ವಿಭಾಗಗಳು

ಸುದ್ದಿಪತ್ರ


 

ಶೋಧಕ ಶಕ್ತಿಗೊಂದು ಪ್ರೇರಣೆ – INSPIRE

ಭಾರತದಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಇದ್ದರೆ ಅದು ಇಚ್ಛಾಶಕ್ತಿಗೆ ಮಾತ್ರ. ಈಗ ಹೊಸತೊಂದು ಮಾರ್ಗ ಅರಸಬೇಕಿದೆ. ನಮ್ಮಲ್ಲಿನ ಶೋಧಕ ಶಕ್ತಿಯನ್ನು ಅನಾವರಣಗೊಳಿಸುತ್ತ ಹೆಜ್ಜೆ ಇಡಬೇಕಿದೆ. ಅದಕ್ಕೇ ಒಂದು ವೈಚಾರಿಕ ನೆಲೆಕಟ್ಟಿನ, ಸಮಸ್ಯೆಯ ಆಳಕ್ಕೆ ಹೊಕ್ಕಬಲ್ಲ ಸಾಮರ್ಥ್ಯದ ನವ ಪೀಳಿಗೆ ಬೇಕೆಂಬ ಕೂಗು ಹೊರಟಿರೋದು. ಇಂತಹ ಪೀಳಿಗೆಯ ನಿರ್ಮಾಣಕ್ಕೆ ವೈಜ್ಞಾನಿಕ ತಳಹದಿ ಬೇಕಲ್ಲ, ಅದನ್ನು ಕೊಡುವ ಪ್ರಯತ್ನ INSPIREನದು.

ಮೂಲ ವಿಜ್ಞಾನದಲ್ಲಿ ಆಸಕ್ತಿಯುಳ್ಳವರು ದಿನ ಕಳೆದಂತೆ ಕಾಣುತ್ತಲೇ ಇಲ್ಲವಾಗಿದ್ದಾರೆ. ಎಲ್ಲರಿಗೂ ಇಂಜಿನಿಯರ್, ಡಾಕ್ಟರುಗಳೇ ಆಗಬೇಕು. ಅತ್ತ ರಕ್ಷಣಾ ಇಲಾಖೆ, ಬಾಹ್ಯಾಕಾಶ ಇಲಾಖೆಗಳು ಆಸಕ್ತಿಯುಳ್ಳ ತರುಣ ತರುಣಿಯರಿಲ್ಲದೆ ಸೊರಗುತ್ತಿದೆ. ಇತ್ತ ಕಾಲೇಜಿನ ವಿದ್ಯಾರ್ಥಿಗಳು ಆದಷ್ಟು ಬೇಗ ಸೆಟ್ಲ್ ಆಗುವ, ಕೆಲಸ ಪಡೆದು ಲಕ್ಷ ಲಕ್ಷ ರೂಪಾಯಿ ಕೂಡಿ ಹಾಕಿಬಿಡುವ ಯೋಚನೆಯಲ್ಲಿದ್ದಾರೆ! ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರದINSPIRE ಯೋಜನೆ. ಕಳೆದ ಅನೇಕ ವರ್ಷಗಳಿಂದ ನಡೆಯುತ್ತಿದೆ ಇದು. ನಾನೇ ಮಣಿಪಾಲಕ್ಕೆ ಮೂರನೇ ಬಾರಿ ಹೋಗುತ್ತಿದ್ದೇನೆ. ಪ್ರತಿ ವರ್ಷ ನೂರೈವತ್ತಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳು ಸೇರಿ ವಿಷಯ ಮಥನ ಮಾಡಿ ಮೂಲ ವಿಜ್ಞಾನದತ್ತ ಸೆಳೆತ ಹೊಂದುವ ಅಪರೂಪದ ರೂಪುರೇಷೆ ಈ ಕಾರ್ಯಕ್ರಮ.
