ವಿಭಾಗಗಳು

ಸುದ್ದಿಪತ್ರ


 

ವಸ್ತ್ರೋದ್ಯಮ ವೈಭವಕ್ಕೆ ಮರಳೋದು ಯಾವಾಗ?

ನಮ್ಮ ಬಟ್ಟೆ ಉದ್ಯಮ ನಾಶವಾಗಲಿಕ್ಕೆ ನಾವು ತಂತ್ರಜ್ಞಾನದಿಂದ ದೂರವಿದ್ದುದೇ ಕಾರಣವೆಂದು ಕೆಲವು ಬುದ್ಧಿಜೀವಿಗಳು ವಾದಿಸುವುದುಂಟು. ಹಾಗೇ ಅವರು ಬ್ರಿಟೀಷರಿಗೆ ಕವರಿಂಗ್ ಫೈರ್ ಕೊಡೋದು. ಯಂತ್ರಗಳನ್ನೇ ಆವಿಷ್ಕರಿಸಲು ಹಣ ಕೊಟ್ಟು, ಉತ್ಪಾದನೆಗೆ ಬೇಕಾದ ಮೂಲದ್ರವ್ಯ ಮತ್ತು ಕಚ್ಚಾವಸ್ತುವನ್ನು ಕೈಗಿಟ್ಟು, ತಯಾರಾದ ವಸ್ತುವನ್ನು ಅತಿ ಹೆಚ್ಚಿನ ಬೆಲೆಗೆ ಕೊಂಡುಕೊಳ್ಳುವ ಜನರಿದ್ದರೆ ಎಂತಹ ರಾಷ್ಟ್ರವಾದರೂ ಬಲು ದೊಡ್ಡ ಸೌಧ ನಿಮರ್ಾಣ ಮಾಡೀತು. ತಂತ್ರಜ್ಞಾನದ ಮಾತಾಡುವವರಿಗೆ ಗೊತ್ತಿರಲಿ ಜಗತ್ತಿನ ಜನ ಎಲೆಗಳಿಂದ ಮಾನ ಮುಚ್ಚಿಕೊಳ್ಳುವ ಕಲ್ಪನೆಯಲ್ಲಿರುವಾಗಲೇ ಭಾರತ ಅತ್ಯುತ್ಕೃಷ್ಟ ನೇಯ್ಗೆಯ ಕಲ್ಪನೆಯನ್ನು ಸಾಕಾರಗೊಳಿಸಿತ್ತು.

