ವಿಭಾಗಗಳು

ಸುದ್ದಿಪತ್ರ


 

ವೇದ ಪುರಾಣಗಳಲ್ಲಿ ಸೃಷ್ಟಿ ಕಥನದ ಅನಾವರಣ ~ ವಿಶ್ವಗುರು 9

‘ಭಾರತ್ ಏಕ್ ಖೋಜ್’ ಧಾರಾವಾಹಿ ನೋಡಿದ್ದು ನೆನಪಿದೆಯಾ? ಆವಾಹರ್ ಲಾಲ್‍ರ ಡಿಸ್ಕವರಿ ಆಫ್ ಇಂಡಿಯಾವನ್ನು ತೆರೆಗೆ ತರುವ ದೂರದರ್ಶನದ ಪ್ರಯತ್ನ ಅದು, ನನಗೆ ಧಾರಾವಾಹಿಯಲ್ಲಿ ನೋಡಿದ ಕಥಾನಕಗಳೆಲ್ಲ ಮರೆತುಹೋಗಿವೆ. ಆದರೆ ಅದರ ಶೀರ್ಷಿಕೆ ಗೀತೆ ಮಾತ್ರ ಕಿವಿಯಲ್ಲಿ ಮತ್ತೆಮತ್ತೆ ಗುಂಯ್‍ಗುಡುತ್ತದೆ. “ವಹಾ ಸತ್ ಭೀ ನಹೀ ಥಾ, ಅಸತ್ ಭೀ ನಹೀ.. ಅಂತರಿಕ್ಷ್ ಭೀ ನಹೀ, ಆಕಾಶ್ ಭೀ ನಹೀ ಥಾ” (ಅಲ್ಲಿ ಸತ್ಯವೂ ಇರಲಿಲ್ಲ, ಅಸತ್ಯವೂ ಇರಲಿಲ್ಲ. ಅಂತರಿಕ್ಷವೂ ಇಲ್ಲ, ಆಕಾಶವೂ ಇರಲಿಲ್ಲ) ಎನ್ನುವ ಈ ಸಾಲುಗಳು ಬಹುವಾಗಿ ಆಕರ್ಷಿಸಿದ್ದವು. ಆಮೇಲೆ ಗೊತ್ತಾಯ್ತು, ಇದು ಹತ್ತು ಸಆವಿರಕ್ಕೂ ಹೆಚ್ಚು ವರ್ಷಗಳ ಹಿಂದಿನ ಋಗ್ವೇದದ ಹತ್ತನೇ ಮಂಡಲದ 129ನೇ ಸೂಕ್ತದ ನೇರಾನೇರ ಅನುವಾದ ಅಂತ. ಅನೇಕ ಬಾರಿ ಇದನ್ನು ನಾಸದೀಯ ಸೂಕ್ತ ಅಂತಲೇ ಕರೆಯಲಾಗುತ್ತದೆ.
ಅದು ಶುರುವಾಗೋದೇ ಹಾಗೆ. ಸೃಷ್ಟಿಗೆ ಮುನ್ನ ಏನೂ ಇರಲಿಲ್ಲ ಅಂತ. ಇಂದ್ರಿಯಗೋಚರವಾದುದೂ ಇರಲಿಲ್ಲ; ಇಂದ್ರಿಯಗಳಿಗೆ ನಿಲುಕದ್ದೂ ಇರಲಿಲ್ಲ. ಅಂದಮೇಲೆ ಇನ್ನುಳಿದುದೆಲ್ಲ ಯಾವ ಲೆಕ್ಕ? ಆಗ ಇದ್ದುದು ಒಂದೇ, ಪರಮಾತ್ಮ ತತ್ತ್ವ. ಎಲ್ಲವನ್ನೂ ತನ್ನೊಳಗೆ ಸೆಳೆದುಕೊಂಡು ಪ್ರಳಯಕ್ಕೆ ಕಾರಣವಾಗಬಲ್ಲ, ಎಲ್ಲವನ್ನೂ ಮುಕ್ತಗೊಳಿಸಿ ಸೃಷ್ಟಿ ಮಾಡಬಲ್ಲ ಪರಮಾತ್ಮ ಮಾತ್ರ. 14917554
