸಲು ತನಗಿಂತ ಹಿರಿಯರ ಅನುಮತಿ ಇವೆಲ್ಲವನ್ನೂ ಹೇಳಿ ಪತ್ರವನ್ನು ಕೈಗಿಟ್ಟ. ಬಾಗುರಾಯಣ ಪಿತೃವಾಕ್ಯ ಪರಿಪಾಲನೆಗೆ ನಿಂತ ಮಗನ ನಿಷ್ಠೆಯಿಂದ ಸಂಪ್ರೀತನಾಗಿ ಚಂದ್ರಗುಪ್ತನ ಕೈಲೇ ಅವನ ತಂದೆಯ ಮಿತ್ರರಿಗೆ ಪತ್ರ ಬರೆಸಿ ಅದರ ಕೆಳಗೆ ಸ್ವಲ್ಪ ಸ್ಥಳ ಬಿಟ್ಟು ‘ಚಂದ್ರಗುಪ್ತನ ಅಭಿಮತ ಕಾರ್ಯವೇ ಬಾಗುರಾಯಣನಿಗೆ ಅಭಿಮತವು’ ಎಂದು ಸ್ವಹಸ್ತಾಕ್ಷರದಿಂದ ಬರೆದು ಸಹಿಯೊಂದಿಗೆ ಬೇಕಾದ ಮೊಹರನ್ನು ಹಾಕಿಸಿ ಕಳುಹಿಸಿದ. ಅಷ್ಟೇ ಅಲ್ಲ. ಆ ಪತ್ರಕ್ಕೆ ಇನ್ನಷ್ಟು ತೂಕ ಬರುವಂತೆ, ಭದ್ರಭಟ, ಡಿಂಗಿರಾತರೇ ಮೊದಲಾದ ಎಂಟು ಸೇನಾಪತಿಗಳ ಹಸ್ತಾಕ್ಷರವನ್ನೂ ಹಾಕಿಸಿ ಕೊಟ್ಟದ್ದು ವಿಶೇಷವಾಗಿತ್ತು. ಬಾಗುರಾಯಣನಿಗೆ ಚಾಣಕ್ಯನ ಮನೋಗತ ಅರಿವಾಗಿತ್ತು. ಮುಂದಿನ ನಡೆಯೇನಿರಬಹುದೆಂದು ಆತ ಊಹಿಸಿದ ಕೂಡ. ನಂದರ ದುಶ್ಚಕ್ರದಿಂದ ಮಗಧದ ರಕ್ಷಣೆಗೆ ಸಕಾಲವೊದಗಿದೆ ಎಂಬುದನ್ನು ಆತ ಅಥರ್ೈಸಿಕೊಂಡ. ಅಷ್ಟೇ ಅಲ್ಲ. ತನ್ನ ನಂಬಿದ ಸೇನಾಪತಿಗಳಿಗೆ ಅದನ್ನು ಒಪ್ಪಿಸಿ ಮುಂದಿನ ಯೋಜನೆಗಳಿಗೆ ಅಣಿಗೊಳಿಸಿದ. ರಾಷ್ಟ್ರದ ಅಭ್ಯುದಯ ಮತ್ತು ಜನತೆಯ ರಕ್ಷಣೆ ಅವರ ಮೊದಲ ಆದ್ಯತೆಯಾಗಿತ್ತು. ಅವರು ಅಮಾತ್ಯ ರಾಕ್ಷಸನಂತೆ ಸ್ವಾಮಿನಿಷ್ಠೆಗೆ ರಾಜ್ಯದ ಹಿತವನ್ನು ಬಲಿಕೊಟ್ಟಿರಲಿಲ್ಲ!
ಚಂದ್ರಗುಪ್ತನಿಗೆ ಈ ಪತ್ರದ ಮಹತ್ವವೇನೆಂದು ತಿಳಿದಿರಲಿಲ್ಲ. ಆತ ಚಾಣಕ್ಯರಿಗೆ ಅದನ್ನು ಹಸ್ತಾಂತರಿಸಿ ಸುಮ್ಮನಾದ. ಪತ್ರ ಕಂಡೊಡನೆ ಚಾಣಕ್ಯರ ಕಂಗಳು ಅರಳಿದವು. ಬಾಗುರಾಯಣರ ಒಟ್ಟಾರೆ ಮನಸ್ಥಿತಿಯನ್ನು ಅರಿತು ನಿರಾಳವಾದರು. ಪತ್ರದಲ್ಲಿ ಚಂದ್ರಗುಪ್ತ ಬರೆದ ಅಷ್ಟೂ ಭಾಗವನ್ನೂ ಹರಿದು ಬಿಸಾಡಿ ಸೇನಾಪತಿಗಳ ಸಹಿಯ ಭಾಗವನ್ನಷ್ಟೇ ಜೊತೆಯಲ್ಲಿ ಉಳಿಸಿಕೊಂಡರು. ಚಂದ್ರಗುಪ್ತನತ್ತ ತಿರುಗಿ ಪರ್ವತೇಶ್ವರನ ಬಳಿ ಹೊರಡುವ ಹೊತ್ತು ಬಂದಿದೆ ಸಿದ್ಧನಾಗೆಂದರು.
ನಂದರಿಗೆ ಖಾಸಾ ದೋಸ್ತ್ ಆಗಿಲ್ಲದಿದ್ದರೂ ಶತ್ರುವಾಗಿರದ ಪರ್ವತೇಶ್ವರನನ್ನು ರಾಜ್ಯದ ಆಮಿಷ ಒಡ್ಡಿ, ತಮ್ಮ ಬುದ್ಧಿಮತ್ತೆಯನ್ನು ಅವನೆದುರು ಅನಾವರಣಗೊಳಿಸಿ ತಮ್ಮೆಡೆಗೆ ಸೆಳೆದುಕೊಳ್ಳುವ ಪ್ರಯತ್ನಕ್ಕೆ ಚಾಣಕ್ಯರ ಸದ್ದಿಲ್ಲದೇ ಸಿದ್ಧವಾದರು. ಆ ವೇಳೆಗಾಗಲೇ ಚಂದ್ರಗುಪ್ತ-ಚಾಣಕ್ಯರು ಒಟ್ಟಾಗಿರುವ, ನಂದರ ಮೂಲೋತ್ಪಾಟನೆ ಮಾಡುವ ಸಂಕಲ್ಪಗೈದಿರುವ ಸುದ್ದಿ ಪರ್ವತ ರಾಜನಿಗೆ ಖಂಡಿತ ತಲುಪಿರುತ್ತದೆಂಬುದು ಆಚಾರ್ಯರಿಗೆ ಗೊತ್ತಿತ್ತು. ಹೀಗಾಗಿಯೇ ಚಂದ್ರಗುಪ್ತನೊಂದಿಗೆ ಪರ್ವತ ರಾಜ್ಯಕ್ಕೆ ತೆರಳಿದರು ಚಾಣಕ್ಯ. ರಾಜದ್ವಾರದಲ್ಲಿ ನಿಂತು ತಮ್ಮಾಗಮನದ ಸುದ್ದಿಯನ್ನು ರಾಜನಿಗೆ ಕಳಿಸಿದರು. ಅವರ ಈ ನಡೆಯನ್ನು ಊಹಿಸಿರದಿದ್ದ ಪರ್ವತೇಶ ಲಗುಬಗೆಯಿಂದ ಅವರನ್ನು ಒಳಗೆ ಕರೆಸಿಕೊಂಡು ಉಪಚರಿಸಿದ. ಕುಶಲೋಪರಿ ವಿಚಾರಿಸಿದ. ಬಂದ ಕಾರ್ಯವೇನೆಂದು ವಿಚಾರಿಸಲು, ಆಚಾರ್ಯರು ಹೇಳಿದ ಕಾರಣ ಕೇಳಿ ಯಾವುದೂ ಗೊತ್ತೇ ಇಲ್ಲವೆಂಬಂತೆ ನಟಿಸಿದ. ಇಡಿಯ ಆರ್ಯಾವರ್ತದಲ್ಲಿಯೇ ಬಹುಚರ್ಚಿತ ವಿಷಯ ಪರ್ವತರಾಜನಿಗೆ ತಿಳಿದಿಲ್ಲವೆಂಬುದು ನಂಬಲು ಯೋಗ್ಯ ವಿಷಯವೇ ಆಗಿರಲಿಲ್ಲ. ಚಾಣಕ್ಯರು ಮರು ಮಾತಾಡಲಿಲ್ಲ. ಮರುದಿನ ಭೇಟಿಯಾಗುವ ಭರವಸೆಯೊಂದಿಗೆ ಬೀಳ್ಕೊಂಡರು.