1

ಇಳಕಲ್ಲು ಎಂದೊಡನೆ ‘ಸೀರೆ’ ನೆನಪಾಗುವುದು ಸಹಜವೇ. ಅದೊಂದು ರೀತಿ ಚೆನ್ನಪಟ್ಟಣದೊಂದಿಗೆ ಬೆಸೆದಿರುವ ಗೊಂಬೆಗಳಂತೆಯೇ. ಕಳೆದ ಅನೇಕ ದಶಕಗಳಿಂದ ಈ ಸೀರೆ ನೇಯುವವರು ಹೈರಾಣಾಗಿ ಇತರೆ ಉದ್ಯೋಗಗಳತ್ತ ಮುಖ ಮಾಡಿ ಕುಳಿತಾಗಿವೆ. ಉತ್ತರ ಕನರ್ಾಟಕದಲ್ಲಿ ವಿಶೇಷವಾಗಿ ಬೆಳಗಾವಿ, ಬಾಗಲಕೋಟೆ, ಬಿಜಾಪುರಗಳಲ್ಲಿ ತುಂಬಿ ಹೋಗಿರುವ ನೇಕಾರರ ಪಾಲಿನ ಬಲುದೊಡ್ಡ ಸಮಸ್ಯೆಯೇನು ಗೊತ್ತೇ? ಅವರ ಇಂದಿನ ಪೀಳಿಗೆ ನೇಕಾರಿಕೆಯನ್ನು ಬಿಟ್ಟು ಹೊಟ್ಟೆ ಪಾಡಿನ ಅನ್ಯ ಮಾರ್ಗಗಳನ್ನು ಅನುಸರಿಸುತ್ತಿದೆ ಅನ್ನೋದು. ಸ್ವಾವಲಂಬಿಯಾಗಿ, ಸ್ವಾಭಿಮಾನದಿಂದ ಎದೆಯೆತ್ತಿ ಬದುಕುತ್ತಿದ್ದ ಈ ಕುಶಲಕಮರ್ಿಗಳನ್ನು ಸಕರ್ಾರದೆದುರು ಕೈ ಚಾಚುವಂತೆ ಮಾಡಿ ಸ್ಕಿಲ್ ಡೆವಲಪ್ಮೆಂಟ್ನ ಹೆಸರಲ್ಲಿ ಹೊಸ ಕೌಶಲ್ಯ ಹುಟ್ಟು ಹಾಕುವುದು ಅದೆಷ್ಟು ನ್ಯಾಯ ಹೇಳಿ. ಹೀಗೆ ಹೇಳಬೇಕೆನಿಸಿದ್ದು ಅದೇಕೆ ಗೊತ್ತೇ? ಇಳಕಲ್ಲಿನ ನೇಕಾರ ಮಿತ್ರರೊಬ್ಬರು ಈ ಸೀರೆಗಳ ಪುನರುಜ್ಜೀವನಕ್ಕೆ ಹೊಸದೊಂದು ಯೋಜನೆಯನ್ನು ಹೊತ್ತು ತಂದಿದ್ದರು. ಕನರ್ಾಟಕದ ಅಂಗನವಾಡಿ ಶಿಕ್ಷಕಿಯರೆಲ್ಲ ಇಳಕಲ್ಲಿನ ಸೀರೆಯನ್ನೇ ಉಡುವಂತೆ ಸರಕಾರ ಆದೇಶ ಹೊರಡಿಸಿದರೆ ಸಾವಿರಾರು ಸೀರೆಗಳನ್ನು ನೇಯುವ ಕಾರ್ಯ ಶುರುವಾಗುತ್ತದೆ. ಸಾವಿರಾರು ಜನರಿಗೆ ಉದ್ಯೋಗ ಖಾತ್ರಿ. ಅವರ ಕಲ್ಪನೆಗಳು ಹೀಗೆ ಗರಿಬಿಚ್ಚಿ ಓತಪ್ರೋತವಾಗಿ ಓಡುತ್ತಿದ್ದವು. ಜೊತೆಲಿದ್ದವರು ಈ ಆಲೋಚನೆಗೆ ತಲೆದೂಗಿ ಅದ್ಭುತವೆನ್ನುತ್ತಿದ್ದರು. ನಮ್ಮ ಬಳಿ ತೆರಿಗೆ ಕಟ್ಟಿಸಿಕೊಂಡು ಆ ಹಣದಲ್ಲಿ ಸೀರೆ ಖರೀದಿ ಮಾಡಿ; ಅಲ್ಲೊಂದಷ್ಟು ತಿಂದು-ತೇಗಿ, ಕಳಪೆ ಸೀರೆಗಳನ್ನು ಅಂಗನವಾಡಿ ಶಿಕ್ಷಕಿಯರಿಗೆ ತಲುಪಿಸಿಬಿಟ್ಟರೆ ಇಳಕಲ್ಲಿನ ಸೀರೆಯ ಮಾನ-ಮಯರ್ಾದೆಯೂ ಕಳೆದು ಹೋದೀತು. ಇತ್ತೀಚೆಗೆ ಶಾಲಾ ಮಕ್ಕಳಿಗೆ ಸಕರ್ಾರ ಹಂಚಿದ ಬಟ್ಟೆಯ ಕತೆ ನೆನಪಿದೆಯಲ್ಲ! ಪ್ರತಿ ವರ್ಷ ಒಂದು ಲಕ್ಷ ಇಂಜಿನಿಯರುಗಳನ್ನು ಸೃಷ್ಟಿಸುವ, ಜಗತ್ತಿಗೆಲ್ಲ ವ್ಯಾಪಾರಿಗಳನ್ನು ಕಳಿಸುವ ಕನರ್ಾಟಕಕ್ಕೆ ಇಳಕಲ್ಲಿನ ಸೀರೆಗಳಿಗೆ ಜಾಗತಿಕ ಮಾರುಕಟ್ಟೆ ಕೊಡಿಸಲು ಸಾಧ್ಯವಾಗುತ್ತಿಲ್ಲವೇ? ಗುಜರಾತು, ತಮಿಳುನಾಡು, ಬಂಗಾಳಗಳು, ತಮ್ಮ ಸೀರೆಗಳನ್ನು, ಬಟ್ಟೆಗಳನ್ನು ಜಾಗತಿಕ ಮಟ್ಟದಲ್ಲಿ ತಲುಪಿಸುವಲ್ಲಿ ಮುಂಚೂಣಿಯಲ್ಲಿರುವಾಗ ನಾವೇಕೆ ಹಿಂದುಳಿದಿದ್ದೇವೆ? ಮೊಬೈಲ್ ಅಪ್ಲಿಕೇಶನ್ಗಳ ಮೂಲಕ ಸೀರೆಗೆ ಮಾರುಕಟ್ಟೆ ಹುಡುಕುವ ಸಾಹಸ ಮಾಡಲಾರವೇನು? ನಮ್ಮ ರಾಜಕೀಯ ಇಚ್ಛಾ ಶಕ್ತಿ ಸತ್ತು ಹೋಗಿರುವುದೇ ಇಲ್ಲಿ. ಚುನಾವಣೆ ಬಂದೊಡನೆ ನೇಕಾರರ ಸಮಾವೇಶಗಳನ್ನು ಆಯೋಜಿಸುವ ರಾಜಕಾರಣಿಗಳು ಅವರನ್ನು ತಮ್ಮೆದುರು ಸದಾ ಕೈ ಚಾಚಿ ನಿಲ್ಲುವಂತೆ ಮಾಡಿಕೊಂಡಿದ್ದಾರೆಯೇ ಹೊರತು ಸ್ವತಂತ್ರವಾಗಿ ಆಲೋಚಿಸುವ ಪ್ರವೃತ್ತಿ ಅವರಲ್ಲಿ ಬೆಳೆಯಲು ಬಿಡುವುದೇ ಇಲ್ಲ. ಇದೊಂದು ರೀತಿ ಸಕ್ಕರೆ ಕಾಖರ್ಾನೆ ಶುರುಮಾಡಿ, ಹೆಚ್ಚು ಹೆಚ್ಚು ರೈತರಿಗೆ ಕಬ್ಬು ಬೆಳೆಯಲು ಹೇಳಿ, ಅವರಿಗೆ ಬೆಲೆ ಸಿಗದಂತೆ ಮಾಡಿ ಮತ್ತೆ ನಮ್ಮದೇ ತೆರಿಗೆ ಹಣ ಲೂಟಿ ಮಾಡಿ ಬೆಂಬಲ ಬೆಲೆ ಘೋಷಿಸಿದಂತೆಯೇ.

