ವಿಭಾಗಗಳು

ಸುದ್ದಿಪತ್ರ


 

ಶಿಳಕೆವಾಡಿಯ ಮಾದರಿ ಸಂತ

ಸಂತರುಗಳ ಬಗ್ಗೆ ವ್ಯಾಪಕವಾದ ಚರ್ಚೆ ಶುರುವಾಗಿದೆ. ಸಿಕ್ಕಿದ್ದೇ ಛಾನ್ಸು ಎಂದುಕೊಂಡು ದೇವರ ಬಗ್ಗೆ, ಸಾಧುಗಳ ಬಗ್ಗೆ ಬೇಕಾಬಿಟ್ಟಿ ಭಾಷೆಯಲ್ಲಿ ಮಾತನಾಡುವವರೂ ಕಂಡುಬರುತ್ತಿದ್ದಾರೆ. ಧರ್ಮವನ್ನು ಅಫೀಮು ಎಂದು ಜರಿಯುವವರಿಗಂತೂ ಈಗ ಹಬ್ಬ. ಈ ಹೊತ್ತಿನಲ್ಲಿಯೇ ನಾವೊಬ್ಬ ಅಪರೂಪದ ಸಂತರೊಬ್ಬರನ್ನು ಪರಿಚಯ ಮಾಡಿಕೊಳ್ಳಬೇಕಿದೆ. ಬೆಳಗಾವಿಯಿಂದ ನೂರು ಕಿ.ಮೀ.ದೂರದ ಕೊಲ್ಲಾಪುರದ ಬಳಿಯ ಕಾಣ್ಹೇರಿ ಮಠದ ಅಧಿಪತಿ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು. ಸ್ವಾಮೀಜಿಗೆ ಈಗ ನಲವತ್ತೆಂಟು ವರ್ಷ. ವಿಶೇಷವೆಂದರೆ ಅತ್ಯಂತ ದೊಡ್ಡ ಭಕ್ತಗಣವನ್ನು ಹೊಂದಿರುವ ಸ್ವಾಮೀಜಿ ಕಳೆದ ವರ್ಷವೇ ಇಪ್ಪತ್ತೆರಡರ ತರುಣನಿಗೆ ಮಠದ ಉತ್ತರಾಧಿಕಾರತ್ವ ವಹಿಸಿ ಸಾಷ್ಟಾಂಗ ಪ್ರಣಾಮ ಮಾಡಿಬಿಟ್ಟಿದ್ದಾರೆ. ಕೊನೆಯುಸಿರಿನವರೆಗೆ ಪಟ್ಟ ಬಿಡದ ಎಲ್ಲ ಮತಗಳ ಪ್ರಮುಖರಿಗೆ ಅವರು ಕಲಿಸಿದ ಮೊದಲ ಪಾಠವೇ ಇದು.
ಕಾಡಸಿದ್ಧೇಶ್ವರ ಸ್ವಾಮಿಗಳು ಗ್ರಾಮಾಭಿವೃದ್ಧಿಯಲ್ಲಿ ವಿಶೇಷ ಪರಿಣತಿ ಹೊಂದಿದ್ದವರೆಂದು ಕೇಳಿದ್ದೆ. ಅವರ ಕೃಷಿ ಪ್ರೇಮ ಎಂಥದ್ದೆಂದರೆ, ಪ್ರವಚನಕ್ಕೆ ಹೋದವರು ಆಶೀರ್ವಾದ ಬೇಡಿ ಬಂದವರಿಗೆ ಹಿಡಿ ತುಂಬ ದೇಶೀ ಧಾನ್ಯಗಳ ಬೀಜ ಕೊಟ್ಟು ಬೆಳೆ ತೆಗೆದು ಮತ್ತೊಬ್ಬರಿಗೆ ಒಂದು ಮುಷ್ಟಿ ಬೀಜ ಕೊಡಿರೆಂದು ತಾಕೀತು