ವಿಭಾಗಗಳು

ಸುದ್ದಿಪತ್ರ


 

ಸಾವಿನ ಮೇಲೆ ಸಾಮ್ರಾಜ್ಯ ಕಟ್ಟುವುದು ಹೊಸತಲ್ಲ!

ಬ್ರಿಟೀಷರಿಗೆ ಭಾರತೀಯರ ಸಾವು ಬೇಕಿತ್ತು. 30 ಕೋಟಿ ಜನರನ್ನು ಹಿಡಿ ಹಿಡಿದು ಕೊಲ್ಲುವುದು ಸುಲಭವಲ್ಲ. ಅದಕ್ಕೆ ಬೇಕಾದ ಅವರ ಸೈನಿಕರ ಸಂಖ್ಯೆಯೂ ಕಡಿಮೆಯೇ. ಉಳಿದ ಮಾರ್ಗ ಕೃತಕ ಕ್ಷಾಮಗಳು, ಸಾಂಕ್ರಾಮಿಕ ರೋಗಗಳು ಮಾತ್ರ. ಬಂಗಾಳದಲ್ಲಿ ಈ ಬಗೆಯ ವ್ಯವಸ್ಥಿತ ಕೊಲೆಗೆ ಬಿಳಿಯ ಅಧಿಕಾರಿಗಳು ಪ್ರಯತ್ನ ಪಟ್ಟೇ ಇದ್ದರು. ಅದನ್ನು ವ್ಯರ್ಥಗೊಳಿಸಲೆಂದೇ ಭಗವಂತ ನಿವೇದಿತೆಯನ್ನು ಕಳಿಸಿದ್ದನೇನೋ?

ಮತ್ತೊಂದು ಬಿರು ಬೇಸಿಗೆ ಕಾಲಿಟ್ಟಿದೆ. ಈ ಬಾರಿಯಂತೂ ನೀರಿಗೂ ಕುಡಿಯುವ ಹಾಹಾಕಾರವಾಗಲಿರುವುದು ಸತ್ಯ. ಬರಗಾಲದ ಸ್ಥಿತಿಯನ್ನು ಅನೇಕ ಜಿಲ್ಲೆಗಳು, ತಾಲೂಕುಗಳು ಅನುಭವಿಸಲೇಬೇಕಾದ ಅನಿವಾರ್ಯತೆ ಇದೆ. ಅವಲೋಕಿಸಬೇಕಾದ ಒಂದೇ ಅಂಶವೆಂದರೆ ಬರಗಾಲದ ಈ ಪರಿಸ್ಥಿತಿ ನಿರ್ಮಾಣವಾಗಿರೋದು ಪ್ರಾಕೃತಿಕ ಕಾರಣದಿಂದಲ್ಲ; ಮಾನವ ನಿರ್ಮಿತ! ಅಲ್ಲದೇ ಮತ್ತೇನು? ಟಿಂಬರ್ ಲಾಬಿಗೆ ಒಳಪಟ್ಟು ಹೆಕ್ಟೇರುಗಟ್ಟಲೆ ಕಾಡು ಕಡಿಯುವ ಅನುಮತಿ ಕೊಟ್ಟವರು ನಾವೇ. ಗುಡ್ಡ-ಗುಡ್ಡಗಳನ್ನೇ ಮೈನಿಂಗ್ ಮಾಫಿಯಾಕ್ಕೆ ಬಲಿಯಾಗಿ ಕೊಡುಗೆಯಾಗಿ ಕೊಟ್ಟವರು ನಾವೇ. ಪುಣ್ಯಾತ್ಮರು ಕಷ್ಟ ಪಟ್ಟು ಕಟ್ಟಿದ ಕೆರೆಗಳನ್ನು ಅತಿಕ್ರಮಿಸಿ ಹೂಳು ತುಂಬಿದ ಕೆರೆಗಳಲ್ಲಿ ನೀರು ನಿಲ್ಲದಂತೆ ಮಾಡಿದವರೂ ನಾವೇ. ಕೊಡಲಿ ಪೆಟ್ಟನ್ನು ನಮ್ಮ ಕಾಲ ಮೇಲೆ ನಾವೇ ಹಾಕಿಕೊಂಡು ಭಗವಂತನನ್ನು ದೂಷಿಸುತ್ತಾ ಕೂರುವ ಜಾಯಮಾನದವರಾಗಿಬಿಟ್ಟಿದ್ದೇವೆ.

