ವಿಭಾಗಗಳು

ಸುದ್ದಿಪತ್ರ


 

ವಿಶ್ವಕಪ್ ಹೊತ್ತಲ್ಲಿ, ವಿಶ್ವ ಕ್ರೀಡಾ ಕೂಟದ ಬಗ್ಗೆ

ವಿಶ್ವಕಪ್ ಜ್ವರ ಕಾವೇರುತ್ತಿದ್ದಂತೆ ಭಾರತದ ಕಪ್ ಗೆಲ್ಲುವ ಕನಸು ಕ್ಷೀಣಿಸುತ್ತಲೇ ಸಾಗುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಂತೂ ಎಚ್ಚರಿಕೆಯ ಕರೆಗಂಟೆ.ಅದೇನು ಗೆಲ್ಲಲೇಬೇಕಿದ್ದ ಮ್ಯಾಚ್ ಆಗಿರಲಿಲ್ಲ ನಿಜ. ಆದರೂ ಆತ್ಮವಿಶ್ವಾಸದ ದೃಷ್ಟಿಯಿಂದ ನೋಡಿದರೆ ಅದು ಗೆಲುವು ಅಗತ್ಯವಾಗಿದ್ದ ಪಂದ್ಯವೇ. ಕೊನೆಯ ಓವರ್ರು ನೆಹ್ರಾಗೆ ಕೊಟ್ಟಿದ್ದು ಸರಿಯಾ?ಎಂಬುದರಿಂದ ಹಿಡಿದು ಪೀಯೂಷ್ ಚಾವ್ಲಾ ಮೇಲೆ ಧೋನಿಗೆ ಯಾಕಿಷ್ಟು ಪ್ರೀತಿ ಎನ್ನುವವರೆಗೂ ಪ್ರಶ್ನೆಗಳು ಧೋನಿಯ ಸುತ್ತ ತಿರುಗಾಡುತ್ತಿವೆ. ನನಗೆ ಗೊತ್ತು. ದೇಶವಾಸಿಗಳ ಪಾಲಿಗೆ ಸದ್ಯದ ಸುದ್ದಿ ಇದೇ. ಆದರೆ ಒಂದು ವಾರದ ಹಿಂದೆ ದೆಹಲಿಯಲ್ಲಿ ಒಂದಷ್ಟು ಪ್ರತಿಷ್ಟಿತ ಕ್ರೀಡಾಪ್ರೇಮಿಗಳು ಸೇರಿ ಒಂದು ಹೊಸ ಜವಾಬ್ದಾರಿ ಹೆಗಲೆರಿಸಿಕೊಂಡಿದ್ದಾರೆ. ಅದು, ಭಾರತಕ್ಕೆ ಒಲಂಪಿಕ್ ಚಿನ್ನ ಕೊಡಿಸುವುದು ಹೇಗೆಂಬ ಚಿಂತೆ.

ಭಾರತದ ಬಿಲಿಯರ್ಡ್ಸ್ ಚಾಂಪಿಯನ್ ಗೀತ್ ಸೇಠಿ ಮತ್ತು ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಇತರ ಕ್ರೀಡಾ ಪ್ರೇಮಿಗಳೊಡನೆ  ಸೇರಿ ಕಟ್ಟಿದ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ (OGQ) ಎಂಬ ಲಾಭರಹಿತ ಸಂಸ್ಥೆಯ ಉದ್ದೇಶವೇ ಇದು. 2012ರಲ್ಲಿ ಲಂಡನ್ನಿನಲ್ಲಿನಡೆಯಲಿರುವ ಒಲಂಪಿಕ್ ಆಟಗಳಲ್ಲಿ ಭಾರತಕ್ಕೆ ಚಿನ್ನದ ಪದಕ ತರಲು ಏನೇನು ಮಾಡಬೇಕೆಂದು ತಲೆ ಕೆರೆದುಕೊಳ್ಳಲು ಶುರುವಿಟ್ಟಾಗಿದೆ. ಬೇಸ್ ಕ್ಯಾಪಿಟಲ್ಸ್‌ನ ಅಮಿತ್ ಚಂದ್ರ, ಕೋಟ್ಯಧೀಶ ಹೂಡಿಕೆದಾರ ರಾಕೇಶ್ ಝುಂಜುನ್‌ವಾಲಾ ಮತ್ತು ಸಮೀರ್ ಕೊಟ್ಟೇಚಾ ಇವರೆಲ್ಲ ಸೇರಿ OGQಗೆ ಸಹಾಯಹಸ್ತ ನೀಡಲು ನಿರ್ಧರಿಸಿದ್ದಾರೆ.

ಇಷ್ಟಾದರೂ OGQ 4ಕೋಟಿ ರುಪಾಯಿಗಳಷ್ಟು ಸಂಗ್ರಹಿಸುವ ಹೊತ್ತಿಗೇ ಹೈರಾಣಾಗಿಹೋಗಿದೆ. ಆದರೆ ವರ್ಲ್ಡ್ ಕಪ್ ನ ಟೀವಿ ಜಾಹೀರಾತುಗಳ ಆದಾಯ ಎಷ್ಟಿದೆ ಗೊತ್ತೆ? ಅದು 800 ಕೋಟಿ ರುಪಾಯಿಗಳಿಗೂ ಹೆಚ್ಚು! ಹತ್ತು ಲಕ್ಷ ಜನ ಭಾರತೀಯರು ತಿಂಗಳಿಗೆ ನೂರು ರುಪಾಯಿ ಕೊಟ್ಟರೂ ಭಾರತದ 2000 ಜನ ಕೆಳ ಹಂತದ ಆಟಗಾರರನ್ನು ತಯಾರು ಮಾಡುವುದು ಸಾಧ್ಯ ಎಂದು OGQ ಅವಲತ್ತುಕೊಂಡಿದೆ. ಈಗಿನ ನಮ್ಮಸಾಮರ್ಥ್ಯದಿಂದ 20 ರಿಂದ 30 ಜನರಷ್ಟನ್ನು ಮಾತ್ರ ನಾವು ಅಂತಾರಾಷ್ಟ್ರೀಯ ಮಟ್ಟಕ್ಕೆ ತಯಾರು ಮಾಡಬಲ್ಲೆವು ಎಂದೂ ಅದು ಹೇಳಿಕೊಂಡಿದೆ.

