ವಿಭಾಗಗಳು

ಸುದ್ದಿಪತ್ರ


 

ರಾಷ್ಟ್ರಪತಿ ಗಾದಿಗೆ ನನ್ನ ಆಯ್ಕೆ ಇವರು, ನಿಮ್ಮ ಆಯ್ಕೆ ಯಾರು?

ರಾಷ್ಟ್ರಪತಿ ಯಾರಾಗಬೇಕೆಂಬುದರ ಕುರಿತಂತೆ ಚರ್ಚೆ ಜೋರಾಗಿ ನಡೆಯುತ್ತಿದೆ. ಮುಸ್ಲಿಮ್ ಮತ ಬ್ಯಾಂಕನ್ನು ಒಲಿಸಿಕೊಳ್ಳಲಿಕ್ಕಾಗಿಯೇ ಉಪರಾಷ್ಟ್ರಪತಿ ಅನ್ಸಾರಿಯವರನ್ನು ಪಟ್ಟಕ್ಕೇರಿಸಿಬಿಡುವ ಹುನ್ನಾರ ಕಾಂಗ್ರೆಸ್ಸಿನದು. ಅತ್ತ ಬಿಜೆಪಿಯಾದರೋ ನೂರಾ ಇಪ್ಪತ್ತೊಂದು ಕೋಟಿ ಜನರಿರುವ ನಾಡಿನಲ್ಲಿ ದೇಶದ ಮಹೋನ್ನತ ಹುದ್ದೆಗೆ ಒಬ್ಬರನ್ನು ಹೆಸರಿಸಲಾಗದಷ್ಟು ದೈನೇಸಿ ಸ್ಥಿತಿಗೆ ತಲುಪಿಬಿಟ್ಟಿದೆ. ರಾಷ್ಟ್ರೀಯತೆಯ ಪ್ರತಿಬಿಂಬ ಎನ್ನಿಸಿಕೊಂಡ ಪಕ್ಷವೊಂದಕ್ಕೆ ರಾಷ್ಟ್ರಪುರುಷರೇ ಕಾಣುತ್ತಿಲ್ಲವೆಂದರೆ ನಿಜಕ್ಕೂ ಆತಂಕವೆ ಸರಿ. ಅತ್ತ ಒಂದಷ್ಟು ಪತ್ರಿಕೆಗಳು, ಒಂದಷ್ಟು ಲೇಖಕರು ತಮ್ಮದೇ ಹೆಸರನ್ನು ಹರಿಬಿಡುತ್ತಿದ್ದಾರೆ. ಒಬ್ಬರಂತೂ ಎರಡು ಅವಧಿಗೆ ಅಮೀರ್ ಖಾನರನ್ನೆ ರಾಷ್ಟ್ರಪತಿ ಮಾಡೋಣವೆಂದು ಫರ್ಮಾನು ಹೊರಡಿಸಿದ್ದಾರೆ. ಎತ್ತರ, ಅಗಲದ ದೃಷ್ಟಿಯಿಂದ ನೋಡುವುದಾದರೆ ಅಮಿತಾಭ್ ಬಚ್ಚನ್ ಅವರ ಆಯ್ಕೆಯಂತೆ! ಇಬ್ಬರೂ ಬೇಡವೆಂದರೆ ಸಚಿನ್ ತೆಂಡೂಲ್ಕರ್‌ನನ್ನು ಕೇಳಬಹುದಂತೆ.