ಹೀಗೆ ಹೇಳಿದೊಡನೆ ನಮ್ಮಲ್ಲಿನ ಬುದ್ಧಿಜೀವಿಗಳು, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳೆಲ್ಲ ವ್ಯಂಗ್ಯವಾಗಿ ನಗುತ್ತಾರೆ. ವೇದ ಪುರಾಣಗಳೆಲ್ಲ ನಂಬಲು ಯೋಗ್ಯವಾದವಲ್ಲ ಎನ್ನುತ್ತಾರೆ. ಸುಮ್ಮನೆ ಒಮ್ಮೆ ಆಧುನಿಕ ಸಂಶೋಧನೆಗಳತ್ತ ಕಣ್ಣಾಡಿಸಲು ಹೇಳಿ, ಅವರೆಲ್ಲ ಅವಾಕ್ಕಾಗಿಬಿಡುತ್ತಾರೆ. ಜಗದ ಅಂತ್ಯ ‘ಕಪ್ಪು ಕುಹರ’ (ಬ್ಲ್ಯಾಕ್ ಹೋಲ್)ಗಳಲ್ಲಿ ಲೀನವಾಗುವ ಮೂಲಕ ಸಂಭವಿಸುತ್ತದೆ ಎನ್ನುತ್ತಾರೆ ಅವರು. ಈ ಕಪ್ಪು ಕುಹರಗಳಲ್ಲಿ ಏನೆಂದರೆ ಏನೂ ಇರುವುದಿಲ್ಲ. ಇದು ಇಂದ್ರಿಯಗೋಚರವೂ ಅಲ್ಲ. ವಿವರಿಸುತ್ತಾ ಹೋದರೆ ನಾಸದಿಯ ಸೂಕ್ತದ ಮೊದಲ ಸಾಲು ಕಪ್ಪು ಕುಹರದ ವರ್ಣನೆಯೇ!
ಧ್ಯಾನಕ್ಕೆ ಕುಳಿತ ಋಷಿ ತನ್ನ ಮನಸ್ಸನ್ನು ಹದಗೊಳಿಸಿ ಮೇಲ್‍ಸ್ತರಕ್ಕೆ ಏರಿದಾಗ ಅವನಿಗೆ ಗೋಚರವಾದ ಸತ್ಯಗಳನ್ನು ಎಲ್ಲರಿಗೂ ಅರ್ಥವಾಗಬೇಕೆಂದಿಲ್ಲ. ಕೆಲವೊಂದು ಸಂಶೋಧನೆಗಳನ್ನು ಅರ್ಥಮಾಡಿಕೊಳ್ಳದವ ತಪ್ಪುತಪ್ಪಾಗಿ ವಿವರಿಸಿಯೂಬಿಡಬಹುದು. ಹತ್ತು ಸಆವಿರ ವರ್ಷಗಳ ಹಿಂದಿನ ವೈಜ್ಞಾನಿಕ ಭಾಷೆಯನ್ನು ಗೊಡ್ಡುಪುರಾಣ ಎಂದೆಲ್ಲ ಜರಿದರೆ ತಪ್ಪು ಯಾರದ್ದೆನ್ನಬೇಕು ಹೇಳಿ. ಹಾ! ಋಗ್ವೇದದ ಈ ಸೃಷ್ಟಿ ಕಥನದ ಸೂಕ್ಷ್ಮ ಬೀಜವನ್ನು ಉಪನಿಷತ್ತು ಸ್ವಲ್ಪ ಸರಳೀಕರಿಸಲೆತ್ನಿಸದರೆ, ಪುರಾಣಗಳಂತೂ ಸಾಮಾನ್ಯನಿಗೂ ಅರ್ಥವಾಗುವ ಕಥನರೂಪದಲ್ಲಿ ಹೇಳಿಬಿಟ್ಟವು. ಹೀಗಾಗಿ ಶ್ರದ್ಧಾಳುವಿಗೆ ಪುರಾಣಗಳೇ ಸಾಕು. ನಿಜವಾದ ವಿಜ್ಞಾನಿ ವೇದಗಳಿಗೇ ಸಾಗಬೇಕು ಅನ್ನೋದು.