ಚಾಣಕ್ಯನ ಈ ನಡೆ ಬಲು ವಿಲಕ್ಷಣವಾಗಿತ್ತು. ಪರ್ವತರಾಜ ಇವರೀರ್ವರನ್ನೂ ಬಂಧಿಸಿ ನಂದರ ಕೈಗೆ ಒಪ್ಪಿಸಿದ್ದರೆ ಬೃಹತ್ ಸಾಮ್ರಾಜ್ಯದೆದುರು ಅವನ ಮೌಲ್ಯ ವೃದ್ಧಿಸಿಬಿಡುತ್ತಿತ್ತು. ನಂದರ ನಂತರ ಸಾಮ್ರಾಜ್ಯವನ್ನು ಆಳುವ ಸಮರ್ಥರಿಲ್ಲದೇ ತಮ್ಮದೇ ಪ್ರಜೆಗಳಿಂದ ಛೀಮಾರಿಗೊಳಗಾದ ದೇಶವನ್ನು ವಶಪಡಿಸಿಕೊಳ್ಳುವುದು ಪರ್ವತೇಶನಿಗೂ ಸುಲಭವಾಗುತ್ತಿತ್ತು. ಆದರೆ ಚಾಣಕ್ಯರ ನಿರ್ಧಾರ ಅಚಲವಾಗಿತ್ತು. ಪರ್ವತ ರಾಜನ ಸ್ವಾಭಿಮಾನ, ಮಹತ್ವಾಕಾಂಕ್ಷೆಗಳ ಅರಿವು ಮತ್ತು ಶರಣಾಗತರೊಂದಿಗೆ ಆತ ಅಹಿತಕಾರಿಯಾಗಿ ನಡೆದುಕೊಳ್ಳಲಾರನೆಂಬ ಭರವಸೆ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ಪರ್ವತರಾಜ್ಯದ ಮಂತ್ರಿ ಶಬರವರ್ಮನ ಸೂಕ್ಷ್ಮಮತಿಯ ಮೇಲೆ ವಿಶ್ವಾಸ!
ಪರ್ವತೇಶ ಗೊಂದಲಕ್ಕೆ ಬಿದ್ದಿದ್ದ. ಒಂದೆಡೆ ಚಾಣಕ್ಯನಂತಹ ಪ್ರಖರ ತಪಸ್ವಿಯ ಬ್ರಹ್ಮತೇಜದೊಂದಿಗೆ ಸೇರಿರುವ ಚಂದ್ರಗುಪ್ತನ ಕ್ಷಾತ್ರಶಕ್ತಿ. ಮತ್ತೊಂದೆಡೆ ಸ್ವಲ್ಪ ಎಡವಟ್ಟಾದರೂ ಮಗಧದ ಅಮಾತ್ಯ ರಾಕ್ಷಸನ ಕೋಪಕ್ಕೆ ತುತ್ತಾಗುವ ಹೆದರಿಕೆ. ಮಂತ್ರಿಯೊಂದಿಗೆ ಸಾಕಷ್ಟು ಸಮಾಲೋಚಿಸಿದ. ನಿರಾಕರಣೆ ಮಾಡಿ ಚಾಣಕ್ಯರ ಸ್ನೇಹ ಕಳೆದುಕೊಳ್ಳುವ ಇಚ್ಛೆಯೂ ಇರಲಿಲ್ಲವಾದ್ದರಿಂದ ಅವರಿಂದ ಕೈ ತೊಳಕೊಳ್ಳುವ ಉಪಾಯ ಹುಡುಕಿದ. ಮರುದಿನವೇ ಚಾಣಕ್ಯ ಚಂದ್ರಗುಪ್ತರನ್ನು ಆಸ್ಥಾನಕ್ಕೆ ಕರೆಸಿ ಲಂಪಾಕಾಧಿಪತಿ ತನ್ನ ಸ್ನೇಹಿತರನ್ನೆಲ್ಲಾ ಸೇರಿಸಿಕೊಂಡು ದಾಳಿಯ ತಯಾರಿ ನಡೆಸುತ್ತಿರುವುದರಿಂದ ಈ ಹೊತ್ತಲ್ಲಿ ಚಂದ್ರಗುಪ್ತನೊಂದಿಗೆ ಸೇನೆಯ ಸಮೇತ ಬರಲಾಗದೆಂದ. ಇದನ್ನು ಮೊದಲೇ ನಿರೀಕ್ಷಿಸಿದ್ದವರಂತೆ ವಿಚಲಿತರಾಗದ ಚಾಣಕ್ಯ ಪ್ರತಿ ಬಾರಿ ಯುದ್ಧ ಮಾಡಿ ರಕ್ತ ಹರಿಸಿಯೇ ಗೆಲ್ಲುವುದು ರಾಜನಿಗೆ ಶೋಭೆಯಲ್ಲ ಎಂದರು. ಯುದ್ಧಕ್ಕೂ ಮುನ್ನ ಶತ್ರುವನ್ನು ಗೆಲ್ಲುವ ಉಪಾಯಗಳನ್ನು ಪೂರ್ತಿ ಪ್ರಯೋಗಿಸಿಯೇ ಮುಂದಿನದಕ್ಕೆ ತಯಾರಿ ನಡೆಸಬೇಕು ಎಂದರು. ಪರ್ವತೇಶನಿಗೆ ಇದೇಕೋ ಸರಿ ಕಾಣಲಿಲ್ಲ. ಚಾಣಕ್ಯರಿಗೆ ಆತ ಸವಾಲೆಸೆದ. ನೇರ ಹಣಾಹಣಿಯೇ ಇಲ್ಲದೇ ಲಂಪಾಕಾಧಿಪತಿಗಳನ್ನು ಸೋಲಿಸುವ ಉಪಾಯವಿದೆಯೇನು? ಎಂದ! ಚಾಣಕ್ಯ ತಲೆಯಾಡಿಸಿದರು. ಇಬ್ಬರಿಗೂ ಶತ್ರುವಲ್ಲದ ತಟಸ್ಥ ರಾಜ್ಯವೊಂದರ ಕುರಿತಂತೆ ಆಲೋಚಿಸಿ ಕಾಮರೂಪ(ಅಸ್ಸಾಂ)ದ ರಾಜನೊಂದಿಗೆ ನಡೆಸಬೇಕಾಗಿರುವ ಚದುರಂಗದಾಟವನ್ನು ರಾಜನಿಗೆ ಏಕಾಂತದಲ್ಲಿ ಅರುಹಿದರು. ರಾಜ ಅವಾಕ್ಕಾದ. ಆ ಕೂಡಲೇ ತನ್ನೊಬ್ಬ ಆಪ್ತನನ್ನು ಕರೆದು ಚಾಣಕ್ಯ ಹೇಳಿದಂತೆ ಕೇಳೆಂದು ಆಜ್ಞಾಪಿಸಿದ.