ಹಾಗೆ ನೋಡಿದರೆ ಭಾರತ ಸಹಜ ಕ್ಷಾಮವನ್ನು ಕಂಡಿದ್ದು ಕಡಿಮೆಯೇ. ಬ್ರಿಟೀಷರ ಕಾಲಕ್ಕೆ ಬಂಗಾಳಕ್ಕೆ ವಕ್ಕರಿಸಿಕೊಂಡ ಆರೇಳು ಭೀಕರ ಕ್ಷಾಮಗಳೇ ಬಲುವಾಗಿ ದಾಖಲಾದವು. ಹಾಗಂತ ಇವ್ಯಾವುವೂ ಸಹಜ ಕ್ಷಾಮಗಳಲ್ಲವೇ ಅಲ್ಲ. ಭಾರತೀಯ ಕೃಷಿ ವ್ಯವಸ್ಥೆಯನ್ನು ಉಧ್ವಸ್ತಗೊಳಿಸಿದುದರ ಅತ್ಯಂತ ಕೆಟ್ಟ ಪರಿಣಾಮ ಅದು. ದೂರದ ಐರ್ಲೆಂಡಿನಿಂದ ಬಂದ ನಿವೇದಿತಾ ಈ ಸಮಸ್ಯೆಯನ್ನು ಬಲು ಸೂಕ್ಷ್ಮವಾಗಿ ಅರ್ಥೈಸಿಕೊಂಡಿದ್ದಳು. ಬಂಗಾಳದಲ್ಲಿ ಕ್ಷಾಮಾವೃತ ಜನರ ಸೇವೆಗೆಂದು ಹೋದ ಆಕೆ ಅಲ್ಲಿಯ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಸರಣಿ ಲೇಖನಗಳನ್ನೇ ಬರೆದಿದ್ದಾಳೆ. ಅದರಲ್ಲಿ ಬಲು ಪ್ರಮುಖವಾದುದು ‘ದಿ ಟ್ರ್ಯಾಜಿಡಿ ಆಫ್ ಜೂಟ್’.

jute-spinners

ಸೆಣಬು ಬಂಗಾಳದ ಜನರ ಹಿತ್ತಲಲ್ಲಿ ಕಂಡು ಬರುತ್ತಿದ್ದ ಉದ್ದನೆಯ ಕಪ್ಪುಗಂದು ಬಣ್ಣದ ಬಳ್ಳಿ. ಅದರ ನಾರಿನ ಗುಣದ ಕಾರಣದಿಂದಾಗಿಯೇ ರೈತರು ಅದನ್ನು ಬೆಳೆಸುತ್ತಿದ್ದರು. ಬಿದಿರಿನಿಂದಲೇ ಮನೆ ಕಟ್ಟುವ ಪ್ರತೀತಿ ಇರುವ ಈ ಜನರಿಗೆ ಬಿಗಿದು ಕಟ್ಟುವ ಹಗ್ಗ ಸೆಣಬಿನ ನಾರೇ ಆಗಿತ್ತು. ಇದು ಒಣಗಿದರೆ ಔಷಧಿಯಾಗಿ ಬಳಕೆಯಾಗುತ್ತಿತ್ತು; ಇಲ್ಲವಾದರೆ ದೀಪಕ್ಕೆ ಬತ್ತಿಯಾಗಿ ಉಪಯೋಗವಾಗುತ್ತಿತ್ತು. ರೈತರು ದುರದೃಷ್ಟದಲ್ಲಿಯೂ ಇರುವ ಶಕ್ತಿಯ ಪೂಜೆ ಮಾಡುವ ಸಂಕೇತವಾಗಿ ಈ ಸೆಣಬಿನ ನಾರಿಗೆ ವರ್ಷಕ್ಕೊಮ್ಮೆ ಪೂಜೆ ಮಾಡುತ್ತಿದ್ದರು. ದುರದೃಷ್ಟವೇಕೆ ಗೊತ್ತೇ? ಎಲ್ಲಿ ಸೆಣಬು ಬೆಳೆಯುವುದೋ ಅಲ್ಲಿನ ಮಣ್ಣಿನ ಫಲವತ್ತತೆ ನಾಶವಾಗುತ್ತದೆ. ಜೊತೆಗೆ ಕಾಲ ಕಳೆದಂತೆ ಸೆಣಬಿನ ಇಳುವರಿಯೂ ಕಡಿಮೆಯಾಗುತ್ತದೆ. ಸೆಣಬು ಬೆಳೆಯಲು ಭತ್ತ ಬೆಳೆಯುತ್ತಿದ್ದ ಫಲವತ್ತು ಭೂಮಿಯೇ ಬಳಕೆಯಾಗುವುದರಿಂದ ಕಾಲಕ್ರಮದಲ್ಲಿ ಭತ್ತದ ಇಳುವರಿಯೂ ಕಡಿಮೆಯಾಗುತ್ತದೆ. ಇವೆಲ್ಲವನ್ನೂ ಅರಿತಿದ್ದ ಭಾರತೀಯ ರೈತ ಸೆಣಬು ದುರದೃಷ್ಟಕರವಾದರೂ ಅದರಲ್ಲಿಯೂ ನಾರಿನ ಶಕ್ತಿ ಇರುವುದರ ಸಂಕೇತವಾಗಿ ಅದನ್ನು ಪೂಜಿಸುತ್ತಿದ್ದ. ತನ್ನ ಮನೆಯ ಹಿತ್ತಲಲ್ಲಿ ತನಗೆ ಬೇಕಾದ್ದಷ್ಟನ್ನೇ ಬೆಳೆದುಕೊಳ್ಳುತ್ತಿದ್ದ.
ಬ್ರಿಟೀಷ್ ಅಧಿಕಾರಿಗಳು ಈ ಸೆಣಬಿನಲ್ಲಿರುವ ನಾರಿನ ಅಂಶವನ್ನು ಕೈಗಾರಿಕೆಗೆ ಬಳಸಿಕೊಳ್ಳಲು ಇಚ್ಛಿಸಿ ಅದನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುವಂತೆ ಪ್ರೇರಣೆ ಕೊಡಲಾರಂಭಿಸಿದರು. ಈ ಬೆಳೆಯನ್ನು ದುರದೃಷ್ಟಕರವೆಂದು ಭಾವಿಸಿದ್ದ ಭಾರತೀಯ ರೈತ ಅದನ್ನು ತಿರಸ್ಕರಿಸುತ್ತಲೇ ಬಂದ. ಅಧಿಕಾರಿಗಳು ಆಮಿಷ ಒಡ್ಡಿದರು, ಸೆಣಬು ಬೆಳೆಯುವುದಕ್ಕೆ ಅನುದಾನ ನೀಡಿದರು. ಕೊನೆಗೆ ಬೆದರಿಸಿ ಸೆಣಬಿನ ಕೃಷಿಗೆೆ ಒತ್ತಾಯ ಹೇರಿದರು. ಬಂಗಾಳದ ಪಶ್ಚಿಮ ಭಾಗದ ಲೆಫ್ಟಿನೆಂಟ್ ಗವರ್ನರ್ ಸರ್ ಆಂಡ್ರ್ಯೂ ಫ್ರೇಸರ್ ವ್ಯಾಪಾರಿಗಳನ್ನು ಒಟ್ಟುಗೂಡಿಸಿ ಯೂರೋಪಿನ ಉತ್ಪಾದಕರು, ಮಾರಾಟಗಾರರನ್ನು ನಿಮ್ಮೊಂದಿಗೆ ನೇರವಾಗಿ ಭೇಟಿ ಮಾಡಿಸುತ್ತೇನೆ, ಖರೀದಿ ಮಾಡುವಂತೆ ಪ್ರೇರೇಪಿಸುತ್ತೇನೆ ಎಂದೆಲ್ಲ ಹುಚ್ಚು ಹತ್ತಿಸಿದ. ಈ ವ್ಯಾಪಾರಿಗಳು ರೈತರನ್ನು ಒಲಿಸಿದರು. ಕ್ರಮೇಣ ಏಳೆಂಟು ವರ್ಷಗಳಲ್ಲಿ ಸೆಣಬಿನ ಬೆಳೆ ಬೆಳೆಯುವವರ ಸಂಖ್ಯೆ ಹೆಚ್ಚಾಯಿತು.
ಅಲ್ಲಿಯವರೆಗೂ ರೈತನ ಸಂಪತ್ತು ಧಾನ್ಯ ರೂಪದಲ್ಲಿ ಇರುತ್ತಿತ್ತು. ಪ್ರತಿ ವರ್ಷ ಆತ ತನ್ನ ಪರಿವಾರಕ್ಕೆ ಎರಡರಿಂದ ಮೂರು ವರ್ಷಕ್ಕೆ ಬೇಕಾದಷ್ಟು ಮತ್ತು ಮುಂದಿನ ಬಿತ್ತನೆಗೆ ಬೇಕಾಗುವಷ್ಟು ಧಾನ್ಯವನ್ನು ಶೇಖರಿಸಿ ಇಟ್ಟುಕೊಂಡಿರುತ್ತಿದ್ದ. ಈಗ ಬ್ರಿಟೀಷರು ಈ ಧಾನ್ಯ ರೂಪದ ಸಂಪತ್ತನ್ನು ಹಣದಿಂದ ಬದಲಾಯಿಸಿದರು. ರೈತನೀಗ ಮುಂದಿನ ವರ್ಷಕ್ಕೆ ಬೇಕಾಗುವಷ್ಟು ಧಾನ್ಯದ ದಾಸ್ತಾನು ಮಾಡಿಕೊಳ್ಳುತ್ತಿರಲಿಲ್ಲ ಬದಲಿಗೆ ಹಣ ಸಂಗ್ರಹಣೆಯ ಹಿಂದೆ ಬಿದ್ದ. ರೈತ ಸಂಕುಲದ ಪತನದ ಮೊದಲ ಹೆಜ್ಜೆ ಇದು.