ಹಾಗೆ ನೋಡಿದರೆ ನಮ್ಮ ಶಿಕ್ಷಣ ಕ್ರಮ ಗಬ್ಬೆದ್ದು ಹೋಗಿಬಿಟ್ಟಿದೆ. ಅಲ್ಲಿ ’ಮೂಲ’ ಎನ್ನುವ ಪದಕ್ಕೆ ಅರ್ಥವೇ ಉಳಿದಿಲ್ಲ. ಸಹಜವಾಗಿ ಇರಬೇಕಾದ ಗುಣಗಳನ್ನು ನಾಶ ಮಾಡಿ ಹೊಸ ಆವಾಹನೆ ಮಾಡುವ ಪ್ರಯತ್ನಗಳು ನಡೆದೇ ಇವೆ. ಯಾವಾಗ ಸಹಜವಾದ ಮಾತೃಭಾಷೆಯನ್ನು ಸ್ಥಾನ ಪಲ್ಲಟಗೊಳಿಸಿ ಇಂಗ್ಲೀಶನ್ನು ತಂದು ಕೂರಿಸಿದರೋ ಆಗಲೇ ಈ ಪತನ ಶುರುವಾಗಿತ್ತು. ಅನುಸರಣೆ ರೋಗ ಪೀಡಿತನೊಬ್ಬ ಆವಿಷ್ಕಾರದ ಗುಣ ಕಳೆದುಕೊಳ್ಳೋದು ಅತ್ಯಂತ ಸಹಜ ಕ್ರಿಯೆ! ಭಾರತದ ನವ ಪೀಳಿಗೆ ಅಂಥದ್ದೇ. ತನ್ನದಲ್ಲದ ಭಾಷೆಯನ್ನು ಜೀರ್ಣಿಸಿಕೊಂಡು ಅದರಲ್ಲಿ ಬರೆದಿರುವ ಉತ್ತರಗಳನ್ನು ಉರು ಹೊಡೆದು ಒಪ್ಪಿಸುವುದು ಅವರ ಜೀವಮಾನದ ಶ್ರೇಷ್ಠ ಸಾಧನೆ. ಈ ಉರು ಹೊಡೆಯುವ ಭರದಲ್ಲಿ ಪ್ರಕೃತಿಯನ್ನು ನೋಡಿ ಆನಂದಿಸಬೇಕೆಂಬುದನ್ನು ಮರೆತರು. ಪಕ್ಷಿಗಳ ದನಿಯೊಳಗಿನ ಅಲೌಕಿಕ ಶಬ್ದವನ್ನು ಕೇಳಲಾರದೆ ಹೋದರು. ಅವರಿಗೆ ಮುಂಗಾರಿನ ಮೊದಲ ಹನಿ ಭೂಮಿಗೆ ಬಿದ್ದಾಗ ಏಳುವ ಮಣ್ಣಿನ ಸುಗಂಧ ವಾಸನೆ ಎನಿಸಿತು. ಪಂಚಭೂತಗಳ ಶಕ್ತಿ ಪಂಚೇಂದ್ರಿಯಗಳ ಅನುಭವಕ್ಕೆ ಬರಬೇಕು. ಆಮೇಲೆ ಮನಸ್ಸಿನ ಪ್ರಯೋಗಾಲಯದೊಳಗೆ ಗಂಟೆಗಟ್ಟಲೆ ಪ್ರಯೋಗ ನಡೆಯಬೇಕು. ಅದರ ಫಲಿತಾಂಶವನ್ನು ಬುದ್ಧಿ ತಾನೇ ಒರೆಗೆ ಹಚ್ಚಿ ನೋಡಬೇಕು. ಆಗ ಹೊರಬರುವ ಫಲಿತಾಂಶವಿದೆಯಲ್ಲ, ಅದು ಸಂಶೋಧನೆಯಾಗುತ್ತೆ. ಜಗದೀಶ ಚಂದ್ರ ಬೋಸರು ಪ್ರಯೋಗಾಲಯಕ್ಕೆ ಕಾಲಿರಿಸುವುದಕ್ಕಿಂತ ಬಲು ಮುನ್ನವೇ ಗಿಡಗಳೊಂದಿಗೆ ಮಾತನಾಡುತ್ತಿದ್ದರು; ಅವುಗಳ ಪ್ರತಿಕ್ರಿಯೆಯನ್ನು ಕೇಳುತ್ತಿದ್ದರು. ಅನಂತರ ಅದನ್ನು ಆಧುನಿಕ ಪ್ರಯೋಗಾಲಯಗಳಲ್ಲಿ ಸಾಬೀತುಪಡಿಸಿದರು ಅಷ್ಟೇ!