ಈಗ ನಿಜವಾದ ಸವಾಲು. ನಂದರನ್ನು ಯುದ್ಧದಲ್ಲಿ ಸೋಲಿಸುವ ಮುನ್ನ ಪರ್ವತೇಶನನ್ನು ಗೆಲ್ಲಿಸಬೇಕಿತ್ತು. ಆ ಮೂಲಕ ಪರ್ವತೇಶ ಮಾಡಿದ್ದು ಉಪಕಾರವಲ್ಲ, ಪ್ರತ್ಯುಪಕಾರವೆಂದು ಚಿರಸ್ಥಾಯಿ ಮಾಡುವ ಅವಕಾಶ ಈಗ ದಕ್ಕಿತ್ತು. ರಾಜನ ಆಪ್ತನಿಗೆ ಮುಂದಿನ ಎಲ್ಲಾ ಕೆಲಸ ಮನದಟ್ಟು ಮಾಡಿಸಿ ಕಾಮರೂಪದ ಪ್ರಾಗ್ಜೋತಿಷಪುರಕ್ಕೆ ಕಳಿಸಿದ ಚಾಣಕ್ಯ. ಆತ ಊರ ಹೊರಗೆ ಬೀಡು ಬಿಟ್ಟ. ಒಂದೆರಡು ದಿನದೊಳಕ್ಕೇ ಪರ್ವತರಾಜ್ಯದಿಂದ ಮತ್ತೊಬ್ಬ ವ್ಯಕ್ತಿ ಪ್ರಾಗ್ಜೋತಿಷಪುರಕ್ಕೆ ಹೋಗಿ ಗೂಢಚಾರರೇ ತುಂಬಿರುವ ಜಾಗದಲ್ಲಿ ‘ಪರ್ವತ ರಾಜ್ಯದಿಂದ ಬಂದ ರಾಜ ನಿಯೋಗ ಎಲ್ಲಿದೆ ಹೇಳುವಿರಾ?’ ಎಂದು ಕೇಳಿದ. ಅನುಮಾನಗೊಂಡ ಚಾರರು ಅವನನ್ನು ರಾಜನ ಬಳಿಗೆ ಕರೆದೊಯ್ದರು. ಆತ ನಡೆದುದನ್ನು ವಿವರಿಸಿದ. ‘ಪರ್ವತ ರಾಜನಿಂದ ಕಳಿಸಲ್ಪಟ್ಟ ನಿಯೋಗವೊಂದು ತಮ್ಮನ್ನೇ ಭೇಟಿಮಾಡುವ ಕಾರಣದಿಂದ ಇಲ್ಲಿ ಬೀಡುಬಿಟ್ಟಿದ್ದಾರೆ. ಆದರೆ ಈ ನಡುವೆಯೇ ತುತರ್ಾಗಿ ಅವರನ್ನು ಭೇಟಿ ಮಾಡಿ ಈ ಪತ್ರ ನೀಡುವಂತೆ ರಾಜ ನನ್ನನ್ನು ಕಳಿಸಿದ’ ಎಂದ ಆತ. ಕಾಮರೂಪಾಧಿಪತಿ ಆ ಪತ್ರವನ್ನು ಕಸಿದುಕೊಂಡು ಚಾರನನ್ನು ಗಮನವಿಟ್ಟು ನೋಡಿಕೊಳ್ಳಿರೆಂದು ಹೇಳಿ, ಪರ್ವತ ರಾಜ್ಯದಿಂದ ಬಂದಿರುವ ನಿಯೋಗವನ್ನು ಹುಡುಕಿ ಕರೆತನ್ನಿರೆಂದು ಭಟರಿಗೆ ಆಜ್ಞಾಪಿಸಿದ. ಊರ ಹೊರಗೆ ಬಿಡಾರ ಹೂಡಿದ್ದ ನಿಯೋಗ ಅಪಾರ ಸಂಪತ್ತಿನೊಂದಿಗೆ ರಾಜನೆದುರು ನಿಂತಿತು. ಆ ನಿಯೋಗದ ಖದರಿನಿಂದ ಬೆರಗಾದ ಪ್ರಾಗ್ಜೋತಿಷಪುರದ ಜನತೆ ಅವರ ಆಗಮನದ ಕಾರಣವನ್ನು ಬಗೆ ಬಗೆಯಾಗಿ ಊಹಿಸಲಾರಂಭಿಸಿತು. ರಾಜನೂ ಈ ನಿಯೋಗದ ವಿನಯಕ್ಕೆ ತಲೆದೂಗಿ ಬಂದ ಕಾರಣವನ್ನು ಕೇಳಿದ.