ಅರ್ಥಮಾಡಿಕೊಳ್ಳೋದು ಬಹಳ ಕಷ್ಟವಲ್ಲ, ತೆರೆದ ಹೃದಯ ಬೇಕು ಅಷ್ಟೇ. ವಿಷ್ಣುಪುರಾಣದ ಎರಡನೇ ಅಧ್ಯಾಯದ ಆರಂಭದ ಶ್ಲೋಕಗಳ ಮೇಲೆ ಕಣ್ಣಾಡಿಸಿ. ಸೃಷ್ಟಿಯ ಪೂರ್ವದ ಪರಮಾತ್ಮ (ವಿಷ್ಣು)ನ ಗುಣಗಳನ್ನು ವಿವರಿಸುತ್ತ ಆತನ ಅಖಂಡ ಸಾಮಥ್ರ್ಯಗಳನ್ನು ವರ್ಣಿಸುತ್ತಾರೆ. ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣನಾದ ಅಖಂಡ ತತ್ತ್ವಗಳನ್ನೂ ಅಡಗಿಸಿಕೊಂಡು ಶಾಂತವಾಗಿರುವ ಶಕ್ತಿ ಎಂದೆಲ್ಲ ಸ್ತುತಿಸುತ್ತಾರೆ. ಅದನ್ನೇ ವೈಜ್ಞಾನಿಕ ಭಾಷೆಯಲ್ಲಿ ಕಪ್ಪು ಕುಹರದೊಳಗೆ ಇರುವ ದಟ್ಟ ಸಾಂದ್ರತೆಯ ಏಕತ್ವ (ಸಿಂಗ್ಯುಲಾರಿಟಿ ಆಫ್ ಇನ್‍ಫೈನೈಟ್ ಡೆನ್ಸಿಟಿ) ಎನ್ನಲಾಗುತ್ತದೆ. ಸ್ಟೀಫನ್ ಹಾಕಿಂಗ್‍ನನ್ನು ಓದುತ್ತ ತುಲನೆ ಮಾಡಿದವರಿಗೆ ವೇದ, ಪುರಾಣ – ಆಧುನಿಕ ವಿಜ್ಞಾನದಲ್ಲಿ ಅಚ್ಚರಿಯೆನಿಸುವಷ್ಟು ಸಾಮ್ಯತೆಗಳು ಗೋಚರಿಸುತ್ತವೆ.
‘ಏಕಂ ಸತ್ ವಿಪ್ರಾ ಬಹುಧಾ ವದನ್ತಿ’ – ಒಂದೇ ಸತ್ಯವನ್ನು ಪ್ರಾಜ್ಞರು ಭಿನ್ನ ಭಿನ್ನ ರೂಪದಲ್ಲಿ ಹೇಳುತ್ತಾರೆ ಎಂಬುದನ್ನು ಒಪ್ಪುವುದಾದರೆ ಋಗ್ವೇದದ ಕಾಲದಲ್ಲಿ ಪರಮಾತ್ಮನೆನ್ನಿಸಿಕೊಂಡವ, ಪುರಾಣ ಕಾಲದಲ್ಲಿ ವಿಷ್ಣುವೆನಿಸಿಕೊಂಡ ಮತ್ತು ಈ ತಥಾಕಥಿತ ವೈಜ್ಞಾನಿಕ ಯುಗದಲ್ಲಿ ಅವನನ್ನೇ ಸಿಂಗ್ಯುಲಾರಿಟಿ ಎಂದು ಕರೆಯುತ್ತಿದ್ದೇವೆ. ಅಷ್ಟೇ ತಾನೆ?