ಬ್ರಿಟೀಷರ ಆಳ್ವಿಕೆಯ ಲಾಗಾಯ್ತು ಹೊಸ-ಹೊಸ ಜಾಗತಿಕ ಆಯಾಮಗಳಿಗೆ ತೆರೆದುಕೊಳ್ಳುವಲ್ಲಿ ನಾವು ಸೋತು ಬಿಟ್ಟಿದ್ದೇವೆ. ವಿಶೇಷವಾಗಿ ನೇಕಾರಿಕೆಯಲ್ಲಿ. 18ನೇ ಶತಮಾನದಲ್ಲಿ ಜಗತ್ತಿನ ಒಟ್ಟಾರೆ ಬಟ್ಟೆ ವ್ಯವಹಾರದಲ್ಲಿ ನಮ್ಮ ಪಾಲು ಶೇಕಡಾ 25 ರಷ್ಟಿತ್ತು. ಬ್ರಿಟೀಷರ ಆಳ್ವಿಕೆಯ ಕಾಲಕ್ಕೆ ಅದು ಹೇಗೆ ನಾಶಗೊಂಡಿತೆಂದರೆ ಜಾಗತಿಕ ವಹಿವಾಟು ಬಿಡಿ 1896ರ ವೇಳೆಗೆ ಭಾರತಕ್ಕೆ ಬೇಕಾದ ಬಟ್ಟೆಯ ಶೇಕಡಾ 8 ರಷ್ಟನ್ನು ಉತ್ಪಾದನೆ ಮಾಡುವಲ್ಲಿಯೇ ಹೈರಾಣಾಗಿಬಿಟ್ಟಿದ್ದೇವು ನಾವು. ಆಗಲೂ ಹತ್ತಿ ಬೆಳೆಯುವುದು ನಿಲ್ಲಿಸಿರಲಿಲ್ಲ. ಆದರೆ ಅದನ್ನು ಇಲ್ಲಿ ನೇಯುತ್ತಿರಲಿಲ್ಲ; ಬದಲಿಗೆ ಇಂಗ್ಲೆಂಡಿಗೆ ಕಳಿಸುವ ಅನಿವಾರ್ಯತೆಗೆ ಸಿಲುಕಿದ್ದೆವು. ಮಸ್ಲಿನ್ ಬಟ್ಟೆಗಳ ಬಲು ದೊಡ್ಡ ರಫ್ತುದಾರ ಪ್ರದೇಶವಾಗಿದ್ದ ಢಾಕಾದಲ್ಲಿ ನೇಕಾರರ ಸಂಖ್ಯೆ ಬಲುದೊಡ್ಡ ಪ್ರಮಾಣದಲ್ಲಿ ಇಳಿತ ಕಂಡಿತು. ಬ್ರಿಟೀಷರು ಭಾರತಕ್ಕೆ ಮಾಡುತ್ತಿದ್ದ ಬಟ್ಟೆ ರಫ್ತು 1830ರಲ್ಲಿ 60 ದಶಲಕ್ಷ ಯಾಡರ್ುಗಳಿಂದ 1870 ರ ವೇಳೆಗೆ ನೂರು ಕೋಟಿ ಯಾಡರ್ುಗಳನ್ನು ಮುಟ್ಟಿತು. ನಾವು ಬಟ್ಟೆ ನೇಯಲು ಬೇಕಾದ ಹತ್ತಿಯನ್ನೂ ಬೆಳೆದು ಅದನ್ನು ಕಡಿಮೆ ಬೆಲೆಗೆ ರಫ್ತು ಮಾಡುತ್ತಿದ್ದುದೇ ಅಲ್ಲದೇ ಬಂದ ಹಣದಲ್ಲಿ ದೊಡ್ಡ ಪ್ರಮಾಣವನ್ನು ತೆರಿಗೆಯಾಗಿ ಬಿಳಿಯ ದೊರೆಗಳಿಗೇ ಮರಳಿ ಕಟ್ಟುತ್ತಿದ್ದೆವು. ಎಲ್ಲ ಕಳೆದು ಉಳಿದ ಹಣದಲ್ಲಿ (ಉಳಿದರೆ!) ಜೀವನವನ್ನು ಸರಿದೂಗಿಸುವುದೇ ಸಾಧನೆಯಾಗುತ್ತಿತ್ತು. ಒಂದು ಹಂತದಲ್ಲಿಯಂತೂ ಬಂಗಾಳ ಅದೆಷ್ಟು ಸೊರಗಿ ಹೋಯಿತೆಂದರೆ ತಾಯಂದಿರು ಮೈಮೇಲೆ ಧರಿಸಲು ಬಟ್ಟೆ ಇಲ್ಲದಿರುವಾಗಿ ಮನೆಯಿಂದ ಹೊರಗೆ ಬರುವುದನ್ನೇ ಬಿಟ್ಟಿದ್ದರು. ಇದೇ ಸ್ಥಿತಿಯನ್ನು ಪಶ್ಚಿಮದ ಜನ ಭಾರತದಲ್ಲಿ ಬಡತನವೆಂದು ವಣರ್ಿಸಿದ್ದು. ಇದನ್ನೇ ಸತ್ಯವೆಂದು ನಾವು ದೀರ್ಘಕಾಲ ನಂಬಿದ್ದು!