ಧಾನ್ಯ ಸುಲಭಕ್ಕೆ ಖಾಲಿಯಾಗದು. ಹಣ ಮಾರುಕಟ್ಟೆಯ ಏರುಪೇರಿಗೂ ಖರ್ಚಾಗಿಬಿಡುತ್ತದೆ. ರೈತನ ಬಳಿ ಧಾನ್ಯದ ದಾಸ್ತಾನಿದ್ದಾಗ ಸಿರಿವಂತನೂ ಅವನ ಬಳಿ ಬಂದು ನಿಂತಿರುತ್ತಿದ್ದ. ಆಗೆಲ್ಲ ರೈತನೇ ಶ್ರೀಮಂತ! ಈಗ ಹಣ ಕೂಡಿಡುವ ಹಿಂದೆ ಬಿದ್ದು ರೈತ ಸಿರಿವಂತನಿಗಿಂತಲೂ ಬಡವನಾದ! ಒಂದು ಅವಧಿಯಲ್ಲಿ ಮಳೆಯಾಗದೇ ನೀರಿಗೆ ತತ್ವ್ಸಾರವಾದೊಡನೆ ಭೂಮಿಯಂತೂ ಪಾಳು ಬಿತ್ತು. ಜೊತೆಗೆ ಇದ್ದ ಹಣ ನೀರಾಗಿ ಹೋಯ್ತು. ಧಾನ್ಯದ ದಾಸ್ತಾನು ಇಲ್ಲವಾದುದರಿಂದ ರೈತ ಕಂಗಾಲಾದ. ಭೀಕರ ಬರಗಾಲ ಇಣುಕಿತು. ಮನುಷ್ಯ ನಿರ್ಮಿತ ಬರಗಾಲವೆಂದರೆ ಇದೇ.