ಮಾಡುತ್ತಾರೆ. ಹಳ್ಳಿಯಲ್ಲಿ ಸ್ವಚ್ಛತೆ ಇಲ್ಲವೆಂದಾಗ ತಾವೇ ಪೊರಕೆ ಹಿಡಿದು ಕಸ ಗುಡಿಸಲು ನಿಲ್ಲುತ್ತಾರೆ. ಕೊನೆಗೆ ತರುಣರೊಂದಿಗೆ ಹರಟುತ್ತಾ ಅವರೊಂದಿಗೆ ಊಟ ಮಾಡುತ್ತಾ ಆತ್ಮೀಯತೆಯ ನಡೆದಾಡುವ ಮೂರ್ತಿಯಾಗಿಬಿಡುತ್ತಾರೆ. ಇವೆಲ್ಲವನ್ನು ಕೇಳೀ ಕೇಳೀ ಒಮ್ಮೆ ನೋಡಬೇಕೆಂದೇ ದೂರದ ಕಾಣ್ಹೇರಿ ಮಠಕ್ಕೆ ಹೋಗಿದ್ದು ನಾವು. ನೀವು ಕೈಚಳಕ ತೋರಿದ ಒಂದು ಹಳ್ಳಿಯನ್ನು ನಾವು ನೋಡಬಹುದೇ ಎಂದು ಕೇಳಿದ್ದಕ್ಕೆ ನಕ್ಕುಬಿಟ್ಟ ಸ್ವಾಮೀಜಿ, ತಮ್ಮ ಆಪ್ತನನ್ನು ಕರೆದು, ಇವರನ್ನು ಶಿಳಕೆವಾಡಿಗೆ ಕರೆದೊಯ್ಯಿಅಂದರು. ಈ ಸ್ವಾಮೀಜಿ ಕನ್ನಡ, ಮರಾಠಿ, ಹಿಂದಿಗಳನ್ನೆಲ್ಲ ಲೀಲಾಜಾಲವಾಗಿ ಮಾತನಾಡುತ್ತಾರೆ.
ಇನ್ನೂರು ಜನಸಂಖ್ಯೆ ದಾಟದ ಶಿಳಕೆವಾಡಿಯಲ್ಲಿ ಅರವತ್ತೇ ಕುಟುಂಬಗಳು. ಒಂದೇ ಬಣ್ಣದ ಮನೆಗಳು. ಪ್ರತಿ ಮನೆಗೂ ಒಂದು ಶೌಚಾಲಯ. ಅದಕ್ಕೆ ಹೊಂದಿಕೊಂಡಂತೆ ಗೋಬರ್ ಗ್ಯಾಸ್ ಘಟಕ. ಈ ಊರಿನ ಯಾರೂ ರಸ್ತೆ ಬದಿಯಲ್ಲಿ ಮಲ ಮೂತ್ರ ವಿಸರ್ಜನೆಗೆ ಕೂರುವಂತಿಲ್ಲ. ಗೋಬರ್ ಗ್ಯಾಸನ್ನು ಬಳಸುವುದು ಕೂಡ ಕಡ್ಡಾಯ. ಹೀಗಾಗಿ ಮನೆಗೆ ಎರಡು ಮೂರು ದನಗಳು ಇದ್ದೇ ಇದ್ದಾವೆ. ಈ ಹಳ್ಳಿಗೆ ಬಂದಾಗ ಯಾವುದೋ ಪಟ್ಟಣದ ಕಾಲೊನಿಗೆ ಬಂದ ಅನುಭವವಾದರೆ ಅಚ್ಚರಿಯಿಲ್ಲ. ಮನೆಯೆದುರಿಗೆ ಸ್ವಚ್ಛ ಚರಂಡಿಗಳು, ಆಳೆತ್ತರ ಬೆಳೆದ ಗಿಡಗಳು. ಇಷ್ಟೇ ಆಗಿದ್ದರೆ ಮಹತ್ತರ ಸಂಗತಿ ಆಗುತತಿರಲಿಲ್ಲ ಬಿಡಿ. ಶಿಳಕೆವಾಡಿಯ ಜನ ಇದುವರೆಗೂ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿಲ್ಲ. ಠಾಣೆಯ ಪೊಲೀಸರಿಗೆ ಈ ಊರಿನ ಹೆಸರೇ ಗೊತ್ತಿಲ್ಲ! ಸ್ವಾಮೀಜಿಯ ಸಂಪರ್ಕಕ್ಕೆ ಬಂದಮೇಲೆ ಊರಿನ ಜನ ಮಾಂಸಾಹಾರವನ್ನು ಸಂಪೂರ್ಣ ತ್ಯಜಿಸಿಬಿಟ್ಟಿದ್ದಾರೆ. ನೆಂಟರಿಷ್ಟರು ಬಂದಾಗ ತಮ್ಮ ಮನೆಯಲ್ಲಿ ಮಾಂಸಾಹಾರಕ್ಕೆ ಅವಕಾಶವಿಲ್ಲವೆಂದು ನಿರ್ಭಿಡೆಯಿಂದ ಹೇಳಿಬಿಡುತ್ತಾರೆ. ಊರಿನಲ್ಲಿ ಕುಡಿತದ ಸೋಂಕು ನಿರ್ಮೂಲನೆಯಾಗಿದೆ. ಕುಡಿದು ತೂರಾಡುತ್ತಿದ್ದ ತರುಣರು ಸ್ವಾಮೀಜಿಯ ಸ್ನೇಹಕ್ಕೆ ಬಾಗಿ ಅದರಿಂದ ದೂರವಿದ್ದಾರೆ. ಗುಟಖಾ ತಿನ್ನುವ ಒಬ್ಬೇ ಒಬ್ಬ ತರುಣ ನಿಮಗೆ ಇಲ್ಲಿ ನೋಡಲು ಸಿಗಲಾರ. ನಂಬುವಿರೇನು? ನಂಬಲೇಬೇಕು. ಕಳೆದ ಹತ್ತು ವರ್ಷಗಳಲ್ಲಿ ಜನಸಂಖ್ಯೆಯಲ್ಲಿ ಆಗಿರುವ ಹೆಚ್ಚಳ ಇಪ್ಪತ್ತು ಜನಮಾತ್ರ! ಅಂದರೆ ಊರಿನ ಜನಕ್ಕೆ ಸಂಯಮದ ಪಾಠವೂ ಇದೆ ಅಂತಾಯ್ತು. ಈ ಊರಿನ ಪುಟ್ಟ ಮಕ್ಕಳೂ ಏನು ಕುಳಿತು ತಿನ್ನುವವರಲ್ಲ. ಶಾಲೆಗೆ ಹೋಗುವ ಈ ಮಕ್ಕಳು ನರ್ಸರಿಯೊಂದನ್ನು ನಡೆಸುತ್ತಾರೆ. ಅದಾಗಲೇ ಒಂದು ಲಕ್ಷ ಸಸಿಗಳನ್ನು ತಯಾರು ಮಾಡಿ ಪಕ್ಕದ ಪಂಚಾಯ್ತಿಗೆ ಮಾರಾಟ ಮಾಡಲು ಸಜ್ಜಾಗಿದ್ದಾರೆ! ಊರಿನಲ್ಲಿ ಇದುವರೆಗೆ ಚುನಾವಣೆ ನಡೆದೇ ಇಲ್ಲ. ಯಾವ ಸಮಿತಿ  ಮಂಡಳಿ, ಕೊನೆಗೆ ಗ್ರಾಮ ಪಂಚಾಯ್ತಿಗೂ ಊರಿನ ಜನ ಅವಿರೋಧವಾಗಿಯೇ ಆಯ್ಕೆ ಮಾಡುತ್ತಾರೆ. ವಿಧಾನ ಸಭೆ, ಲೋಕ ಸಬೆಗಳ ಸದ್ದು ಗದ್ದಲ ಎಲ್ಲೆಡೆ ಜೋರಾಗಿದ್ದರೂ ಶಿಳಕೆವಾಡಿ ಮಾತ್ರ ಪರಮ ಶಾಂತ!