2

ನಮ್ಮ ಬಟ್ಟೆ ಉದ್ಯಮ ನಾಶವಾಗಲಿಕ್ಕೆ ನಾವು ತಂತ್ರಜ್ಞಾನದಿಂದ ದೂರವಿದ್ದುದೇ ಕಾರಣವೆಂದು ಕೆಲವು ಬುದ್ಧಿಜೀವಿಗಳು ವಾದಿಸುವುದುಂಟು. ಹಾಗೇ ಅವರು ಬ್ರಿಟೀಷರಿಗೆ ಕವರಿಂಗ್ ಫೈರ್ ಕೊಡೋದು. ಯಂತ್ರಗಳನ್ನೇ ಆವಿಷ್ಕರಿಸಲು ಹಣ ಕೊಟ್ಟು, ಉತ್ಪಾದನೆಗೆ ಬೇಕಾದ ಮೂಲದ್ರವ್ಯ ಮತ್ತು ಕಚ್ಚಾವಸ್ತುವನ್ನು ಕೈಗಿಟ್ಟು, ತಯಾರಾದ ವಸ್ತುವನ್ನು ಅತಿ ಹೆಚ್ಚಿನ ಬೆಲೆಗೆ ಕೊಂಡುಕೊಳ್ಳುವ ಜನರಿದ್ದರೆ ಎಂತಹ ರಾಷ್ಟ್ರವಾದರೂ ಬಲು ದೊಡ್ಡ ಸೌಧ ನಿಮರ್ಾಣ ಮಾಡೀತು. ತಂತ್ರಜ್ಞಾನದ ಮಾತಾಡುವವರಿಗೆ ಗೊತ್ತಿರಲಿ ಜಗತ್ತಿನ ಜನ ಎಲೆಗಳಿಂದ ಮಾನ ಮುಚ್ಚಿಕೊಳ್ಳುವ ಕಲ್ಪನೆಯಲ್ಲಿರುವಾಗಲೇ ಭಾರತ ಅತ್ಯುತ್ಕೃಷ್ಟ ನೇಯ್ಗೆಯ ಕಲ್ಪನೆಯನ್ನು ಸಾಕಾರಗೊಳಿಸಿತ್ತು. 17 ನೇ ಶತಮಾನದ ವೇಳೆಗಾಗಲೇ ಢಾಕಾದ ಮಸ್ಲಿನ್ ಬಟ್ಟೆ ಅದೆಷ್ಟು ಖ್ಯಾತವಾಗಿತ್ತೆಂದರೆ ‘ಗಾಳಿಯನ್ನೇ ನೇಯ್ದ ಬಟ್ಟೆ’ ಎಂದು ಗೌರವಿಸುತ್ತಿದ್ದರು. ಭಾರತದ ಬಟ್ಟೆ ಎಂದರೆ ಜಗತ್ತಿನಲ್ಲೆಲ್ಲಾ ಖ್ಯಾತಿ ಪಡೆದಿತ್ತು. ಬ್ರಿಟೀಷರ ಉಪಟಳದಿಂದ ಜಾಗತಿಕ ಮಾರುಕಟ್ಟೆ ಕಳೆದುಕೊಂಡ ನಂತರವೂ ಭಾರತೀಯರ ಹೋರಾಟದ ಮಾನಸಿಕತೆ ಇಂಗಲಿಲ್ಲ. 1818 ರಲ್ಲಿ ಮೊದಲ ಯಾಂತ್ರೀಕೃತ ಹತ್ತಿ ಗಿರಣಿ ಕಲ್ಕತ್ತದಲ್ಲಿ ಶುರುವಾಯ್ತು. 1850 ದಿಂದೀಚೆಗೆ ಬಟ್ಟೆ ಗಿರಣಿಗಳು ಬ್ರಿಟೀಷರ ಸವಾಲನ್ನು ಎದುರಿಸಲೆಂದೇ ತೊಡೆತಟ್ಟಿ ನಿಂತಿದ್ದವು. ಅಮೇರಿಕಾ ಆಂತರಿಕ ಯುದ್ಧದ ವೇಳೆಗೆ ಜಾಗತಿಕ ಮಟ್ಟದಲ್ಲಿ ಹತ್ತಿಯ ಕೊರತೆಯಾದಾಗಲಂತೂ ಭಾರತೀಯ ವಸ್ತ್ರ ಉದ್ಯಮ ಚೇತರಿಕೆ ಕಂಡಿತ್ತು. ಒಂದೆರಡು ದಶಕಗಳಲ್ಲಿಯೇ ಇದು ಮತ್ತೆ ನೆಲಕಚ್ಚಿತು. ಈ ನಡುವೆಯೇ ಬಾಂಬೆಯಲ್ಲಿ, ಅಹ್ಮದಾಬಾದಿನಲ್ಲಿ, ಬಳ್ಳಾರಿ, ಅಂಬಾ ಸಮುದ್ರ, ತಿರುವನ್ವೇಲಿಗಳಲ್ಲೆಲ್ಲ ಬಟ್ಟೆ ನೇಯ್ಗೆ ವ್ಯಾಪಕವಾಗಿತ್ತು. ಮುಂಬೈ-ಅಹ್ಮದಾಬಾದ್ಗಳಲ್ಲಿನ ಗಿರಣಿಗಳಂತೂ ಬ್ರಿಟೀಷರ ವಸ್ತ್ರ ಉದ್ಯಮಕ್ಕೆ ಬಲುವಾದ ಹೊಡೆತ ಕೊಟ್ಟಿತ್ತು. ಅದು ಹೇಗೋ ಅದೇ ವೇಳೆಗೆ ಮುಂಬೈ ಪ್ರಾಂತದಲ್ಲಿ ಪ್ಲೇಗ್ ಸಾಂಕ್ರಾಮಿಕವಾಯ್ತು, ಅದಕ್ಕೂ ಮುನ್ನ ಭಯಾನಕವಾದ ಕ್ಷಾಮ ಆವರಿಸಿತ್ತು. ಒಟ್ಟಾರೆ ಜನ ಬಲು ದೊಡ್ಡ ಪ್ರಮಾಣದಲ್ಲಿ ಮುಂಬೈ ಬಿಟ್ಟು ಇತರೆ ಪ್ರಾಂತ್ಯಗಳಿಗೆ ಗುಳೆ ಹೊರಟರು! ಮತ್ತೆ ಇದು ಹಂತ ಹಂತವಾಗಿ ಇತರೆ ಭಾಗಗಳಲ್ಲಿ ತಳವೂರಿ ವಿಸ್ತಾರಗೊಂಡಿತಾದರೂ ಹಳೆಯ ವೈಭವ ನೇಯ್ಗೆಕಾರಿಕೆಗೆಂದೂ ಮರಳಲೇ ಇಲ್ಲ.