ವಿಜಯ ವಾಣಿ - ಜಾಗೋಭಾರತ್ ಅಂಕಣಹೀಗಾಗಿಯೇ ಶಿಕ್ಷಣದ ಮೊದಲ ಹೆಜ್ಜೆಯೇ ಗಮನಿಸೋದು. ಪ್ರಕೃತಿಯ ಪ್ರತಿಯೊಂದು ಲೀಲೆಯನ್ನು ಗಮನಿಸೋದು. ಹರಿವ ನೀರು ಆವಿಯಾಗೋದನ್ನು, ಆಮೇಲೆ ಘನವಾಗಿ, ಕರಗಿ ಸುರಿಯೋದನ್ನು ಗಮನಿಸಬೇಡವೇ? ಪಕ್ಷಿಯೊಂದು ಗೂಡು ಕಟ್ಟಿ ಗೂಡಿನೊಳಗೆ ಮೆತ್ತನೆಯ ಹಾಸಿಗೆ ಮಾಡಿಕೊಳ್ಳುತ್ತಲ್ಲ, ಈ ಕೌಶಲವನ್ನು ಹತ್ತಿರದಿಂದ ಅರಿಯೋದು ಬೇಡವೆ? ತಿಂದ ಅನ್ನ ಶ್ವಾಸಕೋಶದೊಳಕ್ಕೆ ಹೋಗದೆ ಅನ್ನ ನಾಳದ ಮೂಲಕ ಜಠರಕ್ಕೆ ಹೋಗುತ್ತದಲ್ಲ, ಶಾಲೆಗೆ ಹೋಗುವ ಮಗುವಿಗೆ ಈ ಕುರಿತು ಅಚ್ಚರಿ ಹುಟ್ಟೋದು ಬೇಡವೆ?
ಹಾ! ಹೌದು. ಗಮನಿಸಿ ನೋಡಿದ ಮಗು ಆಮೇಲೆ ಅಚ್ಚರಿ ವ್ಯಕ್ತಪಡಿಸಬೇಕು. ಈ ಅಚ್ಚರಿ ಅದರ ಕಲ್ಪನಾ ಶಕ್ತಿಯನ್ನು ವಿಸ್ತಾರಗೊಳಿಸುತ್ತದೆ. ಆ ಕಲ್ಪನೆಯ ವೇಗ್ಕಕೆ ಬುದ್ಧಿ ಚುರುಕಾಗುತ್ತದೆ. ಕ್ರಿಯೆ ಶುರುವಾಗುತ್ತದೆ. ಆಮೇಲೆ ಆಡಿದ್ದೇ ಆಟ. ಆದರೆ ದುರ್ದೈವ. ನಮ್ಮಲ್ಲಿ ಕಲ್ಪನೆಯನ್ನು ಕಟ್ಟಿ ಹಾಕುವ ಪ್ಯತ್ನಗಳು ಮಾತ್ರ. ಏಳು ಸ್ವರಗಳ ಪರ್ಮುಟೇಶನ್ – ಕಾಂಬಿನೇಶನ್ ಗಳು ಅದೆಷ್ಟು ರಾಗಗಳನ್ನು ಹುಟ್ಟುಹಾಕಿದವಲ್ಲ; ಸಂಗೀತವನ್ನು ಅಭ್ಯಾಸ ಮಾಡುವ ಮಕ್ಕಳು ಆ ಅಚ್ಚರಿಯಿಂದ ಕುಳಿತರೆ ರಾಗಗಳು ಇನ್ನೂ ಚೆನ್ನಾಗಿ ಅನಾವರಣಗೊಳ್ಳುತ್ತವೆ. ಹೊಸತೊಂದು