ವಾರೆವ್ಹಾ… ಬಾಬೂ ರಾಜೇಂದ್ರ ಪ್ರಸಾದರು, ರಾಧಾಕೃಷ್ಣನ್ನರು, ಕೊನೆಗೆ ಅಬ್ದುಲ್ ಕಲಾಮರು ಅಲಂಕರಿಸಿದಂತಹ ಸ್ಥಾನಕ್ಕೆ ನಾವು ಸೂಚಿಸುತ್ತಿರುವ ಹೆಸರುಗಳು ಎಂಥವು ನೋಡಿ! ಸಂಕರ್ ದಯಾಳ್ ಶರ್ಮಾ, ಪ್ರತಿಭಾ ಪಾಟೀಲರಂತಹ ರಬ್ಬರ್ ಸ್ಟಾಂಪ್ ಗಳನ್ನು ನೋಡಿದ ಮೇಲೆ ಅಲ್ಲಿ ಯಾರು ಕುಳಿತರೂ ಅಡ್ಡಿ ಇಲ್ಲ ಅನ್ನಿಸೋದು ಸಹಜವೇ. ಕೆಲವರಿಗೆ ರಾಷ್ಟ್ರಪತಿ ಹುದ್ದೆ ಕೆಲಸ ಮಾಡಲು ದೊರೆತ ಅಪೂರ್ವ ಅವಕಾಶ. ಇನ್ನು ಕೆಲವರಿಗೆ ಅದು ಭೋಗದ ವಾಸನೆ ತೀರಿಸಿಕೊಳ್ಳಲು ಉನ್ನತ ಹುದ್ದೆ. ಒಮ್ಮೆ ಅಲ್ಲಿ ಹೋಗಿ ಕುಳಿತರೆ ಮುಂದಿನ ಐದು ವರ್ಷಗಳ ಕಾಲ ಈ ದೇಶದ ರಾಜನಂತೆ ವಾಸಿಸಬಹುದಾದ ಅವಕಾಶ ಅದು. ಯಾರಾದರೂ ಬಿಡುತ್ತಾರಾ? ಸಂಗ್ಮಾರಂತಹ ಸಮರ್ಥ ವ್ಯಕ್ತಿಯೂ `ಹತ್ತು ವರ್ಷಗಳ ಹಿಂದೆ ಸೋನಿಯಾರನ್ನು ವಿದೇಶಿ ಮಹಿಳೆಯೆಂದು ಜರೆದಿದ್ದಕ್ಕೆ ಕ್ಷಮೆ ಯಾಚಿಸುತ್ತೇನೆ’ ಎಂದಿದ್ದು ಸುಮ್ಮನೆ ಅಲ್ಲ. ಒಮ್ಮೆ ಮೇಡಂ ಒಪ್ಪಿ ಅಲ್ಲಿ ಕುಳಿತರೆ, ಆಮೇಲಿನ ಸುಖ ಸವಲತ್ತಿಗೆ ಯಾರ ಅಡ್ಡಿ!?
ಇಷ್ಟಕ್ಕೂ ರಾಷ್ಟ್ರಪತಿಯೊಬ್ಬರಿಗೇ ದಿನಕ್ಕೆ ನಾವು ಮಾಡುವ ಖರ್ಚು ಹೆಚ್ಚೂಕಡಿಮೆ ಆರೆಂಟು ಲಕ್ಷ. ವರ್ಷಕ್ಕೆ ೨೫ರಿಂದ ೩೦ ಕೋಟಿ! ಅವರಿರುವ ರಾಷ್ಟ್ರಪತಿ ಭವನದಲ್ಲಿ ೩೫೦ ಕೋಣೆಗಳಿವೆ. ಅಷ್ಟನ್ನೂ ಸದಾ ಸ್ವಚ್ಛವಾಗಿಡಲೆಂದು ಸಾವಿರಕ್ಕೂ ಮಿಕ್ಕಿ ಕಾರ್ಮಿಕರು. ರಾಷ್ಟ್ರಪತಿಗಳು ಬೆಳಗ್ಗೆ, ಸಂಜೆ ಅಡ್ಡಾಡಿ ಮನ ಮುದಗೊಳಿಸಿಕೊಳ್ಳಲೆಂದು ಒಂದು ಭರ್ಜರಿ ಮುಘಲ್ ಗಾರ್ಡನ್ ಇದೆ. ಅದನ್ನು ನೋಡಿಕೊಳ್ಳಲು ಎಂಟುನೂರು ಕಾರ್ಮಿಕರಿದ್ದಾರಂತೆ. ಅವರಿಗಾಗಿ ಸದಾ ಹೊರಡುವ ಸಿದ್ಧತೆಯಲ್ಲಿರುವ ೧೮ ಬೋಗಿಗಳ ಒಂದು ರೈಲಿದೆ. ಅದನ್ನು ಪ್ರಯಾಣ ಸನ್ನದ್ಧವಾಗಿರಿಸಲೆಂದೇ ದಿನನಿತ್ಯ ಒಂದೂವರೆ ಲಕ್ಷದಷ್ಟು ಖರ್ಚು! ದುರ್ದೈವ, ಕಳೆದ ಅನೇಕ ವರ್ಷಗಳಿಂದ ಅದನ್ನು ರಾಷ್ಟ್ರಪತಿಗಳು ಬಳಸಲೇ ಇಲ್ಲ.
