ವಿಭಾಗಗಳು

ಸುದ್ದಿಪತ್ರ


 

ರಾಮಸೇತು ಒಡೆದರೆ ಥೋರಿಯಮ್ ನಿಕ್ಷೇಪಕ್ಕೆ ಎಳ್ಳು ನೀರು…

ಮನಮೋಹನ ಸಿಂಗರು ಅಧಿಕಾರಕ್ಕೆ ಬಂದ ನಂತರ ೨೦ ಲಕ್ಷ ಟನ್‌ನಷ್ಟು ಥೋರಿಯಮ್‌ಗೆ ಸಮನಾದ ಮೋನಾಝೈಟ್ ನಮ್ಮ ಕರಾವಳಿಯಿಂದ ಕಾಣೆಯಾಗಿದೆ. ಬೆಲೆಕೇರಿಯಿಂದ ಕಾಣೆಯಾದ ಕಬ್ಬಿಣದ ಅದಿರಿನ ತನಿಖೆ ಬಲು ಜೋರಾಗಿ ನಡೆಯುತ್ತಿದೆಯಲ್ಲ, ಈ ಮೋನಾಜೈಟ್ ನಾಪತ್ತೆಯಾದುದರ ಬಗ್ಗೆ ಯಾರು ಮಾಡುತ್ತಾರೆ ಹೇಳಿ!?

ನಮಗೇ ಅರಿವಿಲ್ಲದೇ ಭಯಾನಕ ಪರಿಸ್ಥಿತಿಯತ್ತ ತೆವಳಿಕೊಂಡು ಹೋಗುತ್ತಿದ್ದೇವೆ! ನಾವು ಬಳಸುವ ಪೆಟ್ರೋಲು – ಡೀಸೆಲ್ಲಿನ ಮುಕ್ಕಾಲು ಭಾಗ ಆಮದು ಮಾಡಿಕೊಳ್ಳುತ್ತಿದ್ದೇವೆ. ಕಳೆದ ವರ್ಷದ ಲೆಕ್ಕಾಚಾರದ ಪ್ರಕಾರ ೧೩೪ ಶತಕೋಟಿ ಡಾಲರುಗಳಷ್ಟು ತೈಲ ಆಮದು ಮಾಡಿಕೊಂಡಿದ್ದೇವೆ. ಆಮದು ಮಿತಿಮೀರಿ ರಫ್ತು ನೆಲ ಕಚ್ಚುತ್ತಿರುವುದರಿಂದ ಡಾಲರಿನೆದುರು ರೂಪಾಯಿ ಸೋಲುತ್ತಲೇ ಸಾಗುತ್ತಿದೆ. ಒಂದಷ್ಟು ಜನಕ್ಕೆ ರೂಪಾಯಿಯ ಅಪಮೌಲ್ಯ ಲಾಭದಾಯಕವೆನಿಸಿದರೂ ಭಾರತದ ದೃಷ್ಟಿಯಿಂದ ಬಲು ಭಯಾನಕ.
ಅದೇಕೋ ನೆಹರೂ ಕಾಲದಿಂದಲೂ ಈ ದೇಶಕ್ಕೆ ದೂರದೃಷ್ಟಿಯ ಕೊರತೆ ಇದೆ. ಮುಂದಿನ ನೂರು ವರ್ಷಗಳಿಗೆ, ಸಾವಿರ ವರ್ಷಗಳಿಗೆ ಯೋಜನೆ ರೂಪಿಸುವ ಪ್ರಯತ್ನಗಳೇ ಇಲ್ಲ. ಅದು ಬಿಡಿ, ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿದು ಇರುವ ಸಂಪತ್ತನ್ನೂ ನಾಶ ಮಾಡಿಕೋಳ್ಳುವ ಜಾಯಮಾನ ನಮ್ಮದು.
ಎನರ್ಜಿ ಇನ್‌ಫರ್ಮೇಶನ್ ಏಜೆನ್ಸಿಯ ಪ್ರಕಾರ ಅಮೆರಿಕಾ, ಚೀನಾ, ರಷ್ಯಾ ಬಿಟ್ಟರೆ ಹೆಚ್ಚು ತೈಲ ಬಳಸುವ ರಾಷ್ಟ್ರ ನಮ್ಮದೇ. ಉಳಿದ ಮೂರು ರಾಷ್ಟ್ರಗಳೂ ತೈಲ ಹೊರತೆಗೆದು ಸಂಸ್ಕರಿಸಿ ಬಳಸುವಲ್ಲಿ ಸ್ವಾವಲಂಬಿಯಾಗುವತ್ತ, ಅಷ್ಟೇ ಅಲ್ಲ, ತಮ್ಮ ತೈಲ ಕಂಪನಿಗಳನ್ನು ತೈಲ ರಾಷ್ಟ್ರಗಳಿಗೆ ಕಳಿಸುವತ್ತಲೂ ಗಮನ ನೀಡುತಿವೆ. ನಾವು ಮಾತ್ರ ಕಂಡುಹಿಡಿದಿರುವ ತೈಲ ಸಂಪತ್ತನ್ನು ಹೊರತೆಗೆಯಲೂ ಮೀನಾಮೇಷ ಎಣಿಸುತ್ತ ಬಿಲಿಯನ್‌ಗಟ್ಟಲೆ ಡಾಲರುಗಳನ್ನು ವ್ಯರ್ಥ ಮಾಡುತ್ತ, ಕಾಲ ಕಳೆಯುತ್ತಿದ್ದೇವೆ. ಅದೇ ಏಜೆನ್ಸಿಯ ಅಂಕಿ ಅಂಶದ ಪ್ರಕಾರ ೨೦೧೦ರಲ್ಲಿ ನಾವು ಏಳುವರೆ ಲಕ್ಷ ಬ್ಯಾರಲ್‌ನಷ್ಟು ತೈಲವನ್ನು ಪ್ರತಿ ನಿತ್ಯ ಹೊರತೆಗೆದರೆ, ಆ ವರ್ಷ ೩೨ ಲಕ್ಷ ಬ್ಯಾರಲ್‌ನಷ್ಟು ತೈಲವನ್ನು ಪ್ರತಿನಿತ್ಯ ಬಳಸಿದ್ದೇವೆ. ಅಂದಮೇಲೆ ಅಂತಾರಾಷ್ಟ್ರೀಯ ಒತ್ತಡಗಳು ನಮ್ಮ ಮೇಲೆ ಹೇಗಿರಬಹುದೆಂದು ಲೆಕ್ಕ ಹಾಕಿ. ನಮಗೆ ಪೆಟ್ರೋಲು- ಡೀಸೆಲ್ಲು ಕಳಿಸುವುದಿಲ್ಲವೆಂದು ತೈಲ ರಾಷ್ಟ್ರಗಳು ನಿರ್ಬಂಧ ಹೇರಿ ಕುಂತುಬಿಟ್ಟರೆ ನಮ್ಮ ಕಥೆ ಮುಗಿದೇಹೋಯ್ತು. ಹಾಹಾಕಾರ ಉಂಟಾಗಿಬಿಡುತ್ತೆ.
ಹೀಗಾಗಿಯೇ ಹುಡುಕಾಟದ ಪರ್ವ ಜೋರಾಗಿ ನಡೆಯುತ್ತಿರೋದು. ಕಳೆದ ಆಗಸ್ಟ್‌ನಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಪಶ್ಚಿಮ ಕರಾವಳಿಯಲ್ಲಿ ಬೃಹತ್ ತೈಲ ನಿಕ್ಷೇಪ ಪತ್ತೆಯಾಗಿದೆಯೆಂದು ಹೇಳಿದಾಗ ಇಡಿಯ ಜಗತ್ತು ಬೆರಗಾಗಿತ್ತು. ಅದರ ಜೊತೆ ಜೊತೆಗೆ ಬಿಹಾರದಲ್ಲೂ ತೈಲ ನಿಕ್ಷೇಪವೊಂದು ಸಿಕ್ಕಿತ್ತು. ಆದರೆ ಅದರಿಂದ ತೈಲ ಹೊರ ತೆಗೆಯುವಲ್ಲಿ ಮಾತ್ರ ಸಾಕಷ್ಟು ಅಡೆತಡೆಗಳು. ಸರ್ಕಾರದ ನೀತಿ ನಿಯಮಾವಳಿಗಳ ಭಾರ. ಒಟ್ಟಿನಲ್ಲಿ ಆಮದು ಮಾತ್ರ ನಿಲ್ಲಲೇ ಇಲ್ಲ.