ಲೋಕ ತೆರೆದುಕೊಳ್ಳುತ್ತದೆ. ಆತ ರಾಗವಿಜ್ಞಾನಿಯಾಗಿ ಬಿಡುತ್ತಾನೆ. ಲುಪ್ತಗೊಂಡ ರಾಗಗಳಿಗೆ ಆತ ಮರುಜೀವ ತುಂಬಬಲ್ಲ; ಜೀವಂತಿಕೆಯಿಂದಿರುವ ರಾಗಗಳಿಗೆ ಆತ ಬೆರಗು ತುಂಬಬಲ್ಲ. ಅಂಥವನು ಮೇಘ ಮಲ್ಹಾರದಿಂದ ಮಳೆಯನ್ನೂ ತರಿಸಬಲ್ಲ, ದೀಪಕ ರಾಗದಿಂದ ಜ್ಯೋತಿಯನ್ನೂ ಹೊತ್ತಿಸಬಲ್ಲ. ಇಷ್ಟಾಗುವವರೆಗೆ ಅಪ್ಪ ಅಮ್ಮ ಮೇಷ್ಟ್ರು ಇಲಾಖೆ ಯಾರೂ ಕಾಯುವುದೇ ಇಲ್ಲ. ಅವರಿಗೆಲ್ಲ ನೂರಕ್ಕೆ ನೂರು ಅಂಕ ಬೇಕಷ್ಟೆ.by hook or crook!?
ಇಲ್ಲ, ತರುಣ ಪೀಳಿಗೆಗೆ ಈ ಆಲೋಚನೆಯೇ ಇಲ್ಲ. ಅವರನ್ನೆಲ್ಲ ಅಕ್ಷರಶಃ ಕೂಲಿಗಳಾಗಲಿಕ್ಕೆ ಮೌಲ್ಡ್ ಮಾಡಿಬಿಟ್ಟಿದ್ದೇವೆ. ಕಲಿಕೆ ಆಸಕ್ತಿಯ ಸಂಕೇತವಾಗಿ ಇಂದು ಉಳಿದೇ ಇಲ್ಲ. ಹೌದು… ಅದು ಅನಿವಾರ್ಯ ಕರ್ಮದಂತಾಗಿದೆ. ಆದಷ್ಟು ಬೇಗ ಓದಿ ಮುಗಿದರೆ ಸಾಕಪ್ಪಾ ಅಂದುಕೊಳ್ಳುವವನಿಗೆ ಒಂದೇ ವರ್ಷ ದ್ವಿತೀಯ ಪಿಯುಸಿಯ ಜ್ವರ ಶುರುವಾಗಿಬಿಡುತ್ತದೆ. ಆಮೇಲಿನ ಓಟ ನಿಲ್ಲುವುದು ಬಿ.ಇ. ಆರನೇ ಸೆಮಿಸ್ಟರಿಗೇ! ಕಂಪನಿಗಳು ಬಂದು ಈತನನ್ನು ಕಾಯ್ದಿರಿಸಿ ಹೋಗೋವರೆಗೆ ಆತನ ದುಗುಡವೇ ನಿಲ್ಲದು. ಛೇ! ಬದುಕು ಅಷ್ಟೊಂದು ಸಂಕೀರ್ಣವಾಗಿಬಿಟ್ಟಿದೆಯೆ? ತಾರುಣ್ಯದ ಬುಗ್ಗೆಗಳೆಲ್ಲ ಹೀಗೆ ನಿಸ್ತೇಜವಾಗಿಬಿಟ್ಟರೆ ಭವಿಷ್ಯದ ಗತಿಯೇನು?