ಒಂದೊಂದು ವಿಚಾರ ಕೇಳಿದಾಗೆಲ್ಲ ನಮ್ಮ ಹುಬ್ಬು ಮೇಲೇರುತ್ತಲೇ ಇತ್ತು. ಒಂದು ಹಂತದಲ್ಲಂತೂ ನಾವು ಬಾಯಿ ಕಳಕೊಂಡೇ ನಿಂತುಬಿಟ್ಟಿದ್ದೆವು. ಇದೆಲ್ಲ ಹೇಗೆ ಸಾಧ್ಯವಾಯಿತೆಂದು ಕೇಳಿದ್ದಕ್ಕೆ ಸ್ವಾಮೀಜಿ ಊರಿನ ಹೆಣ್ಣು ಮಕ್ಕಳ ಸಾಧನೆ ಇದು ಅಂದರು. ತಾಯಂದಿರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಸ್ವಾಮೀಜಿ, ನಿಮ್ಮ ಗಂಡಂದಿರನ್ನು ಸರಿ ಮಾಡಿ ಎಂದದ್ದಷ್ಟೇ. ಇಡೀ ಊರು ನೆಟ್ಟಗಾಯಿತು. ಮನೆಯ ಆಡಳಿತ ಸೂತ್ರ ಹೆಣ್ಣುಮಕ್ಕಳ ಕೈಗೆ ಹೋದೊಡನೆ ಊರಿನ ಪರಿಸ್ಥಿತಿ ಬದಲಾಯಿತು. ಇವತ್ತು ಊರಿನ ಪ್ರತಿ ಮನೆಯ ಒಡೆತನ ಗಂಡಸಿನದ್ದಲ್ಲ, ಹೆಣ್ಣಿನದು! ಸ್ತ್ರೀವಾದದ ಮಾತಾಡುತತ ಕಾಲ ಹರಣ ಮಾಡುವವರ ನಡುವೆ ಸ್ವಾಮೀಜಿ ಅಪರೂಪದ ಸಾಧಕರಾಗಿ ಕಾಣೋದು ಅದಕ್ಕೇ! ಊರಿನ ಎಲ್ಲ ಮನೆಗಳ ಒಡೆಯರೂ ಆ ಮನೆಯ ಹೆಣ್ಣೂ ಮಕ್ಕಳಾಗಿರೋದರಿಂದ ಸರ್ಕಾರದ ವಿಶೇಷ ಪುರಸ್ಕಾರ ಕೂಡ ಶಿಳಕೆವಾಡಿಗೆ ಬಂದಿದೆ.
ಈ ಊರನ್ನು ದತ್ತು ತೆಗೆದುಕೊಳ್ಳುವ ಮುನ್ನ ಕಾಡ ಸಿದ್ಧೇಶ್ವರ ಸ್ವಾಮಿಗಳು ೪ ಸಸಿಯನ್ನು ಊರ ತರುಣರಿಗೆ ಕೊಟ್ಟಿದ್ದರಂತೆ. ಅವರು ಅದನ್ನು ಶ್ರದ್ಧೆಯಿಂದ ಬೆಳೆಸಿದ್ದಾರೆಂದು ಗೊತ್ತಾದಮೇಲೆಯೇ ಆ ಊರನ್ನು ಪ್ರಯೋಗಕ್ಕೆ ಎತ್ತಿಕೊಂಡಿದ್ದು. ರಸ್ತೆ ಸ್ವಚ್ಛ ಮಾಡುವಾಗ, ದನದ ಕೊಟ್ಟಿಗೆಯನ್ನು ಶುಚಿಗೊಳಿಸುವಾಗ, ಶಾಲೆಯ ಅಂದವನ್ನು ಹೆಚ್ಚಿಸುವಾಗೆಲ್ಲ ಸ್ವಾಮೀಜಿಯೇ ಪೊರಕೆ ಹಿಡಿದು ನಿಂತಿದ್ದನ್ನು ನೋಡಿದವರಿದ್ದಾರೆ. ಊರಿನ ಮನೆಗಳ ಮುಂದೆ ಸಸಿ ನೆಡುವ ಕೆಲಸ ನಡೆಯುವಾಗ ಬೆಳಗ್ಗೆ ೮ ಗಂಟೆಗೆ ಬಂದು ನಿಂತ ಸ್ವಾಮೀಜಿ ರಾತ್ರಿ ಹನ್ನೆರಡೂವರೆಗೆ ಮಠಕ್ಕೆ ಮರಳಿ ಹೊರಟಿದ್ದರಂತೆ. ಇಂದಿನ ಪಂಚಾಯ್ತಿ ಅಧ್ಯಕ್ಷರು ಅದನ್ನು ನೆನಪಿಸಿಕೊಂಡಾಗ ಅವರ ಕಣ್ಣಲ್ಲಿ ಮಿಂಚಿತ್ತು. ಅಂಥವರ ಶಿಷ್ಯರು ನಾವೆಂಬ ಆತ್ಮವಿಶ್ವಾಸದ ಮಿಂಚದು.
