ವಿಭಾಗಗಳು

ಸುದ್ದಿಪತ್ರ


 

ಯುದ್ಧ ಶುರುವಾಗುವ ಮೊದಲೇ ಸೋತುಹೋದವರು

ರಾಹುಲ್‌ಗೆ ನಿಜಕ್ಕೂ ಕಾಳಜಿ ಇದ್ದಲ್ಲಿ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿಯೇ ಉಪಾಧ್ಯಕ್ಷ ಹುದ್ದೆ ಒಪ್ಪಿಕೊಳ್ಳದೆ ಜಾಗ ಬಿಟ್ಟುಕೊಟ್ಟು ಎದ್ದಿದ್ದರೆ ನಂಬಬಹುದಿತ್ತು. ರಾಜೀವ್ ಗಾಂಧಿಯ ಮಗನೆಂಬ ಏಕೈಕ ಅರ್ಹತೆ ಬಿಟ್ಟರೆ ಉಪಾಧ್ಯಕ್ಷ ಸ್ಥಾನದಲ್ಲಿ ಕೂರಲು ಅವರಿಗೆ ಮತ್ಯಾವ ಯೋಗ್ಯತೆ ಇತ್ತು ಹೇಳಿ? ಆಗೆಲ್ಲ ಇಲ್ಲದ ವಂಶ ಪರಂಪರೆಯ ಕಾಳಜಿ ಮೋದಿ ಪ್ರಧಾನಿ ಪಟ್ಟಕ್ಕೇರುವುದು ಖಾತ್ರಿಯಾದಾಗ ಹೊರಬಂದಿತೇಕೆ?

ಅದು ಮೋದಿಯ ಮ್ಯಾಜಿಕ್ಕು. ಒಂದು ಗಂಟೆಯ ಭಾಷಣ ಮುಗಿವ ವೇಳೆಗೆ ಎದುರಾಳಿಗಳೆಲ್ಲ ಹೊದ್ದು ಮಲಗಿಬಿಟ್ಟಿದ್ದರು. ಅನಂತ ಕುಮಾರ್, ಮುರಳಿ ಮನೋಹರ್ ಜೋಷಿಯಂತಹ ಮನಸಲ್ಲೇ ಮಂಡಿಗೆ ತಿನ್ನುತ್ತಿದ್ದವರಿರಲಿ, ಸುಷ್ಮಾ, ಜೇಟ್ಲಿ, ಗಡ್ಕರಿ, ಅಡ್ವಾಣಿಯಂತಹ ನಾಯಕರೂ ದಾರಿ ಬಿಟ್ಟು ನಿಂತುಬಿಟ್ಟರು. ಸ್ವಂತ ಪಾರ್ಟಿಯವರೇನು, ಕಾಂಗ್ರೆಸ್ಸು ಕೂಡ ತೊದಲಲಾರಂಭಿಸಿತು. ದೇಶದ ಪಾಲಿಗೆ ಬಾಲ ನಟನೇ ಆಗಿರುವ ರಾಹುಲ್ ಗಾಂಧಿಯೂ ನಾನು ಪ್ರಧಾನಿಯಾಗಲಾರೆ ಎಂದುಬಿಟ್ಟ. ಬೀಸುವ ನಾಲಗೆಯಿಂದ ಬಚಾವಾದರೆ ಸಾವಿರ ವರ್ಷ ಅಧಿಕಾರವಂತೆ’ ಎಂಬ ಹೊಸ ನುಡಿಕಟ್ಟೇ ಸೃಷ್ಟಿಯಾಗಿಬಿಟ್ಟಿತು