ರಾಮಸೇತು

ರಾಮಸೇತು

ಅತ್ತ ಉರಿ ಹಚ್ಚಿಕೊಂಡ ಚೀನಾ, ನಮ್ಮ ತೈಲ ಕಂಪನಿ ವಿಯೆಟ್ನಾಂ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ನನ್ಶಾ ದ್ವೀಪದ ಸಾಗರದಲ್ಲಿ ತೈಲ ತೆಗೆಯುವುದಕ್ಕೆ ವಿರೋಧ ವ್ಯಕ್ತಪಡಿಸಿತು. ಆರುನೂರು ದಶಲಕ್ಷ ಡಾಲರುಗಳ ಬಂಡವಾಳ ಹೂಡಿ ಭಾರತ ಸರ್ಕಾರ ತೆಪ್ಪಗೆ ಕೂರುವಂತಾಯ್ತು. ನೌಕಾ ಸೇನೆಯ ಮುಖ್ಯಸ್ಥರು ನಮ್ಮ ಹಿತಾಸಕ್ತಿ ರಕ್ಚಿಸಿಕೊಳ್ಲೂವಲ್ಲಿ ನಾವು ಎಂತಹುದೆ ಪ್ರಯೋಗಕ್ಕೂ ಸಿದ್ಧರೆಂದು ಚಾಟಿ ಏಟು ನೀಡಿದರಾದರೂ ಸ್ವತಃ ಸರ್ಕಾರ ಅವರನ್ನು ಗದರಿಸಿ ಸುಮ್ಮನೆ ಕೂರಿಸಿಬಿಟ್ಟಿತು. ಇದು ನಿರ್ವೀರ್ಯತೆಗೆ ಮತ್ತೊಂದು ಸಾಕ್ಷಿಯಾಯಿತೇ ಹೊರತು ನಮ್ಮ ತೈಲ ಕಂಪನಿಗಳು ಸೀಮೆಯ ಹೊರಗೆ ಮಜಬೂತಾಗಿ ಕೆಲಸ ಮಾಡುವಲ್ಲಿ ಸೋಲುವಂತಾಯ್ತು.
ಹೋಗಲಿ. ಶಕ್ತಿ ಉತ್ಪಾದನೆಗೆ ಪರ್ಯಾಯ ಮಾರ್ಗಗಳನ್ನಾದರೂ ಸಾಕಾರ ಮಾಡಿಕೊಳ್ಳುತ್ತಿದ್ದೇವಾ? ತಮಿಳುನಾಡಿನ ರಾಮರ್‌ಪಿಳ್ಳೈ ಈ ತರಹದ ಮಾತಾಡಿದಾಗ ಇಂಗ್ಲಿಷ್ ಮಾಧ್ಯಮಗಳು ಅವನನ್ನು ಹೀಯಾಳಿಸಿಬಿಟ್ಟವು. ನೀರಿನಿಂದ ಗಾಡಿ ಓಡಿಸಲು ಸಾಧ್ಯವೇ? ಎಂದೆಲ್ಲ ಮೂದಲಿಸಿ ಇಂತಹದೊಂದು ಪ್ರಯತ್ನಕ್ಕೆ ಯಾರೂ ಕೈಹಾಕುವ ಯೋಚನೆಯನ್ನೂ ಮಾಡದಂತೆ ಮಾಡಿಬಿಟ್ಟವು. ಸೂರ್ಯ ವರ್ಷದ ಹನ್ನೆರಡೂ ತಿಂಗಳೂ ತಡೆಯಿಲ್ಲದಂತೆ ಶಾನೀಡುವ ದೇಶದಲ್ಲಿರುವ ನಾವು ಇದುವೆವಿಗೂ ಸೌರ ಶಕ್ತಿಯ ಬಳಕೆಯ ಸಂಶೋಧನೆಗಾಗಿ ಮಾಡಿರುವ ವೆಚ್ಚ ಲೆಕ್ಕಾಚಾರ ಹಾಕಿದರೆ, ತೈಲ ಆಮದಿನ ಮುಂದೆ ದೂಳಿನ ಕಣ! ರಾಜಸ್ಥಾನದ ಮೌಂಟ್ ಅಬುವಿನಲ್ಲಿ ಬ್ರಹ್ಮ ಕುಮಾರಿಯರ ಈಶ್ವರೀಯ ವಿದ್ಯಾಲಯವು ನೂರಾರು ಎಕರೆ ಜಮೀನಿನಲ್ಲಿ ಸೂರ‍್ಯನ ಕಿರಣಗಳನ್ನು ಹಿಡಿದಿಡುವ ಆಂಟೆನಾಗಳನ್ನು ಸ್ಥಾಪಿಸಿ, ವಿದ್ಯುತ್ ಉತ್ಪಾದಿಸುವ ಸಂಶೋಧನೆ ನಡೆಸುತ್ತಿದೆ. ಈ ಯೋಜನೆ ನಿರೀಕ್ಷಿತ ಯಶಸ್ಸು ಕಂಡರೆ, ಇಡಿಯ ಮೌಂಟ್ ಅಬುವನ್ನು ಬೆಳಗಿನ ಹೊತ್ತಲ್ಲಿ ಸೂರ್ಯ ನೇರವಾಗಿ ಬೆಳಗುತ್ತಾನೆ, ರಾತ್ರಿ ಪರೋಕ್ಷವಾಗಿ.. ನೆನಪಿರಲಿ. ಇಂತಹುದೊಂದು ಪ್ರಯತ್ನಕ್ಕೆ ಕೈಹಾಕಿರೋದು ಸರ್ಕಾರಿ ಸಂಸ್ಥೆಯಲ್ಲ; ಪರಿಪೂರ್ಣ ಖಾಸಗಿಯಾಗಿರುವ ಆಧ್ಯಾತ್ಮಿಕ ಸಂಸ್ಥೆ! ಇದು ನಾಚಿಕೆಗೇಡಿನ ಸಂಗತಿಯಲ್ಲವೇನು?
ಹೋಗಲಿ, ಹೋಮಿ ಭಾಭಾಕಾಲದಿಂದಲೂ ಅಣುಶಕ್ತಿಯ ಕುರಿತಂತೆ ಧ್ಯಾನಿಸುತ್ತ ಬಂದಿದ್ದೇವೆ. ಇಂದಾದರೂ ಸ್ವಾವಲಂಬಿತೆ ಸಾಧಿಸಿದ್ದೇವಾ? ಯುರೇನಿಯಮ್ ಬಳಸಿ ವಿದ್ಯುತ್ ಉತ್ಪಾದಿಸುವ ಮೊದಲ ಹಂತದ ರಿಯಾಕ್ಟರುಗಳನ್ನು ಸ್ಥಾಪಿಸಿದ ನಂತರ, ಪ್ಲುಟೋನಿಯಮ್ ಮತ್ತು ಯುರೇನಿಯಮ್ ಬಳಸುವ ಎರಡನೇ ಹಂತದ ರಿಯಾಕ್ಟರುಗಳ ಕಡೆಗೆ ನಾವು ಹೊರಳಿದೆವು. ಆಗೆಲ್ಲ ರಿಯಾಕ್ಟರುಗಳ ನಿರ್ಮಾಣದಿಂದ ಹಿಡಿದು ಕೊನೆಗೆ ಕಚ್ಚಾ ಯುರೇನಿಯಮ್ ಒದಗಿಸುವವರೆಗೂ ನಾವು ಅಮೆರಿಕಾದ ಹಂಗಿನಲ್ಲೆ ಇರಬೇಕಿತ್ತು. ಅಮೆರಿಕಾ ತನ್ನ ಬೆರಳ ತುದಿಯಲ್ಲಿ ನಮ್ಮನ್ನು ಆಡಿಸುತ್ತಿತ್ತು. ಯುರೇನಿಯಮ್ ಆಮದು ಮಾಡಿಕೊಳ್ಳುವ ಒತ್ತಡಕ್ಕೆ ಸಿಲುಕಿಯೇ ನಾವು