ನಿವೇದಿತಾ ಈ ಹೊತ್ತಲ್ಲಿ ಬರಗಾಲಕ್ಕೆ ತುತ್ತಾದ ಹಳ್ಳಿ-ಹಳ್ಳಿಗೆ ಭೇಟಿ ಕೊಟ್ಟು ಸೇವಾ ಕಾರ್ಯದಲ್ಲಿ ಮಗ್ನಳಾದಳು. ಅವಳ ಈ ಹೊತ್ತಿನ ಬರವಣಿಗೆಗಳು ಕಲ್ಲನ್ನೂ ಕರಗಿಸುವಂಥವು. ಯಾವುದಾದರೂ ಹಳ್ಳಿಯ ಪೀಡಿತ ಜನರಿಗಾಗಿ ಪರಿಹಾರ ಸಾಮಗ್ರಿಗಳನ್ನು ಕೊಂಡೊಯ್ದರೆ ಗುಂಪುಗೂಡಿದ ಜನ ಜೋರಾಗಿ ಕೂಗಿ ಸಂತೋಷ ವ್ಯಕ್ತಪಡಿಸುತ್ತಿದ್ದರಂತೆ. ಪರಿಹಾರ ಸಾಮಗ್ರಿ ತಮ್ಮೂರಿಗೆ ಸಾಕಾಗುವುದಿಲ್ಲ ಎಂಬ ಅರಿವಿದ್ದರೂ ಅವರು ಸುಳ್ಳು ನಗುವನ್ನು ಮುಖಕ್ಕೆ ತಂದುಕೊಂಡು ಬಂದವರ ಆತ್ಮವಿಶ್ವಾಸ ವೃದ್ಧಿಸುವಂತೆ ಮಾಡುತ್ತಿದ್ದರಂತೆ. ನಿವೇದಿತಾ ಹೇಳುತ್ತಾಳೆ, ‘ಜೋರಾಗಿ, ಕಿವಿಗಡಚಿಕ್ಕುವಂತೆ ಇರಬೇಕಾಗಿದ್ದ ಅವರ ಆನಂದದ ಬುಗ್ಗೆ ಅಷ್ಟು ಸಾಮಾನ್ಯವಾಗಿ, ಮೆಲುವಾಗಿ ಇರುತ್ತಿದ್ದುದನ್ನು ಕೇಳಿ ಹೃದಯ ಹಿಂಡಿದಂತೆ ಆಗುತ್ತಿತ್ತು’. ಅವರು ಭಗವಂತನನ್ನು ‘ಬೇಗ ಬೆಳಕು ತಾ’ ಎಂದು ಏಕಕಂಠದಿಂದ ಪ್ರಾಥರ್ಿಸುವಾಗ ಪರಿಹಾರಕ್ಕೆಂದೇ ಬಂದ ಅನೇಕ ಕಾರ್ಯಕರ್ತರಲ್ಲಿ ನೀರಹನಿ ಜಿನುಗುತ್ತಿತ್ತು ಎನ್ನುತ್ತಾಳೆ.

graphic1877b

ಹಳ್ಳಿಯೊಂದರಲ್ಲಿ ಮನೆಯವರೆಲ್ಲ ಹಸಿದು, ಅಕ್ಕ ಪಕ್ಕ ಬೆಳೆದಿದ್ದ ಸೊಪ್ಪು-ಸದೆ ತಿಂದು ಅದೂ ಮುಗಿದ ಮೇಲೆ ಕೈಚೆಲ್ಲಿದ ಮನೆಯೊಡೆಯ ಕೆಲಸ ಅರಸಿ ಪಕ್ಕದೂರಿಗೆ ಹೊರಟನಂತೆ. ಅಲ್ಲಿಯೂ ಏನೂ ದಕ್ಕದೇ ಸೋತು ಸುಣ್ಣವಾಗಿ ಮರಳಿ ಬರುವಾಗ ದಾರಿಯಲ್ಲಿಯೇ ತೀರಿಕೊಂಡ. ಆತನ ಶವದ ಮೇಲೆ ರೋದಿಸುತ್ತಿದ್ದ ಅವನ ಪತ್ನಿ-ಮಕ್ಕಳ ದುಃಖ ಹೇಳತೀರದಾಗಿತ್ತು. ಅದೇ ದಾರಿಯಲ್ಲಿ ತಂದೆಯೊಬ್ಬ ತನ್ನ ಒಂದು ಮಗುವನ್ನು ಕ್ಷಾಮದ ಕಿರಿಕಿರಿ ತಾಳಲಾಗದೇ ಮಾರಲು ಸಜ್ಜಾಗಿದ್ದನಂತೆ. ಇದನ್ನು ಕೇಳಿ ನಿವೇದಿತಾ ಭಾರತವೂ ಮನುಷ್ಯರನ್ನು ತಿನ್ನುವ ಮಟ್ಟಕ್ಕಿಳಿಯಿತೇ? ಎಂದು ಒಂದು ಕ್ಷಣ ಗಾಬರಿಯಾದಳು ಮರುಕ್ಷಣವೇ ಅರಿವಾಯಿತು ಅವಳಿಗೆ. ಮಕ್ಕಳಿಲ್ಲದ ಸಿರಿವಂತರೊಬ್ಬರಿಗೆ ತನ್ನ ಒಂದು ಮಗುವನ್ನು ಕೊಟ್ಟು ಅದಾದರೂ ಚೆನ್ನಾಗಿ ಬದುಕಲಿ ಎಂಬ ಸಹಜ ಮಾತೃಭಾವ ಅದು. ಮುಸಲ್ಮಾನ ರೈತನೊಬ್ಬ ಬಾರಿಸಾಲ್ನ ಪೊಲೀಸ್ಠಾಣೆಗೆ ಹೋಗಿ ತನ್ನ ಮಕ್ಕಳನ್ನು ಕೊಂದ ನನ್ನನ್ನು ಕೊಂದು ಬಿಡಿ ಎಂದು ಕೋರಿದನಂತೆ. ‘ನನ್ನ ಮಕ್ಕಳಿಗೆ ಊಟ ಕೊಡಲಾಗದಿದ್ದರೆ ಬದುಕಿರುವುದಾದರೂ ಏಕೆ? ನೇಣಿಗೇರಿಸಿ’ ಎಂದು ಆಗ್ರಹಿಸುತ್ತಿದ್ದನಂತೆ.