ಹೆಚ್ಚು ಹೆಚ್ಚು ಓದಿಕೊಂಡಷ್ಟೂ ಬದುಕಿನ ಬಗ್ಗೆ ನಮ್ಮ ಮಕ್ಕಳು ಭಯ ಕಟ್ಟಿಕೊಳ್ಳುತ್ತ ಹೋಗೋದನ್ನು ಗಮನಿಸಿದ್ದೀರಾ? ಗಣಿತದಲ್ಲಿ ನೂರಕ್ಕೆ ನೂರು ಬರಲಿಲ್ಲ, ಎರಡಂಕ ಕಡಿಮೆಯಾಯ್ತೆಂದು ಆತ್ಮಹತ್ಯೆ ಮಾಡಿಕೊಂಡವರನ್ನು ನೋಡಿದ್ದೇನೆ. ಎಮ್‌ಬಿಬಿಎಸ್ ಮುಗಿಸಿ ಎಂಟ್ಹತ್ತು ಸಾವಿರಕ್ಕೆ ಕಾಡಿ ಬೇಡಿ ನರ್ಸಿಂಗ್ ಹೋಮ್‌ಗಳಲ್ಲಿ ದುಡಿಯುವ ಯುವ ವೈದ್ಯರನ್ನು ನೋಡಿದ್ದೇನೆ. ಶಿಕ್ಷಣ ಬದುಕು ನಡೆಸುವ ಸಾಮರ್ಥ್ಯ ತುಂಬಬೇಕು, ಎಂತಹಾ ಕೆಲಸವನ್ನಾದರೂ ಮಾಡಬಲ್ಲ ಆತ್ಮವಿಶ್ವಾಸ ತುಂಬಬೇಕು. ಎಲ್ಲಕ್ಕು ಮಿಗಿಲಾಗಿ ಹೊಸ ಹೊಸ ಹಾದಿಗಳನ್ನು ಹುಡುಕುವ ಕುಶಲತೆ ಹುಟ್ಟುಹಾಕಬೇಕು. ಹಾಗಾಗುತ್ತಿಲ್ಲವೆಂಬುದೇ ಕೊರಗು.
ಪ್ರಕೃತಿಗೆ ಬಲು ಹತ್ತಿರವಿರುವ ಹಳ್ಳಿಗರಲ್ಲಿ ನಿಜವಾದ ಅಂತಃಶಕ್ತಿ ಅಡಗಿದೆ. ಅವರಲ್ಲಿ ಸಂಶೋಧನಾ ಬುದ್ಧಿಯೂ ಸಾಕಷ್ಟಿದೆ. ಆದರೆ ನಮ್ಮ ವಿಶ್ವವಿದ್ಯಾಲಯಗಳು ಹೇಳುವಂತಹ ಸಂಶೋಧನಾ ಶಿಸ್ತು ಅವರಲ್ಲಿ ಕಾಣಲಾಗದು. ಹಾಗಂತಲೇ ಅವರು ದೂರ ಉಳಿದುಬಿಟ್ಟಿದ್ದಾರೆ. ಗುಜರಾತಿನ ಸ್ವಯಂಸೇವಾ ಸಂಸ್ಥೆಯೊಂದು ಇಂತಹ ಸಂಶೋಧಕರಿಗೆ ಪ್ರೋತ್ಸಾಹ ನೀಡಿ ಅವರ ಸಂಶೋಧನೆಗಳಿಗೆ ಜಾಗತಿಕ ಮನ್ನಣೆ ಕೊಡಿಸುವ ಪ್ರಯತ್ನ ನಡೆಸಿದೆ. ಮೋದಿಯ ಸರ್ಕಾರ ಇಂತಹವರಿಗೆ ತರಬೇತಿ ಕೊಡಿಸಲೆಂದೇ ಪ್ರತ್ಯೇಕ ವಿಭಾಗ ತೆರೆದಿದೆ. ಭಾರತದಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಇದ್ದರೆ ಅದು ಇಚ್ಛಾಶಕ್ತಿಗೆ ಮಾತ್ರ. ಈಗ ಹೊಸತೊಂದು ಮಾರ್ಗ ಅರಸಬೇಕಿದೆ. ನಮ್ಮಲ್ಲಿನ ಶೋಧಕ ಶಕ್ತಿಯನ್ನು ಅನಾವರಣಗೊಳಿಸುತ್ತ ಹೆಜ್ಜೆ ಇಡಬೇಕಿದೆ.