ಈ ಹಳ್ಳಿಯಲ್ಲಿ ಶೌಚಾಲಯಗಳ ಬಳಕೆಯದ್ದೇ ಮತ್ತೊಂದು ಯಶೋಗಾಥೆ. ಮೊದಮೊದಲು ಎಂಟ್ಹತ್ತು ಮನೆಗಳಿಗೆ ಒಂದು ಶೌಚಾಲಯವಿತ್ತು. ಹಾಗೆ ಆರೇಳು ಸಾಲು ಶೌಚಾಲಯಗಳು. ವಾರಕ್ಕೊಮ್ಮೆ ಅದರ ಪರೀಕ್ಷೆ. ಗಲೀಜು ಮಾಡಿಟ್ಟುಕೊಂಡವರಿಗೆ ದಂಡ. ವಸೂಲಾದ ದಂಡವನ್ನು ಸ್ವಚ್ಛತೆ ಕಾಪಾಡಿಕೊಂಡವರಿಗೆ ಬಹುಮಾನವಾಗಿ ನೀಡುವ ಪರಿಪಾಠ. ಇದು ಹೇಗೆ ನಡೆಯಿತೆಂದರೆ, ಬರಬರುತ್ತಾ ಮನೆಗೊಂದು ಶೌಚಾಲಯ ನಿರ್ಮಾಣಗೊಂಡಿತು. ಅದಕ್ಕೆ ಗೋಬರ್ ಗ್ಯಾಸ್ ಜೋಡಣೆಯಾಯ್ತು. ಸ್ವಾಮೀಜಿ ಖುದ್ದು ಅಡುಗೆ ಮನೆಗೆ ಹೋಗಿ, ಬಳಸುತ್ತಿರುವುದು ಗೋಬರ್ ಗ್ಯಾಸೇನಾ ಎಂದು ಖಾತ್ರಿಪಡಿಸಿಕೊಳ್ಳುತ್ತಿದ್ದರು. ಸ್ವಾಮೀಜಿ ತಮ್ಮ ಮನೆಯಲ್ಲಿ ಊಟ ಮಾಡಬೇಕೆಂದರೆ ತಾವು ಸಸ್ಯಾಹಾರಿಗಳಾಗಬೇಕೆಂದು ಅರಿತ ಆ ಜನ ಕುರಿ- ಕೋಳಿಗಳ ಬಲಿಯನ್ನು ನಿಲ್ಲಿಸಿ ಸಂಪೂರ್ಣ ಬದಲಾಗಿಬಿಟ್ಟರು. ಇನ್ನವರು ಕುಡಿತ ನಿಲ್ಲಿಸಿದ ಪರಿ ಮತ್ತಷ್ಟು ವಿಚಿತ್ರ. ಊರಿನಲ್ಲಿ ಕುಡಿದು ಬಂದವನನ್ನು ಹಿಡಿದುಕೊಟ್ಟರೆ ನೂರು ರೂಪಾಯಿ ಬಹುಮಾನ ಎಂದು ಡಂಗುರ ಸಾರಿಸಲಾಯ್ತು. ಆ ಬಹುಮಾನದ ಮೊತ್ತವನ್ನು ಕುಡಿದವನಿಂದಲೇ ವಸೂಲಿ ಮಾಡಲಾಯ್ತು. ೫೦೦ ರೂಪಾಯಿ ದಂಡ ಕಟ್ಟಿಸಿಕೊಂಡು, ಬಹುಮಾನ ಕೊಟ್ಟು ಉಳಿಯುವ ೪೦೦ ರೂಪಾಯಿಗಳನ್ನು ಅಭಿವೃದ್ಧಿ ಕಾರ್ಯ ನಿಧಿಯಾಗಿ ಸಂಗ್ರಹಿಸಲಾಯ್ತು. ಕ್ರಮೇಣ ಕುಡಿತ ನಿಂತುಹೋಯ್ತು. ಈಗ ಶಿಳಕೇವಾಡಿ ಅತ್ಯಂತ ಆದರ್ಶ ಗ್ರಾಮ. ಸ್ವಾಮೀಜಿಯ ಪ್ರೇರಣೆಯಿಂದ ಅನೇಕ ಹಳ್ಳಿಗಳಲ್ಲಿ ಗುಂಪು ಕದನಗಳು ನಿಂತಿವೆ. ನೀರಾವರಿ ಯೋಜನೆಗಳು ಊರಿನಲ್ಲಿ ಅನುಷ್ಠಾನಗೊಂಡಿವೆ. ನೆಮ್ಮದಿಯ ಬದುಕು ನೆಲೆಯಾಗಿದೆ. ಹೀಗಾಗಿಯೇ ಸುತ್ತಲಿನ ಊರುಗಳಲ್ಲಿ ಜನರು ಪ್ರಾಣ ಕೊಟ್ಟಾರು; ಸ್ವಾಮೀಜಿಯ ಮಾತು ನೆಲಕ್ಕುರುಳಲು ಬಿಡಲಾರರು.