ಹಾಕಿಂಗ್ ಸೇರಿದಂತೆ ಅನೇಕ ವಿಜ್ಞಾನಿಗಳ ಅಂತಿಮ ಅಭಿಮತವದೇನು ಗೊತ್ತೆ? “ಕಪ್ಪು ಕುಹರದ ಏಕತ್ವದ ಸ್ಥಿತಿಯಲ್ಲಿ ವಿಜ್ಞಾನದ ಆವುದೇ ಸಾಧ್ಯಾಸಾಧ್ಯತೆಗಳು ಕೆಲಸ ಮಾಡದೆ ಇರುವುದರಿಂದ ಸದ್ಯದ ಮಟ್ಟಿಗೆ ಅದರ ಪೂರ್ವಾಪರ ವಿವರಿಸುವುದು ಅಸಾಧ್ಯವಾಗಿದೆ”. ಇದರರ್ಥ ಸೃಷ್ಟಿಯ ರಹಸ್ಯ ಹೊರಗೆಡುವುದು ವಿಜ್ಞಾನದ ಮಿತಿಯನ್ನು ದಾಟಿದ್ದು. ಇದನ್ನೆ ಋಗ್ವೇದ “ದೇವತೆಗಳೂ ಪಂಚಭೂತಗಳ ನಂತರವೇ ಸೃಷ್ಟಿಯಾದ್ದರಿಂದ ಸೃಷ್ಟಿ ಹೇಗಾಯಿತೆಂದು ಅವರೂ ತಿಳಿದಿಲ್ಲ” ಎಂದು ಉದ್ಗರಿಸುತ್ತವೆ! ಪ್ರಾಮಾಣಿಕವಾಗಿ ಹೇಳಿ. ವೇದಗಳು ಅರ್ಥವಿಲ್ಲದ ಕಾಲಾಯಾಪನೆಗೆಂದು ಬರೆದ ಸರಕೆಂದೆನಿಸುತ್ತದೆಯೇನು?
ನಮ್ಮ ಕಲ್ಪನೆಯ ಸೃಷ್ಟಿ ಬಲು ರೋಚಕ. ನಾವು ಚಕ್ರೀಯ ಗತಿಯನ್ನು ಒಪ್ಪುವವರು. ಭೂಮಿ ತನ್ನ ಅಕ್ಷದ ಮೇಲೆ ಸುತ್ತುತ್ತ ಸೂರ್ಯನನ್ನೂ ಸುತ್ತುತ್ತದೆ. ದಿನ ಕಳೆದು ಸಂಜೆಯಾಗಿ, ಕತ್ತಲು ಕವಿದು ರಾತ್ರಿಯಾಗುತ್ತದೆ. ಮತ್ತೆ ಬೆಳಗಾಗಲೇಬೇಕು. ಸುಡು ಬೇಗೆಯ ಬಿಸಿಲನ್ನು ಭೋರ್ಗರೆವ ಮಳೆ ಅನುಸರಿಸುತ್ತದೆ. ಅದರ ಹಿಂದುಹಿಂದೆಯೇ ಚುರುಗುಡುವ ಚಳಿ, ಮತ್ತೆ ಬಿಸಿಲು – ಮಳೆ ಎಲ್ಲವೂ ಚಕ್ರವೇ. ಸುತ್ತಲಿನ ಪ್ರಕೃತಿ ಹೇಗೆ ಚಕ್ರಗತಿಯುಳ್ಳದ್ದೋ ಹಾಗೆಯೇ ನಮ್ಮ ಜೀವನವೂ. ಹುಟ್ಟು – ಬದುಕು – ಸಾವು. ಇದನ್ನು ಮರುಹುಟ್ಟು ಅನುಸರಿಸಲೇಬೇಕು. ಪಶ್ಚಿಮದ ಸೆಮೆಟಿಕ್ ಮತಗಳು ನೇರವಾಗಿರಬಹುದು, ದಿಟ್ಟವಾಗಿರಬಹುದು. ಆದರೆ ನಿರಂತರವಲ್ಲ. ಭಾರತೀಯ ಪಂಥಗಳೆಲ್ಲ ಚಕ್ರೀಯ ಗತಿಯನ್ನು ಒಪ್ಪುವುದರಿಂದ ಇವು ಮಾತ್ರ ನಿರಂತರ! ಪ್ರಳಯಾನಂತರದ ಸುದೀರ್ಘ ಶಾಂತಸ್ಥಿತಿಯಿಂದ ಪರಮಾತ್ಮ ಹಿರಬಂದು ಪುನಃ ಕಾರ್ಯೋನ್ಮುಖನಾಗಲು ಈ ಚಕ್ರೀಯ ಗತಿಯೇ ಕಾರಣ. ಆತ ಪ್ರಳಯಕ್ಕೂ ಮುನ್ನ ಇದ್ದ ಜೀವಿಗಳಿಗೆ ಕರ್ಮ ಸವೆಸಲು ಅನುವು ಮಾಡಿಕೊಡುವ ಕಾಮನೆಯಿಂದ ಸೃಷ್ಟಿ ಕಾರ್ಯಕ್ಕೆ ಅಣಿಯಾಗುತ್ತಾನಂತೆ. ಹಾಗೆಂದುಕೊಂಡೊಡನೆ ಆ ಕಾರ್ಯವು ಸೂರ್ಯರಶ್ಮಿಯಂತೆ ಮಿಂಚಿನ ವೇಗದಲ್ಲಿ ಅಡ್ಡಲಾಗಿಯೂ ಕೆಳಕ್ಕೂ ಮೇಲಕ್ಕೂ ಎಲ್ಲೆಲ್ಲಿಯೂ ವಿಸ್ತಾರವಾಗಿ ವ್ಯಾಪಿಸಿಕೊಂಡಿತಂತೆ! ಇದು ಋಗ್ವೇದದ ಅಭಿಪ್ರಾಯ.