ಚಾಣಕ್ಯನ ಯೋಜನೆ ಕೆಲಸ ಮಾಡಲಾರಂಭಿಸಿತು. ನಿಯೋಗದ ಮುಖ್ಯಸ್ಥ ಪರ್ವತ ರಾಜನ ಮಗನಿಗೆ ತಮ್ಮ ಮಗಳನ್ನು ತಂದುಕೊಳ್ಳಬೇಕೆಂಬ ಬಯಕೆಯಿರುವುದನ್ನೂ ಸೂಕ್ಷ್ಮವಾಗಿ ವಿವರಿಸಿ ಈ ಸಂಬಂಧ ಗಟ್ಟಿಯಾದರೆ ಎರಡೂ ರಾಜ್ಯಗಳ ಸಂಬಂಧಗಳೂ ವೃದ್ಧಿಯಾಗಲಿರುವುದನ್ನು ಕೊಂಡಾಡಿದ. ಕಾಮರೂಪಾಧಿಪತಿಗೆ ಸ್ವರ್ಗಕ್ಕೆ ಮೂರೇ ಗೇಣು. ಆ ಭಾಗದ ಸಿರಿವಂತ, ಸಮೃದ್ಧ ರಾಜನೋರ್ವ ತನ್ನೊಂದಿಗೆ ಈ ರೀತಿಯ ಸಂಬಂಧ ಬೆಳೆಸಲೆತ್ನಿಸಿರುವುದು ಅವನ ಪಾಲಿಗೆ ರೋಮ ಹರ್ಷವಾಗಿತ್ತು. ಆ ತಕ್ಷಣಕ್ಕೆ ನೆನಪಾದವನಂತೆ ಆತ ಈ ಮುನ್ನ ಬಂಧಿತನಾಗಿದ್ದ ಪರ್ವತ ರಾಜ್ಯದ ಚಾರನನ್ನು ಕರೆತರಿಸಿದ. ಗುಪ್ತ ರೀತಿಯಲ್ಲಿ ಆತ ಬರೆದು ತಂದಿದ್ದ ಪತ್ರವನ್ನು ನಿಯೋಗದ ಮುಖ್ಯಸ್ಥನ ಕೈಲಿಟ್ಟ ರಾಜ. ಪತ್ರವನ್ನು ತೆರೆದು ಓದಿದಾಕ್ಷಣ ಆತನ ಮುಖ ಕಪ್ಪಿಟ್ಟಿತು. ಆತ ಬಸವಳಿದಂತೆ ಕಂಡ. ಮುಂದೇನು ಹೇಳಲೂ ತೋಚದವನಾಗಿ ನಾಚಿ ತಲೆತಗ್ಗಿಸಿ ನಿಂತ. ರಾಜ ಆಶ್ಚರ್ಯಚಕಿತನಾಗಿ ಪತ್ರದಲ್ಲೇನಿದೆಯೆಂದು ಕೇಳಿದರೆ, ‘ಕಾಮರೂಪಾಧಿಪತಿಗಳ ವಂಶ ಪವಿತ್ರ ಕ್ಷತ್ರಿಯ ವಂಶವಲ್ಲ, ಹೀಗಾಗಿ ಅವರಲ್ಲಿ ಹೇಳಿಕೊಳ್ಳುವಷ್ಟು ಶೌರ್ಯವಿಲ್ಲ ಎಂದು ಲಂಪಾಕಾಧಿಪತಿ ಹೇಳಿಕೊಂಡು ತಿರುಗಾಡುತ್ತಿದ್ದಾನೆ. ಹೀಗಾಗಿ ಸಂಬಂಧ ಬೆಳಸುವ ಮುನ್ನ ಎಲ್ಲವನ್ನೂ ಯೋಚಿಸಿ ಮಾತನಾಡಿ’ ಎಂದಿದೆ ಎಂದು ನಿಯೋಗಾಧಿಪತಿ ಭಿನ್ನವಿಸಿಕೊಂಡ.