ವಸ್ತ್ರೋದ್ಯಮ ನಾವು ಗಮನಿಸಲೇಬೇಕಾದ ಕ್ಷೇತ್ರ. ಭಾರತದ ರಫ್ತು ಮಾಡುವ ಉತ್ಪನ್ನಗಳಲ್ಲಿ ಶೇಕಡಾ 13 ರಷ್ಟು ಈ ವಿಭಾಗವೇ ನಿಭಾಯಿಸುತ್ತದೆ. ಕಳೆದ ವರ್ಷದ ಒಟ್ಟಾರೆ ರಫ್ತು 40 ಶತಕೋಟಿ ಅಮೇರಿಕನ್ ಡಾಲರುಗಳಷ್ಟು! ಸದ್ಯದ ಮಟ್ಟಿಗೆ ಈ ಉದ್ದಿಮೆಯಿಂದ ನೇರ ಉದ್ಯೋಗ ಪಡೆದವರು ನಾಲ್ಕುವರೆ ಕೋಟಿಯಷ್ಟಾದರೆ, ಸುಮಾರು 2 ಕೋಟಿ ಜನರಿಗೆ ಪರೋಕ್ಷವಾಗಿ ಉದ್ಯೋಗ ದೊರೆತಿದೆ. ಈ ಉದ್ಯಮದಲ್ಲಿ ಕೈ ಮಗ್ಗ ಕರಕುಶಲ, ರೇಷ್ಮೆ ವಲಯದ ಚಿಕ್ಕ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವ ಅಸಂಘಟಿತ ಕಾಮರ್ಿಕರೂ ಇದ್ದಾರೆ ಹಾಗೂ ಯಾಂತ್ರೀಕೃತ, ಆಧುನಿಕ ತಂತ್ರಜ್ಞಾನ ಬಳಸುವ ಬಲು ದೊಡ್ಡ ಉದ್ಯಮವನ್ನು ನಡೆಸುವ ಸಂಘಟಿತ ಕಾಮರ್ಿಕರೂ ಇದ್ದಾರೆ. ಕಳೆದ ಅನೇಕ ವರ್ಷಗಳ ಸತತ ಪ್ರಯತ್ನದಿಂದ ಭಾರತೀಯ ವಸ್ತ್ರ ಉದ್ಯಮ ಈಗ ಜಗತ್ತಿನ ಕಣ್ಣು ಕುಕ್ಕುವಂತೆ ಮತ್ತೆ ಬೆಳೆದು ನಿಂತಿದೆ. ಭಾರತೀಯ ವಸ್ತ್ರೋದ್ಯಮದ ವೈಶಿಷ್ಟ್ಯವೇನು ಗೊತ್ತೇ? ಭಿನ್ನ ಭಿನ್ನ ಶೈಲಿಯ ವಸ್ತ್ರ ಉತ್ಪಾದಿಸುವ ಭಾರತದ ಮತ್ತು ಜಗತ್ತಿನ ಬಟ್ಟೆಯ ಹಸಿವು ತಣಿಸಬಲ್ಲ ಸಾಮಥ್ರ್ಯ ನಮಗಿದೆ. ಈಗಿನ ಅಂದಾಜಿನ ಪ್ರಕಾರ ಭಾರತದ ವಸ್ತ್ರೋದ್ಯಮದ ವ್ಯಾಪ್ತಿ ಸುಮಾರು 120 ಶತಕೋಟಿ ಅಮೇರಿಕನ್ ಡಾಲರುಗಳಷ್ಟಿದೆ. ಇದು 2020 ರ ವೇಳೆಗೆ 230 ಶತಕೋಟಿಯನ್ನೂ ತಲುಪುವ ನಿರೀಕ್ಷೆ ಇದೆ. ಹೆಮ್ಮೆಯ ಸಂಗತಿಯೇನು ಗೊತ್ತೇ? ಭಾರತದ ನೇಯ್ಗೆಕಾರರು ನಮ್ಮ ಒಟ್ಟಾರೆ ಜಿಡಿಪಿಗೆ ಶೇಕಡಾ 2 ರಷ್ಟನ್ನು ಸೇರಿಸುತ್ತಾರೆ. ಕೈಗಾರಿಕಾ ಉತ್ಪಾದನೆಯ ಇಂಡೆಕ್ಸ್ಗೆ ಶೇಕಡಾ 14 ನ್ನು ಕೂಡಿ ಕೂಡಿಸುತ್ತಾರೆ.

3

ನೇಯ್ಗೆಯನ್ನು ಪ್ರತಿ ರಾಜ್ಯವೂ ವಿಶೇಷವಾಗಿ ಆದರಿಸಲೇಬೇಕು ಗೊತ್ತೇನು? ವಸ್ತ್ರೋದ್ಯಮ ವಿಸ್ತಾರವಾದರೆ ಕೃಷಿಯೂ ಬಲವತ್ತರವಾಗುತ್ತದೆ. ಬಲು ಸರಳವಾಗಿ ಹೇಳಬೇಕೆಂದರೆ ಖಾದಿಯ ಮಾರಾಟ ಹೆಚ್ಚಾದರೆ ಹತ್ತಿಯ ಬೆಳೆಗೆ ಬಂಪರ್ ಬೆಲೆ. ಹತ್ತಿಯ ಬೆಳೆ ಹೆಚ್ಚಾದರೆ ರೈತನಿಗೆ ಸಮೃದ್ಧಿ. ನರೇಂದ್ರ ಮೋದಿ ಖಾದಿಯ ಪ್ರಚಾರ ಮಾಡುವುದು ಸುಖಾ ಸುಮ್ಮನೆ ಅಲ್ಲ. ಅವರು ಕುತರ್ಾ ಧರಿಸಿ ಕ್ಯಾಮೆರಾಕ್ಕೆ ಪೋಸು ಕೊಡಲು ಶುರು ಮಾಡಿದ ಮೇಲೆ ಖಾದಿಯ ಮಾರಾಟ 33 ಪ್ರತಿಶತದಷ್ಟು ಹೆಚ್ಚಾಗಿದೆ. ಹೀಗೆ ಸಾಗಿದರೆ ಈ ವರ್ಷ 2 ಸಾವಿರ ಕೋಟಿ ಇರುವ ಖಾದಿ ವಸ್ತ್ರ ಮಾರಾಟ ಮುಂದಿನ ವರ್ಷದ ವೇಳೆಗೆ 5 ಸಾವಿರ ಕೋಟಿಯಾಗುವ ನಿರೀಕ್ಷೆಯಂತೂ ಇದೆ. ಇದರ ನೇರ ಲಾಭ ರೈತನಿಗೇ. ಈ ವರ್ಷ ಸುಮಾರು ಹನ್ನೊಂದುವರೆ ದಶಲಕ್ಷ ಹೆಕ್ಟೇರುಗಳಿಗೆ ಹಬ್ಬಿರುವ ಹತ್ತಿ ಬೆಳೆ ಮುಂದಿನ ವರ್ಷದ ವೇಳೆಗೆ ಶೇಕಡಾ 7 ರಷ್ಟು ಬೆಳವಣಿಗೆ ಕಾಣಲಿದೆ. ಸಹಜವಾಗಿಯೇ ಎಲ್ಲಿ ಅಭಿವೃದ್ಧಿಯ ನಾಗಾಲೋಟ ಇರುವುದೋ ಅಲ್ಲಿ ಬಂಡವಾಳವೂ ಜೋರಾಗಿಯೇ ಹೂಡಿಕೆಯಾಗುತ್ತದೆ. ಕಳೆದ 15 ವರ್ಷಗಳಲ್ಲಿ ಎರಡೂವರೆ ಶತಕೋಟಿ ಅಮೇರಿಕನ್ ಡಾಲರುಗಳಷ್ಟು ಹಣ ಈ ಕ್ಷೇತ್ರದಲ್ಲಿ ಹೂಡಿಕೆಯಾಗಿದೆ.