ಸೃಷ್ಟಿಯ ಕುರಿತಂತೆ ಮಾತಾಡುವ ವಿಜ್ಞಾನವೂ ಇದಕ್ಕೆ ಬಲು ಹತ್ತಿರದ ವಾದವನ್ನೆ ಹೇಳುತ್ತದೆ. ಕಪ್ಪುರಂಧ್ರಗಳಲ್ಲಿನ ಸಿಂಗ್ಯುಲಾರಿಟಿಯ ಹಿಡಿತ ಸಡಿಲಗೊಳ್ಳುತ್ತಿದ್ದಂತೆ ಅದು ಸ್ಫೋಟಿಸಿ ಅತೀವ ವೇಗದಲ್ಲಿ ಶಕ್ತಿ ಆಕಾಶದಲ್ಲಿ ಪಸರಿಸಿತಂತೆ. ಈ ಶಕ್ತಿ ಅನಂತರದ ಕಾಲಘಟ್ಟದಲ್ಲಿ ರೂಪಾಂತರಗಳನ್ನು ಪಡೆದುಕೊಂಡಿತಂತೆ.
ಸೃಷ್ಟಿ ರಹಸ್ಯವನ್ನು ಬಲು ಜತನದಿಂದ ವಿವರಿಸುವ ವಿಷ್ಣು ಪುರಾಣದ ಶ್ಲೋಕಗಳ ಅರ್ಥವನ್ನು ಭೇದಿಸುತ್ತ ಹೋದಂತೆ ನೀವು ಅವಾಕ್ಕಾಗಿಬಿಡುವಿರಿ. ಕಣ್ಣಿಗೆ ಕಾಣುವ ಈ ಪ್ರಪಂಚ ಮೂಲ ಪ್ರಕೃತಿಯಲ್ಲಿ ಲೀನವಾಗುವುದೇ ಪ್ರಳಯವೆನ್ನುತ್ತದೆ ಪುರಾಣ. ತನ್ನ ಗುರುತ್ವ ಶಕ್ತಿಯ ಸಾಮಥ್ರ್ಯದಿಂದ ಇಡಿಯ ವಿಶ್ವವನ್ನೇ ಸೆಳೆದು ನುಂಗಿಕೊಂಡು ಶಾಂತವಾಗಿಬಿಡುವ ಅಗೋಚರ ವಿಸ್ತಾರವಾಗುವ ಬಯಕೆಯುಂಟಾದಾಗಲೇ ಸತ್ವ ರಜ ತಮಾದಿ ಮೂರು ಗುಣಗಳು ಅವುಗಳನ್ನೊಳಗೊಂಡ ಮೂರು ಅಹಂಕಾರಗಳು ರೂಪುಗೊಂಡನಂತೆ. ಅನಂತರ ಶಬ್ದ ತತ್ತ್ವ ಅದರ ಸಹಕಾರದಿಂದ ಆಕಾಶ ಸೃಷ್ಟಿಯಾಯಿತಂತೆ. ಅನಂತರ ಸ್ಪರ್ಶ ತತ್ತ್ವ ಅದಕ್ಕೆ ಪೂರಕವಾಗಿ ವಾಯು ಸೃಷ್ಟಿಯಂತೆ. ಶಬ್ದ ಸ್ಪರ್ಶಗಳು ಸೇರಿ ರೂಪವೆಂಬ ತತ್ತ್ವಕ್ಕೆ ಕಾರಣವಾದವು. ಆ ತತ್ತ್ವಕ್ಕೆ ಮೂಲವಾಗಿ ತೇಜಸ್ಸು ರೂಪುಗೊಂಡಿತು. ಶಬ್ದ – ಸ್ಪರ್ಶ – ರೂಪಗಳ ನಂತರ ಹುಟ್ಟಿದ್ದು ರಸ ತತ್ತ್ವ. ಹೌದು, ನೀವೀಗ ಸರಿಯಾಗಿಯೇ ಆಲೋಚಿಸಿದಿರಿ. ರಸಗುಣವುಳ್ಳ ಜಲವು ಉತ್ಪನ್ನವಾದುದು ಆಗಲೇ. ಸಋಷ್ಟಿಯ ಕೆಲಸ ಸಾಗುತ್ತಲೇ ಇತ್ತು. ಶಬ್ದ – ಸ್ಪರ್ಶ – ರೂಪ – ರಸವೆಂಬ ನಾಲ್ಕೂ ತತ್ತ್ವಗಳು ಗಂಧವೆಂಬ ತತ್ತ್ವಕ್ಕೆ ಪ್ರೇರಣೆ ನೀಡಿದವು. ಸಹಜವಾಗಿ ಪೃಥ್ವಿ ನಿರ್ಮಾಣವಾಯ್ತು.
ಇವಿಷ್ಟನ್ನೂ ತೈತ್ತಿರೀಯ ಉಪನಿಷತ್ತು ಕೆಲವೇ ಸಾಲುಗಳಲ್ಲಿ ಕಟ್ಟಿಕೊಡುತ್ತದೆ. ಆತ್ಮನಃ ಆಕಾಶ ಸಂಭೂತಃ| ಆಕಾಶಾದ್ವಾಯುಃ| ವಾಯೋರಗ್ನಿಃ| ಅಗ್ನೇರಾಪಃ| ಆಪ್ಯಃ ಪೃಥಿವೀ| ಪೃಥವೀಭ್ಯೋಅನ್ನಮ್| ಅನ್ನಾತ್ ಪುರುಷಃ – ಉಪನಿಷತ್ತು ವಿಕಾಸವಾದದ ಮುಂದಿನ ಮಜಲನ್ನೂ ವಿವರಿಸುತ್ತವೆ. ಪೃಥಿವಿಯಿಂದ ವನಸ್ಪತಿಗಳು, ಅಲ್ಲಿಂದ ಅನ್ನ ಉತ್ಪಾದನೆಗೊಂಡವಂತೆ. ಅನಂತರವೇ ಸಕಲ ಪ್ರಾಣಿಗಳೂ!
ವಿಕಾಸದ ಈ ವಿವರಣೆ ಅದೆಷ್ಟು ವೈಜ್ಞಾನಿಕವಾಗಿದೆ ನೋಡಿ. ಅತ್ಯಂತ ವಿಸ್ತಾರವಾದ, ಎಲ್ಲೆಲ್ಲೂ ವ್ಯಾಪ್ತವಾಗಿರುವ ಆಕಾಶದ ಉತ್ಪತ್ತಿ ಮೊದಲು ಅನಂತರ ಪೂರಕ ತತ್ತ್ವಗಳೊಂದಿಗೆ ಒಂದೊಂದೇ ಅಂಶಗಳ ಸೃಷ್ಟಿ. ಈ ಪಂಚಭೂತಗಳಿಲ್ಲದ ಸೃಷ್ಟಿಯ ಯಾವುದೇ ವಸ್ತುವನ್ನಾದರೂ ತೋರಿಸಿಬಿಡಿ ನೋಡೋಣ! ಪ್ರಳಯ ಕಾಲದಲ್ಲೂ ಅಷ್ಟೇ. ಎಲ್ಲವೂ ಪಂಚಭೂತಗಳಲ್ಲಿ ಲೀನವಾಗುತ್ತವೆ. ಕೊನೆಗೆ ಪರಬ್ರಹ್ಮ (ವಿಜ್ಞಾನ ಹೇಳುವ ಸಿಂಗ್ಯುಲಾರಿಟಿ)ದೊಳಗೆ ಸೇರಿಹೋಗುತ್ತದೆ. ಹೀಗಾಗಿಯೇ ನಮ್ಮ ಸೃಷ್ಟಿ ಸಿದ್ಧಾಂತದ ಪ್ರಕಾರ ಎಲ್ಲದರ ಮೂಲ ವಸ್ತು – ಅದೇ ಪರಬ್ರಹ್ಮ.