modi-rahul-comboಪ್ರಶ್ನೆ ಇರೋದು ಇಲ್ಲಿ. ಪ್ರಧಾನಿಯಾಗುವುದಿಲ್ಲ ಎನ್ನುವ ಜೊತೆಜೊತೆಗೇ ಅಧ್ಯಾತ್ಮಜೀವಿಯಂತೆ ಮಾತನಾಡಿರುವ ರಾಹುಲ್ ಬಾಬಾ ಒಂದಷ್ಟು ಪ್ರಶ್ನೆಗೆ ಉತ್ತರ ಕೊಡಲೇಬೇಕಲ್ಲ. ಮದುವೆಯಾದರೆ ಮಕ್ಕಳಾಗುತ್ತವೆ, ಆಮೇಲೆ ಅವರಿಗೂ ಅಧಿಕಾರದ ಬಯಕೆ ಹತ್ತಿಬಿಡುತ್ತದೆ. ಹೀಗಾಗಿ ಮದುವೆಯೇ ಬೇಡವೆಂದಿದ್ದೇನೆ ಎಂದರಲ್ಲ, ಅದರ ಬದಲು ರಾಜೀವ್ ಗಾಂಧಿಯ ಮಗನೆನ್ನುವ ಕಾರಣಕ್ಕೆ ತಾನೇ ಕಾಂಗ್ರೆಸ್ಸು ಆಳುವುದನ್ನು ಬಿಟ್ಟು ಸ್ವಂತ ಉದ್ಯೋಗ ಮಾಡಿದರೆ ಗಂಟೇನು ಹೋಗುತ್ತೆ ಹೇಳಿ? ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಮಗ ಹಾಗೇ ಬದುಕಿರಲಿಲ್ಲವೆ? ಮಹಾತ್ಮಾ ಗಾಂಧಿಯೂ ತಮ್ಮ ಮಕ್ಕಳನ್ನ ಸಕ್ರಿಯ ರಾಜಕಾರಣಕ್ಕೆ ತರಲಿಲ್ಲವಲ್ಲ? ದೇಶವನ್ನು ರಾಜರ ಆಳ್ವಿಕೆಯಿಂದ ಮುಕ್ತಗೊಳಿಸಿದ ಪಟೇಲರು ಅದನ್ನು ನೆಹರೂ ಕೈಗಿಟ್ಟರು. ಅವರೂ ಅದೇ ಬಗೆಯ ವಂಶಪಾರಂಪರ‍್ಯದ ಆಡಳಿತ ನಡೆಸುವರೆಂದು ಆಗವರು ಊಹಿಸಿಯೂ ಇರಲಿಲ್ಲವೇನೋ.
ರಾಹುಲ್‌ಗೆ ನಿಜಕ್ಕೂ ಕಾಳಜಿ ಇದ್ದಲ್ಲಿ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿಯೇ ಉಪಾಧ್ಯಕ್ಷ ಹುದ್ದೆ ಒಪ್ಪಿಕೊಳ್ಳದೆ ಜಾಗ ಬಿಟ್ಟುಕೊಟ್ಟು ಎದ್ದಿದ್ದರೆ ನಂಬಬಹುದಿತ್ತು. ರಾಜೀವ್ ಗಾಂಧಿಯ ಮಗನೆಂಬ ಏಕೈಕ ಅರ್ಹತೆ ಬಿಟ್ಟರೆ ಉಪಾಧ್ಯಕ್ಷ ಸ್ಥಾನದಲ್ಲಿ ಕೂರಲು ಅವರಿಗೆ ಮತ್ಯಾವ ಯೋಗ್ಯತೆ ಇತ್ತು ಹೇಳಿ? ಆಗೆಲ್ಲ ಇಲ್ಲದ ವಂಶ ಪರಂಪರೆಯ ಕಾಳಜಿ ಮೋದಿ ಪ್ರಧಾನಿ ಪಟ್ಟಕ್ಕೇರುವುದು ಖಾತ್ರಿಯಾದಾಗ ಹೊರಬಂದಿತೇಕೆ?