ಭಾರತವನ್ನಾಳುತ್ತಿದ್ದ ಬ್ರಿಟಿಷ್ ಗವರ್ನರ್ ಜನರಲ್‌ಗಳು ಇಲ್ಲಿನ ಜನರನ್ನು ಶೋಷಿಸಿ ಐಷಾರಾಮಿಯಾಗಿ ಬದುಕಲು ಇವೆಲ್ಲವನ್ನೂ ಮಾಡಿಕೊಂಡಿದ್ದರು. ದೂರದ ಲಂಡನ್ನಿನಿಂದ ಇಲ್ಲಿನ ಉದ್ಯೋಗಕ್ಕೆ ಅವರು ಬರಲೊಪ್ಪಲೆಂದೇ ಈ ತರಹದ ವ್ಯವಸ್ಥೆ ಅವರಿಗೆ ಮಾಡಿಕೊಡಲಾಗಿತ್ತು. ಯಾರಪ್ಪನ ಗಂಟು ಹೇಳಿ? ನಮ್ಮ ದುಡ್ಡು, ಅವರಿಗೆ ಆನಂದ. ಬ್ರಿಟಿಷರು ದೇಶ ಬಿಟ್ಟು ೬೫ ವರ್ಷಗಳು ಉರುಳಿಹೋದ ನಂತರವೂ ನಮ್ಮ ಅವಸ್ಥೆ ಹಾಗೇ ಇದೆ. ಇಷ್ಟಕ್ಕೂ ರಾಷ್ಟ್ರಪತಿ ಹುದ್ದೆ ಯಾಕೆ ಬೇಕು ಹೇಳಿ. ಪ್ರತಿಭಾ ಪಾಟೀಲರು ತಮ್ಮ ಅವಧಿಯಲ್ಲಿ ಕೈಗೊಂಡ ಒಂದಾದರೂ ಸಮರ್ಥ ನಿರ್ಧಾರ, ತೋರಿದ ಸಮರ್ಥ ಮಾರ್ಗ ನಿಮಗೆ ನೆನಪಿದೆಯಾ? ಬ್ರಿಟಿಷರು ಭಾರತವನ್ನು ಆಳುವಾಗ ಇಲ್ಲಿನ ಸರ್ಕಾರಗಳನ್ನು ನಿಯಂತ್ರಿಸಲೆಂದೇ ಈ ಹುದ್ದೆ ಕೆಲಸ ಮಾಡುತ್ತಿತ್ತು. ಈಗ ಸರ್ಕಾರಗಳು ಹೇಳಿದಂತೆ ಕೇಳುವುದೇ ಅವರ ಕೆಲಸ!
ಹೀಗೆ ತಾವು ಹೇಳುವ ಕೆಲಸ ಮಾಡುವವರನ್ನೇ ಪಕ್ಷಗಳು ಅಧ್ಯಕ್ಷ ಹುದ್ದೆಗೆ ಆರಿಸೋದು. ಅದಕ್ಕೇ ಪ್ರತಿಭಾ ಪಾಟೀಲರು ಹಿಂದೊಮ್ಮೆ, `ಗಾಂಧಿ ಕುಟುಂಬಕ್ಕೆ ಮಾಡಿದ ಸೇವೆಯಿಂದಾಗಿಯೇ ನಾನೀಗ ಈ ಸ್ಥಾನದಲ್ಲಿರೋದು’ ಎಂದಿದ್ದರು. ಆ ಸ್ಥಾನದ ಘನತೆ ಗೌರವಗಳನ್ನು ಮರೆತು ಸರ್ಕಾರಿ ಜಮೀನನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದರು. ಅನಗತ್ಯ ವಿದೇಶ ಪ್ರಯಾಣ ಮಾಡಿ ದೇಶಕ್ಕೆ ಹೊರೆಯಾಗಿದ್ದರು.