ಹಾಗಂತ ಈ ಸೃಷ್ಟಿ ಚಿಟಿಕಿ ಹೊಡೆಯುವುದರಲ್ಲಿ ನಡೆದುಬಿಡಲಿಲ್ಲ. ಋಷಿಗಳು ಹಾಗೆಂದು ಕಲ್ಪಿಸಿ ಭಗವಂತನ ಗುಣಗಾನ ಮಾಡುವ ಮೂಢರೂ ಆಗಿರಲಿಲ್ಲ. ಋಗ್ವೇದದ ಹತ್ತನೆ ಮಂಡಲದ ತೊಂಭತ್ತೇಳನೆ ಸೂಕ್ತದ ಮೊದಲನೆ ಶ್ಲೋಕವೇ ಹೇಳುತ್ತದೆ, “ದೇವತೆಗಳ ಸೃಷ್ಟಿಗಿಂತ ಮೂರು ಯುಗಗಳ ಮೊದಲು ವನಸ್ಪತಿಗಳು ಸೃಷ್ಟಿಯಾದವು” ಎಂದು. ಅಂದರೆ, ಇದೊಂದು ಸುದೀರ್ಘ ಪ್ರಕ್ರಿಯೆ. ಜಗತ್ತಿನ ಯಾವ ಮತಪಂಥಗಳೂ ಸೃಷ್ಟಿ ರಚನೆಯ ಈ ದೀರ್ಘತಮ ಇತಿಹಾಸವನ್ನು ಊಹಿಸುವುದೂ ಸಾಧ್ಯವಿಲ್ಲ.
ಸುಮ್ಮನೆ ಓದುಗರ ಅನುಕೂಲಕ್ಕಿರಲೆಂದು ವಿಜ್ಞಾನ ನಂಬುವ ಒಂದು ಸಿದ್ಧಾಂತದ ಪ್ರಕಾರ ಸಿಂಗ್ಯುಲಾರಿಟಿ ಸ್ಫೋಟಿಸಿ ಹೈಡ್ರೋಜನ್ ಮತ್ತು ಹೀಲಿಯಮ್ ಮೂರು ಲಕ್ಷ ವರ್ಷಗಳನ್ನು ತೆಗೆದುಕೊಂಡರೆ, ನೂರು ಕೋಟಿ ವರ್ಷಗಳ ನಂತರ ನಕ್ಷತ್ರಗಳು, ಗ್ಯಾಲಕ್ಷಿಗಳು ನಿರ್ಮಾಣಗೊಂಡವು. ಈಗ ನಾವು ಕಾಣುತ್ತಿರುವ ಈ ಬ್ರಹ್ಮಾಂಡ ಒಂದೂವರೆ ಸಾವಿರ ಕೋಟಿ ವರ್ಷಗಳ ನಂತರ ಈ ರೂಪ ಪಡಕೊಂಡಿರೋದು! ಹೇಗಿದೆ?