 

ಇಷ್ಟಾದರೂ ಭಾರತೀಯ ಧೃತಿಗೆಡುತ್ತಿರಲಿಲ್ಲ. ಅವನಿಗೆ ದೂರದಲ್ಲೆಲ್ಲೋ ತನ್ನ ಸಮಸ್ಯೆಗೆ ಪರಿಹಾರ ಕಾಣುತ್ತಲೇ ಇತ್ತು. ಭಗವಂತನ ಮೇಲಿನ ವಿಶ್ವಾಸ ಅವನಿಗೆ ಇನಿತೂ ಕಡಿಮೆಯಾಗಿರಲಿಲ್ಲ. ಹಳ್ಳಿಯೊಂದರಲ್ಲಿ ವೃದ್ಧನೊಬ್ಬ ನಿವೇದಿತೆಯ ಜೊತೆಗೆ ಕ್ಷಾಮಪೀಡಿತ ಮನೆಗಳಿಗೆ ಭೇಟಿ ಕೊಡುತ್ತಿದ್ದ. ಒಂದೆಡೆಯಂತೂ ಊಟವಿಲ್ಲದೇ ಹೈರಾಣಾಗಿದ್ದ ವೃದ್ಧೆಯೊಬ್ಬಳಿಗೆ ಧೈರ್ಯ ತುಂಬಿ ‘ಅದೃಷ್ಟ ದೇವತೆ! ಲಕ್ಷ್ಮಿಯೇ! ಹೆದರಬೇಡ. ಆದಷ್ಟು ಬೇಗ ನಿನಗೆ ಬೇಕಾದ್ದನ್ನು ತಲುಪಿಸುತ್ತೇವೆ. ಒಳ್ಳೆಯ ಕಾಲ ಬಲು ಬೇಗ ಬರುವುದು’ ಎಂದು ಧೈರ್ಯ ತುಂಬುತ್ತಿದ್ದ, ಸ್ವತಃ ತಾನೂ ಕ್ಷಾಮದಿಂದ ಸಂತ್ರಸ್ತನೇ ಎಂಬುದನ್ನು ಮರೆತು.
ಆಹ್! ಕ್ಷಾಮದ ಭೀಭತ್ಸ ರೂಪ ಕಲ್ಪನೆಗೂ ನಿಲುಕದ್ದು. ಬಡತನ ಬಡತನವನ್ನೇ ಉಗುಳುವ ವಿಷಮ ಪರಿಸ್ಥಿತಿ ಅದು. ಅದು ಬದುಕನ್ನೇ ಅಂಧಕಾರಕ್ಕೆ ತಳ್ಳುತ್ತದೆ. ಅಜ್ಞಾನ ಆವರಿಸಿಕೊಳ್ಳುತ್ತದೆ. ಹೀಗಾಗಿಯೇ ರೈತನೊಬ್ಬ ಹಾಲು ಕೊಡುವ ಹಸುವನ್ನು ಅತಿ ಕಡಿಮೆ ಬೆಲೆಗೆ ಕಟುಕನಿಗೆ ಮಾರಿಬಿಡೋದು. ಮುಂದಿನ ವರ್ಷದ ಬಿತ್ತನೆಗಾಗಿ ಕೂಡಿಟ್ಟ ಧಾನ್ಯವನ್ನು ತಿಂದುಬಿಡೋದು. ಪರಿಣಾಮ ರೈತನ ಆಥರ್ಿಕ ಹಂದರದ ಅಡಿಪಾಯವಾಗಿದ್ದ ವ್ಯವಸ್ಥೆಗಳೆಲ್ಲ ಕುಸಿದು ಬಿದ್ದು ಆತ ಶಾಶ್ವತವಾಗಿ ಬಡತನ ಕೂಪಕ್ಕೆ ತಳ್ಳಲ್ಪಡುತ್ತಾನೆ. ಬೀಕ್ಷಾಟನೆ ಅನಿವಾರ್ಯವಾಗುತ್ತದೆ. ಹೀಗಾಗಿಯೇ ಕ್ಷಾಮವನ್ನು ಭಾರತೀಯರು ‘ದುರ್ಭಿಕ್ಷಾ’ ಎನ್ನುತ್ತಾರೆ ಎಂಬುದನ್ನು ಗುರುತಿಸುತ್ತಾಳೆ ನಿವೇದಿತಾ.