ಇಷ್ಟೆಲ್ಲಾ ಲೆಕ್ಕಾಚಾರ ಕೊಟ್ಟಿದ್ದೇಕೆ ಗೊತ್ತೇನು? ಇಷ್ಟು ವ್ಯಾಪಾರದ ವಿಫುಲ ಅವಕಾಶವಿರುವ ಕ್ಷೇತ್ರದಲ್ಲಿ ರಾಜ್ಯವಾಗಿ ನಾವು ಸೋತು ಹೋಗಿಬಿಟ್ಟಿದ್ದೇವೆ. ಒಂದು ಕಾಲದಲ್ಲಿ ಕನರ್ಾಟಕದ ಮ್ಯಾಂಚೆಸ್ಟರ್ ಆಗಿದ್ದ ದಾವಣಗೆರೆಯ ಇಂದಿನ ಪರಿಸ್ಥಿತಿ ಒಮ್ಮೆ ಅವಲೋಕಿಸಿ ನೋಡಿ. ಹತ್ತು ಮಿಲ್ಲುಗಳಿಂದ ಸದಾ ಗಿಜಿಗುಡುತ್ತಿದ್ದ, ಗಿರಣಿ ಕಾಖರ್ಾನೆಯಿಂದ ತುಂಬಿ ಹೋಗಿದ್ದ ಜಿಲ್ಲೆ ಈಗ ಬರಿಯ ಹೆಸರಷ್ಟೇ. ಕಾಂಜೀವರಂ ಸೀರೆಗಳ ಕುರಿತಂತೆ ನಾವಿಲ್ಲಿ ಮಾತನಾಡುವಂತೆ ಮೈಸೂರು ರೇಷ್ಮೆ ಸೀರೆಗಳ ಕುರಿತಂತೆ ಅಕ್ಕಪಕ್ಕದ ರಾಜ್ಯಗಳ ಜನ ಮಾತನಾಡುವುದು ನನಗೇನೋ ಅನುಮಾನ. ಇಳಕಲ್ಲಿನ ಸೀರೆಗಳನ್ನು ನಾವೇ ಅಂಗನವಾಡಿ ಶಿಕ್ಷಕಿಯರಿಗೆಂದು ಚೌಕಟ್ಟು ಹಾಕಿಬಿಡಲು ಸಿದ್ಧರಿದ್ದೇವೆ. ಟೆಕ್ಸ್ಟೈಲ್ ಪಾಕರ್್ಗಳನ್ನು ನಿಮರ್ಿಸುವ ಕನಸು ತೋರಿಸುವ ಸಕರ್ಾರ ಘೋಷಣೆಗಳನ್ನು ಮಾಡಿದ್ದಷ್ಟೇ ಬಂತು. ದೊಡ್ಡ ಬಳ್ಳಾಪುರದ ಎಸ್ಇಜೆಡ್ನ ಕಾಖರ್ಾನೆಗೆ ನಾನು ಭೇಟಿ ಕೊಟ್ಟಿದ್ದೇನೆ. ವಿಶಾಲವಾದ ಶೆಡ್ಗಳಲ್ಲಿ ತಿರುಪುರ್ನಿಂದ, ಗುಜರಾತಿನಿಂದ ತಂದ ಬಟ್ಟೆ ಹೊಲಿದು ಕಳಿಸುವುದಷ್ಟೇ ಅಲ್ಲಿ ನಡೆಯುವ ಕೆಲಸ. ಯಾದ್ಗಿರಿಯಲ್ಲಿ ಟೆಕ್ಸ್ಟೈಲ್ ಪಾಕರ್್ ಮಾಡಬೇಕೆಂದು ಸಕರ್ಾರ ನಿರ್ಧರಿಸಿದ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿದ ನೆನಪು. ಅದು ಸಾಕಾರವಾದಂತೆ ನಾನಂತೂ ಕಾಣೆ! ಸಕರ್ಾರದ ಜವಳಿ ನೀತಿಯನ್ನು ಓದಿದ್ದೇನೆ. ನೀತಿಯೇನೋ ಚೆನ್ನಾಗಿಯೇ ಇದೆ; ನಯಾಪೈಸೆಯಷ್ಟೂ ಆಚರಣೆಗೆ ಬರುವುದಿಲ್ಲವಷ್ಟೇ.