ಸಿಟಿಬಿಟಿಗೆ ಸಹಿ ಮಾಡಿದ್ದೆಂದು ಮನಮೋಹನ ಸಿಂಗರು ಅವತ್ತು ಅಲವತ್ತುಕೊಂಡಿದ್ದರಲ್ಲ, ಅದಕ್ಕೇ! ಈ ಹಿನ್ನೆಲೆಯಲ್ಲಿಯೇ ಹೋಮಿ ಭಾಭಾ ಮೂರನೆ ಹಂತದ ಕನಸಿನ ಯೋಜನೆ ಮುಂದಿಟ್ಟಿದ್ದರು. ಅದು, ‘ಥೋರಿಯಮ್ ಬಳಸಿ ವಿದ್ಯುತ್ ಉತ್ಪಾದಿಸುವ ರಿಯಾಕ್ಟರುಗಳ ಸ್ಥಾಪನೆ.’
ಥೋರಿಯಮ್ ಅನ್ನುನ್ಯೂಟ್ರಾನಿನಿಂದ ಬಡಿದರೆ ಸ್ವಲ್ಪ ಹೆಚ್ಚಿನ ಅಣುಭಾರದ ಯುರೇನಿಯಮ್ ಸಿಗುತ್ತದೆ. ಇದನ್ನು ಇಂಧನವಾಗಿ ಬಳಸಬಲ್ಲ ತಂತ್ರಜ್ಞಾನ ರೂಪಿಸುವಲ್ಲಿ ಜಪಾನಿ- ಚೀನೀಯರೂ ಸೋತಿದ್ದಾರೆ. ಆದರೆ ಭಾರತೀಯರು ಎಂಟ್ಹತ್ತು ವರ್ಷಗಳ ಪ್ರಯಾಸದಿಂದ ಇಂತಹದೊಂದು ಸಂಶೋಧನೆ ನಡೆಸಿ ಯಶಸ್ಸು ಕಂಡಿದ್ದಾರೆ.
ಅದರ ಪ್ರಯೋಗವೇ ತಮಿಳುನಾಡಿನ ಕುಡಂಕುಳಮ್‌ನಲ್ಲಿ ಆಗಬೇಕಿದ್ದುದು. ಅಲ್ಲಿ ಪರಿಸರದ ನೆಪವೊಡ್ಡಿ ಒಂದಷ್ಟು ಎನ್‌ಜಿಓಗಳು ಹೋರಾಟಕ್ಕಿಳಿದವು. ಜನಸಾಮಾನ್ಯರನ್ನು ಸಂಘಟಿಸಿ ಬಲುದೊಡ್ಡ ಚಳವಳಿಯನ್ನೆ ನಡೆಸಿದವು. ಆಮೇಲೆ ಗೊತ್ತಾಯ್ತು, ಈ ಹೋರಾಟಕ್ಕೆ ಅಲ್ಲಿನ ಚರ್ಚು ಹಣ ಪೂರೈಸಿತ್ತು ಅಂತ. ಮತ್ತೆ ಚರ್ಚಿಗೆ ಬೆನ್ನೆಲುಬು ಅಮೆರಿಕಾ. ನಾಲ್ಕಾರು ದಿನಗಳ ಹಿಂದೆಯಷ್ಟೆ ಈ ಹೋರಾಟದ ಪ್ರಮುಖನ ಹೆಂಡತಿಯ ಬ್ಯಾಂಕ್ ಖಾತೆಗೆ ಅಮೆರಿಕಾದಿಂದ ದೊಡ್ಡ ಮೊತ್ತದ ಹಣ ಬಂದು ಬಿದ್ದಿರುವ ಸುದ್ದಿ ಬಂದಿದೆ. ಅಲ್ಲಿಗೆ ಎಲ್ಲವೂ ನಿಚ್ಚಳ. ಭಾರತ ಶಕ್ತಿ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಬಾರದೆಂಬ ಹಠ ಅಮೆರಿಕದ್ದು!