ಒಂದಂತೂ ಸತ್ಯ. ಕ್ರಿಕೆಟ್ಟಿನ ಬೆನ್ನತ್ತಿ ಹಳ್ಳಿಪಟ್ಟಣವೆನ್ನದೆ ನಾವೆಲ್ಲರೂ ಇತರ ಆಟಗಳನ್ನು ಕಡೆಗಣಿಸಿದ್ದೆವೆ. ಮೊನ್ನೆ ಶಿರಸಿ ಬಳಿಯ ಕಗ್ಗಾಡು ಹಳ್ಳಿಯ ಏಳನೇ ತರಗತಿ ಹುಡುಗನಿಗೆನಿನಗ್ಯಾವ ಆಟ ಇಷ್ಟ?’ ಕೇಳಿದೆ. ಅವನು ಚೂರೂ ಯೋಚಿಸದೆ ಕ್ರಿಕೆಟ್ ಅಂದುಬಿಟ್ಟ. ಪಟ್ಟಣದ ಸಂಪರ್ಕವೇ ಇರದ ಇಂತಹ ಹಳ್ಳಿ ಪೋರನಿಗೂ ಕ್ರಿಕೆಟ್ ಪ್ರೀತಿ ಅಗಾಧ.

ಆದರೆ ನಮಗೆ ಗೊತ್ತಿರಬೇಕು, ಜಾಗತಿಕ ಮಟ್ಟದ ಕ್ರೀಡೆಯಲ್ಲಿ ನಂ.1 ಆಗೋದು ಒಲಂಪಿಕ್ ಕ್ರೀಡೆಗಳಲ್ಲಿ ತೋರುವ ಸಾಮರ್ಥ್ಯದಿಂದ ಮಾತ್ರ. ಇನ್ನಾದರೂ ನಾವು ಅತ್ತ ಗಮನ ಹರಿಸಬೇಕಿದೆ. ಒಲಂಪಿಕ್ ಸ್ಪರ್ಧೆಗಳು ನಡೆವಾಗ ನಮ್ಮ ಆಟಗಾರರ ಸಾಮರ್ಥ್ಯವನ್ನು ಹೀಗಳೆದು ಬಯ್ಯುವುದಲ್ಲ. ಈಗಿನಿಂದಲೇ ಅವರನ್ನು ಹುರಿದುಂಬಿಸಿ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯವೂ ಆಗಿದೆ.

ಇನ್ನು OGQ ಕೂಡ ಮತ್ತಷ್ಟು ಮುನ್ನುಗ್ಗಬೇಕಿದೆ. 80ರ ದಶಕದಲ್ಲಿ ಕ್ರಿಕೆಟ್ ಭಾರೀ ಒಲವಿನ ಆಟವೇನೂ ಆಗಿರಲಿಲ್ಲ. ನಿಧಾನವಾಗಿ ಕ್ರಿಕೆಟ್ ಹುಚ್ಚು ಹರಡಲಿಲ್ಲವಾ? ದೆಹಲಿಬೆಂಗಳೂರುಗಳಲ್ಲಿ ಮ್ಯಾರಥಾನ್ ಓಟಗಳೂ ಒಲಂಪಿಕ್ ಗೇಮ್‌ಗಳಿಗಿಂತ ಹೆಚ್ಚಿನ ಪ್ರಚಾರ ಪಡೆದುಕೊಳ್ಳುತ್ತವೆ. ದೆಹಲಿಯ ಮ್ಯಾರಥಾನ್ ಒಂದರಲ್ಲಿ ಬಹುಮಾನದ ಮೊತ್ತ ಒಂದೂವರೆ ಕೋಟಿ ರುಪಾಯಿ ಕೊಡುತ್ತಾರೆ. ಇದೆಲ್ಲ ಸಾಧ್ಯವಾಗಿದ್ದು ಅವರ ವ್ಯಾಪಕ ಪ್ರಚಾರದಿಂದ. ಈಗ OGQ ಅಂತಹದೊಂದು ಕೆಲಸ ಮಾಡಬೇಕಿದೆ. ನಾವೂ ಅವರೊಂದಿಗೆ ಕೈಜೋಡಿಸಬೇಕಿದೆ.

ಭಾರತ ಕ್ರಿಕೆಟ್ ವಿಶ್ವಕಪ್‌ನಲ್ಲಿ ಗೆಲ್ಲೋದು ಎಷ್ಟು ಮುಖ್ಯವೋ ಒಲಂಪಿಕ್‌ನಲ್ಲಿ ಬಂಗಾರದ ಪದಕಗಳನ್ನು ತರುವುದೂ ಅಷ್ಟೇ ಮುಖ್ಯ. 

ಅಲ್ಲವೆ?

Leave a Reply