ಅದು ಸರಿ, ಹೈಕಮಾಂಡ್ ಪದ್ಧತಿಯೇ ಇಷ್ಟವಿಲ್ಲ ಎಂದರಲ್ಲ ರಾಹುಲ್, ತನ್ನ ತಾಯಿಯೊಬ್ಬರನ್ನು ಕರೆದುಕೊಂಡು ಇಟಲಿಗೆ ಹೊರಟುಬಿಟ್ಟರೆ ಕಾಂಗ್ರೆಸ್ಸಿನಲ್ಲಿ ಈ ಪಿಡುಗನ್ನು ನಾಶ ಮಾಡಿಬಿಡಬಹುದು ಎಂಬ ಕನಿಷ್ಠ ಜ್ಞಾನ ಅವರಿಗಿಲ್ಲವೆ? ಮನಮೋಹನ ಸಿಂಗರ ಕೇಂದ್ರ ಸರ್ಕಾರಕ್ಕೊಂದು ನೆರಳಿನ ಸರ್ಕಾರ (ಶ್ಯಾಡೋ ಗವರ್ನ್‌ಮೆಂಟ್) ಇದೆಯಲ್ಲ, ಅದರ ಮುಖ್ಯಸ್ಥೆಯೇ ಸೋನಿಯಾ ಎಂಬುದನ್ನು ದೆಹಲಿಯ ಗೋಡೆಗೋಡೆಗಳೂ ಕೂಗಿ ಹೇಳುತ್ತವೆ. ಅಲ್ಲೊಂದು ಬದಲಾವಣೆ ತಂದುಬಿಟ್ಟಿದ್ದರೆ ದೇಶದ ಕಥೆಯೇ ಬದಲಾಗಿಬಿಡುತ್ತಿತ್ತಲ್ಲ! ಬಹುಶಃ ಭಾಷಣ ಬರೆದುಕೊಟ್ಟವರು ಇದನ್ನು ಮರೆತುಬಿಟ್ಟಿರಬೇಕು. ಹೋಗಲಿ… ಮುಂದಿನ ಪ್ರಧಾನಿ ಎಂಬಂತೆ ಈ ಹಂತದಲ್ಲಿ ಆಂಟನಿಯವರ ಹೆಸರಿನ ಜಪ ಶುರುವಾಗಿದೆಯಲ್ಲ, ಅದಕ್ಕೇನಾದರೂ ಕಾರಣ ಇದ್ದರೆ, ಆತ ಅತ್ಯಂತ ಪ್ರಾಮಾಣಿಕ ಮತ್ತು ಸೋನಿಯಾ ಪರಿವಾರದ ನಿಷ್ಠ ಎಂಬುದು ಮಾತ್ರ. ಮನಮೋಹನ ಸಿಂಗರೂ ಭ್ರಷ್ಟರೇನಲ್ಲ. ಅವರು ಅಧಿಕಾರಕ್ಕೇರಲು ಇದ್ದುದೂ ಆ ಒಂದೇ ಅರ್ಹತೆ, ಪರಿವಾರ ನಿಷ್ಠೆ. ಈಗ ಹೇಳಿ. ಹೈಕಮಾಂಡ್ ಸಂಸ್ಕೃತಿ ಕಾಂಗ್ರೆಸ್ಸಿನಲ್ಲಿ ಬೇರೂರಿಲ್ಲವೇನು?
ಏಕವ್ಯಕ್ತಿ ನಿಷ್ಠೆ, ಪರಿವಾರ ನಿಷ್ಠೆ ಇವೆಲ್ಲ ಕೆಡುಕಿನ ಮುನ್ಸೂಚನೆಗಳೇ. ಪಟೆಲರಂತಹ ಪಟೇಲರು ಗಾಂಧಿಗೆ ನಿಷ್ಠರಾಗಿ ನಡೆದುಕೊಂಡಿದ್ದರಿಂದಲೇ ಇಂದಿನ ಎಲ್ಲ ಸಮಸ್ಯೆಗಳೂ ಜೀವಂತವಾಗಿರೋದು. ೧೯೩೦ರ ವೇಳೆಗೇ ಗಾಂಧೀಜಿ ಕಾಂಗ್ರೆಸ್ಸಿನ ಪಾಲಿಗೆ ಸತ್ತು ಹೋಗಿದ್ದರು. ಅವರ ಮಾತುಗಳನ್ನು ಕೇಳುವವರೇ ಇರಲಿಲ್ಲ. ಅವರ ಸತ್ಯಾಗ್ರಹದ ಹೋರಾಟ ಅರ್ಥ ಕಳಕೊಂಡು ಪೇಲವವಾಗಿಬಿಟ್ಟಿತ್ತು. ಅವರನ್ನು ಧಿಕ್ಕರಿಸಿ ಹೊರಬಂದವರೆಲ್ಲ ಸಮಾಜದ ಕಣ್ಮಣಿಗಳಾಗಿಬಿಟ್ಟಿದ್ದರು. ಗಾಂಧೀಜಿ ಬದುಕಿದ್ದಿದ್ದರೆ ಅದು ಪಟೇಲರ ನಿಷ್ಠೆಯಲ್ಲಿ ಮಾತ್ರ! ಅವರಿಗದು ಅರಿವಾಗುವ ವೇಳೆಗೆ ತುಂಬಾ ತಡವಾಗಿಬಿಟ್ಟಿತ್ತು. ದೇಶ ಪ್ರಪಾತದೆಡೆಗೆ ತೀವ್ರ ಗತಿಯಿಂದ ಸಾಗಿತ್ತು. ಸಿದ್ಧಾಂತ, ಆದರ್ಶಗಳನ್ನು ಬಿಟ್ಟು ವ್ಯಕ್ತಿಗೆ ನಿಷ್ಠವಾಗಿ ನಡೆಯುತ್ತಾರಲ್ಲ, ಅಂಥವರು ಬಲು ಅಪಾಯಕಾರಿ ಎಂದು ಅದಕ್ಕೇ ಹೇಳೋದು. ಮನಮೋಹನ ಸಿಂಗರ ನಂತರ ಅಂಥದೇ ರಬ್ಬರ್ ಸ್ಟಾಂಪ್ ಈಗ ಆಂಟನಿಯ ರೂಪದಲ್ಲಿ.
ಇಷ್ಟಕ್ಕೂ ರಾಹುಲ್ ಗಾಂಧಿ ರಣರಂಗದಿಂದ ಹಿಂಜರಿಯಲು ಕಾರಣ ಏನು ಗೊತ್ತೆ? ಎದುರಾಳಿ ಮೋದಿಯೆಂಬುದು ಖಾತ್ರಿಯಾದುದರಿಂದ. ದೇಶದ ಯುವಕರು, ರೈತರು, ಹೆಂಗಸರು, ವ್ಯಾಪಾರಿಗಳು, ಬುದ್ಧಿವಂತರೆಲ್ಲ ಮೋದಿಯ ಹೆಸರನ್ನು ಜಪಿಸುತ್ತಿದ್ದರೆ. ಅಲ್ಲೊಂದು ಇಲ್ಲೊಂದು ಕಾಂಗ್ರೆಸ್ ಪ್ರಾಯೋಜಿತ ಸಮೀಕ್ಷೆಗಳು ಮಾತ್ರ ಜನ ರಾಹುಲ್‌ರನ್ನು ಪ್ರಧಾನಿಯಾಗಿ ನೋಡಲಿಚ್ಛಿಸುತ್ತಾರೆ ಎಂಬ ವರದಿ ಪ್ರಕಟಿಸುತ್ತಿವೆ.
ಪಾಪ. ಮೋದಿ ಎದುರು ರಾಹುಲ್‌ಗಿರುವ ಸಾಮರ್ಥ್ಯವಾದರೂ ಎಂತಹದು ಹೇಳಿ? ಆತ ಮುಖ್ಯಮಂತ್ರಿಯಾಗಿ ಒಂದು ರಾಜ್ಯದ ಹೊಣೆ ಹೊತ್ತಿರುವರಾ? ಅಥವಾ ಕ್ಷೇತ್ರದ ಅಭಿವೃದ್ಧಿ ಸಾಧಿಸಿ ಮಾದರಿ ಮಾಡಿದ್ದಾರಾ? ಅವೆಲ್ಲ ಬಿಡಿ. ಈ ಆಡಳಿತಾವಧಿಯಲ್ಲಿ ಸಮಸ್ಯೆಗಳ ಆಗರವಾಗಿರುವ ಭಾರತದ ಕುರಿತಂತೆ ಸಂಸತ್ತಿನಲ್ಲಿ ದನಿ ಎತ್ತಿದ್ದಾರಾ? ಲೆಕ್ಕ ಹಾಕಿದರೆ ಮೂರ್ನಾಲ್ಕು ಗಂಟೆಗಳು ಸಂಸತ್ತಿನಲ್ಲಿ ಮಾತಾಡಿರದ ರಾಹುಲ್ ಬಾಬಾ ಪ್ರಧಾನಿಯಾಗಿ ಅದೇನು ಮಾಡಿಯಾರು ಹೇಳಿ! ಮೋದಿಯ ಚಾಟಿ ತಿರುಗಲಾರಂಭಿಸಿದರೆ ಉಳಿಯೋದು ಕಷ್ಟ ಅಂತಾನೇ ಯುದ್ಧ ಆರಂಭವಾಗುವುದಕ್ಕೂ ಮುನ್ನ ರಾಹುಲ್ ಗಾಂಧಿ ನಿವೃತ್ತಿ ಘೋಷಿಸಿಬಿಟ್ಟಿರೋದು.