ಕುಡಂಕುಲಮ್‌ನಲ್ಲಿ ನಾವು ಪ್ರಯೋಗ ನಡೆಸಿ ಥೋರಿಯಮ್ ಅನ್ನು ಬಳಸುವಲ್ಲಿ ಯಶಸ್ಸು ಗಳಿಸಿದ್ದರೆ ಸಾರ್ವಭೌಮರೇ ಆಗಿಬಿಡುತ್ತಿದ್ದೆವು. ಏಕೆಂದರೆ ಸದ್ಯಕ್ಕೆ ನಮ್ಮ ಬಳಿ ಇರುವಷ್ಟು ಥೋರಿಯಮ್ ನಿಕ್ಷೇಪ ಜಗತ್ತಿನ ಯಾವ ರಾಷ್ಟ್ರದ ಬಳಿಯೂ ಇಲ್ಲ. ಕನ್ಯಾಕುಮಾರಿಯ ಮರಳ ರಾಶಿ ಇದೆಯಲ್ಲ, ಅದು ಬರಿಯ ಮರಳಲ್ಲ, ಅಪಾರ ಶಕ್ತಿಯನ್ನು ಒಡಲಲ್ಲಿ ಅಡಗಿಸಿ ಇಟ್ಟುಕೊಂಡಿರುವ ಮಹಾನಿಕ್ಷೇಪ. ಮತ್ತು ಈ ನಿಕ್ಷೇಪ ಇಲ್ಲಿ ಸಂಗ್ರಹವಾಗಲು ಕಾರಣವೇನು ಗೊತ್ತಾ? ಉಸಿರು ಬಿಗಿ ಹಿಡಿದುಕೊಳ್ಳಿ.. ವಿಜ್ಞಾನಿಗಳೇ ಹೇಳುತ್ತಾರೆ, ’ರಾಮಸೇತು’ ಅಂತ. ಹೌದು. ಶ್ರೀಲಂಕಾ ಸುತ್ತು ಬಳಸಿ ಹಿಂದೆ ಜಿಗಿದ ಸಮುದ್ರದ ನೀರು, ರಾಮಸೇತುವಿಗೆ ಬಡಿದು ಮರಳುತ್ತದಲ್ಲ, ಆಗ ಒಡಲಿನಲ್ಲಿರುವ ಥೋರಿಯಮ್ ಅನ್ನು ಕನ್ಯಾಕುಮಾರಿಯ ದಂಡೆಗೆ ತಂದು ಸುರಿದು ಹೋಗುತ್ತದೆಯಂತೆ. ಒಮ್ಮೆ ಈ ಸೇತುವನ್ನು ಒಡೆದು ಬಿಸಾಡಿದರೆ ಇನ್ನು ಮುಂದೆ ಥೋರಿಯಮ್ ನಿಕ್ಷೇಪದ ಸಂಗ್ರಹ ನಿಲ್ಲುವುದಲ್ಲದೇ ಸೇತು ಒಡೆಯುವ ನೆಪದಲ್ಲಿ ಇರುವ ನಿಕ್ಷೇಪವನ್ನೂ ಒಯ್ಯುವ ಪ್ರಯತ್ನ ಅಮೆರಿಕಾದ್ದು!