ಈ ವಿಚಾರದಲ್ಲಿ ನನ್ನ ಒಂದಷ್ಟು ಕನಸು ಇದೆ. ಹೇಗೆ ನಂದಿನಿ ಹಾಲಿಗೆ ಸಿನಿಮಾ ನಟರೊಂದಷ್ಟು ಜನ ರಾಯಭಾರಿಗಳಾಗಿ ಬಂದರೋ ಹಾಗೆಯೇ ಇಳಕಲ್ಲಿನ ಸೀರೆಗೆ, ಮೈಸೂರಿನ ರೇಷ್ಮೆ ವಸ್ತ್ರಗಳಿಗೆ ಮತ್ತೊಂದಷ್ಟು ರಾಯಭಾರಿಗಳನ್ನು ಹುಡುಕೋಣ. ಸಾಧ್ಯವಾದರೆ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ನಮ್ಮ ನಾಡಿನ ಸೀರೆ ಉಟ್ಟು ಜಾಹೀರಾತು ಕೊಡಲಿ. ಜಗತ್ತಿನ ಅನೇಕರು ಸೀರೆ ಉಡಲು ಆಸಕ್ತಿ ತೋರುತ್ತಿರುವಾಗ, ಉಡಲು ಕಷ್ಟವಾಗದ, ಸುಲಭವಾಗಿ ಧರಿಸಬಹುದಾದ ಸೀರೆಗಳ ವಿನ್ಯಾಸ ಮಾಡಿಸಿ ಜಾಗತಿಕ ಮಾರುಕಟ್ಟೆಗೆ ಅದನ್ನೊಯ್ಯೋಣ. ವಿದೇಶದ ಜನಗಳು ಭಾರತಕ್ಕೆ ಬಂದಾಗ ಅವರ ಪತ್ನಿಯರು ನಮ್ಮ ನಾಡಿನ ಸೀರೆ ಧರಿಸಿ ಪೋಸು ಕೊಡುವಂತೆ ಮಾಡೋಣ. ವರ್ಷದಲ್ಲಿ ಒಂದು ದಿನವಾದರೂ ಸೀರೆ ಧರಿಸುವ ದಿನವನ್ನಾಗಿ ಆಚರಿಸಿ ದೇಸೀ ಬಟ್ಟೆಗೆ ಹೆಚ್ಚಿನ ಗೌರವ ದೊರೆಯುವಂತೆ ಮಾಡೋಣ. ಒಟ್ಟಾರೆ ಕನರ್ಾಟಕದ ನೂಲಿನ ಬಟ್ಟೆ ಅಮೇರಿಕಾ, ರಷ್ಯಾ, ಜಪಾನು, ಚೀನಾಗಳಲ್ಲೆಲ್ಲಾ ಮಾರಾಟವಾಗುವಂತಾಗಬೇಕು. ಅಹಮದಾಬಾದಿನ ಮದುವೆಗಳಲ್ಲಿ, ದೆಹಲಿಯ ರೆಸೆಪ್ಷನ್ ಪಾಟರ್ಿಗಳಲ್ಲಿ ನಮ್ಮ ನಾಡಿನ ಬಟ್ಟೆ ಧರಿಸುವುದೆಂದರೆ ದೌಲತ್ತಿನ ಸಂಕೇತವಾಗಬೇಕು. ಹಾಗೆ ಮಾಡುವಲ್ಲಿ ನಾವು ಸಮರ್ಥರಾದಾಗ ಮಾತ್ರ ಒಂದಿಡೀ ಉದ್ಯಮ ಬದುಕುಳಿಯಲು ಸಾಧ್ಯ. ಇಲ್ಲವಾದರೆ ವಸ್ತ್ರೋದ್ಯಮ ತನ್ನೊಂದಿಗೆ ಅನೇಕರ ಬದುಕನ್ನು ನುಂಗಿ ನೀರು ಕುಡಿದು ಬಿಡುತ್ತದೆ.

ಹ್ಞಾಂ! ಕೈ ಮಗ್ಗಗಳಿಗೆ ಹೆಚ್ಚು ಹೆಚ್ಚು ಬೆಲೆ ಕೊಟ್ಟಷ್ಟೂ ಹಳ್ಳಿಗಳು ಸುಭದ್ರವಾಗಿ ಉಳಿಯುತ್ತವೆ. ಪಟ್ಟಣಕ್ಕೆ ವಲಸೆ ನಿಲ್ಲುತ್ತದೆ. ದೊಡ್ಡ ದೊಡ್ಡ ಹೂಡಿಕೆದಾರರ ಬಳಿ ಹಣ ಹರಿಯುವುದಕ್ಕಿಂತ ಹೆಚ್ಚಿನ ಲಾಭ ಬಡ ನೇಯ್ಗೆಕಾರರಿಗಾಗುತ್ತದೆ. ತಿಂಡಿ ತಿಂದಾದ ಮೇಲೆ ಖಾದಿಯ ನೂಲಿನ ಮಾಲೆಯಿಂದ ಮುಖ ಒರೆಸಿಕೊಳ್ಳುವ ರಾಜಕಾರಣಿಗಳಿಗೆಲ್ಲ ಇಷ್ಟೆಲ್ಲಾ ಯೋಚನೆ ಬರೋದು ಬಲು ಕಷ್ಟ!