ಇದು ಒಳ್ಳೆಯ ಬೆಳವಣಿಗೆಯೇ. ಕುಟುಂಬ ರಾಜಕಾರಣದಿಂದ ದೇಶಕ್ಕೆ ಸಾಕುಸಾಕಾಗಿ ಹೋಗಿದೆ. ಮುಲಾಯಮ್‌ರ ಮಗ ಅಖಿಲೇಶ್ ಅಧಿಕಾರಕ್ಕೆ ಬಂದಾಗ ಉತ್ತರ ಪ್ರದೇಶ ಹಿರಿಹಿರಿಹಿಗ್ಗಿತ್ತು. ಆದರೆ ತಂದೆಯ ಚಪ್ಪಲಿಯೊಳಗೆ ಕಾಲಿಟ್ಟ ಮಗ ಅವರಂತೆ ನಡೆದನೇ ಹೊರತು ಹೊಸದಾದ ದಾರಿ ಮಾಡಿಕೊಳ್ಳಲೇ ಇಲ್ಲ. ಅವನ ಕ್ಯಾಬಿನೆಟ್ಟಿನಲ್ಲಿರುವ ಪ್ರತಿಯೊಬ್ಬರನ್ನೂ ಆರಿಸಿ ಕುಳ್ಳಿರಿಸಿಕೊಂಡಿರೋದು ಅಖಿಲೇಶನಲ್ಲ, ಅವರಪ್ಪನೇ! ಎಡ ಬಲ – ಹಿಂದೆ ಮುಂದೆಯೆಲ್ಲ ಅಂಕಲ್‌ಗಳ ರಾಶಿ. ಅವರು ಹೇಳಿದ ಮಾತನ್ನು ಮೀರಲಾಗದೆ ಉತ್ತರ ಪ್ರದೇಶವನ್ನೆ ಗೂಂಡಾ ರಾಜ್ ಮಾಡಿಬಿಟ್ಟಿದ್ದಾನೆ ಅಖಿಲೇಶ್. ಹಣವನ್ನು ಅಲ್ಪಸಂಖ್ಯಾತರಿಗೆ ಹಂಚೋದು, ೨೦೧೪ರಲ್ಲಿ ಸಾಕಷ್ಟು ಮತ ಗಳಿಸೋದು. ಇದೊಂದೇ ಅವನ ಸದ್ಯದ ಗುರಿ.
ಮಕ್ಕಳನ್ನು ರಾಜಕಾರಣಕ್ಕೆ ತರದೆ ಶುದ್ಧ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಉಳಿದುಬಿಟ್ಟಿದ್ದರೆ ಇಂದು ರಾಷ್ಟ್ರ ರಾಜಕಾರಣ ನೆನಪಿನಲ್ಲಿಡುವಂತಹ ನಾಯಕರಾಗಿಬಿಟ್ಟಿರುತ್ತಿದ್ದರು. ತನ್ನಂತೆ ತನ್ನ ಮಕ್ಕಳೂ ಅಧಿಕಾರದ ಅಂಗಳದಲ್ಲಿಯೇ ಆಟವಾಡಬೇಕೆಂದು ಬಯಸಿದರೆ ಸೂಕ್ತ ದಂಡವನ್ನು ತೆರಲೇಬೇಕು. ಅನುಮಾನವೇ ಇಲ್ಲ.