ಹೇಳಿ, ನಾವು ಮೂರ್ಖರಲ್ಲವೆ? ವಿಜ್ಞಾನಿಗಳು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಕೋರ್ಟು ಎಚ್ಚರ ಹೇಳಿದೆ. ಅಷ್ಟಾದರೂ ರಾಮಸೇತುವನ್ನು ಮುರಿದು ಹಾಕಲು ನಿಂತಿದ್ದಾರಲ್ಲ, ಇವರಿಗೆ ಏನೆನ್ನಬೇಕು ಹೇಳಿ? ಸೋನಿಯಾ ಗಾಂಧಿಯಿಂದ ಹಿಡಿದು ಕರುಣಾನಿಧಿಯವರೆಗೆ ಎಲ್ಲರೂ ಇದರ ಹಿಂದೆ ಬಿದ್ದಿದ್ದಾರೆ. ಅವರಿಗೆಲ್ಲ ದೇಶದ ಕಾಳಜಿಗಿಂತ ಸ್ವಂತದ ಹಿತಾಸಕ್ತಿಯೇ ಮುಖ್ಯ.
ಚೀನಾ ನಮ್ಮ ಸುತ್ತ ಹೆಣೆಯುತ್ತಿರುವ ಜಾಲಕ್ಕೆ ನಾವು ಸ್ವಾವಲಂಬಿಯಾಗುವುದೊಂದೇ ಮಾರ್ಗ. ಅದರಲ್ಲಿಯೂ ಶಕ್ತಿ ವಿಚಾರದಲ್ಲಿ ನಾವು ಸಕ್ಷಮರಾಗಿಬಿಟ್ಟರೆ ಚೀನಾವನ್ನು ನಿಂತಲ್ಲೇ ಬಗ್ಗುಬಡಿಯಬಹುದು. ಅಲ್ಲದೆ ಮತ್ತೇನು? ಪ್ರತಿವರ್ಷ ನೂರೈವತ್ತು ಬಿಲಿಯನ್ ಡಾಲರಿನಷ್ಟು ಹಣ ಉಳಿದುಬಿಟ್ಟರೆ ಭಾರತ ಜಗತ್ತಿನ ಶ್ರೀಮಂತ ರಾಷ್ಟ್ರಗಳ ಸಾಲಿಗೆ ಸೇರಿಬಿಡುವುದಿಲ್ಲವೆ?
ಹಾ.. ಹೇಳುವುದು ಮರೆತಿದ್ದೆ. ಮನಮೋಹನ ಸಿಂಗರು ಅಧಿಕಾರಕ್ಕೆ ಬಂದ ನಂತರ ೨೦ ಲಕ್ಷ ಟನ್‌ನಷ್ಟು ಥೋರಿಯಮ್‌ಗೆ ಸಮನಾದ ಮೋನಾಝೈಟ್ ನಮ್ಮ ಕರಾವಳಿಯಿಂದ ಕಾಣೆಯಾಗಿದೆ. ಬೆಲೆಕೇರಿಯಿಂದ ಕಾಣೆಯಾದ ಕಬ್ಬಿಣದ ಅದಿರಿನ ತನಿಖೆ ಬಲು ಜೋರಾಗಿ ನಡೆಯುತ್ತಿದೆಯಲ್ಲ, ಈ ಮೋನಾಜೈಟ್ ನಾಪತ್ತೆಯಾದುದರ ಬಗ್ಗೆ ಯಾರು ಮಾಡುತ್ತಾರೆ ಹೇಳಿ!? ನಾವು ಹೀಗೇ ಸುಮ್ಮನಿದ್ದರೆ ಮನಮೋಹನ ಸಿಂಗರು ನಮ್ಮ ವ್ಯಾಪ್ತಿಯ ಗಾಳಿ, ನೀರು, ಮಣ್ಣನ್ನು ಮಾರಿ ಹುಳ್ಳಗೆ ಕೂತುಬಿಡುತ್ತಾರೆ.
ಅದಕ್ಕೇ ಹೇಳಿದ್ದು, ಭಯಾನಕ ಪರಿಸ್ಥಿತಿಯತ್ತ ನಾವು ತೆವಳಿಕೊಂಡು ಹೋಗುತ್ತಿದ್ದೇವೆ ಅಂತ.

Leave a Reply