ಹೀಲಿಯಂ ಮತ್ತು ಹೈಡ್ರೋಜನ್ ಮೋಡಗಳನ್ನು ಆಕಾಶವೆಂದು ಕರೆಯೋದಾದರೆ ಅಲ್ಲಿಂದಾಚೆಗೆ ನಿರ್ಮಾಣದ ಹಂತವೆಲ್ಲವೂ ವಿಷ್ಣು ಪುರಾಣದ ಧಾಟಿಯದ್ದೇ ಅಲ್ವಾ? ಇನೂ ಒಂದು ಹಂತ ಮುಂದೆ ಹೋಗಿ ಊಹಿಸಲು ಸಾಧ್ಯವಾದರೆ ಈ ಹೈಡ್ರೋಜನ್ ಮತ್ತು ಹೀಲಿಯಮ್‍ಗಳ ಉತ್ಪಾದನೆಗೆ ಕಾರಣವಾದ ಅಂಶ ಸೃಷ್ಟಿಗೊಂಡ ಎಲ್ಲದರಲ್ಲೂ ಅಡಗಿದೆ ಎಂಬುದು ಖಾತ್ರಿಯಾಯ್ತು ತಾನೆ? ಅದನ್ನೇ ನಾವು ಪರಬ್ರಹ್ಮ ಎಂದಿದ್ದು. ಪಶ್ಚಿಮದ ದೆವ್ವ ನಮ್ಮನ್ನು ಹೊಕ್ಕ ಮೇಲೆ ನಮ್ಮ ಸಾಹಿತ್ಯವನ್ನು ನೋಡುವ ದೃಷ್ಟಿಕೋನ ನಾವು ಬದಲಾಯಿಸಿಕೊಂಡುಬಿಟ್ಟಿದ್ದೇವೆ. ಒಮ್ಮೆ ಈ ದೆವ್ವವನ್ನು ಝಾಡಿಸಿ ಕೊಡವಿಕೊಂಡು ಭಾಗವತ ಶ್ರವಣ ಮಾಡಿ ವಿಜ್ಞಾನ – ಅಧ್ಯಾತ್ಮ ಆಚರಣೆಗಳೆಲ್ಲ ಹೇಗೆ ಸುಂದರ ಮಖಮಲ್ಲು ಶಾಲಿನಂತೆ ನೇಯಲ್ಪಟ್ಟಿವೆ ಅನ್ನೋದು ಗೊತ್ತಾಗುತ್ತದೆ.
ನಮ್ಮ ಸಾಹಿತ್ಯವನ್ನು ಅಡಗೂಲಜ್ಜಿ ಕತೆಯೆಂದು ಜರಿದವರು ಅನುಸರಿಸಿದ ಮತಗ್ರಂಥದ ಮೊದಲ ಪುಟ ನೋಡಿ. “ದೇವರು ಆಕಾಶ – ಭೂಮಿಯನ್ನು ಉಂಟು ಮಾಡಿದನು. ಬೆಳಕಾಗಲಿ ಎನ್ನಲು ಬೆಳಕಾಯ್ತು. ಕತ್ತಲಿಂದ ಅದನ್ನು ಬೇರ್ಪಡಿಸಿದ್ದರಿಂದ ದಿನವಾಯ್ತು. ಜಲ ಸಮೂಹದ ನಡುವೆ ವಿಸ್ತಾರ ಗುಮ್ಮಟ ನಿರ್ಮಿಸಿ ಕೆಳಗಣ ನೀರನ್ನೂ ಮೇಲಣ ನೀರನ್ನೂ ಪ್ರತ್ಯೇಕಿಸಿದನು. ಈ ಗುಮ್ಮಟವನ್ನು ಆಕಾಶವೆಂದನು. ಕೆಳಗಣ ನೀರನ್ನು ದೇವರು ಒಂದೆಡೆ ಸೇರಿಕೊಳ್ಳಲಿ ಎಂದಾಗ ಒಣ ನೆಲ ಕಾಣಿಸಿಕೊಂಡಿತು. ಒಣ ನೆಲಕ್ಕೆ ಭೂಮಿ ಎಂದೂ ಜಲ ಸಮೂಹಕ್ಕೆ ಸಮುದ್ರವೆಂದೂ ಹೆಸರಿಡಲಾಯ್ತು. ಹೀಗೆ ಸಾಗುತ್ತದೆ ಅದರ ಸೃಷ್ಟಿ ಕಥೆ!
ಈ ಕುರಿತಂತೆ ಯಾವ ವ್ಯಾಖ್ಯಾನವನ್ನೂ ಇಚ್ಛಿಸಲಾರೆ. ಆದರೆ ಇದನ್ನು ಓದಿದಾಗೆಲ್ಲ ಪುರಾಣಗಳ ವೈಜ್ಞಾನಿಕತೆಯ ಕುರಿತಂತೆ ಹೆಮ್ಮೆಯಾಗುತ್ತದೆ, ಅಷ್ಟೇ.

Leave a Reply