ಎರಡು ವರ್ಷಗಳ ಹಿಂದೆ ಕಾಣ್ಹೇರಿ ಮಠದ ಬಳಿ ಒಂದು ಆಧುನಿಕ ಒಂದು ಅತ್ಯಾಧುನಿಕ ಆಸ್ಪತ್ರೆ ಕಟ್ಟಿಸಿದ್ದಾರೆ ಸ್ವಾಮೀಜಿ. ಈ ಆಸ್ಪತ್ರೆಯಲ್ಲಿ ಹೃದಯ, ಮೆದುಳಿನಂತಹ ಕಾಯಿಲೆಗಳಿಂದ ಹಿಡಿದು ಕ್ಯಾನ್ಸರ್‌ವರೆಗೆ ಎಲ್ಲಕ್ಕೂ ಚಿಕಿತ್ಸೆ ಇದೆ. ಅದೂ ಕೊಲ್ಹಾಪುರದ ಬೇರೆಲ್ಲ ಆಸ್ಪತ್ರೆಗಳಿಗಿಂತ ಶೇಕಡ ೬೦ರಷ್ಟು ಕಡಿಮೆ ಬೆಲೆಯಲ್ಲಿ! ಸ್ವಾಮೀಜಿ ಈ ಆಸ್ಪತ್ರೆ ನಿರ್ಮಿಸಿದ್ದೂ ಒಂದು ಸಾಧನೆಯೇ. ಕೈಯಲ್ಲಿ ನಯಾಪೈಸೆ ಇಲ್ಲದೆ ಯೋಜನೆ ಕೈಗೆತ್ತಿಕೊಂಡ ಸ್ವಾಮೀಜಿ, ಒಂದು ಲಕ್ಷ ರೂಪಾಯಿ ಕೊಡುವುದಾದರೆ ನಿಮ್ಮೂರಿಗೆ ಬರುತ್ತೇನೆ ಅನ್ನುತ್ತಿದ್ದರಂತೆ. ಇದರ ಹಿಂದಿನ ಘನ ಉದ್ದೇಶ ಅರಿತ ಜನ ನಾಲ್ಕೈದು ಲಕ್ಷ ರೂಪಾಯಿಯವರೆಗೂ ಸಂಗ್ರಹ ಮಾಡಿ ನೀಡುತ್ತಿದ್ದರಂತೆ. ನೋಡನೋಡುತ್ತಲೇ ಆಸ್ಪತ್ರೆಯ ಕಟ್ಟಡ ಎದ್ದು ನಿಂತಿತು. ಮಠದ ಆಸ್ಪತ್ರೆಗೆ ರೋಗಿಗಳು ಧಾವಿಸಿಬಂದರು. ಕೈತುಂಬ ಸಂಬಳ ಕೊಟ್ಟಿದ್ದರಿಂದ ಸುತ್ತಮುತ್ತಲಿನ ಆಸ್ಪತ್ರೆಗಳಿಗಿಂತ ಸಮರ್ಥ ವೈದ್ಯರೇ ಇಲ್ಲಿಗೆ ಬಂದರು. ಸ್ವಾಮೀಜಿಯೂ ಅಷ್ಟೇ. ಆಸ್ಪತ್ರೆಯಿಂದ ಕಿಂಚಿತ್ತೂ ಲಾಭ ಬೇಕಿಲ್ಲವೆಂದು ಹೇಳಿ, ಬಂದ ದುಡ್ಡಿನ ಬಹುಪಾಲನ್ನು ಕೆಲಸಗಾರರಿಗೆ ಹಂಚಿಬಿಡುತ್ತಾರೆ. ಹೀಗಾಗಿಯೇ ಆರಂಭದಿಂದ ಇಂದಿನವರೆಗೆ ಯಾವತ್ತೂ ಸಂಬಳ ಹೆಚ್ಚಾಗಬೇಕೆಂಬ ಮುಷ್ಕರ ಇಲ್ಲಿ ನಡೆದಿಲ್ಲ.