ಒಂದೆಡೆ ಭಾರತೀಯರು ಹೀಗೆ ಕಠಿಣ ಸಮಯದಲ್ಲೂ ಒಬ್ಬರಿಗೊಬ್ಬರು ಜೊತೆಯಾಗಿ ಪೂರಕವಾಗಿ ಬದುಕಿನ ಮಹೋನ್ನತ ಆದರ್ಶ ತೋರುತ್ತಿದ್ದರೆ ಅತ್ತ ಇಂಗ್ಲೀಷರು ತಮ್ಮ ಸಹಜ ವ್ಯಕ್ತಿತ್ವಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದರು. ಪತ್ರಿಕೆಯೊಂದು ‘ಜನ ಅದಾಗಲೇ ಪರಿಹಾರದ ವಸ್ತುಗಳ ಮೇಲೆಯೇ ಜೀವನ ಕಟ್ಟಿಕೊಳ್ಳುವುದನ್ನು ರೂಢಿ ಮಾಡಿಕೊಂಡುಬಿಟ್ಟಿದ್ದಾರೆ. ಅದನ್ನು ಬಿಟ್ಟು ಬದುಕುವ ಆಲೋಚನೆಯೂ ಅವರಿಗಿಲ್ಲ’ ಎಂದು ಬರೆದುಬಿಟ್ಟಿತ್ತು. ದೂರದೂರುಗಳಿಂದ ಪರಿಹಾರ ನಿಧಿಗೆ ಹಣ ಕಳಿಸುತ್ತಿರುವವರನ್ನು ತಡೆಯುವ ಉದ್ದೇಶ ಆ ಪತ್ರಿಕೆಗಿದ್ದಿರಬಹುದು. ಮದ್ರಾಸಿನ ಅಧಿಕಾರಿಗಳಂತೂ ‘ಕ್ಷಾಮವೆಂದು ಇನ್ನೂ ಅಧಿಕೃತವಾಗಿ ಘೋಷಣೆಯಾಗದಿರುವುದರಿಂದ ಅದಕ್ಕಾಗಿ ಹಣ ಸಂಗ್ರಹಿಸುವುದು ರಾಜದ್ರೋಹವಾಗುತ್ತದೆ’ ಎಂದು ಹೇಳಿಕೆ ಹೊರಡಿಸಿಬಿಟ್ಟಿದ್ದರು.

the-forgotten-famine-how-capitalist-british-killed-10-million-people-in-bengal-for-profits-800x420-1444654321