ಈಗ ಕೆಂಡಾಮಂಡಲವಾಗುವ ಸರದಿ ರಾಜನದ್ದಾಗಿತ್ತು. ಲಂಪಾಕ ರಾಜನ ಧಾಷ್ಟ್ರ್ಯ ಅವನನ್ನು ರೊಚ್ಚಿಗೆಬ್ಬಿಸಿತ್ತು. ಮಂತ್ರಿಗಳತ್ತ ತಿರುಗಿ ಯುದ್ಧಕ್ಕೆ ತಯಾರಾಗುವಂತೆ ಆದೇಶಿಸಿದ ರಾಜ, ಲಂಪಾಕಾಧಿಪತಿಗೆ ಸರಿಯಾಗಿ ಪಾಠ ಕಲಿಸಿಯೇ ಮುಂದಿನ ಸಂಬಂಧವರ್ಧನೆ ಎಂದ.
ತಟಸ್ಥನಾಗಿದ್ದ ಕಾಮರೂಪದ ದೊರೆಗಳು ಲಂಪಾಕದ ಮೇಲೆ ಏರಿಹೋದರು. ಅಲ್ಲಿನ ರಾಜನಿಗೆ ಈ ಬಗೆಯ ಕದನದ ಊಹೆಯೂ ಇಲ್ಲವಾದುದರಿಂದ ಆತ ಸಹಜವಾಗಿಯೇ ಇವರನ್ನೆದುರಿಸಲು ಹೈರಾಣಾಗಿ ಪರ್ವತ ರಾಜ್ಯದ ಮೇಲೆ ಏರಿ ಹೋಗುವುದನ್ನೂ ಮರೆತ. ಚಾಣಕ್ಯನ ಯುದ್ಧನೀತಿ ಗೆದ್ದುಬಿಟ್ಟಿತು. ಪರ್ವತ ರಾಜ್ಯದ ಕುಶಲ ಮಂತ್ರಿಗಳು, ರಾಜರೂ ಚಾಣಕ್ಯನ ಬುದ್ಧಿಮತ್ತೆಗೆ ತಲೆದೂಗಿದರು. ಸಂಧಿಮಾಡಿಕೊಳ್ಳುವುದು ಹೇಡಿತನವೆನಿಸಿದರೆ ರಕ್ತ ಪಾತವಿಲ್ಲದೇ ಯುದ್ಧ ಗೆಲ್ಲುವುದು ಬುದ್ಧಿ ಕೌಶಲವಾಗಿತ್ತು. ಚಾಣಕ್ಯನೊಂದಿಗಿರುವುದೆಂದರೆ ಗೆಲುವಿನೊಂದಿಗಿರುವುದೆಂಬುದು ಪರ್ವತೇಶನಿಗಂತೂ ಈಗ ಖಾತ್ರಿಯಾಗಿತ್ತು!
ಯುದ್ಧ ನೀತಿಗಳು ಹಾಗೆಯೇ ಇರಬೇಕು. ಜಗತ್ತೆಲ್ಲಾ ಚೆನ್ನಾಗಿ ಬದುಕಲಿ ಎಂಬ ಪ್ರಾರ್ಥನೆ ಮಾಡಲೇಬೇಕು. ಆದರೆ ಹಾಗೆ ಪ್ರಾಥರ್ಿಸಲು ನಾವು ನಿಂತ ನೆಲ ಗಟ್ಟಿಯಾಗಿರಬೇಕಲ್ಲ! ಪಾಕೀಸ್ತಾನ ದಾಳಿ ಮಾಡಿದಾಗಲೆಲ್ಲ ಭಾರತ, ಪಾಕೀಸ್ತಾನವನ್ನೇ ದೂಷಿಸುವುದು ಸಹಜ. ಇಲ್ಲಿನ ಪ್ರತಿ ಮಂತ್ರಿಗೂ, ಅಧಿಕಾರಿಗೂ, ಸೈನಿಕನಿಗೂ ಗೊತ್ತು; ದಾಳಿಯ ಹಿಂದಿನ ಕೈವಾಡ ಚೈನಾದ್ದೇ ಅಂತ. ಚೀನಾ ನಮ್ಮೊಂದಿಗೆ ನೇರ ಯುದ್ಧಕ್ಕಿಳಿಯದೇ ನಮ್ಮನ್ನು ಸೋಲಿಸಿಬಿಟ್ಟಿತ್ತು! ತಾನು ತಯಾರಿಸಿದ ಕ್ಷಿಪಣಿಗಳನ್ನು ಪಾಕೀಸ್ತಾನಕ್ಕೆ ಕೊಟ್ಟು ನಮ್ಮ ವಿರುದ್ಧ ಅದನ್ನು ತಿರುಗಿಸಿ ಹೆದರಿಸುತ್ತಾ ಕುಳಿತಿತ್ತು. ಅನ್ಯ ಮಾರ್ಗವಿಲ್ಲದೇ ನಾವೂ ಅಳುತ್ತಾ ಆಗಾಗ ಚೀನಾದೆದುರು ತೆವಳುತ್ತಾ ಒಂದಿಡೀ ಐದು ದಶಕ ಕಳೆದುಬಿಟ್ಟೆವು. ಈಗ ಚಾಣಕ್ಯ ತಂತ್ರ ಹೆಣೆಯುತ್ತಿದ್ದೇವೆ. ಚೀನಾದೊಂದಿಗೆ ನಾವು ನೇರವಾಗಿ ಕಾದಾಡುತ್ತಲಿಲ್ಲ. ಅವರ ಬದ್ಧವೈರಿ ವಿಯೆಟ್ನಾಂಗೆ ‘ಬ್ರಹ್ಮೋಸ್’ ಮಿಸೈಲುಗಳನ್ನು ಕೊಟ್ಟು ಚೀನಾದ ವಿರುದ್ಧ ತಿರುಗಿಸಿ ನಿಲ್ಲಿಸುವಂತೆ ಮಾಡಿದ್ದೇವೆ. ತನಗೆ ಹೊಂದಿಕೊಂಡ ದಕ್ಷಿಣ ಸಮುದ್ರದಲ್ಲಿ ಏಕಸ್ವಾಮ್ಯ ಹೊಂದಿದ್ದ ಚೀನಾ ರೌಡಿಯಂತೆ ಮೆರೆಯುತ್ತಿದ್ದ ಕಾಲ ಈಗಿಲ್ಲ. ಅಮೇರಿಕಾ, ಜಪಾನ್ಗಳೊಂದಿಗೆ ಸೇರಿ ಭಾರತ ಸಬ್ಮೆರೀನ್ ಸಮರಾಭ್ಯಾಸ ನಡೆಸುವ ಮೂಲಕ ಈ ಸಾರ್ವಭೌಮತೆಯನ್ನು ಮುರಿದು ಬಿಸಾಡಿದೆ. ಜಗತ್ತಿನೆದುರು ಪಾಕೀಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದೂ, ಅದಕ್ಕೆ ಬೆಂಬಲ ಕೊಡುತ್ತಿರುವ ಚೀನಾವನ್ನು ಖಳನಾಯಕನೆಂದು ಬಿಂಬಿಸುವಲ್ಲಿ ನಾವಿಂದು ಯಶಸ್ವಿಯಾಗಿದ್ದೇವೆ. ಅದರ ಪರಿಣಾಮವೇ ತೀರಾ ಇತ್ತೀಚೆಗೆ ಚೀನಾದ ಸರ್ಕಾರಿ ಮಾಧ್ಯಮ ಮುಂಬೈ ದಾಳಿಯ ನೇರ ಹೊಣೆ ಪಾಕೀಸ್ತಾನದ್ದು ಅಂತ ಅನಿವಾರ್ಯವಾಗಿ ಹೇಳಬೇಕಾಗಿದ್ದು. ನೇರ ಯುದ್ಧ ಕೊನೆಯ ಮಾರ್ಗ. ಸಾಮ, ದಾನ, ಭೇದಗಳನ್ನು ಸರಿಯಾಗಿ ಬಳಸಿ ಕೊನೆಗೂ ಲಾಭವಿಲ್ಲವೆಂದರೆ ಮಾತ್ರ ದಂಡ! ಭಾರತ ಈಗೀಗ ಚಾಣಕ್ಯ ನೀತಿಯನ್ನು ಅರಿಯುತ್ತಿದೆ.

13
ಹ್ಞಾಂ! ಪರ್ವತರಾಜ ತನ್ನೆಲ್ಲಾ ಸಾಮಂತರಾಜರಿಗೂ ಕರೆ ಕಳುಹಿಸಿದ. ಮಗಧ ಸಾಮ್ರಾಜ್ಯವನ್ನು ಸೋಲಿಸುವ, ಚಂದ್ರಗುಪ್ತನನ್ನು ಪಟ್ಟಾಭಿಷಕ್ತನಾಗಿಸುವ ಮಹತ್ವದ ಕಾರ್ಯಕ್ಕೆ ಕೈ ಜೋಡಿಸುವಂತೆ ಕೇಳಿಕೊಂಡ. ಸೇನೆ ಸಿದ್ಧವಾಗಿ ನಿಂತಿತು. ಚಂದ್ರಗುಪ್ತ ಈ ಬೆಳವಣಿಗೆಗಳನ್ನು ಚಿಕ್ಕ ಮಗುವಿನಂತೆ ನೋಡುತ್ತ ಕುಳಿತಿದ್ದ. ಅವನೆದುರಿಗೆ ಚಾಣಕ್ಯ ಅಗಾಧವಾಗಿ ಬೆಳೆದು ನಿಂತ ಶಕ್ತಿಯಾಗಿ ಕಂಡ! ಚಾಣಕ್ಯನ ಸಾಮಥ್ರ್ಯದ ಮೇಲೆ ಅವನಿಗೆ ಅಪನಂಬಿಕೆ ಯಾವಾಗಲೂ ಇರಲಿಲ್ಲ. ಈಗ ಅದು ವಿಶ್ವಾಸವಾಗಿ ಬದಲಾಗಿತ್ತು ಅಷ್ಟೇ!