ಅದಕ್ಕೇ ಒಂದು ವೈಚಾರಿಕ ನೆಲೆಕಟ್ಟಿನ, ಸಮಸ್ಯೆಯ ಆಳಕ್ಕೆ ಹೊಕ್ಕಬಲ್ಲ ಸಾಮರ್ಥ್ಯದ ನವ ಪೀಳಿಗೆ ಬೇಕೆಂಬ ಕೂಗು ಹೊರಟಿರೋದು. ಇಂತಹ ಪೀಳಿಗೆಯ ನಿರ್ಮಾಣಕ್ಕೆ ವೈಜ್ಞಾನಿಕ ತಳಹದಿ ಬೇಕಲ್ಲ, ಅದನ್ನು ಕೊಡುವ ಪ್ರಯತ್ನ INSPIREನದು. ಮಣಿಪಾಲದ ಲೈಫ್ ಸೈನ್ಸಸ್ನ ವಿಭಾಗದವರು ಈ ಇಡಿಯ ಕಾರ್ಯಕ್ರಮಕ್ಕೆ ಸೂತ್ರಧಾರರು. ದೇಶದ ಬೇರೆ ಬೇರೆ ವೈಜ್ಞಾನಿಕ ಸಂಸ್ಥೆಗಳ ಪ್ರಮುಖರು ಬಂದು ಮಕ್ಕಳೊಂದಿಗೆ ತಮ್ಮ ಅನ್ನಿಸಿಕೆ ಹಂಚಿಕೊಂಡು ಹೋಗುತ್ತಾರೆ. ಸಹಜವಾಗಿ ಅವರಂತಾಗುವ ಪ್ರೇರಣೆ ಮಕ್ಕಳಿಗೆ ಬಂದೇಬರುತ್ತದೆ. ಒಳ್ಳೆಯ ಪ್ರಯತ್ನವೇ.
ನನಗೆ ಮೂರು ವರ್ಷಗಳಿಂದಲೂ ಹೊಸ ಹೊಸ ಅನುಭವ. ಈ ಬಾರಿ ಮಕ್ಕಳೊಂದಿಗೆ ಎರಡು ಗಂಟೆ ಮಾತುಕತೆಗೆ ಕುಂತೆ. ಒಂದು ಮಗು ದುಡ್ಡು ದುಡಿಯಲಿಕ್ಕಾಗಿ ಇಂಜಿನಿಯರ್ ಆಗಬೇಕೆಂದಿತು. ಮತ್ತೊಂದು ಕಡಿಮೆ ಖರ್ಚಿನಲ್ಲಿ ಮನೆ ಕಟ್ಟಲಿಕ್ಕಾಗಿ ಇಂಜಿನಿಯರ್ ಆಗಬೇಕೆಂದು ಅಭಿಪ್ರಾಯಪಟ್ಟಿತು. ಎರಡೂ ಅದೆಷ್ಟು ಭಿನ್ನ ಅಲ್ಲವೆ? ಒಬ್ಬ ಹುಡುಗ ನನಗೆ ಪಿಸ್ತೂಲುಗಳ ಮೇಲೆ ಆಸಕ್ತಿ. ನಾನು ಸೈನ್ಯಕ್ಕೆ ಶಸ್ತ್ರ ತಯಾರಿಸಿಕೊಡುವ ದಿಸೆಯಲ್ಲಿ ಏನಾದರೂ ಮಾಡಬಹುದಾ ಎಂದು ಕೇಳಿದಾಗ ತಲೆಯಲ್ಲಿ ಸಾವಿರ ಮಿಂಚು ಸಿಡಿದ ಅನುಭವ. ನಮ್ಮ ಡಿಆರ್ಡಿಓದ ಇಂದಿನ ಸ್ಥಿತಿಯನ್ನು ನೆನಪಿಸಿಕೊಂಡಾಗ ವಿದ್ಯಾರ್ಥಿಗಳು ಈ ರೀತಿ ಕನಸು ಕಾಣೋದು ಅದೆಷ್ಟು ಶ್ರೇಯಸ್ಕರ ಎನ್ನಿಸುತ್ತೆ.