ಸಾಲ್ಮನ್ ಹಿಲ್ಪ್ ಎನ್ನುವ ಮೀನು ಪ್ರವಾಹಕ್ಕೆ ವಿರುದ್ಧವಾಗಿ ಈಜಿ ನದಿ ಹುಟ್ಟುವಲ್ಲಿ ಮೊಟ್ಟೆ ಇಡುತ್ತದಂತೆ. ಮರಿಗಳು ಹುಟ್ಟುವಾಗ ಎತ್ತರದಲ್ಲಿರಬೇಕೆಂಬ ಬಯಕೆ ಅದರದ್ದು. ಹಾಗೆಯೇ ಈ ಪರಿವಾರ ರಾಜಕಾರಣದ ಅಧ್ವರ್ಯುಗಳು. ಇದು ರಾಜಕಾರಣದಲ್ಲಷ್ಟೆ ಅಲ್ಲ, ಎಲ್ಲೆಡೆಯೂ ಹಾಸುಹೊಕ್ಕಾಗಿ ಹರಡಿಕೊಂಡಿದೆ. ಸರ್ಕಾರಿ ನೌಕರ ತನ್ನ ಮಗನಿಗೂ ಇಂತಹದೆ ನೌಕರಿ ಸಿಗಲೆಂದು ಹಂಬಲಿಸುತ್ತಾನೆ. ವೈದ್ಯರಿಗೆ ತಮ್ಮ ಮಕ್ಕಳೂ ಇದೇ ವೃತ್ತಿ ಹಿಡಿಯಲೆಂಬ ಬಯಕೆ. ಮಠಾಧಿಕಾರ ಹೊಂದಿದ ಅನೇಕ ಸಂತರು ತಮ್ಮ ಪೀಠಕ್ಕೆ ಅಣ್ಣ-ತಮ್ಮಂದಿರ ಮಕ್ಕಳನ್ನೂ ಎಳೆದು ತರೋದು ಈ ಕಾರಣದಿಂದಲೇ. ಈ ಹಂಬಲ ಇಲ್ಲದವರು ಸಮಾಜದ ನೆನಪಲ್ಲಿ ಶಾಶ್ವತವಾಗಿ ಉಳಿದುಬಿಡುತ್ತಾರೆ.
ವಾಜಪೇಯಿಗೆ ಎದುರಾಳಿಗಳೂ ಮುಜರಾ ಸಲ್ಲಿಸುತ್ತಿದ್ದುದು ಇದೇ ಕಾರಣದಿಂದಾಗಿ. ಈಗ ಮೋದಿಗೂ ಅಷ್ಟೆ. ತನ್ನ ನಂತರ ತನ್ನವರಾರನ್ನೂ ಮುಂದಿಡುತ್ತಿಲ್ಲವೆಂಬ ಕಾರಣಕ್ಕೇ ಜನ ಅಪ್ಪಿಕೊಳ್ಳಲು ಸಿದ್ಧವಾಗುತ್ತಿರೋದು. ಮೋದಿ ಈ ರಾಷ್ಟ್ರದ ಮೂಲಸತ್ವಗಳನ್ನು ಮೈಗೂಡಿಸಿಕೊಂಡು ಬೆಳೆದಿರುವ ವ್ಯಕ್ತಿತ್ವ. ಬಹಳ ಜನರಿಗೆ ಗೊತ್ತಿರಲಾರದು. ಆತ ಈ ಬಾರಿ ಚುನಾವಣೆಗಳನ್ನು ಗೆದ್ದೊಡನೆ ಮೊದಲು ತಾಯಿಯ ಕಾಲಿಗೆ ನಮಸ್ಕರಿಸಿದರು. ಮತ್ತೆ ಮಾಡಿದ್ದೇನು ಗೊತ್ತೆ? ಚುನಾವಣೆಯನ್ನು ತನ್ನ ಪಾಲಿಗೆ ಕಠಿಣಗೊಳಿಸಿದ ಒಂದು ಕಾಲದ ಮಿತ್ರ ಕೇಶುಭಾಯಿ ಪಟೇಲರ ಮನೆಗೆ ಹೋಗಿದ್ದು. ಚತುರ ಮೋದಿ ಪಟೇಲರಿಗೆ, ನೀವು