ಇತ್ತ ಚಾಣಕ್ಯ ಪಾಟಲೀಪುತ್ರದಲ್ಲಿ ನೇಮಿಸಿದ ತನ್ನದೇ ಗೂಢಚಾರ ಪಡೆ, ರಾಕ್ಷಸನ ಸುತ್ತಲೂ ಯಶಸ್ವಿಯಾಗಿ ಬಲೆ ನೇಯ್ದಿತ್ತು. ಪರಮ ಬುದ್ಧಿವಂತ ರಾಕ್ಷಸ ಯಾಮಾರಿದ್ದ. ಅವನೀಗ ಬುದ್ಧಾನುಯಾಯಿಯ ವೇಷದಲ್ಲಿದ್ದ ಇಂದುಶರ್ಮನನ್ನು ಬಿಟ್ಟು ಯಾವ ನಿರ್ಣಯವನ್ನೂ ಕೈಗೊಳ್ಳುತ್ತಿರಲಿಲ್ಲ. ರಾಜಕಾರಣದ ಅತ್ಯಂತ ಸೂಕ್ಷ್ಮ ಸಂಗತಿಗಳನ್ನೂ ಅವನೆದುರು ಮನಬಿಚ್ಚಿ ಹೇಳುತ್ತಿದ್ದ. ಅದು ಕೆಲವೇ ಗಂಟೆಗಳಲ್ಲಿ ಚಾಣಕ್ಯನ ಕಿವಿ ಸೇರುತ್ತಿತ್ತು. ಚಾಣಕ್ಯನ ಮುಂದಿನ ಯೋಜನೆಗಾಗಿ ಅನುಕೂಲವೂ ಆಗುತ್ತಿತ್ತು. ಅತ್ತಲಿಂದ ಸಂಗ್ರಹಗೊಂಡ ವಿಚಾರಗಳನ್ನು ಅಗತ್ಯವಿದ್ದಷ್ಟು ಇತ್ತ ಹೇಳಿ ಇಲ್ಲಿಯೂ ಸಮರ್ಥ ಜ್ಯೋತಿಷಿಯಾಗಿಬಿಟ್ಟಿದ್ದ ಜೀವಸಿದ್ಧಿ.
ಅಂದು ಬೆಳಗ್ಗೆ ಒಲ್ಲದ ಮನಸ್ಸನ್ನು ಸೆಳೆದುಕೊಂಡೇ ರಾಕ್ಷಸ ಜೀವಸಿದ್ಧಿಯ ಬಳಿ ಬಂದ. ರಾಕ್ಷಸನ ಮುಖನೋಡಿದೊಡನೆ ಆತ ಚಿಂತೆಯ ಗೆರೆಗಳು ಕಾಣುತ್ತಿವೆ ಎಂದ. ಒಂದಷ್ಟು ಲೆಕ್ಕಾಚಾರ ಮಾಡುವಂತೆ ಮಾಡಿ, ಶತ್ರು ಸೇನೆ ಮಗಧವನ್ನು ಆವರಿಸಿದೆ; ಸಾಗರದ ಪ್ರತಿಯೊಂದು ಬಿಂದುವೂ ಒಬ್ಬ ಸೈನಿಕನೆನ್ನುವಂತೆ ಇದೆ ಆ ಸೇನೆ ಎಂದ. ಪ್ರಳಯ, ಅಕ್ಷರಶಃ ಪ್ರಳಯ ಎಂದ. ಗಾಬರಿಯಾಗಿ ಕಾಲಿಗೆ ಬಿದ್ದ ರಾಕ್ಷಸ ಮುಂದೇನು? ಅಂದ. ನಾಟಕದಲ್ಲಿ ಅದಾಗಲೇ ನಿಸ್ಸೀಮನಾಗಿದ್ದ ಜೀವಸಿದ್ಧಿ. ಎಲ್ಲವೂ ನಾಶವಾಗಿಬಿಟ್ಟಂತೆ ಗಂಭೀರವದನ ಮಾಡಿಕೊಂಡು ಕಣ್ಮುಚ್ಚಿ ಕೂತುಬಿಟ್ಟ!!

Leave a Reply