ಒಟ್ಟಾರೆ ಬ್ರಿಟೀಷರಿಗೆ ಭಾರತೀಯರ ಸಾವು ಬೇಕಿತ್ತು. 30 ಕೋಟಿ ಜನರನ್ನು ಹಿಡಿ ಹಿಡಿದು ಕೊಲ್ಲುವುದು ಸುಲಭವಲ್ಲ. ಅದಕ್ಕೆ ಬೇಕಾದ ಅವರ ಸೈನಿಕರ ಸಂಖ್ಯೆಯೂ ಕಡಿಮೆಯೇ. ಉಳಿದ ಮಾರ್ಗ ಕೃತಕ ಕ್ಷಾಮಗಳು, ಸಾಂಕ್ರಾಮಿಕ ರೋಗಗಳು ಮಾತ್ರ. ಬಂಗಾಳದಲ್ಲಿ ಈ ಬಗೆಯ ವ್ಯವಸ್ಥಿತ ಕೊಲೆಗೆ ಬಿಳಿಯ ಅಧಿಕಾರಿಗಳು ಪ್ರಯತ್ನ ಪಟ್ಟೇ ಇದ್ದರು. ಅದನ್ನು ವ್ಯರ್ಥಗೊಳಿಸಲೆಂದೇ ಭಗವಂತ ನಿವೇದಿತೆಯನ್ನು ಕಳಿಸಿದ್ದನೇನೋ? ಭಾರತೀಯರ ಸೇವೆಗೆಂದೇ ಬಂದ ಆಕೆಗೆ ಆರಂಭದಲ್ಲಿದ್ದ ಬಿಳಿಯರ ಮೇಲಿನ, ಇಂಗ್ಲೆಂಡಿನ ಪ್ರೇಮ ಈಗ ಕಿಂಚಿತ್ತೂ ಇರಲಿಲ್ಲ. ಅವಳ ಹೃದಯ ವಿಶಾಲವಾಗಿತ್ತು. ‘ಬಡವರಿಗಾಗಿ, ಅಜ್ಞಾನಿಗಳಿಗಾಗಿ, ದಲಿತರಿಗಾಗಿ, ತುಳಿತಕ್ಕೊಳಗಾದವರಿಗಾಗಿ ಮರುಗು. ತಲೆ ಗಿರ್ರನೆ ಸುತ್ತುವವರೆಗೆ, ಹೃದಯ ನಿಂತೇ ಹೋಗುವವರೆಗೆ ಮರುಗು. ಇನ್ನೇನೂ ಮಾಡಲಾಗದೆಂದೆನಿಸಿದಾಗ ಹೃದಯವನ್ನು ಭಗವಂತನ ಪಾದಪದ್ಮಗಳಲ್ಲಿ ಸಮರ್ಪಿಸಿಬಿಡು. ಆಗ ಅಜೇಯವಾದ ಶಕ್ತಿ ನಿನ್ನೊಳಗೆ ಹರಿಯುವುದು’ ಎನ್ನುತ್ತಿದ್ದರು ಸ್ವಾಮಿ ವಿವೇಕಾನಂದರು. ನಿವೇದಿತಾ ಈಗ ಅಂತಹ ಪ್ರಚಂಡ ಶಕ್ತಿಯಾಗಿದ್ದಳು. ಅವಳೀಗ ಸ್ಫೂರ್ತಿಯ ಕೇಂದ್ರವಾಗಿದ್ದಳು. ರಾಮಕೃಷ್ಣಾಶ್ರಮದ ಸ್ವಾಮಿ ಸದಾನಂದರು ಕಲ್ಕತ್ತಾದ ಗಲ್ಲಿಗಳನ್ನು ಸ್ವಚ್ಛಗೊಳಿಸುವ ಯೋಜನೆ ಕೈಗೆತ್ತಿಕೊಂಡಾಗ ಒಂದು ಕೊಳಕಾದ ಗಲ್ಲಿ ಸ್ವಚ್ಛತೆಗೆ ಯಾರೂ ಮುಂದೆ ಬರಲೇ ಇಲ್ಲ. ಸ್ವತಃ ನಿವೇದಿತಾ ತಾನೇ ಪೊರಕೆ ಕೈಗೆತ್ತಿಕೊಂಡು ಗುಡಿಸಲಾರಂಭಿಸಿದಳು. ನಾಚಿದ ಅಕ್ಕಪಕ್ಕದ ಗಲ್ಲಿಯ ತರುಣರು ತಾವೂ ಕೈಜೋಡಿಸಿ ಸ್ವಚ್ಛತೆಗೆ ನಿಂತರು. ಹಾಗೆಯೇ ಕ್ಷಾಮದ ಹೊತ್ತಲ್ಲೂ ಆಯಿತು. ಅಶ್ವಿನಿ ಕುಮಾರ್ ದತ್ತ ಪರಿಹಾರ ಕಾರ್ಯಕ್ಕೆ ಟೊಂಕಕಟ್ಟಿದರು. ಹೆಚ್ಚು ಕಡಿಮೆ 5 ಲಕ್ಷ ಜನಕ್ಕೆ ಪ್ರತ್ಯಕ್ಷವಾಗಿ ಪರಿಹಾರ ಒದಗಿಸಲು ಸಾಧ್ಯವಾಯಿತು. ಸ್ವತಃ ನಿವೇದಿತಾ ಮನೆಯಿಂದ ಮನೆಗೆ ಅಲೆಯುವುದು ಭಾರತೀಯ ತರುಣರಿಗೆ ಸ್ಫೂರ್ತಿ ತುಂಬುತ್ತಿತ್ತು. ತಮಗಾಗಿ ಬಂದ ಈ ವಿದೇಶಿ ಮಹಿಳೆಯನ್ನು ಸ್ವಂತದವರಂತೆ ಭಾರತೀಯರೂ ಸ್ವೀಕರಿಸಿದ್ದರು.

ಕೆಲವೊಮ್ಮೆ ಸುದೀರ್ಘ ಪರಿಹಾರ ಕಾರ್ಯದಿಂದ ನಿವೇದಿತಾ ಬರಿ ಕೈಯ್ಯಲ್ಲಿ ಮರುಳುವಾಗ ತಾನು ಉಳಕೊಂಡಿದ್ದ ಮನೆಯ ಹೊರಗೆ ನೂರಾರು ಜನ ಕಾಯುತ್ತ ನಿಂತಿರುತ್ತಿದ್ದುದನ್ನು ಕಂಡು ದುಃಖಿತಳಾಗುತ್ತಿದ್ದಳು. ತನಗೆ ಮತ್ತು ತನ್ನ ಕಾರ್ಯಕರ್ತರ ಊಟಕ್ಕೆಂದು ಉಳಿಸಿಕೊಂಡಿದ್ದ ಒಂದಷ್ಟು ಬಿಸ್ಕತ್ತುಗಳನ್ನು ಅಲ್ಲಿರುವವರಿಗೆ ಒಂದೊಂದು ಸಿಗುವಂತೆ ಹಂಚುತ್ತಿದ್ದಳು. ಹೌದು. ಒಂದೊಂದು ಬಿಸ್ಕತ್ತು. ಬರದೇ ಮನೆಯಲ್ಲಿಯೇ ಉಳಿದವರಿಗಾಗಿ ಒಂದೊಂದು ಕೈಲಿಡುತ್ತಿದ್ದಳು. ಇಷ್ಟು ಜನ ಅವಳ ವಿರುದ್ಧ ಆಕ್ರೋಶದಿಂದ ಕೂಗಿ, ಹೊಟ್ಟೆ ತುಂಬಾ ಕೊಡಲಿಲ್ಲವೆಂದು ಬೊಬ್ಬೆಯೆಬ್ಬಿಸುತ್ತಾರೆಂದುಕೊಂಡು ಅಳುಕಿನಿಂದಲೇ ನಿಂತಿರುತ್ತಿದ್ದರೆ ಜನರ ಪ್ರತಿಕ್ರಿಯೆ ಬೇರೆಯೇ ಇರುತ್ತಿತ್ತು. ಅವರು ಆಕೆಯನ್ನು ಪ್ರೀತಿಯಿಂದ ಹರಸಿ ಕೆನ್ನೆ ಮುಟ್ಟಿ ನೆಟ್ಟಿಗೆ ತೆಗೆದು ಹೋಗುತ್ತಿದ್ದರು.