INSPIRE ಅನ್ನು ಇನ್ನೂ ಚೆನ್ನಾಗಿ ಆಯೋಜಿಸಬಹುದು. ಹೌದು. ಅಂತಹದೊಂದು ನಿರ್ವಾತ ಯಾವಾಗಲೂ ಇದ್ದೇ ಇರುತ್ತೆ ಬಿಡಿ. ಸ್ಲೈಡ್ಗಳೆದುರು ಮಕ್ಕಳನ್ನು ಕೂರಿಸಿ ಭಾಷಣ ಬಿಗಿಯುವುದಕ್ಕಿಂತ ಪ್ರಕೃತಿಯ ಮಡಿಲಲ್ಲಿ ಪಾಠ ಮಾಡುವ ಕೆಲವರು ಸಿಕ್ಕುಬಿಟ್ಟರೆ ವಿದ್ಯಾರ್ಥಿಗಳ ಮನಸ್ಸು ಮತ್ತಷ್ಟು ಅರಳೀತು. ಡಿಗ್ರಿ ಪಡೆಯದೆಯೂ ಸಾಧನೆ ಮಾಡಿದಂಥವರು ಬಂದು ಮಾತಾಡಿದರೆ ತೊಂಭತ್ತು ಪ್ರತಿಶತ ಪಡೆದವರ ಧಿಮಾಕು ಇಳಿದು ಭೂಮಿಗೆ ಹತ್ತಿರವಾದಾರು. ಅಲ್ಲವೆ ಮತ್ತೆ? ಯಾವ ಅಂಕಪಟ್ಟಿಯ ಗೋಜಲೂ ಇಲ್ಲದೆ ಸಾವಿರಾರು ಗಿಡಗಳಿಗೆ ನೀರೆರೆದು ಬೆಳೆಸಿದ ತಿಮ್ಮಕ್ಕ ಜೀವವಿಜ್ಞಾನದ ಪಾಠ ಮಾಡುವ ಪ್ರೊಫೆಸರ್ಗಿಂತ ಒಂದು ತೂಕ ಹೆಚ್ಚೇ. ಮನೆಯ ಕುಕ್ಕರಿನ ಸೀಟಿಗೆ ಮೋಟರು ಜೋಡಿಸಿ ಅದು ತಿರುಗುವಾಗ ಬೆಳಕು ಉತ್ಪಾದಿಸುವ ಗುಲ್ಬರ್ಗದ ಹುಡುಗ ಇನ್ನೂ ಹತ್ತನೆ ತರಗತಿಯನ್ನೆ ದಾಟಿಲ್ಲ. ಹಳೆ ಸ್ಕೂಟರಿನ ಇಂಜಿನ್ನಿಂದ ರುಬ್ಬುವ ಯಂತ್ರ ತಯಾರು ಮಾಡಿದವ, ತೆಂಗಿನ ಮರ ಹತ್ತಲು ದೇಸೀ ತಂತ್ರಜ್ಞಾನದ ಏಣಿ ನಿರ್ಮಿಸಿದವ ಇವರೆಲ್ಲ ಕಣ್ಣೆದುರು ಹಾಯುವಂತಾಗಬೇಕು. ಆಗ ಮಕ್ಕಳಿಗೆ ನಿಜವಾದ ಪ್ರೇರಣೆ, ಒಳಗಿನ ಅಗ್ನಿಗೆ ಚಿತಾವಣೆ.
ಅರೆ! INSPIRE  ಅಂದರೇನೇ ಅದಲ್ಲವೆ?

Leave a Reply