ಓಹ್! ಹೇಳುತ್ತ ಹೋದರೆ ಮುಗಿಯದ ಕಥೆಯಾದೀತು. ಮಠದ ಆವರಣದಲ್ಲಿ ಭಾರತೀಯ ಪರಂಪರೆಯನ್ನು ತಿಳಿಸುವ, ಹಳ್ಳಿಗಳ ಬದುಕನ್ನು ಕಟ್ಟಿಕೊಡುವ, ಉತ್ಸವಗಳ ಮಹತ್ವ ತಿಳಿಸುವ ಒಂದು ಪ್ರದರ್ಶಿನಿಯನ್ನು ನಿರ್ಮಿಸಲಾಗಿದೆ. ಇದನ್ನು ನೋಡಿದವರಂತೂ ಹಳೆಯ ನೆನಪುಗಳಲ್ಲಿ ಕಳೆದೇಹೋಗಿಬಿಡುತ್ತಾರೆ.
ನಮಗೂ ಹಾಗೆಯೇ ಆಗಿದೆ. ಕಾಣ್ಹೇರಿಯಿಂದ ಮರಳಿ ಬಂದಾಗಿನಿಂದ ಅಲ್ಲಿನದ್ದೇ ಗುಂಗು. ಸದಾ ಪುಟಿಯುವ ಉತ್ಸಾಹದ, ಅತ್ಯಂತ ಪ್ರಖರ ಚಿಂತನೆಯ, ಅಷ್ಟೇ ಸರಳ ವ್ಯಕ್ತಿತ್ವದ ಕಾಡಸಿದ್ಧೇಶ್ವರ ಸ್ವಾಮಿಗಳು ಕಣ್ಮುಂದೆ ಹಾದುಹೋಗುತ್ತಾರೆ. ಎಲ್ಲ ಅಪಸವ್ಯಗಳ ನಡುವೆ ಸಮಾಜಕ್ಕೆ ಕಂದೀಲಾಗಬಲ್ಲ ಅತ್ಯಂತ ಶ್ರೇಷ್ಟ ಕಾವಿ ಪುರುಷ ಇದ್ದಾರಲ್ಲ ಎಂದೆನಿಸಿ ಮನಸಿಗೆ ತಂಪಿನ ಅನುಭವವಾಗುತ್ತಿದೆ. ಈ ಬಾರಿ ವಾರಾಂತ್ಯದಲ್ಲಿ ಒಮ್ಮೆ ಕೊಲ್ಲಾಪುರದ ಕಾಣ್ಹೇರಿಗೆ ಹೋಗಿಬನ್ನಿ. ನಿಮ್ಮ ಮನಸ್ಸೂ ತಂಪಾಗದಿದ್ದರೆ ಮತ್ತೆ ಹೇಳಿ!

1 Response to ಶಿಳಕೆವಾಡಿಯ ಮಾದರಿ ಸಂತ

  1. vasishta shastry

    “मेरा भारत् और भारतीय् दोनो महान है”

Leave a Reply