sisternivedita-650_102814035616

ಅವಳ ಹೃದಯ ಬೇಯುತ್ತಿತ್ತು. ಮಾನವನ ದುಃಖ, ನೋವು ಅವಳಿಂದ ಸಹಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಅವರಿಗೆ ಸಹಾಯ ಮಾಡಲಾಗದೆಂದು ಕೈಚೆಲ್ಲುವ ಪರಿಸ್ಥಿತಿ ಬಂದಾಗ ಆಕೆಯ ಹೃದಯ ಸಿಡಿದು ನೋವಿನ ಲಾವಾ ಉಕ್ಕಿ ಹರಿಯುತ್ತಿತ್ತು. ಓಹ್! ಯಾರೀಕೆ? ಪರಿಸ್ಥಿತಿ ವಿಷಮವಾದಾಗ ಬಂಗಾಳಿಗರನ್ನು ಭಾಷೆಯ ಆಧಾರದಲ್ಲಿ ನಾವೇ ವಿರೋಧಿಸಿಬಿಡುತ್ತೇವೆ. ಅವರನ್ನು ಮೀನು ತಿನ್ನುವವರೆಂದು ಜರಿದು ಬಿಡುತ್ತೇವೆ. ಆದರೆ ಈ ಮಹಾತಾಯಿ ಐರ್ಲೆಂಡಿನಿಂದ ಇಲ್ಲಿಗೆ ಬಂದು ಇಲ್ಲಿನ ಜನರ ಸಂಸ್ಕೃತಿಯನ್ನು ತನ್ನದಾಗಿಸಿಕೊಂಡು ಅದಕ್ಕೆ ಒಂದಿನಿತೂ ಧಕ್ಕೆ ತರದೇ ಇಲ್ಲಿನವರ ಸೇವೆಗೆ ತನ್ನದೆಲ್ಲವನ್ನೂ ಸಮರ್ಪಿಸಿದಳಲ್ಲ; ಸಾಮಾನ್ಯವೇನು? ಸ್ವಾಮಿ ವಿವೇಕಾನಂದರ ಜೀವನ ಚರಿತ್ರಕಾರರೊಬ್ಬರು ಬರೆಯುತ್ತಾರೆ, ‘ನಿವೇದಿತಾಳನ್ನು ತರಬೇತು ಮಾಡುವುದೊಂದನ್ನು ಬಿಟ್ಟು ಈ ಸಂದರ್ಭದಲ್ಲಿ ಸ್ವಾಮೀಜಿ ಬೇರೇನನ್ನೂ ಮಾಡದಿದ್ದರೂ ಅವರ ಸಮಯವು ವ್ಯರ್ಥವಾಯಿತೆಂದು ಹೇಳಲಾಗುತ್ತಿರಲಿಲ್ಲ’.

ಸತ್ಯವಲ್ಲವೇ? ರಾಮಕೃಷ್ಣರ ತರಬೇತಿಯಿಂದ ನರೇಂದ್ರ ವಿವೇಕಾನಂದನಾದ. ರಾಮಕೃಷ್ಣರು ಗರ್ಭಗುಡಿಯ ಮೂರ್ತಿಯಾದರು, ಸ್ವಾಮೀಜಿ ಜಗತ್ತಿಗೆಲ್ಲ ತಿರುಗಾಡೋ ಉತ್ಸವ ಮೂರ್ತಿಯಾದರು. ಮುಂದೆ ಇದೇ ವಿವೇಕಾನಂದರು ಹೆಕ್ಕಿ ತಂದ ಪಶ್ಚಿಮದ ಮುತ್ತು ಮಾರ್ಗರೇಟ್ ನೋಬಲ್ಳನ್ನು ತರಬೇತುಗೊಳಿಸಿ ನಿವೇದಿತಾ ಆಗಿ ರೂಪಿಸಿದರು. ಈ ಪುಷ್ಪ ತಾಯಿ ಭಾರತಿಗೆ ಸಮರ್ಪಣೆಯಾಯಿತು. ಸೂಕ್ಷ್ಮವಾಗಿ ನೋಡಿದರೆ, ವಿವೇಕಾನಂದರು ಈಗ ಗರ್ಭಗುಡಿಯಲ್ಲಿ ನೆಲೆ ನಿಂತರೆ, ನಿವೇದಿತಾ ಉತ್ಸವ ಮೂತರ್ಿಯಾಗಿ ಭಾರತದ ಗಲ್ಲಿಗಲ್ಲಿ ತಿರುಗಾಡಿದಳು!

Leave a Reply