ಗುಜರಾತಿನ ಮಾನ ಉಳಿಸಿಬಿಟ್ಟಿರಿ ಎಂದರಂತೆ. ಕೇಶುಭಾಯಿ ಪಟೇಲರು ಅದು ಹೇಗೆ ಎಂದು ಕೇಳಿದಾಗ, ಕಳೆದ ಬಾರಿ ನಮಗೆ ನೂರಾ ಹದಿನೇಳು ಸ್ಥಾನದಲ್ಲಿ ಜಯ ದಕ್ಕಿತ್ತು. ಈ ಬಾರಿಯೂ ಅಷ್ಟೆ. ನನಗೆ ನೂರಾ ಹದಿನೈದು, ನಿಮಗೆ ಎರಡು. ಮತ್ತೆ ಅಷ್ಟೇ ಆಯಿತಲ್ಲ ಅಂತ! ಇದನ್ನು ಕೇಳಿದೊಡನೆ ನನಗಂತೂ ಧರ್ಮರಾಯ ನೆನಪಾಗಿಬಿಟ್ಟ. ಆತ ಹೇಳುತ್ತಾನಲ್ಲ, ನಮ್ಮೊಳಗೆ ಕಾದಾಡುವಾಗ ನಾವು ಐವರು, ನೀವು ನೂರು. ಅನ್ಯರು ನಮ್ಮ ಮೇಲೆರಗಿ ಬಂದರೆ ನಾವು ನೂರೈದು ಅಂತ. ಹಾಗಾಯ್ತು ಕಥೆ!
ಮೋದಿ ಧರ್ಮರಾಯನಂತಷ್ಟೆ ಅಲ್ಲ, ಅರ್ಜುನನಂತೆ ಗುರಿಯಿಟ್ಟು ಭೀಮಸೇನನಂತೆ ಗದಾಪ್ರಹಾರದವನ್ನೂ ಮಾಡಬಲ್ಲವರು. ನಕುಲ ಸಹದೇವರಂತೆ ಕುಶಲಕರ್ಮಿಯಾಗಿಯೂ ನಿಲ್ಲಬಲ್ಲವರು. ಹೌದು. ಆತ ಒಂಥರಾ ಪಾಂಡವರನ್ನು ಒಳಗೊಂಡ ಕಂಪ್ಲೀಟ್ ಪ್ಯಾಕೇಜ್. ಕುರುಕ್ಷೇತ್ರಕ್ಕೆ ಆತ ಈಗ ತಯಾರಾಗಿಯೇ ಬಂದಿದ್ದಾರೆ. ತನ್ನನ್ನು ಸದಾ ವಿರೋಧಿಸುವ ಮಾಧ್ಯಮಗಳು, ಅಂತಾರಾಷ್ಟ್ರೀಯ ಷಡ್ಯಂತ್ರಗಳು, ಕಾಂಗ್ರೆಸ್ಸು, ಈಗೀಗ ಕೇಜ್ರಿವಾಲ್- ಇವರೆಲ್ಲರನ್ನೂ ಒಳಗೊಂಡಿರುವ ಹದಿನೆಂಟು ಅಕ್ಷೋಹಿಣಿ ಸೈನ್ಯ ಅವನೆದುರಿಗೆ ನಿಂತಿದೆ. ಕೌರವರ ಪಾಳಯದ ನಾಯಕರಾಗಿ ಪಟ್ಟಕ್ಕೇರಿದ್ದವ ಯುದ್ಧಕ್ಕೆ ಮುನ್ನವೇ ನೇತೃತ್ವದಿಂದ ಹಿಂಜರಿದಾಗಿದೆ. ಮುಂದೆ ಯಾರೆಂದು ಕಾದು ನೋಡಬೇಕಿದೆ ಅಷ್ಟೆ.
ಅಗೋ! ಪಾಂಚಜನ್ಯ ಮೊಳಗಲು ಸಿದ್ಧತೆ ನಡೆದುಬಿಟ್ಟಿದೆ. ಇನ್ನು ಯುದ್ಧ ಆರಂಭವಾಗುವುದಷ್ಟೆ ಬಾಕಿ.

Leave a Reply