ಸ್ವಲ್ಪ ರಾಜೇಂದ್ರ ಪ್ರಸಾದರನ್ನು ನೆನಪಿಸಿಕೊಳ್ಳಿ. ಅವರನ್ನು ರಾಷ್ಟ್ರಪತಿ ಪದವಿಗೆ ಸೂಚಿಸಿದಾಗ ಹಳ್ಳಿ ರೈತ ಈ ಕೆಲಸ ಮಾಡಿಯಾನು ಎಂದು ಜನ ಮೂದಲಿಸಿದ್ದರು. ಕೆಲಸ ಮಾಡುವುದೇನು? ಸರ್ಕಾರವನ್ನು ಎಚ್ಚರದಲ್ಲಿಟ್ಟು ತಪ್ಪು ಹಾದಿಯಲ್ಲಿ ನಡೆಯದಂತೆ ರಾಜೇಂದ್ರಪ್ರಸಾದರು ನೋಡಿಕೊಳ್ಳುತ್ತಿದ್ದರು. ಹಿಂದೂ ಕೋಡ್ ಬಿಲ್‌ನ ಕುರಿತಂತೆ ವಿವಾದವೆದ್ದಾಗ ತಮ್ಮ ನಿರ್ಣಯವನ್ನು ನೆಹರೂಗೆ ವಿರುದ್ಧವಾಗಿ ಮಂಡಿಸಿದವರು ಅವರೇ. ಚೀನಾದ ಆಕ್ರಮಣ ಅವರ ಮನಸನ್ನು ಘಾಸಿಗೊಳಿಸಿತ್ತಲ್ಲ, ಆಗ ಪ್ರಧಾನಿಯ ಬೇಜವಾಬ್ದಾರಿ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಅಸಮಾಧಾನ ತೋಡಿಕೊಂಡಿದ್ದರು. ಸೋಮನಾಥ ಮಂದಿರದ ಉದ್ಘಾಟನೆಗೆ ಹೋಗಬಾರದೆಂದು ಪ್ರಧಾನಿ ನೆಹರೂ ತಾಕೀತು ಮಾಡಿದಾಗ ಅದನ್ನು ತಿರಸ್ಕರಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದರು. `ನಮ್ಮದು ಜಾತ್ಯತೀತ ರಾಷ್ಟ್ರ ನಿಜ, ಆದರೆ ಧರ್ಮರಹಿತ ರಾಷ್ಟ್ರವಲ್ಲ’ ಎಂದು ಪ್ರಧಾನಿಗೆ ಜರ್ಬಿನಿಂದಲೇ ಉತ್ತರಿಸಿದರು. ಇದರಿಂದ ನೆಹರೂಗೆ ಅವರ ಮೇಲೆ ಬಹಳವೇ ಕೋಪವುಂಟಾಯ್ತು. ಆತ ಪಟೇಲರು ತೀರಿಕೊಂಡಾಗ ರಾಜೇಂದ್ರ ಪ್ರಸಾದರು ಮಾಡಿದ ಭಾಷಣ ಸರ್ಕಾರಿ ಮಾಧ್ಯಮಗಳಲ್ಲಿ ಬಿತ್ತರವಾಗದಂತೆ ನೋಡಿಕೊಂಡರು. ನೊಂದ ಜೀವ ಎಲ್ಲರ ಆಕ್ಷೇಪದ ನಡುವೆಯೂ ತನ್ನ ಹುದ್ದೆಗೆ ರಾಜೀನಾಮೆ ಎಸೆದು ಬಂತು. ನೆಹರೂ ಚಮಚಾಗಿರಿ ಮಾಡಿದ್ದರೆ, ಆ ಹುದ್ದೆಯ ಘನತೆಯನ್ನು ಸಮಾಧಿ ಮಾಡಿ ಉಳಿದ ದಿನಗಳನ್ನು ಅವರು ಅಲ್ಲಿಯೇ ಕಳೆಯಬಹುದಿತ್ತು.
ಅನಂತರ ಆ ಹುದ್ದೆಯನ್ನೇರಿದ್ದು ರಾಧಾಕೃಷ್ಣನ್ನರು. ತಮ್ಮ ಬದುಕಿನುದ್ದಕ್ಕೂ ಭಾರತೀಯತೆಯನ್ನೆ ಉಸಿರಾಡಿದ ಅಪ್ರತಿಮ ಶಿಕ್ಷಕ. ಅಪಾರ ಸ್ವಾಭಿಮಾನಿ. ನಮ್ಮ ವಿಶ್ವವಿದ್ಯಾಲಯಕ್ಕೆ ಅಧ್ಯಯನಕ್ಕೆ ಬನ್ನಿ ಅಂತ ವಿದೇಶದ ವಿವಿಯೊಂದು ಕೇಳಿಕೊಂಡಾಗ `ಕಲಿಯಬೇಕಾದ್ದು ಇಲ್ಲೇ ಸಾಕಷ್ಟಿದೆ, ಕಲಿಸಲು ಬೇಕಿದ್ದರೆ ಬರುತ್ತೇನೆ’ ಎಂದುಬಿಟ್ಟಿದ್ದರು. ರಷ್ಯಾಕ್ಕೆ ರಾಯಭಾರಿಯಾಗಿ ಅವರು ಹೊರಟರಲ್ಲ. ಆಗ ಶೀತಲಯುದ್ಧದ ಸಮಯ. ಭಾರತ ಅಮೆರಿಕಾ – ರಷ್ಯಾಗಳ ನಡುವೆ ಯಾರು ಹಿತವರೆಂದು ತಲೆ ಕೆರೆದುಕೊಳ್ಳುತ್ತಿತ್ತು. ರಾಧಾಕೃಷ್ಣನ್ನರ ಪ್ರಭಾವ ಎಷ್ಟಿತ್ತೆಂದರೆ, ಅವರ ಹಿಂದಿನ ರಾಯಭಾರಿಯೊಂದಿಗೆ ಮಾತೂ ಆಡದಿದ್ದ ರಷ್ಯಾದ ಸರ್ವಾಧಿಕಾರಿ ಸ್ಟಾಲಿನ್, ರಾಧಾಕೃಷ್ಣನ್ನರನ್ನು ಕರೆಸಿಕೊಂಡಿದ್ದ. ಅವರಿಂದ ಪ್ರಭಾವಿತನಾಗಿ, `ನನ್ನನ್ನು ಮನುಷ್ಯನಂತೆ ಕಂಡು ಮಾತನಾಡಿಸಿದವರು ನೀವು ಮಾತ್ರ’ ಎಂದಿದ್ದ. ಭಾರತದೊಂದಿಗೆ ರಷ್ಯಾ ನಡೆದುಕೊಳ್ಳುತ್ತಿರುವ ರೀತಿಯ ಕುರಿತು ಆಕ್ಷೇಪಿಸಿ, ರಾಧಾಕೃಷ್ನನ್ನರು ಸ್ಟಾಲಿನ್‌ನನ್ನು ತಿದ್ದಿದ್ದರು. ಅಶೋಕ ಯುದ್ಧಾನಂತರ ಸಂತನಾದ ಕಥೆ ಹೇಳಿ ಆತನನ್ನು ಶಾಂತಿಯೆಡೆಗೆ ಯೋಚಿಸುವಂತೆಯೂ ಮಾಡಿದ್ದರು. ಅಷ್ಟೇ ಅಲ್ಲ, ಅವರು ಭಾರತಕ್ಕೆ ಮರಳುವ ಸಂದರ್ಭ ಬಂದಾಗ ಸಚಿವರೊಬ್ಬರು ಬೀಳ್ಕೊಡಲೆಂದು ಕರೆ ಮಾಡಿದ್ದರು. ಔಪಚಾರಿಕ ಮಾತಿನ ನಂತರ ರಾಧಾಕೃಷ್ಣನ್, `ನೀವೇಕೆ ಕಾಶ್ಮೀರದ ವಿಷಯದಲ್ಲಿ ನಮ್ಮನ್ನು ಬೆಂಬಲಿಸುವುದಿಲ್ಲ?’ ಎಂದು ಕುಟುಕಿದ್ದರು. ಸಚಿವರು ಕಕ್ಕಾಬಿಕ್ಕಿ. ರಾಧಾಕೃಷ್ಣನ್ ತಮ್ಮ ಮಾತುಗಳನ್ನು ಗಂಭೀರ ದನಿಯಲ್ಲಿ ಸಮರ್ಥಿಸಿದ್ದರು. ಕೊನೆಗೆ ಮುಂದಿನ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ರಷ್ಯಾ ಭಾರತದ ಪರವಾಗಿ ಸದ್ದು ಮಾಡಿತ್ತು. ರಾಧಾಕೃಷ್ಣನ್ ರಷ್ಯಾದಿಂದ ಭಾರತಕ್ಕೆ ಮರಳಿ ಹೊರಟು ನಿಂತಾಗ ಸ್ಟಾಲಿನ್ ಮುಖ ಬಾಡಿತ್ತು.  `ನಿಮ್ಮಂತವರು ದೀರ್ಘಕಾಲ ಬದುಕಬೇಕು, ಅದರಿಂದ ಮನುಕುಲಕ್ಕೇ ಲಾಭವಿದೆ. ನಮ್ಮಂಥವರಿಂದಲ್ಲ’ ಎಂದು ಹೇಳಿಕೊಂಡಿದ್ದ. ಅದಾದ ಕೆಲವೇ ದಿನಗಳಲ್ಲಿ ಅವನು ತೀರಿಕೊಂಡುಬಿಟ್ಟ.
ಭಾರತದ ಪ್ರತಿಬಿಂಬವೇ ಆಗಿದ್ದ ರಾಧಾಕೃಷ್ಣನ್ ರಾಷ್ಟ್ರಪತಿಯಾದಾಗ ದೇಶ ಆನಂದಿಸಿದ್ದು ಅದಕ್ಕೇ. ಕಾಲಕ್ರಮದಲ್ಲಿ ರಾಷ್ಟ್ರಪತಿಯಾಗುವವರು ನೆಹರೂ ಮನೆತನದವರ ಚಾಕರಿ ಮಾಡಿರಬೇಕೆಂಬ ನಿಯಮ ಅಘೋಷಿತವಾಗಿ ಜಾರಿಯಾಯ್ತು. ಹೀಗೆಂದೇ ರಾಜಸ್ತಾನದ ವಕ್ಫ್ ಮಂತ್ರಿ ಅಮೀರ್ ಖಾನ್, `ಇಂದಿರಾಗಾಂಧಿಯವರ ಮನೆಯಲ್ಲಿ ಅಡುಗೆ ಮಾಡಿಕೊಂಡು, ಪಾತ್ರೆ ತೊಳೆಯುತ್ತಿದ್ದ ಪ್ರತಿಭಾ ಪಾಟೀಲರು ಪ್ರತಿಫಲವನ್ನು ಅಪೇಕ್ಷಿಸಿರಲಿಲ್ಲ. ಹೀಗಾಗಿಯೇ ಅವರನ್ನು ರಾಷ್ಟ್ರಪತಿ ಮಾಡಲಾಯ್ತು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಈಗ ಮತ್ತೆ ಅಂತಹ ಸೇವಾನಿಷ್ಠರನ್ನೆ ಹುಡುಕಲಾಗ್ತಿದೆ. ವಾಜಪೇಯಿಯೊಬ್ಬರೆ ಈ ಮಾರ್ಗ ಬದಲಿಸಿ ಅಬ್ದುಲ್ ಕಲಾಮ್‌ರಂತಹ ದೇಶ ಗೌರವಿಸುವ ವ್ಯಕ್ತಿಯನ್ನು ಆ ಹುದ್ದೆಯಲ್ಲಿ ಕೂರಿಸಿದ್ದು.