4

ಭಾರತದ ಒಟ್ಟಾರೆ ವಸ್ತ್ರೋದ್ಯಮದಲ್ಲಿ ಕಾಲು ಭಾಗದಷ್ಟನ್ನು ಹೊಂದಿರುವ ಗುಜರಾತ್ ಈ ಕುರಿತ ಅನೇಕ ಮೊದಲುಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಅತ್ಯಂತ ಹೆಚ್ಚು ಹತ್ತಿ ಉತ್ಪಾದನೆ ಮತ್ತು ರಫ್ತು ಮಾಡುವ ರಾಜ್ಯ ಅದು. ದೇಶದ 30 ಪ್ರತಿಶತ ನೇಯ್ದ ಬಟ್ಟೆ ಅಲ್ಲಿಯೇ ತಯಾರಾಗೋದು. ಉತ್ತರ ದಕ್ಷಿಣ, ಪೂರ್ವ ಪಶ್ಚಿಮ ಎಂಬ ಭೇದವಿಲ್ಲದೇ ಕಛ್, ಸುರೇಂದ್ರ ನಗರ, ಸೌರಾಷ್ಟ್ರ, ಅಹ್ಮದಾಬಾದ್, ಅಂಕಲೇಶ್ವರ್, ಸೂರತ್ಗಳನ್ನು ವಸ್ತ್ರೋದ್ಯಮಕ್ಕೆ ಸಜ್ಜಾಗಿಬಿಟ್ಟಿಸಿದೆ ಅಲ್ಲಿನ ಸಕರ್ಾರ. ಈ ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿಗೆಂದು ಹತ್ತಾರು ತರಬೇತಿ ಸಂಸ್ಥೆಗಳನ್ನು ತೆರೆದಿದೆ. ಹೊಸ ಉತ್ಪನ್ನಗಳ ಪರಿಚಯಿಸಲು ಸಂಶೋಧನೆಗೆ ಬೇಕಾದ ಸವಲತ್ತುಗಳನ್ನು ಒದಗಿಸಿ ಕೊಟ್ಟಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತಮ್ಮ ಬ್ರ್ಯಾಂಡು ಪ್ರದರ್ಶನಕ್ಕೆ ಸಕರ್ಾರ ವ್ಯವಸ್ಥೆ ಮಾಡಿಕೊಡುತ್ತದೆ. ಕೇಂದ್ರ ಸಕರ್ಾರದ ಸಹಯೋಗ ಪಡೆದು ಹೊಸ ಹೊಸ ಟೆಕ್ಸ್ಟೈಲ್ ಪಾಕರ್ುಗಳನ್ನು ನಿಮರ್ಿಸುತ್ತಲೇ ಇರುತ್ತದೆ. ನಾನು ಹೇಳಿರುವುದು ನಾಲ್ಕಾರು ಅಂಶವಷ್ಟೇ. ಈ ಇಡಿಯ ಕ್ಷೇತ್ರಕ್ಕೆ ಜೀವಕಳೆ ತುಂಬಿಸಲು ಅಲ್ಲಿ ಬಗೆ ಬಗೆಯ ಯೋಜನೆಗಳಿವೆ.

ನಾವಿನ್ನೂ ನೇಯ್ಗೆಕಾರರಿಗೆ 24 ಗಂಟೆ ಕರೆಂಟು ಕೊಡುವಲ್ಲಿ ಹೆಣಗಾಡುತ್ತಿದ್ದೇವೆ. ಅದಕ್ಕೇ ನಮ್ಮ ನೇಯ್ಗೆಕಾರರೂ ಸಕರ್ಾರದೆದುರು ನಿಂತು ಸಬ್ಸಿಡಿಗಾಗಿ, ಸಹಕಾರಕ್ಕಾಗಿ ಗೋಗರೆಯುತ್ತಿರುತ್ತಾರೆ. ಇನ್ನೂ ಎಷ್ಟು ದಿನ ಹೀಗೇ? ಕನರ್ಾಟಕ ಬದಲಾಗೋದು ಬೇಡವೇನೂ? ನಮ್ಮ ರೈತ ಸಕರ್ಾರದೆದುರು ಕೈ ಚಾಚಿ ನಿಲ್ಲೋದು ಬಿಟ್ಟು ಹೆಮ್ಮೆಯಿಂದಲೇ ಸಕರ್ಾರಕ್ಕೆ ತೆರಿಗೆ ಕಟ್ಟುವಂತೆ ಬಲವಾಗೋದು ಬೇಡವೇನು? ನಮ್ಮನ್ನಾಳುವವರಿಗೆ ಇರೋದು ಬರಿಯ ಬಡತನವಲ್ಲ, ಕಲ್ಪನೆಯ ದಾರಿದ್ರ್ಯ. ನಿಸ್ವಾರ್ಥವಾಗಿ ಕೆಲಸ ಮಾಡುವ ಉತ್ಸಾಹದ ದಾರಿದ್ರ್ಯ. ನಾವೀಗ ನಿಶ್ಚಯ ಮಾಡಬೇಕಿದೆ. ಗಾಂಧೀಜಿಯ 150 ನೇ ಜಯಂತಿಯ ವೇಳೆಗೆ ಚರಖಾಗಳಿಗೆ, ಕೈಮಗ್ಗಗಳಿಗೆ ಬೆಲೆ ಬರುವಂತೆ; ಹೊಸ ವಿನ್ಯಾಸಕಾರರಿಗೆ, ತರುಣ ಉದ್ಯಮಿಗಳಿಗೆ ಉತ್ಸಾಹ ತುಂಬುವಂತೆ ಯೋಜನೆಗಳನ್ನು ರೂಪಿಸಬೇಕಿದೆ. ರಾಷ್ಟ್ರದ ಮೂಲೆ ಮೂಲೆಗಳಲ್ಲಿ ಕನರ್ಾಟಕದ ಹೆಮ್ಮೆಯಾಗಿ ಇಲ್ಲಿನ ಬಟ್ಟೆ ಪರಿಚಯಗೊಳ್ಳಬೇಕಿದೆ. ಸದ್ಗುರು ಜಗ್ಗಿಯವರ ರ್ಯಾಲಿ ಫಾರ್ ರಿವಸರ್್ನ ಜಾಹೀರಾತು ವಿಮಾನಗಳ ನೀರು ಕುಡಿಯುವ ಲೋಟಗಳ ಮೇಲಿರಬಹುದಾದರೆ, ಇಳಕಲ್ಲಿನ ಸೀರೆಗಳ ಜಾಹೀರಾತು ಎಕ್ಸ್ಕ್ಯೂಟಿವ್ ಕ್ಲಾಸಿನ ಪ್ರಯಾಣಿಕರು ಓದುವ ಪುಸ್ತಕಗಳಲ್ಲೇಕಿರಬಾರದು?

ಒಬ್ಬರೇ ಕುಳಿತು ಯೋಚಿಸಿ. ಬದಲಾವಣೆ ಹಂತಹಂತವಾಗಿಯೇ ಬಂದರೆ ಒಳಿತು ನಿಜ. ಆದರೆ ಅದು ಆಮೆಯ ನಡೆಯಾದರೆ ಉಪಯೋಗವಿಲ್ಲ. ದಡ ಮುಟ್ಟಿಸುವ ಧಾವಂತವೂ ಇರಬೇಕಲ್ಲ!!

Leave a Reply