ಇರಲಿ ಬಿಡಿ. ಎಲೆಕ್ಷನ್ ವ್ಯವಸ್ಥೆಯನ್ನು ಆಮೂಲಾಗ್ರ ಬದಲಾಯಿಸಿ ಹೀಗೊಬ್ಬ ಕಮೀಷನರ್ ಇರಬಲ್ಲನೆಂದು ದೇಶಕ್ಕೆ ತೋರಿಸಿದ ಶೇಷನ್ ಹೇಗೆ? ದೇಶದ ಅಭಿವೃದ್ಧಿಯ ಬಗ್ಗೆ ಸದಾ ಚಿಂತಿಸುತ್ತ ಜನ, ಜಲ್, ಜಂಗಲ್, ಜಮೀನ್, ಜಾನ್ವರ್‌ಗಳ ರಕ್ಷಣೆಗೆ ಜೀವನವನ್ನೇ ಅರ್ಪಿಸಿರುವ ಅದ್ಭುತ ಚಿಂತಕ, ದೇಶದ ಬಗೆಗೆ ನೈಜ ಕಾಳಜಿಯುಳ್ಳ ಕೆ.ಎನ್.ಗೋವಿಂದಾಚಾರ್ಯರು ಆಗಲಾರರೇ?  ನಿಮಗೆ ಯಾವ ಕಾರು ಇಷ್ಟವೆಂದು ಕೇಳಿದ್ದಕ್ಕೆ `ಟಾಟಾ ಇಂಡಿಕಾ, ಯಾಕೆಂದರೆ ಅದರಲ್ಲಿ ಇಂಡಿಯಾ ಇದೆಯಲ್ಲ’ ಎಂದ ಉದ್ಯಮಿ ರತನ್ ಟಾಟಾ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಸದಾ ಅಂತಾರಾಷ್ಟ್ರೀಯ ಮಾರುಕಟ್ಟೆಯ ಏಳುಬೀಳುಗಳನ್ನು ಗಮನಿಸುತ್ತಾ ಸ್ವದೇಶಿ ಚಿಂತನೆಯ ಆಧಾರದ ಮೇಲೆ ರಾಷ್ಟ್ರಕಟ್ಟಲು ಯೋಜನೆಗಳನ್ನು ರೂಪಿಸುವ ಚಿಂತಕ ಎಸ್. ಗುರುಮೂರ್ತಿಯವರು ಆ ಹುದ್ದೆಯೇರಿದರೆ ಹೇಗೆ? ಹೋಗಲಿ, ಪತ್ರಕರ್ತರಾಗಿ ಜೀವನ ಆರಂಭಿಸಿ, ಭಾರತ ಎಂದೊಡನೆ ಭಾವುಕರಾಗಿಬಿಡುವ ಎಂ.ವಿ.ಕಾಮತರು ಯಾಕಾಗಬಾರದು?  ನನ್ನ ಬಳಿ ಪಟ್ಟಿ ದೊಡ್ಡದಿದೆ. ಆದರೆ ಅವರ್ಯಾರೂ ಸರ್ಕಾರಗಳಿಗೆ ಹಿಡಿಸೋಲ್ಲ. ಏಕೆಂದರೆ ಇವರುಗಳು ಯಾವುದೇ ಪಾರ್ಟಿಯ ಗುಲಾಮರಲ್ಲ.
ರಾಷ್ಟ್ರಕ್ಕೆ ಅಧಿಪತಿಯ ಸ್ಥಾನದಲ್ಲಿರುವವನು ಯಾರದ್ದೋ ಚಾಕರನಾಗಿರಬೇಕೆನ್ನುವುದೇ ಹೊಟ್ಟೆಯಲ್ಲಿ ಬೆಂಕಿ ಹಾಕುವ ವಿಷಯ.

3 Responses to ರಾಷ್ಟ್ರಪತಿ ಗಾದಿಗೆ ನನ್ನ ಆಯ್ಕೆ ಇವರು, ನಿಮ್ಮ ಆಯ್ಕೆ ಯಾರು?

 1. Prabhu

  Well said May i have Contact no Of P. Harishndra author of “Vishada Sujigalu”. Please respond

 2. umesh H R

  ರಾಷ್ಟ್ರಪತಿ ಗಾದಿಗೆ ನನ್ನ ಆಯ್ಕೆ
  ಶೇಷನ್

 3. spappy

  Am speechless

Leave a Reply